ಮರಳಿ ಪ್ರಕೃತಿಯತ್ತ ಪಯಣ

Friday 30 September 2016

ದೈತ್ಯಜೀವಿಗಳ ಲೋಕದಲ್ಲಿ: ಎಲ್ಲಿ? ಏಕೆ? ಹೇಗೆ?

ದೈತ್ಯಜೀವಿಗಳ ಲೋಕದಲ್ಲಿ: ಎಲ್ಲಿ? ಏಕೆ? ಹೇಗೆ?
ಆಮೆ ಜನಸಾಮಾನ್ಯರಿಗೆ ಪರಿಚಿತವಾದ ಒಂದು ಸಾಮಾನ್ಯ ಪ್ರಾಣಿ. ನದಿ, ಕೆರೆಗಳ ಬಳಿ ಕಂಡುಬರುವ ಆಮೆಗಳನ್ನು ಬಹುಪಾಲು ಜನ ನೋಡಿರುತ್ತಾರೆ. ನಿಧಾನಗತಿಗೆ ಮತ್ತೊಂದು ಹೆಸರಾದ ಈ ಆಮೆಗಳು ಎಷ್ಟೊಂದು ದೊಡ್ಡವಿರಬಹುದು? ಒಂದೆರಡು ಅಡಿ ಗಾತ್ರದ, ಹೆಚ್ಚೆಂದರೆ ಹತ್ತಾರು ಕಿಲೋ ತೂಗುವ ಆಮೆಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಆಮೆಗಳ ಲೋಕದಲ್ಲಿ ಭಾರೀ ಹೆಬ್ಬಂಡೆಗಳಂಥ, ಐನೂರರಿಂದ ಆರುನೂರು ಕಿಲೋ ತೂಗುವ ದೈತ್ಯರೂ ಇವೆ. ಗ್ಯಾಲಪಗೋಸ್ ದ್ವೀಪಗಳಲ್ಲಿ ವಾಸಿಸುವ ಈ ಆಮೆಗಳು ಇಲ್ಲಿನ ಧಾರಾಳ ಆಹಾರದ ಲಭ್ಯತೆ ಮತ್ತು ಶತ್ರುಗಳಿಲ್ಲದ ನೈಸರ್ಗಿಕ ಪರಿಸರದ ಕಾರಣ ಈ ಜೀವಿಗಳು ಬೃಹತ್ತಾಗಿ ಬೆಳೆಯುತ್ತವೆ. ಇದನ್ನು ಇನ್ಸುಲಾರ್ ಜೈಗ್ಯಾಂಟಿಸಂ ಅಥವಾ ಐಲ್ಯಾಂಡ್ ಜೈಗ್ಯಾಂಟಿಸಂ ಎಂದು ಕರೆಯುತ್ತಾರೆ. ಇದನ್ನು ಆಮೆಗಳಲ್ಲಿ ಮಾತ್ರವಲ್ಲ ಇನ್ನೂ ಅನೇಕ ಜೀವಿಗಳಲ್ಲಿ ಕಾಣಬಹುದು.
ಹಾಗಾದರೆ ದ್ವೀಪವಾಸಿಗಳಲ್ಲಿ ಈ ಬೃಹತ್ ಗಾತ್ರಕ್ಕೆ ಕಾರಣವೇನು? ವಿಜ್ಞಾನಿಗಳು ಅದಕ್ಕೆ ಅನೇಕ ಕಾರಣಗಳನ್ನು ಊಹಿಸಿದ್ದಾರೆ. ಮೊದಲನೆಯ ಅತಿಮುಖ್ಯ ಕಾರಣವೆಂದರೆ ಅಲ್ಲಿ ಬೇಟೆಗಾರರ ಕೊರತೆ. ದ್ವೀಪಗಳಲ್ಲಿ ಭಾರೀ ಗಾತ್ರದ ಬೇಟೆಗಾರ ಪ್ರಾಣಿಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಸಿಂಹ, ಹುಲಿ, ಚಿರತೆ ಇತ್ಯಾದಿ ಬೃಹತ್ ಮಾರ್ಜಾಲಗಳಾಗಲೀ ತೋಳಗಳಂಥ ಬೇಟೆಗಾರರಾಗಲೀ ದ್ವೀಪಗಳಲ್ಲಿ ಇಲ್ಲ. ಆದ್ದರಿಂದ ಸಸ್ಯಾಹಾರಿಗಳು ನಿರಾತಂಕವಾಗಿ ಅಭಿವೃದ್ಧಿ ಹೊಂದುತ್ತವೆ ಎಂಬುದು ಒಂದು ಊಹೆ. ಇನ್ನೊಂದು ಊಹೆಯೆಂದರೆ ದ್ವೀಪಗಳಲ್ಲಿ ಆಹಾರದ ಲಭ್ಯತೆ ಧಾರಾಳವಾಗಿದ್ದಾಗ ಅದನ್ನು ಬಳಸಿಕೊಂಡು ಜೀವಿಗಳು ದೈತ್ಯಗಾತ್ರಕ್ಕೆ ಬೆಳೆಯುತ್ತವೆ ಎಂಬ ಊಹೆ. ಈ ಎರಡೂ ಊಹೆಗಳು ಒಂದೊಂದು ದೃಷ್ಟಿಕೋನದಿಂದ ನಿಜವೆಂದು ತೋರುತ್ತವೆ. ಇದರ ಬಗ್ಗೆ ಜೆ. ಬ್ರಿಸ್ಟಲ್ ಫೋಸ್ಟರ್ ಎಂಬಾತ 1964ರಲ್ಲಿ ಸಿದ್ಧಾಂತವೊಂದನ್ನು ಮಂಡಿಸಿದ. ಅವನು ನಿರ್ಜನ ದ್ವೀಪಗಳಲ್ಲಿ ವಾಸಿಸುತ್ತಿದ್ದ ಸುಮಾರು 116 ಜಾತಿಯ ಜೀವಿಗಳ ಮೇಲೆ ಅಧ್ಯಯನ ನಡೆಸಿ ಮೇಲ್ಕಂಡ ಸಿದ್ಧಾಂತವನ್ನು ಮಂಡಿಸಿದ. ಆ ವರ್ಷದ “ನೇಚರ್” ನಿಯತಕಾಲಿಕದಲ್ಲಿ ಅವನು “ಎವಲ್ಯೂಶನ್ ಆಫ್ ಮ್ಯಾಮಲ್ಸ್” (ಸಸ್ತನಿಗಳ ವಿಕಾಸ) ಎಂಬ ತಲೆಬರಹದಡಿ ಲೇಖನವನ್ನು ಪ್ರಕಟಿಸಿದ್ದ. ನಂತರ ಈ ಸಿದ್ಧಾಂತವನ್ನು ಸಾಕಷ್ಟು ಬದಲಾಯಿಸಿ, ಕೆಲವು ಅಂಶಗಳನ್ನು ಸೇರಿಸಿ, ಮತ್ತೆ ಕೆಲವನ್ನು ಬದಲಾಯಿಸಿ ರಾಬರ್ಟ್ ಮೆಕಾರ್ಥರ್ ಮತ್ತು ಎಡ್ವರ್ಡ್ ವಿಲ್ಸನ್ ಎಂಬುವವರು “ದ ಥಿಯರಿ ಆಫ್ ಐಲ್ಯಾಂಡ್ ಬಯೋಜಿಯೋಡೈವರ್ಸಿಟಿ” ಎಂಬ ತಲೆಬರಹದಡಿ ಪ್ರಕಟಿಸಿದರು. ನಂತರ 1978ರಲ್ಲಿ ಟೆಡ್ ಜೆ ಕೇಸ್ ಎಂಬಾತ ಇದನ್ನು ಸವಿಸ್ತಾರವಾಗಿ ಪ್ರತಿಪಾದಿಸಿದ. ಫೋಸ್ಟರ್ ನ ಸಿದ್ಧಾಂತದಲ್ಲಿದ್ದ ಚಿಕ್ಕಪುಟ್ಟ ಲೋಪದೋಷಗಳನ್ನು ಆತ ಸರಿಪಡಿಸಿದ.
