ಹಾವು:
ಕಂಡಲ್ಲಿ ರಕ್ಷಿಸಿ ಪ್ಲೀಸ್!!
“ಸರ್ಪ”
ಈ ಎರಡಕ್ಷರದ ಪದವನ್ನು
ಕೇಳಿದ ಕೂಡಲೇ ಎಲ್ಲರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ಸರ್ಪಗಳೆಂದರೆ ವಿಷಕಾರಿಗಳು, ಸಿಕ್ಕಸಿಕ್ಕವರನ್ನೆಲ್ಲ
ಕಚ್ಚಿ ಕೊಲ್ಲುವ ಜೀವಿಗಳು ಎಂಬ ನಂಬಿಕೆ ಎಲ್ಲರಲ್ಲಿದೆ. ಭಾರತದಲ್ಲಂತೂ ಸರ್ಪಗಳ ಬಗೆಗೆ ಇರುವಷ್ಟು
ಮೂಢನಂಬಿಕೆಗಳು ಬೇರಾವ ಜೀವಿಗಳ ಬಗೆಗೂ ಇಲ್ಲವೆಂದರೆ ತಪ್ಪಾಗಲಾರದು. ಏಳು ಹೆಡೆಯ ಸರ್ಪಗಳು, ಜುಟ್ಟಿನ
ಕಾಳಿಂಗ, ಮನುಷ್ಯರನ್ನೇ ನುಂಗುವ ರಾಕ್ಷಸ ಹೆಬ್ಬಾವುಗಳು, ಮರದ ಮೇಲಿನಿಂದ ಮನುಷ್ಯನ ತಲೆಯ ಮೇಲೆ ನೆಗೆದು
ಕಚ್ಚಿ ಮನುಷ್ಯನಿಗೆ ಹುಚ್ಚು ಹಿಡಿಸುವ ಸರ್ಪಗಳು ಇತ್ಯಾದಿ ಇತ್ಯಾದಿ. ಈ ಮೂಢನಂಬಿಕೆಯ ದೆಸೆಯಿಂದಾಗಿಯೇ
ಅನೇಕ ಅಪರೂಪದ ಹಾವುಗಳನ್ನು ಕಂಡಲ್ಲಿ ಕೊಲ್ಲುತ್ತ ಅವುಗಳ ಸಂತತಿಗೇ ಸಂಚಕಾರ ತರುತ್ತಿದ್ದಾರೆ ಮನುಷ್ಯರು.
ವಾಸ್ತವವಾಗಿ ಹಾವುಗಳು ನಿಜಕ್ಕೂ ಮನುಷ್ಯರಿಗೆ ಅಷ್ಟೊಂದು ಅಪಾಯಕಾರಿಯೇ?
ಹಾವುಗಳು ಇಂದು ಬದುಕಿರುವ
ಹಲ್ಲಿಗಳಿಗೆ ಅತ್ಯಂತ ಸಮೀಪದ ಸಂಬಂಧಿಗಳು. ವಾಸ್ತವವಾಗಿ ಹಾವುಗಳು ಹಲ್ಲಿಗಳಿಂದಲೇ ವಿಕಾಸ ಹೊಂದಿರುವ
ಜೀವಿಗಳು. ಕಳೆದ ನೂರರಿಂದ ನೂರೈವತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ವಿಕಸನ ಹೊಂದಿದವು. ಇಂದು
ಬದುಕಿರುವ ಕೆಲವು ಕಾಲಿಲ್ಲದ ಹಲ್ಲಿಗಳ ಮೂಲಕ ಹಾವುಗಳ ವಿಕಾಸದ ಬಗೆಗೆ ಮಹತ್ವದ ವಿವರಗಳು ಲಭ್ಯವಾಗುತ್ತವೆ.
ಮರುಭೂಮಿಯಲ್ಲಿ ಬದುಕುವ ಅನೇಕ ಹಲ್ಲಿಗಳು ಇಂದು ತಮ್ಮ ಕಾಲುಗಳನ್ನು ಕಳೆದುಕೊಂಡಿವೆ. ಇನ್ನೂ ಕೆಲವು
ಹಲ್ಲಿಗಳ ಕಾಲುಗಳು ತುಂಬಾ ಚಿಕ್ಕವಾಗಿ ವಿಕಾಸದ ಘಟ್ಟದಲ್ಲಿ ಕಳೆದುಹೋಗುವ ಹಂತದಲ್ಲಿವೆ. ಇದಕ್ಕೆ ಕಾರಣವೇನೆಂದರೆ
ಮರಳಿನಲ್ಲಿ ಚಲಿಸುವಾಗ ಮತ್ತು ಮರಳಿನಲ್ಲಿ ಬಿಲ ತೋಡುವಾಗ ಕಾಲುಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ
ಹೆಚ್ಚು. ಆದ್ದರಿಂದ ಕಾಲುಗಳ ಗೊಡವೆಯೇ ಬೇಡವೆಂದು ಕಾಲುಗಳನ್ನು ಕಳೆದುಕೊಂಡು ಕೆಲ ಹಲ್ಲಿಗಳು ಹಾವುಗಳಂತೆಯೇ
ತೆವಳುತ್ತವೆ. ಇವೇ ಮುಂದೆ ಹಾವುಗಳ ವಿಕಾಸಕ್ಕೆ ಕಾರಣವಾಯಿತು.
ನಿಜ ಹೇಳಬೇಕೆಂದರೆ
ಜಗತ್ತಿನ ಜನರಿಗೆಲ್ಲ ಹಾವು ಎಂದರೆ ಮೊದಲು ನೆನಪಾಗುವುದೇ ವಿಷ. ಆದರೆ ಜಗತ್ತಿನ ಬಹುಸಂಖ್ಯಾತ ಹಾವುಗಳು
ವಿಷರಹಿತ ಹಾವುಗಳು ಎಂಬುದು ಎಷ್ಟು ಜನರಿಗೆ ಗೊತ್ತು? ನಾವು ಸಾಮಾನ್ಯವಾಗಿ ನೋಡುವ ಕೇರೆ ಹಾವು, ಹಸಿರು
ಹಾವು, ಹೆಬ್ಬಾವು ಇತ್ಯಾದಿ ಹಾವುಗಳು ವಿಷರಹಿತವಾದವು. ಇದೇ ರೀತಿ ವಿಷರಹಿತ ಹಾವುಗಳ ದೊಡ್ಡ ಪಟ್ಟಿಯೇ
ಇದೆ. ವಾಸ್ತವವಾಗಿ ಜಗತ್ತಿನ ಒಟ್ಟು ಮೂರುಸಾವಿರದ ನಾಲ್ಕುನೂರಕ್ಕೂ ಹೆಚ್ಚು ಪ್ರಭೇದದ ಸರ್ಪಗಳಲ್ಲಿ
ಸುಮಾರು ನಾಲ್ಕುನೂರು ಮಾತ್ರ ವಿಷಕಾರಿಯಾದವು. ಉಳಿದವೆಲ್ಲ ವಿಷರಹಿತವಾದ ಹಾವುಗಳು. ಈ ನಾಲ್ಕುನೂರು
ಸರ್ಪಗಳಲ್ಲೂ ಕೆಲವು ಮಾತ್ರ ಮನುಷ್ಯರಿಗೆ ಪ್ರಾಣಾಂತಿಕವಾದ ವಿಷವನ್ನು ಹೊಂದಿವೆ. ಅಷ್ಟಕ್ಕೂ ಯಾವುದೇ
ಹಾವಾದರೂ ತನ್ನ ವಿಷವನ್ನು ಬೇಟೆಯನ್ನು ಕೊಲ್ಲಲು ಮಾತ್ರ ಬಳಸುತ್ತದೆಯೇ ಹೊರತು ಸುಮ್ಮಸುಮ್ಮನೆ ಯಾವುದೇ
ಪ್ರಾಣಿಯ ಮೇಲೆ ದಾಳಿ ಮಾಡಲು ಬಳಸುವುದಿಲ್ಲ. ಮನುಷ್ಯರನ್ನು ಕಂಡಕೂಡಲೇ ಇದು ತಾನು ತಿನ್ನಬಹುದಾದಂಥ
ಪದಾರ್ಥವಲ್ಲ ಎಂಬುದು ಹಾವಿಗೆ ಕೂಡಲೇ ಹೊಳೆಯುತ್ತದೆ. ಆದ್ದರಿಂದ ಅದರ ಮೊದಲ ಗುರಿ ಮನುಷ್ಯರಿಂದ ತಪ್ಪಿಸಿಕೊಂಡು
ದೂರ ಹೋಗುವುದು. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಾಗಲೂ ಯಾವುದೇ ಹಾವು ಏಕಾಏಕಿ ದಾಳಿ ಮಾಡುವುದಿಲ್ಲ.
