ಹುಲ್ಲಿನ ಮಹತ್ವ: ಬಲ್ಲಿರೇನು ಹುಲುಮಾನವರೇ?
ಹುಲ್ಲು ಎಂದರೆ ನಮಗೇನೋ
ಒಂದು ರೀತಿಯ ಅಸಡ್ಡೆ. ಅದು ದನಗಳಿಗೆ ತಿನ್ನಲು ಮಾತ್ರ ಯೋಗ್ಯವಾದ ವಸ್ತು ಎಂಬ ಭಾವನೆ ನಮ್ಮದು. “ಹುಟ್ಟಿಸಿದ
ದೇವರು ಹುಲ್ಲು ಮೇಯಿಸಲಾರ” ಎಂಬ ಗಾದೆಮಾತು ಕೂಡ ಪ್ರಚಲಿತದಲ್ಲಿದೆ. ನಮ್ಮ ಡುಂಡಿರಾಜರು ಅದನ್ನೇ ಆಧಾರವಾಗಿಟ್ಟುಕೊಂಡು
“ಹುಟ್ಟಿಸಿದ ದೇವರು ಮೇಯಿಸಲಾರ ಹುಲ್ಲು, ಅದಕ್ಕೊಂದು ಅಪವಾದ ಲಲ್ಲು” ಎಂದು ಲಾಲೂ ಪ್ರಸಾದ್ ಯಾದವ್
ರ ಮೇವು ಹಗರಣವನ್ನು ಗೇಲಿ ಮಾಡಿ ಸೊಗಸಾದ ಹನಿಗವನವನ್ನೂ ರಚಿಸಿದರು. ಆದರೆ ಒಟ್ಟಾರೆಯಾಗಿ ನಾವೆಲ್ಲ
ಹುಲ್ಲನ್ನು ಬಳಸಿಕೊಳ್ಳುತ್ತಿರುವ ರೀತಿ ನೋಡಿದರೆ ನಮಗೆ ಅದರ ಬಗ್ಗೆ ಒಳ್ಳೆಯ ಭಾವನೆಯಿಲ್ಲ ಎಂಬುದು
ತಿಳಿದುಬರುತ್ತದೆ. ಹಾಗಾದರೆ ಹುಲ್ಲು ಅಷ್ಟೊಂದು ನಿಕೃಷ್ಟವೇ? ನಮಗೆ ತಿನ್ನಲಾಗದ ಮಾತ್ರಕ್ಕೆ ಹುಲ್ಲನ್ನು
ನಾವು ತುಚ್ಛವಾಗಿ ಹೀಗಳೆಯುವುದು ಎಷ್ಟು ಸರಿ?
ಹುಲ್ಲುಗಳು ಪೋಯೇಸಿ
ಎಂಬ ಕುಟುಂಬಕ್ಕೆ ಸೇರಿದ ಸಸ್ಯಗಳು. ಹೂಬಿಡುವ ಸಸ್ಯಗಳಲ್ಲೇ ಪ್ರಮುಖವಾದ ಹುಲ್ಲುಗಳಲ್ಲಿ ಇದುವರೆಗೆ
ನಾವು ಗುರುತಿಸಿರುವ ಪ್ರಭೇದಗಳ ಸಂಖ್ಯೆಯೇ ಹನ್ನೆರಡು ಸಾವಿರ ದಾಟುತ್ತದೆ! ಹಾಗಾಗಿ ಹುಲ್ಲುಗಳ ಕುಟುಂಬ
ಧರೆಯಲ್ಲಿ ಸಸ್ಯಸಾಮ್ರಾಜ್ಯದ ಐದನೇ ಅತಿದೊಡ್ಡ ಕುಟುಂಬವೆಂದು ಹೆಸರಾಗಿದೆ. ಇಡೀ ಭೂಮಂಡಲದ ಶೇಕಡಾ ಇಪ್ಪತ್ತರಷ್ಟು
ಹಸಿರಿನ ಹೊದಿಕೆ ಹುಲ್ಲಿನಿಂದಲೇ ಆಗಿದೆಯೆಂಬುದು ಒಂದು ಅಂದಾಜು. ಆಫ್ರಿಕಾದ ಸವನ್ನಾ, ಯೂರೋಪಿನ ಸ್ಟೆಪ್ಪೀಸ್,
ದಕ್ಷಿಣ ಅಮೆರಿಕಾದ ಪಂಪಾಸ್, ಆಸ್ಟ್ರೇಲಿಯಾದ ಡೌನ್ಸ್, ಉತ್ತರ ಅಮೆರಿಕಾದ ಪ್ರೇರೀಸ್ ಹೀಗೆ ಬೇರೆಬೇರೆ
ಭೂಖಂಡಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲ್ಪಡುವ ಹುಲ್ಲುಬಯಲುಗಳು ಹೇರಳ ಪ್ರಭೇದದ ಕೀಟ, ಸಸ್ತನಿ,
ಪಕ್ಷಿ ಮತ್ತು ಉರಗ ಮೊದಲಾದ ಜೀವಿಗಳಿಗೆ ಆವಾಸಸ್ಥಾನವಾಗಿವೆ. ಬಹುಶಃ ಇಂದೇ ಧರೆಯಲ್ಲಿರುವ ಎಲ್ಲ ಪ್ರಭೇದದ
ಹುಲ್ಲುಗಳನ್ನು ಯಾವುದಾದರೂ ಯಕ್ಷಿಣಿಯಿಂದ ಕ್ಷಣಾರ್ಧದಲ್ಲಿ ನಾಶಮಾಡಿದರೆ ಜಗತ್ತಿನ ಜೀವಿಪ್ರಭೇದದ
ಬಹುದೊಡ್ಡ ಪಾಲು ಹಸಿವಿನಿಂದ ಸಾಯಬೇಕಾಗುತ್ತದೆ. ಬೇರೆ ಪ್ರಾಣಿಗಳು ಮಾತ್ರ ಯಾಕೆ, ನಾವೂ ಕೂಡ ಹಸಿವಿನಿಂದ
ಬಳಲಬೇಕಾಗುತ್ತದೆ. ಏಕೆಂದರೆ ನಮ್ಮ ಬಹುಮುಖ್ಯ ಆಹಾರಧಾನ್ಯಗಳಾದ ಭತ್ತ, ಗೋಧಿ, ಜೋಳ, ರಾಗಿ, ನವಣೆ,
ಮುಂತಾದವುಗಳೆಲ್ಲ ಹುಲ್ಲಿನ ಗಿಡಗಳೇ. ಹಾಗಾಗಿ ಹುಲ್ಲಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.