ಈ ನಿಟ್ಟಿನಲ್ಲಿ ನಮಗೆ ಮೊದಲು ನೆನಪಾಗುವುದೇ ಗ್ಯಾಲಪಗೋಸ್ ದ್ವೀಪದ ದೈತ್ಯ ಆಮೆಗಳು. ಎಲ್ಲೆಡೆ ನಾವು ನೋಡುವ ಚಿಕ್ಕಪುಟ್ಟ ಆಮೆಗಳನ್ನು ಈ ಆಮೆಗಳಿಗೆ ಹೋಲಿಸುವುದಕ್ಕೇ ಸಾಧ್ಯವಿಲ್ಲ. ಲಕ್ಷಾಂತರ ವರ್ಷಗಳಿಂದ ಶತ್ರುಗಳ ಕಾಟವಿಲ್ಲದೆ ಲಭ್ಯವಿರುವ ಧಾರಾಳ ಆಹಾರವನ್ನು ಸೇವಿಸುತ್ತ ಬೃಹದಾಕಾರವಾಗಿ ಬೆಳೆದವು. ಜೊತೆಗೆ ಅವು ದೀರ್ಘಾಯುಷಿಗಳೂ ಆಗಿದ್ದರಿಂದ ಅವುಗಳ ಬೆಳವಣಿಗೆಗೂ ಅದು ಪೂರಕವಾಯಿತು. ಮನುಷ್ಯ ಈ ದ್ವೀಪಕ್ಕೆ ಕಾಲಿಡುವವರೆಗೂ ನಿರಾತಂಕವಾಗಿ ಬದುಕಿದ್ದ ಅವಕ್ಕೆ ಮನುಷ್ಯರ ಆಗಮನದೊಂದಿಗೆ ಶನಿದೆಸೆ ಆರಂಭವಾಯಿತು. ಇವುಗಳ ದೀರ್ಘಾಯುಷ್ಯವನ್ನು ಮನಗಂಡು ಜನ ಅವುಗಳನ್ನು ಹಡಗಿನಲ್ಲಿ ಪ್ರಯಾಣ ಹೋಗುವಾಗ ಅವುಗಳನ್ನು ಕೊಂಡೊಯ್ಯುತ್ತಿದ್ದರು. ಅದರಿಂದ ಅವರಿಗೆ ಬೇಕೆನಿಸಿದಾಗ ಅವುಗಳನ್ನು ಕೊಂದು ತಾಜಾ ಮಾಂಸ ಪಡೆಯಬಹುದಿತ್ತು. ಈ ಬೇಟೆಗಳಿಂದಾಗಿ ಒಂದೊಮ್ಮೆ ವಿನಾಶದಂಚಿಗೆ ತಲುಪಿದ್ದ ಈ ದೈತ್ಯ ಆಮೆಗಳಿಂದು ಸರ್ಕಾರದ ರಕ್ಷಣೆಯಿಂದಾಗಿ ಕೊಂಚ ಚೇತರಿಸಿಕೊಳ್ಳುತ್ತಿವೆ.
ಇಂಡೋನೇಷ್ಯಾದ ಕೊಮೋಡೋ ದ್ವೀಪದಲ್ಲಿ ಕೊಮೋಡೋ ಡ್ರ್ಯಾಗನ್ ಎಂಬ ಬೃಹದಾಕಾರದ ಹಲ್ಲಿಗಳಿವೆ. ನಾವೆಲ್ಲ ನಮ್ಮ ಮನೆಯಲ್ಲಿ ಗೋಡೆಯ ಮೇಲೆ ಕೆಲವೇ ಇಂಚುಗಳಷ್ಟು ಉದ್ದವಿರುವ ಹಲ್ಲಿಗಳಿಂದ ಹಿಡಿದು ನಾಲ್ಕೈದು ಅಡಿ ಉದ್ದ ಮತ್ತು ನಾಲ್ಕೈದು ಕಿಲೋ ತೂಕವಿರುವ ಉಡಗಳನ್ನು ಮಾತ್ರ ನೋಡಿದ್ದೇವೆ. ಆದರೆ ಕೊಮೋಡೋ ಡ್ರ್ಯಾಗನ್ ಗಳು ಹತ್ತು ಅಡಿಗಿಂತ ಹೆಚ್ಚು ಉದ್ದವಿದ್ದು ಐವತ್ತು ಕಿಲೋ ತೂಕ ಮೀರುತ್ತವೆ. ಇಂದು ಭೂಮಿಯಲ್ಲಿ ಅಸ್ತಿತ್ವದಲ್ಲಿರುವ ಅತಿ ದೊಡ್ಡ ಹಲ್ಲಿಯಾಗಿದೆ. ಗುಂಪುಗುಂಪಾಗಿ ಸಂಚರಿಸುವ ಈ ಹಲ್ಲಿಗಳಿಗೆ ಕಣ್ಣು ಮತ್ತು ಕಿವಿಗಳು ಅಷ್ಟೇನೂ ಚುರುಕಾಗಿಲ್ಲ. ವಾಸನೆಯಿಂದಲೇ ತಮ್ಮ ಆಹಾರವನ್ನು ಗುರುತಿಸುವ ಇವು ಸತ್ತು ಕೊಳೆಯುತ್ತಿರುವ ಮಾಂಸದೆಡೆಗೆ ಬಲುಬೇಗ ಆಕರ್ಷಿತಗೊಳ್ಳುತ್ತವೆ. ಜೊತೆಗೆ ಗುಂಪಾಗಿ ಸೇರಿ ಬೇಟೆಯಾಡುವುದೂ ಇದೆ.