ಮೊದಲು ಹೆಡೆ ಬಿಚ್ಚಿ, ಬುಸುಗುಟ್ಟಿ ಹೀಗೆ ಬೇರೆಬೇರೆ ಹಾವುಗಳು ಬೇರೆಬೇರೆ ರೀತಿಯಲ್ಲಿ ಎಚ್ಚರಿಕೆ
ನೀಡುತ್ತವೆ. ಅದನ್ನು ಅರ್ಥೈಸಿಕೊಂಡು ದೂರ ಸರಿಯುವ ಯಾವುದೇ ಮನುಷ್ಯನಾದರೂ ಸುರಕ್ಷಿತವಾಗಿಯೇ ಇರುತ್ತಾನೆ,
ಏಕೆಂದರೆ ಹಾವು ಎಂದೂ ಮನುಷ್ಯರನ್ನು ಬೆನ್ನಟ್ಟಿ ಕಚ್ಚುವುದಿಲ್ಲ. ಕಚ್ಚುವುದು ಏನಿದ್ದರೂ ಅದರ ಕೊನೆಯ
ಅಸ್ತ್ರ.
ಎಚ್ಚರಿಕೆ ನೀಡುವ
ವಿಧಾನವೂ ಬೇರೆಬೇರೆ ಹಾವುಗಳಲ್ಲಿ ಬೇರೆಬೇರೆ ರೀತಿ ಇರುತ್ತವೆ. ಕೆಲವು ಹಾವುಗಳು ಗಟ್ಟಿಯಾಗಿ ಬುಸುಗುಟ್ಟಿ
ಎಚ್ಚರಿಕೆ ನೀಡುತ್ತವೆ. ನಾಗರಹಾವಿನಂಥ ಕೆಲವು ಹಾವುಗಳು ತಮ್ಮ ಭವ್ಯವಾದ ಹೆಡೆಯನ್ನು ಬಿಚ್ಚಿ ಅತ್ತಿತ್ತ
ಆಡಿಸಿ ಎಚ್ಚರಿಕೆ ನೀಡುತ್ತವೆ. ಇನ್ನು ಕೆಲ ಹಾವುಗಳು ಕಣ್ಣುಕುಕ್ಕುವಂಥ ವರ್ಣಗಳ ಮೂಲಕ ತಾನು ವಿಷಕಾರಿಯೆಂಬ
ಎಚ್ಚರಿಕೆಯ ಸಂದೇಶ ರವಾನಿಸುತ್ತವೆ. ನಮ್ಮ ದೇಶದ ಕಡಂಬಳ ಅಥವಾ ಕಟ್ಟುಹಾವು, ಮೆಕ್ಸಿಕೋ ದೇಶದ ಕೋರಾಲ್
ಸ್ನೇಕ್ ಇತ್ಯಾದಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು.
ಹಾವಿನ ವಿಷದಲ್ಲಿ
ಕೂಡ ಬೇರೆಬೇರೆ ವಿಧಗಳಿವೆ. ಹಾವಿನ ವಿಷವು ಒಂದು ರೀತಿಯ ಸಸಾರಜನಕ (ಪ್ರೋಟೀನ್) ವಲ್ಲದೆ ಬೇರೇನೂ ಅಲ್ಲ.
ಅದರಲ್ಲೂ ಹೆಮೋಟಾಕ್ಸಿನ್, ನ್ಯೂರೋಟಾಕ್ಸಿನ್, ಕಾರ್ಡಿಯೋಟಾಕ್ಸಿನ್ ಮತ್ತು ಡೆಂಡ್ರೋಟಾಕ್ಸಿನ್ ಎಂಬ
ಬೇರೆಬೇರೆ ವಿಧಗಳಿವೆ. ಬೇಟೆಯ ಮೇಲೆ ಅವುಗಳ ಪರಿಣಾಮವನ್ನು ಆಧರಿಸಿ ಅವುಗಳನ್ನು ವಿಂಗಡಿಸಲಾಗಿದೆ.
ಹೆಮೋಟಾಕ್ಸಿನ್ ಗಳು ರಕ್ತವನ್ನು ಹೆಪ್ಪುಗಟ್ಟಿಸಿ ಕೊಲ್ಲುತ್ತವೆ. ನ್ಯೂರೋಟಾಕ್ಸಿನ್ ಮತ್ತು ಡೆಂಡ್ರೋಟಾಕ್ಸಿನ್
ಗಳು ನರಮಂಡಲದ ಮೇಲೆ ಪರಿಣಾಮ ಬೀರಿದರೆ ಕಾರ್ಡಿಯೋಟಾಕ್ಸಿನ್ ಗಳು ಹೃದಯದ ಮೇಲೇ ನೇರವಾಗಿ ದಾಳಿ ನಡೆಸುತ್ತದೆ.
ಮಂಡಲದ ಹಾವು ಎಂದು ಕರೆಯಲ್ಪಡುವ ಒಂದು ಜಾತಿಯ ವೈಪರ್ ಹಾವು ಕಚ್ಚಿದರೆ ಸೂಕ್ತ ಚಿಕಿತ್ಸೆ ದೊರೆಯದೆ
ಹೋದರೆ ಮೂತ್ರಪಿಂಡ ವೈಫಲ್ಯ ಸಂಭವಿಸುತ್ತದೆ. ಜೊತೆಗೆ ಕಚ್ಚಿದ ಜಾಗ ಸಹ ಕೊಳೆಯಲು ಆರಂಭಿಸುತ್ತದೆ.
