ನೇತ್ರಾವಳಿ
ಅಭಯಾರಣ್ಯದಲ್ಲಿ ಮೂರು ದಿನ
ಗೋವಾದ ನೇತ್ರಾವಳಿ
ಅಭಯಾರಣ್ಯದಲ್ಲಿ ಹರ್ಪೆಟೋಕ್ಯಾಂಪ್ (ಉರಗಗಳು ಮತ್ತು ಉಭಯವಾಸಿಗಳ ಬಗೆಗಿನ ಮಾಹಿತಿ ಕಾರ್ಯಾಗಾರ) ಇದೆಯೆಂದು
ತಿಳಿದ ಕೂಡಲೇ ನನ್ನ ಬೇರೆಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ಅದಕ್ಕೆ ಸಿದ್ಧನಾದೆ. ಮೊದಲಿನಿಂದಲೂ
ವನ್ಯಜೀವಿಗಳಿಗೆ ಸಂಬಂಧಿಸಿದ ಯಾವ ಕಾರ್ಯಕ್ರಮವಿದ್ದರೂ ತಪ್ಪದೆ ಭಾಗವಹಿಸುವ ಪರಿಪಾಠವಿದ್ದ ನನಗೆ ಈ
ಕಾರ್ಯಾಗಾರವನ್ನು ಏರ್ಪಡಿಸಿದ್ದ ಪರಾಗ್ ರಂಗಣೇಕರ್ ಮೊದಲೇ ಪರಿಚಯವಿದ್ದುದೂ ನನ್ನ ಉತ್ಸಾಹ ಇಮ್ಮಡಿಸಲು
ಕಾರಣವಾಯ್ತು. ಉತ್ಸಾಹದಿಂದ ಜೂನ್ ಮೂವತ್ತರಂದೇ ಗೋವಾದತ್ತ ಪ್ರಯಾಣ ಬೆಳೆಸಿದೆವು. ನನ್ನೊಡನೆ ನನ್ನ
ಗೆಳೆಯ ಕಾರ್ತಿಕ್ ಕೂಡ ಇದ್ದ. ಜುಲೈ ಒಂದರಂದು ಬೆಳಿಗ್ಗೆ ಹತ್ತು ಗಂಟೆಗೆ ನಾನು ಮತ್ತು ಪರಾಗ್ ಮಡಗಾಂವ್
ರೈಲ್ವೆ ನಿಲ್ದಾಣದಲ್ಲಿ ಕೈಕುಲುಕುತ್ತ ನಿಂತಿದ್ದೆವು.
ಮೊದಲ
ದಿನ ನೇತ್ರಾವಳಿ ಅಭಯಾರಣ್ಯದೊಳಕ್ಕೆ ಕಾಲಿಡುತ್ತಿದ್ದಂತೆಯೇ ಸುತ್ತೆಲ್ಲ ಕಣ್ಮನ ತಣಿಸುವ ಹಸಿರು ಮನಸ್ಸನ್ನು
ಮುದಗೊಳಿಸಿತ್ತು. ಜೊತೆಗೆ ಅಕ್ಕಪಕ್ಕದ ಕಾಡಿನಿಂದ ನವಿಲು, ಹಳದಿ ಹುಬ್ಬಿನ ಪಿಕಳಾರ, ಸೊಪ್ಪುಕುಟುರ
ಮುಂತಾದ ಹಕ್ಕಿಗಳ ನಿರಂತರ ಗಾನಾಲಾಪ. ಮಧ್ಯೆ ಮಧ್ಯೆ ಅಲ್ಲಲ್ಲಿ ಕಾಡಿನ ನಡುವಿನಿಂದ ಕಾಣುತ್ತಿದ್ದ
ದೂರದ ಬೆಟ್ಟಗಳ ಮನಮೋಹಕ ನೋಟ. ಇದರ ನಡುವೆ ಅಲ್ಲಲ್ಲಿ ನಾವು ಸಾಗುತ್ತಿದ್ದ ದಾರಿಯ ಬದಿಯಲ್ಲಿ ಹಾಲ್ನೊರೆಯಂತೆ
ಧುಮ್ಮಿಕ್ಕುತ್ತಿದ್ದ ಪುಟ್ಟಪುಟ್ಟ ಜಲಪಾತಗಳು. ಒಂದೆಡೆಯಂತೂ ಪಕ್ಕದ ಧರೆಯಲ್ಲಿ ಇದ್ದ ಕೊರಕಲೊಂದರಿಂದ
ಜಲಪಾತವೊಂದು ಉದ್ಭವವಾದಂತೆ ಬೀಳುತ್ತಿದ್ದುದನ್ನು ಬೆಕ್ಕಸಬೆರಗಾಗಿ ನೋಡಿದೆವು. ಆ ಜಲಪಾತಕ್ಕೆ ಮೇಲಿನಿಂದ
ಎಲ್ಲೂ ನೀರು ಸರಬರಾಜಾಗುತ್ತಿರಲಿಲ್ಲ. ಗೋಡೆಯ ಮಧ್ಯದಲ್ಲಿದ್ದ ಕೊರಕಲೊಳಗಿನಿಂದ ಉದ್ಭವವಾದಂತೆ ಬೀಳುತ್ತಿದ್ದ
ಆ ಜಲಪಾತ ಮುಂದೆ ನಮಗೆ ಎದುರಾಗಲಿರುವ ನೂರಾರು ವಿಸ್ಮಯಗಳಿಗೆಲ್ಲ ಮುನ್ಸೂಚನೆಯಂತಿತ್ತು.
ಅಭಯಾರಣ್ಯದ
ಗೇಟಿನೊಳಗೆ ಕಾಲಿಡುತ್ತಿದ್ದಂತೆ ನಿತ್ಯಹರಿದ್ವರ್ಣದ ಕಾಡೊಂದರೊಳಕ್ಕೆ ಹೊಕ್ಕ ಅನುಭವವಾಯಿತು. ಹೋದ
ಕೂಡಲೇ ಪರಾಗ್ ನಮ್ಮನ್ನು ಹೋಂಸ್ಟೇಗೆ ಕರೆದೊಯ್ದರು. ಅದ್ಭುತವಾದ ಊಟದ ನಂತರ ಮಧ್ಯಾಹ್ನ ಹಳ್ಳಿಯಲ್ಲೊಂದು
ಸುತ್ತು ಬರುವ ಕಾರ್ಯಕ್ರಮವಿತ್ತು. ಇಡೀ ಹಳ್ಳಿಯೇ ಪ್ರಕೃತಿ ಸೌಂದರ್ಯವನ್ನು ಹಾಸಿಹೊದ್ದಿತ್ತು. ಎಲ್ಲಿ
ನೋಡಿದರಲ್ಲಿ ಹಸಿರಿನ ಹೊದಿಕೆ ಹೊದ್ದ ಬೆಟ್ಟಗುಡ್ಡಗಳು ಕಣ್ಮನಸ್ಸನ್ನು ಸೂರೆಗೈಯುತ್ತಿದ್ದವು. ಅಲ್ಲಿ
ಒಂದೆಡೆ ಹಿಂದೆ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ಪರಾಗ್ ನಮ್ಮನ್ನೆಲ್ಲ ಕರೆದೊಯ್ದರು.