ಡೋಡೋ ಹಕ್ಕಿಯ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಮಾರಿಷಸ್ ದ್ವೀಪಗಳಲ್ಲಿ ಹದಿನೇಳನೇ ಶತಮಾನದ ಕೊನೆಯವರೆಗೂ ಬದುಕಿದ್ದ ಈ ಹಾರಲಾರದ ಬೃಹತ್ ಹಕ್ಕಿ ಪಾರಿವಾಳದ ಕುಟುಂಬಕ್ಕೆ ಸೇರಿದ್ದೆಂದರೆ ನಂಬಲು ಕಷ್ಟ. ಏಕೆಂದರೆ ಕಾಗೆಯ ಗಾತ್ರದ, ಚತುರ ಹಾರಾಟಗಾರನಾದ ಪಾರಿವಾಳಕ್ಕೂ ಟರ್ಕಿ ಕೋಳಿಯ ಗಾತ್ರದ, ಇಪ್ಪತ್ತು ಕಿಲೋ ತೂಕದ ಹಾರಲಾರದ ಮೊದ್ದು ಹಕ್ಕಿಗಳಿಗೂ ಎತ್ತಣಿಂದೆತ್ತ ಸಂಬಂಧ ಎನ್ನಿಸದಿರದು. ಆದರೆ ಅವು ಜೀವಶಾಸ್ತ್ರ ವಿಂಗಡಣೆಯಲ್ಲಿ ಪಾರಿವಾಳಗಳ ಕುಟುಂಬಕ್ಕೇ ಸೇರುತ್ತವೆ. ಇವು ಸಹ ಶತ್ರುಗಳ ಬಾಧೆಯಿಲ್ಲದ ದ್ವೀಪದಲ್ಲಿ ನಿರಾತಂಕವಾಗಿ ಬದುಕಿದ್ದವು. ಆದರೆ ಮನುಷ್ಯ ಇಲ್ಲಿಗೆ ಕಾಲಿಟ್ಟ ಕೂಡಲೇ ಅವುಗಳಿಗೂ ದುರ್ದೆಸೆ ಶುರುವಾಯಿತು. ಅದುವರೆಗೆ ಮನುಷ್ಯನನ್ನು ಕಂಡೇ ಗೊತ್ತಿಲ್ಲದ ಆ ಪೆದ್ದು ಹಕ್ಕಿಗಳಿಗೆ ಅವನು ಅಪಾಯಕಾರಿ, ಅವನಿಂದ ದೂರವಿರಬೇಕೆಂದು ಗೊತ್ತೇ ಇರಲಿಲ್ಲ. ಅಮಾಯಕರಂತೆ ಹತ್ತಿರ ಬಂದು ನಿಲ್ಲುತ್ತಿದ್ದ ಇವುಗಳನ್ನು ನಿರಾಯಾಸವಾಗಿ ದೊಣ್ಣೆಯಿಂದ ಬಡಿದೇ ಕೊಲ್ಲುತ್ತಿದ್ದರು. ಜೊತೆಗೆ ಮನುಷ್ಯರ ಜೊತೆ ಬಂದ ಬೆಕ್ಕು, ಇಲಿ, ಹೆಗ್ಗಣಗಳು ಸಹ ಇವುಗಳ ಮೊಟ್ಟೆ ಮತ್ತು ಮರಿಗಳನ್ನು ತಿಂದು ಮುಗಿಸಿದವು. ಹಾಗಾಗಿ ಈ ಪಕ್ಷಿಗಳು 1781ರಲ್ಲಿ ಈ ಜಗತ್ತಿಗೆ ಗುಡ್ ಬೈ ಹೇಳಿದವು.
ಜಗತ್ತಿನ ಪ್ರಮುಖ ದ್ವೀಪಗಳ ಬಗೆಗೆ ಮಾತನಾಡುವಾಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗಳನ್ನು ಕಡೆಗಣಿಸುವಂತೆಯೇ ಇಲ್ಲ. ಜಗತ್ತಿನ ಮುಖ್ಯ ಭೂಭಾಗದಿಂದ ದೂರವಾಗಿ ನಿಂತಿರುವ ಈ ದ್ವೀಪಗಳು ಬೃಹತ್ ಗಾತ್ರದ ಜೀವಿಗಳಿಗೆ ಬಹುಕಾಲದಿಂದ ನೆಲೆವೀಡಾದ ದ್ವೀಪಗಳು. ನ್ಯೂಜಿಲೆಂಡ್ ಅಂತೂ ದೈತ್ಯಗಾತ್ರದ ಹಕ್ಕಿಗಳ ನೆಲೆವಿಡಾಗಿ ಮೊದಲಿನಿಂದಲೂ ಸುಪ್ರಸಿದ್ಧವಾಗಿತ್ತು. ಮೋವಾ ಎಂಬ ಹಕ್ಕಿ ತೀರಾ ನಾಲ್ಕೈದು ಶತಮಾನಗಳ ಹಿಂದಿನವರೆಗೂ ಇಲ್ಲಿ ಬದುಕಿತ್ತು. ಆದರೆ ಅದೂ ಸಹ ಮನುಷ್ಯರ ದುರಾಕ್ರಮಣಕ್ಕೆ ಸಿಲುಕಿ ನಿರ್ನಾಮವಾಯಿತು. ಜೊತೆಗೆ ಮಡಗಾಸ್ಕರ್ ದ್ವೀಪದಲ್ಲಿ ವಾಸವಾಗಿದ್ದ ಎಲಿಫೆಂಟ್ ಬರ್ಡ್ ಎಂಬ ಬೃಹತ್ ಹಕ್ಕಿಯೂ ನಾನಾ ಕಾರಣಗಳಿಂದ ನಿರ್ನಾಮವಾಯಿತು. ಈ ಹಕ್ಕಿಗಳೆಲ್ಲ ಹನ್ನೆರಡು ಅಡಿ ಎತ್ತರವಿದ್ದು, ಇನ್ನೂರರಿಂದ ನಾಲ್ಕುನೂರು ಕಿಲೋ ತೂಗುವ ದೈತ್ಯರಾಗಿದ್ದವು.
