ಮರಳಿ ಪ್ರಕೃತಿಯತ್ತ ಪಯಣ

Monday, 3 October 2016

ಇತಿಹಾಸದ ಪುಟಗಳಲ್ಲಿ ಸೇರಿಹೋದ ರಣಥಂಬೋರ್ ನ ರಾಣಿ ಮಚಲಿ

ಇತಿಹಾಸದ ಪುಟಗಳಲ್ಲಿ ಸೇರಿಹೋದ ರಣಥಂಬೋರ್ ನ ರಾಣಿ ಮಚಲಿ
    ಆಗಸ್ಟ್ 18, 2016. ಭಾರತದ ವನ್ಯಜೀವಿ ಪ್ರೇಮಿಗಳಿಗೆಲ್ಲ ಅತ್ಯಂತ ದುಃಖದ ದಿನವಾಗಿ ಮಾರ್ಪಟ್ಟಿತು. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮುಳುಗೆದ್ದು, ಒಲಿಂಪಿಕ್ಸ್ ನಲ್ಲಿ ಪದಕವಿಲ್ಲವೆಂಬ ಬೇಸರವನ್ನು ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಹೊಡೆದೋಡಿಸಿದ ಮರುದಿನವೇ ಇಡೀ ಭಾರತವೇ ಕಣ್ಣೀರಿಡುವ ಸುದ್ದಿ ರಾಜಸ್ತಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಿಂದ ಬಂದಿತು. ಮಚಲಿ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದ್ದ ಇಪ್ಪತ್ತು ವರ್ಷ ವಯಸ್ಸಿನ ಹೆಣ್ಣುಹುಲಿ ಕೊನೆಯುಸಿರೆಳೆಯುವುದರೊಂದಿಗೆ ನಮ್ಮ ವನ್ಯಜೀವಿ ಲೋಕದಲ್ಲಿ ವರ್ಣರಂಜಿತವಾದ ಅಧ್ಯಾಯವೊಂದು ಕೊನೆಗೊಂಡಂತಾಯಿತು.
          ನಮ್ಮ ಕಾಡುಗಳಲ್ಲಿ ಪ್ರತಿದಿನವೂ ನೂರಾರು ಪ್ರಾಣಿಗಳು ಸಾಯುತ್ತಲೇ ಇರುತ್ತವೆ. ಹಾಗಾದರೆ ಮಚಲಿಯ ಸಾವಿಗೆ ಏಕಿಷ್ಟು ಮಹತ್ವ, ಅದಕ್ಕಾಗಿ ದೇಶವೇ ಏಕೆ ಕಣ್ಣೀರಿಡಬೇಕೆಂಬ ಪ್ರಶ್ನೆ ಕೆಲವರನ್ನು ಕಾಡಿರಬಹುದು. ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಂರಕ್ಷಣೆಯ ವಿಷಯಕ್ಕೆ ಬಂದರೆ ಹುಲಿಯ ಮಹತ್ವ ಬೇರಾವುದೇ ಪ್ರಾಣಿಗಿಂತ ಹೆಚ್ಚಿದೆ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸತ್ಯ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಹುಲಿಗಣತಿ ನಡೆಸುವುದೂ ಇದೇ ಕಾರಣಕ್ಕೆ. ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು ಅರ್ಧಲಕ್ಷದವರೆಗೆ ಇದ್ದ ನಮ್ಮ ದೇಶದ ಹುಲಿಗಳ ಸಂಖ್ಯೆ ಈಗ ಒಂದೆರಡು ಸಾವಿರಕ್ಕಿಳಿದಿದೆ. ಈ ಪರಿಸ್ಥಿತಿಯೇನಾದರೂ ಹೀಗೇ ಮುಂದುವರೆದರೆ ನಾವು ಇನ್ನೆಷ್ಟು ಕಾಲ ಹುಲಿಗಳನ್ನು ನೋಡಬಲ್ಲೆವೆಂದು ಖಚಿತವಾಗಿ ಹೇಳುವಂತಿಲ್ಲ. ಆದ್ದರಿಂದಲೇ ಪ್ರತಿಯೊಂದು ಹುಲಿಯ ಸಾವೂ ಅಷ್ಟೊಂದು ಮಹತ್ವ ಪಡೆದುಕೊಳ್ಳುತ್ತದೆ.
