ಮರಳಿ ಪ್ರಕೃತಿಯತ್ತ ಪಯಣ

Thursday, 6 October 2016

ಮಂಗಟ್ಟೆ ಹಕ್ಕಿಗಳ ಮೋಹಕ ಲೋಕ

ಮಂಗಟ್ಟೆ ಹಕ್ಕಿಗಳ ಮೋಹಕ ಲೋಕ
ನಮ್ಮ ಮನೆಯ ಹಿಂದೆ ಸ್ವಲ್ಪ ಕಾಡಿನಂಥ ಪ್ರದೇಶವಿದೆ. ಕಾಡಿನಂಥ ಎಂದು ಯಾಕೆ ಹೇಳಿದೆನೆಂದರೆ ನಾವೆಲ್ಲ ಅದನ್ನು ಕಾಡೆಂದೇ ಕರೆಯುತ್ತಿದ್ದೆವು. ಅದನ್ನು ಕಾಡೆನ್ನುವುದು ನಿಜವಾದ ಕಾಡುಗಳಿಗೆ ಮಾಡಿದ ಅವಮಾನವೇ ಸರಿ, ಏಕೆಂದರೆ ಅಲ್ಲಿ ಇದ್ದುದು ಹತ್ತಾರು ಮರಗಳಷ್ಟೆ. ಮನೆಯ ಹಿಂದಿನ ಖಾಲಿ ಜಾಗದಲ್ಲಿ ತನ್ನಿಂದ ತಾನೇ ಬೆಳೆದಿದ್ದ ಮರಗಳವು. ಜೊತೆಗೆ ನೆಲದ ಮೇಲೆ ಕೂಡ ದಟ್ಟವಾಗಿ ಪೊದೆಗಳು ಬೆಳೆದಿದ್ದವು. ಅಲ್ಲೆಲ್ಲ ಸದಾಕಾಲ ಮರದಿಂದ ಉದುರಿದ ತರಗೆಲೆಗಳ ಕಾರಣ ನೆಲವೆಲ್ಲ ತಂಪಾಗಿ ಮೃದುವಾಗಿ ನೂರಾರು ಹುಳಹುಪ್ಪಟೆಗಳ ಆವಾಸಸ್ಥಾನವಾಗಿತ್ತು. ನಮ್ಮಂಥ ಪ್ರಕೃತಿಯ ನಿರಂತರ ವಿದ್ಯಾರ್ಥಿಗಳಿಗೆ ಅಲ್ಲಿ ಕಲಿಯಲು ಲೆಕ್ಕವಿಲ್ಲದಷ್ಟು ವಿಷಯಗಳಿದ್ದವು. ಆದ್ದರಿಂದ ಪ್ರತಿದಿನ ನಾನು ಸಂಜೆ ಅಥವಾ ಬೆಳಿಗ್ಗೆ ಹೀಗೆ ಯಾವಾಗ ಬಿಡುವಿದ್ದರೂ ಅಲ್ಲಿ ಹೋಗಿ ಮರಗಳ ನೆರಳಿನಲ್ಲಿ ಪ್ರಶಾಂತವಾಗಿ ಕುಳಿತು ಕಾಲ ಕಳೆದು ಬರುತ್ತಿದ್ದೆ. ಮನಸ್ಸಿಗೆ ಬೇಸರವಾದಾಗಲೆಲ್ಲ ಅಲ್ಲಿ ಸ್ವಲ್ಪ ಹೊತ್ತು ಕುಳಿತರೆ ನನ್ನ ಮನಸ್ಸಿಗೆ ಅದೇನೋ ಅನಿರ್ವಚನೀಯ ಶಾಂತಿ, ಸಮಾಧಾನ ಸಿಗುತ್ತಿತ್ತು. ಹಾಗಾಗಿ ಊಟ, ತಿಂಡಿ ತಪ್ಪಿಸಿದರೂ ಅಲ್ಲಿ ಕೂರುವುದನ್ನು ಮಾತ್ರ ನಾನು ಎಂದೂ ತಪ್ಪಿಸುತ್ತಿರಲಿಲ್ಲ. ಅದೊಂದು ದಿನ ಕೂಡ ಯಾವುದೋ ವಿಷಯಕ್ಕೆ ಮನಸ್ಸು ಸರಿಯಿರಲಿಲ್ಲ. ಆದ್ದರಿಂದ ಮಾಮೂಲಿನಂತೆ ಸುಮ್ಮನೆ ಮನೆಯ ಹಿಂದೆ ಹೋಗಿ ಮರದ ಬುಡದಲ್ಲಿ ಕುಳಿತು ವಿಷಣ್ಣನಾಗಿ ಏನೋ ಯೋಚಿಸುತ್ತಿದ್ದೆ. ಅಷ್ಟರಲ್ಲಿ ನನಗೆ ಒಂದು ಅಪರಿಚಿತವಾದ ಕ್ವಾಕ್ ಕ್ವಾಕ್ ಎಂಬ ಧ್ವನಿ ಕೇಳಿಬಂದಿತು. ಅಂಥ ಧ್ವನಿಯನ್ನು ನಾನು ಅದುವರೆಗೂ ಕೇಳಿರಲಿಲ್ಲ. ಮೊದಲಿಗೆ ಅದೊಂದು ಕಾಗೆಯಿರಬೇಕೆಂದು ಉಪೇಕ್ಷಿಸಿದೆ. ಆದರೆ ಮತ್ತೊಮ್ಮೆ ಅದು ಪುನರಾವರ್ತನೆಯಾದಾಗ ಅದು ಕಾಗೆಯಲ್ಲವೆಂದು ನನಗೆ ಬಹುತೇಕ ಖಚಿತವಾಯಿತು. ಏನೆಂದು ಕುತೂಹಲದಿಂದ ಧ್ವನಿ ಬಂದ ಕಡೆಗೆ ತೆರಳಿದೆ. ಕಾಡಿನ ಮಧ್ಯಭಾಗದಲ್ಲಿ ಬೆಳೆದಿದ್ದ ಬಸರಿ ಮರವೊಂದರ ಮೇಲಿನಿಂದ ಧ್ವನಿ ಬರುತ್ತಿತ್ತು. ಮರದ ಬುಡದಲ್ಲಿ ನಿಂತು ಮರದ ಮೇಲೆ ದೃಷ್ಟಿ ಹಾಯಿಸಿದೆ. ಆ ಮರದ ಮೇಲ್ಭಾಗ ಎಲೆಗಳಿಂದ ಮುಚ್ಚಿಹೋಗಿತ್ತು. ಯಾವುದನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ. ಒಂದೆಡೆ ಎಲೆಗಳು ಅಲುಗಾಡುತ್ತಿದ್ದವು. ಅದೇ ದಿಕ್ಕಿನಲ್ಲಿ ದಿಟ್ಟಿಸಿ ನೋಡಿದಾಗ ನನಗಾದ ಸಂತೋಷ, ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಯಾವ ಹಕ್ಕಿಯನ್ನು ಅತ್ಯಪರೂಪದ ಹಕ್ಕಿಯೆಂದು ಭಾವಿಸಿದ್ದೆನೋ, ಯಾವ ಹಕ್ಕಿ ನಮ್ಮ ಪರಿಸರದಲ್ಲಿ, ನಮ್ಮ ಊರಿನಲ್ಲಿ ಇರುವುದು ಸಾಧ್ಯವೇ ಇಲ್ಲವೆಂದು ಭಾವಿಸಿದ್ದೆನೋ ಅದೇ ಮಂಗಟ್ಟೆ ಹಕ್ಕಿಯೊಂದು ಮರದ ಮೇಲೆ ಕುಳಿತಿತ್ತು!