ಹಾಗಾಗಿ ಅದಕ್ಕೆ ಆದಷ್ಟು ಬೇಗ ಚಿಕಿತ್ಸೆ ಮಾಡುವುದು ಅತೀ ಅಗತ್ಯ.
ಹಾವುಗಳಲ್ಲಿ ಸ್ಪಿಟ್ಟಿಂಗ್
ಕೋಬ್ರಾ ಎಂಬ ಒಂದು ಜಾತಿಯ ಸರ್ಪಗಳಿವೆ. ಅವು ತಮ್ಮ ವಿಷವನ್ನು ಉಗುಳುವ ರೀತಿಯಿಂದಾಗಿ ಪ್ರಸಿದ್ಧವಾಗಿವೆ.
ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಈ ಜಾತಿಯ ಸರ್ಪಗಳು ಇವೆ. ನಮ್ಮ ನಾಗರಹಾವಿನ ಸಮೀಪದ ಸಂಬಂಧಿಗಳೇ
ಆದ ಇವುಗಳ ವಿಷ ಕೂಡ ನಾಗರಹಾವಿನಷ್ಟೇ ಘೋರವಾದದ್ದು. ಇದು ತನ್ನ ಶತ್ರುವನ್ನು ಗುರಿಯಾಗಿಸಿಕೊಂಡು ಸುಮಾರು
ಆರು ಅಡಿಗಳಷ್ಟು ದೂರ ವಿಷವನ್ನು ಉಗಿಯಬಲ್ಲದು. ಆದರೆ ಈ ವಿಷ ನಮ್ಮ ಚರ್ಮಕ್ಕೆ ತಾಗಿದರೆ ಅಪಾಯವೇನೂ
ಇಲ್ಲ. ಅಪಾಯವಿರುವುದು ಕಣ್ಣಿಗೆ ತಾಗಿದಾಗ ಮಾತ್ರ. ಕೂಡಲೇ ಸೂಕ್ತ ಚಿಕಿತ್ಸೆ ದೊರೆಯದೆ ಹೋದರೆ ಕಾರ್ನಿಯಾಕ್ಕೆ
ಹಾನಿಯಾಗಿ ಶಾಶ್ವತ ಅಂಧತ್ವ ಉಂಟಾಗುವುದು ಖಂಡಿತ. ಈ ಸರ್ಪಗಳ ಹಲ್ಲಿನ ರಚನೆಯೇ ವಿಭಿನ್ನವಾಗಿದ್ದು
ವಿಷವನ್ನು ದೂರದವರೆಗೆ ಉಗಿಯಲು ಸಾಧ್ಯವಾಗುವ ರೀತಿಯಲ್ಲಿ ಮಾರ್ಪಟ್ಟಿರುತ್ತದೆ.
ಕಾಳಿಂಗ ಸರ್ಪ ಅಥವಾ
ಕಿಂಗ್ ಕೋಬ್ರಾ ನಮ್ಮ ದೇಶದಲ್ಲಿ ಅತಿಹೆಚ್ಚು ಭಕ್ತಿಯಿಂದ ಪೂಜಿಸಲ್ಪಡುವ ಸರ್ಪ. ಆದರೆ ದುರದೃಷ್ಟವಶಾತ್
ಈ ಪೂಜನೀಯ ಭಾವನೆಯಿಂದ ಇದರ ಉಳಿವಿಗೆ ಸಹಾಯವೇನೂ ಆಗಿಲ್ಲ. ನಮ್ಮ ದೇಶದಲ್ಲಿ ಅಳಿವಿನಂಚಿನಲ್ಲಿರುವ
ಸರ್ಪಗಳಲ್ಲಿ ಇದೂ ಒಂದು. ಜಗತ್ತಿನ ಅತಿ ಉದ್ದವಾದ ವಿಷಸರ್ಪ ಎಂಬ ಹೆಗ್ಗಳಿಕೆ ಇದರದ್ದು. ಸುಮಾರು ಹದಿನೈದು
ಅಡಿ ಉದ್ದ ಬೆಳೆಯಬಲ್ಲ ಸರ್ಪವಿದು. ಕಡುಗಪ್ಪು ಬಣ್ಣದ ಇದು ನೋಡಲು ಭಯಜನಕವಾಗಿದ್ದರೂ ಸಾಮಾನ್ಯವಾಗಿ
ದಟ್ಟಕಾಡುಗಳಲ್ಲಿ ಮಾತ್ರ ವಾಸಿಸುವ ಕಾರಣ ಮನುಷ್ಯರ ಕಣ್ಣಿಗೆ ಬೀಳುವುದೇ ಅಪರೂಪ. ಗೂಡುಕಟ್ಟಿ ಮೊಟ್ಟೆಯಿಡುವ
ಏಕಮಾತ್ರ ಸರ್ಪ ಎಂಬ ಕಾರಣದಿಂದಲೂ ಇದು ಪ್ರಸಿದ್ಧವಾಗಿದೆ. ಇದರ ಆಹಾರ ಬಹುಮುಖ್ಯವಾಗಿ ಕೇರೆಹಾವುಗಳು.
ಇದರ ವೈಜ್ಞಾನಿಕ ನಾಮಧೇಯ “ಓಫಿಯೋಫ್ಯಾಗಸ್ ಹೆನ್ನಾ” ಎಂಬುದರ ಅರ್ಥವೂ ಅದೇ ಆಗಿದೆ. ಓಫಿಯೋ ಎಂದರೆ
ಸರ್ಪ ಎಂದರ್ಥ. ಫ್ಯಾಗಸ್ ಎಂದರೆ ಭಕ್ಷಕ ಎಂದರ್ಥ. ಆದ್ದರಿಂದ ಓಫಿಯೋಫ್ಯಾಗಸ್ ಎಂದರೆ ಸರ್ಪಭಕ್ಷಕ ಎಂದರ್ಥ.
ಏಳು ಹೆಡೆಯ ಸರ್ಪಗಳ ಕಥೆ ಹುಟ್ಟಿಕೊಂಡಿರುವುದು ಕೂಡ ಕಾಳಿಂಗ ಸರ್ಪದ ಬಗೆಗೇ. ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ
ಬಂದ ಸುದ್ದಿಯೊಂದರಲ್ಲಿ ಮೂರು ಮತ್ತು ಐದು ಹೆಡೆಯ ಸರ್ಪಗಳ ಬಗೆಗೆ ಚಿತ್ರಸಮೇತವಾಗಿ ವರದಿ ಬಂದಿತ್ತು.
ಅದು ಕಾಲ್ಪನಿಕ ಕಟ್ಟುಕಥೆಯ ಪರಮಾವಧಿಯಲ್ಲದೆ ಬೇರೇನೂ ಅಲ್ಲ. ಗಣಕಯಂತ್ರದ ಚಮತ್ಕಾರದ ಮೂಲಕ ಒಂದು ಸರ್ಪಕ್ಕೆ
ಎಷ್ಟು ಹೆಡೆಗಳನ್ನಾದರೂ ಕೂರಿಸಲು ಸಾಧ್ಯ.
