ಸೂರಕ್ಕಿಗಳ
ಬೆಡಗಿನ ಲೋಕದಲ್ಲೊಂದು ಸುತ್ತು
ಸೂರಕ್ಕಿಗಳು ಅಥವಾ
ಹೂಕುಡುಕಗಳನ್ನು ನೀವು ಎಂದಾದರೂ ನೋಡಿದ್ದರೆ ನಿಮಗೆ ಅವುಗಳಲ್ಲಿ ಎರಡು ಅಂಶಗಳು ಬಹಳ ಗಮನ ಸೆಳೆಯುತ್ತವೆ.
ಒಂದು ಅವುಗಳ ಅಸಾಧಾರಣ ಚುರುಕುತನ, ಇನ್ನೊಂದು ಗಾತ್ರದಲ್ಲಿ ಪುಟ್ಟದಾಗಿದ್ದರೂ ಕಣ್ಣು ಕೋರೈಸುವಂಥ
ಅವುಗಳ ವರ್ಣವೈವಿಧ್ಯ. ಗುಬ್ಬಚ್ಚಿಗಳ ಅರ್ಧದಷ್ಟೇ ದೊಡ್ಡದಿರುವ ಈ ಹಕ್ಕಿಗಳು ಕೂತಲ್ಲಿ ಒಂದು ಕ್ಷಣ
ಕೂರುವುದಿಲ್ಲ. ನಮ್ಮ ಮನೆಯ ಎದುರಿಗಂತೂ ರತ್ನಗಂಧಿ, ದಾಸವಾಳ, ಮಲ್ಲಿಗೆ, ಹೀಗೆ ಒಂದಲ್ಲ ಒಂದು ಜಾತಿಯ
ಹೂವು ಸದಾ ಇದ್ದೇ ಇರುವುದರಿಂದ ಸೂರಕ್ಕಿಗಳನ್ನು ನಮ್ಮ ಮನೆಯ ಎದುರಿಗೆ ಪ್ರತಿನಿತ್ಯ ನೋಡಬಹುದು. ಚಿಕ್
ಚಿಕ್ ಚಿಂವ್ ಚಿಂವ್ ಎಂದು ಉಲ್ಲಾಸದಿಂದ ಹಾಡುತ್ತ ಹೂವಿನಿಂದ ಹೂವಿಗೆ ಹಾರುತ್ತ ಅವು ಮಕರಂದ ಹೀರುವ
ಪರಿಯನ್ನು ನೋಡುವುದೇ ಒಂದು ಸೊಗಸು. ಸೂರಕ್ಕಿಗಳಲ್ಲಿ ಸಹ ಅನೇಕ ಪ್ರಭೇದಗಳಿವೆ. ಅವುಗಳನ್ನು ಹಾರುವ
ರತ್ನಗಳೆಂದೇ ಕರೆಯುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲವೆಂದು ನಿಮಗೆ ಅವುಗಳನ್ನು ನೋಡಿದ ಕೂಡಲೇ ಅನಿಸುತ್ತದೆ.
ಅಷ್ಟೊಂದು ಅದ್ಭುತವಾದ ವರ್ಣವೈವಿಧ್ಯ ಅವುಗಳದ್ದು. ನೆರಳಿನಲ್ಲಿದ್ದಾಗ ಸಾಧಾರಣವಾಗಿಯೇ ಕಾಣುವ ಇವುಗಳ
ಬಣ್ಣಗಳು ಸೂರ್ಯನ ಬಿಸಿಲು ಬಿದ್ದಕೂಡಲೇ ವಜ್ರಗಳಂತೆಯೇ ಹೊಳೆಯುತ್ತವೆ. ಏಕೆಂದರೆ ಇವುಗಳ ವರ್ಣವು ಸಸ್ತನಿ
ಪ್ರಾಣಿಗಳಂಥ ಸಾಧಾರಣ ಬಣ್ಣವಲ್ಲ. ಸಸ್ತನಿ ಪ್ರಾಣಿಗಳ ಮೈಬಣ್ಣವಾದರೋ ಬದಲಾಗುವುದಿಲ್ಲ ಮತ್ತು ಅದು
ಎಷ್ಟೇ ಉಜ್ವಲ ವರ್ಣವಾದರೂ ಪಕ್ಷಿಗಳಂತೆ ಕಣ್ಣುಕುಕ್ಕುವ ವರ್ಣಗಳಲ್ಲ. ಆದರೆ ಸೂರಕ್ಕಿಗಳ ಗರಿಗಳು ಬೆಳಕನ್ನು
ಪೃಥಕ್ಕರಿಸುತ್ತ ಸೂರ್ಯನ ಬಿಸಿಲು ಒಂದೊಂದು ಕೋನದಲ್ಲಿ ಬಿದ್ದಾಗಲೂ ಒಂದೊಂದು ವರ್ಣದಿಂದ ಹೊಳೆಯುತ್ತವೆ.
ಇಂಥದೇ ಗರಿಗಳು ಬೇರೆ ಕೆಲವು ಹಕ್ಕಿಗಳಲ್ಲೂ ಇದೆ. ಆದರೆ ನಾವು ದಿನನಿತ್ಯ ನೋಡುವ ಸಾಮಾನ್ಯ ಹಕ್ಕಿಗಳ
ಪೈಕಿ ಇಂಥ ವರ್ಣವೈವಿಧ್ಯದಲ್ಲಿ ಸೂರಕ್ಕಿಗಳೇ ಅಗ್ರಗಣ್ಯರು.
ಅವುಗಳ ಕೊಕ್ಕನ್ನು
ನೋಡಿದೊಡನೆಯೇ ತಿಳಿಯುತ್ತದೆ ಅದು ಕೇವಲ ಮಕರಂದ ಹೀರಲೆಂದೇ ವಿಶೇಷವಾಗಿ ಮಾರ್ಪಾಡಾಗಿರುವ ಕೊಕ್ಕುಗಳೆಂದು.
