ಬರ್ಡ್ಸ್
ಆಫ್ ಪ್ಯಾರಡೈಸ್: ಸ್ವರ್ಗದಿಂದ ಧರೆಗಿಳಿದು ಬಂದ ಅನುಪಮ ಸೌಂದರ್ಯದ ಹಕ್ಕಿಗಳು
ಸ್ವರ್ಗ ಎಂಬುದು ಎಂಥ
ಮನುಷ್ಯನಿಗಾದರೂ ಮೋಡಿ ಮಾಡುವ ಪದ. ಇದುವರೆಗೂ ಸ್ವರ್ಗವನ್ನು ಕಂಡವರಾರೂ ಇಲ್ಲವಾದರೂ ಮನುಷ್ಯರು ಅವರವರ
ಕಲ್ಪನೆಗೆ ತಕ್ಕಂತೆ ಸ್ವರ್ಗವನ್ನು ಊಹಿಸಿಕೊಂಡಿರುತ್ತಾರೆ. ಹೆಚ್ಚಿನ ಮನುಷ್ಯರ ಕಲ್ಪನೆಯಲ್ಲಿ ಸ್ವರ್ಗವೆಂದರೆ
ದೇವಾನುದೇವತೆಗಳ, ಅಪ್ಸರ ಸ್ತ್ರೀಯರಿಂದ ಕೂಡಿದ ಕಿನ್ನರ ಲೋಕ. ಹಾಗಾದರೆ ಅಂಥದೊಂದು ಕಿನ್ನರ ಲೋಕದಿಂದ
ಜೀವಿಗಳು ಧರೆಗಿಳಿದು ಬಂದರೆ ಹೇಗಿರುತ್ತದೆ? ಅಂಥ ಜೀವಿಗಳನ್ನು ಕಾಣಬೇಕೆಂದರೆ ನೀವು ಪಪುವಾ ನ್ಯೂಗಿನಿ
ದ್ವೀಪಕ್ಕೆ ಹೋಗಬೇಕು.
ಪಪುವಾ ನ್ಯೂಗಿನಿ
ಒಂದು ಚಿಕ್ಕ, ಆದರೆ ಅಷ್ಟೇ ಸುಂದರವಾದ ದ್ವೀಪ. ಸದಾ ಮಳೆ ಸುರಿಯುತ್ತಿರುವ ಮಳೆಕಾಡುಗಳಿಂದ ಆವೃತವಾದ
ಈ ದ್ವೀಪಗಳು ಅಪರೂಪದ ಪ್ರಾಣಿಪಕ್ಷಿಗಳಿಗೆ ಪ್ರಶಸ್ತವಾದ ದ್ವೀಪ. ಮನುಷ್ಯರು ಕಂಡುಕೇಳರಿಯದಂಥ ಎಷ್ಟೋ
ಅಪರೂಪದ ಪ್ರಾಣಿಪಕ್ಷಿಗಳಿಗೆ ಆವಾಸಸ್ಥಾನವಾದ ಈ ದ್ವೀಪಗಳು ಜಗತ್ತಿನ ಭೂಪಟದಲ್ಲಿ ಸುಪ್ರಸಿದ್ಧವಾಗಲು
ಕಾರಣ ಸ್ವರ್ಗದ ಹಕ್ಕಿಗಳು (ಬರ್ಡ್ಸ್ ಆಫ್ ಪ್ಯಾರಡೈಸ್). ಪ್ಯಾರಡೈಸಿಡೇ ಕುಟುಂಬಕ್ಕೆ ಸೇರಿದ ನಲವತ್ತು
ಜಾತಿಯ ಹಕ್ಕಿಗಳಿಗೆ ಅವುಗಳ ಅನುಪಮ ಸೌಂದರ್ಯವನ್ನು ಕಂಡು ಮನಸೋತು ಮನುಷ್ಯರು ನೀಡಿದ ಹೆಸರಿದು. ಅವುಗಳನ್ನು
ನೋಡಿದ ಯಾರಿಗಾದರೂ ಆ ಹೆಸರು ಸ್ವಲ್ಪವೂ ಉತ್ಪ್ರೇಕ್ಷೆಯದಲ್ಲ ಎನ್ನಿಸುತ್ತದೆ. ಪಕ್ಷಿಲೋಕವೇ ಸೌಂದರ್ಯದ
ನೆಲೆವೀಡೇ ಆದರೂ ಅದರಲ್ಲೂ ಸ್ವರ್ಗದ ಹಕ್ಕಿಗಳು ಬೇರೆಲ್ಲ ಹಕ್ಕಿಗಳಿಗಿಂತ ಒಂದು ಹೆಜ್ಜೆ ಮುಂದಿವೆ
ಎಂದರೆ ತಪ್ಪಾಗಲಾರದು.