          ಮಚಲಿ ಎಂದರೆ ಮೀನು ಎಂದರ್ಥ. ಮಚಲಿಗೆ ಆ ಹೆಸರೇಕೆ ಬಂತೆಂದು ಹುಡುಕುತ್ತ ಹೋದರೆ ಅದರ ಮೂಲ ಅವಳ ತಾಯಿಯತ್ತ ಹೊರಳುತ್ತದೆ. ಅವಳ ತಾಯಿಯ ಮುಖದ ಮೇಲೆ ಮೀನಿನಂಥ ಗುರುತು ಇತ್ತು. ಅದರಿಂದಾಗಿ ಆಕೆಗೆ ಮಚಲಿ ಎಂಬ ಹೆಸರು ಬಂತು. ಆ ಹೆಸರೇ ಮಗಳಿಗೂ ಬಳುವಳಿಯಾಗಿ ಬಂದಿತು. ತಾಯಿಯಿಂದ ಆ ಹೆಸರನ್ನು ಪಡೆಯುವ ಮೊದಲು ಮಚಲಿ ಜಲಾರಾ ಎಂಬ ನಾಮಧೇಯ ಹೊಂದಿದ್ದಳು. ಅದು ಆಕೆ ವಾಸವಾಗಿದ್ದ ರಣಥಂಬೋರ್ ರಾಷ್ಟ್ರೀಯ ಉದ್ಯಾನದ ಒಂದು ಭಾಗದ ಹೆಸರು.
          ಮಚಲಿಗೆ ಈ ನಿಜನಾಮಧೆಯವಲ್ಲದೆ ಬೇರೆಬೇರೆ ಹೆಸರುಗಳೂ ಇದ್ದವು. ಆಕೆಯನ್ನು ಕೆರೆಗಳ ರಾಣಿ (ಲೇಡಿ ಆಫ್ ದ ಲೇಕ್ಸ್), ರಣಥಂಬೋರ್ ರಾಣಿ (ಕ್ವೀನ್ ಆಫ್ ರಣಥಂಬೋರ್), ಹುಲಿಗಳ ರಾಣಿಮಾತೆ (ದ ಮದರ್ ಕ್ವೀನ್ ಆಫ್ ಟೈಗರ್ಸ್) ಹಾಗೂ ಮೊಸಳೆ ಹಂತಕಿ (ಕ್ರೊಕೊಡೈಲ್ ಕಿಲ್ಲರ್) ಎಂಬ ಹೆಸರುಗಳಿದ್ದವು. ಕೊನೆಯ ಹೆಸರು ಯಾಕೆ ಬಂತೆಂದು ಯಾರು ಬೇಕಾದರೂ ಊಹಿಸಬಹುದು. ಹದಿನಾಲ್ಕು ಅಡಿ ಉದ್ದದ ಮಗ್ಗರ್ ಮೊಸಳೆಯೊಂದನ್ನು ಕೊಲ್ಲುವಾಗ ಮಚಲಿ ತೋರಿದ ಅಸಾಧಾರಣ ಧೈರ್ಯ ಮತ್ತು ಯುಕ್ತಿಗಳೇ ಆಕೆಗೆ ಆ ಹೆಸರು ಬರಲು ಕಾರಣವಾಯಿತು. ಆ ಹೋರಾಟ ವನ್ಯಜೀವಿಗಳ ಲೋಕದಲ್ಲೇ ಒಂದು ರೋಚಕ ಅಧ್ಯಾಯವಾಗಿದೆ. ಏಕೆಂದರೆ ಹುಲಿ ಮತ್ತು ಮೊಸಳೆಗಳ ನಡುವಿನ ಕಾದಾಟವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು ಅದೇ ಮೊದಲ ಸಲವಾಗಿತ್ತು. ಆ ದೃಶ್ಯ ಜಗತ್ತಿನಾದ್ಯಂತ ವನ್ಯಜೀವಿ ಪ್ರೇಮಿಗಳಿಗೆ ಹುಚ್ಚುಹಿಡಿಸಿತ್ತು. ಸಾಮಾನ್ಯವಾಗಿ ನೆಲವಾಸಿ ಪ್ರಾಣಿಗಳಿಗೆ ಮೊಸಳೆಗಳನ್ನು ಕೊಲ್ಲುವುದು ಸುಲಭದ ಮಾತಲ್ಲ. ಆಫ್ರಿಕಾದ ಚಿರತೆಗಳು ಹಾಗೂ ದಕ್ಷಿಣ ಅಮೆರಿಕಾದ ಜಾಗ್ವಾರ್ ಗಳು ಇದರಲ್ಲಿ ಎತ್ತಿದ ಕೈ. ಕ್ರೂಗರ್ ರಾಷ್ಟ್ರೀಯ ಉದ್ಯಾನದಲ್ಲೊಮ್ಮೆ ಚಿರತೆಯೊಂದು ಮೊಸಳೆಯನ್ನು ಹೊಳೆಯಿಂದ ಹೊರಕ್ಕೆಳೆದು ಕೊಂದಿದ್ದು ದೊಡ್ಡ ಸುದ್ದಿಯಾಗಿತ್ತು. ಮಚಲಿ ಕೂಡ ಅಂಥದ್ದೇ ಧೈರ್ಯದಿಂದ ಹೆಸರುವಾಸಿಯಾದಳು.