ಕರ್ನಾಟಕದ ಆಗುಂಬೆಯಲ್ಲಿರುವ
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಕಾಳಿಂಗಸರ್ಪಗಳ ಜೀವನವನ್ನು ಅರಿಯುವ ಪ್ರಯತ್ನ ನಡೆಯುತ್ತಿದೆ.
ಅವುಗಳ ಜೀವನದ ಬಗೆಗಿನ ಅನೇಕ ಮಹತ್ವದ ಸಂಗತಿಗಳು ಇದರ ಮೂಲಕ ಪತ್ತೆಯಾಗಿವೆ. ಅದರಲ್ಲಿ ಸಾಬೀತಾದ ಬಹುಮುಖ್ಯವಾದ
ಮಿಥ್ಯೆಯೆಂದರೆ ಕಾಳಿಂಗಸರ್ಪವು ಮನುಷ್ಯರನ್ನು ಬೆನ್ನಟ್ಟಿ ಕೊಲ್ಲುತ್ತದೆ ಎಂಬುದು. ಕಾಳಿಂಗಸರ್ಪವಷ್ಟೇ
ಅಲ್ಲ, ಯಾವುದೇ ಹಾವು ಕೂಡ ಮನುಷ್ಯರನ್ನು ಬೆನ್ನಟ್ಟಿ ಕೊಲ್ಲುತ್ತದೆ ಎಂಬುದು ವೈಜ್ಞಾನಿಕವಾಗಿ ಸುಳ್ಳು
ಎಂಬುದು ಸ್ಪಷ್ಟ. ಕೆಲವು ಹಾವುಗಳು ಮನುಷ್ಯರಿಗೆ ಹೆಚ್ಚು ಅಪಾಯಕಾರಿಗಳು, ಏಕೆಂದರೆ ಅವು ಸಾಮಾನ್ಯವಾಗಿ
ಜನವಸತಿಗೆ ಸಮೀಪದಲ್ಲೇ ವಾಸವಿರುತ್ತವೆ. ಹಾಗಾಗಿ ಮನುಷ್ಯರು ಕೂಡ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವಕ್ಕೆ
ತೊಂದರೆಕೊಟ್ಟಾಗ ಆತ್ಮರಕ್ಷಣೆಗಾಗಿ ಕಚ್ಚಿ ಮನುಷ್ಯರ ಸಾವಿಗೆ ಕಾರಣವಾದಾಗ ಅವಕ್ಕೆ ಅಪಾಯಕಾರಿಗಳೆಂಬ
ಹಣೆಪಟ್ಟಿ ಸಿಗುತ್ತದೆ ಅಷ್ಟೆ.
ಹಾವುಗಳ ವಿಷದ ತೀವ್ರತೆಯನ್ನು
ಕಂಡುಹಿಡಿಯಲು ಒಂದು ಪರೀಕ್ಷೆಯಿದೆ. ಎಲ್ ಡಿ 50 (ಲೀಥಲ್ ಡೋಸ್ ಫಿಫ್ಟಿ) ಎಂದು ಕರೆಯಲಾಗುವ ಈ ಪರೀಕ್ಷೆಯಲ್ಲಿ
ಒಂದು ಗೊತ್ತಾದ ಸಂಖ್ಯೆಯ ಜೀವಿಗಳಲ್ಲಿ ಅರ್ಧದಷ್ಟನ್ನು ಕೊಲ್ಲಲು ಆ ಹಾವಿನ ವಿಷ ಎಷ್ಟು ಪ್ರಮಾಣದಲ್ಲಿ
ಬೇಕಾಗುತ್ತದೆ ಎಂಬುದರ ಲೆಕ್ಕಾಚಾರವೇ ಎಲ್ ಡಿ ಫಿಫ್ಟಿ ಪರೀಕ್ಷೆ. ಬೇಕಾಗುವ ವಿಷದ ಪ್ರಮಾಣ ಕಡಿಮೆಯಿದ್ದಷ್ಟೂ ಆ ಹಾವಿನ ವಿಷ
ಹೆಚ್ಚು ಪರಿಣಾಮಕಾರಿ ಎಂದರ್ಥ. ಈ ಪರೀಕ್ಷೆಯ ಪ್ರಕಾರ ಜಗತ್ತಿನ ಅತಿ ಘೋರ ವಿಷಸರ್ಪವೆಂದರೆ ಇನ್ ಲ್ಯಾಂಡ್
ಟೈಪಾನ್ ಎಂಬ ಆಸ್ಟ್ರೇಲಿಯಾದ ವಿಷಸರ್ಪ. ಆದರೆ ಇದು ತುಂಬಾ ನಾಚಿಕೆ ಸ್ವಭಾವದ ಮತ್ತು ದಟ್ಟವಾದ ಅಡವಿಗಳಲ್ಲಷ್ಟೇ
ಬದುಕುವ ಸರ್ಪವಾದ್ದರಿಂದ ಮಾನವರೊಂದಿಗೆ ಇದರ ಮುಖಾಮುಖಿ ತೀರಾ ಅಪರೂಪ. ಎರಡನೇ ಸ್ಥಾನಲ್ಲಿರುವ ಈಸ್ಟರ್ನ್
ಬ್ರೌನ್ ಸ್ನೇಕ್ ಸಹ ಆಸ್ಟ್ರೇಲಿಯದಲ್ಲೇ ಇದೆ. ಇನ್ ಲ್ಯಾಂಡ್ ಟೈಪಾನ್ ನಂತಲ್ಲದೆ ಈ ಹಾವು ಮನುಷ್ಯವಾಸ್ತವ್ಯ
ಹೆಚ್ಚಿರುವ ನಗರಗಳಲ್ಲೇ ಸಾಕಷ್ಟು ಸಂಖ್ಯೆಯಲ್ಲಿವೆ. ಆದ್ದರಿಂದ ಮಾನವರ ಜೊತೆ ಇವುಗಳ ಮುಖಾಮುಖಿ ಆಗುವ
ಸಂದರ್ಭಗಳು ಹೆಚ್ಚು.
ಆಫ್ರಿಕಾ ಖಂಡ ಸಹ
ಜಗತ್ತಿನ ಅನೇಕ ಭಯಾನಕ ವಿಷಸರ್ಪಗಳ ತವರು. ಅಲ್ಲಿನ ಮಾಂಬಾ ಮತ್ತು ಡೆತ್ ಆ್ಯಡರ್ ಹಾವುಗಳು ಅತಿ ಪ್ರಸಿದ್ಧವಾದ
ವಿಷಸರ್ಪಗಳು. ಮಾಂಬಾಗಳಲ್ಲಿ ನಾಲ್ಕು ಪ್ರಮುಖ ಜಾತಿಗಳಿವೆ. ಅವುಗಳ ಪೈಕಿ ಓರಿಯಂಟಲ್ ಗ್ರೀನ್ ಮಾಂಬಾ
ಎಂಬ ಹಾವೊಂದು ವಾಸಮಾಡುವುದು ಗಿಡಮರಗಳ ಮೇಲೆಯೇ. ಆದ್ದರಿಂದಲೇ ಅದರ ಅಸ್ತಿತ್ವ ಗೊತ್ತೇ ಆಗುವುದಿಲ್ಲ.
