ನಮ್ಮ ಮನೆಯೆದುರು ಒಂದು ಗಾಳಿಮರವಿತ್ತು. ಅದರ ಮೇಲೆ
ಪ್ರತಿದಿನ ಬೇರೆಬೇರೆ ಹಕ್ಕಿಗಳು ಬಂದು ಕೂರುತ್ತಿದ್ದವು. ಮನೆಯಂಗಳದಲ್ಲಿ ನಿಂತು ಅವುಗಳನ್ನು ನೋಡುವುದೇ
ನಮಗೆ ಒಂದು ಮಜವಾಗಿತ್ತು. ಹಳದಿ ಬೆನ್ನಿನ ಮರಕುಟುಕ ಮತ್ತು ಸೊಪ್ಪುಕುಟುರಗಳು ಈ ಮರಕ್ಕೆ ಖಾಯಂ ಗಿರಾಕಿಗಳಾಗಿದ್ದವು.
ಇತ್ತೀಚೆಗೆ ಯಾವುದೋ ಕಾರಣಕ್ಕೆ ಆ ಮರ ಸತ್ತುಹೋಯಿತು. ಸತ್ತ ಬೋಳುಮರದ ಮೇಲೆ ಸಹ ಬಂದುಕುಳಿತು ಈ ಸೊಪ್ಪುಕುಟುರ
ಮೌನವಾಗಿ ಸುತ್ತಮುತ್ತ ನೋಡುತ್ತ ಕುಳಿತಿತ್ತು. ಮರದ ಸಾವಿಗೆ ಶೋಕ ಆಚರಿಸುತ್ತಿತ್ತೇ? ಸ್ವಲ್ಪ ಹೊತ್ತು
ಅದರೊಂದಿಗೆ ಕುಳಿತಿದ್ದ ಇನ್ನೊಂದು ಕುಟುರ ಹಾರಿಹೋದ ಮೇಲೂ ಇದು ಬಹಳ ಹೊತ್ತು ಕುಳಿತೇ ಇತ್ತು.
No comments:
Post a Comment