ದುರ್ಬಲವಾಗಿ ಕಾಣುವ ಆ ಕೊಕ್ಕುಗಳಿಂದ ಯಾವುದೇ ಘನವಾದ ಬೀಜ, ಹಣ್ಣು ಅಥವಾ ಕಾಯಿ ಇತ್ಯಾದಿಗಳನ್ನಾಗಲೀ
ದೊಡ್ಡದೊಡ್ಡ ಹುಳುಗಳನ್ನಾಗಲೀ ಹಿಡಿದು ತಿನ್ನಲು ಸಾಧ್ಯವೇ ಇಲ್ಲ. ಕತ್ತಿಯಂತೆ ಬಾಗಿದ, ಆದರೆ ಅಷ್ಟೇ
ದೃಢವಾದ ಈ ಕೊಕ್ಕುಗಳು ಹೂವಿನ ಮಕರಂದವನ್ನು ಹೀರುವ ಕಾರ್ಯಕ್ಕೆಂದೇ ವಿಶೇಷವಾಗಿ ರಚಿತವಾಗಿವೆ. ಮಕರಂದವೇ
ಈ ಕುಟುಂಬದ ಎಲ್ಲ ಹಕ್ಕಿಗಳ ಪ್ರಧಾನ ಆಹಾರ. ಅದಕ್ಕೇ ಇವುಗಳನ್ನು ನೆಕ್ಟರಿನಿಡೇ ಎಂಬ ಕುಟುಂಬದಲ್ಲೇ
ವರ್ಗೀಕರಿಸಿದ್ದಾರೆ. ಸಾಮಾನ್ಯವಾಗಿ ಇವು ಮಕರಂದ ಹೀರುವಾಗಲೂ ಕೂರದೆ ಹೂವುಗಳ ಎದುರು ಶರವೇಗದಲ್ಲಿ
ರೆಕ್ಕೆ ಬಡಿಯುತ್ತ ಹಾರುತ್ತಲೇ ಮಕರಂದ ಹೀರುವ ಕಲೆಯನ್ನೂ ಕರಗತ ಮಾಡಿಕೊಂಡಿವೆ. ಆದರೆ ಅವೇನೂ ಝೇಂಕಾರದ
ಹಕ್ಕಿಗಳಂತೆ ತೀರಾ ದುರ್ಬಲವಾದ ಕಾಲುಗಳನ್ನು ಹೊಂದಿದ ಹಕ್ಕಿಗಳೇನೂ ಅಲ್ಲ. ಅಗತ್ಯಬಿದ್ದರೆ ಮರದ ಕೊಂಬೆಗಳ
ಮೇಲೆ ಆರಾಮವಾಗಿಯೇ ಕೂರಬಲ್ಲದು.
ಸಾಮಾನ್ಯವಾಗಿ ಪಕ್ಷಿಜಗತ್ತಿನಲ್ಲಿ
ಗಂಡುಹಕ್ಕಿಗಳಿಗೇ ಉಜ್ವಲ ವರ್ಣದ ಗರಿಪುಕ್ಕಗಳೆಲ್ಲ ಮೀಸಲು. ಹೆಣ್ಣುಗಳು ತೀರಾ ಸೀದಾಸಾದಾ ಉಡುಗೆಯಲ್ಲಿರುತ್ತವೆ.
ಅದ್ಭುತ ಸೌಂದರ್ಯಕ್ಕೆ ಹೆಸರಾದ ಪಕ್ಷಿಗಳಲ್ಲೆಲ್ಲ ಇದೇ ಕ್ರಮವನ್ನು ಕಾಣಬಹುದು. ಸೂರಕ್ಕಿಗಳೂ ಇದಕ್ಕೆ
ಹೊರತಲ್ಲ. ಅವುಗಳ ಬಗೆಗೆ ಗೊತ್ತಿಲ್ಲದ ಯಾರಾದರೂ ಗಂಡು ಮತ್ತು ಹೆಣ್ಣುಗಳನ್ನು ಒಟ್ಟಾಗಿ ನೋಡಿದರೆ
ಎರಡೂ ಬೇರೆಯೇ ಜಾತಿಗೆ ಸೇರಿದ ಹಕ್ಕಿಗಳೆಂದು ಭಾವಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಈ ಕುಟುಂಬದ ಎಲ್ಲ
ಸದಸ್ಯರಲ್ಲೂ ಗಂಡು ಮತ್ತು ಹೆಣ್ಣುಗಳ ನಡುವೆ ಇದೇ ರೀತಿಯ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.
ಗಂಡುಗಳೆಲ್ಲ ಕಣ್ಣುಕುಕ್ಕುವಂಥ ಕೆಂಪು, ಹಸಿರು, ನೇರಳೆ, ಕಪ್ಪು, ನೀಲಿ ಇತ್ಯಾದಿ ಮಿರಮಿರನೆ ಮಿಂಚುವ
ಬಣ್ಣಗಳನ್ನು ಪಡೆದಿದ್ದರೆ ಹೆಣ್ಣು ಸಾಧಾರಣವಾಗಿ ಬೂದು ಅಥವಾ ಹಳದಿ ಬಣ್ಣ ಹೊಂದಿರುತ್ತವೆ.