ನ್ಯೂಜಿಲೆಂಡ್ ದ್ವೀಪಗಳಲ್ಲಿ ಈಗಲೂ ಬದುಕಿರುವ ಗಿಳಿ ಜಾತಿಯೊಂದಿದೆ. ಕಕಾಪೋ ಎಂದು ಕರೆಯಲಾಗುವ ಈ ಗಿಳಿ ಹಾರಲಾರದು. ತನ್ನ ನಿಶಾಚರಿ ಸ್ವಭಾವದಿಂದಾಗಿ ಔಲ್ ಪ್ಯಾರಟ್ ಎಂದೇ ಹೆಸರಾಗಿರುವ ಈ ಗಿಳಿ ಗಿಳಿಗಳ ಬಳಗದಲ್ಲೇ ಅತ್ಯಂತ ಭಾರವಾದ ಗಿಳಿಯಾಗಿದೆ. ಮೂರು ನಾಲ್ಕು ಕಿಲೋವರೆಗೆ ತೂಗುವ ಈ ಗಿಳಿ ಹಾರಲಾರದು.  ಅದೇ ಇದಕ್ಕೆ ಮುಳುವಾಗಿದೆ. ಮನುಷ್ಯರೊಂದಿಗೆ ಈ ದ್ವೀಪಕ್ಕೆ ಕಾಲಿಟ್ಟ ಇಲಿ, ಹೆಗ್ಗಣ, ಬೆಕ್ಕು, ನಾಯಿ ಇತ್ಯಾದಿಗಳ ಆಕ್ರಮಣಕ್ಕೆ ಸಿಲುಕಿ ಅಲ್ಪಸಂಖ್ಯಾತವಾಗಿರುವ ಈ ಗಿಳಿಗಳು ಸಹ ಕೊನೆಯ ದಿನಗಳನ್ನು ಎಣಿಸುತ್ತಿವೆ. ಇಂದು ಇವುಗಳ ಸಂರಕ್ಷಣೆಗಾಗಿ ಕಾಡ್ ಫಿಶ್, ಆ್ಯಂಕರ್ ಮತ್ತು ಲಿಟ್ಲ್ ಬ್ಯಾರಿಯರ್ ಎಂಬ ಮೂರು ದ್ವೀಪಗಳಲ್ಲಿ ಇವುಗಳನ್ನು ಸಂರಕ್ಷಿಸಲಾಗುತ್ತಿದೆ. ಈ ದ್ವೀಪಗಳಲ್ಲಿ ಯಾವುದೇ ಮಾಂಸಾಹಾರಿಗಳ ಕಾಟ ಇಲ್ಲದಿರುವುದರಿಂದ ಈ ಹಕ್ಕಿಗಳ ಸ್ಥಿತಿಗತಿ ಸುಧಾರಿಸಬಹುದೆಂಬ ಆಶಾಭಾವನೆ ಉಂಟಾಗಿದೆ.