ಇಂಡೋನೇಷಿಯಾದ ಕೆಲವು
ದ್ವೀಪಗಳಲ್ಲೂ ಸಹ ಈ ಹಕ್ಕಿಗಳಿವೆ. ಆದರೆ ಸ್ವರ್ಗದ ಹಕ್ಕಿಗಳೆಂದರೆ ಮೊದಲು ನೆನಪಾಗುವುದೇ ಪಪುವಾ ನ್ಯೂಗಿನಿ
ದ್ವೀಪ. ನಿಮಗೆ ಆಶ್ಚರ್ಯವಾಗಬಹುದು, ಈ ಸ್ವರ್ಗದ ಹಕ್ಕಿಗಳ ಕುಟುಂಬ ನಮ್ಮ ತೀರಾ ಸಾಮಾನ್ಯವಾದ ಮತ್ತು
ಅಷ್ಟೇನೂ ಆಕರ್ಷಕವಲ್ಲದ ಕಾಗೆಗಳ ಕಾರ್ವಿಡೇ ಕುಟುಂಬಕ್ಕೆ ಹತ್ತಿರದ ಸಂಬಂಧ ಹೊಂದಿದೆ. ಅವುಗಳ ಗರಿಗಳಲ್ಲಿ
ಕೇವಲ ಬಣ್ಣಗಳಿಲ್ಲ, ಸೂರ್ಯನ ಬೆಳಕನ್ನು ಪ್ರತಿಫಲಿಸುವಂಥ ವರ್ಣಸಂಯೋಜನೆ ಅವುಗಳದ್ದು. ಹಾಗಾಗಿ ಅವು
ಬಿಸಿಲಿಗೆ ಬಂದರೆ ಮೈಯೆಲ್ಲ ಕನ್ನಡಿಯಂತೆ ಫಳಫಳನೆ ಹೊಳೆಯುತ್ತದೆ. ಈ ವರ್ಣವೈವಿಧ್ಯ, ಸೌಂದರ್ಯವೆಲ್ಲ
ಕೇವಲ ಗಂಡುಗಳಿಗೆ ಮೀಸಲು. ಹೆಣ್ಣುಹಕ್ಕಿಗಳನ್ನು ಆಕರ್ಷಿಸಲೆಂದೇ ಅವುಗಳಿಗೆ ಈ ಸೌಂದರ್ಯ. ಹೆಣ್ಣುಗಳು
ಮಾತ್ರ ತೀರಾ ಸಾಧಾರಣ ಮೈಬಣ್ಣ ಹೊಂದಿರುತ್ತವೆ. ಗಂಡುಗಳು ಕಣ್ಣುಕುಕ್ಕುವ ಬಣ್ಣಗಳ ಜೊತೆಗೆ ಕೊಕ್ಕು,
ಬೆನ್ನು, ಬಾಲ ಹೀಗೆ ದೇಹದ ಬೇರೆ ಬೇರೆ ಭಾಗಗಳಿಂದ ಹೊರಹೊಮ್ಮಿದ ಉದ್ದನೆಯ ಬಾಲದಂಥ ಗರಿಗಳನ್ನು ಹೊಂದಿರುತ್ತವೆ.
ಇದರಿಂದಾಗಿಯೇ ಈ ಹಕ್ಕಿಗಳು ನಮ್ಮ ಲೋಕಕ್ಕೆ ಸೇರಿದವೇ ಅಲ್ಲ ಎಂಬ ಭಾವನೆ ಉಂಟುಮಾಡುತ್ತವೆ.
ಸ್ವರ್ಗದ ಹಕ್ಕಿಗಳಲ್ಲೆಲ್ಲ
ಅತ್ಯಂತ ದೊಡ್ಡದು ಕರ್ಲ್ ಕ್ರೆಸ್ಟೆಡ್ ಮ್ಯಾನುಕೋಡ್. ಇದಕ್ಕೆ ಕನ್ನಡದಲ್ಲಿ ಯಾವ ಹೆಸರೂ ಇಲ್ಲ. ಒಂದೂವರೆ
ಅಡಿ ಉದ್ದ ಹಾಗೂ ನಾಲ್ಕುನೂರೈವತ್ತು ಗ್ರಾಂ ತನಕ ತೂಗುವ ಈ ಹಕ್ಕಿ ಹೊಳೆಯುವ ಕಪ್ಪು, ನೇರಳೆ ಹಾಗೂ
ಹಸಿರು ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಗಂಡು ಮತ್ತು ಹೆಣ್ಣಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ನೋಡಲು
ಹೆಣ್ಣು ಸ್ವಲ್ಪ ಚಿಕ್ಕದಿರುತ್ತದೆ ಎಂಬುದನ್ನು ಬಿಟ್ಟರೆ ಎರಡೂ ಹೆಚ್ಚುಕಡಿಮೆ ಒಂದೇ ರೀತಿ ಕಾಣುತ್ತವೆ.
ಸ್ವರ್ಗದ ಹಕ್ಕಿಗಳಲ್ಲಿ ಈ ಹಕ್ಕಿಗಳು ತೀರಾ ಸಾಧಾರಣ ಬಣ್ಣದವು ಎನ್ನಿಸುವುದು ನಿಜವಾದರೂ ಅದರ ಕೊರತೆಯನ್ನು
ಅವು ತಮ್ಮ ಧ್ವನಿಯಲ್ಲಿ ತುಂಬಿಕೊಂಡಿವೆ. ಆಕರ್ಷಕವಾದ ಕೂಗಿನ ಮೂಲಕ ಗಂಡು ಹೆಣ್ಣನ್ನು ಕರೆಯುತ್ತದೆ.