ನಾನು ಈ ಹಕ್ಕಿಗಳನ್ನು
ಮೊದಲಿನಿಂದಲೂ ಗಮನಿಸುತ್ತ ಬಂದಿದ್ದೆನಾದರೂ ಅವುಗಳನ್ನು ಹೆಚ್ಚು ಆಸಕ್ತಿವಹಿಸಿ ನೋಡಲಾರಂಬಿಸಿದ್ದು
2003ರ ಜೂನ್-ಜುಲೈನಲ್ಲಿ ಎನ್ನಬಹುದು. ಏಕೆಂದರೆ ಆ ಸಂದರ್ಭದಲ್ಲೇ ಅವು ನಮ್ಮ ಮನೆಯ ಎದುರು ಬೆಳೆದಿದ್ದ
ಹುಣಸೆ ಮರದಲ್ಲಿ ಗೂಡು ಕಟ್ಟಲು ನಿರ್ಧರಿಸಿದವು. ಜೂನ್ ಜುಲೈ ಎಂದರೆ ನಮ್ಮಲ್ಲಿ ಮಳೆಗಾಲದ ಆರಂಭವೆಂದೇ
ಅರ್ಥ. ಅದೊಂದು ದಿನ ಮಾಮೂಲಿನಂತೆ ಮನೆಯ ಎದುರು ಕುಳಿತಿದ್ದ ನನಗೆ ಹುಣಸೆ ಮರದ ಬಳಿ ಎರಡು ಸೂರಕ್ಕಿಗಳ
ಚಟುವಟಿಕೆ ನೋಡಿ ಆಶ್ಚರ್ಯವಾಯಿತು. ಏಕೆಂದರೆ ಹೂವುಗಳೇ ಇಲ್ಲದ ಆ ಮರದಲ್ಲಿ ಇವಕ್ಕೇನು ಕೆಲಸ ಎಂದು
ನೋಡಿದರೆ ಅವು ಆಗಲೇ ಗೂಡು ಕಟ್ಟುವ ತಯಾರಿಯಲ್ಲಿದ್ದವು. ನಾನು ನೋಡುವಾಗ ಅದೇನೂ ಗೂಡೆಂದು ಹೇಳುವಂತಿರಲಿಲ್ಲ.
ಸಡಿಲವಾಗಿ ಕೆಲವು ಕಸಗಳನ್ನು ತಂದು ಗಿಡದ ಕೊಂಬೆಗೆ ಅಂಟಿಸಿದಂತಿತ್ತು. ಆದರೆ ಎರಡು ಮೂರು ದಿನಗಳಲ್ಲೇ
ಅವು ಅಲ್ಲಿ ಗೂಡು ಕಟ್ಟುತ್ತಿವೆಯೆಂದು ನನಗೆ ಖಚಿತವಾಯಿತು. ನಮಗೆ ಎಲ್ಲಿಲ್ಲದ ಸಂಭ್ರಮ. ಪುಟ್ಟ ಹಕ್ಕಿಯೊಂದರ
ಬಾಣಂತನ ಮಾಡಿ ಕಳುಹಿಸುವ ಉತ್ಸಾಹದಲ್ಲಿ ದಿನವೂ ಮರವನ್ನೇ ನೋಡುತ್ತಿದ್ದೆವು. ಆದರೆ ನಮ್ಮ ಎಣಿಕೆ ಒಂದಾಗಿದ್ದರೆ
ಆಗಿದ್ದೇ ಮತ್ತೊಂದು. ಮಳೆ ದಿನದಿನಕ್ಕೆ ಹೆಚ್ಚುತ್ತಲೇ ಹೋಯಿತು. ಹಕ್ಕಿಗಳಿಗೆ ಏನನ್ನಿಸಿತೋ ಗೊತ್ತಿಲ್ಲ,
ಅವು ಗೂಡು ಕಟ್ಟುವ ಕಾರ್ಯವನ್ನು ಮುಂದುವರೆಸಲೇ ಇಲ್ಲ. ನಮಗೆ ಬೇಸರವಾದರೂ ಅವು ಬೇರೆಲ್ಲೋ ಗೂಡು ಕಟ್ಟಿ
ಮೊಟ್ಟೆಯಿಟ್ಟು ಮರಿಮಾಡಿಕೊಂಡು ಹೋಗಿರುತ್ತವೆ ಎಂದುಕೊಂಡು ನಮಗೆ ನಾವೇ ಸಮಾಧಾನ ಹೇಳಿಕೊಂಡೆವು.
ಮರುವರ್ಷವೂ ಈ ಜೋಡಿಹಕ್ಕಿಗಳ
ಆಗಮನವಾಯಿತು. ಈ ಬಾರಿ ಅವು ಮಳೆಗಾಲ ಮುಗಿದಮೇಲೆ ಆಗಮಿಸಿದವು. ಕಳೆದ ಬಾರಿಯ ನೆನಪು ಇದ್ದ ನಮಗೆ ಈ
ಸಲವಾದರೂ ಅವು ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡಿಯೇ ಹೋಗಲಿ ಎಂದು ಆಸೆ. ಮನೆಯ ಜಗುಲಿಯ ಮೇಲೆ
ಕುಳಿತರೆ ನಮ್ಮ ಕಣ್ಣಿಗೇ ಕಾಣುವಂತಿದ್ದ ಹುಣಸೆ ಮರವನ್ನೇ ಅವು ಗೂಡು ಕಟ್ಟಲು ಆರಿಸಿಕೊಂಡಿದ್ದವು.
ಬಹುಶಃ ಮನುಷ್ಯರ ಸಮೀಪದಲ್ಲೇ ಇದ್ದರೆ ಬೇರೆ ಜೀವಿಗಳ ಕಾಟ ಇರುವುದಿಲ್ಲ ಎಂಬ ಕಾರಣಕ್ಕಿರಬಹುದು. ನಮ್ಮ
ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ನಾವು ಪ್ರತಿನಿತ್ಯ ಮನೆಯಂಗಳದಲ್ಲೇ ಕ್ರಿಕೆಟ್, ವಾಲಿಬಾಲ್ ಇತ್ಯಾದಿ
ಆಟಗಳನ್ನು ಆಡುತ್ತಿದ್ದೆವು. ಅವು ಗೂಡು ಕಟ್ಟತೊಡಗಿಂತೆಯೇ ಎಲ್ಲ ಆಟಗಳಿಗೂ ಕೆಲದಿನಗಳಮಟ್ಟಿಗೆ ವಿದಾಯ
ಹೇಳಿದೆವು. ಏಕೆಂದರೆ ನಾವು ಆಡುವಾಗ ಎಷ್ಟೇ ಎಚ್ಚರವಹಿಸಿದ್ದರೂ ಕೆಲವು ಚೆಂಡುಗಳು ಮರಕ್ಕೆ ತಾಗಿಯೇ
ತಾಗುತ್ತಿದ್ದವು. ಆದ್ದರಿಂದ ಗೂಡಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಾವು ಅಲ್ಲಿ ಆಟ ಆಡುವುದನ್ನೇ
ನಿಲ್ಲಿಸಿದೆವು. ಪ್ರತಿದಿನವೂ ಗೂಡನ್ನು ನೋಡುವುದೇ ನಮಗೊಂದು ಸೊಗಸು. ದಿನೇದಿನೇ ದೊಡ್ಡದಾಗುತ್ತ ಮೊದಲಿಗೆ
ಕೇವಲ ಕಸದಂತೆ ಕಾಣುತ್ತಿದ್ದ ಅದು ಗೂಡಿನ ರೂಪ ತಳೆಯುತ್ತಿದ್ದಂತೆ ನಮ್ಮ ಮನಸ್ಸಿನಲ್ಲೂ ನೂರಾರು ಹಕ್ಕಿಗಳು
ಚಿಲಿಪಿಲಿಗುಟ್ಟುತ್ತ ಹಾರಾಡತೊಡಗಿದ್ದವು. ಅವು ಮೊಟ್ಟೆಯಿಟ್ಟು ಮರಿ ಹೊರಬರುವ ಸುಸಂದರ್ಭಕ್ಕಾಗಿ ನಾವು
ಕಾಯುತ್ತಿದ್ದೆವು.
