ಮರಳಿ ಪ್ರಕೃತಿಯತ್ತ ಪಯಣ

Sunday, 2 October 2016

ಮಯೂರ ಸಾಮ್ರಾಜ್ಯದಲ್ಲೊಂದು ಸುತ್ತು

ಮಯೂರ ಸಾಮ್ರಾಜ್ಯದಲ್ಲೊಂದು ಸುತ್ತು
ನಮ್ಮ ಬಾಲ್ಯದ ದಿನಗಳಲ್ಲಿ ನವಿಲಿಗೆ ವಿಶೇಷ ಸ್ಥಾನಮಾನವಿದೆ. ರಾಷ್ಟ್ರಪಕ್ಷಿಯಾದ ನವಿಲಿನ ಅಂದಚೆಂದವನ್ನು ಒಂದನೇ ತರಗತಿಯ ಪುಸ್ತಕದಲ್ಲಿ ನೋಡಿದ್ದೆ. ಅದನ್ನು ಮೊದಲಬಾರಿಗೆ ನೋಡಿದಾಗಲೇ ನಾನು ಅದರ ಅಂದಚೆಂದಕ್ಕೆ ಸಂಪೂರ್ಣವಾಗಿ ಮನಸೋತಿದ್ದೆ. ಪುಸ್ತಕದಲ್ಲಿ ಅದನ್ನು ನೋಡುವಾಗಲೇ ಅಷ್ಟು ಖುಷಿಯಾಗಬೇಕಾದರೆ ಇನ್ನು ನಿಜವಾಗಿ ನೋಡಿದರೆ ಎಷ್ಟು ಖುಷಿಯಾಗಬೇಡ? ಜೊತೆಗೆ ಬೇರೆಬೇರೆ ಕಥೆಪುಸ್ತಕಗಳಲ್ಲಿ ಸಹ ಸೌಂದರ್ಯದ ಮತ್ತೊಂದು ಹೆಸರೇ ನವಿಲು ಎಂಬಂತೆ ಅದರ ಬಗೆಗಿನ ವರ್ಣನೆಗಳನ್ನು ಓದಿದ್ದೆ. ಜೊತೆಗೆ ಅದನ್ನು ಪ್ರತ್ಯಕ್ಷವಾಗಿ ಕಂಡವರು ಸಹ ಅದರ ಬಗೆಗೆ ಹೇಗೆ ವರ್ಣಿಸುತ್ತಿದ್ದರೆಂದರೆ ನನಗೆ ಜೀವಮಾನದಲ್ಲಿ ಒಮ್ಮೆಯಾದರೂ ನವಿಲನ್ನು ನೋಡದಿದ್ದರೆ ಜೀವನವೇ ವ್ಯರ್ಥ ಎಂಬ ಮನೋಭಾವನೆ ಆಳವಾಗಿ ಮನಸ್ಸಿನಲ್ಲಿ ಕುಳಿತುಬಿಟ್ಟಿತು. ಆದರೆ ಅದನ್ನು ನಮ್ಮ ಮನೆಯ ಆಸುಪಾಸಿನಲ್ಲಿ ಎಲ್ಲೂ ನೋಡುವ ಸಾಧ್ಯತೆಯೇ ಇರಲಿಲ್ಲ. ಏಕೆಂದರೆ ನಮ್ಮ ಮನೆಯೇನೂ ದೊಡ್ಡ ಪಟ್ಟಣದಲ್ಲಿರದಿದ್ದರೂ ಮುಖ್ಯವಾದ ರಾಜ್ಯ ಹೆದ್ದಾರಿಯ ಬದಿಯಲ್ಲೇ ಇದ್ದುದರಿಂದ ನವಿಲು ನಮ್ಮ ಮನೆಯ ಬಳಿಯಲ್ಲೆಲ್ಲೂ ಬರುತ್ತದೆ ಎಂಬ ಭರವಸೆ ಇಟ್ಟುಕೊಳ್ಳುವಂತಿರಲಿಲ್ಲ. ಆದರೆ ಆಗೀಗ ನವಿಲಿನ ಕೂಗನ್ನು ಮನೆಯ ಬಳಿ ಕೇಳಬಹುದಿತ್ತು. ಅದಕ್ಕೆ ಕಾರಣ ನಮ್ಮ ಮನೆಯ ಹಿಂಭಾಗದಲ್ಲೇ ಸಾಕಷ್ಟು ಕಾಡು, ಗದ್ದೆ, ತೋಟಗಳೆಲ್ಲ ಇದ್ದದ್ದು. ಅಲ್ಲಿಂದ ನವಿಲಿನ ಕೂಗು ಒಮ್ಮೊಮ್ಮೆ ಕೇಳಿಬರುತ್ತಿತ್ತು. ಆಗ ನಮ್ಮ ಮನೆಯಲ್ಲಿ ಒಂದು ದನವೂ ಇತ್ತು. ಅದಕ್ಕೆ ಹುಲ್ಲು ತರಲು ಅಪ್ಪ ಒಮ್ಮೊಮ್ಮೆ ಗದ್ದೆಗೆ ಹೋಗುತ್ತಿದ್ದರು. ಒಮ್ಮೆ ಹಾಗೆ ಗದ್ದೆಗೆ ಹೋದವರು ಅಲ್ಲಿ ಹತ್ತಾರು ನವಿಲುಗಳನ್ನು ನೋಡಿದ್ದರಂತೆ. ಕೆಲವಂತೂ ತೀರ ಕೈಗೆಟುಕುವಷ್ಟು ಹತ್ತಿರದಲ್ಲೇ ಕಂಡಿದ್ದವು ಎಂದರು. ಸರಿ, ನಾನು ಅವರ ಬೆನ್ನುಬಿದ್ದೆ. ಮರುದಿನ ನನ್ನನ್ನೂ ಗದ್ದೆಗೆ ಕರೆದೊಯ್ದು ನವಿಲು ತೋರಿಸುವುದಾಗಿ ಅವರು ಭಾಷೆಯಿತ್ತರು.
ಆ ರಾತ್ರಿ ನನ್ನ ಪಾಲಿಗೆ ಜೀವನದ ಅತಿದೀರ್ಘವಾದ ರಾತ್ರಿಯಾಗಿತ್ತೆಂದರೆ ತಪ್ಪಾಗಲಾರದು. ಯಾವಾಗ ಬೆಳಕು ಹರಿಯುತ್ತದೆಯೊ ಎಂದು ಕಾಯುತ್ತಿದ್ದೆ. ರಾತ್ರಿ ಒಂದೇ ಒಂದು ಕ್ಷಣವೂ ಕಣ್ಣುಮುಚ್ಚಲಿಲ್ಲ. ಬೆಳಗಿನ ಜಾವ ಸಮೀಪಿಸಿದಂತೆ ಅಲ್ಪಸ್ವಲ್ಪ ಮಂಪರು. ಆ ಮಂಪರಿನಲ್ಲೂ ಮಯೂರಗಳದ್ದೇ ನರ್ತನ. ಅಂತೂ ಇಂತೂ ಬೆಳಗಾಯಿತು. ಬೆಳಗಾದಮೇಲೆ ಸಂಜೆ ಯಾವಾಗ ಆಗುತ್ತದೆ ಎಂಬ ಕಾತರ. ಏಕೆಂದರೆ ಅಪ್ಪ ಗದ್ದೆಗೆ ಹುಲ್ಲು ತರಲು ಹೋಗುವುದು ಸಂಜೆಯ ಹೊತ್ತು. ಅಂತೂ ಇಂತೂ ಸಂಜೆಯಾದಾಗ ಕುಣಿದಾಡುತ್ತ ಅಪ್ಪನ ಜೊತೆ ಹೋಗಿದ್ದಾಯಿತು.