ಹುಲ್ಲುಗಳ ಒಂದು ಅಸಾಧಾರಣ
ಸಾಮರ್ಥ್ಯದಿಂದಾಗಿ ಅವು ಜಗತ್ತಿನಾದ್ಯಂತ ವಿಶಾಲವಾಗಿ ಹರಡಿವೆ ಮತ್ತು ಆಹಾರವಾಗಿ ಬಹುಮುಖ್ಯ ಪಾತ್ರ
ವಹಿಸುತ್ತಿವೆ. ಅವುಗಳ ಸಾಮರ್ಥ್ಯವೆಂದರೆ ಅಗಾಧವಾದ ಪುನರುಜ್ಜೀವನ ಸಾಮರ್ಥ್ಯ. ಬೇರೆ ಯಾವ ಸಸ್ಯಗಳಿಗೂ
ಇಷ್ಟು ಅದ್ಭುತವಾದ ಪುನರುಜ್ಜೀವನ ಸಾಮರ್ಥ್ಯವಿಲ್ಲ. ಬುಡದವರೆಗೆ ಕತ್ತರಿಸಿದ ಹುಲ್ಲು ಸಹ ಮತ್ತೆ ಒಂದೇ
ಒಂದು ಮಳೆ ಬಂದರೆ ಚಿಗುರುತ್ತದೆ. ಹುಲ್ಲುಗಾವಲುಗಳಲ್ಲಿ ಒಮ್ಮೊಮ್ಮೆ ಕಾಡ್ಗಿಚ್ಚಿನ ರುದ್ರನರ್ತನದಿಂದ
ಇಡೀ ಹುಲ್ಲುಗಾವಲೇ ಸುಟ್ಟು ಭಸ್ಮವಾದರೂ ಮತ್ತೆ ಚಿಗುರುವುದನ್ನು ಕಾಣಬಹುದು. ಆದರೆ ಬೇರೆ ಸಸ್ಯಗಳ
ಪುನರುತ್ಪಾದನಾ ಶಕ್ತಿ ಅಷ್ಟಿರುವುದಿಲ್ಲ. ಹಾಗಾಗಿ ಎಲೆ ಉದುರಿಸುವ ಕಾಡುಗಳಲ್ಲಿ ಬೇಸಿಗೆಯಲ್ಲಿ ಕಾಡ್ಗಿಚ್ಚು
ಕಾಣಿಸಿಕೊಂಡರೆ ಮತ್ತೆ ಕಾಡು ಮೊದಲಿನ ಸ್ಥಿತಿಗೆ ಬರಲು ಅನೇಕ ತಿಂಗಳುಗಳೇ ಹಿಡಿಯುತ್ತವೆ. ಆದರೆ ಹುಲ್ಲು
ಮಳೆ ಬಂದ ಒಂದೆರಡು ದಿನಗಳಲ್ಲೇ ಚಿಗುರಿ ನಳನಳಿಸುತ್ತದೆ.
ಹುಲ್ಲಿನ ಈ ಅಸಾಧಾರಣ
ಸಾಮರ್ಥ್ಯಕ್ಕೆ ಕಾರಣ ಅದರ ರಚನೆಯಲ್ಲೇ ಅಡಗಿದೆ. ಬೇರೆ ಸಸ್ಯಗಳಿಗೆ ಹೋಲಿಸಿದರೆ ಹುಲ್ಲುಗಳ ರಚನೆ ಬಹಳ
ಸರಳ. ಒಂದು ಸಿಲಿಂಡರಿನಾಕೃತಿಯ ಕಾಂಡ. ಅದರ ಎರಡು ಕಡೆಗಳಿಂದಲೂ ಹುಲ್ಲಿನ ಎಸಳುಗಳು ಉದ್ದಕ್ಕೆ ಬೆಳೆಯುತ್ತವೆ.
ಅವುಗಳ ಮುಖ್ಯ ಕಾಂಡ ಟೊಳ್ಳಾಗಿರುತ್ತದೆ. ಜೊತೆಗೆ ಅವಕ್ಕೆ ಬೇರೆ ಸಸ್ಯಗಳಿಗೆ ಹೋಲಿಸಿದರೆ ನೀರಿನ ಅಗತ್ಯವೂ
ಬಹಳ ಕಡಿಮೆ. ಹಾಗಾಗಿಯೇ ಅತಿಹೆಚ್ಚು ಮಳೆಬೀಳುವ ಪ್ರದೇಶಗಳು ವೃಷ್ಟಿವನಗಳಾದರೆ ಅದಕ್ಕಿಂತ ತುಸು ಕಡಿಮೆ
ಮಳೆಯ ಪ್ರದೇಶಗಳು ಎಲೆ ಉದುರಿಸುವ ಕಾಡುಗಳಾಗುತ್ತವೆ. ಇನ್ನೂ ಕಡಿಮೆ ಮಳೆಯ ಪ್ರದೇಶಗಳು ಹುಲ್ಲುಗಾವಲುಗಳಾಗುತ್ತವೆ.
ಮತ್ತೂ ಕಡಿಮೆ ಮಳೆಯ ಪ್ರದೇಶಗಳು ಮರುಭೂಮಿಗಳಾಗುತ್ತವೆ.
ಹುಲ್ಲುಗಳಲ್ಲಿ ಹನ್ನೆರಡು
ಸಾವಿರಕ್ಕೂ ಹೆಚ್ಚು ಪ್ರಭೇದಗಳಿವೆ ಎಂದು ತಿಳಿದೆವು. ಹಾಗಾದರೆ ಹುಲ್ಲುಗಳಲ್ಲಿ ಎಂಥೆಂಥ ವೈವಿಧ್ಯಗಳಿವೆ
ಎಂದು ನೋಡೋಣ. ಮೊಳಕಾಲೆತ್ತರ ಬೆಳೆಯುವ ಹುಲ್ಲುಗಿಡಗಳಿಂದ ಹಿಡಿದು ಗಗನಕ್ಕೇ ಏಣಿಯಿಟ್ಟಂತೆ ಬೆಳೆಯುವ
ಬಿದಿರು ಸಹ ಹುಲ್ಲುಗಿಡಗಳ ಕುಟುಂಬಕ್ಕೇ ಸೇರಿದವು. ಗಗನದೆತ್ತರಕ್ಕೆ ಬೆಳೆಯುವ ಬಿದಿರುಗಳ ಬೆಳವಣಿಗೆಯ
ವೇಗವಂತೂ ಊಹಿಸಲಸಾಧ್ಯ. ಕೆಲವು ಜಾತಿಯ ಬಿದಿರುಗಳು ದಿನಕ್ಕೆ ಮೂರು ಅಡಿ ಎತ್ತರ ಬೆಳೆಯುವುದೂ ಇದೆ.
ಒಂದು ಅಡಿ ಬೆಳೆಯುವ ಬಿದಿರಿನ ಜಾತಿಗಳಂತೂ ಸರ್ವೇಸಾಮಾನ್ಯ. ಹಿಂಡುಹಿಂಡಾಗಿ ಬೆಳೆಯುವ ಬಿದಿರುಮೆಳೆಗಳು
ಹೇರಳ ಪ್ರಾಣಿಪಕ್ಷಿಗಳಿಗೆ ಆಶ್ರಯವನ್ನೂ ನೀಡುತ್ತವೆ.
ಎಲಿಫೆಂಟ್ ಗ್ರಾಸ್
ಎಂಬ ಹುಲ್ಲಿನ ಜಾತಿಯೊಂದಿದೆ. ನಮ್ಮ ದೇಶದ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಈ ಹುಲ್ಲು ಎಲ್ಲೆಡೆ
ಹೇರಳವಾಗಿ ಬೆಳೆಯುತ್ತದೆ. ಇದಕ್ಕೆ ಈ ಹೆಸರು ಬರಲು ಕಾರಣ ಇದರ ಎತ್ತರ. ಇದು ನಿಜಕ್ಕೂ ಆನೆಯಷ್ಟೇ ಅಥವಾ
ಅದಕ್ಕಿಂತ ಎತ್ತರಕ್ಕೆ ಬೆಳೆಯುತ್ತದೆ. ಹಾಗಾಗಿ ಇವುಗಳ ನಡುವೆ ಆನೆಗಳಿದ್ದರೂ ನಮಗೆ ಕಾಣಿಸುವುದಿಲ್ಲ.