ಹೀಗಿರುವಾಗ ಒಂದು
ದಿನ ದುರ್ಘಟನೆಯೊಂದು ಸಂಭವಿಸಿತು. ನಾನು ಮನೆಯ ಒಳಗಿನಿಂದ ಜಗುಲಿಗೆ ಬರುತ್ತಿರಬೇಕಾದರೆ ಕಾಗೆಯೊಂದು
ಹಾರಿಬಂದು ಸೂರಕ್ಕಿ ಗೂಡುಕಟ್ಟುತ್ತಿದ್ದ ಕೊಂಬೆಯ ಮೇಲೆಯೇ ಕುಳಿತಿತು. ಆ ಕೊಂಬೆ ತುಂಬ ದುರ್ಬಲವಾದ
ತೆಳುವಾದ ಕೊಂಬೆಯಾಗಿತ್ತು. ಸಾಮಾನ್ಯವಾಗಿ ಸೂರಕ್ಕಿಗಳು ಅಂಥ ದುರ್ಬಲವಾದ ಕೊಂಬೆಯ ಮೇಲೆಯೇ ಗೂಡು ಕಟ್ಟುತ್ತವೆ.
ಶತ್ರುಗಳು ಗೂಡನ್ನು ಸಮೀಪಿಸಲು ಹೆದರಲಿ ಎಂಬ ಉದ್ದೇಶದಿಂದ ಅವು ಹಾಗೆ ಮಾಡಿರುತ್ತವೆ. ಆದರೆ ಇಲ್ಲಿ
ಅದೇ ಅದಕ್ಕೆ ಮುಳುವಾಯಿತು. ಕಾಗೆ ಕುಳಿತ ಹೊಡೆತಕ್ಕೆ ಟೊಂಗೆಯೇ ಮುರಿದುಹೋಯಿತು. ಇದೆಲ್ಲ ಕ್ಷಣಾರ್ಧದಲ್ಲಿ
ನಮ್ಮ ಕಣ್ಣೆದುರೇ ನಡೆದುಹೋಯಿತು. ನನಗೆ ಆಘಾತದಿಂದ ಏನು ಮಾಡಬೇಕೆಂದೇ ಹೊಳೆಯಲಿಲ್ಲ. ಜೋರಾಗಿ ಕೂಗಿ
ಕಾಗೆಯನ್ನು ಓಡಿಸಿದ್ದಾಯಿತು. ಆದರೆ ಕಾಗೆ ಅಲ್ಲಿಗೆ ಬಂದು ಕುಳಿತಿದ್ದು ಆಕಸ್ಮಿಕವೇ ಅಥವಾ ಗೂಡನ್ನು
ಕಂಡು ಅದನ್ನು ಶೋಧಿಸಲೆಂದೇ ಬಂದುಕುಳಿತಿತೇ? ಈ ಪ್ರಶ್ನೆಗೆ ನಮಗೆ ಉತ್ತರ ಸಿಗಲಿಲ್ಲ. ಆದರೆ ಒಂದು
ವಿಷಯವಂತೂ ಸ್ಪಷ್ಟವಾಯಿತು. ಆ ಗೂಡು ಅಲ್ಲಿ ನಾವಂದುಕೊಂಡಷ್ಟು ಸುರಕ್ಷಿತವಲ್ಲ ಎಂದು. ನಾವು ಅಂದೇ
ನಿರ್ಧರಿಸಿಬಿಟ್ಟೆವು, ಆ ಹಕ್ಕಿಗಳು ಮರಿಮಾಡಿಕೊಂಡು ಹೋಗುವತನಕ ಒಬ್ಬರಲ್ಲ ಒಬ್ಬರು ಗೂಡಿನ ಬಳಿಯಲ್ಲಿ
ಕಾವಲಿರಬೇಕೆಂದು.
ಗೂಡಿನ ಬಳಿ ಹೋಗಿ
ಅದಕ್ಕೆ ತೊಂದರೆಯಾಗದಂತೆ ವೀಕ್ಷಿಸಿದೆವು. ಅದೃಷ್ಟವಶಾತ್ ಗೂಡಿದ್ದ ಕೊಂಬೆ ಮುರಿದು ನೇತಾಡುತ್ತಿತ್ತೇ
ವಿನಃ ಗೂಡಿಗೆ ಯಾವ ತೊಂದರೆಯೂ ಆಗಿರಲಿಲ್ಲ. ಆದರೆ ಮುರಿದು ಒಂದೇ ದಾರದಂಥ ತೊಗಟೆಯ ಸಹಾಯದಿಂದ ನೇತಾಡುತ್ತಿದ್ದ
ಆ ಕೊಂಬೆ ಎಷ್ಟುದಿನ ತಾನೇ ಆ ಗೂಡಿನ ಭಾರವನ್ನು ತಾಳಿಕೊಂಡಿರಬಲ್ಲದು ಎಂಬ ಪ್ರಶ್ನೆಗೆ ನಮ್ಮ ಬಳಿಯಲ್ಲಿ
ಉತ್ತರವಿರಲಿಲ್ಲ. ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ನೋಡುತ್ತಿದ್ದೆವು.