          ಮಚಲಿ ತನ್ನ ಜೀವಿತಾವಧಿಯಲ್ಲಿ ಏಳು ಹೆಣ್ಣು ಮತ್ತು ನಾಲ್ಕು ಗಂಡುಹುಲಿಗಳಿಗೆ ತಾಯಿಯಾದಳು. ರಣಥಂಬೋರ್ ಉದ್ಯಾನದ ಶೇಕಡಾ ಅರವತ್ತರಷ್ಟು ಹುಲಿಗಳು ಮಚಲಿಯ ಸಂತಾನದಿಂದಲೇ ಬಂದವು ಎಂಬುದು ಒಂದು ಅಂದಾಜು. ತನ್ನ ಮರಿಗಳನ್ನು ಶತ್ರುಗಳಾದ ಬೇರೆ ಗಂಡುಹುಲಿಗಳು ಅಥವಾ ಬೇರಾವುದೇ ಶತ್ರುಗಳಿಂದ ರಕ್ಷಿಸಿಕೊಳ್ಳುವಲ್ಲಿ ಸಹ ಮಚಲಿ ಅಸಾಧಾರಣ ಧೈರ್ಯ, ಶೌರ್ಯಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಎಲ್ಲ ಪ್ರಾಣಿಗಳೂ ತಂತಮ್ಮ ಮರಿಗಳನ್ನು ರಕ್ಷಿಸಲು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ಹಾಗಿರುವಾಗ ಮಚಲಿಯದ್ದೇನು ವಿಶೇಷ ಎನ್ನಿಸಬಹುದು. ಆದರೆ ಮಚಲಿ ತನ್ನ ಮರಿಗಳನ್ನು ರಕ್ಷಿಸಿದ್ದು ಸಾಧಾರಣ ಎದುರಾಳಿಗಳ ವಿರುದ್ಧವಲ್ಲ, ಕಾಡಿನಲ್ಲಿ ಹುಲಿಯೊಂದು ಹೆದರಬೇಕಾದ ಏಕೈಕ ಎದುರಾಳಿಯೆಂದರೆ ಇನ್ನೊಂದು ಹುಲಿ ಎಂಬ ಮಾತಿದೆ. ಮಚಲಿ ಅನೇಕ ಗಂಡುಹುಲಿಗಳ ವಿರುದ್ಧ ತನ್ನ ಮರಿಗಳ ರಕ್ಷಣೆಗಾಗಿ ಹೋರಾಡಿದ್ದಾಳೆ. ತನಗಿಂತ ದೊಡ್ಡ ಅನೇಕ ಹುಲಿಗಳನ್ನು ಹೆಸರಿಸಿ ಓಡಿಸಿದ ಖ್ಯಾತಿ ಅವಳದ್ದು. ಜೊತೆಗೆ ಆಕೆ ರಣಥಂಬೋರಿನ ಕೋಟೆ ಮತ್ತು ಕೆರೆಗಳ ಸನಿಹದಲ್ಲೇ ತನ್ನ ಕ್ಷೇತ್ರವನ್ನು ಸ್ಥಾಪಿಸಿಕೊಂಡಿದ್ದರಿಂದ ಅಲ್ಲಿ ಮೊಸಳೆಗಳೊಂದಿಗೆ ಮುಖಾಮುಖಿ ಸಾಮಾನ್ಯವಾಗಿತ್ತು.