ಅಲ್ಲಿನ ಮಣ್ಣು ಅದಿರಿನ ಮಾಲಿನ್ಯದಿಂದ ಕಲುಷಿತವಾಗಿತ್ತು. ಅಲ್ಲೊಂದೆಡೆ ಹರಿಯುತ್ತಿದ್ದ ಝರಿಯ ನೀರು
ಕೂಡ ಸಂಪೂರ್ಣ ರಾಡಿಯಾಗಿತ್ತು. ಅದಕ್ಕೂ ಮ್ಯಾಂಗನೀಸ್ ಅದಿರೇ ಕಾರಣವೆಂದು ಪರಾಗ್ ತಿಳಿಸಿದರು. ಹಾಗೆ
ಮುಂದುವರೆಯುತ್ತಿದ್ದಂತೆ ಅಲ್ಲಿದ್ದ ಹಲಸಿನ ಮರವೊಂದರ ಮೇಲೆ ಕುಳಿತಿದ್ದ ಗ್ರೇಟರ್ ಫ್ಲೇಮ್ ಬ್ಯಾಕ್ಡ್
ವುಡ್ ಪೆಕರ್ ಎಂಬ ಮರಕುಟಿಕನ ದರ್ಶನವಾಯಿತು. ಅದನ್ನೆಲ್ಲ ನೋಡುತ್ತ ರಸ್ತೆಯನ್ನು ಬಿಟ್ಟು ಪಕ್ಕದ ಕಾಲುದಾರಿಗೆ
ಹೊರಳಿದೆವು.
ಕಾಲುದಾರಿಯಲ್ಲಿ
ನಮಗಿಂತ ಸ್ವಲ್ಪ ಮುಂದಿದ್ದ ಓಂಕಾರ್ ಅಚ್ಚರಿಯಿಂದ ನಮ್ಮನ್ನು ಕೂಗಿದಾಗ ಮುಂದೆ ಹೋಗಿ ನೋಡಿದೆವು. ಅಲ್ಲೊಂದು
ಗ್ರೀನ್ ಕೀಲ್ ಬ್ಯಾಕ್ ಎಂಬ ವಿಷರಹಿತವಾದ ಹಾವು ದಾರಿಯ ಮಧ್ಯದಲ್ಲಿತ್ತು. ಅದನ್ನು ಕಂಡು ನಮಗೆಲ್ಲ
ಆದ ಸಂತೋಷ ಅಷ್ಟಿಷ್ಟಲ್ಲ. ಏಕೆಂದರೆ ನಮ್ಮ ಕೇರೆಹಾವುಗಳಂತೆಯೇ ಕೊಲುಬ್ರಿಡೇ ಎಂಬ ಕುಟುಂಬಕ್ಕೆ ಸೇರಿದ
ಈ ವಿಷರಹಿತವಾದ ಹಾವು ಈಗ ತುಂಬಾ ಅಪರೂಪದ ಪ್ರಾಣಿಯಾಗಿದೆ. ಎಲ್ಲ ಹಾವುಗಳ ಬಗೆಗೆ ಮನುಷ್ಯರಿಗೆ ಇರುವ
ಮೂಢನಂಬಿಕೆಗಳೇ ಈ ಹಾವಿಗೂ ಮುಳುವಾಗಿವೆ ಎಂದರೆ ತಪ್ಪಾಗಲಾರದು. ನಮಗೆ ಸಿಕ್ಕಿದ ಹಾವು ಕೂಡ ಜನರು ಓಡಾಡುವ
ದಾರಿಯಲ್ಲೇ ಇತ್ತು. ಅದನ್ನು ಅಲ್ಲೇ ಬಿಟ್ಟರೆ ಜನರು ಸಾಯಿಸುವ ಸಂಭವವಿದೆ ಎಂದ ಓಂಕಾರ್ ಅದನ್ನು ಜೋಪಾನವಾಗಿ
ಎತ್ತಿತಂದು ಬೇರೊಂದು ಸುರಕ್ಷಿತವಾದ ಸ್ಥಳದಲ್ಲಿ ಬಿಟ್ಟರು.
ಪ್ರತಿದಿನ
ನಾವು ಕಾಡಿಗೆ ಹೊರಡುವಾಗ ನಮ್ಮೊಡನಿದ್ದ ಸಂಗಡಿಗರು ಸಿದ್ಧವಾಗುವುದನ್ನು ನೋಡುವುದೇ ಒಂದು ಸೊಗಸಾಗಿತ್ತು.
ಇಂಬಳಗಳ ಕುರಿತು ವಿಪರೀತ ಭಯವಿದ್ದ ಅವರೆಲ್ಲ ಲೀಚ್ ಸಾಕ್ಸ್ ಧರಿಸಿ, ಉದ್ದನೆಯ ಗಂಬೂಟುಗಳನ್ನು ಧರಿಸಿ
ಹೊರಡುತ್ತಿದ್ದರು. ನನಗೂ ಲೀಚ್ ಸಾಕ್ಸ್ ಧರಿಸಬೇಕೆಂದು ಒಮ್ಮೆ ಅನ್ನಿಸಿದ್ದರೂ ಅದನ್ನು ಧರಿಸಲು ಸೋಮಾರಿತನವಾಗಿ
ಮಾಮೂಲಿ ಸಾಕ್ಸ್ ಮತ್ತು ಶೂ ಧರಿಸಿ ಹೋಗುತ್ತಿದ್ದೆ. ಮೊದಲ ದಿನವೇ ಮೂರು ಇಂಬಳಗಳಿಗೆ ಸಾಕಷ್ಟು ರಕ್ತದಾನ
ಮಾಡಬೇಕಾಯಿತು. ಅದಾದ ಬಳಿಕ ಎರಡನೇ ದಿನದಿಂದ ಲೀಚ್ ಸಾಕ್ಸ್ ಗಳನ್ನೇ ಧರಿಸಿ ಓಡಾಡಲು ಆರಂಭಿಸಿದೆ.