ಆದ್ದರಿಂದ ಈ ಹುಲ್ಲು ಅಲ್ಲಿ ವಾಸಿಸುವ ಘೇಂಡಾಮೃಗ ಮತ್ತಿತರ ಸಸ್ಯಾಹಾರಿಗಳಿಗೆ ಅತ್ಯುತ್ತಮ ಅಡಗುದಾಣವಾಗಿದೆ.
ಹಾಗಾದರೆ ಹುಲ್ಲು
ಯಾವೆಲ್ಲ ಪ್ರಾಣಿಗಳಿಗೆ ಆಹಾರ? ಇದಕ್ಕೆ ಉತ್ತರವಾಗಿ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆಫ್ರಿಕಾದ
ಸವನ್ನಾ ಹುಲ್ಲುಗಾವಲು ಜಗತ್ತಿನ ಅತಿ ವಿಸ್ತಾರವಾದ ಹುಲ್ಲುಬಯಲು. ಇಲ್ಲಿ ವಿಲ್ಡೆಬೀಸ್ಟ್, ಇಂಪಾಲಾ,
ಕುಡು, ಟೋಪಿ, ಜಿರಾಫ್, ಆನೆ, ಡಿಕ್ ಡಿಕ್, ಜೀಬ್ರಾ, ಕೇಪ್ ಬಫೆಲೋ ಹೀಗೆ ಹುಲ್ಲು ತಿಂದು ಬದುಕುವ
ಪ್ರಾಣಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಜೊತೆಗೆ ಈ ಪ್ರಾಣಿಗಳನ್ನು ಬೇಟೆಯಾಡಿ ಬದುಕುವ ಸಿಂಹ,
ಚಿರತೆ, ಚೀತಾ, ಕತ್ತೆಕಿರುಬ, ಆಫ್ರಿಕದ ಕಾಡುನಾಯಿ, ಮೊಸಳೆ ಮುಂತಾದ ಪ್ರಾಣಿಗಳು ಸಹ ಪರೋಕ್ಷವಾಗಿ
ಈ ಹುಲ್ಲನ್ನು ಅವಲಂಬಿಸಿವೆ. ಜೊತೆಗೆ ಜಿಲ್ಯಾಡ ಎಂಬ ಒಂದು ಪ್ರಭೇದದ ಮಂಗಗಳು ಇಡೀ ಪ್ರೈಮೇಟುಗಳ ಪಂಗಡದಲ್ಲೇ
ವಿಶಿಷ್ಟವಾದವು. ಏಕೆಂದರೆ ಅವು ಸಹ ಹುಲ್ಲು ತಿನ್ನುತ್ತವೆ. ಮಂಗಗಳ ಪೈಕಿ ಹುಲ್ಲು ತಿನ್ನುವ ಮಂಗಪ್ರಭೇದ
ಇದೊಂದೇ ಆಗಿದೆ.
ಈ ಪ್ರಾಣಿಗಳಲ್ಲದೆ
ನಾವು ಬೇರೆಬೇರೆ ದೇಶಗಳಲ್ಲಿ ಅಲ್ಲಿನ ಹುಲ್ಲಿನ ಪ್ರಭೇದಗಳಿಗೆ ಹೊಂದಿಕೊಂಡು ಬದುಕುವ ಬೇರೆಬೇರೆ ಸಸ್ಯಾಹಾರಿ
ಪ್ರಾಣಿಗಳನ್ನು ನೋಡುತ್ತೇವೆ. ನಮ್ಮ ದೇಶದಲ್ಲಿ ಆನೆ, ಕಾಟಿ, ಜಿಂಕೆ, ಕಡವೆ, ನೀಲ್ ಗಾಯ್, ಕೃಷ್ಣಮೃಗ,
ನೀಲಗಿರಿ ತಾರ್, ನಾಲ್ಕು ಕೊಂಬಿನ ಎರಳೆ, ಮೌಸ್ ಡೀರ್ ಹೀಗೆ ಹುಲ್ಲಿನ ಮೇಲೆ ಅವಲಂಬಿತವಾದ ಪ್ರಾಣಿಗಳ
ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಜೊತೆಗೆ ಇವುಗಳನ್ನೇ ತಿಂದು ಬದುಕುವ ಹುಲಿ, ಚಿರತೆ, ಕಾಡುನಾಯಿ
ಮತ್ತಿತರ ಮಾಂಸಾಹಾರಿಗಳೂ ಸಹ ನಮ್ಮ ಕಾಡುಗಳಲ್ಲಿರುವುದರಿಂದ ಹುಲ್ಲಿನ ಮಹತ್ವ ಮಾಂಸಾಹಾರಿಗಳವರೆಗೂ
ವ್ಯಾಪಿಸಿದೆ. ಬಿದಿರು ಆನೆಗಳಿಗೆ ಅತ್ಯಂತ ಪ್ರಿಯವಾದ ಆಹಾರವೆಂಬುದು ಎಲ್ಲರಿಗೂ ಗೊತ್ತು. ಕರ್ನಾಟಕದ
ನಾಗರಹೊಳೆ, ಬಂಡೀಪುರ ಇತ್ಯಾದಿ ಕಾಡುಗಳಲ್ಲಿ ಆನೆಗಳ ಬಹುಮುಖ್ಯ ಆಹಾರವೇ ಬಿದಿರು. ಚೀನಾದ ಜೈಂಟ್ ಪಾಂಡಾ
ವಾಸ್ತವವಾಗಿ ಮಾಂಸಾಹಾರಿ ಪಂಗಡದಲ್ಲಿ ಕರಡಿಗಳ ಕುಟುಂಬಕ್ಕೆ ಸೇರಿದ ಪ್ರಾಣಿಯಾದರೂ ಅದರ ಬಹುಮುಖ್ಯ
ಆಹಾರ ಬಿದಿರು! ಇದರ ಆಹಾರದ ಶೇಕಡಾ ತೊಂಬತ್ತೊಂಬತ್ತು ಭಾಗ ಬಿದಿರೇ ಇರುತ್ತದೆ. ಜೊತೆಗೆ ಚಿಕ್ಕಗಾತ್ರದ,
ಈ ಪಾಂಡಾದ ಸಂಬಂಧಿಯಲ್ಲದಿದ್ದರೂ ನೋಡಲು ಇದನ್ನು ಹೋಲುವುದರಿಂದ ಪಾಂಡಾ ಎಂಬ ನಾಮಧೇಯವನ್ನು ಹೊಂದಿರುವ
ರೆಡ್ ಪಾಂಡಾದ ಮುಖ್ಯ ಆಹಾರವೂ ಕೂಡ ಬಿದಿರೇ ಆಗಿದೆ.