ಆಫ್ರಿಕದ ಕೆಳಗಿರುವ ಮಡಗಾಸ್ಕರ್ ಎಂಬ ದ್ವೀಪ ಕೂಡ ಅನೇಕ ವರ್ಷಗಳ ತನಕ ಮಾನವನ ವಸಾಹತು ಇಲ್ಲದೆ ಸುಭಿಕ್ಷವಾಗಿದ್ದ ದ್ವೀಪ. ಇಲ್ಲಿ ಸಹ ಅನೇಕಾನೇಕ ದೈತ್ಯ ಪ್ರಾಣಿಗಳು ಬಾಳಿಬದುಕಿ ಇಂದು ನಶಿಸಿಹೋಗಿವೆ. ಮಡಗಾಸ್ಕರ್ ದ್ವೀಪ ಈಗಲೂ ಅನೇಕ ಪ್ರಭೇದಗಳ ಪ್ರೈಮೇಟುಗಳಿಗೆ ಪ್ರಸಿದ್ಧ. ಲೀಮರ್, ಸಿಫಾಕಾ, ಬುಶ್ ಬೇಬಿ, ಆಯ್ ಆಯ್, ಇಂದ್ರಿ ಮುಂತಾದ ಮಂಗಗಳಿಗಿಂತ ತುಸು ಪ್ರಾಚೀನವಾದ ಪ್ರೈಮೇಟುಗಳಿಗೆ ಪ್ರಸಿದ್ಧವಾದ ದ್ವೀಪವಿದು. ಈ ದ್ವೀಪದಲ್ಲಿ ಹಿಂದೊಮ್ಮೆ ಗೋರಿಲ್ಲಾದಷ್ಟು ದೊಡ್ಡದಾಗಿದ್ದ ಸ್ಲಾತ್ ಲೀಮರ್ ಒಂದು ವಾಸವಾಗಿತ್ತು.
ಇದೇ ರೀತಿ ಡೀಪ್ ವಾಟರ್ ಜೈಗ್ಯಾಂಟಿಸಂ ಎಂಬ ಇನ್ನೊಂದು ವಿಧದ ಪ್ರಕ್ರಿಯೆಯಿದೆ. ಇದರಲ್ಲಿ ಸಾಗರದಾಳದ ಜೀವಿಗಳು ದೈತ್ಯಗಾತ್ರಕ್ಕೆ ಬೆಳೆಯುವುದನ್ನು ನೋಡಬಹುಡು. ನೆಲದ ಮೇಲೆ ವಾಸಿಸುವ ಪ್ರಾಣಿಗಳಿಗೆ ತಮ್ಮದೇ ಆದ ಇತಿಮಿತಿಗಳಿವೆ. ಗುರುತ್ವಾಕರ್ಷಣೆಯ ಪರಿಣಾಮವಾಗಿ ನೆಲದ ಮೇಲೆ ವಾಸಿಸುವ ಪ್ರಾಣಿಗಳು ಒಂದು ಮಿತಿಯ ನಂತರ ಬೆಳೆಯಲಾರವು. ಒಳ ಅಸ್ಥಿಪಂಜರವಿಲ್ಲದ ಅಕಶೇರುಕಗಳ ವಿಷಯದಲ್ಲಂತೂ ಇದು ಮತ್ತೂ ಹೆಚ್ಚು. ಒಂದು ನಿರ್ದಿಷ್ಟ ತೂಕದ ನಂತರ ಜೀವಿಯ ದೇಹ ತನ್ನ ತೂಕಕ್ಕೆ ತಾನೇ ಕುಸಿಯುತ್ತದೆ. ಅಸ್ಥಿಪಂಜರವನ್ನು ಹೊಂದುವ ಮೂಲಕ ಕಶೇರುಕಗಳು ಸ್ವಲ್ಪಮಟ್ಟಿಗೆ ಈ ಸಮಸ್ಯೆಯನ್ನು ನಿವಾರಿಸಿಕೊಂಡಿವೆ. ಆದರೆ ಇದು ಸಮಸ್ಯೆಗೆ ಸಂಪೂರ್ಣ ಪರಿಹಾರವಂತೂ ಅಲ್ಲ. ಅಕಶೇರುಕಗಳಲ್ಲಂತೂ ಕೆಲವೇ ಇಂಚುಗಳಷ್ಟು ಅಥವಾ ಅಬ್ಬಬ್ಬಾ ಎಂದರೆ ಒಂದು ಅಡಿ ಗಾತ್ರದ ಕೀಟಗಳನ್ನು ನೋಡಬಹುದು. ಆದರೆ ಅವುಗಳ ತೂಕವಂತೂ ಐವತ್ತು ಗ್ರಾಂ ಸಹ ಮೀರುವುದಿಲ್ಲ! ಕೀಟಗಳಲ್ಲೇ ಅತ್ಯಂತ ದೊಡ್ಡದಾದ ಗೋಲಿಯತ್ ಓಡುಹುಳ (ಬೀಟಲ್) ಸಹ ಐವತ್ತು ಗ್ರಾಂ ಮೀರುವುದಿಲ್ಲ. ಆದರೆ ನೀರಿನಲ್ಲಿ ಆ ಸಮಸ್ಯೆ ಬರುವುದೇ ಇಲ್ಲ. ನೀರಿನ ಬಲ ಇರುವುದರಿಂದ ಗುರುತ್ವಾಕರ್ಷಣ ಬಲದ ಬಗೆಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಕಿಲ್ಲ. ನೀವು ಬಾವಿಯಿಂದ ನೀರು ಸೇದಿದ್ದರೆ ಇದರ ಅನುಭವ ನಿಮಗಾಗಿರುತ್ತದೆ. ಕೊಡ ನೀರಿನಲ್ಲಿ ಮುಳುಗಿರುವಷ್ಟು ಹೊತ್ತೂ ಸುಲಭವಾಗಿ ಎಳೆಯಬಹುದು. ಅದು ಹಗುರವಿದ್ದಂತೆ ನಿಮಗೆ ಭಾಸವಾಗುತ್ತದೆ. ಆದರೆ ಒಮ್ಮೆ ಕೊಡ ನೀರಿನಿಂದ ಮೇಲೆ ಬಂದ ಕೂಡಲೇ ಅದರ ತೂಕ ಹಠಾತ್ತಾಗಿ ಜಾಸ್ತಿಯಾಗುತ್ತದೆ. ವಾಸ್ತವವಾಗಿ ಅದು ಜಾಸ್ತಿಯಾಗಿರುವುದಿಲ್ಲ. ನೀರಿನೊಳಗೆ ಕೊಡ ಇರುವವರೆಗೂ ನೀರು ಅದನ್ನು ಎತ್ತಿಹಿಡಿದಿರುತ್ತದೆ. ಆದ್ದರಿಂದ ನಿಮಗೆ ಸೇದುವುದು ಸುಲಭವೆನ್ನಿಸುತ್ತದೆ ಅಷ್ಟೆ. ನೀರಿನಲ್ಲಿ ವಾಸಿಸುವ ಪ್ರಾಣಿಗಳಿಗೂ ಇದು ಅನ್ವಯಿಸುತ್ತದೆ. ಆದ್ದರಿಂದಲೇ ತಿಮಿಂಗಿಲಗಳು ಬೃಹದಾಕಾರವಾಗಿ ಬೆಳೆಯುವುದು. ಆನೆಗಳ ಹತ್ತಾರು ಪಟ್ಟು ತೂಕವಿರುವ ಈ ದೈತ್ಯಜೀವಿಗಳು ಅಪ್ಪಿತಪ್ಪಿ ದಡಕ್ಕೆ ಬಂದರೆ ಮರಳಿ ನೀರಿಗೆ ಹೋಗಲಾಗದೆ ಒಮ್ಮೊಮ್ಮೆ ಸತ್ತೇಹೋಗುತ್ತವೆ. ಕೆಲವು ಸಮುದ್ರತೀರಗಳಲ್ಲಿ ಒಮ್ಮೊಮ್ಮೆ ಹಾಗೆ ಸತ್ತ ತಿಮಿಂಗಿಲಗಳನ್ನು ಕಾಣಬಹುದು.
ಇದು ಕಶೇರುಕಗಳ ಮಾತಾದರೆ ಅಕಶೇರುಕ ಪ್ರಪಂಚಕ್ಕೂ ಇದೇ ಮಾತು ಅನ್ವಯಿಸುತ್ತದೆ. ನೆಲದ ಮೇಲೆ ಐವತ್ತು ಗ್ರಾಂ ಮೀರದ ಕೀಟಗಳನ್ನಷ್ಟೇ ನೋಡಿರುವ ನಾವು ಸಾಗರದ ದೈತ್ಯರನ್ನು ನೋಡಿದರೆ ದಂಗಾಗುವುದು ಖಚಿತ. ಅಂಟಾರ್ಕ್ಟಿಕಾದ ಸುತ್ತಮುತ್ತಲಿನ ಸಾಗರದಲ್ಲಿರುವ ದೈತ್ಯ ಸ್ಕ್ವಿಡ್ ಪ್ರಭೇದವೊಂದು (ಇದನ್ನು ಇಂಗ್ಲಿಷ್ ನಲ್ಲಿ ಕೊಲೋಸ್ಸಲ್ ಸ್ಕ್ವಿಡ್ ಎನ್ನುತ್ತಾರೆ. ಕೊಲೋಸ್ಸಲ್ ಎಂದರೆ ಮಹಾದೈತ್ಯ ಎಂದರ್ಥ) ಭೂಮಿಯ ಮೇಲೆ ಇಂದು ಬದುಕಿರುವ ಅತಿದೊಡ್ಡ ಅಕಶೇರುಕ ಪ್ರಾಣಿ ಎನ್ನಿಸಿಕೊಂಡಿದೆ. ಇದು ಸುಮಾರು ನೂರಿನ್ನೂರು ಕಿಲೋ ತೂಕವಿದ್ದು, ಕೆಲವೊಂದು ಭಾರೀ ಸ್ಕ್ವಿಡ್ ಗಳು ಐನೂರು ಕಿಲೋ ಸಹ ಮೀರುತ್ತವೆ. ಅವುಗಳ ದೇಹವೇ ಏಳರಿಂದ ಎಂಟು ಅಡಿ ಉದ್ದವಿದ್ದು, ಆಕ್ಟೋಪಸ್ ನ ತೋಳುಗಳಂಥ ತೋಳುಗಳು ಸಹ ಎಂಟಡಿ ಉದ್ದವಿರುತ್ತವೆ. ಸಾಗರದಲ್ಲಿ ಸೂರ್ಯರಶ್ಮಿಯೇ ತಲುಪದ ಸಾವಿರಾರು ಅಡಿಗಳ ಆಳದಲ್ಲಿ ಈ ಜೀವಿಗಳು ವಾಸಿಸುತ್ತವೆ. ಇದರ ಕಣ್ಣುಗಳು ಸಹ ಹತ್ತಿರ ಹತ್ತಿರ ಒಂದು ಅಡಿಯಷ್ಟು ಅಗಲವಿದ್ದು, ಜೀವಜಗತ್ತಿನಲ್ಲಿ ನಮಗೆ ಗೊತ್ತಿರುವ ಅತಿದೊಡ್ಡ ಕಣ್ಣುಗಳು ಇವುಗಳದ್ದೇ.