          ಚೀನಾದಲ್ಲೊಂದು ಗಾದೆಯಿದೆ. ಒಂದೇ ಪ್ರದೇಶದಲ್ಲಿ ಎರಡು ಹುಲಿಗಳನ್ನು ಕಾಣಲಾಗದು ಎಂಬರ್ಥದ ಗಾದೆ ಅದು. ಹುಲಿಗಳು ಎಂದೂ ಗುಂಪಾಗಿ ಬದುಕುವುದಿಲ್ಲ ಅಥವಾ ಯಾವುದೇ ಒಂದು ಹುಲಿ ತನ್ನ ಕಾರ್ಯಕ್ಷೇತ್ರದಲ್ಲಿ ಬೇರೊಂದು ಹುಲಿ ಬರುವುದನ್ನು ಸಹಿಸುವುದಿಲ್ಲ. ಒಂದೊಂದು ಹುಲಿ ತನ್ನದೇ ಆದ ನಿರ್ದಿಷ್ಟ ಕಾರ್ಯಕ್ಷೇತ್ರವನ್ನು ಸ್ಥಾಪಿಸಿಕೊಂಡಿರುತ್ತದೆ. ಆ ಪ್ರದೇಶಕ್ಕೆ ಬೇರೆ ಹುಲಿಗಳಿಗೆ ಪ್ರವೇಶವಿಲ್ಲ. ಒಂದೊಮ್ಮೆ ಬೇರೆ ಹುಲಿ ಬಂದರೆ ಕಾದಾಟ ನಿಶ್ಚಿತ. ಇಂಥ ಕಾದಾಟದಲ್ಲೇ ಎಷ್ಟೋ ಸಂದರ್ಭದಲ್ಲಿ ಹುಲಿಗಳು ಸಾವನ್ನಪ್ಪುವುದೂ ಇದೆ. ಒಂದೊಂದು ಹುಲಿಯೂ ಹತ್ತಾರು ಚದರ ಕಿಲೋಮೀಟರ್ ವಿಸ್ತಾರದ ಕಾರ್ಯಕ್ಷೇತ್ರವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ತಾಯಿ ಒಂದು ವಯಸ್ಸಿಗೆ ಬಂದಮೇಲೆ ಮರಿಗಳನ್ನು ಹೊರಹಾಕುತ್ತದೆ. ಆಗ ಆ ಮರಿ ತನಗಾಗಿ ಹೊಸ ಕ್ಷೇತ್ರವೊಂದನ್ನು ಸ್ಥಾಪಿಸಿಕೊಳ್ಳಬೇಕು. ಎಷ್ಟೋ ವೇಳೆ ತಾಯಿಯಿಂದ ಮರಿಗಳು ಕ್ಷೇತ್ರವನ್ನು ಕಿತ್ತುಕೊಳ್ಳುವುದೂ ಇದೆ. ಮಚಲಿ ಕೂಡ ಹೀಗೆಯೇ ಅವಳ ತಾಯಿಯಿಂದ ಕ್ಷೇತ್ರವನ್ನು ಕಿತ್ತುಕೊಂಡಳು. ಆ ಬಳಿಕ ಸುಮಾರು ಒಂದೂವರೆ ದಶಕಗಳ ಕಾಲ ತನ್ನ ಕ್ಷೇತ್ರದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದಳು.