ಮಂಗಟ್ಟೆ ಹಕ್ಕಿಯ ಕುಟುಂಬದಲ್ಲಿ ಅನೇಕ ಪ್ರಭೇದಗಳಿವೆ. ಆದರೆ ಈ ಕುಟುಂಬದ ಹಕ್ಕಿಗಳೆಲ್ಲದರ ಮುಖ್ಯ ಲಕ್ಷಣವೆಂದರೆ ಅವುಗಳ ಭಾರೀ ಗಾತ್ರದ ಕೊಕ್ಕು. ಕೆಲವು ಪ್ರಭೇದಗಳಿಗಂತೂ ಕೊಕ್ಕಿನ ಮೇಲೆ ಬೃಹತ್ತಾದ ಇನ್ನೊಂದು ಕೊಕ್ಕಿನಂತೆ ಕಾಣುವ ರಚನೆಯಿದೆ. ಆದ್ದರಿಂದ ಕೆಲವರು ಇದಕ್ಕೆ ಕೊಕ್ಕಿನ ಮೇಲೆ ಕೊಕ್ಕು ಇದೆ ಎನ್ನುತ್ತಾರೆ. ಆದರೆ ಇದಕ್ಕೆ ಇರುವುದು ಒಂದೇ ಕೊಕ್ಕು. ಅದರ ಮೇಲೆ ಇರುವ ರಚನೆ ಅದು ಕೂಗುವಾಗ ಧ್ವನಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದಲೇ ಅದನ್ನು ಆಂಗ್ಲಭಾಷೆಯಲ್ಲಿ ಹಾರ್ನ್ ಬಿಲ್ ಎನ್ನುತ್ತಾರೆ. ನಮ್ಮ ಮನೆಯ ಸುತ್ತಮುತ್ತ ನಾವು ನೋಡಿದ್ದು ಗ್ರೇ ಹಾರ್ನ್ ಬಿಲ್ ಎಂದು ಕರೆಯಲಾಗುವ ಸಾಮಾನ್ಯ ಬೂದುಬಣ್ಣದ ಹಾರ್ನ್ ಬಿಲ್. ಆದರೆ ಅವುಗಳಲ್ಲಿ ಹದ್ದಿನಷ್ಟು ದೊಡ್ಡದಾದ ಕಪ್ಪುಬಿಳುಪಿನ ದಿ ಗ್ರೇಟ್ ಇಂಡಿಯನ್ ಪೈಡ್ ಹಾರ್ನ್ ಬಿಲ್ ಎಂಬ ಹಕ್ಕಿಯಿದೆ. ಕರ್ನಾಟಕದ ಅಣಶಿ-ದಾಂಡೇಲಿ ಹುಲಿ ಸಂರಕ್ಷಿತಾರಣ್ಯವನ್ನು ಈಗ ಈ ಹಾರ್ನ್ ಬಿಲ್ ಗಳ ರಕ್ಷಿತಾರಣ್ಯವೆಂದೂ ಗುರುತಿಸಲಾಗಿದೆ.