ಆ ಗದ್ದೆ ನಮ್ಮ ಮನೆಯಿಂದ ಸುಮಾರು ಎರಡು ಮೈಲಿ ದೂರದಲ್ಲಿದೆ. ಅಷ್ಟು ದೂರ ನಡೆದುಹೋಗಬೇಕಾದರೆ ಅದರ ಅರ್ಧದಷ್ಟು ದಾರಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ಕಾಡುಗಳಿವೆ. ಜೊತೆಗೆ ಆ ದಾರಿಯನ್ನು ರಸ್ತೆ ಎಂದು ಕರೆಯುವ ಬದಲು ಕಾಲುದಾರಿ ಎಂದು ಕರೆಯುವುದೇ ಸೂಕ್ತವಾಗಿತ್ತು, ಏಕೆಂದರೆ ಅದು ಒಂದು ಬಸ್ಸು ಸಹ ಹೋಗಬಹುದಾದಷ್ಟು ಅಗಲವಾಗಿದ್ದರಿಂದ ಅದನ್ನು ರಸ್ತೆ ಎಂದು ಕರೆದೆನೇ ಹೊರತು ಉಳಿದಂತೆ ಅದಕ್ಕೆ ಡಾಂಬರಿನ ವ್ಯವಸ್ಥೆಯಾಗಲೀ ಅಥವಾ ಕಡೆಪಕ್ಷ ನುಣುಪಾದ ಮಣ್ಣಿನ ವ್ಯವಸ್ಥೆಯೂ ಇರಲಿಲ್ಲ. ಕಲ್ಲುಮುಳ್ಳುಗಳಿಂದ ಕೂಡಿದ ಕಚ್ಚಾ ಕಾಡುದಾರಿಯಾಗಿತ್ತದು. ಅದರ ಎರಡೂ ಬದಿಗಳಲ್ಲಿ ದಾರಿಯ ಮೇಲೆಯೇ ದಟ್ಟವಾಗಿ ಬಾಗಿ ಕವಿದಿದ್ದ ಕಾಡು. ಆ ದಾರಿಯಲ್ಲಿ ಹೋದರೆ ಒಂದು ರೀತಿ ಸುರಂಗದೊಳಗೆ ಹೋದಂತೆ ಭಾಸವಾಗುತ್ತಿತ್ತು. ಅಂದು ನಾವು ಆ ದಾರಿಯಲ್ಲಿ ಹೋಗುತ್ತಿರಬೇಕಾದರೆ ನೂರಾರು ನವಿಲುಗಳು ದಾರಿಯ ಇಕ್ಕೆಲಗಳಲ್ಲೂ ಕಾಡಿನ ನಡುವಿನಿಂದ ಒಂದಾದ ಮೇಲೊಂದರಂತೆ ಕೂಗುತ್ತಲೇ ಇದ್ದವು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಗದ್ದೆಯಲ್ಲಿ ನನ್ನ ಕಣ್ಣುಗಳಿಗೆ ಹಬ್ಬವೇ ಕಾದಿದೆಯೆಂದೇ ಭಾವಿಸಿದ್ದೆ. ಆದರೆ ಕಾಡಿನ ಒಳಗೆ ಆ ಕೂಗಿನ ಜಾಡು ಹಿಡಿದು ನುಗ್ಗಿ ಅಲ್ಲೇ ಅವುಗಳನ್ನು ನೋಡುವಷ್ಟು ಧೈರ್ಯ ಆಗಿನ್ನೂ ನನಗೆ ಇರಲಿಲ್ಲ. ಆದ್ದರಿಂದ ಕುಣಿಯುತ್ತಲೇ ಗದ್ದೆಯ ಕಡೆಗೆ ಅಪ್ಪನ ಹಿಂದೆ ಹೆಜ್ಜೆ ಹಾಕಿದ್ದೆ.
ಒಮ್ಮೊಮ್ಮೆ ನಾವು ವನ್ಯಜೀವಿಗಳ ಬೆನ್ನುಹತ್ತಿದಾಗ ಎಲ್ಲ ರೀತಿಯ ನಿರಾಶೆ ಹಾಗೂ ಭ್ರಮನಿರಸನಗಳಿಗೆ ಸಿದ್ಧವಾಗಿರಬೇಕಾಗುತ್ತದೆ. ಆದರೆ ನನಗೆ ಆಗ ಆ ವಿಷಯಗಳೆಲ್ಲ ಗೊತ್ತಿರಲಿಲ್ಲ. ನನಗೆ ನವಿಲನ್ನು ನೋಡಬೇಕಾಗಿದೆ, ಆದ್ದರಿಂದ ಅದು ಎಲ್ಲಿದ್ದರೂ ಬಂದು ನನ್ನೆದುರು ನಿಂತು ನನಗೆ ದರ್ಶನ ನೀಡಬೇಕು ಅಷ್ಟೆ. ಇದೇ ನನ್ನ ಮನಸ್ಸಿನಲ್ಲಿ ಇದ್ದಿದ್ದು. ಆದರೆ ಅಂದು ಗದ್ದೆಗೆ ಹೋದಾಗ ದಾರಿಯುದ್ದಕ್ಕೂ ಕಾಡಿನ ಎರಡೂ ಬದಿಗಳಿಂದ ಕೂಗುತ್ತಿದ್ದ ನವಿಲುಗಳು ಗದ್ದೆಯಲ್ಲಿ ಇಲ್ಲವೇ ಇಲ್ಲ. ಕಡೇಪಕ್ಷ ಒಂದೇಒಂದು ಹೆಣ್ಣುನವಿಲು ಸಹ ಗದ್ದೆಯ ನಡುವೆ ಕಾಣಸಿಗಲಿಲ್ಲ. ಹತ್ತಾರು ಎಕರೆ ವಿಸ್ತಾರವಿದ್ದ ಇಡೀ ಗದ್ದೆಗೆ ಒಂದು ಸುತ್ತುಹಾಕಿದೆ. ಯಥಾಪ್ರಕಾರ ಆ ಗದ್ದೆಗಳು ಸುತ್ತೆಲ್ಲ ಹರಡಿದ್ದ ನಿತ್ಯಹರಿದ್ವರ್ಣ ಕಾಡುಗಳ ನಡುವೆ ದ್ವೀಪದಂತಿದ್ದವು. ಗದ್ದೆಯ ಅಂಚಿನ ಬಳಿ ಬಂದಾಗಲೆಲ್ಲ ಹತ್ತಿರದ ಕಾಡೊಳಗಿಂದ ನವಿಲುಗಳು ತೀರಾ ಹತ್ತಿರದಲ್ಲೇ ಕೂಗುವುದು ಕೇಳುತ್ತಿತ್ತಾದರೂ ಕಣ್ಣಿಗೆ ಕಾಣುತ್ತಲೇ ಇರಲಿಲ್ಲ. ಮೊದಲೇ ಹೇಳಿದಂತೆ ನನಗೆ ಆಗ ಕಾಡಿನೊಳಗೇ ನುಗ್ಗಿ ಅವುಗಳ ಜಾಡು ಹಿಡಿಯುವಷ್ಟು ಧೈರ್ಯವೂ ಇರಲಿಲ್ಲ. ಸುಮ್ಮನೆ ಸುಮಾರು ಎರಡು ಮೂರು ತಾಸು ವ್ಯರ್ಥವಾಗಿ ಗದ್ದೆಯನ್ನೆಲ್ಲ ಸುತ್ತಿ ಒಂದೇಒಂದು ನವಿಲನ್ನೂ ಕಾಣದೆ ನಿರಾಶನಾಗಿ ಮನೆಗೆ ಮರಳಿದ್ದೆ. ಕಣ್ಣಿಗೆ ಕಾಣಿಸಿಕೊಳ್ಳದೆ ಸುಮ್ಮನೆ ಕೂಗುತ್ತಿದ್ದ ಅವು ನನ್ನನ್ನು ಅಣಕಿಸಿದಂತೆ ಭಾಸವಾಗಿತ್ತು. ಅವಕ್ಕೆಲ್ಲ ಮನಸಾರೆ ಹಿಡಿಶಾಪ ಹಾಕಿ ಕೋಣೆಯೊಳಗೆ ಕುಳಿತು ಅತ್ತುಬಿಟ್ಟಿದ್ದೆ. ಹೀಗೆ ನವಿಲು ನೋಡುವ ನನ್ನ ಮೊದಲ ಪ್ರಯತ್ನ ವಿಫಲವಾಯ್ತು.