          ಮಚಲಿ ತನ್ನ ಜೀವಿತಾವಧಿಯುದ್ದಕ್ಕೂ ಪ್ರವಾಸಿಗರ ಬಹುಮುಖ್ಯ ಆಕರ್ಷಣೆಯಾಗಿದ್ದಳು. ಪ್ರವಾಸೋದ್ಯಮದಿಂದಲೇ ಅಂದಾಜು ಅರವತ್ತೈದು ಕೋಟಿ ರೂಪಾಯಿಗಳ ಆದಾಯ ತಂದುಕೊಟ್ಟವಳೀಕೆ. ಜೊತೆಗೆ ನಮ್ಮ ದೇಶದಲ್ಲಿ ಅತಿಹೆಚ್ಚು ಫೋಟೋಗಳನ್ನು ತೆಗೆಸಿಕೊಂಡ ಹುಲಿ ಎಂಬ ಹೆಗ್ಗಳಿಕೆಯೂ ಆಕೆಗಿದೆ. ಬಾಂಧವಗಡದ ಸೀತಾ ಎಂಬ ಹುಲಿಯೊಂದಿಗೆ ಈಕೆ ಈ ವಿಷಯದಲ್ಲಿ ಸ್ಪರ್ಧೆಗಿಳಿದಿದ್ದಳು. ಅನಿಮಲ್ ಪ್ಲಾನೆಟ್ ಚಾನೆಲ್ಲಿನಲ್ಲೂ ಆಕೆಯನ್ನು ಒಮ್ಮೆ ತೋರಿಸಲಾಗಿತ್ತು. ಪ್ರವಾಸೊದ್ಯಮದಿಂದ ಅತ್ಯಧಿಕ ಆದಾಯ ತಂದುಕೊಟ್ಟ ಕಾರಣಕ್ಕೆ ಆಕೆಗೆ ಅನೇಕ ಪುರಸ್ಕಾರಗಳೂ ಲಭ್ಯವಾಗಿದ್ದವು. ಆದರೆ ಆಕೆ ಮಾತ್ರ ಅದ್ಯಾವುದರ ಪರಿವೆಯೇ ಇಲ್ಲದೆ ಇಡೀ ರಣಥಂಬೋರಿನ ಉದ್ದಗಲಕ್ಕೂ ರಾಣಿಯಂತೆ ಮೆರೆದಳು.
          ತನ್ನ ಕ್ಷೇತ್ರದಲ್ಲಿ ಮಚಲಿ ಮೆರೆಯುವಾಗ ಅನೇಕ ಬಾರಿ ಗಂಡುಹುಲಿಗಳಿಂದ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಅದನ್ನೆಲ್ಲ ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿದ್ದು ಆಕೆಯ ಹೆಚ್ಚುಗಾರಿಕೆ. 1997ರಲ್ಲಿ ಮೊದಲಬಾರಿಗೆ ಮಚಲಿಯನ್ನು ಗಮನಿಸಲಾಯಿತು. ಆಕೆ ಬ್ಯಾಂಬೂ ರಾಮ್ ಎಂಬ ಹೆಬ್ಬುಲಿಯೊಂದಿಗೆ ಸೇರಿ ಮೂರು ಮರಿಗಳಿಗೆ ಜನ್ಮವಿತ್ತಳು. ಸುಂದರಿ ಎಂಬ ಹೆಸರಿನ ಹೆಣ್ಣು ಮತ್ತು ಬ್ರೋಕನ್ ಟೈಲ್ ಹಾಗೂ ಸ್ಲ್ಯಾಂಟ್ ಇಯರ್ ಎಂಬ ಹೆಸರಿನ ಎರಡು ಗಂಡುಮರಿಗಳು ಮಚಲಿಯ ಚೊಚ್ಚಲ ಹೆರಿಗೆಯಲ್ಲಿ ಜನಿಸಿದವು. ಬ್ಯಾಂಬೂ ರಾಮ್ ದುರದೃಷ್ಟವಶಾತ್ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದಾಗ ಮೂರು ಮರಿಗಳನ್ನು ಬೆಳೆಸುವ ಜವಾಬ್ದಾರಿ ಮಚಲಿಯ ಮೇಲೆ ಬಿತ್ತು. ಆಕೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದಳು ಕೂಡ. ಮುಂದೆ 2001ರ ಡಿಸೆಂಬರ್ ನಲ್ಲಿ ಈ ಮೂರು ಮರಿಗಳು ತಾಯಿಯಿಂದ ಬೇರೆಯಾಗಿ ತಮ್ಮದೇ ಕ್ಷೇತ್ರಗಳನ್ನು ಸ್ಥಾಪಿಸಿಕೊಂಡವು.