ರಾತ್ರಿಯ
ಜೀವಲೋಕ ಹಗಲಿಗಿಂತಲೂ ರೋಮಾಂಚಕಾರಿ ಮತ್ತು ವೈವಿಧ್ಯಮಯವಾಗಿರುತ್ತದೆ. ಮನುಷ್ಯರಾದ ನಮಗೆ ಮಾತ್ರ ರಾತ್ರಿ
ಎಂಬುದು ಮಲಗುವ ಸಮಯವಾಗಿರುತ್ತದೆ. ಆದರೆ ಜೀವಜಗತ್ತಿನಲ್ಲಿ ಹಗಲಿನಲ್ಲಿ ಓಡಾಡುವ ಜೀವಿಗಳು ಇರುವಂತೆಯೇ
ರಾತ್ರಿಯಲ್ಲಿ ಚಟುವಟಿಕೆಯಿಂದಿರುವ ಜೀವಿಗಳೂ ಸಾಕಷ್ಟಿವೆ. ಹಾಗಾಗಿ ರಾತ್ರಿ ಕೂಡ ಅಭಯಾರಣ್ಯದೊಳಗೆ
ಒಂದು ನಡಿಗೆಯ ಮೂಲಕ ಅಲ್ಲಿನ ರಾತ್ರಿಯ ಜೀವಲೋಕದ ವೈವಿಧ್ಯಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ
ಹೊರಟೆವು.
ನಮ್ಮ
ಪಾಲಿಗೆ ಅದೊಂದು ಹೊಸ ಅನುಭವವಾಗಿತ್ತು. ಹಿಂದೆಂದೂ ರಾತ್ರಿ ಕಾಡಿನಲ್ಲಿ ನಡೆಯುತ್ತ ಹೋದ ಅನುಭವ ನಮಗಿರಲಿಲ್ಲ.
ನಾನು ಕೇವಲ ಕೆನ್ನೆತ್ ಆ್ಯಂಡರ್ಸನ್, ಜಿಮ್ ಕಾರ್ಬೆಟ್ ಅವರ ಕಥೆಗಳಲ್ಲಿ ಮಾತ್ರ ರಾತ್ರಿ ಕಾಡಿನಲ್ಲಿ
ಓಡಾಡುವ ಅನುಭವಗಳನ್ನು ಕೇಳಿದ್ದೆನಷ್ಟೆ. ನಾವೇ ಸ್ವತಃ ಆ ಅನುಭವಗಳಿಗೆ ತೆರೆದುಕೊಳ್ಳುವುದು ನಿಜಕ್ಕೂ
ಅತ್ಯದ್ಭುತವಾದ ಅನುಭವ. ಆದರೆ ಆ ಕಾಡು, ಅಷ್ಟೇ ಏಕೆ ಇಂದು ಭಾರತದಲ್ಲಿರುವ ಯಾವ ಕಾಡು ಕೂಡ ಅಂದು ಅವರು
ಓಡಾಡಿದ ಕಾಡುಗಳಷ್ಟು ಭಯಂಕರವಾದ ಕಾಡುಗಳಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ ಕಾಡುಗಳಲ್ಲಿ
ಒಂದು ಮಟ್ಟಿನ ರೋಚಕತೆ ಎಂಬುದು ಇದ್ದೇ ಇರುತ್ತದೆ. ನಾವು ಹೊರಡುವಾಗಲೇ ಮಳೆ ಸುರಿಯಲಾರಂಭಿಸಿತು. ಸುತ್ತಲಿನ
ಕಾಡುಗಳಿಂದ ಕಪ್ಪೆಗಳ ಆಲಾಪ ಕೇಳಿಬರುತ್ತಿತ್ತು. ಒಂದಲ್ಲ, ಎರಡಲ್ಲ, ನೂರಾರು ಕಪ್ಪೆಗಳು! ಅವುಗಳ ಕೂಗಿನಲ್ಲೂ
ಅಷ್ಟೇ ವೈವಿಧ್ಯ. ಲೊಟ್ಟೆ ಹೊಡೆದಂತೆ ಕೂಗುವವು ಕೆಲವಾದರೆ ಗಡಿಯಾರದಂತೆ ಟಿಕ್ ಟಿಕ್ ಟಿಕ್ ಸದ್ದು
ಮಾಡುವವು ಇನ್ನು ಕೆಲವು. ತುತ್ತೂರಿಯಂತೆ ಕೂಗುವವು ಇನ್ನು ಕೆಲವು ಹೀಗೆ ಅನೇಕ ವಿಧಗಳ ಕಪ್ಪೆಗಳಿದ್ದವು.
ಅಷ್ಟರಲ್ಲಿ ಮಳೆ ಜೋರಾಯಿತೆಂದು ಒಂದು ಮನೆಯ ಕೊಟ್ಟಿಗೆಯಲ್ಲಿ ಆಶ್ರಯ ಪಡೆದೆವು. ಅಲ್ಲಿ ಕೊಟ್ಟಿಗೆಯ
ಕಂಬವೊಂದರ ಮೇಲೆ ಮಲಬಾರ್ ಗ್ಲೈಡಿಂಗ್ ಫ್ರಾಗ್ ಜೋಡಿಯೊಂದನ್ನು ಕಂಡೆವು. ದೊಡ್ಡಗಾತ್ರದ ಹೆಣ್ಣಿನ ಮೇಲೆ
ಚಿಕ್ಕ ಗಂಡು ಸವಾರಿ ಮಾಡುತ್ತಿತ್ತು. ಆದರೆ ಅವು ಎಷ್ಟೊಂದು ಇಕ್ಕಟ್ಟಾದ ಜಾಗದಲ್ಲಿ ಕುಳಿತಿದ್ದವೆಂದರೆ
ಅವಕ್ಕೆ ತೊಂದರೆ ಕೊಡದೆ ಫೋಟೋ ತೆಗೆಯುವುದು ಸಾಧ್ಯವೇ ಇಲ್ಲವೆಂಬಂತಿತ್ತು. ಆದ್ದರಿಂದ ಫೋಟೋ ತೆಗೆಯುವ
ಪ್ರಯತ್ನ ಮಾಡದೆ ಸುಮ್ಮನೆ ನೋಡುತ್ತ ನಿಂತೆವು. ಕೆಲಸಮಯದ ಬಳಿಕ ಅವು ಅಲ್ಲಿಂದ ಜಾಗ ಖಾಲಿ ಮಾಡಿದವು.
ಅಷ್ಟರಲ್ಲಿ ಮಳೆ ಕಡಿಮೆಯಾಗಿದ್ದರಿಂದ ನಾವೂ ಅಲ್ಲಿಂದ ಹೊರಟೆವು.
ಮೊದಲ
ದಿನ ನಮ್ಮ ರಾತ್ರಿಯ ಅಲೆದಾಟದಿಂದ ಹೆಚ್ಚೇನೂ ಲಾಭವಾಗಲಿಲ್ಲ. ಸುರಿಯುತ್ತಿದ್ದ ಜಡಿಮಳೆಯಿಂದ ಕ್ಯಾಮರಾ
ಹೊರಕ್ಕೆ ತೆಗೆಯುವುದೂ ಸಾಧ್ಯವಾಗಲಿಲ್ಲ. ಹಾಗಾಗಿ ಮರುದಿನವಾದರೂ ಮಳೆಯ ರಭಸ ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿದ್ದೆವು.