ಇದಾದ ಕೆಲವೇ ತಿಂಗಳುಗಳಲ್ಲಿ ನನಗೆ ಸುವರ್ಣಾವಕಾಶವೊಂದು ಒದದಗಿಬಂತು. ನನ್ನ ಅಜ್ಜ-ಅಜ್ಜಿ ಮೊದಲು ನಮ್ಮ ಮನೆಯ ಬಳಿಯಲ್ಲೇ ವಾಸವಿದ್ದರು. ಅವರು ತಮ್ಮ ವಾಸವನ್ನು ನಮ್ಮ ಮನೆಯಿಂದ ಸುಮಾರು ಮೂರ್ನಾಲ್ಕು ಮೈಲಿ ದೂರವಿದ್ದ ಹಳ್ಳಿಯೊಂದಕ್ಕೆ ಬದಲಾಯಿಸಿದರು. ಆ ಹಳ್ಳಿ ಸಂಪೂರ್ಣವಾಗಿ ದಟ್ಟವಾದ ಕಾಡು, ಗದ್ದೆ ಮತ್ತು ತೋಟಗಳ ನಡುವೆ ಇದ್ದ ಜಾಗ. ಆ ಇಡೀ ಹಳ್ಳಿಯಲ್ಲಿ ಅಂದಿನ ಕಾಲಕ್ಕೆ ಇದ್ದ ಮನೆಗಳ ಸಂಖ್ಯೆ ಎರಡಂಕಿಯನ್ನು ಮೀರುತ್ತಿರಲಿಲ್ಲ. ಕೇಸರಿಬಾತಿನಲ್ಲಿ ಅಲ್ಲೊಂದು ಇಲ್ಲೊಂದು ಹರಡಿರುವ ಗೋಡಂಬಿಗಳಂತೆ ದಟ್ಟವಾದ ಕಾನನದ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳಿದ್ದವಷ್ಟೆ. ನಮ್ಮ ಅಜ್ಜ ಅಜ್ಜಿಯೂ ಅದೇ ಕಾನನದ ನಡುವೆ ತಮ್ಮ ಗೂಡು ಕಟ್ಟಿಕೊಂಡರು. ಮೊದಲಬಾರಿಗೆ ಅವರ ಮನೆಗೆ ನಾನು ಹೋದಾಗ ನನಗೆ ಬಹುಶಃ ಒಂಬತ್ತು ವರ್ಷ ಅಥವಾ ಅದಕ್ಕಿಂತಲೂ ಕಡಿಮೆಯೇ ಇರಬಹುದು. ಆದರೆ ಅಲ್ಲಿ ಸುತ್ತಮುತ್ತಲಿನ ಪ್ರಕೃತಿಯನ್ನು ಕಂಡು ನನಗೆ ಸ್ವರ್ಗಕ್ಕೆ ಮೂರೇ ಗೇಣು ಉಳಿದಿತ್ತು.
ಆದರೆ ನನ್ನ ಆಸೆ, ಆಕಾಂಕ್ಷೆಗಳಿಗೆಲ್ಲ ಒಂದೇ ದಿನದಲ್ಲಿ ಎಳ್ಳುನೀರು ಬಿಡುವ ಪ್ರಸಂಗ ಒದಗಿಬಂತು. ಮರುದಿನ ಬೆಳಿಗ್ಗೆ ಎದ್ದವನೇ ಮಯೂರಾರ್ಥಿಯಾಗಿ ಮನೆಯ ಸುತ್ತಲಿನ ಗದ್ದೆ, ತೋಟಗಳತ್ತ ಒಂದು ಸುತ್ತು ಹಾಕಿಬರೋಣವೆಂದು ಹೊರಬಂದವನಿಗೆ ಮನೆಯ ಗೇಟಿನ ಬಳಿಯಲ್ಲೇ ನಿಂತಿದ್ದ ನಾಲ್ಕಾರು ಭಾರೀ ಕೋಣಗಳು ಕಂಡವು. ಅವುಗಳ ಈಟಿಯಂತೆ ತಿವಿಯುವ ಕೊಂಬುಗಳು ಮತ್ತು ಅಷ್ಟೇ ತೀಕ್ಷ್ಣವಾದ ಕಣ್ಣೋಟವನ್ನು ಕಂಡೇ ನನ್ನ ಜಂಘಾಬಲ ಉಡುಗಿಹೋಗಿತ್ತು. ಹಾಗಾಗಿ ನನಗೆ ಅವು ಸಾಕ್ಷಾತ್ ಯಮನ ಅವತಾರಗಳಂತೆಯೇ ಕಂಡವು. ಅಂದು ನನಗೆ ಗೇಟು ತೆಗೆದು ಹೊರಬರುವ ಧೈರ್ಯವೇ ಸಾಲಲಿಲ್ಲ. ಹಾಗಾಗಿ ಗೇಟಿನೊಳಗೇ ನನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಂಡೆ.