ಗಿಡಗಳ ನಡುವೆ ಎಲೆಯಂತೆಯೇ ಮರೆಯಾಗಿ ಕುಳಿತಿರುವ ಈ ಹಾವು ಯಾರಾದರೂ ಮನುಷ್ಯ ಸಮೀಪ ಬಂದರೆ ತನಗೇನೋ
ಈತನಿಂದ ಅಪಾಯವಿದೆಯೆಂದು ಬಗೆದು ತಕ್ಷಣ ದಾಳಿ ನಡೆಸುತ್ತದೆ. ಮಾಂಬಾ ಕಡಿತಕ್ಕೆ ಒಳಗಾದ ಮನುಷ್ಯ ಕ್ಷಣಾರ್ಧದಲ್ಲೇ
ಕುಸಿದುಬೀಳುತ್ತಾನೆ. ಆಮೇಲೆ ಹದಿನೈದು ನಿಮಿಷಗಳ ಒಳಗಾಗಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವೇ ಗತಿ.
ಅದೇ ರೀತಿ ಕಡುಗಪ್ಪು ಬಣ್ಣದ ಬ್ಲ್ಯಾಕ್ ಮಾಂಬಾ ಎಂಬ ಹಾವೂ ಇದೆ. ಅದು ಸಾಮಾನ್ಯವಾಗಿ ನೆಲದ ಮೇಲೆ ಓಡಾಡುತ್ತಿರುತ್ತದೆ.
ಎಲ್ಲ ಮಾಂಬಾಗಳೂ ಅತ್ಯಂತ ಚುರುಕಿನ ಹಾವುಗಳು. ಮನುಷ್ಯರ ಮೇಲೆ ಸಹ ಕ್ಷಣಾರ್ಧದಲ್ಲಿ ದಾಳಿ ನಡೆಸಿ ಕಚ್ಚುತ್ತವೆ.
ಆದ್ದರಿಂದಲೇ ಎಲ್ ಡಿ ಫಿಫ್ಟಿ ಪರೀಕ್ಷೆಯಲ್ಲಿ ಮಾಂಬಾ ಇನ್ ಲ್ಯಾಂಡ್ ಟೈಪಾನ್ ಗಿಂತ ಬಹಳ ಕೆಳಗಿನ ಸ್ಥಾನದಲ್ಲಿದ್ದರೂ
ಜಗತ್ತಿನಲ್ಲಿ ಅತಿಹೆಚ್ಚು ಸಾವುನೋವುಗಳಿಗೆ ಕಾರಣವಾಗುವ ಸರ್ಪಗಳ ಪೈಕಿ ಮಾಂಬಾ ಮೊದಲ ಸ್ಥಾನದಲ್ಲಿದೆ.
ಡೆತ್ ಆ್ಯಡರ್ ಸರ್ಪವು ವೈಪರ್ ಗಳ ಕುಟುಂಬಕ್ಕೆ ಸೇರಿದೆ. ಇದು ತರಗೆಲೆಗಳ ಮಧ್ಯೆ ಕುಳಿತಿದ್ದಾಗ ಗೊತ್ತೇ
ಆಗುವುದಿಲ್ಲ. ಸಮೀಪಕ್ಕೆ ಬರುವ ಮೊಲ, ಅಳಿಲು, ಇಲಿ ಇತ್ಯಾದಿ ಚಿಕ್ಕಪುಟ್ಟ ಪ್ರಾಣಿಗಳನ್ನು ಹಿಡಿದು
ನುಂಗುತ್ತದೆ. ಒಂದು ಸೆಕೆಂಡಿನ ಅತ್ಯಲ್ಪ ಅವಧಿಯಲ್ಲಿ ಬಲಿಯ ಮೇಲೆ ದಾಳಿ ನಡೆಸಿ ವಿಷವನ್ನು ಚುಚ್ಚುತ್ತದೆ.
ಈ ವಿಷದ ಪರಿಣಾಮವಾಗಿ ಆಂತರಿಕ ರಕ್ತಸ್ರಾವವಾಗಿ ಬಲಿಯು ಕೆಲವೇ ನಿಮಿಷಗಳಲ್ಲಿ ಸಾಯುತ್ತದೆ.
ಹಾವನ್ನು ನೋಡಿದ ಯಾರೇ
ಆದರೂ ಒಂದು ವಿಷಯವನ್ನು ಗಮನಿಸಿರಬಹುದು. ಅದೆಂದರೆ ಯಾವುದೇ ಹಾವಾದರೂ ಸಹ ತನಗಿಂತ ಅನೇಕಪಟ್ಟು ದಪ್ಪವಿರುವ
ಪ್ರಾಣಿಗಳನ್ನು ನುಂಗುತ್ತದೆ. ಬಹುಶಃ ಈ ಸಾಮರ್ಥ್ಯ ಜೀವಿಜಗತ್ತಿನಲ್ಲಿ ಹಾವುಗಳಿಗೆ ಮಾತ್ರ ಸಿದ್ಧಿಸಿರುವುದು
ಎಂದರೆ ತಪ್ಪಾಗಲಾರದು. ಕೇರೆಹಾವುಗಳು ತಮಗಿಂತ ಅನೇಕಪಟ್ಟು ದಪ್ಪದ ಇಲಿ, ಹೆಗ್ಗಣಗಳನ್ನು ನುಂಗುತ್ತವೆ.
ಹೆಬ್ಬಾವುಗಳು ಸಹ ಅನೇಕ ವೇಳೆ ಜಿಂಕೆಗಳನ್ನೇ ನುಂಗುತ್ತವೆ. ಅನಕೊಂಡಾಗಳಂತೂ ಕೇಮ್ಯಾನ್ ಎಂಬ ಭಾರೀ
ಮೊಸಳೆಗಳನ್ನೇ ನುಂಗಬಲ್ಲವು. ಹಾಗಾದರೆ ಹಾವುಗಳಿಗೆ ತಮಗಿಂತ ದಪ್ಪದ ಬೇಟೆಗಳನ್ನು ಹೇಗೆ ನುಂಗುತ್ತವೆ?
ಇದನ್ನು ಅರ್ಥಮಾಡಿಕೊಳ್ಳಬೇಕಾದರೆ
ಹಾವುಗಳ ದವಡೆಯ ರಚನೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಹಾವುಗಳ ದವಡೆ ಅವುಗಳ ಸಮೀಪದ ಸಂಬಂಧಿಗಳಾದ
ಹಲ್ಲಿಗಳ ದವಡೆಗಿಂತ ವಿಭಿನ್ನವಾಗಿದೆ. ಹಲ್ಲಿಗಳ ದವೆಗಳಾದರೋ ಮೇಲಿನ ಮತ್ತು ಕೆಳಗಿನ ದವಡೆಗಳನ್ನು
ಒಂದು ಮಿತಿಯ ನಂತರ ಹಿಗ್ಗಿಸಲಾಗುವುದಿಲ್ಲ. ಆದರೆ ಹಾವುಗಳಲ್ಲಿ ದವಡೆಗಳು ಅತ್ಯಂತ ಸಡಿಲವಾಗಿ ಜೋಡಿಸಲ್ಪಟ್ಟಿರುತ್ತವೆ.