ಮರದ ಮೇಲೆ ಕುಳಿತಿದ್ದ ಅದು ಅಲ್ಲೇ ಕೊಂಬೆಯಿಂದ ಕೊಂಬೆಗೆ ಹಾರಾಡುತ್ತಿತ್ತು. ನಾನು ತಲೆಯೆತ್ತಿ ಕತ್ತು ನೋಯುವಂತೆ ಅದನ್ನು ದಿಟ್ಟಿಸುತ್ತಲೇ ಇದ್ದೆ. ಈ ಹಕ್ಕಿಗಳಿಗೆ ಲೀಲಾಜಾಲವಾಗಿ ಹಾರಾಡಲು ಬರುವುದಿಲ್ಲ. ಅದಕ್ಕೆ ಕಾರಣವೇನೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಭಾರೀ ಗಾತ್ರದ ಕೊಕ್ಕೇ ಅವಕ್ಕೆ ಹೊರೆಯಾಗಿರಲೂಬಹುದು ಅಥವಾ ಬೇರಾವುದೋ ಕಾರಣವಿರಲೂಬಹುದು. ಆದರೆ ಅವು ಸದಾಕಾಲ ಹಾರಾಡುವಾಗ ಕುಡಿದು ತೂರಾಡುವವರಂತೆ ಯದ್ವಾತದ್ವಾ ಹಾರಾಡುತ್ತ ಸಮೀಪದ ಮರಗಳ ನಡುವೆಯಷ್ಟೇ ಹಾರಾಡುತ್ತವೆ. ಅನಿವಾರ್ಯವಾಗಿ ಸ್ವಲ್ಪ ದೂರಕ್ಕೆ ಹಾರಿಹೋಗಬೇಕಾದ ಸಂದರ್ಭ ಬಂದರೆ ಅವುಗಳ ಹಾರಾಟ ತುಂಬಾ ಅಸ್ತವ್ಯಸ್ತವಾಗಿರುತ್ತದೆ. ಅಂದು ಸಹ ನಾನು ನೋಡುತ್ತಿರುವಂತೆಯೇ ದೂರದಿಂದ ಇನ್ನೊಂದು ಮಂಗಟ್ಟೆಹಕ್ಕಿ ಇದನ್ನು ಕೂಗಿ ಕರೆಯಿತು. ಈ ಹಕ್ಕಿಯೂ ಅದಕ್ಕೆ ಪ್ರತ್ಯುತ್ತರಿಸಿತು. ನೋಡನೋಡುತ್ತಿದ್ದಂತೆಯೇ ಇಡೀ ನಭೋಮಂಡಲವೇ ಅವುಗಳ ಕೂಗಾಟದಿಂದ ತುಂಬಿಹೋದಂತೆ ಭಾಸವಾಯಿತು. ಈ ಹಕ್ಕಿಯೂ ಅದರ ಕೂಗನ್ನೇ ಅನುಸರಿಸಿ ಹಾರಿಹೋಯಿತು. ಅದು ನನ್ನ ಕಣ್ಣೆದುರು ಇದ್ದುದು ಕೆಲವೇ ಕ್ಷಣಗಳಾದರೂ ನನ್ನ ಮನಸ್ಸಿನ ಬೇಸರವನ್ನೆಲ್ಲ ಒಂದೇ ಏಟಿಗೆ ಹೊಡೆದೋಡಿಸಿತು.
ಮಂಗಟ್ಟೆ ಹಕ್ಕಿಗಳ ಬಗೆಗೆ ನಾನು ಮೊದಲು ಓದಿದ್ದು ಪೂರ್ಣಚಂದ್ರ ತೇಜಸ್ವಿ ಅವರ ಮಿಂಚುಳ್ಳಿ ಪುಸ್ತಕದಲ್ಲಿ. ಅದರಲ್ಲಿ ತೇಜಸ್ವಿ ಅವರು ಮಂಗಟ್ಟೆಯನ್ನು ನಗುವ ಹಕ್ಕಿ ಎಂದಿದ್ದಾರೆ. ಯಾರಾದರೂ ಹೊಸಬರು ತೋಟಕ್ಕೆ ಬಂದರೆ ಇವುಗಳ ಕೂಗನ್ನು ಕೇಳಿ ಗಾಬರಿಯಾಗುತ್ತಾರೆ ಎಂದಿದ್ದಾರೆ. ಏಕೆಂದರೆ ಅವು ಇಡೀ ದಿನ ತೋಟದ ತುಂಬಾ ಬಿದ್ದುಬಿದ್ದು ನಗುತ್ತಾ ಗಲಭೆ ಮಾಡುತ್ತಿರುತ್ತವೆ ಎಂದು ವಿವರಿಸಿದ್ದಾರೆ. ಈ ಹಕ್ಕಿಯ ಕೂಗನ್ನು ಕೇಳಿದ ಮೇಲೆ ನನಗೆ ಅವರ ವಿವರಣೆ ನೆನಪಾಯಿತು. ನಿಜಕ್ಕೂ ಇವು ಬಿದ್ದುಬಿದ್ದು ನಗುವಂತೆಯೇ ಕೂಗುತ್ತವೆ.
ಅಂದು ನನ್ನ ತಮ್ಮ ಕಾಲೇಜಿನಿಂದ ಮನೆಗೆ ಬಂದಕೂಡಲೇ ಅವನಿಗೆ ವಿಷಯ ತಿಳಿಸಿದೆ. ಅವನಿಗೂ ಕೂಡ ಆಶ್ಚರ್ಯವಾಯಿತು. ಏಕೆಂದರೆ ಅಂಥದೊಂದು ಅಪರೂಪದ ಹಕ್ಕಿ ನಮ್ಮಲ್ಲಿದೆಯೆಂದು ನಂಬಲೇ ಆತ ತಯಾರಿರಲಿಲ್ಲ. ಮೊದಲಿಗೆ ಅವನು ನನ್ನ ಮಾತನ್ನು ನಂಬಲೇ ಇಲ್ಲ. ಆದರೆ ನಂಬಿಸಲು ನನ್ನಲ್ಲಿ ಸಾಕ್ಷ್ಯಗಳೇನೂ ಇರಲಿಲ್ಲ. ನಮ್ಮ ಬಳಿ ಆಗ ಕ್ಯಾಮೆರಾ ಕೂಡ ಇರಲಿಲ್ಲ. ಅವನಿಗೂ ಮಂಗಟ್ಟೆಯನ್ನು ತೋರಿಸೋಣವೆಂದು ಅವನನ್ನೂ ಕಾಡಿಗೆ ಕರೆದೊಯ್ದೆ. ಆದರೆ ಆ ಹಕ್ಕಿ ಎಲ್ಲೂ ಕಾಣಿಸಲಿಲ್ಲ, ಕಡೇಪಕ್ಷ ಅದರ ಧ್ವನಿಯನ್ನೂ ಕೇಳಲಾಗಲಿಲ್ಲ. ಇಡೀ ದಿನ ಕಾಡೆಲ್ಲ ಹುಡುಕಿ ಸೋತು ಸುಸ್ತಾಗಿ ಮನೆಗೆ ಮರಳಿದೆವು. ನಾನು ಅಷ್ಟೆಲ್ಲ ಶ್ರಮವಹಿಸಿ ಹುಡುಕಿದ್ದರಿಂದ ಆ ಹಕ್ಕಿ ಬಂದಿದ್ದು ಹೌದೆಂದು ನನ್ನ ತಮ್ಮನಿಗೆ ನಂಬಿಕೆ ಬಂತಾದರೂ ಅವನಿಗೆ ಅದನ್ನು ಅವತ್ತೇ ತೋರಿಸಬೇಕೆಂಬ ನನ್ನ ಆಸೆ ಈಡೇರಲೇ ಇಲ್ಲ.
ಇದಾಗಿ ಕೆಲವು ದಿನಗಳು ಕಳೆದವು. ಮಂಗಟ್ಟೆಯನ್ನು ನೋಡಲೆಂದು ದಿನಾ ಮನೆಯ ಹಿಂದಿನ ಕಾಡಿಗೆ ಎಡತಾಕುತ್ತಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಕೆಲವೊಮ್ಮೆ ರಜಾದಿನಗಳಲ್ಲಿ ಬೇರೆಲ್ಲ ಕೆಲಸ ಬಿಟ್ಟು ಇಡೀದಿನ ಕಾಡು ಸುತ್ತಿದ್ದೂ ಇದೆ. ಆದರೆ ಹಕ್ಕಿಗಳೆಲ್ಲ ಎಂದೂ ನಾವು ಹುಡುಕಿದಾಗ ಸಿಗುವುದಿಲ್ಲ. ನಮಗೆ ಅವುಗಳನ್ನು ನೋಡುವ ಭರವಸೆಯೇ ಇಲ್ಲದೆ ಸುಮ್ಮನೆ ಒಂದೆಡೆ ಹೋಗುತ್ತಿದ್ದರೆ ಆಗ ಧುತ್ತನೆ ಕಣ್ಣೆದುರು ಪ್ರತ್ಯಕ್ಷವಾಗಿ ನಮ್ಮನ್ನು ದಂಗುಬಡಿಸುತ್ತವೆ. ಮತ್ತೊಂದು ದಿನ ಸುಮ್ಮನೆ ಮನೆಯ ಹಿಂದೆ ಕುಳಿತು ಓದುತ್ತಿದ್ದಾಗ ಮತ್ತದೇ ನಗುವ ಧ್ವನಿ ಕೇಳಿಬಂದಿತು. ಕೂಡಲೇ ಓದುತ್ತಿದ್ದ ಪುಸ್ತಕವನ್ನೂ ಅಲ್ಲೇ ಎಸೆದು ಧ್ವನಿ ಬಂದತ್ತ ಓಡಿದೆ. ನನ್ನ ಆಶ್ಚರ್ಯಕ್ಕೆ ಪಾರವಿರಲಿಲ್ಲ. ಏಕೆಂದರೆ ಈ ಬಾರಿ ಎರಡು ಮಂಗಟ್ಟೆಗಳು ಮರದ ಮೇಲೆ ಕುಳಿತಿದ್ದವು, ಅಷ್ಟೇ ಅಲ್ಲ, ಅದರಲ್ಲೊಂದು ತನ್ನ ಕೊಕ್ಕಿನಲ್ಲಿ ಓತೆಕೇತವೊಂದನ್ನು ಹಿಡಿದುಕೊಂಡಿತ್ತು. ಮಂಗಟ್ಟೆ ಆಹಾರ ಸೇವಿಸುವುದನ್ನು ನೋಡಬಹುದೆಂಬ ಉತ್ಸಾಹದಲ್ಲಿ ಅಲ್ಲೇ ಕುಳಿತು ನೋಡತೊಡಗಿದೆ. ಕೆಲವು ಕ್ಷಣಗಳ ಕಾಲ ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಅತ್ತಿತ್ತ ಆಡಿಸಿದ ಮಂಗಟ್ಟೆ ನಂತರ ಅದನ್ನು ಸಂಪೂರ್ಣವಾಗಿ ನುಂಗಿಹಾಕಿತು. ಹೀಗೆ ಒಂದು ಓತಿಕೇತವನ್ನು ಅದು ಮುಗಿಸಿತು. ಸ್ವಲ್ಪದೂರದಲ್ಲೇ ಇನ್ನೊಂದು ಮಂಗಟ್ಟೆಯೂ ಕುಳಿತಿತ್ತು. ಬಹುಶಃ ಅದು ಹೆಣ್ಣಿರಬೇಕೆಂದು ನಾನು ತರ್ಕಿಸಿದೆ. ಅಂದು ಸಹ ನನ್ನ ತಮ್ಮ ಕಾಲೇಜಿಗೆ ಹೋಗಿದ್ದ. ಆದರೆ ಅವನು ಮರಳಿಬರುವತನಕ ಆ ಹಕ್ಕಿಗಳು ಅದೃಷ್ಟವಶಾತ್ ಅಲ್ಲೇ ಕುಳಿತಿದ್ದವು. ಆದ್ದರಿಂದ ಅವನೂ ನಾನು ಮೊದಲು ಹೇಳಿದ್ದು ಸುಳ್ಳಲ್ಲವೆಂದು ನಂಬುವಂತಾಯಿತು.