ಜೊತೆಗೆ ಬಣ್ಣಗಳು ಸಹ ಬೇರೆ ಸ್ವರ್ಗದ ಹಕ್ಕಿಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಎನ್ನಿಸಬಹುದಾದರೂ
ಇತರೆ ಹಕ್ಕಿಗಳಿಗೆ ಹೋಲಿಸಿದರೆ ಇವು ಅಪ್ರತಿಮ ವರ್ಣಮಯ ಹಕ್ಕಿಗಳೇ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಬಾಗಿದ ಕತ್ತಿಯಂಥ
ಕೊಕ್ಕುಳ್ಳ ಬ್ಲ್ಯಾಕ್ ಸಿಕಲ್ ಬಿಲ್ ಎಂಬ ಹಕ್ಕಿ ತನ್ನ ಕೊಕ್ಕಿನಿಂದಾಗಿಯೇ ಪ್ರಸಿದ್ಧವಾದ ಸ್ವರ್ಗದ
ಹಕ್ಕಿ. ಗಂಡು ಹಕ್ಕಿ ಕಣ್ಣುಕುಕ್ಕುವಂಧ ಕಪ್ಪು-ಹಸಿರು ವರ್ಣಗಳ ಉಡುಗೆಯನ್ನು ಹೊಂದಿರುತ್ತದೆ. ಇದರ
ಬಾಲವೂ ಉದ್ದನೆಯ ಗರಿಗಳಿಂದ ಕೂಡಿದ್ದು ಪ್ರಣಯ ನೃತ್ಯ ಮಾಡುವಾಗ ಈ ಗರಿಗಳನ್ನು ಪ್ರದರ್ಶಿಸಿ ನೃತ್ಯ
ಮಾಡುತ್ತದೆ. ಯಾವ ಗಂಡು ಅತ್ಯಾಕರ್ಷಕ ನೃತ್ಯ ಮಾಡುತ್ತದೋ ಅದಕ್ಕೆ ಹೆಣ್ಣು ಮರುಳಾಗುತ್ತದೆ.
ಸ್ವರ್ಗದ ಹಕ್ಕಿಗಳಲ್ಲೆಲ್ಲ
ಅತ್ಯಂತ ವರ್ಣರಂಜಿತವಾದ ಹಕ್ಕಿಯೆಂದರೆ ಕಿಂಗ್ ಆಫ್ ಸ್ಯಾಕ್ಸೋನಿ ಬರ್ಡ್ ಆಫ್ ಪ್ಯಾರಡೈಸ್. ಇದರ ತಲೆಯಿಂದ
ಇದರ ಹೆಸರಿನಷ್ಟೇ ಉದ್ದವಾದ ಎರಡು ಉದ್ದನೆಯ ಬಾಲಗಳು ಇವೆ. ಕಪ್ಪು ಮತ್ತು ಹಳದಿ ಬಣ್ಣದ ಗರಿಗಳಿಂದ
ಅಲಂಕೃತವಾದ ಗಂಡಿಗೆ ಹೋಲಿಸಿದರೆ ಹೆಣ್ಣಿನದು ತೀರಾ ಸಾಧಾರಣ ಬಣ್ಣ. ಜೊತೆಗೆ ಅದಕ್ಕೆ ಉದ್ದನೆಯ ಬಾಲದ
ಅಲಂಕಾರವೂ ಇರುವುದಿಲ್ಲ. ಈ ಹಕ್ಕಿಯನ್ನು 1894ರ ಡಿಸೆಂಬರ್ ನಲ್ಲಿ ಅಡಾಲ್ಫ್ ಬರ್ನಾರ್ಡ್ ಮೇಯರ್ ಎಂಬಾತ
ಗುರುತಿಸಿ ಹೆಸರಿಸಿದ. “ಕಿಂಗ್ ಆಫ್ ಸ್ಯಾಕ್ಸೋನಿ” ಎಂಬ ಹೆಸರು ಬರಲು ಕಾರಣ ಆಲ್ಬರ್ಟ್ ಎಂಬ ಸ್ಯಾಕ್ಸೋನಿಯ
ರಾಜ. ಇನ್ನೊಂದು ಸ್ವರ್ಗದ ಹಕ್ಕಿಗೆ ಆತನ ಪತ್ನಿಯ ಹೆಸರನ್ನೇ ಇಡಲಾಗಿದೆ. ಕ್ವೀನ್ ಕ್ಯಾರೋಲಾಸ್ ಪ್ಯಾರೋಟಿಯಾ
ಎಂಬ ಹೆಸರಿನ ಈ ಹಕ್ಕಿ ಕೂಡ ಅಷ್ಟೇ ಸುಂದರವಾದ ಹಕ್ಕಿ. ಇದರ ತಲೆಯಿಂದ ಸುಂದರವಾದ ಜುಟ್ಟಿನಂಥ ರಚನೆ
ಇದೆ.