ಎರಡು ಮೂರು ದಿನಗಳು
ಕಳೆದವು. ಮರಳಿಬಂದು ಗೂಡಿನ ಸರ್ವೇಕ್ಷಣೆ ನಡೆಸಿದ ಹಕ್ಕಿಗಳಿಗೆ ಏನೋ ಸರಿಯಿಲ್ಲವೆಂದು ಗೊತ್ತಾಯಿತು.
ಆದರೆ ಏನಾಗಿದೆಯೆಂದು ಅವಕ್ಕೂ ಸಂಪೂರ್ಣವಾಗಿ ಗೊತ್ತಾಗಲಿಲ್ಲವೆಂದು ತೋರುತ್ತದೆ. ನಾನು ಮುರಿದ ಕೊಂಬೆಯನ್ನು
ನೋಡಿ ಅವು ಆ ಜಾಗವನ್ನು ತೊರೆದೇಹೋಗುತ್ತವೆ ಎಂದು ಭಾವಿಸಿದ್ದೆ. ಆದರೆ ಹಾಗಾಗಲಿಲ್ಲ. ಗೂಡಿನ ಸುತ್ತ
ಒಂದು ಸುತ್ತು ಬಂದು ಹಕ್ಕಿಗಳೆರಡೂ ಹಾರಿಹೋದವು. ಸ್ವಲ್ಪ ಹೊತ್ತಿನ ನಂತರ ಮರಳಿಬಂದು ಅದೇ ಗೂಡನ್ನು
ಮತ್ತೆ ಕಟ್ಟಲು ಆರಂಭಿಸಿದವು. ಮತ್ತೆರಡು ದಿನಗಳು ಕಳೆಯುವಷ್ಟರಲ್ಲಿ ಸುಂದರವಾದ ಗೂಡೊಂದು ನಿರ್ಮಾಣವಾಯಿತು.
ಅಂತೂ ಹಕ್ಕಿಗಳು ನಮ್ಮ ಮೇಲೆ ಎಷ್ಟು ಭರವಸೆ ಇಟ್ಟಿದ್ದವು ಎಂದು ಅದರಿಂದ ಸಾಬೀತಾಯಿತು. ತಮಗೆ ಮತ್ತು
ತಮ್ಮ ಗೂಡಿಗೆ ಏನೇ ಸಮಸ್ಯೆ ಬಂದರೂ ಈ ಮನುಷ್ಯರು ಕಾಪಾಡುತ್ತಾರೆ ಎಂಬ ದೃಢವಾದ ನಂಬಿಕೆ ಅವಕ್ಕೆ ಇದ್ದಂತೆ
ತೋರಿತು. ನಾವೂ ಕೂಡ ಅವುಗಳ ನಂಬಿಕೆಗೆ ಚ್ಯುತಿ ಉಂಟುಮಾಡಬಾರದೆಂದು ನಿರ್ಧರಿಸಿದೆವು. ಆ ದಿನದಿಂದಲೇ
ಒಬ್ಬರಲ್ಲ ಒಬ್ಬರು ಆ ಗೂಡಿನ ಬಳಿ ಕಾವಲು ಕುಳಿತು ಕಾಗೆ ಅಥವಾ ಬೇರಾವುದೇ ಶತ್ರುವೂ ಅದನ್ನು ಮುಟ್ಟದಂತೆ
ಕಾಯಬೇಕೆಂದು ನಿರ್ಧರಿಸಿದೆವು.
ಆದರೆ ನಮ್ಮ ಈ ನಿರ್ಧಾರವೆಲ್ಲ
ಟೊಳ್ಳು ಎಂಬುದು ನಮಗೆ ಮರುದಿನವೇ ಗೊತ್ತಾಯಿತು. ಅಂದು ನಮ್ಮ ಪರಿಚಯದವರೊಬ್ಬರ ಮನೆಯಲ್ಲಿ ಒಂದು ಸಮಾರಂಭವಿತ್ತು.
ಅಲ್ಲಿಗೆ ನಾನು, ನನ್ನ ತಮ್ಮ ಮತ್ತು ತಂದೆ ಮೂವರೂ ಊಟಕ್ಕೆ ಹೋಗಿದ್ದೆವು. ನಾವು ಹೋಗಿದ್ದು ಮಧ್ಯಾಹ್ನ
ಸುಮಾರು ಒಂದು ಗಂಟೆಯ ಆಸುಪಾಸಿಗೆ. ಮೂರು ಗಂಟೆಯ ಹೊತ್ತಿಗೆ ಮನೆಗೆ ಮರಳಿದೆವು. ಆದರೆ ಮನೆಯ ಗೇಟು
ತೆರೆದು ಅಂಗಳದೊಳಕ್ಕೆ ಬರುತ್ತಿದ್ದಂತೆಯೇ ನಮಗೆ ಆಘಾತ ಕಾದಿತ್ತು. ಹುಣಸೆ ಮರದ ಬುಡದಲ್ಲಿ ಗೂಡು ಛಿದ್ರವಿಚ್ಛಿದ್ರವಾಗಿ
ಬಿದ್ದಿತ್ತು. ಗೂಡಿನೊಳಗಿದ್ದ ಮೃದುವಾದ ಹತ್ತಿಯಂಥ ಪದಾರ್ಥಗಳೆಲ್ಲ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದವು. ನನಗೆ ಅದನ್ನು ನೋಡಿ ಎಷ್ಟು ಸಂಕಟವಾಯಿತೆಂದರೆ ಅದನ್ನು ಹೇಳಿ ಪ್ರಯೋಜನವಿಲ್ಲ. ನನ್ನ
ತಮ್ಮನೂ ನಾನೂ ಇಬ್ಬರೂ ಒಟ್ಟಿಗೆ ಸಮಾರಂಭಕ್ಕೆ ಹೋಗಿದ್ದಕ್ಕಾಗಿ ನಮ್ಮನ್ನು ನಾವೇ ಎಷ್ಟು ಶಪಿಸಿಕೊಂಡೆವೋ
ನಮಗೇ ಗೊತ್ತಿಲ್ಲ. ಅಂತೂ ಇಂತೂ ಆಗಬಾರದ್ದು ಆಗಿಹೋಗಿತ್ತು. ಅಂದೇ ಸಂಜೆ ಹಕ್ಕಿಗಳ ಆಗಮನವಾಯಿತು. ತಮ್ಮ