ಹೀಗೆ ಹುಲ್ಲಿನ ಮೇಲೆ
ಅವಲಂಬಿತವಾಗಿರುವ ಪ್ರಾಣಿಗಳ ಸಂಖ್ಯೆ ದೊಡ್ಡದು ಎಂಬುದು ನಮಗೆ ಗೊತ್ತಾಯಿತು. ಹಾಗಾದರೆ ಹುಲ್ಲುಗಿಡಗಳೆಲ್ಲ
ಪ್ರಾಣಿಗಳು ತಮ್ಮನ್ನು ತಿಂದರೆ ತಿನ್ನಲೆಂದು ಸುಮ್ಮನಿರುತ್ತವೆಯೇ? ಇಲ್ಲ. ಯಾವುದೇ ಜೀವಿಯಾದರೂ ತನ್ನ
ಆತ್ಮರಕ್ಷಣೆಗೆ ಪ್ರಯತ್ನಿಸುವುದು ಪ್ರಕೃತಿಯ ಸಹಜ ನಿಯಮ. ಅದು ಪ್ರಾಣಿಗಳಿಗೆ ಮಾತ್ರ ಸೀಮಿತವಾದ ಗುಣ,
ಸಸ್ಯಗಳಿಗಲ್ಲ ಎಂದು ನಾವು ಭಾವಿಸಿದ್ದರೆ ಅದು ತಪ್ಪು. ಸಸ್ಯಗಳಿಗೆ ಕೂಡ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಬೇಕೆಂಬ
ಅರಿವಿದೆ. ಅದಕ್ಕೆ ಅವು ನಾನಾ ಉಪಾಯಗಳನ್ನು ಹೂಡುತ್ತವೆ. ತೀಕ್ಷ್ಣವಿಷಕಾರಿಯಾದ ಆಲ್ಕಲೈಡ್ ಗಳನ್ನು
ಎಲೆಗಳಲ್ಲಿ ಸಂಗ್ರಹಿಸುವುದು, ಕಾಂಡಗಳಲ್ಲಿ ಚೂಪಾದ ಮುಳ್ಳುಗಳನ್ನು ಧರಿಸುವುದು, ಎಲೆಗಳಲ್ಲಿ ಪ್ರಾಣಿಗಳ
ಚರ್ಮಕ್ಕೆ ಕಿರಿಕಿರಿಯಾಗುವಂಥ ವಸ್ತುಗಳನ್ನು ಹೊಂದಿರುವುದು ಇವೇ ಮುಂತಾದ ಕ್ರಮಗಳ ಮೂಲಕ ಸಸ್ಯಗಳು
ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತವೆ. ಹುಲ್ಲುಗಿಡಗಳು ಸಹ ಇದರಲ್ಲಿ ಹಿಂದೆ ಬಿದ್ದಿಲ್ಲ.
ನೀವೆಂದಾದರೂ ಹುಲ್ಲುಗಿಡಗಳನ್ನು ಸೂಕ್ಷ್ಮವಾಗಿ ನೋಡಿದ್ದರೆ ಅವುಗಳ ಎಸಳುಗಳು ಬದಿಯಲ್ಲಿ ಕತ್ತಿಯ ಅಲಗಿನಂತೆ
ಹರಿತವಾಗಿರುವುದನ್ನು ಕಾಣಬಹುದು. ಅಜಾಗರೂಕತೆಯಿಂದ ಅದನ್ನು ಯಾರಾದರೂ ಮುಟ್ಟಿದರೆ ಕ್ಷಣಾರ್ಧದಲ್ಲಿ
ಕೈಯನ್ನು ಸೀಳಿಕೊಂಡೇ ಹೋಗುತ್ತದೆ. ಅಷ್ಟೊಂದು ಅಪಾಯಕಾರಿಗಳವು. ಹಾಗಾದರೆ ಇಷ್ಟೊಂದು ರಕ್ಷಣಾಕ್ರಮಗಳನ್ನು
ಹುಲ್ಲುಗಳು ಹೊಂದಿದ್ದರೂ ಪ್ರಾಣಿಗಳು ಅವುಗಳನ್ನು ಹೇಗೆ ತಿನ್ನುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ.
ಇದು ಕೇವಲ ಪರಸ್ಪರ ಪೈಪೋಟಿ ಅಷ್ಟೆ. ಹುಲ್ಲುಗಳು ತಮ್ಮ ರಕ್ಷಣೆಗೆ ಕ್ರಮ ಕೈಗೊಂಡಂತೆಯೇ ಪ್ರಾಣಿಗಳು
ಸಹ ತಮ್ಮ ಹೊಟ್ಟೆ ಹೊರೆಯಲು ಮಾರ್ಪಾಡುಗಳನ್ನು ಹೊಂದಿರುತ್ತವೆ. ಜೇಡಿಮಣ್ಣನ್ನು ಸೇವಿಸುವ ಮೂಲಕ ಹುಲ್ಲಿನ
ಸಸ್ಯಗಳ ವಿಷವನ್ನು ತೊಡೆದುಹಾಕುವುದು, ಒರಟಾದ ನಾಲಿಗೆ ಮತ್ತು ತುಟಿಗಳ ಮೂಲಕ ಮುಳ್ಳನ್ನು ನಿವಾರಿಸುವುದು
ಇವೇ ಮೊದಲಾದ ತಂತ್ರಗಳನ್ನು ಪ್ರಾಣಿಗಳೂ ಅಳವಡಿಸಿಕೊಂಡಿವೆ.
ಹಾಗಾದರೆ ಮನುಷ್ಯರು
ಅಥವಾ ಬೇರೆ ಪ್ರಾಣಿಗಳೆಲ್ಲ ಹುಲ್ಲು ತಿನ್ನಬಲ್ಲವೇ? ಎಲ್ಲ ಪ್ರಾಣಿಗಳೂ ಹುಲ್ಲನ್ನು ತಿನ್ನಲಾರವು.
ಏಕೆಂದರೆ ಹುಲ್ಲಿನಲ್ಲಿರುವ ಸೆಲ್ಯುಲೋಸನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಎಲ್ಲ ಜೀವಿಗಳಲ್ಲಿ ಇಲ್ಲ.
ಕೆಲವು ಹುಲ್ಲನ್ನೇ ತಿನ್ನುವ ಪ್ರಾಣಿಗಳು ಅದಕ್ಕಾಗಿಯೇ ಜೀರ್ಣಾಂಗವ್ಯೂಹದಲ್ಲಿ ಮಾರ್ಪಾಡುಗಳನ್ನು ಹೊಂದಿವೆ.
ಉದಾಹರಣೆಗೆ ದನಗಳು ತಮ್ಮ ಜಠರದಲ್ಲಿ ನಾಲ್ಕು ಕೋಣೆಗಳನ್ನು ಹೊಂದಿವೆ. ಜೊತೆಗೆ ಅವುಗಳ ಜಠರದಲ್ಲಿರುವ
ವಿಶೇಷ ಬ್ಯಾಕ್ಟೀರಿಯಾವು ಈ ಸೆಲ್ಯುಲೋಸನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಹುಲ್ಲಿನಲ್ಲಿರುವ
ಸಿಲಿಕಾನ್ ಅಂಶವು ಹಲ್ಲುಗಳನ್ನು ಬೇಗಬೇಗನೆ ಸವೆಸುತ್ತದೆ. ಆದ್ದರಿಂದ ಈ ಪ್ರಾಣಿಗಳು ಮತ್ತೆಮತ್ತೆ
ಬೆಳೆಯುವಂಥ ವಿಶೇಷ ಹಲ್ಲುಗಳನ್ನು ಹೊಂದಿರುತ್ತವೆ.