ಅನಂತರ ನಮಗೆ ಮಂಗಟ್ಟೆಗಳು ತೀರಾ ಅಪರೂಪವೇನೂ ಆಗಲಿಲ್ಲ. ಆವಾಗಾವಾಗ ಕಾಣುತ್ತಲೇ ಇದ್ದವು. ಸಾಮಾನ್ಯವಾಗಿ ಹಣ್ಣುಬಿಡುವ ಮರಗಳಿಗೆ ಮುತ್ತಿಗೆ ಹಾಕುವ ಇವು ನಮ್ಮ ಮನೆಯ ಬಳಿ ಹಣ್ಣು ಬಿಡುವ ಗಿಡಗಳಾವುವೂ ಇಲ್ಲದಿದ್ದರೂ ಆಗೀಗ ಬರುತ್ತಲೇ ಇದ್ದವು. ಒಂದು ದಿನ ಅವುಗಳನ್ನು ನೋಡದಿದ್ದರೆ, ಅವುಗಳ ಧ್ವನಿ ಕೇಳದಿದ್ದರೆ ನನಗೆ ಏನೋ ಕಳೆದುಕೊಂಡಂಥ ಅನಿಸಿಕೆ, ಮನಸ್ಸಿಗೆ ಬೇಸರ ಉಂಟಾಗುತ್ತಿತ್ತು. ಹೀಗಿರುವಾಗ ನನಗೆ ಓದುವ ಪ್ರಯುಕ್ತ ಭದ್ರಾ ಅಭಯಾರಣ್ಯದ ಸಮೀಪ ಇರುವ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾಯಿತು. ಅಲ್ಲಿ ವಿಶ್ವವಿದ್ಯಾನಿಲಯದ ಆವರಣದ ತುಂಬೆಲ್ಲ ನೂರಾರು ಹಣ್ಣಿನ ಮರಗಳಿದ್ದವು. ಸಹಜವಾಗಿಯೇ ಅಲ್ಲಿ ಯಥೇಚ್ಛವಾಗಿ ಪ್ರಾಣಿಪಕ್ಷಿಗಳು ಸಹ ವಾಸವಿದ್ದವು. ಒಂದು ದಿನ ನಾನು ಮಧ್ಯಾಹ್ನ ತರಗತಿಗಳನ್ನು ಮುಗಿಸಿ ಕೋಣೆಗೆ ಮರಳುತ್ತಿದ್ದಾಗ ಮರವೊಂದರ ಬುಡದಲ್ಲಿ ಹೆಜ್ಜೆ ಹಾಕುತ್ತಿರಬೇಕಾದರೆ ಒಂದು ರೀತಿಯ ವಿಚಿತ್ರವಾದ ಕೀರಲು ಸ್ವರ ಕೇಳಿಸಿತು. ನನಗೆ ಆಶ್ಚರ್ಯವಾಯಿತು, ಏಕೆಂದರೆ ನಾನು ಅದುವರೆಗೂ ಆ ರೀತಿಯ ಧ್ವನಿಯನ್ನು ಕೇಳಿಯೇ ಇರಲಿಲ್ಲ. ತಲೆಯೆತ್ತಿ ಮರದತ್ತ ದೃಷ್ಟಿ ನೆಟ್ಟರೆ ನನಗೆ ಕಂಡಿದ್ದು ಒಂದು ಜಾತಿಯ ಮಂಗಟ್ಟೆ ಹಕ್ಕಿ. ಅದು ಯಾವ ಪ್ರಭೇದಕ್ಕೆ ಸೇರಿದ್ದೆಂದು ನನಗೆ ಗೊತ್ತಾಗಲಿಲ್ಲ. ಆದರೆ ನನ್ನ ಮನೆಯ ಬಳಿ ಬಿದ್ದುಬಿದ್ದು ನಗುವ ಕ್ವಾಕ್ ಕ್ವಾಕ್ ಧ್ವನಿಯಿಂದಲೇ ಚಿರಪರಿಚಿತವಾಗಿದ್ದ ಮಂಗಟ್ಟೆಗಳ ಈ ಹೊಸ ಅವತಾರವನ್ನು ಕಂಡು ನಾನು ಅಚ್ಚರಿಗೊಂಡೆ. ಪ್ರಭೇದಗಳು ಬೇರೆಬೇರೆ ಇದ್ದರೂ ಕೂಡ ಒಂದೇ ಕುಟುಂಬಕ್ಕೆ ಸೇರಿದ ಎರಡು ಪ್ರಭೇದಗಳ ನಡುವೆ ಧ್ವನಿಯಲ್ಲಿ ಇಷ್ಟೊಂದು ವ್ಯತ್ಯಾಸವಿರಲು ಸಾಧ್ಯವೇ ಎಂಬ ಕುತೂಹಲ ನನಗೆ. ಮೊದಲಿಗೆ ಕೂಗಿದ್ದು ಮಂಗಟ್ಟೆಯಾಗಿರಲಿಕ್ಕಿಲ್ಲ, ಬೇರಾವುದೋ ಹಕ್ಕಿಯಿರಬೇಕು, ಮಂಗಟ್ಟೆ ಅಲ್ಲಿ ಇರುವುದು ಕೇವಲ ಕಾಕತಾಳೀಯವಿರಬಹುದೆಂದು ಮೊದಲು ಭಾವಿಸಿದೆ. ಆದರೆ ಕೆಲವು ಕ್ಷಣಗಳ ಬಳಿಕ ಮತ್ತೆ ಅದೇ ಹಕ್ಕಿ ಕೀರಲು ಧ್ವನಿಯಲ್ಲಿ ಕೂಗಿದಾಗ ಇದೇ ಮಂಗಟ್ಟೆಯೆಂದು ನನಗೆ ಖಚಿತವಾಯಿತು. ಪ್ರಕೃತಿ ತನ್ನೊಡಲಲ್ಲಿ ಏನೆಲ್ಲ ವಿಸ್ಮಯಗಳನ್ನು ಹುದುಗಿಸಿಕೊಂಡಿದೆ ಎಂದು ಅಚ್ಚರಿಪಡುತ್ತ ನನ್ನ ಕೋಣೆಯತ್ತ ನಡೆದೆ.