ಆದ್ದರಿಂದ ಅವು ತಮಗಿಂತ ದೊಡ್ಡ ಬೇಟೆಯನ್ನು ನುಂಗಲು ಆರಾಮವಾಗಿ ಬಾಯಿಯನ್ನು ಅಗಲಿಸಬಲ್ಲವು. ಈ ಸಾಮರ್ಥ್ಯ
ಹಲ್ಲಿಗಳಿಗಾಗಲೀ ಅಥವಾ ಬೇರಾವುದೇ ಸರೀಸೃಪಗಳಿಗಾಗಲೀ ಇಲ್ಲ.
ಹಾವುಗಳಲ್ಲಿ ಇಂದು
ಬದುಕಿರುವ ಅತಿದೊಡ್ಡ ಸರ್ಪವೆಂದರೆ ಅನಕೊಂಡಾ. ಇವುಗಳ ಗಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.
ಇವು ಮೂವತ್ತು ಅಡಿಗಿಂತಲೂ ಉದ್ದ ಬೆಳೆಯಬಲ್ಲವು ಎನ್ನುತ್ತಾರಾದರೂ ಇದರ ಬಗೆಗೆ ಅಧಿಕೃತ ದಾಖಲೆಗಳಿಲ್ಲ.
ಆದರೆ ಇಪ್ಪತ್ತು ಅಡಿ ಬೆಳೆದ ಹಾವುಗಳನ್ನು ಕಂಡವರಿದ್ದಾರೆ. ಇವು ಮೊದಲೇ ಹೇಳಿದಂತೆ ಮೊಸಳೆಗಳನ್ನೂ
ನುಂಗಬಲ್ಲ ಮಹಾಸರ್ಪಗಳು. ಅವುಗಳನ್ನು ಆಧರಿಸಿಯೇ ಆಂಗ್ಲಭಾಷೆಯಲ್ಲಿ ಅನಕೊಂಡಾ ಎಂಬ ಚಲನಚಿತ್ರಗಳೂ ಬಂದವು.
ಆದರೆ ಅನಕೊಂಡಾಗಳು ಮನುಷ್ಯರನ್ನು ನುಂಗುತ್ತವೆ ಎಂಬುದು ಮಾತ್ರ ಸತ್ಯವಲ್ಲ. ಇವು ಅತ್ಯಂತ ಭಾರವಾದ
ಹಾವುಗಳಾದರೂ ಇವುಗಳ ಸರಾಸರಿ ಉದ್ದ ರೆಟಿಕ್ಯುಲೇಟೆಡ್ ಪೈಥಾನ್ ಗಿಂತ ಕಡಿಮೆ. ರೆಟಿಕ್ಯುಲೇಟೆಡ್ ಪೈಥಾನ್
ಜಗತ್ತಿನ ಅತಿ ಉದ್ದದ ಹಾವು ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಅನಕೊಂಡಾ ಇರಲಿ ಅಥವಾ ರೆಟಿಕ್ಯುಲೇಟೆಡ್
ಪೈಥಾನ್ ಇರಲಿ, ಅವುಗಳ ಉದ್ದವನ್ನು ಬದುಕಿದ್ದಾಗ ಕಂಡುಹಿಡಿಯುವುದೇ ಕಷ್ಟ. ಸತ್ತ ಮೇಲಷ್ಟೇ ನಿಖರವಾದ
ಉದ್ದವನ್ನು ಕಂಡುಹಿಡಿಯಬಹುದು.
ಇದು ಬದುಕಿರುವ ಹಾವುಗಳ
ಮಾತಾಯಿತು. ಇನ್ನು ಅಳಿದುಹೋಗಿರುವ ಹಾವುಗಳ ಪೈಕಿ ಟೈಟಾನೋಬೋವಾ ಎಂಬ ಮಹಾಸರ್ಪವೊಂದು ಭೂಮಿಯ ಮೇಲೆ
ಇದುವರೆಗೆ ಬದುಕಿದ್ದ ಅತಿದೊಡ್ಡ ಹಾವೆಂದು ಹೆಸರಾಗಿದೆ. ಇಂದು ಸಿಕ್ಕಿರುವ ಇದರ ಪಳೆಯುಳಿಕೆಗಳ ಮೂಲಕ
ಪರೀಕ್ಷಿಸಿದಾಗ ಇದು ನಲವತ್ತು ಅಡಿ ಉದ್ದ ಮತ್ತು ಒಂದು ಟನ್ ಗಿಂತಲೂ ಹೆಚ್ಚು ತೂಕ ಇತ್ತೆಂಬ ಅಂದಾಜು
ಸಿಕ್ಕಿದೆ. ಸುಮಾರು ಆರು ಕೋಟಿ ವರ್ಷಗಳ ಹಿಂದೆ ಬದುಕಿದ್ದ ಈ ಮಹಾಸರ್ಪಗಳು ಡೈನೋಸಾರ್ ಗಳ ನಾಮಾವಶೇಷವಾದ
ನಂತರದ ಕಾಲದಲ್ಲಿ ಭೂಮಿಯನ್ನು ಆಳಿದವು. ಮೊದಲು ಈ ಬೃಹತ್ ಸರ್ಪಗಳು ಅಂದಿನ ಕಾಲದ ಭಾರೀ ಬೇಟೆಗಾರರಾಗಿದ್ದಿರಬಹುದೆಂದು
ಭಾವಿಸಲಾಗಿತ್ತಾದರೂ ಇಂದು ಅವು ಬಹುಮುಖ್ಯವಾಗಿ ಮೀನುಗಳನ್ನೇ ಬೇಟೆಯಾಡುತ್ತಿದ್ದವೆಂಬ ಆಶ್ಚರ್ಯಕರವಾದ
ಸಂಗತಿ ತಿಳಿದುಬಂದಿದೆ.
ಭಾರತದಲ್ಲಿ ಹಾವಾಡಿಗ
ವೃತ್ತಿ ಎಂಬುದು ಬಹಳ ಪ್ರಾಚೀನಕಾಲದಿಂದಲೂ ಇದೆ. ನಾಗರಹಾವನ್ನು ಹಿಡಿದು ಅದರ ವಿಷದ ಹಲ್ಲನ್ನು ಕಿತ್ತು
ಬುಟ್ಟಿಯಲ್ಲಿಟ್ಟು ಪುಂಗಿ ಊದುತ್ತ ಹಾವನ್ನು ಆಡಿಸುವ ಹಾವಾಡಿಗರು ನಮ್ಮಲ್ಲಿ ಹಳ್ಳಿಗಳಲ್ಲಿ ಕಾಣಸಿಗುತ್ತಾರೆ.
ಹಾವು ಪುಂಗಿಯ ನಾದಕ್ಕೆ ಮನಸೋತು ಕುಣಿಯುತ್ತದೆ ಎಂಬುದು ಸಹ ಒಂದು ತಪ್ಪು ಕಲ್ಪನೆ. ಹಾವಿಗೆ ಕಿವಿಯಿರುವುದಿಲ್ಲ.