ಹುಲ್ಲಿನ ಮಹತ್ವ ಇಷ್ಟೇ
ಅಲ್ಲ, ಅನೇಕ ಪಕ್ಷಿ ಮತ್ತು ಕೀಟಗಳು ಸಹ ಹುಲ್ಲನ್ನು ಆಶ್ರಯಿಸಿವೆ. ಪಕ್ಷಿಗಳು ಹುಲ್ಲನ್ನು ತಿನ್ನುವುದೆಂದರೆ
ನಂಬಲು ತುಸು ಕಷ್ಟವೆನ್ನಿಸಬಹುದು. ಆದರೆ ಹುಲ್ಲು ತಿನ್ನುವ ಪಕ್ಷಿಗಳು ಸಾಕಷ್ಟಿವೆ. ದಕ್ಷಿಣ ಅಮೆರಿಕಾದ
ಪಂಪಾಸ್ ಹುಲ್ಲುಗಾವಲಿನ ರಿಯಾ ಹಕ್ಕಿಗಳು ಇದರಲ್ಲಿ ಹೆಸರುವಾಸಿಯಾಗಿವೆ. ದಕ್ಷಿಣ ಅಮೆರಿಕಾದ ಆಸ್ಟ್ರಿಚ್
ಎಂದೇ ಹೆಸರಾಗಿರುವ ಈ ಹಕ್ಕಿಗಳು ಸಾಕಷ್ಟು ಪ್ರಮಾಣದಲ್ಲಿ ಹುಲ್ಲನ್ನು ತಿನ್ನುತ್ತವೆ. ಸುಮಾರು ಇಪ್ಪತ್ತೈದು
ಕಿಲೋ ತೂಕ ಮತ್ತು ನಾಲ್ಕು ಅಡಿಗಿಂತಲೂ ಹೆಚ್ಚು ಎತ್ತರವಿರುವ ಹಾರಲಾರದ ಹಕ್ಕಿಯಿದು. ಜೊತೆಗೆ ನ್ಯೂಜಿಲೆಂಡ್
ದ್ವೀಪಗಳಲ್ಲಿ ಟಕಾಹೆ ಎಂಬ ಹಕ್ಕಿಯೊಂದಿದೆ. ಹಾರಲಾರದ ಈ ಹಕ್ಕಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು
ತಿನ್ನುತ್ತದೆ. ಇದೇ ರೀತಿ ಕೆಲವು ಜಾತಿಯ ಬಾತುಗಳು ಸಹ ಹುಲ್ಲು ತಿನ್ನುತ್ತವೆ.
ಹುಲ್ಲು ತಿನ್ನುವ
ಹೆಚ್ಚಿನೆಲ್ಲ ಪ್ರಾಣಿಗಳ ಒಂದು ವಿಶೇಷ ಲಕ್ಷಣವೆಂದರೆ ಅವುಗಳದ್ದು ಭಾರವಾದ ಶರೀರ. ಇದಕ್ಕೆ ಕಾರಣವೆಂದರೆ
ಮೊದಲೇ ಹೇಳಿದಂತೆ ಹುಲ್ಲನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾದ್ದರಿಂದ ಅದಕ್ಕೆ ವಿಶೇಷವಾದ ಜೀರ್ಣಾಂಗವ್ಯವಸ್ಥೆ
ಬೇಕಾಗುತ್ತದೆ. ಆದ್ದರಿಂದ ಅಂಥ ವಿಶೇಷ ಜೀರ್ಣಾಂಗವನ್ನು ಹೊಂದಿದ ಜೀವಿಗಳು ಸಹಜವಾಗಿಯೇ ಹೆಚ್ಚು ಭಾರವಾದ
ಶರೀರವನ್ನು ಹೊಂದಿರುತ್ತವೆ. ಹಕ್ಕಿಗಳು ಸಹ ಹುಲ್ಲನ್ನು ತಿನ್ನುತ್ತಿದ್ದರೆ ಅವೂ ಕೂಡ ಇತರೆ ಹಕ್ಕಿಗಳಿಗೆ
ಹೋಲಿಸಿದರೆ ಭಾರವಾಗಿರುತ್ತವೆ. ಹಾರಲಾರದ ಹಕ್ಕಿಗಳಿಗೆ ಇದು ಅಂಥ ದೊಡ್ಡ ಸಮಸ್ಯೆಯಲ್ಲ. ಆದರೆ ಹಾರುವ
ಹಕ್ಕಿಗಳಿಗೆ ದೇಹ ಭಾರವಾದರೆ ಸಮಸ್ಯೆಗಳು ಆರಂಭವಾಗುತ್ತವೆ. ಆದ್ದರಿಂದ ಹಾರಾಡುವ ಹಕ್ಕಿಗಳಾದ ಬಾತುಗಳು
ಈ ಸಮಸ್ಯೆಯನ್ನು ನಿವಾರಿಸಲು ಒಂದು ಉಪಾಯವನ್ನು ಕಂಡುಕೊಂಡಿವೆ. ಅವು ತಾವು ತಿಂದ ಹುಲ್ಲಿನಲ್ಲಿ ಜೀರ್ಣವಾಗದ
ಭಾಗಗಳನ್ನು ಬಹಳ ಬೇಗನೆ ವಿಸರ್ಜಿಸತೊಡಗುತ್ತವೆ. ಅಂದರೆ ತಿನ್ನುತ್ತಿದ್ದಂತೆಯೇ ಸ್ವಲ್ಪ ಹೊತ್ತಿನಲ್ಲೇ
ಜೀರ್ಣವಾಗದ ಭಾಗಗಳನ್ನು ವಿಸರ್ಜಿಸತೊಡಗುತ್ತವೆ. ಇದರಿಂದ ಅವುಗಳ ದೇಹಭಾರ ಮಿತಿಮೀರಿ ಹೋಗದೆ ಹಾರಾಟಕ್ಕೆ
ಅನುಕೂಲವಾಗುತ್ತದೆ.
ಹುಲ್ಲು ತಿನ್ನುವುದನ್ನು
ಅಭ್ಯಾಸಮಾಡಿಕೊಂಡಿರುವ ಅನೇಕ ಕೀಟಗಳು ಸಹ ಅಸ್ತಿತ್ವದಲ್ಲಿವೆ. ಅದರಲ್ಲಿ ಬಹಳ ಮುಖ್ಯವಾದ ಕೀಟಗಳೆಂದರೆ
ಮಿಡತೆಗಳು. ಗ್ರಾಸ್ ಹಾಪರ್, ಲೋಕಸ್ಟ್ ಎಂದು ಬೇರೆಬೇರೆ ಹೆಸರುಗಳಿಂದ ಕರೆಯಲ್ಪಡುವ ಈ ಕೀಟಗಳು ಮನುಷ್ಯರ
ಪಾಲಿಗೆ ಅತಿದೊಡ್ಡ ಪಿಡುಗಿನ ಕೀಟಗಳು. ಈ ಕೀಟಗಳು ಸಹ ಹುಲ್ಲನ್ನು ತಿನ್ನುತ್ತವೆ. ಆದರೆ ಇವುಗಳ ರಾಕ್ಷಸ
ಹಸಿವಿಗೆ ಬೇರಾವ ಪ್ರಾಣಿಗಳೂ ಸಾಟಿಯಲ್ಲ. ಕೆಲವು ಲಕ್ಷ, ಕೋಟಿಗಳ ಸಂಖ್ಯೆಯಲ್ಲಿ ಒಮ್ಮೆಲೇ ಬಂದು ಬೆಳೆಯ
ಮೇಲೆರಗುವ ಈ ಜೀವಿಗಳು ಕ್ಷಣಾರ್ಧದಲ್ಲಿ ಎಕರೆಗಟ್ಟಲೆ ಹಸಿರನ್ನು ನಿರ್ನಾಮ ಮಾಡಬಲ್ಲವು. ಇತಿಹಾಸದಲ್ಲಿ
ಮಿಡತೆಗಳ ಹಾವಳಿಗೆ ತುತ್ತಾಗಿ ಅನೇಕ ದೇಶಗಳು ಭೀಕರ ಕ್ಷಾಮಕ್ಕೆ ತುತ್ತಾಗಿರುವ ಉದಾಹರಣೆಗಳಿವೆ. ಒಮ್ಮೊಮ್ಮೆ
ಇವು ಆಗಸದಲ್ಲಿ ಹಾರತೊಡಗಿದರೆ ಇಡೀ ಊರಿಗೆ ಮೋಡ ಕವಿದಂತಾಗುತ್ತದೆ.