ಪ್ಯಾರಡೈಸ್ ಕ್ರೋ
ಎಂಬ ಇನ್ನೊಂದು ಜಾತಿಯ ಹಕ್ಕಿ ಇದೆ. ಅದು ನೋಡಲು ಕಾಗೆಯಂತಿರುವುದರಿಂದ ಈ ಹೆಸರು ಬಂದಿದೆ. ಆದರೆ ದಾಳಿಂಬೆ
ಬೀಜದಂತೆ ಮಿನುಗುವ ಕೆಂಪು ಕಣ್ಣುಗಳು ಮತ್ತು ಮೈಮೇಲೆ ಬಿಸಿಲು ಬಿದ್ದಕೂಡಲೇ ಕನ್ನಡಿಯಂತೆ ಹೊಳೆಯುವ
ಗರಿಗಳಿಂದಾಗಿ ಇದನ್ನು ಕಾಗೆಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಮೈತುಂಬ ಇರುವುದೊಂದೇ ಕಪ್ಪು ಬಣ್ಣವಾದರೂ
ಸ್ವರ್ಗದ ಕಾಗೆ ನಮ್ಮ ಸಾಮಾನ್ಯ ಕಾಗೆಗಳನ್ನು ಸೌಂದರ್ಯದ ದೃಷ್ಟಿಯಲ್ಲಿ ಮೀರಿಸುತ್ತದೆ. ಏಕೆಂದರೆ ಯಾವ
ಕಾಗೆಯ ಗರಿಗಳೂ ಸಹ ಬಿಸಿಲಿನಲ್ಲಿ ಹೊಳೆಯುವುದಿಲ್ಲ.
2009ರಲ್ಲಿ ಇತ್ತೀಚೆಗಿನ
ಸುಧಾರಿತ ಜೀವವಿಜ್ಞಾನದ ಸಂಶೋಧನೆಗಳಿಂದ ಈ ಹಕ್ಕಿಗಳ ವಿಕಾಸದ ಕುರಿತು ಅನೇಕ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.
ಈ ಹಕ್ಕಿಗಳ ಕುಟುಂಬ ಇಪ್ಪತ್ನಾಲ್ಕು ದಶಲಕ್ಷ ವರ್ಷಗಳ ಹಿಂದೆ ವಿಕಾಸವಾಯಿತೆಂದು ಸಂಶೋಧನೆಗಳು ತಿಳಿಸುತ್ತವೆ.
ಇಂದು ಅವುಗಳಿಗೆ ಮಾನವರಿಂದ ತೊಂದರೆ ಆರಂಭವಾಗಿದ್ದರೂ ಕೆಲವು ನೂರು ವರ್ಷಗಳ ಹಿಂದಿನವರೆಗೂ ಯಾವುದೇ
ಶತ್ರುಗಳ ಉಪಟಳವೂ ಇಲ್ಲದ ದ್ವೀಪಗಳಲ್ಲಿ ಅವು ನಿರಾಳವಾಗಿ ಬದುಕಿದ್ದವು. ಆದ್ದರಿಂದಲೇ ಅವು ವಿಸ್ತಾರವಾದ
ಕುಟುಂಬದಲ್ಲಿ ಹಲವು ಪ್ರಭೇದಗಳಾಗಿ ಕವಲೊಡೆದು ವಿಕಾಸಗೊಂಡವು.
ಈ ಹಕ್ಕಿಗಳ ಪ್ರಧಾನವಾದ
ಆಹಾರ ಹಣ್ಣುಗಳು. ಜೊತೆಗೆ ಆಗಾಗ ಚಿಕ್ಕಪುಟ್ಟ ಕೀಟ, ಜೇಡಗಳನ್ನು ಸಹ ತಿನ್ನುವುದೂ ಇದೆ. ಆದರೆ ಅವುಗಳ
ಕೊಕ್ಕುಗಳನ್ನು ಅಭ್ಯಸಿಸಿದಾಗ ಅವು ಮುಖ್ಯವಾಗಿ ಫಲಾಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಕಾಸ ಹೊಂದಿರುವುದು
ಗೊತ್ತಾಗುತ್ತದೆ. ಮಳೆಕಾಡುಗಳಲ್ಲಿ ಧಾರಾಳವಾಗಿ ಹಣ್ಣಿನ ಮರಗಳಿರುವುದರಿಂದ ಈ ಹಕ್ಕಿಗಳಿಗೆ ಆಹಾರವನ್ನು
ಪಡೆಯುವುದು ಸಮಸ್ಯೆಯೇ ಅಲ್ಲ. ಆದರೆ ಹಾರಾಟವೆಂಬುದು ಅತಿ ಹೆಚ್ಚಿನ ಶಕ್ತಿಯನ್ನು ಬೇಡುವ ಕ್ರಿಯೆಯಾದ್ದರಿಂದ
ಹಕ್ಕಿಗಳಿಗೆ ತಮ್ಮದೇ ಗಾತ್ರದ ಸಸ್ತನಿಗಳಿಗಿಂತ ಹೆಚ್ಚಿನ ಆಹಾರ ಬೇಕಾಗುತ್ತದೆ. ಜೊತೆಗೆ ಸ್ವರ್ಗದ
ಹಕ್ಕಿಗಳು ತಮ್ಮ ಸಂಗಾತಿಗಳನ್ನು ಒಲಿಸಿಕೊಳ್ಳಲು ಪ್ರಣಯನೃತ್ಯ ಮಾಡುವುದರಿಂದ ಅವುಗಳಿಗೆ ಹೆಚ್ಚಿನ
ಶಕ್ತಿಯ ಅಗತ್ಯವಿದೆ. ಆದ್ದರಿಂದಲೇ ಹೆಚ್ಚು ಆಹಾರವನ್ನೂ ಸಹ ಸೇವಿಸುತ್ತವೆ.