          ಮುಂದೆ ಆಕೆ ನಿಕ್ ಇಯರ್ ಮತ್ತು ಇನ್ನೊಂದು ಗಂಡಿನೊಡನೆ ಜೊತೆಗೂಡಿ ಅನೇಕ ಮರಿಗಳಿಗೆ ಜನ್ಮವಿತ್ತಳು ಮಚಲಿ. ಆದರೆ ವಯಸ್ಸಾದಂತೆಲ್ಲ ಅವಳ ಹಲ್ಲುಗಳು ಉದುರತೊಡಗಿದವು. 2005ರಲ್ಲಾಗಲೇ ಆಕೆ ಇನ್ನೂ ಒಂಬತ್ತರ ವಯಸ್ಸಿನಲ್ಲಿದ್ದಾಗಲೇ ಒಂದು ಕೋರೆಹಲ್ಲು ಉದುರಿತ್ತು. ಮುಂದೆ ಕೆಲವೇ ವರ್ಷಗಳಲ್ಲಿ ಮೊಸಳೆಗಳೊಂದಿಗಿನ ಕಾದಾಟದ ಫಲವಾಗಿ ಇನ್ನುಳಿದ ಹಲ್ಲುಗಳನ್ನೂ ಕಳೆದುಕೊಂಡ ಮಚಲಿ ಕಳೆದ ಕೆಲವು ತಿಂಗಳುಗಳಿಂದ ಬಹುತೇಕ ಎಲ್ಲ ಹಲ್ಲುಗಳನ್ನೂ ಕಳೆದುಕೊಂಡಿತ್ತು. ಜೊತೆಗೆ ಒಂದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿತ್ತು. ಹಲ್ಲು ಮತ್ತು ಕಣ್ಣುಗಳಿಲ್ಲದ ಹುಲಿ ಕಾಡಿನಲ್ಲಿ ಬದುಕಿದ್ದೂ ಸತ್ತಂತೆ. ತನ್ನ ಸಹಜ ಆಹಾರವನ್ನು ಬೇಟೆಯಾಡುವುದು ಸಹ ಆಕೆಗೆ ಕಷ್ಟಕರವಾಗಿತ್ತು. ಕಾಡಿನಲ್ಲಿ ಹುಲಿಗಳು ಹೀಗೆ ವಯಸ್ಸಾಗಿ ಸಾಯುವುದು ಸಾಮಾನ್ಯವೇ ಆದರೂ ಹುಲಿಗಳ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಯೊಂದು ಹುಲಿಯೂ ಒಂದು ದಿನ ಹೆಚ್ಚು ಬದುಕಿದರೆ ಅದೇ ನಮ್ಮ ಕಾಡಿಗೆ ದೊಡ್ಡ ಬೋನಸ್ ಇದ್ದಂತೆ. ಆದ್ದರಿಂದ ಮಚಲಿಯ ಸಾವನ್ನು ಆದಷ್ಟೂ ಮುಂದೂಡಲು ಉದ್ಯಾನದ ಮೇಲ್ವಿಚಾರಕರು ಶತಪ್ರಯತ್ನ ಮಾಡುತ್ತಲೇ ಇದ್ದರು. ಹಾಗಾಗಿ ಮಚಲಿಗೆ ಅವರು ಆಹಾರಕ್ಕೇನೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಸಂಪೂರ್ಣ ನಿಶ್ಶಕ್ತಿಯಿಂದ ಬಳಲುತ್ತಿದ್ದ ಮಚಲಿ ಆಹಾರ ಸೇವನೆಯನ್ನು ಸಂಪುರ್ಣವಾಗಿ ನಿಲ್ಲಿಸಿದ್ದಳು. ಅಂತಿಮವಾಗಿ ಆಗಸ್ಟ್ 18ರಂದು ಜವರಾಯ ಅವಳನ್ನು ಕರೆದೊಯ್ದ. ಇಡೀ ದೇಶದ ವನ್ಯಪ್ರಾಣಿಗಳ ಕಣ್ಮಣಿಯಾಗಿದ್ದ ಮಚಲಿ ಇತಿಹಾಸದ ಪುಟಗಳಲ್ಲಿ ಸೇರಿಹೋದಳು.