ಅದಾದ ಮೇಲೆ ಎರಡು ವರ್ಷಗಳ ನಂತರ ನಾನು ಒಮ್ಮೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ನೂರಾರು ವಿಧವಿಧದ ಪ್ರಾಣಿಪಕ್ಷಿಗಳು ನೋಡಲು ಸಿಕ್ಕವು. ನನ್ನ ಗಮನ ಅಲ್ಲಿ ಒಂದೆಡೆ ಇದ್ದ ಗ್ರೇಟ್ ಇಂಡಿಯನ್ ಪೈಡ್ ಹಾರ್ನ್ ಬಿಲ್ ನತ್ತ ಹೋಯಿತು. ಇದೊಂದು ಭಾರೀ ಗಾತ್ರದ ಹಕ್ಕಿ. ಹೆಚ್ಚುಕಡಿಮೆ ದೊಡ್ಡ ರಣಹದ್ದಿನ ಗಾತ್ರಕ್ಕಿರುವ ಈ ಹಕ್ಕಿ ಕಪ್ಪುಬಿಳುಪು ಪ್ರಧಾನವಾದ ಹಕ್ಕಿಯಾದರೂ ಇದರ ಮೈಮೇಲೆ ಅಲ್ಲಲ್ಲಿ ಹಳದಿಬಣ್ಣದ ಮಚ್ಚೆಗಳನ್ನು ಸಹ ಕಾಣಬಹುದು. ಈ ಮಚ್ಚೆಗಳು ವಾಸ್ತವವಾಗಿ ಈ ಹಕ್ಕಿಯೇ ತನ್ನ ದೇಹದ ಹಿಂಭಾಗದಲ್ಲಿರುವ ಗ್ರಂಥಿಯೊಂದರಿಂದ ತೆಗೆದ ಎಣ್ಣೆಯನ್ನು ಸವರಿಕೊಳ್ಳುವ ಮೂಲಕ ಮಾಡಿಕೊಂಡಿದ್ದಾಗಿದೆ. ತನ್ನ ದೇಹದ ಅಲಂಕಾರಕ್ಕಾಗಿ ಹಕ್ಕಿಗಳು ಎಷ್ಟು ಶ್ರಮವಹಿಸುತ್ತವೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಇಂದು ನಮ್ಮ ಮನೆಯ ಹಿಂದಿನ ಕಾಡುಗಳ ಬಹುಭಾಗ ನಾಶವಾಗಿದೆ. ಅಲ್ಲಿ ಏನೇನೋ ಸುಧಾರಣೆಗಳನ್ನು ಮಾಡುವ ಉದ್ದೇಶದಿಂದ ಕೆಲವರು ಮರಗಳನ್ನು ಕಡಿದರು. ಯಾವ ಉದ್ದೇಶ ಸಾಧನೆಯಾಯಿತೋ ಗೊತ್ತಿಲ್ಲ. ಆದರೆ ಅನೇಕ ಹಣ್ಣಿನ ಮರಗಳ ನಾಶದಿಂದಾಗಿ ಮಂಗಟ್ಟೆಗಳಿಗೆ ತೊಂದರೆಯಾಗಿದ್ದಂತೂ ನಿಜ. ಈಗಲೂ ನಮ್ಮಲ್ಲಿ ಆಗೀಗ ಮಂಗಟ್ಟೆಗಳು ಕಾಣಸಿಗುತ್ತವೆಯಾದರೂ ಮೊದಲಿನಷ್ಟು ಸಂಖ್ಯೆಯಲ್ಲಿ ಅವು ಇಲ್ಲ.
ಮಂಗಟ್ಟೆಗಳು ಅಪರೂಪವಾಗಲು ಕಾರಣಗಳೇನೆಂದು ಹುಡುಕುತ್ತ ಹೋದರೆ ನಮಗೆ ಸಿಗುವುದು ಸರ್ವೇಸಾಧಾರಣವಾಗಿ ಎಲ್ಲ ಹಕ್ಕಿಗಳ ವಿನಾಶಕ್ಕೆ ಕಾರಣವಾಗುವ ಸರ್ವೇಸಾಧಾರಣ ಕಾರಣಗಳೇ. ಮೊದಲನೆಯ ಬಹುಮುಖ್ಯ ಕಾರಣವೆಂದರೆ ಅರಣ್ಯನಾಶ. ಈ ಹಕ್ಕಿಗಳು ತಮ್ಮ ಆಹಾರಕ್ಕಾಗಿ ಹಣ್ಣುಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಹಾಗಾಗಿ ಹಣ್ಣಿನ ಮರಗಳ ನಾಶವೆಂದರೆ ಮಂಗಟ್ಟೆಗಳ ನಾಶವೂ ಅದರಲ್ಲಿ ಸೇರಿದೆ ಎಂದೇ ಅರ್ಥ. ನಾವಿಂದು ಹಣ್ಣಿರುವ ಮರಗಳನ್ನು ಕೇವಲ ನಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿದ್ದೇವೆಯೇ ಹೊರತು ಕಾಡಿನಲ್ಲಿರುವ ಹಣ್ಣಿನ ಮರಗಳನ್ನು ನಾವಿಂದು ನೋಡುವ ದೃಷ್ಟಿಯೇ ಬೇರೆಯಾಗಿದೆ. ಮಂಗಟ್ಟೆಗಳನ್ನು ಸಂರಕ್ಷಿಸಿ ಇಂದು ಯಾರಿಗೂ ಆಗಬೇಕಾಗಿದ್ದು ಏನೂ ಇಲ್ಲ. ಆದ್ದರಿಂದ ಮರಮುಟ್ಟಿಗಾಗಿ ಬೇಕಾಬಿಟ್ಟಿ ದೊಡ್ಡದೊಡ್ಡ ಮರಗಳನ್ನು ಕಡಿಯುವುದು ಅಭ್ಯಾಸವಾಗಿದೆ.