ಆದರೆ ನನ್ನ ನವಿಲು ನೋಡುವ ಆಸೆ ಎಷ್ಟೊಂದು ಪ್ರಬಲವಾಗಿತ್ತೆಂದರೆ ಅದು ನನ್ನನ್ನು ಸುಮ್ಮನೆ ಕೂಡಲು ಬಿಡಲೇ ಇಲ್ಲ. ಕೋಣಗಳ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಹಿಡಿಯಲೇಬೇಕೆಂದು ನಾನು ಯೋಚಿಸುತ್ತಿರುವಾಗಲೇ ಮರುದಿನ ಕುತೂಹಲಕರ ಸಂಗತಿಯೊಂದನ್ನು ಗಮನಿಸಿದೆ. ಹೆಚ್ಚುಕಡಿಮೆ ನನ್ನದೇ ವಯಸ್ಸಿನ ಅನೇಕ ಹುಡುಗರು ಅಲ್ಲೇ ಸುತ್ತಮುತ್ತ ನಿರ್ಭಯವಾಗಿ ಓಡಾಡುತ್ತಿದ್ದರು. ಕೋಣಗಳು ಸಹ ಅವರನ್ನು ಗಮನಿಸಿಯೂ ಗಮನಿಸದಂತೆ ತಮ್ಮ ಪಾಡಿಗೆ ತಾವು ಮೇಯುತ್ತಿದ್ದವು. ಅಜ್ಜ ನನಗೆ ಅದನ್ನು ತೋರಿಸಿ ಆ ಕೋಣಗಳೆಲ್ಲ ಸಾಕಿದ ಕೋಣಗಳೆಂದೂ, ಅವು ಯಾವುದೇ ಕಾರಣಕ್ಕೂ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲವೆಂದೂ ಅವಕ್ಕೆ ಹೆದರಬೇಕಾದ ಅವಶ್ಯಕತೆಯೇ ಇಲ್ಲವೆಂದೂ ಹೇಳಿದರು. ಜೊತೆಗೆ ಅಂದು ತಮ್ಮ ಜೊತೆಗೆ ಗೇಟಿನಿಂದ ಹೊರಬರಲು ನನ್ನನ್ನು ಪ್ರೇರೇಪಿಸಿದರು. ನಾನು ಧೈರ್ಯ ಮಾಡಿ ಅವರ ಹಿಂದೆ ಹೋದೆ. ಆದರೂ ನನ್ನ ಒಂದು ಕಣ್ಣು ಮೇಯುತ್ತಿದ್ದ ಕೋಣಗಳ ಮೇಲೆಯೇ ಇತ್ತು. ನನ್ನನ್ನು ನೋಡಿದ್ದೇ ತಡ ಮೇಯುತ್ತಿದ್ದ ಕೋಣವೊಂದು ಮೇಯುವುದನ್ನು ನಿಲ್ಲಿಸಿ ತಲೆಯೆತ್ತಿ ನನ್ನ ಕಡೆಗೇ ದಿಟ್ಟಿಸತೊಡಗಿತು. ನನಗೂ ಒಂದು ಕ್ಷಣ ಎದೆ ಧಸಕ್ಕೆಂದಿತು. ನಾನೂ ಹಾಗೆಯೇ ನಿಂತೆ. ಆದರೆ ಕೋಣ ಒಂದೆರಡು ಕ್ಷಣಗಳಷ್ಟೇ ನನ್ನತ್ತ ದೃಷ್ಟಿಸಿ ಆಮೇಲೆ ತನ್ನ ಪಾಡಿಗೆ ತಾನು ಮೇಯತೊಡಗಿತು. ನನಗೆ ಅದರಿಂದ ಏನೂ ಭಯವಿಲ್ಲವೆಂದು ಖಾತ್ರಿಯಾಯಿತು. ಆಮೇಲೆ ಧೈರ್ಯಮಾಡಿ ಮುಂದೆ ಮುಂದೆ ಹೆಜ್ಜೆ ಹಾಕಿದೆ. ನಾನು ನನ್ನ ಮೊದಲ ಭಯವನ್ನು ಮೆಟ್ಟಿನಿಂತಿದ್ದು ಹೀಗೆ.
ಅದಾದ ಮೇಲೆ ನನಗೆ ಸ್ವಲ್ಪಸ್ವಲ್ಪವೇ ಆತ್ಮವಿಶ್ವಾಸ ಬರತೊಡಗಿತು. ನಂತರ ಒಂದು ದಿನ ಹೀಗೆಯೇ ಮನೆಯಂಗಳದಲ್ಲಿ ಆಡುತ್ತಿದ್ದಾಗ ನನಗೆ ನವಿಲೊಂದು ಕಾಣಿಸಿತು. ಸ್ವಲ್ಪದೂರ ನಡೆದು ಪೊದೆಗಳ ನಡುವೆ ಮರೆಯಾಯಿತು. ನಾನು ಗೇಟುದಾಟಿ ಹೊರಗೆ ಬಂದಿದ್ದೇ ಆದರೆ ಅದನ್ನು ನೋಡಬಹುದಿತ್ತು. ಹಾಗಾಗಿ ಅದನ್ನು ನೋಡಲೇಬೇಕೆಂಬ ಆಸೆಯಿಂದ ಗೇಟು ತೆರೆದು ಹೊರಕ್ಕೆ ಬಂದೆ. ನನ್ನಿಂದ ಸುಮಾರು ಇನ್ನೂರು ಅಡಿ ದೂರದಲ್ಲಿ ಅದು ಕತ್ತುಬಗ್ಗಿಸಿ ಏನನ್ನೋ ತಿನ್ನುತ್ತಿರುವುದು ಕಾಣಿಸಿತು. ನಾನು ಮೆಲ್ಲಮೆಲ್ಲನೆ ಅದಕ್ಕೆ ತಿಳಿಯದಂತೆ ಜಾಗರೂಕತೆಯಿಂದ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ಅದನ್ನು ಸಮೀಪಿಸಲು ಪ್ರಯತ್ನಿಸಿದೆ. ಆದರೆ ನಾನು ಬರುತ್ತಿದ್ದುದನ್ನು ಅದು ನೋಡಿಯೇಬಿಟ್ಟಿತು. ಮರುಕ್ಷಣ ಪಕ್ಕದ ತಿರುವಿನಲ್ಲಿ ಓಡಿ ಮರೆಯಾಯಿತು. ನಾನೂ ಸಹ ಅದನ್ನು ಹತ್ತಿರದಿಂದ ನೋಡಲೇಬೇಕೆಂದು ಓಡಿ ಅದು ಮೊದಲು ಇದ್ದ ಜಾಗದ ಬಳಿ ಓಡಿದೆ. ಆದರೆ ಅಲ್ಲಿಗೆ ನಾನು ಹೋಗುವಾಗ ಏನೂ ಇರಲಿಲ್ಲ. ನನಗಾದ ನಿರಾಶೆ ಅಷ್ಟಿಷ್ಟಲ್ಲ. ಆದರೆ ಅದು ಅಲ್ಲೇ ಎಲ್ಲಾದರೂ ಹತ್ತಿರದಲ್ಲೇ ಇರಬೇಕೆಂದು ನನ್ನ ಮನಸ್ಸು ಹೇಳುತ್ತಿತ್ತು. ಆದ್ದರಿಂದ ಅಲ್ಲೆಲ್ಲ ಬಹಳ ಹೊತ್ತು ಹುಡುಕಾಡಿದೆ. ಸುತ್ತೆಲ್ಲ ಲಂಟಾನಾ ಮತ್ತಿತರ ಪೊದೆಗಳ ಅಭೇದ್ಯ ಕೋಟೆಯೇ ಇತ್ತು. ಸುಮಾರು ಅರ್ಧತಾಸು ಹುಡುಕಾಡಿದರೂ ನವಿಲಿನ ಪತ್ತೆಯೇ ಇರಲಿಲ್ಲ. ಅದೆಲ್ಲೋ ದೂರ ಹೋಯಿತೆಂದು ನಿರಾಶೆಯಿಂದ ಮನೆಯತ್ತ ತಿರುಗಿ ಹೆಜ್ಜೆ ಹಾಕುತ್ತಿದ್ದೆ. ಹೆಚ್ಚೆಂದರೆ ನಾಲ್ಕಾರು ಹೆಜ್ಜೆ ಇಟ್ಟಿದ್ದೆ ಅಷ್ಟೆ. ಅಷ್ಟರಲ್ಲಿ ನನ್ನ ತಲೆಯ ಮೇಲೆಯೇ ಏನೋ ಬಡಬಡನೆ ಭಾರವಾದ ಜೀವಿಯೊಂದು ರೆಕ್ಕೆ ಬಡಿದಂತೆ ಸದ್ದಾಯಿತು. ಬೆಚ್ಚಿಬಿದ್ದು ತಲೆಯೆತ್ತಿ ನೋಡಿದರೆ ನವಿಲು ನನ್ನ ತಲೆಯ ಮೇಲಿನಿಂದಲೇ ಹಾರಿ ನನ್ನ ಎದುರೇ ನೆಲಕ್ಕಿಳಿದು ಕಾಡಿನೊಳಗೆ ಓಡಿ ಮರೆಯಾಯಿತು. ಹೀಗೆ ನನ್ನ ಮೊಟ್ಟಮೊದಲ ಮಯೂರದರ್ಶನ ಪ್ರಸಂಗವೇ ರೋಮಾಂಚಕವಾಗಿತ್ತು.