ಕನಸಿನರಮನೆಗೆ ಒದಗಿದ ಗತಿ ಕಂಡು ಅವು ಅದೆಷ್ಟು ನೊಂದುಕೊಂಡವೋ ಏನೋ? ಎರಡೂ ಹಕ್ಕಿಗಳು ಅದೇ ಮರದ ಒಂದು
ಕೊಂಬೆಯ ಮೇಲೆ ಮೌನವಾಗಿ ಬಹಳ ಹೊತ್ತು ಕುಳಿತಿದ್ದವು. ನಮಗೆ ಅದನ್ನು ನೋಡಿ ಅತೀವ ಬೇಸರವಾದರೂ ನಾವು
ಏನೂ ಮಾಡುವಂತಿರಲಿಲ್ಲ. “ನಿಮ್ಮ ಮೇಲೆ ಭರವಸೆಯಿಟ್ಟು ನಾವಿಲ್ಲಿ ಗೂಡು ಕಟ್ಟಲು ತೊಡಗಿದೆವು. ಆದರೆ
ನೀವು ನಿಮ್ಮ ಮೇಲೆ ನಾವಿಟ್ಟ ನಂಬಿಕೆ ಹುಸಿಗೊಳಿಸಿದಿರಿ. ನೀವು ಮಾಡಿದ್ದು ಸರಿಯೇ? ಯಾವ ಪಾಪಕ್ಕೆ
ನಮಗೀ ಶಿಕ್ಷೆ?” ಎಂದು ಅವು ಕೇಳಿದಂತಾಯಿತು. ಉತ್ತರಿಸಲಾಗದೆ ನಾವು ತಲೆತಗ್ಗಿಸಿ ಕುಳಿತೆವು.
ಸೂರಕ್ಕಿಗಳು ಪರಿಸರ
ವ್ಯವಸ್ಥೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. ಪರಾಗಸ್ಪರ್ಶದಲ್ಲಿ ಇವುಗಳ ಮಹತ್ವವೂ ಬಹಳವಿದೆ. ಸಾಮಾನ್ಯವಾಗಿ
ಪರಾಗಸ್ಪರ್ಶ ಕ್ರಿಯೆಯ ಹೊಣೆಗಾರಿಕೆಯನ್ನು ಕೀಟಗಳೇ ವಹಿಸಿಕೊಳ್ಳುತ್ತವೆ. ಆದರೆ ಈ ಪುಟ್ಟ ಹಕ್ಕಿಗಳು
ಮಾತ್ರ ಮಕರಂದವೇ ಇವುಗಳ ಆಹಾರವಾದ್ದರಿಂದ ಅದಕ್ಕೆ ಪ್ರತಿಯಾಗಿ ಪರಾಗಸ್ಪರ್ಶ ಕ್ರಿಯೆಯನ್ನೂ ನಿರ್ವಹಿಸುವ
ಮೂಲಕ ಸಸ್ಯಗಳಿಗೆ ಉಪಕಾರಿಯಾಗಿವೆ. ನೀವು ಯಾವತ್ತಾದರೂ ಹೂವಿನಿಂದ ಹೂವಿಗೆ ಹಾರುವಾಗ ಸೂರಕ್ಕಿಗಳನ್ನು
ಗಮನಿಸಿದ್ದರೆ ಅವುಗಳ ತಲೆಯ ಮೇಲೆಲ್ಲ ಹೂವಿನ ಪರಾಗಗಳು ಅಂಟಿಕೊಂಡು ಅವುಗಳ ಮೂಲಬಣ್ಣ ಯಾವುದೆಂದು ಗೊತ್ತಾಗದೆ
ಗಲಿಬಿಲಿಯಾಗುವ ಪ್ರಸಂಗಗಳನ್ನು ಒಮ್ಮೊಮ್ಮೆಯಾದರೂ ಎದುರಿಸಿರಬಹುದು. ಹಾಗೆ ಹಣೆಗೆಲ್ಲ ಮೆತ್ತಿದ ಪರಾಗಗಳು
ಅದೇ ಹಕ್ಕಿ ಬೇರೊಂದು ಹೂವಿನಿಂದ ಪರಾಗ ಹೀರಲು ಹೋದಾಗ ಅದಕ್ಕೆ ಪರಾಗಸ್ಪರ್ಶ ಮಾಡುತ್ತದೆ.
ಒಂದು ಕಾಲದಲ್ಲಿ ನಮ್ಮ
ಮನೆಯೆದುರು ಸಾಕಷ್ಟು ದಾಸವಾಳ ಹೂವಿನ ಗಿಡಗಳಿದ್ದವು. ಅವು ಎಷ್ಟೊಂದು ಅಗಣಿತವಾಗಿದ್ದವೆಂದರೆ ದೊಡ್ಡದೊಡ್ಡ
ಪೊದೆಗಳಂತೆ ಎಲ್ಲೆಡೆ ಹಬ್ಬಿದ್ದವು. ಆ ಪುದೆಗಳ ಒಳಗೆ ಹಾವು, ಚೇಳುಗಳೂ ಸೇರಿದಂತೆ ನೂರಾರು ರೀತಿಯ
ಜೀವಿಗಳಿದ್ದವು. ಜೊತೆಗೆ ಪ್ರತಿದಿನವೂ ಅವು ಹೂವುಗಳಿಂದ ನಳನಳಿಸುತ್ತಿರುತ್ತಿದ್ದವು ಮತ್ತು ಮುಂಜಾನೆ
ತಪ್ಪದೆ ನೂರಾರು ಸೂರಕ್ಕಿಗಳು ಆ ದಾಸವಾಳಗಳ ಮಕರಂದ ಹೀರಲು ಬರುತ್ತಿದ್ದವು. ಹಾಗೆ ಬರುತ್ತಿದ್ದ ಅವುಗಳ
ಚಿಲಿಪಿಲಿ ನಿನಾದದಿಂದ ಮನೆಯೆದುರು ಪ್ರತಿದಿನ ಬೆಳಿಗ್ಗೆ ಒಂದು ಕಿನ್ನರಲೋಕವೇ ಸೃಷ್ಟಿಯಾಗುತ್ತಿತ್ತು.