ಪಾಪುವಾ ನ್ಯೂಗಿನಿ
ದೇಶದ ಸಂಸ್ಕೃತಿಯಲ್ಲಿ ಈ ಹಕ್ಕಿ ಮಹತ್ವದ ಸ್ಥಾನ ಪಡೆದಿದೆ. ದೇಶದ ರಾಷ್ಟ್ರಧ್ವಜದಲ್ಲೂ ಈ ಹಕ್ಕಿಯ
ಚಿತ್ರವಿರುವುದು ಅದಕ್ಕೆ ನೀಡಿರುವ ಮಹತ್ವವನ್ನು ತೋರಿಸುತ್ತದೆ. ಆದರೆ ಈ ಹಕ್ಕಿಗಳ ಇಂದಿನ ಸ್ಥಿತಿಗತಿ
ಮಾತ್ರ ಕಣ್ಣೀರು ತರಿಸುವಂತಿರುವುದು ದುರದೃಷ್ಟಕರ. ಇದರ ಅಪ್ರತಿಮ ಸೌಂದರ್ಯವೇ ಇದಕ್ಕೆ ಮುಳುವಾಗಿದೆ.
ಜನರಿಗೆ ಇದರ ಸುಂದರ ಗರಿಗಳನ್ನು ತಮ್ಮ ಟೋಪಿಗೆ ಸಿಕ್ಕಿಸಿಕೊಂಡು ತಿರುಗುವ ಖಯಾಲಿ. ಮತ್ತೆ ಕೆಲವರಿಗೆ
ಈ ಸುಂದರ ಪಕ್ಷಿಗಳನ್ನು ಹಿಡಿದು ಪಂಜರದಲ್ಲಿ ಕೂಡಿಹಾಕಿ ಅಂದಚಂದ ನೋಡುವ ವಿಕೃತ ಆನಂದ. ಆದ್ದರಿಂದ
ಇವುಗಳನ್ನು ಅಪಾರ ಸಂಖ್ಯೆಯಲ್ಲಿ ಬೇಟೆಯಾಡಲು ಆರಂಭಿಸಿದರು. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳಲ್ಲಿ
ಈ ಹಕ್ಕಿಗಳು ಬೇಟೆಯ ಹಾವಳಿಗೆ ಸಿಲುಕಿ ತೀವ್ರವಾಗಿ ನಲುಗಿದವು. ಜೊತೆಗೆ ಅವುಗಳ ಆವಾಸಸ್ಥಾನವಾದ ಕಾಡುಗಳ
ಮೇಲೂ ಮನುಷ್ಯನ ವಕ್ರದೃಷ್ಟಿ ಬಿತ್ತು. ನಗರಗಳ ನಿರ್ಮಾಣಕ್ಕಾಗಿ ಭಾರೀ ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ
ನೆಲಸಮ ಮಾಡುವ ಕೆಲಸ ಇಪ್ಪತ್ತನೇ ಶತಮಾನದ ಮಧ್ಯಭಾಗದ ನಂತರ ತೀವ್ರಗತಿಯಲ್ಲಿ ಸಾಗಿತು. ಆದ್ದರಿಂದ ಈ
ಸುಂದರ ಪಕ್ಷಿಗಳು ಅವಸಾನದಂಚಿಗೆ ಸರಿದವು. ಅಪಾಯದ ಮುನ್ಸೂಚನೆಯನ್ನು ಮನಗಂಡ ಸರ್ಕಾರ ಇವುಗಳ ಬೇಟೆಯ
ಮೇಲೆ ನಿಷೇಧ ಹೇರಿತು. ಆದ್ದರಿಂದ ಇವು ಇಂದು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿದ್ದರೂ ಕಾನೂನಿನ
ರಕ್ಷಣೆಯಿಂದ ಕೊಂಚ ನಿರಾಳವಾಗಿ ಉಸಿರಾಡುತ್ತಿವೆ.