          ಸಾಯುವಾಗ ಮಚಲಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಾಗಿತ್ತು. ಅದೂ ಕೂಡ ಒಂದು ಸಾಧನೆಯೇ. ಏಕೆಂದರೆ ಕಾಡಿನ ಸ್ವಾಭಾವಿಕ ಪರಿಸರದಲ್ಲಿ ಹುಲಿಯೊಂದು ಹತ್ತರಿಂದ ಹದಿನೈದು ವರ್ಷ ಬದುಕಬಲ್ಲದು ಅಷ್ಟೆ. ಹದಿನೈದಾಗುತ್ತಿದ್ದಂತೆ ಅದರ ಶಕ್ತಿಗುಂದುತ್ತಾ ಬರುತ್ತದೆ. ಹಲ್ಲುಗಳು ಉದುರಿ ಬೇಟೆಯಾಡಲು ಅಸಮರ್ಥವಾಗುತ್ತದೆ. ಜೊತೆಗೆ ಕ್ಷೇತ್ರಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ. ಹೊಸ ತಲೆಮಾರಿನ ಹುಲಿಗಳು ಹಳೇ ಹುಲಿಗಳನ್ನು ಸೋಲಿಸಿ ಅವುಗಳ ಕ್ಷೇತ್ರವನ್ನು ಕಿತ್ತುಕೊಳ್ಳುವುದು ಸರ್ವೇಸಾಮಾನ್ಯ. ಹಾಗಾಗಿ ಎಂಥ ಭಾರೀ ಹೆಬ್ಬುಲಿಯಾದರೂ ತನ್ನ ಪರಿಸರದಲ್ಲಿ ಗರಿಷ್ಠವೆಂದರೆ ಐದಾರು ವರ್ಷ ರಾಜನಾಗಿ ಮೆರೆಯಬಹುದಷ್ಟೇ. ಕಾಡಿನ ಸ್ವಾಭಾವಿಕ ಪರಿಸರದಲ್ಲಿ ಹುಲಿಯೊಂದು ಹದಿನೈದು ವರ್ಷ ಬದುಕಿತೆಂದರೆ ಅದೊಂದು ಭಾರೀ ಸಾಧನೆಯೇ ಸರಿ. ಹಾಗಿರುವಾಗ ಮಚಲಿ ಇಪ್ಪತ್ತು ವರ್ಷ ಬದುಕಿತೆಂದರೆ ಅದು ಮನುಷ್ಯನೊಬ್ಬ ನೂರಿಪ್ಪತ್ತು ವರ್ಷ ಬದುಕಿದ ದಾಖಲೆಗೆ ಸಮ ಎನ್ನಬಹುದು.

          ಮಚಲಿ ಸತ್ತರೂ ಜನರ ಮನಸ್ಸಿನಲ್ಲಿ ಇನ್ನೂ ಅಜರಾಮರವಾಗಿ ಉಳಿದಿದ್ದಾಳೆ. ಆಕೆ ಸತ್ತಾಗ ಸಕಲ ಸರ್ಕಾರಿ ಗೌರವಗಳೊಂದಿಗೆ ಅವಳ ಅಂತ್ಯಸಂಸ್ಕಾರ ನಡೆಸಲಾಯಿತು. ಯಾವುದೇ ಪ್ರಸಿದ್ಧ ವ್ಯಕ್ತಿ ಸತ್ತಾಗ ಮರುಗುವುದಕ್ಕಿಂತ ಹೆಚ್ಚಾಗಿ ಜನ ಮಚಲಿಗಾಗಿ ಮರುಗಿದ್ದು ಆಕೆಯ ಹೆಚ್ಚುಗಾರಿಕೆಯೆನ್ನಬಹುದು. ಇನ್ನು ರಣಥಂಬೋರಿಗೆ ಭೇಟಿ ನೀಡುವವರಿಗೆ ಮಚಲಿಯ ದರ್ಶನ ಆಗುವುದಿಲ್ಲ. ಆದರೆ ಅದನ್ನು ಹಿಂದೆ ಭೇಟಿಮಾಡಿದವರು ಮುಂದೆ ಕೂಡ ಅಲ್ಲಿಗೆ ಹೋದಾಗಲೆಲ್ಲ ಮಚಲಿಯ ಘರ್ಜನೆ ಮಾರ್ದನಿಸಿದಂತೆ ಭಾಸವಾದರೆ ಅಚ್ಚರಿಯಲ್ಲ. ಮಚಲಿ, ನಾವೆಲ್ಲ ನಿನ್ನನ್ನು ಪ್ರೀತಿಸುತ್ತೇವೆ. ನಮ್ಮೆಲ್ಲರ ಮನಸೂರೆಗೊಳ್ಳಲು, ರಣಥಂಬೋರ್ ಗೆ ಮತ್ತೆ ರಾಜ(ಣಿ)ಕಳೆ ತಂದುಕೊಡಲು ಮತ್ತೊಮ್ಮೆ ಹುಟ್ಟಿ ಬಾ! 

No comments:

Post a Comment