ನಮ್ಮ ಅದೃಷ್ಟಕ್ಕೆ ಮಳೆಯ ರಭಸ ಎರಡನೇ ದಿನ ಕಡಿಮೆಯೇ ಇತ್ತು. ಒಮ್ಮೊಮ್ಮೆ ಹಠಾತ್ತಾಗಿ ಮಳೆ ಶುರುವಾಗಿ
ಒಂದೆರಡು ನಿಮಿಷಗಳವರೆಗೆ ಸುರಿಯುತ್ತಿತ್ತು. ಅಷ್ಟೇ ಹಠಾತ್ತಾಗಿ ನಿಂತುಬಿಡುತ್ತಿತ್ತು. ನಮ್ಮನ್ನು
ಆಶ್ಚರ್ಯಕ್ಕೆ ದೂಡಿದ್ದೇ ಈ ವಿಚಿತ್ರ ಮಳೆ. ಆದರೆ ದುಬಾರಿಯಾದ ನಮ್ಮ ಕ್ಯಾಮೆರಾಗಳನ್ನು ಸರ್ವನಾಶ ಮಾಡಲು
ಒಂದೆರಡು ನಿಮಿಷಗಳ ಮಳೆ ಧಾರಾಳವಾಗಿ ಸಾಕಿತ್ತು. ಹಾಗಾಗಿ ನಾವು ಪ್ರತಿ ಸಲ ಕ್ಯಾಮೆರಾ ಹೊರಕ್ಕೆ ತೆಗೆಯುವ
ಮೊದಲು ಹತ್ತುಸಲ ಆಲೋಚಿಸುತ್ತಿದ್ದೆವು. ಒಮ್ಮೊಮ್ಮೆ ಕಾಲುದಾರಿಯಲ್ಲಿ ಕಾಲುಜಾರಿದರೆ ನಾವು ಮಾಡುತ್ತಿದ್ದ
ಮೊದಲ ಕೆಲಸವೆಂದರೆ ಕ್ಯಾಮೆರಾವನ್ನು ಮೇಲೆತ್ತಿ ಹಿಡಿಯುತ್ತಿದ್ದುದು. ಏಕೆಂದರೆ ಬಿದ್ದು ಕೈಕಾಲು ಮುರಿದುಕೊಂಡರೂ
ಕ್ಯಾಮೆರಾಕ್ಕೆ ಏನೂ ಆಗಬಾರದೆಂಬುದು ನಮ್ಮ ಕಳಕಳಿಯಾಗಿತ್ತು.
ಎರಡನೇ
ದಿನದ ಪ್ರಯತ್ನಕ್ಕೆ ಮೊದಲ ದಿನಕ್ಕಿಂತ ಹೆಚ್ಚಿನ ಯಶಸ್ಸು ದೊರಕಿತ್ತು. ಸುತ್ತೆಲ್ಲ ಹಸಿರಾದ ದಟ್ಟ
ಕಾನನದ ನಡುವಿನಿಂದ ಮಲಬಾರ್ ವಿಸ್ಲಿಂಗ್ ಥ್ರಶ್ ಹಕ್ಕಿಗಳ ಸುಮಧುರ ಗಾಯನ ಕೇಳಿಬರುತ್ತಿತ್ತು. ನಮಗೆ
ಅವುಗಳನ್ನು ನೋಡಬೇಕೆಂಬ ಆಸೆಯಿತ್ತು. ಆದರೆ ಆ ದಟ್ಟಡವಿಯ ನಡುವೆ ಅವುಗಳ ಕೂಗು ಕೇಳುತ್ತಿತ್ತೇ ವಿನಃ
ಕಾಣುವುದು ದುಸ್ಸಾಧ್ಯವೇ ಆಗಿತ್ತು. ಹೋದಲ್ಲೆಲ್ಲ ನಮಗೆ ಧಾರಾಳವಾಗಿ ಕಣ್ಣಿಗೆ ಬೀಳುತ್ತಿದ್ದ ಹಕ್ಕಿಗಳೆಂದರೆ
ಕೆಂಬೂತಗಳು. ತಮ್ಮ ವಿಚಿತ್ರ ಕಂಠದಿಂದ ನಾನಾ ರೀತಿ ಕೇಕೆ ಹಾಕುತ್ತ ಪೊದೆಗಳ ನಡುವೆ ನುಸಿಯುತ್ತ ಕಳ್ಳನಂತೆ
ಓಡಾಡುತ್ತಿದ್ದ ಅವುಗಳನ್ನು ಪತ್ತೆಹಚ್ಚುವುದು ಕಷ್ಟವೇನಾಗಿರಲಿಲ್ಲ.
ಅಂದು
ಎರಡು ಮನೆಗಳ ನಡುವಿನ ದಾರಿಯಲ್ಲಿ ಓಡಾಡುತ್ತಿದ್ದಾಗ ಮಲಬಾರ್ ಪಿಟ್ ವೈಪರ್ ಹಾವೊಂದನ್ನು ಪರಾಗ್ ಕಂಡರು.
ಅದು ಅಲ್ಲಿದ್ದರೆ ಹಾವು ಮತ್ತು ಮನೆಯ ಜನರಿಗೆಲ್ಲರಿಗೂ ತೊಂದರೆ ಎಂಬುದನ್ನು ತಿಳಿದಿದ್ದ ಆತ ಮನೆಯವರಿಗೆ
ಗೊತ್ತಾಗದಂತೆ ಅದನ್ನು ಹಿಡಿದು ದಟ್ಟವಾದ ಕಾಡಿನ ನಡುವೆ ತಂದುಬಿಟ್ಟರು. ಸುಮಾರು ಐದು ನಿಮಿಷಗಳ ಕಾಲ
ನಮ್ಮನ್ನೆಲ್ಲ ತಲೆಯೆತ್ತಿ ನೋಡುತ್ತಿದ್ದ ಹಾವು ನಂತರ ಎಲ್ಲೋ ಕಣ್ಮರೆಯಾಯಿತು. ಒಂದು ಸಾಯಬಹುದಾಗಿದ್ದ
ಹಾವನ್ನು ರಕ್ಷಿಸಿದ ಧನ್ಯತಾಭಾವದಿಂದ ಮುಂದೆ ಹೋದೆವು.