ಕೆಲವು ಜಾತಿಯ ಸ್ವರ್ಗದ
ಹಕ್ಕಿಗಳು ಪ್ರಣಯಕಾಲದಲ್ಲಿ ಲೆಕ್ ರೀತಿಯ ಪ್ರಣಯನೃತ್ಯ ಮಾಡುತ್ತವೆ. ಲೆಕ್ ರೀತಿಯ ನೃತ್ಯವೆಂದರೆ ಹೆಣ್ಣುಗಳಿರುವ
ಜಾಗದಲ್ಲಿ ಅನೇಕ ಗಂಡುಗಳು ಒಟ್ಟಾಗಿ ಬಂದು ತಮ್ಮ ಪ್ರದರ್ಶನವನ್ನು ನೀಡುವುದು. ಹೆಣ್ಣುಗಳು ಅದರಲ್ಲಿ
ತಮಗೆ ಇಷ್ಟವಾದ ಒಂದು ಗಂಡನ್ನು ಆರಿಸಿಕೊಳ್ಳುತ್ತವೆ. ಈ ಪ್ರದರ್ಶನವು ಕೇವಲ ನೃತ್ಯವಾಗಿರಬಹುದು ಅಥವಾ
ನೃತ್ಯ ಮತ್ತು ಗಾಯನಗಳೆರಡನ್ನೂ ಒಳಗೊಂಡಿರಬಹುದು. ಇದು ಜಾತಿಯಿಂದ ಜಾತಿಗೆ ಬದಲಾಗುತ್ತದೆ. ಈ ಪ್ರದರ್ಶನಕ್ಕೆ
ಲೆಕ್ಕಿಂಗ್ ಎಂದೇ ಕರೆಯುತ್ತಾರೆ. ಪ್ರಣಯದ ಬಳಿಕ ಮರವೊಂದರ ಕವಲಿನಲ್ಲಿ ಮೃದುವಾದ ವಸ್ತುಗಳಿಂದ (ಉದಾ:
ಮರದ ಎಲೆಗಳು, ಬಳ್ಳಿಗಳು ಇತ್ಯಾದಿ) ಗೂಡು ಕಟ್ಟುತ್ತವೆ. 2-3 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳು
ಎರಡರಿಂದ ಮೂರು ವಾರಗಳ ಅವಧಿಯಲ್ಲಿ ಒಡೆದು ಮರಿಗಳು ಹೊರಬರುತ್ತವೆ.
ಅನೇಕ ಜಾತಿಯ ಸ್ವರ್ಗದ
ಹಕ್ಕಿಗಳ ಮಧ್ಯೆ ಮಿಲನ ನಡೆದು ಹೈಬ್ರಿಡ್ ಜಾತಿಗಳು ಸಹ ಸೃಷ್ಟಿಯಾಗಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಆದರೆ ಈ ಬಗ್ಗೆ ಇನ್ನೂ ವಿಸ್ತೃತ ಅಧ್ಯಯನ ಸಾಗಬೇಕಿದೆ. ಹೈಬ್ರಿಡ್ ಜಾತಿಗಳು ಯಾವ್ಯಾವ ಜಾತಿಗಳ ಸಂಕರದಿಂದ
ಸೃಷ್ಟಿಯಾಗಿವೆ ಎಂಬ ಬಗೆಗೆ ಅಧ್ಯಯನ ಸಾಗುತ್ತಿದೆ. ಕೆಲವು ಹೈಬ್ರಿಡ್ ಜಾತಿಗಳನ್ನು ಬೇರೆಯೇ ಆದ ಹೊಸ
ಜಾತಿಗಳೆಂದು ಪರಿಗಣಿಸಲಾಗಿದೆ. ಜೀವಲೋಕದಲ್ಲಿ ಪ್ರಭೇದಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು
ಅತ್ಯಂತ ಸೂಕ್ಷ್ಮವಾದ ಮತ್ತು ಕಷ್ಟದ ಕೆಲಸ. ಕೆಲವನ್ನಂತೂ ಬೇರೆ ಬೇರೆ ಪ್ರಭೇದಗಳೋ ಅಥವಾ ಒಂದೇ ಪ್ರಭೇದದ
ಉಪಪ್ರಭೇದಗಳೋ ಎಂದು ವರ್ಗೀಕರಿಸುವುದು ಕಷ್ಟದ ಕೆಲಸ.
ಸ್ವರ್ಗದ ಹಕ್ಕಿಗಳಲ್ಲೇ
ಅತಿ ಹೆಚ್ಚಾಗಿ ಬೇಟೆಗಾರರ ಅವಕೃಪೆಗೆ ತುತ್ತಾಗಿ ಅಳಿವಿನಂಚಿಗೆ ತಲುಪಿದ ಹಕ್ಕಿಗಳೆಂದರೆ ಗ್ರೇಟರ್
ಬರ್ಡ್ ಆಫ್ ಪ್ಯಾರಡೈಸ್. ಇದಕ್ಕೆ ಕಾರಣ ಅವುಗಳ ಸುಂದರ ಗರಿಗಳು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಯೇ
ಇಲ್ಲ. ಕೆಂಗಂದು ಬಣ್ಣದ ಈ ಹಕ್ಕಿಯ ಬಾಲದ ಗರಿಗಳದ್ದು ಉಜ್ವಲ ಹಳದಿ ಬಣ್ಣ. ಈ ಗರಿಗಳಿಗಾಗಿಯೇ ಅವುಗಳನ್ನು
ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಹತ್ಯೆ ಮಾಡಲಾಗುತ್ತಿತ್ತು. ಆದ್ದರಿಂದ ಅವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿತ್ತು.
ಆದರೆ ಇತ್ತೀಚೆಗೆ ಸಂರಕ್ಷಣಾ ಕ್ರಮಗಳಿಂದ ಈ ಹಕ್ಕಿ ಚೇತರಿಸಿಕೊಳ್ಳುತ್ತಿದೆ.