ಕೀಟಗಳ ಲಾರ್ವಾಗಳು
ಸಹ ಹುಲ್ಲು ತಿನ್ನುತ್ತವೆ. ಅನೇಕ ಜಾತಿಯ ಚಿಟ್ಟೆ ಮತ್ತು ಪತಂಗಗಳ ಲಾರ್ವಾಗಳು ಹುಲ್ಲುತಿಂದು ಬೆಳೆಯುತ್ತವೆ.
ಹುಲ್ಲು ಬಹಳ ಬೇಗ ಪುನರುತ್ಪತ್ತಿ ಹೊಂದುವ ಸಾಮರ್ಥ್ಯ ಹೊಂದಿರುವುದರಿಂದ ಬೇರೆ ಸಸ್ಯಗಳಂತೆ ಅವಕ್ಕೆ
ಭಾರೀ ಹಾನಿಯೇನೂ ಆಗುವುದಿಲ್ಲ. ಕೆಲವಾರು ಚಿಟ್ಟೆ, ಪತಂಗಗಳ ಲಾರ್ವಾಗಳು ಕೆಲವು ವಿಶೇಷ ಜಾತಿಯ ಹುಲ್ಲುಗಳ
ಮೇಲೆಯೇ ಅವಲಂಬಿತವಾಗಿರುತ್ತವೆ.
ಹುಲ್ಲುಗಿಡಗಳ ಪ್ರಯೋಜನ
ಮನುಷ್ಯರಿಗೆ ಇನ್ನೂ ಇವೆ. ವಾಣಿಜ್ಯ ಬೆಳೆಯಾಗಿ ಅನೇಕ ಹುಲ್ಲುಗಳನ್ನು ಬೆಳೆಯಲಾಗುತ್ತದೆ. ನಾವು ಸಕ್ಕರೆ,
ಬೆಲ್ಲ ಮುಂತಾದವುಗಳನ್ನು ತಯಾರಿಸಲು ಉಪಯೋಗಿಸುವ ಕಬ್ಬು ಸಹ ಒಂದು ಬಗೆಯ ಹುಲ್ಲು. ಜೊತೆಗೆ ಬಿದಿರಿನ
ಉಪಯೋಗಗಳನ್ನು ಎಲ್ಲರೂ ಬಲ್ಲರು. ಬಿದಿರನ್ನು ಮನೆ ಕಟ್ಟಲು, ಬುಟ್ಟಿಗಳನ್ನು ತಯಾರಿಸಲು, ಪೀಠೋಪಕರಣಗಳನ್ನು
ತಯಾರಿಸಲು, ಅಲಂಕಾರಿಕ ವಸ್ತುಗಳನ್ನು ತಯಾರಿಸಲು, ಕೊಳಲು ಮುಂತಾದ ಸಂಗೀತವಾದ್ಯಗಳನ್ನು ತಯಾರಿಸಲು
ಹೀಗೆ ಬೇರೆಬೇರೆ ಕಾರಣಗಳಿಗೆ ಉಪಯೋಗಿಸುತ್ತಾರೆ. ಎಳೆಯ ಬಿದಿರನ್ನು ಅಡಿಗೆ ಮಾಡಲು ಉಪಯೋಗಿಸುತ್ತಾರೆ.
ಬಿದಿರಕ್ಕಿಯನ್ನು ಸಹ ಅನ್ನ ಮಾಡಲು ಬಳಸುತ್ತಾರೆ. ಜೊತೆಗೆ ಕಾಗದದ ತಯಾರಿಕೆಯಲ್ಲಿ ಬಿದಿರು ಬಹುಮುಖ್ಯವಾದ
ಕಚ್ಚಾವಸ್ತು.
ಹುಲ್ಲುಗಳಲ್ಲಿ ಪರಾಗಸ್ಪರ್ಶ
ಕ್ರಿಯೆ ಸಾಮಾನ್ಯವಾಗಿ ಗಾಳಿಯಿಂದಲೇ ಆಗುತ್ತದೆ. ಜೊತೆಗೆ ಒಮ್ಮೊಮ್ಮೆ ಕೀಟಗಳಿಂದ ಆಗುವುದೂ ಇದೆಯಾದರೂ
ಪ್ರಧಾನವಾಗಿ ಗಾಳಿಯಿಂದಲೇ ಆಗುವುದು. ಹುಲ್ಲಿನ ಬೀಜಗಳು ಬಹುವೇಳೆ ತುಂಬಾ ಸೂಕ್ಷ್ಮವಾಗಿರುತ್ತವೆ.
ಅವು ಪ್ರಸಾರಕ್ಕಾಗಿ ವಿವಿಧ ಮಾಧ್ಯಮಗಳನ್ನು ಅವಲಂಬಿಸಿರುತ್ತವೆ. ಕೆಲವು ಗಾಳಿಯಿಂದ ಪ್ರಸಾರ ಹೊಂದಿದರೆ
ಇನ್ನು ಕೆಲವು ಪ್ರಾಣಿಗಳಿಂದ ಪ್ರಸಾರ ಹೊಂದುತ್ತವೆ. ಪ್ರಾಣಿಗಳಿಂದ ಪ್ರಸಾರ ಹೊಂದುವ ಬೀಜಗಳು ಪ್ರಾಣಿಗಳ
ಮೈಗೆ ಅಂಟಿಕೊಳ್ಳುವಂಥ ರಚನೆಗಳನ್ನು ಹೊಂದಿರುತ್ತವೆ. ಆ ಪ್ರಾಣಿ ಬೇರೊಂದು ಕಡೆಗೆ ಹೋದಾಗ ಅಲ್ಲಿಗೆ
ಬೀಜ ಪ್ರಸಾರವಾಗುತ್ತದೆ.