ನನಗೆ ಅವುಗಳಲ್ಲಿ ಎಷ್ಟು ಪ್ರಭೇದಗಳಿವೆ ಮತ್ತು ನಮ್ಮ ಮನೆಗೆ ಬಂದ ಪ್ರಭೇದ ಯಾವುದು ಎಂಬುದೆಲ್ಲ ನನಗೆ
ಅಷ್ಟಾಗಿ ಗೊತ್ತಿಲ್ಲ. ಏಕೆಂದರೆ ಕ್ಷಣಕಾಲವೂ ನಿಂತಲ್ಲಿ ನಿಲ್ಲದ ಈ ಚುರುಕಾದ ಹಕ್ಕಿಗಳ ಪ್ರಭೇದಗಳನ್ನು
ಗುರುತಿಸುವುದು ನನಗೆ ಎವರೆಸ್ಟ್ ಶಿಖರ ಏರಿದಷ್ಟೇ ಕಷ್ಟದ ಕೆಲಸವೆಂದು ಸದಾ ಅನ್ನಿಸುತ್ತಿತ್ತು. ಕೊನೆಗೊಂದು
ದಿನ ಡಾಕ್ಟರ್ ಸಲೀಂ ಅಲಿಯವರ ಪುಸ್ತಕ ಹಿಡಿದುಕೊಂಡು ನಮ್ಮ ಮನೆಗೆ ಬರುತ್ತಿದ್ದ ಹಕ್ಕಿಯ ಸೂರಕ್ಕಿಗಳೆಂದರೆ
ಪರ್ಪಲ್ ಸನ್ ಬರ್ಡ್ ಮತ್ತು ಲಿಟ್ಲ್ ಸನ್ ಬರ್ಡ್ ಎಂದು ಕಂಡುಹಿಡಿದೆ. ಇವೆರಡು ನಾನು ಕಂಡುಹಿಡಿದ ಪ್ರಭೇದಗಳಷ್ಟೆ.
ನನಗೆ ಗೊತ್ತಿಲ್ಲದ ಆದರೆ ಅನೇಕ ಸಲ ನೋಡಿರುವ ಇನ್ನೂ ಕೆಲವು ಪ್ರಭೇದಗಳಿವೆ.
ಹೂಕುಡುಕಗಳ ಬಗ್ಗೆ
ಹೇಳುವಾಗ ಹೂಕುಟುಕಗಳೆಂದು ಕರೆಯಲ್ಪಡುವ ಫ್ಲವರ್ ಪೆಕ್ಕರ್ ಗಳ ಬಗೆಗೂ ಹೇಳದಿದ್ದರೆ ಲೇಖನ ಅಪೂರ್ಣವಾಗುತ್ತದೆ.
ಮೊದಲು ಇವುಗಳನ್ನೂ ಸಹ ಹೂಕುಡುಕಗಳ ಕುಟುಂಬದಲ್ಲೇ ಸೇರಿಸಿದ್ದರು. ಈಗ ಇವುಗಳನ್ನು ಬೇರೆ ಕುಟುಂಬದಲ್ಲಿ
ವಿಂಗಡಿಸಿದ್ದಾರೆ. ಹದಿನಾಲ್ಕು ಪ್ರಭೇದಗಳನ್ನು ಇವುಗಳಲ್ಲಿ ಗುರುತಿಸಲಾಗಿದೆ. ಇವುಗಳ ಕೊಕ್ಕುಗಳು
ತುಂಬ ಚಿಕ್ಕವು ಮತ್ತು ದಪ್ಪವಾಗಿವೆ. ಇದಕ್ಕೆ ಕಾರಣ ಇವು ಹಣ್ಣುಗಳನ್ನು ತಿನ್ನುವುದು. ಅಪರೂಪಕ್ಕೆ
ಇವು ಮಕರಂದವನ್ನು ಹೀರುವುದು ಮತ್ತು ಕೆಲವು ಚಿಕ್ಕಪುಟ್ಟ ಕೀಟಗಳನ್ನು ತಿನ್ನುವುದೂ ಇದೆ.
ದಕ್ಷಿಣ ಅಮೆರಿಕಾ
ಖಂಡದ ಹಮ್ಮಿಂಗ್ ಬರ್ಡ್ ಹಕ್ಕಿಗಳು (ಝೇಂಕಾರದ ಹಕ್ಕಿ) ಕೂಡ ಮಕರಂದ ಹೀರುವ ಹಕ್ಕಿಗಳು. ನಮ್ಮ ಹೂಕುಡುಕಗಳಿಗೂ
ಇವಕ್ಕೂ ಸಾಮ್ಯತೆಯಿದೆಯಾದರೂ ಇವು ಬೇರೆ ವರ್ಗಕ್ಕೆ ಸೇರಿದ ಹಕ್ಕಿಗಳು. ಜಗತ್ತಿನ ಅತ್ಯಂತ ಚಿಕ್ಕ ಹಕ್ಕಿಯಾದ
ಬೀ ಹಮ್ಮಿಂಗ್ ಬರ್ಡ್ ಹಕ್ಕಿ ಇದೇ ವರ್ಗದಲ್ಲಿದೆ. ಎಪೋಡಿಫಾರಂಸ್ ವರ್ಗದ ಎಪೋಡಿಡೇ ಕುಟುಂಬಕ್ಕೆ ಸೇರಿದ
ಈ ಹಕ್ಕಿಗಳು ಕೂರುವುದೇ ಅತ್ಯಪರೂಪ. ಸದಾ ಹಾರಾಡುತ್ತಲೇ ಇರುತ್ತವೆ. ಇವುಗಳ ಕಾಲುಗಳು ಸಹ ಬಹಳ ದುರ್ಬಲವಾಗಿದ್ದು
ದೀರ್ಘಕಾಲ ನಿಲ್ಲಲು ಇವಕ್ಕೆ ಸಾಧ್ಯವಿಲ್ಲ. ಎಪೋಡಿಫಾರಂಸ್ ಎಂಬ ಪದದ ಅರ್ಥವೇ ಕಾಲುಗಳಿಲ್ಲದ ವರ್ಗ
ಎಂದು. ಕೆಲವು ಪ್ರಭೇದದ ಹಕ್ಕಿಗಳು ಕೆಲವೊಂದು ಹೂವುಗಳ ಮಕರಂದವನ್ನು ಮಾತ್ರ ಹೀರುವುದರಿಂದ ಇವುಗಳ
ಕೊಕ್ಕುಗಳು ಆಯಾ ಹೂವಿಗೆ ತಕ್ಕಂತೆ ಮಾರ್ಪಾಡಾಗಿವೆ.