ಅದು ನಮ್ಮನಿಮ್ಮಂತೆ ಗಾಳಿಯಲ್ಲಿ ಸಾಗಿಬಂದ ಧ್ವನಿಗಳನ್ನು ಕೇಳಲಾರದು. ಪುಂಗಿಯನ್ನು ಹಾವಾಡಿಗ ಆಡಿಸುವಾಗ
ಅದರಿಂದ ತಪ್ಪಿಸಿಕೊಳ್ಳಲು ಮಾತ್ರ ಹಾವು ತನ್ನ ತಲೆಯನ್ನು ಅತ್ತಿತ್ತ ಆಡಿಸುತ್ತದೆ. ಹಾವುಗಳು ನೆಲದ
ಮೂಲಕ ಸಾಗಿಬಂದ ಕಂಪನಗಳನ್ನು ಮಾತ್ರ ಗುರುತಿಸಬಲ್ಲವು. ಜೊತೆಗೆ ಅವು ತಮ್ಮ ಬೇಟೆಯನ್ನು ಕಗ್ಗತ್ತಲಿನಲ್ಲೂ
ಸಹ ಗುರುತಿಸಬಲ್ಲವು. ಇದು ಹೇಗೆ ಸಾಧ್ಯ ಎಂದು ವಿಜ್ಞಾನಿಗಳು ಬಹಳ ವರ್ಷ ತಲೆಕೆಡಿಸಿಕೊಂಡಿದ್ದರು.
ಅವುಗಳ ಸೀಳುನಾಲಿಗೆಯೇ ಇದಕ್ಕೆ ಸಹಕಾರಿ ಎಂದು ಆಮೇಲೆ ತಿಳಿದುಬಂದಿತು. ಸೀಳುನಾಲಿಗೆಯಿಂದ ಹಾವು ತನ್ನ
ಬಲಿಪ್ರಾಣಿಗಳ ವಾಸನೆಯನ್ನೂ ಹಿಡಿಯುತ್ತದೆ. ಅವುಗಳ ಸೀಳುನಾಳಿಗೆ ಕೇವಲ ವಾಸನೆಯನ್ನು ಹಿಡಿಯುವುದು
ಮಾತ್ರವಲ್ಲ, ಯಾವ ದಿಕ್ಕಿನಲ್ಲಿ ವಾಸನೆ ಪ್ರಬಲವಾಗುತ್ತಿದೆ ಎಂಬುದನ್ನು ಅರಿಯಲೂ ಸಹಕಾರಿಯಾಗಿದೆ.
ಅದರ ಸಹಾಯದಿಂದ ಬಲಿಪ್ರಾಣಿಯು ಸಾಗಿಹೋದ ದಿಕ್ಕಿನ ಜಾಡುಹಿಡಿದು ಅದನ್ನು ಬೆನ್ನಟ್ಟುವುದು ಹಾವಿಗೆ
ಸಾಧ್ಯ.
ಇದರ ಜೊತೆಗೆ ಹಾವಿನಲ್ಲಿ
ಇನ್ನೊಂದು ವಿಶೇಷ ಸಾಮರ್ಥ್ಯ ಕೆಲವು ವೈಪರ್ ಗಳಿಗೆ ಸಿದ್ಧಿಸಿದೆ. ಅವುಗಳ ಮುಖದಲ್ಲಿ ಒಂದು ಜೊತೆ ಚಿಕ್ಕ
ರಂಧ್ರಗಳಿರುತ್ತವೆ. ಈ ರಂಧ್ರಗಳು ವಾಸ್ತವವಾಗಿ ಅವುಗಳ ಆರನೆಯ ಇಂದ್ರಿಯಗಳೆಂದರೂ ತಪ್ಪಾಗಲಿಕ್ಕಿಲ್ಲ.
ಇವುಗಳ ಬಹುಮುಖ್ಯ ಕಾರ್ಯವೆಂದರೆ ಅವಗೆಂಪು (ಇನ್ ಫ್ರಾರೆಡ್) ಕಿರಣಗಳನ್ನು ಪತ್ತೆಹಚ್ಚುವುದು. ಈ ಕಿರಣಗಳನ್ನು
ಎಲ್ಲ ಸಜೀವವಸ್ತುಗಳೂ ಹೊರಸೂಸುತ್ತಿರುತ್ತವೆ. ಅವಗೆಂಪು ಕಿರಣಗಳನ್ನು ಶಾಖವಾಹಕ ಕಿರಣಗಳೆಂದೇ ಕರೆಯುತ್ತಾರೆ.
ಏಕೆಂದರೆ ಶಾಖವನ್ನು ಹೊರಸೂಸುವ ಎಲ್ಲ ವಸ್ತುಗಳೂ ಅವಗೆಂಪು ಕಿರಣಗಳನ್ನೂ ಹೊರಸೂಸುತ್ತಿರುತ್ತವೆ. ಸೂರ್ಯನ
ಮೂಲಕ ಭೂಮಿಗೆ ಶಾಖಪ್ರಸಾರವಾಗುವುದೂ ಇದೇ ಕಿರಣಗಳ ಮೂಲಕ. ಆದ್ದರಿಂದ ಸಮೀಪದಲ್ಲಿ ಯಾವುದೇ ಬಿಸಿರಕ್ತ
ಶರೀರದ ಪ್ರಾಣಿ ಓಡಾಡಿದರೆ ಅದರ ಮೈಯಿಂದ ಪ್ರಸಾರವಾಗುವ ಅವಗೆಂಪು ಕಿರಣಗಳನ್ನು ಗುರುತಿಸುವ ಮೂಲಕ ಹಾವುಗಳು
ಅದನ್ನು ಕಗ್ಗತ್ತಲಲ್ಲೂ ಸಹ ಸ್ಪಷ್ಟವಾಗಿ ಗುರುತಿಸಬಲ್ಲದು. ಕೆಲವು ಜಾತಿಯ ಪಿಟ್ ವೈಪರ್ ಗಳು ಮತ್ತು
ಬುಡುಬುಡಿಕೆ ಹಾವುಗಳು ಇದರಲ್ಲಿ ವಿಶೇಷವಾಗಿ ಹೆಸರಾಗಿರುವಂಥವು.
ನೀರಡಿಕೆ ಹಾವು (ಥರ್ಸ್ಟ್ ಸ್ನೇಕ್) ಎಂದೇ ಹೆಸರಾಗಿರುವ
ಹಾವೊಂದು ಉತ್ತರ ಮತ್ತು ದಕ್ಷಿಣ ಅಮೆರಿಕಾ ಖಂಡಗಳಲ್ಲಿ ವಾಸಿಸುವ ಈ ಹಾವಿನ ವಿಶೇಷತೆಯೆಂದರೆ ಅದು ಕೇವಲ
ಬಸವನಹುಳುಗಳನ್ನೇ ತಿಂದು ಬದುಕುತ್ತದೆ. ವಿಚಿತ್ರವೆನ್ನಿಸುವ ಈ ಆಹಾರಶೈಲಿಯಿಂದಾಗಿಯೇ ಈ ಹಾವು ಪ್ರಸಿದ್ಧವಾಗಿದೆ.