ಮನುಷ್ಯರು ಹುಲ್ಲನ್ನು
ಆಹಾರಕ್ಕಾಗಿ ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಉಪಯೋಗಿಸುತ್ತಾರೆ. ನಾವು ಆಡುವ ಅನೇಕ ಕ್ರೀಡೆಗಳಲ್ಲಿ
ಕ್ರೀಡಾಂಗಣದಲ್ಲಿ ಹುಲ್ಲು ಇರಲೇಬೇಕು. ಕ್ರಿಕೆಟ್, ಫುಟ್ ಬಾಲ್, ಹಾಕಿ, ಗಾಲ್ಫ್, ಟೆನ್ನಿಸ್ ಮುಂತಾದ
ಕ್ರೀಡೆಗಳಲ್ಲಿ ಹುಲ್ಲು ಕ್ರೀಡಾಂಗಣದ ಒಂದು ಅವಿಭಾಜ್ಯ ಅಂಗವೇ ಆಗಿದೆ. ಟೆನಿಸ್ ನಲ್ಲಂತೂ ಹುಲ್ಲಿನಂಕಣದಲ್ಲೇ
ಆಡುವುದಕ್ಕೆ ಪ್ರಸಿದ್ಧವಾದ ವಿಂಬಲ್ಡನ್ ಎಲ್ಲರಿಗೂ ಗೊತ್ತೇ ಇದೆ. ಟೆನಿಸ್ ರ್ಯಾಕೆಟ್ ಹಿಡಿದ ಪ್ರತಿಯೊಬ್ಬ
ಆಟಗಾರನೂ ಜೀವನದಲ್ಲಿ ಬೇರೇನನ್ನೂ ಗೆಲ್ಲಲಾಗದಿದ್ದರೂ ವಿಂಬಲ್ಡನ್ ಟ್ರೋಫಿಯನ್ನು ಒಮ್ಮೆಯಾದರೂ ಗೆಲ್ಲಲೇಬೇಕೆಂಬ
ಕನಸು ಕಂಡಿರುತ್ತಾನೆ. ಬೇರೆಲ್ಲ ಪ್ರಶಸ್ತಿಗಳನ್ನೂ ಗೆದ್ದು, ವಿಂಬಲ್ಡನ್ ಟ್ರೋಫಿಯನ್ನು ಮಾತ್ರ ಒಮ್ಮೆಯೂ
ಗೆಲ್ಲಲಾಗದೆ ಹತಾಶೆಯಿಂದ “ವಿಂಬಲ್ಡನ್ ನಲ್ಲಿ ಹುಲ್ಲಿರುವುದು ದನಗಳಿಗೆ ತಿನ್ನಲಿಕ್ಕಾಗಿ” ಎಂದು ಆಕ್ರೋಶ
ವ್ಯಕ್ತಪಡಿಸಿದ ಇವಾನ್ ಲೆಂಡ್ಲ್ ವಿಂಬಲ್ಡನ್ನಿನ ಮಹತ್ವಕ್ಕೆ ಸಾಕ್ಷಿಯಾಗಿದ್ದಾರೆ.
ಹುಲ್ಲು ಒಂದು ಅಲಂಕಾರಿಕ
ಸಸ್ಯವಾಗಿಯೂ ಎಲ್ಲೆಡೆ ಪ್ರಸಿದ್ಧವಾಗಿದೆ. ದೊಡ್ಡದೊಡ್ಡ ಕಟ್ಟಡಗಳಲ್ಲಿ, ಭಾರೀ ಬಂಗಲೆಗಳಲ್ಲಿ ಎದುರಿಗೆ
ಹುಲ್ಲಿನ ಹಾಸನ್ನು ಮಾಡಿರುತ್ತಾರೆ. ಇದನ್ನು ಬಹಳ ಜೋಪಾನವಾಗಿ ಕಾಯ್ದುಕೊಳ್ಳುವುದು ಅಗತ್ಯ. ಹುಲ್ಲುಹಾಸಿನಲ್ಲಿ
ಹುಲ್ಲು ಬಹಳ ಎತ್ತರವಾಗಿ ಬೆಳೆಯಲು ಬಿಡುವುದಿಲ್ಲ. ಗಿಡ್ಡವಾಗಿ ಕತ್ತರಿಸಿ ಅದನ್ನು ಪ್ರಾಣಿ, ಕೀಟ
ಇತ್ಯಾದಿಗಳಿಂದ ರಕ್ಷಿಸಿ ಹಾಸನ್ನು ಒಂದೇ ಅಳತೆಗೆ ಬೆಳೆಸಲಾಗುತ್ತದೆ. ಉದ್ಯಾನವನಗಳಲ್ಲಿ ಹುಲ್ಲುಹಾಸಿಲ್ಲದಿದ್ದರೆ
ಏನೋ ಅಪೂರ್ಣವೆನ್ನಿಸುತ್ತದೆ. ಇಂದಿನ ದಿನಗಳಲ್ಲಂತೂ ಹುಲ್ಲುಹಾಸಿಲ್ಲದ ಉದ್ಯಾನಗಳೇ ಇಲ್ಲವೆಂದರೆ ತಪ್ಪಾಗಲಾರದು.
ಹುಲ್ಲು ನಮ್ಮಲ್ಲಿ
ಪೂಜನೀಯ ಸ್ಥಾನವನ್ನೂ ಪಡೆದಿದೆ. ಜೊತೆಗೆ ಹುಲ್ಲಿನಲ್ಲಿ ಔಷಧೀಯ ಗುಣಗಳು ಸಹ ಹೇರಳವಾಗಿವೆ. ಗಣಪತಿಗೆ
ಗರಿಕೆಹುಲ್ಲು ಬಹಳ ಪ್ರಿಯವಾದದ್ದೆಂಬ ನಂಬಿಕೆ ಹಿಂದೂಗಳಲ್ಲಿದೆ. ದೂರ್ವೆ ಎಂದೂ ಕರೆಯಲಾಗುವ ಈ ಗರಿಕೆಹುಲ್ಲು
ಗಣಪತಿಯನ್ನು ಪೂಜಿಸಲು ಅಗತ್ಯವಾಗಿ ಬೇಕು. ಜೊತೆಗೆ ದರ್ಭೆ ಎಂದು ಕರೆಯಲಾಗುವ ಇನ್ನೊಂದು ಜಾತಿಯ ಹುಲ್ಲು
ಸಹ ನಮ್ಮ ಅನೇಕ ಪೂಜಾಕಾರ್ಯಗಳಲ್ಲಿ ಪ್ರಮುಖವಾಗಿ ಬಳಕೆಯಾಗುತ್ತದೆ. ಇನ್ನು ಔಷಧೀಯ ಗುಣಗಳ ಬಗ್ಗೆ ಹೇಳುವುದಾದರೆ
ಬೆಕ್ಕು, ನಾಯಿಗಳು ಅನೇಕ ಬಾರಿ ಹುಲ್ಲು ತಿನ್ನುವುದನ್ನು ನೀವು ನೋಡಿರಬಹುದು. ಅವು ಹುಲ್ಲು ಮಾಂಸಾಹಾರ
ಬೇಸರಬಂದು ಹುಲ್ಲು ತಿನ್ನುತ್ತಿವೆ ಅಥವಾ ಆಹಾರದ ಅಭಾವದಿಂದ ಹುಲ್ಲು ತಿನ್ನುತ್ತಿವೆಯೆಂದು ಭಾವಿಸಬೇಡಿ.
ಅವು ಹುಲ್ಲು ತಿನ್ನುವುದು ಔಷಧಕ್ಕಾಗಿ. ಹೊಟ್ಟೆನೋವು, ಅಜೀರ್ಣದಂಥ ಸಮಸ್ಯೆಗಳಿಗೆ ಅನೇಕ ಜಾತಿಯ ಹುಲ್ಲುಗಳು
ರಾಮಬಾಣ. ಅದನ್ನು ಬೆಕ್ಕು, ನಾಯಿಗಳು ನಮಗಿಂತ ಚೆನ್ನಾಗಿ ತಿಳಿದಿವೆ! ಜೊತೆಗೆ ಗೋಧಿ ಹುಲ್ಲಿನ ರಸದ
ಸೇವನೆ ಮನುಷ್ಯರಲ್ಲೂ ರೂಢಿಯಿದೆ. ಬೇಸಿಗೆಯ ದಿನಗಳಲ್ಲಿ ಇದನ್ನೊಂದು ತಂಪು ಪಾನೀಯವಾಗಿ ಸೇವಿಸುತ್ತಾರೆ.