ಒಮ್ಮೆ ನನಗೆ ನವಿಲನ್ನು ನೋಡಿದಬಳಿಕ ಅವು ಸಾಮಾನ್ಯವಾಗಿ ಕಾಣಸಿಗುವ ಸ್ಥಳಗಳು, ಅವುಗಳನ್ನು ನೋಡಲು ಹೋಗುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು, ನಮ್ಮನ್ನು ನೋಡಿ ಅವು ಗಾಬರಿಯಾಗದಂತೆ ಅವುಗಳನ್ನು ಸಮೀಪಿಸುವುದು ಹೇಗೆ ಇತ್ಯಾದಿ ಸೂಕ್ಷ್ಮವಿಷಯಗಳೆಲ್ಲ ಒಂದೊಂದಾಗಿ ತಿಳಿಯತೊಡಗಿದವು. ಆಮೇಲೆ ನಾನು ಆ ಮನೆಯ ಸುತ್ತಮುತ್ತ ಎಷ್ಟು ನವಿಲುಗಳನ್ನು ನೋಡಿದ್ದೆನೋ ಲೆಕ್ಕವೇ ಇಲ್ಲ. ಅದೊಂದು ಅಘೋಷಿತ ನವಿಲುಧಾಮವೇ ಆಗಿತ್ತೆಂದು ನನಗೆ ನಂತರ ತಿಳಿದುಬಂದಿತು. ಸುತ್ತೆಲ್ಲ ಇದ್ದ ನಿತ್ಯಹರಿದ್ವರ್ಣ ಕಾಡುಗಳು, ಗದ್ದೆ, ತೋಟಗಳು, ಹಳ್ಳಕೊಳ್ಳಗಳಿಂದಾಗಿ ಧಾರಾಳ ಆಹಾರ ಮತ್ತು ನೀರಿನ ಲಭ್ಯತೆ, ಜೊತೆಗೆ ವಿರಳವಾದ ಜನವಸತಿಯಿಂದಾಗಿ ಶತ್ರುಗಳ ಕಾಟ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಆ ಕಾಡುಗಳಲ್ಲಂತೂ ನವಿಲುಗಳಿಗೆ ಮನುಷ್ಯರನ್ನು ಬಿಟ್ಟರೆ ಶತ್ರುಗಳಾಗಬಹುದಾದಂಥ ಪ್ರಾಣಿಗಳ್ಯಾವುವೂ ಇರಲೇ ಇಲ್ಲ.
ಇದಾದ ಮೇಲೆ ಇನ್ನೊಮ್ಮೆ ಬೆಳಿಗ್ಗೆ ಕಾಫಿ ಕುಡಿದು ಲೋಟ ಕೆಳಗಿಡುವ ಮೊದಲೇ ಹತ್ತಾರು ನವಿಲುಗಳು ಕೆಯ್ಯೋ ಕೆಯ್ಯೋ ಎಂದು ಕೂಗುವ ಶಬ್ದ ಕೇಳಿಸಿತು. ಆ ಕೂಗಿನಿಂದ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳೇನೆಂದು ಒಬ್ಬ ಪ್ರಕೃತಿಪ್ರೇಮಿಯಷ್ಟೇ ಹೇಳಬಲ್ಲ. ಅದನ್ನು ಹೇಳುವುದಕ್ಕಿಂತ ಅನುಭವಿಸಿಯೇ ತೀರಬೇಕು. ಲೋಟ ಸರಿಯಾಗಿ ಕೆಳಗಿಡುವುದಕ್ಕೂ ಪುರುಸೊತ್ತಿಲ್ಲದೆ ಅಲ್ಲೇ ನೆಲದ ಮೇಲೆ ಎಸೆದು ಅದರ ಶಬ್ದ ಗಾಳಿಯಲ್ಲಿ ಲೀನವಾಗುವ ಮೊದಲೇ ನಾನು ಮನೆಯ ಗೇಟುದಾಟಿ ಹೊರಗಿನ ಬಯಲಿಗೆ ಹಾರಿಯಾಗಿತ್ತು. ಬಯಲಿನಿಂದ ಕೇವಲ ಇಪ್ಪತ್ತೇ ಮೀಟರ್ ದೂರದಲ್ಲಿ ಗದ್ದೆ ಇದ್ದದ್ದು. ಗದ್ದೆಯ ಅಂಚು ಗದ್ದೆಯ ಮಟ್ಟಕ್ಕಿಂತ ಸುಮಾರು ಆರು ಅಡಿ ಎತ್ತರದಲ್ಲಿದೆ. ಬಯಲಿನಿಂದ ಗದ್ದೆಗೆ ಹೋಗುವವರು ಗದ್ದೆಗೆ ಇಳಿಯದೇ ಅದರ ಅಂಚಿನ ಮೇಲೆ ನಿಂತು ಕೆಳಗಿನ ಗದ್ದೆಯನ್ನು ನೋಡಬಹುದು. ಆಗ ಗದ್ದೆಯಲ್ಲಿರುವವರಿಗೆ ಮೇಲಿನಿಂದ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂದು ಗೊತ್ತೇ ಆಗುವುದಿಲ್ಲ. ನಾನು ಆ ಅಂಚಿನ ಮೇಲೆಯೇ ನಿಂತು ಗದ್ದೆಯ ಕಡೆಗೆ ದೃಷ್ಟಿ ಹಾಯಿಸಿದೆ ಅಷ್ಟೆ!
ಇದೆಲ್ಲ ನಡೆದಿದ್ದು 1998ರ ಏಪ್ರಿಲ್ ನಲ್ಲಿ. ಅಂದರೆ ಇಂದಿಗೆ ಹದಿನೆಂಟು ವರ್ಷಗಳೇ ಕಳೆದಿವೆ. ಆದರೆ ಆ ದಿನ ನಾನು ಕಂಡ ಆ ದೃಶ್ಯ ಹೇಗೆ ಕಣ್ಣಿಗೆ ಕಟ್ಟಿದಂತಿದೆಯೆಂದರೆ ನಾನು ಸಾಯುವವರೆಗೂ ಅದನ್ನು ಮರೆಯಲು ಸಾಧ್ಯವೇ ಇಲ್ಲ. ಒಂದಲ್ಲ, ಎರಡಲ್ಲ, ಆರು ನವಿಲುಗಳು ನಿರ್ಭಿಡೆಯಾಗಿ ಗದ್ದೆಯಲ್ಲಿ ಏನನ್ನೋ ತಿನ್ನುತ್ತ, ಮಧ್ಯೆ ಮಧ್ಯೆ ತಲೆಯೆತ್ತಿ ಸುತ್ತೆಲ್ಲ ಒಮ್ಮೆ ಸಂಶಯದ ದೃಷ್ಟಿ ಹರಿಸಿ ಯಾವುದೇ ಅಪಾಯವಿಲ್ಲವೆಂದು ಖಾತ್ರಿಪಡಿಸಿಕೊಳ್ಳುತ್ತ ಬೆಳಗಿನ ತಿಂಡಿಯ ಸುಖವನ್ನು ಅನುಭವಿಸುತ್ತಿದ್ದವು. ಸಂತೋಷದ ಪರಾಕಾಷ್ಟೆಯಲ್ಲಿ ನನ್ನನ್ನೇ ಮರೆತಿದ್ದ ನಾನು ಕುಣಿದು ಕುಪ್ಪಳಿಸಬೇಕೆಂಬ ಬಯಕೆಯನ್ನು ಹೇಗೋ ಹತ್ತಿಕ್ಕಿಕೊಂಡೆ, ಕುಣಿದಾಡಿದರೆ ಅವುಗಳ ಗಮನ ಸೆಳೆದು ಅವುಗಳನ್ನು ನಾನೇ ಓಡಿಸಿದಂತಾಗುತ್ತದೆ ಎಂಬ ಭಯದಿಂದ. ಸುಮಾರು ಎರಡು ತಾಸುಗಳಷ್ಟು ದೀರ್ಘಕಾಲ ಅವು ಅಲ್ಲಿದ್ದವು. ನಾನು ಕೂಡ ಇಹಲೋಕದ ಪರಿವೆಯೇ ಇಲ್ಲದಂತೆ ನೋಡುತ್ತ ನಿಂತಿದ್ದೆ.