ಈ ಹಕ್ಕಿಯ ಲ್ಯಾಟಿನ್
ನಾಮಧೇಯ “ಪ್ಯಾರಡೈಸಿಯಾ ಎಪೋಡಾ” ಎಂದಿದೆ. ಎಪೋಡಾ ಎಂದರೆ ಕಾಲಿಲ್ಲದ್ದು ಎಂದು ಅರ್ಥ. ಹಾಗೆಂದ ಮಾತ್ರಕ್ಕೆ
ಇದಕ್ಕೆ ಕಾಲಿಲ್ಲವೆಂದು ಭಾವಿಸಬೇಡಿ. ಈ ಹೆಸರನ್ನು ಕೊಟ್ಟವನು ಕ್ಯಾರೋಲಸ್ ಲಿನೇಯಸ್. ಏಕೆಂದರೆ ಮೊದಲ
ಬಾರಿಗೆ ಇದರ ಚರ್ಮವನ್ನು ತಂದಾಗ ಅದಕ್ಕೆ ಕಾಲಿರಲಿಲ್ಲವಂತೆ. ಆದ್ದರಿಂದ ಇವುಗಳಿಗೆ ಕಾಲುಗಳೇ ಇರುವುದಿಲ್ಲ,
ರೆಕ್ಕೆಗಳ ಸಹಾಯದಿಂದ ಇವು ಸಾಯುವವರೆಗೆ ಆಕಾಶದಲ್ಲಿ ತೇಲುತ್ತಲೇ ಇರುತ್ತವೆ ಎಂಬ ಪ್ರತೀತಿ ಹುಟ್ಟಿಕೊಂಡಿತು.
ಆ ಪ್ರತೀತಿಯಿಂದಾಗಿಯೇ ಈ ಹೆಸರು ಬಂದಿತು. ಮುಂದೆ ಇದಕ್ಕೆ ಕಾಲುಗಳಿವೆ ಎಂದು ಗೊತ್ತಾದರೂ ಹೆಸರು ಮಾತ್ರ
ಹಾಗೆಯೇ ಉಳಿಯಿತು.
ಸರ್ ವಿಲಿಯಂ ಇಂಗ್ರಾಮ್
ಎಂಬಾತ ಈ ಹಕ್ಕಿಗಳು ಬೇಟೆಯಿಂದಾಗಿ ವಿನಾಶದಂಚಿಗೆ ತಲುಪುತ್ತಿರುವುದನ್ನು ಕಂಡು ಆತಂಕಗೊಂಡು 1909ರಿಂದ
1912ರ ನಡುವೆ ಕೆಲವು ಹಕ್ಕಿಗಳನ್ನು ಹಿಡಿದು ಕೆರೆಬಿಯನ್ ದ್ವೀಪಗಳಲ್ಲೊಂದಾದ ಲಿಟ್ಲ್ ಟೊಬ್ಯಾಗೋದಲ್ಲಿ
ಬಿಟ್ಟ. ಮನುಷ್ಯರ ಹಾವಳಿ ಅಲ್ಲಿ ಅಷ್ಟಾಗಿ ಇರದ ಕಾರಣ ಈ ಹಕ್ಕಿಗಳು ಅಲ್ಲಿ ಕ್ಷೇಮವಾಗಿರಬಹುದೆಂದು
ಅವನ ತರ್ಕವಾಗಿತ್ತು. 1966ರ ತನಕ ಇವು ಅಲ್ಲಿ ಬದುಕಿದ್ದ ನಿದರ್ಶನಗಳಿವೆ. ಆದರೆ ಆ ನಂತರ ಇದುವರೆಗೆ
ಆ ದ್ವೀಪದಲ್ಲಿ ಈ ಜಾತಿಯ ಒಂದೇ ಒಂದು ಹಕ್ಕಿಯೂ ಕಾಣಸಿಕ್ಕಿಲ್ಲ. ಆದ್ದರಿಂದ ಈ ದ್ವೀಪದಲ್ಲಿ ಅವು ನಾಮಾವಶೇಷಗೊಂಡಿವೆ
ಎಂದೇ ನಂಬಲಾಗಿದೆ. ಎಷ್ಟೋ ಕೋಟಿ ವರ್ಷಗಳಿಂದ ಒಂದು ನಿರ್ದಿಷ್ಟ ಸ್ಥಳದಲ್ಲಿ ಬದುಕಿ ಅಲ್ಲಿನ ಪರಿಸರಕ್ಕೆ
ಜೀವಿಗಳು ಹೇಗೆ ಒಗ್ಗಿಹೋಗಿರುತ್ತವೆ ಎಂದರೆ ಬೇರೊಂದು ಪ್ರದೇಶದಲ್ಲಿ ಹೊಂದಿಕೊಂಡು ಬದುಕುವುದು ಅವಕ್ಕೆ
ಸಾಧ್ಯವಾಗುವುದೇ ಇಲ್ಲ. ಮಾರಿಷಸ್ ದ್ವೀಪದ ಡೋಡೋಗಳನ್ನೂ ಸಹ ಇದೇ ರೀತಿ ಬೇರೆ ಬೇರೆ ಪ್ರದೇಶಗಳಲ್ಲಿ
ಬೆಳೆಸಲು ಸಾಕಷ್ಟು ಪ್ರಯತ್ನಿಸಲಾಯಿತಾದರೂ ಅದು ಯಶಸ್ಸು ಕಾಣಲಿಲ್ಲ. ಆದ್ದರಿಂದ ಇಂಗ್ರಾಮ್ ನ ಉದ್ದೇಶ
ಒಳ್ಳೆಯದೇ ಆಗಿದ್ದರೂ ಅದು ಸಫಲವಾಗಲಿಲ್ಲ.