ಮಂಗಟ್ಟೆಗಳು ಮೊಟ್ಟೆಯಿಟ್ಟು ಮರಿಮಾಡುವುದು ಮರಗಳ ಪೊಟರೆಯೊಳಗೆ. ಹೆಣ್ಣುಹಕ್ಕಿ ಪೊಟರೆಯೊಳಗೆ ಹೊಕ್ಕನಂತರ ಪೊಟರೆಯ ಬಾಯಿಯಿಂದ ಕೊಕ್ಕನ್ನು ಮಾತ್ರ ಹೊರಹಾಕುವಷ್ಟು ಜಾಗ ಬಿಟ್ಟು ಉಳಿದೆಲ್ಲ ಜಾಗವನ್ನು ತನ್ನದೇ ಹಿಕ್ಕೆ ಮತ್ತಿತರ ವಸ್ತುಗಳ ಮಿಶ್ರಣದಿಂದ ಮುಚ್ಚುತ್ತದೆ. ಆ ಸಂದರ್ಭದಲ್ಲಿ ಪೊಟರೆಯೊಳಗೇ ಗೃಹಬಂಧನಕ್ಕೊಳಗಾಗುವ ಹೆಣ್ಣು ಮತ್ತದರ ಮರಿಗಳಿಗೆ ಗಂಡೇ ಆಹಾರವನ್ನು ಹೊರಗಿನಿಂದ ತಂದುಕೊಡಬೇಕು. ಆ ಸಂದರ್ಭದಲ್ಲಿ ಹೆಣ್ಣಿನ ಗರಿ, ಪುಕ್ಕಗಳೆಲ್ಲ ಉದುರಿಹೋಗಿ ಅದು ಹಾರಲಾರದ ಸ್ಥಿತಿಯಲ್ಲಿರುತ್ತವೆ. ಮರಿಗಳು ಬೆಳೆದು ದೊಡ್ಡದಾಗುತ್ತಿದ್ದಂತೆ ಅದಕ್ಕೆ ಮತ್ತೆ ಗರಿಗಳು ಬೆಳೆದು ಅದು ಹಾರಲು ಸಜ್ಜಾಗುತ್ತದೆ ಮತ್ತು ಗೂಡನ್ನು ಒಡೆದುಕೊಂಡು ಹೆಣ್ಣು ಹೊರಕ್ಕೆ ಬರುತ್ತದೆ. ಹಾಗೆ ಹೆಣ್ಣು ಒಳಗಿದ್ದಾಗಲೇ ಗಂಡು ಹೊರಗಡೆ ಏನಾದರೂ ಆಗಿ ಸತ್ತರೆ ಇಡೀ ಕುಟುಂಬ ಉಪವಾಸಬಿದ್ದು ಸತ್ತಂತೆಯೇ ಸರಿ.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮಿಂಚುಳ್ಳಿ ಪುಸ್ತಕದಲ್ಲಿ ಈ ಹಕ್ಕಿಗಳನ್ನು ಪ್ರಸ್ತಾವಿಸಿದ್ದಾರೆ. ಒಮ್ಮೆ ಅವರ ಮನೆಗೆಲಸದವನು ಪುಕ್ಕಗಳೆಲ್ಲ ಉದುರಿ ಬೋಳಾಗಿದ್ದ ಈ ಪಕ್ಷಿಯೊಂದನ್ನು ಅವರಿಗೆ ತಂದುಕೊಟ್ಟನಂತೆ. ಮೊದಲಿಗೆ ಅವರಿಗೆ ಅದೇನೆಂದು ತಿಳಿಯಲಿಲ್ಲವಂತೆ. ಕಡೆಗೆ ಮಂಗಟ್ಟೆಗಳ ಜೀವನಕ್ರಮವನ್ನು ನೋಡಿದಾಗ ಅದು ಮಂಗಟ್ಟೆಯೇ ಎಂದು ಅವರಿಗೆ ಖಚಿತವಾಯಿತಂತೆ. ರೆಕ್ಕೆಪುಕ್ಕಗಳೆಲ್ಲ ಉದುರಿ ಬೋಳಾಗಿ ನೆಲದ ಮೇಲೆ ನಡೆದಾಡುತ್ತಿದ್ದ ಈ ಹಕ್ಕಿಯನ್ನು ಅವರ ನಾಯಿ ಕಿವಿ ನೋಡಿ ಸುಲಭವಾಗಿ ಹಿಡಿದು ಕೊಂದುಹಾಕಿತಂತೆ. ತಮ್ಮ ಕರ್ವಾಲೋ ಕಾದಂಬರಿಯಲ್ಲಿ ಕೂಡ ಅವರು ಇದನ್ನು ಪ್ರಸ್ತಾವಿಸಿದ್ದಾರೆ. ಕಾಡಿನಲ್ಲಿ ಮಂಗಟ್ಟೆಯೊಂದನ್ನು ಹೊಡೆಯಲು ಕರಿಯಪ್ಪ ಗುಂಡು ಹಾರಿಸಿದ್ದನ್ನೂ ಅದೃಷ್ಟವಶಾತ್ ಅದು ಗುರಿ ತಪ್ಪಿದ್ದನ್ನೂ ಕರ್ವಾಲೋ ಅವನಿಗ ಬೈದಿದ್ದನ್ನೂ ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ.
ಎಲ್ಲ ಮಂಗಟ್ಟೆಗಳ ಪ್ರಧಾನ ಲಕ್ಷಣ ಅವುಗಳ ಬೃಹದ್ಗಾತ್ರದ ಕೊಕ್ಕು. ಎರಡು ಪ್ರಭೇದದ ಗ್ರೌಂಡ್ ಹಾರ್ನ್ ಬಿಲ್ ಗಳು ಆಫ್ರಿಕಾದಲ್ಲಿವೆ. ಈ ಪಕ್ಷಿಗಳು ಬೇರೆ ಮಂಗಟ್ಟೆಗಳಂತಲ್ಲದೆ ನೆಲವನ್ನೇ ಆಶ್ರಯಿಸಿದ ಪಕ್ಷಿಗಳು. ಹಾಗೆಂದು ಇವು ಸಂಪೂರ್ಣವಾಗಿ ಹಾರಾಟದ ಶಕ್ತಿಯನ್ನು ಕಳೆದುಕೊಂಡಿಲ್ಲ. ಭಾರೀ ಗಾತ್ರದಿಂದಾಗಿ ಇವು ಲೀಲಾಜಾಲವಾಗಿ ಹಾರಾಡಲಾರವು. ಆದರೆ ಅಗತ್ಯಬಿದ್ದಾಗ ಸ್ವಲ್ಪ ದೂರ ಹಾರಬಲ್ಲವು. ನೆಲದ ಮೇಲೆಯೇ ಬೇಟೆಯಾಡುವ ಇವು ಕಪ್ಪೆ, ಹಲ್ಲಿ, ಮೃದ್ವಂಗಿಗಳು, ಸಣ್ಣಪುಟ್ಟ ಆಮೆ ಮತ್ತಿತರ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಚಿಕ್ಕಗಾತ್ರದ ಸಸ್ತನಿಗಳನ್ನೂ ಸಹ ಹಿಡಿಯುವ ಇವು ಒಮ್ಮೊಮ್ಮೆ ಮೊಲದ ಗಾತ್ರದ ಸಸ್ತನಿಗಳನ್ನೂ ಹಿಡಿಯುತ್ತವೆ.
ಈ ಹಕ್ಕಿಗಳ ಮೈಯೆಲ್ಲ ಕಪ್ಪುಬಣ್ಣವಿದ್ದು, ಕೊಕ್ಕು ಮತ್ತು ಕತ್ತಿನ ಕೆಳಗಿನ ಚರ್ಮ ಮಾತ್ರ ಕಡುಗೆಂಪು ಬಣ್ಣದಿಂದ ಕಣ್ಣುಕುಕ್ಕುತ್ತದೆ. ಹೆಣ್ಣುಗಳಲ್ಲಿ ಇದು ನೀಲಿ ಬಣ್ಣದಲ್ಲಿರುತ್ತದೆ. ಗಂಡಿಗೆ ಇದು ಹೆಣ್ಣನ್ನು ಆಕರ್ಷಿಸುವ ಉದ್ದೇಶದಿಂದಲೇ ಇದೆ. ಈ ಹಕ್ಕಿಗಳು ದೀರ್ಘಾಯುಷ್ಯಕ್ಕೂ ಹೆಸರಾಗಿವೆ. ಸುಮಾರು ಎಪ್ಪತ್ತು ವರ್ಷಗಳವರೆಗೆ ಬದುಕುತ್ತವೆ. ಸಾಮಾನ್ಯವಾಗಿ ಒಂದರಿಂದ ಮೂರು ಮೊಟ್ಟೆಗಳನ್ನಿಡುತ್ತದೆ. ಆದರೆ ಇವುಗಳಲ್ಲಿ ಮೊದಲು ಹೊರಬರುವ ಮರಿ ನಂತರದ ಮರಿಗಳನ್ನು ಕೊಲ್ಲುತ್ತದೆ. ಹಾಗಾಗಿ ಸಾಮಾನ್ಯವಾಗಿ ಕೊನೆಗೆ ಉಳಿಯುವುದು ಒಂದೇ ಮರಿ.

ಕೆಲಸಕ್ಕಾಗಿ ನಾನು ಮೂಡಿಗೆರೆಗೆ ಬಂದಮೇಲೆ ಈ ಹಕ್ಕಿಗಳನ್ನು ಮತ್ತೆ ನೋಡುವಂತಾಗಿದೆ. ನಮ್ಮ ಮನೆ ಇಲ್ಲಿ ಸಂಪೂರ್ಣ ಹಳ್ಳಿಯೂ ಅಲ್ಲದ, ಹಾಗೆಂದು ದೊಡ್ಡ ಪೇಟೆಯೂ ಅಲ್ಲದ ಕಡೆ ಇದೆ. ಆದ್ದರಿಂದ ಇಲ್ಲಿ ಹಕ್ಕಿಗಳನ್ನು ದಿನನಿತ್ಯ ನೋಡುವ ಅವಕಾಶ ಧಾರಾಳವಾಗಿಯೇ ಲಭಿಸುತ್ತದೆ. ಮನೆಯ ಮಹಡಿಯ ಮೇಲೇರಿ ಸುತ್ತ ಒಮ್ಮೆ ದೃಷ್ಟಿ ಹಾಯಿಸಿದರೆ ಸುತ್ತ ಗದ್ದೆ, ತೋಟ, ಕಾಡು ಇತ್ಯಾದಿ ವನಸಂಪತ್ತಿನ ದರ್ಶನವಾಗುತ್ತದೆ. ಮಂಗಟ್ಟೆಗಳನ್ನು ಸಹ ಇಲ್ಲಿ ಧಾರಾಳವಾಗಿ ಕಾಣಬಹುದಾದರೂ ಹತ್ತಿರದ ನೋಟ ಲಭ್ಯವಾಗುವುದು ಸ್ವಲ್ಪ ಕಷ್ಟವೇ. ಅದರ ಕೂಗು ಕೇಳಿದೊಡನೆಯೇ ಮಹಡಿಯೇರಿ ದಿಟ್ಟಿಸಿದರೆ ದೂರದಲ್ಲೆಲ್ಲೋ ಮರವೊಂದರ ಮೇಲೆ ಕುಳಿತು ಕತ್ತು ಉದ್ದ ಮಾಡಿ ನೋಡುತ್ತಿರುವ ಮಂಗಟ್ಟೆ ಕಣ್ಣಿಗೆ ಬೀಳುತ್ತದೆ. ಕುಸಿಯುತ್ತಿರುವ ಪರಿಸರ ವ್ಯವಸ್ಥೆಯ ನಡುವೆಯೂ ಮಂಗಟ್ಟೆಗಳ ಸಂಖ್ಯೆ ತೀರಾ ಕುಸಿದಿಲ್ಲ ಎಂಬ ಆಶಾಭಾವನೆಯನ್ನು ಮೂಡಿಸುತ್ತವೆ!

No comments:

Post a Comment