ಬಸವನಹುಳುವಿಗೆ ಬೇರೆಲ್ಲ ಜೀವಿಗಳಿಂದ ರಕ್ಷಣೆ ಕೊಡುವುದು ಅದರ ಮೈಯೆಲ್ಲ ತುಂಬಿರುವ ಜಿಗುಟಾದ ಲೋಳೆ.
ಆದರೆ ನೀರಡಿಕೆ ಹಾವಿಗೆ ಇದೇ ವರದಾನವಾಗಿದೆ. ಏಕೆಂದರೆ ಬಸವನಹುಳು ಚಲಿಸುವಾಗ ದಾರಿಯಲ್ಲಿ ಈ ಲೋಳೆಯ
ಮಾರ್ಗವೊಂದನ್ನು ಬಿಟ್ಟುಹೋಗುತ್ತದೆ. ಇದನ್ನೇ ಅನುಸರಿಸಿ ಹಾವು ಬಸವನಹುಳುವನ್ನು ಹಿಡಿಯುತ್ತದೆ.
ಹಾವುಗಳ ವಿಷಕ್ಕೆ
ಪ್ರತಿವಿಷವನ್ನು ತಯಾರಿಸುವುದು ಮತ್ತು ಶೇಖರಿಸಿಟ್ಟುಕೊಳ್ಳುವುದು ಆಸ್ಪತ್ರೆಗಳಲ್ಲಿ ತುಂಬಾ ಅವಶ್ಯಕವಾದ
ಒಂದು ಪ್ರಕ್ರಿಯೆ. ಏಕೆಂದರೆ ಯಾರಾದರೂ ಹಾವಿನ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಬೇಕೆಂದರೆ ಅದಕ್ಕೆ
ಆ್ಯಂಟಿವೆನಿನ್ ಅಥವಾ ಪ್ರತಿವಿಷದ ಚುಚ್ಚುಮದ್ದು ನೀಡಿದರೆ ಮಾತ್ರ ವ್ಯಕ್ತಿ ಬದುಕುಳಿಯುತ್ತಾನೆ. ಇದನ್ನು
ತಯಾರಿಸುವುದು ಸಹ ಒಂದು ಸಂಕೀರ್ಣವಾದ ಪ್ರಕ್ರಿಯೆ. ಮೊದಲಿಗೆ ಅತ್ಯಲ್ಪ ಪ್ರಮಾಣದಲ್ಲಿ ವಿಷವನ್ನು ಕುದುರೆಯ
ದೇಹಕ್ಕೆ ಚುಚ್ಚಲಾಗುತ್ತದೆ. ಇದನ್ನು ಬಹಳ ಜಾಗರೂಕತೆಯಿಂದ ಮಾಡಬೇಕು. ಏಕೆಂದರೆ ನೀಡುವ ವಿಷದ ಪ್ರಮಾಣ
ಸ್ವಲ್ಪ ಹೆಚ್ಚಾದರೂ ಕುದುರೆ ಸತ್ತೇಹೋಗುತ್ತದೆ. ಆದ್ದರಿಂದ ಇದನ್ನು ಮಾಡುವಾಗ ಮೈಯೆಲ್ಲ ಕಣ್ಣಾಗಿರಬೇಕಾದುದು
ಅಗತ್ಯ. ಹೀಗೆ ಅತ್ಯಲ್ಪ ಪ್ರಮಾಣದಲ್ಲಿ ನೀಡಿದ ವಿಷಕ್ಕೆ ದೇಹವು ಪ್ರತಿವಿಷವನ್ನು ತಯಾರಿಸುತ್ತದೆ.
ಕ್ರಮೇಣ ವಿಷದ ಪ್ರಮಾಣವನ್ನು ಹೆಚ್ಚಿಸುತ್ತ ಹೋಗಬೇಕು. ಅಂತಿಮವಾಗಿ ಹಾವು ಕಚ್ಚಿದರೂ ಏನೂ ಆಗದಂಥ ಪ್ರತಿರೋಧಕ
ಶಕ್ತಿ ಆ ಕುದುರೆಯಲ್ಲಿ ಬೆಳೆಯುತ್ತದೆ. ಆಮೇಲೆ ಅದರ ರಕ್ತದಿಂದ ಸೀರಮ್ ಅನ್ನು ಪ್ರತ್ಯೇಕಿಸಿ ಚುಚ್ಚುಮದ್ದನ್ನು
ತಯಾರಿಸುತ್ತಾರೆ.
ಪ್ರಕೃತಿಯ ಸಮತೋಲನವನ್ನು
ನಿರ್ವಹಿಸುವುದರಲ್ಲಿ ಹಾವುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬಹುಪಾಲು ಹಾವುಗಳ ಮುಖ್ಯ ಆಹಾರ
ಇಲಿಗಳಂಥ ದಂಶಕ ಪ್ರಾಣಿಗಳು. ಹಾಗಾಗಿ ಇಲಿಗಳ ಸಂಖ್ಯಾನಿಯಂತ್ರಣದಲ್ಲಿ ಹಾವುಗಳದ್ದು ಬಹಳ ಪ್ರಮುಖ ಪಾತ್ರ.
ಅಲ್ಲದೆ ಹೇರಳ ಜೀವಿಗಳಿಗೆ ಹಾವು ಆಹಾರವೂ ಹೌದು. ನವಿಲು, ಕೆಲವು ಜಾತಿಯ ಹದ್ದುಗಳು ಮುಂತಾದವು ಹಾವುಗಳನ್ನೇ
ಪ್ರಧಾನ ಆಹಾರವಾಗಿ ಸೇವಿಸುತ್ತವೆ. ಹಾಗಾಗಿ ಹಾವುಗಳ ಸಂತತಿ ನಾಶವಾದರೆ ಪ್ರಕೃತಿಯ ಆಹಾರ ಸರಪಳಿಯ ಒಂದು
ಕೊಂಡಿಯೇ ತುಂಡಾದಂತೆ. ಮನುಷ್ಯರ ಅಜ್ಞಾನ, ಮೂಢನಂಬಿಕೆ ಮತ್ತು ಸ್ವಾರ್ಥಕ್ಕೆ ಸಿಲುಕಿ ಈಗಾಗಲೇ ಅನೇಕ
ಜಾತಿಯ ಹಾವುಗಳು ಅಳಿದುಹೋಗಿವೆ, ಇನ್ನೂ ಅನೇಕ ಜಾತಿಗಳು ಅಳಿವಿನಂಚಿನಲ್ಲಿವೆ. ಹಾವುಗಳನ್ನು ಸಂರಕ್ಷಿಸುವ
ಮೂಲಕ ನಾವು ಅವುಗಳನ್ನು ಮಾತ್ರ ಸಂರಕ್ಷಿಸುವುದಿಲ್ಲ, ನಮ್ಮನ್ನು ನಾವೇ ಸಂರಕ್ಷಿಸಿಕೊಳ್ಳುತ್ತೇವೆ
ಎಂಬ ಸತ್ಯವನ್ನು ಎಲ್ಲರೂ ಅರಿಯುವ ಮೂಲಕ ಅವುಗಳ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ.
No comments:
Post a Comment