ಆಮೇಲೆ ನವಿಲು ನೋಡುವುದು ನನ್ನ ದಿನನಿತ್ಯದ ಹವ್ಯಾಸವೇ ಆಗಿಹೋಯಿತು. ನಾನು ಅವರ ಮನೆಗೆ ಹೋದಾಗಲೆಲ್ಲ ಪ್ರತಿದಿನವೂ ನವಿಲು ನೋಡಲು ಕಾಡಿನೊಳಗೆ ನುಗ್ಗುತ್ತಿದ್ದೆ. ಅಷ್ಟರಲ್ಲಾಗಲೇ ನನ್ನ ಕಾಡಿನ ಭಯವೆಲ್ಲ ಹೊರಟುಹೋಗಿದ್ದರಿಂದ ಪ್ರತಿದಿನವೂ ಧೈರ್ಯವಾಗಿ ಕಾಡಿನ ಮೂಲೆಮೂಲೆಗೂ ನುಗ್ಗಿ ಹುಡುಕುತ್ತಿದ್ದೆ ಮತ್ತು ಪ್ರತಿದಿನವೂ ಒಂದಾದರೂ ನವಿಲಿನ ದರ್ಶನ ಆಗಿಯೇ ಆಗುತ್ತಿತ್ತು. ಕೆಲವೊಮ್ಮೆಯಂತೂ ನಾಲ್ಕಾರು ನವಿಲುಗಳು ಒಟ್ಟೊಟ್ಟಾಗಿ ಕಾಣಿಸಿಕೊಂಡು ನನ್ನ ಸಂತೋಷವನ್ನು ಇಮ್ಮಡಿಗೊಳಿಸುತ್ತಿದ್ದವು.
ಮತ್ತೊಂದು ದಿನ ಬೆಳಿಗ್ಗೆ ಅಜ್ಜಿ ಬಟ್ಟೆ ಒಗೆದುಕೊಂಡು ಬರಲು ಮನೆಯಿಂದ ಸುಮಾರು ಅರ್ಧಮೈಲು ದೂರದಲ್ಲಿದ್ದ ಹಳ್ಳವೊಂದಕ್ಕೆ ಹೋಗಿದ್ದರು. ಅಜ್ಜ ಸಹ ಎಲ್ಲೋ ಹೊರಗಡೆ ಹೋಗಿದ್ದರಿಂದ ಮನೆಯಲ್ಲಿ ನಾನೊಬ್ಬನೇ ಇದ್ದೆ. ಬೇಸರವಾಯಿತೆಂದು ಮನೆಯೆದುರಿನ ಅಂಗಳದಲ್ಲೇ ನಿಂತು ಸುತ್ತಲಿನ ಪ್ರಕೃತಿಯನ್ನು ವೀಕ್ಷಿಸುತ್ತಿದ್ದ ನನಗೆ ಹಠಾತ್ತಾಗಿ ಚಿರಪರಿಚಿತವಾದ ನವಿಲಿನ ಧ್ವನಿ ಕೇಳಿಬಂದಿತು. ಆಶ್ಚರ್ಯದಿಂದ ಪಕ್ಕಕ್ಕೆ ತಿರುಗಿದವನಿಗೆ ಅಲ್ಲೇ ಪಕ್ಕದ ಕಾಡಿನ ಮರವೊಂದರ ಮೇಲೆ ಕುಳಿತಿದ್ದ ನವಿಲು ಕಾಣಿಸಿತು. ಅದರ ಕಾಲುಗಳು, ಕಾಲಿನ ಉಗುರುಗಳು ಸಹ ಸ್ಪಷ್ಟವಾಗಿ ಕಾಣಿಸುವಷ್ಟು ಹತ್ತಿರದಲ್ಲಿ ಕುಳಿತಿತ್ತು. ಅಂದು ಕೂಡ ಆ ನವಿಲು ಒಂದು ತಾಸಿಗೂ ಹೆಚ್ಚುಹೊತ್ತು ಒಂದೇ ಭಂಗಿಯಲ್ಲಿ ಕುಳಿತು ನನ್ನ ಕಣ್ಣಿಗೆ ಹಬ್ಬದೂಟವನ್ನೇ ನೀಡಿತ್ತು.
ಆದರೆ ಎಷ್ಟೇ ನವಿಲುಗಳನ್ನು ನೋಡಿದರೂ ನನ್ನ ಮನಸ್ಸಿನಲ್ಲಿ ಒಂದು ಕೊರತೆ ಕಾಡುತ್ತಲೇ ಇತ್ತು. ಅದೆಂದರೆ ಗರಿಬಿಚ್ಚಿ ನರ್ತಿಸುವ ನವಿಲನ್ನು ನೋಡಲಿಲ್ಲ ಎಂದು. ಆ ಕೊರತೆಯೂ ಈಡೇರುವ ಸಂದರ್ಭ ಎರಡು ವರ್ಷಗಳ ನಂತರ ಬಂದಿತು. ಒಂದು ದಿನ ನಾಲ್ಕಾರು ಹುಡುಗರು ಸೇರಿಕೊಂಡು ಗದ್ದೆಯಲ್ಲಿ ಮಾಮೂಲಿನಂತೆ ನವಿಲು ನೋಡಲು ಹೋಗುತ್ತಿದ್ದೆವು. ಗದ್ದೆಗೆ ಇಳಿದು ದೂರದಲ್ಲಿ ಕಾಣುತ್ತಿದ್ದ ನಾಲ್ಕಾರು ನವಿಲುಗಳನ್ನು ಹತ್ತಿರದಿಂದ ನೋಡುವ ಉದ್ದೇಶದಿಂದ ನಿಧಾನವಾಗಿ ಮುಂದುವರೆಯುತ್ತಿದ್ದೆವು. ಆಗ ಒಂದು ಹಂತದಲ್ಲಿ ಗದ್ದೆಯ ಮಧ್ಯದಲ್ಲಿದ್ದ ಮರವೊಂದು ನನಗೆ ಅಡ್ಡವಾಗಿ ನವಿಲುಗಳು ಕಾಣದಾದವು. ಅದೇ ಕ್ಷಣ ನನಗಿಂತ ಸ್ವಲ್ಪ ಮುಂದೆ ಹೋಗಿದ್ದ ಒಬ್ಬಳು ಉದ್ವೇಗದಿಂದ “ಅಣ್ಣಾ, ಅಲ್ಲಿ ನೋಡು ನವಿಲು ಗರಿಬಿಚ್ಚಿ ಕುಣಿಯುತ್ತಿದೆ. ಬೇಗಬೇಗ ಎಲ್ಲರೂ ಬನ್ನಿ” ಎಂದು ಕೂಗಿದಳು. ನಾವು ನಮ್ಮ ಅದುವರೆಗಿನ ಎಚ್ಚರವನ್ನೆಲ್ಲ ಗಾಳಿಯಲ್ಲಿ ತೂರಿ ಮುನ್ನುಗ್ಗಿದೆವು. ನಮ್ಮ ಕಣ್ಣಿಗೆ ಅದ್ಭುತ ದೃಶ್ಯವೊಂದು ಎದುರಾಯ್ತು. ಮೂರ್ನಾಲ್ಕು ಹೆಣ್ಣುನವಿಲುಗಳು ಅನ್ಯಮನಸ್ಕರಾಗಿ ನೆಲದಿಂದ ಏನನ್ನೋ ಹೆಕ್ಕಿ ತಿನ್ನುತ್ತಿದ್ದರೆ ಗಂಡು ನವಿಲೊಂದು ಅವುಗಳ ಎದುರೇ ಉಲ್ಲಾಸದಿಂದ ಗರಿಬಿಚ್ಚಿ ಲಾಸ್ಯವಾಡುತ್ತಿತ್ತು. ಅದನ್ನು ನೋಡಿದೊಡನೆಯೇ ನಾವೆಲ್ಲ ಮಾತು ಬಾರದೆ ಮೂಕರಾಗಿ ನಿಂತುಬಿಟ್ಟೆವು. ಪ್ರಕೃತಿಯ ಅದ್ಭುತ ಸೌಂದರ್ಯದೇವತೆ ನಮ್ಮ ಮುಂದೆ ಪ್ರತ್ಯಕ್ಷವಾಗಿ ನಿಂತಿತ್ತು. ನಾವೆಲ್ಲ ನೋಡನೋಡುತ್ತಿದ್ದಂತೆಯೇ ಅದಕ್ಕೆ ನಾಚಿಕೆಯಾಯಿತೋ ಏನೋ, ಗರಿಗಳನ್ನು ಮುದುರಿಕೊಂಡು ಕಾಡಿನ ಕಡೆಗೆ ಪಲಾಯನಗೈದಿತು. ನಾವಂದು ಅದನ್ನು ನೋಡಿದ್ದು ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯವರೆಗೆ. ಆದರೆ ಅದು ಇನ್ನೂ ನಮ್ಮ ಕಣ್ಣಿಗೆ ಕಟ್ಟಿದಂತಿದೆ.