ಅದೇ
ದಿನ ರಾತ್ರಿ ನಮ್ಮ ಅದೃಷ್ಟಕ್ಕೆ ಚೆನ್ನಾಗಿ ಮಳೆ ಬಿಟ್ಟಿತ್ತು. ಅದರ ಲಾಭ ಪಡೆದು ನಾವು ಕಾಡಿನಲ್ಲಿ
ಸುತ್ತಲು ಹೊರಟೆವು. ರಾತ್ರಿ ಚೆನ್ನಾಗಿ ಊಟ ಮಾಡಿ ಹೋಂಸ್ಟೇ ಒಳಗೆ ಬೆಚ್ಚಗೆ ಕುಳಿತಿದ್ದರಿಂದ ಹೊರಕ್ಕೆ
ಹೋಗಲು ಮನಸ್ಸಾಗದಿದ್ದರೂ ಚೆನ್ನಾಗಿ ಮಳೆ ಬಿಟ್ಟಿದ್ದರಿಂದ ಡಾಮರು ರಸ್ತೆಯಲ್ಲೇ ನಡೆದುಹೋಗುತ್ತ ಅಕ್ಕಪಕ್ಕದ
ಕಾಡಿನಲ್ಲಿ ಏನೇನು ಕಾಣುತ್ತವೆ ಎಂದು ಸರ್ವೇ ಮಾಡುತ್ತ ಹೋಗುವುದೆಂದು ತೀರ್ಮಾನಿಸಿದೆವು. ಹೋಗುವಾಗ
ಪರಾಗ್ ತಮ್ಮ ಕೈಯಲ್ಲಿ ಅತಿನೇರಳೆ ಕಿರಣಗಳ ಚಿಕ್ಕ ಟಾರ್ಚ್ ಒಂದನ್ನು ಹಿಡಿದಿದ್ದರು. ಅದನ್ನೇಕೆ ಹಿಡಿದಿದ್ದೆಂದು
ಕೇಳಿದೆ. ಅದನ್ನು ಚೇಳುಗಳನ್ನು ನೋಡುವುದಕ್ಕಾಗಿ ಹಿಡಿದಿದ್ದೆಂದು ಹೇಳಿದರು. ಚೇಳುಗಳ ಮೇಲೆ ಆ ಬೆಳಕು
ಬಿದ್ದಾಗ ರಾತ್ರಿಯಲ್ಲಿ ಅವು ಹಸಿರು ಬಣ್ಣದಲ್ಲಿ ಹೊಳೆಯುತ್ತವೆ. ರಾತ್ರಿ ಚೇಳುಗಳನ್ನು ಕಂಡುಹಿಡಿಯಲು
ಇದೇ ಅತ್ಯುತ್ತಮ ವಿಧಾನವೆಂದು ಹೇಳಿದರು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅವರಿಗೆ ಬದಿಯಲ್ಲಿ ಚೇಳೊಂದು
ದರ್ಶನವಾಯಿತು. ಅದನ್ನು ನಮಗೆಲ್ಲ ಕರೆದು ತೋರಿಸಿದರು. ಅದು ನಿಜಕ್ಕೂ ಅವರು ಹೇಳಿದಂತೆಯೇ ಆ ಬೆಳಕಿನಲ್ಲಿ
ಹೊಳೆಯುತ್ತಿತ್ತು. ಅದರ ಮೈಮೇಲೆ ಒಂದು ರೀತಿಯ ಪ್ರೋಟೀನ್ ಇದ್ದು, ಅದು ಹೊಳೆಯಲು ಆ ಪ್ರೋಟೀನೇ ಕಾರಣವೆಂದು
ಪರಾಗ್ ಹೇಳಿದರು. ನಾವೆಲ್ಲ ಅದನ್ನು ಕಂಡು ಅಚ್ಚರಿಪಡುತ್ತಲೇ ಮುಂದೆ ಹೋದೆವು.
ಸ್ವಲ್ಪ
ಮುಂದೆ ಹೋಗುತ್ತಿದ್ದಂತೆ ಕಾಡಿನ ಬದಿಯಲ್ಲಿದ್ದ ಮರವೊಂದಕ್ಕೆ ಜೇಡವೊಂದು ಬಲೆ ನೇಯುತ್ತಿರುವುದು ಕಣ್ಣಿಗೆ
ಬಿತ್ತು. ಅದು ನಾವು ಹೋಗುವಾಗ ಇನ್ನೂ ತನ್ನ ಕೆಲಸವನ್ನು ಆರಂಭಿಸಿತ್ತಷ್ಟೆ. ಅದರ ಕೆಲಸವನ್ನೇ ವಿಸ್ಮಯದಿಂದ
ನೋಡುತ್ತ ನಿಂತೆವು. ಸುಮಾರು ಒಂದಿಂಚು ಗಾತ್ರದ ದೇಹವನ್ನು ಹೊಂದಿದ್ದ ಆ ದೊಡ್ಡ ಜೇಡ ನೋಡಿದೊಡನೆಯೇ
ಭಯ ಹುಟ್ಟಿಸುವಂತೆಯೇ ಇತ್ತು. ಆದರೆ ನಮಗೆ ಅದರ ಕಾರ್ಯವೈಖರಿಯನ್ನು ನೋಡಿ ಅಚ್ಚರಿಯಾಗಿತ್ತು. ಹಾಗಾಗಿ
ಬೇರೇನೂ ಯೋಚಿಸದೆ ಅದನ್ನೇ ನೋಡುತ್ತ ನಿಂತೆವು. ಜೇಡವೊಂದರ ಬಲೆ ಅದೇ ಗಾತ್ರದ ಉಕ್ಕಿನ ಎಳೆಗಿಂತ ಗಟ್ಟಿಯಾಗಿರುತ್ತದೆ
ಎಂದು ಎಲ್ಲೋ ಓದಿದ್ದ ನೆನಪಿತ್ತು. ಅದು ಅನೇಕ ಸಲ ನಮ್ಮ ಅನುಭವಕ್ಕೂ ಬಂದಿತ್ತು. ಏಕೆಂದರೆ ಮನೆಯ ಸುತ್ತಮುತ್ತ
ದೊಡ್ಡದೊಡ್ಡ ಜೇಡಗಳು ಬಲೆ ಕಟ್ಟಿದಾಗ ಅದನ್ನು ಕಟ್ಟಿಗೆಯಿಂದ ನಿವಾರಿಸಲು ಪ್ರಯತ್ನಿಸಿದರೆ ಕಟ್ಟಿಗೆಯನ್ನೇ
ಹಿಂದೆ ತಳ್ಳುವಷ್ಟು ಶಕ್ತಿಶಾಲಿಯಾಗಿತ್ತು. ಅಷ್ಟರಲ್ಲಿ ನಮ್ಮೊಂದಿಗಿದ್ದ ಓಂಕಾರ್ ದೊಡ್ಡ ಜೇಡವೊಂದರ
ಬಲೆಗೆ ಹೂಕುಡುಕ ಹಕ್ಕಿಯೊಂದು ಬಿದ್ದು ಸತ್ತಿದ್ದನ್ನು ತೋರಿಸಿದಾಗ ನಾವು ನಿಜಕ್ಕೂ ಬೆಚ್ಚಿಬಿದ್ದಿದ್ದೆವು.