ದಕ್ಷಿಣದ ಆಕಾಶದಲ್ಲಿ
ಏಪಸ್ ಎಂಬ ನಕ್ಷತ್ರಪುಂಜವೊಂದಿದೆ. ಈ ನಕ್ಷತ್ರಪುಂಜವು ಈ ಹಕ್ಕಿಯನ್ನು ಪ್ರತಿನಿಧಿಸುತ್ತದೆ. ಇಂಡೋನೇಷ್ಯಾದ
ಸೈನ್ಯದಲ್ಲಿ ಒಂದು ವಿಭಾಗಕ್ಕೆ “ಸೆಂಡರ್ ವಾಸಿ” (Cenderwasih) ಎಂಬ ಹೆಸರೇ ಇದೆ. ಈ ಪದದ ಅರ್ಥ
ಬೇರೇನೂ ಅಲ್ಲ, ಈ ಹಕ್ಕಿಗೆ ಸ್ಥಳೀಯ ಭಾಷೆಯಲ್ಲಿ ಇರುವ ಹೆಸರು. ಜೊತೆಗೆ ಈ ಮೊದಲೇ ತಿಳಿಸಿದಂತೆ ಪಾಪುವಾ
ನ್ಯೂಗಿನಿಯ ಧ್ವಜದಲ್ಲಿ ಈ ಪಕ್ಷಿಯನ್ನು ಚಿತ್ರಿಸಲಾಗಿದೆ. ಈ ಎಲ್ಲ ಅಂಶಗಳು ಈ ಹಕ್ಕಿಯನ್ನು ಈ ದೇಶಗಳಲ್ಲಿ
ಎಷ್ಟೊಂದು ಗೌರವಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದರೆ ಈ ಹಕ್ಕಿಯ ಸಂಕಷ್ಟವೇನೂ ಇದರಿಂದ
ಪರಿಹಾರವಾಗಲಿಲ್ಲ ಎಂಬುದೂ ಅಷ್ಟೇ ಕಠೋರವಾದ ಸತ್ಯ.
ಆದರೆ ಪ್ರತಿಯೊಂದು
ಕಾರ್ಮೋಡಕ್ಕೂ ಒಂದು ಬೆಳ್ಳಿಯಂಚು ಇರುತ್ತದೆ ಎಂಬ ಮಾತಿನಂತೆ ಇಷ್ಟೆಲ್ಲ ನಿರಾಶೆಗಳ ನಡುವೆಯೂ ಭರವಸೆಯ
ಕಿರಣಗಳು ಕಾಣಿಸಿಕೊಂಡಿವೆ. ಕಠಿಣವಾದ ಕಾನೂನುಗಳಿಂದ ನ್ಯೂಗಿನಿ ಸರ್ಕಾರ ಇವುಗಳ ಸಂರಕ್ಷಣೆಯಲ್ಲಿ ಸಾಕಷ್ಟು
ಯಶಸ್ಸನ್ನೂ ಪಡೆದಿದೆ. ಒಂದೊಮ್ಮೆ ಅಪಾಯಕಾರಿಯಾಗಿ ಇಳಿಮುಖವಾಗಿದ್ದ ಇವುಗಳ ಸಂಖ್ಯೆ ಇಂದು ನಿಧಾನವಾಗಿಯಾದರೂ
ಏರುತ್ತಿದೆ. ಇನ್ನೂ ಅವುಗಳನ್ನು ಅಳಿವಿನಂಚಿನಲ್ಲಿರುವ ಜೀವಿಗಳು ಎಂದೇ ವರ್ಗೀಕರಿಸಲಾಗಿದ್ದರೂ ಸಾಕಷ್ಟು
ಚೇತರಿಸಿಕೊಂಡಿರುವುದಂತೂ ನಿಜ. ಸರ್ಕಾರಗಳ ಸತತ ಪ್ರಯತ್ನದ ಫಲವಾಗಿ ನಮ್ಮ ಮುಂದಿನ ತಲೆಮಾರಿಗೆ ಈ ವಿಸ್ಮಯದ
ಹಕ್ಕಿಗಳನ್ನು ಉಳಿಸಿಕೊಳ್ಳಬಲ್ಲೆವೆಂಬ ಆಶಾಭಾವನೆ ಎಲ್ಲರಲ್ಲಿ ಮೂಡಿದೆ. ಸ್ವರ್ಗದ ಹಕ್ಕಿಗಳು ಭೂಮಿಯ
ಮೇಲೆ ಇನ್ನೂ ಬಹುಕಾಲ ಬದುಕಲಿ ಎಂಬುದೇ ಪರಿಸರ ಪ್ರೇಮಿಗಳೆಲ್ಲರ ಆಶಯ.
No comments:
Post a Comment