ಅಂದಿನ ದಿನಗಳ ನೆನಪನ್ನು ನನಗೆ ಇಂದಿಗೂ ಮರೆಯಲಾಗುತ್ತಿಲ್ಲ. ನಮ್ಮ ಬಾಲ್ಯದ ದಿನಗಳೇ ಹಾಗಿದ್ದವು. ಅಜ್ಜ-ಅಜ್ಜಿಯ ಮನೆಯ ಸುತ್ತಮುತ್ತ ಸ್ವಚ್ಛಂದವಾಗಿ ವಿಹರಿಸುತ್ತ ನೂರಾರು ಹೊಸಹೊಸ ಪ್ರಾಣಿಪಕ್ಷಿಗಳನ್ನು ನೋಡುತ್ತ ಪ್ರತಿದಿನವನ್ನೂ ಕೌತುಕದಿಂದಲೇ ಕಳೆಯುತ್ತಿದ್ದೆವು. ಅಂದಿನ ದಿನಗಳಲ್ಲಿ ನಾವು ಅಲ್ಲಿ ನವಿಲುಗಳನ್ನು ನೋಡದ, ಅವುಗಳ ಕೂಗನ್ನು ಕೇಳದ ದಿನಗಳೇ ಇಲ್ಲವೆಂದರೆ ತಪ್ಪಾಗಲಾರದು. ಬೆಳಿಗ್ಗೆ ಕಾಫಿ ಕುಡಿದು ಆರು ಗಂಟೆಗೇ ಮನೆಯಿಂದ ಹೊರಬಿದ್ದರೆ ನಮಗೆ ಊಟತಿಂಡಿಗಳ ಪರಿವೆಯೂ ಇರುತ್ತಿರಲಿಲ್ಲ. ಗದ್ದೆ, ತೋಟ, ಕಾಡುಮೇಡು ಎಂದು ಸುತ್ತುತ್ತಾ ಪ್ರತಿದಿನವೂ ಹತ್ತಾರು ನವಿಲುಗಳನ್ನು ನೋಡುತ್ತ ಆನಂದದಿಂದ ಕಾಲಕಳೆಯುತ್ತಿದ್ದೆವು. ಅಲ್ಲಿ ಇರುವಷ್ಟು ದಿನವೂ ಬೇಸರವೆಂಬುದು ನಮ್ಮ ಸಮೀಪಕ್ಕೂ ಸುಳಿಯುತ್ತಿರಲಿಲ್ಲ. ದಿನಗಳು ಕೆಲವೇ ಕ್ಷಣಗಳಂತೆ ಕಳೆದುಹೋಗುತ್ತಿದ್ದವು. ಎರಡು ತಿಂಗಳ ರಜಾ ಹೇಗೆ ಮುಗಿಯುತ್ತದೆ ಎಂದೇ ತಿಳಿಯುತ್ತಿರಲಿಲ್ಲ.
ಆದರೆ ಬರಬರುತ್ತಾ ನಮಗೆ ಪರಿಸರದಲ್ಲಿ ಆಗುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ನಿಧಾನವಾಗಿ ಆ ಹಳ್ಳಿಯಲ್ಲಿ ಮನೆಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಇಂದು ಅಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿವೆ. ಆ ಹಳ್ಳಿ ತನ್ನ ಅಂದಿನ ಮೂಲಸ್ವರೂಪವನ್ನು ಎಂದೋ ಕಳೆದುಕೊಂಡಿದೆ. ಆದರೆ ಅಂದಿನ ದಿನಗಳಲ್ಲೇ ನಾವು ವರ್ಷಗಳು ಕಳೆಯುತ್ತಿದ್ದಂತೆ ನವಿಲುಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗಿದ್ದನ್ನು ಗಮನಿಸಿದೆವು. ಮೊದಮೊದಲು ಪ್ರತಿನಿತ್ಯ ಹತ್ತಾರು ಸಂಖ್ಯೆಯಲ್ಲಿ ಗೋಚರಿಸುತ್ತಿದ್ದ ಅವು ವರ್ಷಗಳು ಕಳೆದಂತೆ ಒಮ್ಮೊಮ್ಮೆ ಇಡೀ ದಿನ ಸುತ್ತಿದರೂ ಒಂದೇಒಂದು ನವಿಲೂ ಕಾಣದಂಥ ಸ್ಥಿತಿಗೆ ತಲುಪಿದವು. ನಮ್ಮ ಆ ವಯಸ್ಸಿನಲ್ಲಿ ನಮಗೆ ವನ್ಯಜೀವಿಗಳ ಮಹತ್ವ, ಅವುಗಳ ಸಂರಕ್ಷಣೆ ಇತ್ಯಾದಿ ವಿಷಯಗಳ ಬಗೆಗೆ ಅಂಥ ಜ್ಞಾನವೇನೂ ಇರದಿದ್ದರೂ ದಿನಾ ಕಾಣುತ್ತಿದ್ದ ಅವು ಕಾಣದಾದಾಗ ಮನಸ್ಸಿಗೆ ಪಿಚ್ಚೆನ್ನಿಸಿದ್ದು ಮಾತ್ರ ನಿಜ. ಅವೇಕೆ ಈಗ ಕಾಣುತ್ತಿಲ್ಲವೆಂದು ಅಲ್ಲಿ ಯಾರನ್ನಾದರೂ ಕೇಳಿದರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡುತ್ತಿದ್ದರು. ಇಷ್ಟಕ್ಕೂ ಸದಾಕಾಲ ದುಡ್ಡುಮಾಡುವ ಬಗೆಗೇ ಚಿಂತಿಸುತ್ತಿದ್ದ ಅಲ್ಲಿನ ಜನರ ನಡುವೆ ನವಿಲು, ಕೋಳಿ ಇತ್ಯಾದಿಗಳ ಬಗೆಗೆ ತಲೆಕೆಡಿಸಿಕೊಳ್ಳುತ್ತಿದ್ದ ನಾವು ಅವರೆಲ್ಲರ ದೃಷ್ಟಿಯಲ್ಲಿ ವಿಚಿತ್ರ ಪ್ರಾಣಿಗಳೇ ಆಗಿದ್ದೆವು. “ಈ ಪೇಪರ್ ಭಟ್ರ ಮಕ್ಕಳಿಗೆ ಬೇರೆ ಕೆಲಸವಿಲ್ಲ. ದಿನಬೆಳಗಾದರೆ ನವಿಲು, ಕಾಡುಕೋಳಿಗಳ ಹಿಂದೆ ಸುತ್ತುತ್ತಾರೆ. ಇವರಿಗೆ ಯಾವಾಗ ಬುದ್ಧಿ ಬರುತ್ತದೆಯೋ ದೇವರೇ ಬಲ್ಲ” ಎಂದು ಆಡಿಕೊಳ್ಳುತ್ತಿದ್ದರು. ಆದರೆ ನಾವು ಎಂದೂ ಆ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ.