ನಮಗೆ
ಅಂದು ರಾತ್ರಿಯುದ್ದಕ್ಕೂ ಧಾರಾಳವಾಗಿ ದರ್ಶನ ನೀಡಿದ್ದು ಹಸಿರು ಹಾವುಗಳು. ಅವೇನೂ ನಮಗೆ ಎಂದೂ ಅಪರೂಪದವಾಗಿರಲಿಲ್ಲ.
ನಮ್ಮ ಮನೆಯ ಸುತ್ತಮುತ್ತ ಬೇಕಾದಷ್ಟು ಸಲ ಅವುಗಳನ್ನು ನೋಡಿದ್ದೆವು. ಆದರೆ ರಾತ್ರಿಯಲ್ಲಿ ಅವು ನಿದ್ರಿಸುವಾಗ
ನೋಡುತ್ತಿದ್ದುದು ಅದೇ ಮೊದಲು. ದಾರಿಯುದ್ದಕ್ಕೂ ಅನೇಕ ಮರಗಳ ಮೇಲೆ ಮರದ ಕೊಂಬೆಗಳ ತುದಿಯಲ್ಲಿ ನಿದ್ರಾವಶವಾಗಿದ್ದ
ಅನೇಕ ಹಸಿರುಹಾವುಗಳು ಕಂಡುಬಂದವು. ಜೊತೆಗೆ ಅಲ್ಲೊಂದು ಇಲ್ಲೊಂದು ಓತಿಕೇತಗಳೂ ಕಂಡುಬಂದವು. ಅವುಗಳಂತೂ
ಎಷ್ಟು ಅಧ್ವಾನದ ಜಾಗಗಳನ್ನು ಹುಡುಕಿಕೊಂಡಿದ್ದವೆಂದರೆ ಅಲ್ಲಿಗೆ ಸಾಮಾನ್ಯಕ್ಕೆ ಯಾವ ಪ್ರಾಣಿಯೂ ಹೋಗಿ
ಅವುಗಳನ್ನು ಹಿಡಿಯುವುದು ಸಾಧ್ಯವೇ ಇರಲಿಲ್ಲ. ಏಕೆಂದರೆ ತೆಳ್ಳಗಿನ ಕಡ್ಡಿಯೊಂದರ ತುದಿಯಲ್ಲಿ ಕುಳಿತು
ಅವು ನಿದ್ರಿಸುತ್ತಿದ್ದವು. ಯಾವುದೇ ಪ್ರಾಣಿ ಅವುಗಳನ್ನು ಹಿಡಿಯಲು ಆ ಕೊಂಬೆಯ ತುದಿಗೆ ಹೋದರೆ ಆ ಪ್ರಾಣಿಯ
ಭಾರಕ್ಕೆ ಕೊಂಬೆಯೇ ಮುರಿಯಬೇಕು. ಆದ್ದರಿಂದ ಅವುಗಳು ನಿದ್ರಿಸುತ್ತಿರುವಾಗ ಯಾವ ಪ್ರಾಣಿಯೂ ಅವುಗಳನ್ನು
ಹಿಡಿಯಲು ಪ್ರಯತ್ನಿಸುವುದಿಲ್ಲ.
ಮುಂದೆ
ಹೋಗುತ್ತಿದ್ದಂತೆ ವಿಪ್ ಸ್ಕಾರ್ಪಿಯನ್ ಎಂಬ ಅತ್ತ ಜೇಡವೂ ಅಲ್ಲದ ಇತ್ತ ಚೇಳೂ ಅಲ್ಲದ ಜೀವಿಯೊಂದರ ದರ್ಶನವಾಯಿತು.
ಅದಕ್ಕೆ ಆ ಹೆಸರು ಬರಲು ಕಾರಣ ಅದರ ರಚನೆ ಸ್ಥೂಲವಾಗಿ ಚೇಳನ್ನು ಹೋಲುವುದು. ಅದು ಚಿಕ್ಕಪುಟ್ಟ ಕೀಟಗಳನ್ನು
ಹಿಡಿದು ತಿನ್ನುವ ಮಾಂಸಾಹಾರಿ ಜೀವಿ. ನೋಡಲು ಭಯಾನಕವಾಗಿ ಕಾಣುತ್ತದೆ. ಆದರೆ ಅದು ಮನುಷ್ಯರಿಗೆ ಅಷ್ಟೇನೂ
ಅಪಾಯಕಾರಿಯಾದ ಜೀವಿಯಲ್ಲ. ನಿಶಾಚರಿಗಳಾದ ಅವುಗಳ ಚಟುವಟಿಕೆಗಳೆಲ್ಲ ರಾತ್ರಿಯವೇಳೆಯೇ ನಡೆಯುತ್ತದೆ.
ಮತ್ತಷ್ಟು
ಮುಂದೆ ಹೋದಾಗ ಧರೆಯ ಬದಿಯಲ್ಲಿ ಒಂದು ಚಿಕ್ಕ ಕುಳಿಯಿದ್ದು, ಅದರ ಬಾಯಿಯನ್ನು ಜೇಡರ ಬಲೆಯಿಂದ ಮುಚ್ಚಲಾಗಿತ್ತು.
ಅದನ್ನು ತೋರಿಸಿದ ಓಂಕಾರ್, ಅದು ಭಾರತದ ಟ್ಯಾರಂಟುಲಾ ಜೇಡದ ಕುಳಿ ಎಂದರು. ಟ್ಯಾರಂಟುಲಾವನ್ನು ನಾನು
ಎಂದೂ ನೋಡಿರಲಿಲ್ಲ. ಕೇವಲ ಅವುಗಳ ಬಗ್ಗೆ ಓದಿದ್ದೆನಷ್ಟೆ. ಅದನ್ನು ನೋಡುವ ಬಯಕೆ ನನಗೆ ಬಹಳ ಇತ್ತು.
ಆದರೆ ನಮ್ಮಿಂದ ಆ ಧರೆ ತುಂಬಾ ದೂರದಲ್ಲಿದ್ದುದರಿಂದ ಅದರೊಳಗೆ ಜೇಡ ಇದೆಯೇ ಇಲ್ಲವೇ ಎಂಬುದೇ ಗೊತ್ತಾಗುವಂತಿರಲಿಲ್ಲ.
ಅದನ್ನು ಅಷ್ಟಕ್ಕೇ ಬಿಟ್ಟು ಮನೆಗೆ ಮರಳಿದೆವು.