ಹೂಕುಡುಕಗಳಾಗಲೀ ಝೇಂಕಾರದ
ಹಕ್ಕಿಗಳಾಗಲೀ ಸದಾ ಚುರುಕಾಗಿ ಅತ್ತಿಂದಿತ್ತ ಹಾರಾಡುತ್ತಿರುವುದರಿಂದ ಇವಕ್ಕೆ ಆಹಾರದ ಅಗತ್ಯ ಬೇರೆ
ಹಕ್ಕಿಗಳಿಗಿಂತ ಹೆಚ್ಚು. ನಿರಂತರವಾಗಿ ಎಲೆಗಳನ್ನು ಹುಡುಕಿಕೊಂಡು ಮಧುಪಾನ ಮಾಡುತ್ತಲೇ ಇರಬೇಕು. ಇವುಗಳ
ಹೃದಯ ಬಡಿತ ಮತ್ತು ಇತರ ಚಯಾಪಚಯ ಕ್ರಿಯೆಗಳೆಲ್ಲ ಅತ್ಯಂತ ವೇಗವಾಗಿ ಸಾಗುತ್ತಿರುತ್ತವೆ. ಆದ್ದರಿಂದಲೇ
ಇವುಗಳ ಆಯಸ್ಸು ಕಡಿಮೆ. ನಾಲ್ಕೈದು ವರ್ಷಗಳಷ್ಟೇ ಇವು ಬದುಕುವುದು. ಕೆಲವೊಂದು ಪ್ರಭೇದಗಳು 10-12
ವರ್ಷಗಳವರೆಗೆ ಬದುಕುತ್ತವೆ ಎಂದೂ ತಿಳಿದುಬಂದಿದೆ.
ಇಂದು ನಮ್ಮ ಮನೆಯೆದುರು
ಆ ದಾಸವಾಳದ ಪೊದೆಗಳೂ ಇಲ್ಲ, ಆ ಹುಣಸೆಮರವೂ ಇಲ್ಲ. ಹುಣಸೆಮರ ಮನೆಯ ಸಮೀಪವಿದ್ದರೆ ಮನೆಗೇ ಅಪಾಯವೆಂದು
ಅದನ್ನು ಕಡಿಸಿಬಿಟ್ಟರು. ಅದಕ್ಕೆ ನನ್ನ ವಿರೋಧ ಎಷ್ಟೇ ಇದ್ದರೂ ಅದರಿಂದೇನೂ ಪ್ರಯೋಜನವಾಗಲಿಲ್ಲ. ಮರ
ಧರೆಗುರುಳುವುದನ್ನು ನಿಸ್ಸಹಾಯಕನಾಗಿ ನೋಡಬೇಕಾಯಿತು. ನನ್ನ ಅಸಹಾಯಕತೆಗೆ ನನಗೇ ಆಗ ಬೇಸರವಾಯಿತು.
ಜೊತೆಗೆ ಹಾವುಗಳಿಗೆ ಆಶ್ರಯತಾಣವಾಗಿದೆಯೆಂದು ದಾಸವಾಳದ ಪೊದೆಗಳನ್ನೂ ಕಡಿಸಿಬಿಟ್ಟರು. ಇಂದು ಮನೆಯೆದುರಿನ
ಎರಡು-ಮೂರು ರತ್ನಗಂಧಿ ಗಿಡಗಳು ಮಾತ್ರ ಹಾಗೆಯೇ ಇವೆ. ಇಂದಿಗೂ ಸೂರಕ್ಕಿಗಳನ್ನು ಆಕರ್ಷಿಸುತ್ತಿರುವ
ಗಿಡಗಳೆಂದರೆ ಇವು ಮಾತ್ರ. ಸದಾಕಾಲವೂ ಹೂಬಿಡುತ್ತಿರುವ ಗಿಡಗಳಾದ್ದರಿಂದ ಇವುಗಳ ಸುತ್ತ ಯಾವಾಗಲೂ ಹಕ್ಕಿ,
ಚಿಟ್ಟೆ ಇತ್ಯಾದಿ ಮಕರಂದಪಾನಿಗಳ ದಂಡೇ ನೆರೆದಿರುತ್ತದೆ. ಮನೆಯೆದುರು ಇರುವ ಮೂರು ಕೆಂಪು ರತ್ನಗಂಧಿ
ಹೂಗಿಡಗಳಲ್ಲದೆ ಮನೆಯ ಹಿಂದೆ ಒಂದು ಹಳದಿ ಬಣ್ಣದ ರತ್ನಗಂಧಿ ಹೂಗಿಡವೂ ಇದೆ. ಒಟ್ಟಾರೆ ಈ ಗಿಡಗಳಿಂದಾಗಿಯೇ
ಇಂದಿಗೂ ಸೂರಕ್ಕಿಗಳು ನಮ್ಮ ಮನೆಯ ನಂಟನ್ನು ತೊರೆದಿಲ್ಲ. ಆದ್ದರಿಂದ ಅವುಗಳನ್ನು ಯಾವುದೇ ಕಾರಣಕ್ಕೂ
ಕಡಿಯಬಾರದೆಂದು ನಿರ್ಧರಿಸಿದ್ದೇನೆ.
No comments:
Post a Comment