ವರ್ಷಗಳುರುಳಿದಂತೆ ನವಿಲುಗಳ ಸಂಖ್ಯೆ ಮತ್ತಷ್ಟು ಕುಸಿಯಿತು. ಕೊನೆಗೊಮ್ಮೆ ಒಂದು ಬೇಸಿಗೆಯಲ್ಲಿ ನಾವು ಹದಿನೈದು ದಿನ ಅಲ್ಲಿ ಇದ್ದುಬಂದಿದ್ದೆವು. ಅಷ್ಟು ದಿನಗಳಲ್ಲಿ ಒಮ್ಮೆಯೂ ಒಂದೇಒಂದು ನವಿಲು ಕೂಡ ಕಾಣದಾದಾಗ ನಮ್ಮ ಆತಂಕ ಎಲ್ಲೆಮೀರಿತ್ತು. ನಮ್ಮ ಹಳ್ಳಿಯಲ್ಲಿ ನವಿಲುಗಳಿಗೆ ಶಾಶ್ವತ ವಿದಾಯ ಹೇಳಿದಂತೆಯೇ ಸರಿ ಎಂದು ನಿರ್ಧರಿಸಿ ವಿಷಣ್ಣವದನರಾಗಿ ಮನೆಗೆ ಮರಳಿದೆವು. ಆಮೇಲೆ ಮುಂದಿನ ಕೆಲವು ದಿನಗಳವರೆಗೆ ನಮ್ಮ ಹಳ್ಳಿಯಲ್ಲಿ ಎಲ್ಲೂ ನವಿಲುಗಳನ್ನು ನಾವು ಕಾಣಲೂ ಇಲ್ಲ, ಕೇಳಲೂ ಇಲ್ಲ. ನಂತರ ಮೈಸೂರು ಮೃಗಾಲಯ, ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಹೀಗೆ ಕೆಲವುಕಡೆ ನವಿಲನ್ನು ನೋಡಿದರೂ ಅವುಗಳನ್ನು ಸ್ವಾಭಾವಿಕ ಪರಿಸರದಲ್ಲಿ ನೋಡಿದಾಗ ಆಗುವ ಸಂತೋಷ ಅಲ್ಲಿ ಸಿಗುತ್ತಿರಲಿಲ್ಲ.

ಇತ್ತೀಚೆಗೆ ನಾವು ಹೊಸ ನಿಕಾನ್ ಕೂಲ್ ಪಿಕ್ಸ್ ಕ್ಯಾಮೆರಾ ಕೊಂಡುಕೊಂಡೆವು. ಅದನ್ನು ಕೊಂಡಮೇಲೆ ನಮ್ಮ ಓಡಾಟಗಳು ಜಾಸ್ತಿಯಾದವು. ಇತ್ತೀಚೆಗೆ ಒಂದು ದಿನ ಸುಮ್ಮನೆ ಛಾಯಾಗ್ರಹಣಕ್ಕೆಂದು ಅಜ್ಜಿಯ ಮನೆಯ ಕಡೆಗೆ ಹೋದೆವು. (ಇಂದು ಅವರು ಆ ಮನೆಯಲ್ಲಿ ಇಲ್ಲ, ಅದು ಬೇರೆ ವಿಷಯ). ಹೋದವರು ಹಾಗೆಯೇ ಗದ್ದೆಯ ಕಡೆಗೆ ಹೋದೆವು. ಅಲ್ಲಿ ಈಗ ಯಾರೂ ಗದ್ದೆಯಲ್ಲಿ ಬೇಸಾಯ ಮಾಡುತ್ತಿಲ್ಲ. ಆದರೆ ನಮಗೆ ಆಶ್ಚರ್ಯವಾಗುವಂತೆ ಗದ್ದೆಯ ಸುತ್ತಮುತ್ತಲಿನ ಪರಿಸರ ವ್ಯವಸ್ಥೆ ಸಾಕಷ್ಟು ಚೇತರಿಸಿಕೊಂಡಂತೆ ಕಂಡುಬಂದಿತು. ಗದ್ದೆಯ ಸುತ್ತಮುತ್ತ ಅನೇಕ ಕೊಕ್ಕರೆಗಳು, ಜೇನುಹಿಡುಕಗಳು, ಮೈನಾಗಳು, ಪಿಕಳಾರಗಳು ಹೀಗೆ ಸಾಕಷ್ಟು ವಿಧವಿಧವಾದ ಪಕ್ಷಿಗಳು ಕಂಡುಬಂದವು. ಜೊತೆಗೆ ನಮಗೆ ಅಚ್ಚರಿಯಾಗುವಂತೆ ನಮ್ಮಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿ ನಾಲ್ಕಾರು ನವಿಲುಗಳು ಸಹ ಗದ್ದೆಯಲ್ಲಿ ಮೇಯುತ್ತಿರುವುದು ಕಾಣಿಸಿತು. ಕ್ಯಾಮೆರಾವನ್ನು ಸರಸರನೆ ಹೆಗಲಿಗೇರಿಸಿ ಅನೇಕ ಚಿತ್ರಗಳನ್ನು ಕ್ಲಿಕ್ಕಿಸಿದೆವು. ನಿಧಾನವಾಗಿಯಾದರೂ ಅಲ್ಲಿನ ಪರಿಸರ ವ್ಯವಸ್ಥೆ ಚೇತರಿಸಿಕೊಳ್ಳುತ್ತ ಮತ್ತೆ ಹಳೆಯ ವೈಭವಕ್ಕೆ ಮರಳಲಿ ಎಂದು ಹಾರೈಸುತ್ತ ಮನೆಗೆ ಮರಳಿದೆವು. 

No comments:

Post a Comment