ಮರುದಿನ
ನಮ್ಮ ಯಾತ್ರೆಯ ಕೊನೆಯ ದಿನವಾಗಿತ್ತು. ಅಂದು ಬೆಳಿಗ್ಗೆ ತಿಂಡಿ ಮುಗಿಸಿ ಮಾಮೂಲಿನಂತೆ ಹೊರಟೆವು. ಆ
ದಿನ ಮಳೆಯ ರಭಸ ಹಿಂದಿನೆರಡು ದಿನಗಳಿಗಿಂತ ಬಹಳ ಕಡಿಮೆಯಿದ್ದು, ಸೂರ್ಯನೂ ಹೊರಕ್ಕೆ ತಲೆಹಾಕಿದ್ದ.
ಹಾಗಾಗಿ ಆಹ್ಲಾದಕರವಾದ ವಾತಾವರಣವನ್ನು ಆಸ್ವಾದಿಸುತ್ತ ಹೊರಟೆವು. ಸುತ್ತಮುತ್ತಲಿನ ಪರಿಸರವೆಲ್ಲ ಮಳೆ
ಬಂದು ನಿಂತಿದ್ದರಿಂದ ಸ್ವರ್ಗಸದೃಶವಾಗಿ ಕಾಣುತ್ತಿತ್ತು. ಮತ್ತೆ ಹಸಿರು ಹಾವುಗಳು ಅಲ್ಲೊಂದು ಇಲ್ಲೊಂದು
ಕಂಡವು. ಟ್ಯಾರಂಟುಲಾಗಳ ಅನೇಕ ರಂಧ್ರಗಳು ಕಂಡವು. ಒಂದರಲ್ಲಂತೂ ಜೇಡದ ಕಾಲುಗಳು ದೂರದಿಂದ ಕಾಣುತ್ತಿದ್ದವು.
ಆದರೆ ನಾವು ಸ್ವಲ್ಪ ಸಮೀಪಕ್ಕೆ ಹೋಗುತ್ತಿದ್ದಂತೆ ಅಪಾಯದ ಸುಳಿವರಿತ ಜೇಡ ಒಳಕ್ಕೆ ಪಲಾಯನ ಮಾಡಿತು.
ಇನ್ನೂ ಸ್ವಲ್ಪ ಮುಂದೆ ಹೋದಾಗ ಮರವೊಂದರ ಬುಡದಲ್ಲಿ ಭಾರೀ ರಂಧ್ರವೊಂದು ಕಂಡಿತು. ಅದರೊಳಗೆ ಖಂಡಿತಾ
ಬೃಹದ್ಗಾತ್ರದ ಜೇಡವಿದೆಯೆಂದ ಪರಾಗ್ ಅದರ ಸಮೀಪಕ್ಕೆ ಹೋಗಿ ನೋಡಿದರು. ಅದರ ಎದುರಿಗೆ ಕೋಲೊಂದನ್ನು
ಅಲ್ಲಾಡಿಸಿ ಜೇಡ ಹೊರಕ್ಕೆ ಬರುತ್ತದೆಯೇ ಎಂದು ಪರೀಕ್ಷಿಸಿದರು. ಆದರೆ ಅದು ಹೊರಕ್ಕೆ ಬರುವ ಯಾವ ಸಾಧ್ಯತೆಯೂ
ಕಾಣಿಸದಿದ್ದರಿಂದ ಮುಂದಿನ ದಾರಿ ಹಿಡಿದೆವು.
ದಾರಿಯುದ್ದಕ್ಕೂ
ನಮಗೆ ರಸ್ತೆಯ ಎಡಗಡೆ ಗುಡ್ಡವಿದ್ದರೆ ಬಲಗಡೆ ಇಳಿಜಾರು ಪ್ರದೇಶವಿತ್ತು. ಮಧ್ಯೆ ಮಧ್ಯೆ ಕಣಿವೆಗಳೂ
ಇದ್ದವು. ಕಣಿವೆಗಳಿದ್ದಲ್ಲಿ ದೂರದ ಬೆಟ್ಟಗಳು, ಅವುಗಳ ಹಸಿರು ಎಲ್ಲವೂ ಕಣ್ಮನ ತಣಿಸುತ್ತಿದ್ದವು.
ನಾವು ಒಟ್ಟು ಏಳೆಂಟು ಜನರಿದ್ದೆವು. ಆದರೆ ಒಬ್ಬರ ಬಳಿ ಮಾತ್ರ ದುರ್ಬೀನಿತ್ತು. ಹಾಗಾಗಿ ಸುಂದರ ದೃಶ್ಯಗಳೇನಾದರೂ
ಕಂಡರೆ ಒಬ್ಬರ ಕೈಯಿಂದ ಒಬ್ಬರ ಕೈಗೆ ದುರ್ಬೀನು ಹಸ್ತಾಂತರಗೊಂಡು ಎಲ್ಲರೂ ಆ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಕಾಡಿನಲ್ಲೆಲ್ಲ
ಸುತ್ತಾಡಿ ದಣಿದು ಮನೆಗೆ ಮರಳಿದರೆ ಬೆಚ್ಚನೆಯ ಆತಿಥ್ಯ ಕಾದುಕುಳಿತಿತ್ತು. ಅದ್ಭುತವಾದ ಊಟ ನಮ್ಮ ಹಸಿವನ್ನು
ತಣಿಸಿತು. ಮೂರು ದಿನಗಳಲ್ಲಿ ಅಲ್ಲಿ ಉಂಡ ಆಹಾರಪದಾರ್ಥಗಳ ಲೆಕ್ಕವೇ ನನಗೆ ತಪ್ಪಿಹೋಗಿದೆ. ಕೆಸುವಿನ
ಸೊಪ್ಪಿನ ಪಲ್ಯ, ಚಗಟೆ ಸೊಪ್ಪಿನ ಪಲ್ಯ, ಹಲಸಿನ ಬೀಜದ ಹುಳಿ, ಬೆಂಡೆಕಾಯಿ ಹುಳಿ, ಬದನೆಕಾಯಿ ಎಣ್ಣೆಗಾಯಿ,
ಹಲಸಿನ ಹಪ್ಪಳ ಹೀಗೆ ಅಲ್ಲಿ ನಾವು ಸವಿದ ಪದಾರ್ಥಗಳಿಗೆ ಲೆಕ್ಕವೇ ಇಲ್ಲ. ಎಲ್ಲವೂ ಮನೆಯ ಸುತ್ತಮುತ್ತ
ಬೆಳೆದ ತರಕಾರಿಗಳೇ ಆಗಿದ್ದವು. ನಮಗೆ ಮನೆಗೆ ಪೇಟೆಯಿಂದ ತರಕಾರಿ ಕೊಂಡುತಂದ ನೆನಪೇ ಇಲ್ಲವೆಂದು ಆ
ಮನೆಯವರು ಹೇಳಿದರು. ಮನೆಯವರೆಲ್ಲರ ಆರೋಗ್ಯವನ್ನು, ಉತ್ಸಾಹದ ಜೀವನವನ್ನು ಕಣ್ಣಾರೆ ಕಂಡ ನಮಗೆ ಅದರ
ಗುಟ್ಟೇನೆಂದು ಆಗ ಅರ್ಥವಾಯಿತು!