ಲಾವಂಚದ ಹೆಸರನ್ನು
ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಲಾವಂಚ ಕೂಡ ಒಂದು ಜಾತಿಯ ಹುಲ್ಲು. ತನ್ನ ವಿಶಿಷ್ಟವಾದ ಸುಗಂಧದಿಂದಾಗಿ
ಲಾವಂಚ ಎಲ್ಲೆಡೆ ಪ್ರಸಿದ್ಧವಾಗಿದೆ. ಇದರ ಬೇರುಗಳು ಅನೇಕ ಕರಕುಶಲ ವಸ್ತುಗಳ ತಯಾರಿಕೆಗೆ ಕಚ್ಚಾವಸ್ತುವಾಗಿದೆ.
ಜೊತೆಗೆ ನೀರನ್ನು ಬಹಳಕಾಲ ಒಂದೆಡೆ ಸಂಗ್ರಹಿಸಿಟ್ಟರೆ ಅದರಲ್ಲಿ ಪಾಚಿ ಮತ್ತಿತರ ಸಸ್ಯಗಳು, ಬ್ಯಾಕ್ಟೀರಿಯಾ
ಇತ್ಯಾದಿಗಳೆಲ್ಲ ವೃದ್ಧಿಯಾಗಿ ನೀರಿಗೆ ಒಂದು ಅಸಹನೀಯ ವಾಸನೆಯನ್ನುಂಟುಮಾಡುತ್ತದೆ. ಆದರೆ ಲಾವಂಚದ
ಬೇರುಗಳನ್ನು ನೀರಿನಲ್ಲಿಟ್ಟರೆ ಆ ವಾಸನೆ ಉಂಟಾಗದಂತೆ ತಡೆಯುತ್ತವೆ. ಜೊತೆಗೆ ಲಾವಂಚವು ಅನೇಕ ಪ್ರಾಣಿಗಳಿಗೆ
ಆಹಾರವಾಗಿಯೂ ಬಳಕೆಯಲ್ಲಿದೆ. ಸಾಕುಪ್ರಾಣಿಗಳಾದ ಜಾನುವಾರುಗಳು ಲಾವಂಚದ ಹುಲ್ಲನ್ನು ತಿನ್ನುತ್ತವೆ.
ಏಷ್ಯಾ ಮತ್ತು ಆಫ್ರಿಕಾದ ಅನೇಕ ಕಡೆಗಳಲ್ಲಿ ಲಾವಂಚವನ್ನು ಔಷಧಗಳಲ್ಲಿ ಸಹ ಉಪಯೋಗಿಸುತ್ತಾರೆ.
ಅನೇಕ ಜಾತಿಯ ಹುಲ್ಲುಗಳನ್ನು
ಪೊರಕೆಯನ್ನಾಗಿಯೂ ಬಳಸುತ್ತಾರೆ. ಗದ್ದೆಯ ಬದಿಯಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಹಿಟ್ಟಂಡೆ ಎಂಬ
ಹೆಸರಿನ ಹುಲ್ಲನ್ನು ಮೊದಲು ಚಿಕ್ಕ, ಚೊಕ್ಕ ಕಸಪೊರಕೆಗಳನ್ನು ತಯಾರಿಸಲು ಬಳಸುತ್ತಿದ್ದರು. ಆದರೆ ಇಂದಿನ
ದಿನಗಳಲ್ಲು ಕಳೆನಾಶಕಗಳ ವಿಪರೀತ ಬಳಕೆಯಿಂದ ಈ ಹುಲ್ಲು ಎಲ್ಲಿಯೂ ಕಾಣದಾಗಿದೆ. ಹಾಗಾಗಿ ಇಂದು ಕಸಪೊರಕೆಗಳೂ
ಸಹ ಇತಿಹಾಸ ಸೇರಿವೆ. ಕೇವಲ ಪೊರಕೆಗಳಷ್ಟೇ ಅಲ್ಲ, ಇದೇ ರೀತಿ ಇನ್ನೂ ಅನೇಕ ಕರಕುಶಲ ವಸ್ತುಗಳು ಇತಿಹಾಸದ
ಪುಟಗಳಲ್ಲಿ ಸೇರಿಹೋಗಿವೆ.
ಹುಲ್ಲುಗಳ ಮಹತ್ವ
ಇಷ್ಟಕ್ಕೇ ಕೊನೆಗೊಳ್ಳುವುದಿಲ್ಲ. ಪ್ರಕೃತಿಯಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಸೊಂಪಾಗಿ ಬೆಳೆಯುವ ಹುಲ್ಲು
ಅಂಥ ಪ್ರದೇಶಗಳಲ್ಲಿ ಮಣ್ಣಿನ ಸವಕಳಿಯನ್ನು ತಡೆಯುವ ಕೆಲಸ ಮಾಡುತ್ತದೆ. ಮಣ್ಣಿನ ಸವಕಳಿಯನ್ನು ಹುಲ್ಲು
ಎರಡು ರೀತಿಯಲ್ಲಿ ತಡೆಯುತ್ತದೆ. ಒಂದು ಜೋರಾಗಿ ಬೀಳುವ ಮಳೆಯ ರಭಸವನ್ನು ಕಡಿಮೆಮಾಡಿ, ನೆಲಕ್ಕೆ ನೇರವಾಗಿ
ರಭಸದಿಂದ ನೀರು ಬೀಳದಂತೆ ತಡೆಯುವುದು, ಇನ್ನೊಂದು ಬೇರುಗಳ ಮೂಲಕ ಮಣ್ಣನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವ
ಮೂಲಕ ನೀರಿನ ಹರಿವಿಗೆ ತಡೆಯೊಡ್ಡುವುದು. ಅದರಿಂದಾಗಿ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
ಆದ್ದರಿಂದ ಹುಲ್ಲನ್ನು
ನಿಕೃಷ್ಟವಾಗಿ ಕಾಣಬೇಡಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿದ್ದರೂ, ಹುಲ್ಲು ಮೇಯುವ ಅಗತ್ಯ ನಮಗಿಲ್ಲದಿದ್ದರೂ
ಹುಲ್ಲಿನ ಗಿಡಗಳ ಮೇಲೆ ನಾವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವಲಂಬಿತರಾಗಿಯೇ ಇರುತ್ತೇವೆ. ಹುಲ್ಲಿಲ್ಲದೆ
ಜಗತ್ತು ಮುಂದುವರೆಯುವುದೇ ಇಲ್ಲವೆಂದರೆ ತಪ್ಪಾಗಲಾರದು. ದೇವರ ಮಹಿಮೆಯನ್ನು ವರ್ಣಿಸುವಾಗ “ಅವನಿಲ್ಲದೆ
ಒಂದು ಹುಲ್ಲುಕಡ್ಡಿಯೂ ಅಲುಗಾಡಲಾರದು” ಎನ್ನುತ್ತಾರೆ. ಹುಲ್ಲುಕಡ್ಡಿ ಅಲುಗುತ್ತದೋ ಇಲ್ಲವೋ, ಆದರೆ
ಹುಲ್ಲುಕಡ್ಡಿಯಿಲ್ಲದಿದ್ದರೆ ಇಡೀ ಭೂಮಿಯ ಬಹುಪಾಲು ಜೀವಿಗಳು ಅಲುಗಾಡಲಾರವು ಎಂಬುದು ಮಾತ್ರ ನಿಜ!
No comments:
Post a Comment