ನಾವು
ಹೊರಡುವ ಸಮಯ ಸನ್ನಿಹಿತವಾದಂತೆ ಎಲ್ಲರ ಮನಸ್ಸೂ ಭಾರವಾಗಿತ್ತು. ಏಕೆಂದರೆ ಅಲ್ಲಿನ ಸುಂದರ ವಾತಾವರಣವನ್ನು
ಬಿಟ್ಟು ಹೊರಡಲು ಯಾರಿಗೂ ಮನಸ್ಸೇ ಇರಲಿಲ್ಲ. ಆದರೂ ಹೊರಡಲೇಬೇಕಿತ್ತು. ನಮಗೆ ರಾತ್ರಿ ಒಂಬತ್ತು ಗಂಟೆಗೆ
ಮಂಗಳೂರಿನ ರೈಲು ಇದ್ದಿದ್ದು. ಆದರೆ ನಾವು ನಾಲ್ಕೂವರೆಗೇ ಮಡಗಾಂವ್ ರೈಲ್ವೇ ನಿಲ್ದಾಣಕ್ಕೆ ಬಂದೆವು.
ಇನ್ನೂ ನಾಲ್ಕೂವರೆ ತಾಸು ಹೇಗೆ ಸಮಯ ಕಳೆಯುವುದೆಂಬ ಯೋಚನೆಯಲ್ಲಿ ನಾವಿದ್ದಾಗಲೇ ನಮ್ಮನ್ನು ಗಾಬರಿಗೊಳಿಸುವಂತೆ
ಮಡಗಾಂವ್ ನಿಂದ ಮಂಗಳೂರಿಗೆ ಹೋಗಬೇಕಿದ್ದ ಮಡಗಾಂವ್ ಎಕ್ಸ್ ಪ್ರೆಸ್ ರೈಲು ಹೊರಡುವುದು ಐದು ತಾಸು ತಡವಾಗುತ್ತದೆ
ಎಂದು ಘೋಷಿಸಿದರು. ಐದು ತಾಸು ತಡವೆಂದರೆ ರಾತ್ರಿ ಒಂಬತ್ತಕ್ಕೆ ಹೊರಡಬೇಕಿದ್ದ ರೈಲು ಎರಡಕ್ಕೆ ಹೊರಡುತ್ತದೆ
ಎಂದಾಯಿತು! ನಮಗೆ ಗಾಬರಿಯಾಯಿತು. ಅಷ್ಟರಲ್ಲಿ ರೈಲ್ವೇ ನಿಲ್ದಾಣದ ವೈಫೈ ಸಂಪರ್ಕದ ನೆರವಿನಿಂದ ಅಂತರ್ಜಾಲದಲ್ಲಿ
ಜಾಲಾಡಿದಾಗ ಹನ್ನೊಂದೂವರೆಗೆ ಇನ್ನೊಂದು ರೈಲು ಇರುವುದಾಗಿ ತಿಳಿಯಿತು. ನಮ್ಮ ಅದೃಷ್ಟಕ್ಕೆ ಅದರಲ್ಲಿ
ಶಯನದರ್ಜೆಯ ಹದಿಮೂರು ಸೀಟುಗಳು ಲಭ್ಯವಿದ್ದವು. ಗಡಿಬಿಡಿಯಲ್ಲಿ ಎರಡನ್ನು ಬುಕಿಂಗ್ ಮಾಡಿದ್ದಾಯಿತು.
ಕಡೆಗೆ ಆ ರೈಲು ಕೂಡ ಒಂದೂಕಾಲು ಗಂಟೆ ತಡವಾಗಿ, ಹನ್ನೊಂದೂವರೆಗೆ ರೈಲ್ವೆನಿಲ್ದಾಣಕ್ಕೆ ಬರಬೇಕಾಗಿದ್ದ
ರೈಲು ಹನ್ನೆರಡೂಮುಕ್ಕಾಲಿಗೆ ಬಂದಿತು. ಹೀಗೆ ನಮ್ಮ ಗೋವಾ ಪ್ರವಾಸ ಮುಕ್ತಾಯವಾಯಿತು.
ಗೋವಾ
ಎಂದರೆ ಬರೇ ಬೀಚ್ ಮತ್ತು ರೆಸಾರ್ಟ್ ಎಂಬ ಪದಗಳೇ ಎಲ್ಲರ ಕಿವಿಗೂ ಬೀಳುತ್ತದೆ. ಗೋವಾಕ್ಕೆ ಹೋಗುತ್ತಿದ್ದೇವೆ
ಎಂದು ಸ್ನೇಹಿತರ ವಲಯದಲ್ಲಿ ಹೇಳಿದಾಗ ಹುಬ್ಬೇರಿಸಿದವರೇ ಜಾಸ್ತಿ. ಅವರಿಗೆಲ್ಲ ಮತ್ತೆ ಮತ್ತೆ ಸಮಜಾಯಿಷಿ
ಕೊಡಬೇಕಾಗಿತ್ತು. ಅಲ್ಲಿಗೆ ಹೋಗಿಬಂದ ಮೇಲೆ ಅಭಯಾರಣ್ಯದೊಳಗೆ ತೆಗೆದ ಫೋಟೋಗಳನ್ನು ನೋಡಿದಮೇಲೆ ಯಾರೂ
ನಾನು ಹೋಗಿಬಂದಿದ್ದು ಗೋವಾಕ್ಕೆ ಎಂದು ನಂಬಲೇ ಇಲ್ಲ. ಗೋವಾದ ಬಗ್ಗೆ ಇಷ್ಟೊಂದು ತಪ್ಪುಕಲ್ಪನೆಗಳು
ಎಲ್ಲರ ಮನಸ್ಸಿನಲ್ಲಿವೆಯೇ ಎಂದು ನನಗೆ ಆಶ್ಚರ್ಯವಾಯಿತು. ಆದರೆ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದ
ನಾವು ಅಂತಿಮವಾಗಿ ಎರಡು ಹಾವುಗಳನ್ನು ರಕ್ಷಿಸಿದ ಸಂತೃಪ್ತಿಯನ್ನು ಹೊತ್ತು ಮನೆಗೆ ಮರಳಿದೆವು.
No comments:
Post a Comment