ಗದ್ದೆ, ಕೆರೆಗಳ ಬಳಿ ಕಂಡುಬರುವ ಏಡಿಗಳು ಎಲ್ಲರಿಗೂ ಚಿರಪರಿಚಿತ. ನಾಲ್ಕೈದು ಇಂಚು ಉದ್ದವಿರುವ ಈ ಏಡಿಗಳನ್ನು ಅನೇಕ ಕಡೆ ತಿನ್ನುತ್ತಾರೆ. ಆದರೆ ಈ ಏಡಿಗಳಲ್ಲೇ ದೈತ್ಯ ಏಡಿ ಎಷ್ಟು ದೊಡ್ಡದಿರಬಹುದು? ಜಪಾನಿನ ಸುತ್ತಲಿನ ಸಮುದ್ರಗಳಲ್ಲಿ ಕಾಣಸಿಗುವ ಸ್ಪೈಡರ್ ಕ್ರ್ಯಾಬ್ ಎಂಬ ಏಡಿಯನ್ನು ಕಂಡರೆ ನೀವು ಹೌಹಾರುವುದಂತೂ ಖಚಿತ. ಈ ಬೃಹತ್ ಏಡಿಗಳ ಕಾಲುಗಳೂ ಸೇರಿ ಎಂಟರಿಂದ ಹತ್ತು ಅಡಿ ವಿಸ್ತಾರವಾಗುತ್ತವೆ! ಜೊತೆಗೆ ಇಪ್ಪತ್ತು ಕಿಲೋ ತನಕ ತೂಗುತ್ತವೆ. ನಮ್ಮ ದೇಶದಲ್ಲೇ ಅಂಡಮಾನ್ ದ್ವೀಪಗಳಲ್ಲಿರುವ ಕೊಕೊನಟ್ ಕ್ರ್ಯಾಬ್ ಅನ್ನು ಸಹ ಇದಕ್ಕೆ ಉದಾಹರಣೆಯಾಗಿ ಕೊಡಬಹದು. ಮೂರರಿಂದ ನಾಲ್ಕು ಅಡಿ ಉದ್ದದ ಕಾಲುಗಳನ್ನು ಹೊಂದಿದ ಈ ಏಡಿ ನಾಲ್ಕು ಕಿಲೋ ತೂಗುತ್ತದೆ. ಜೊತೆಗೆ ತೆಂಗಿನ ಕಾಯಿಯ ಸಿಪ್ಪೆ ಮತ್ತು ಚಿಪ್ಪನ್ನು ಕತ್ತರಿಸಲು ಬಲಿಷ್ಠವಾದ ಕೊಂಬುಗಳನ್ನು ಸಹ ಇದು ಪಡೆದಿದೆ.
ಕಿಂಗ್ ಆಫ್ ಹೆರ್ರಿಂಗ್ ಎಂದು ಕರೆಯಲ್ಪಡುವ ಓರ್ಫಿಶ್ ಎಂಬ ಒಂದು ಪುರಾತನ ಮೀನು ಸಹ ಸಾಗರದ ಆಳದಲ್ಲಿ ವಾಸಿಸುತ್ತದೆ. ಈ ಮೀನುಗಳು ಇಪ್ಪತ್ತು ಅಡಿಗಳ ತನಕ ಬೆಳೆಯಬಲ್ಲವು. ಮೂವತ್ತು ಅಡಿ ಉದ್ದ ಮತ್ತು ಇನ್ನೂರು ಕಿಲೋ ತೂಗುವ ಮೀನುಗಳು ಈ ಜಾತಿಯಲ್ಲಿ ಸರ್ವೇಸಾಮಾನ್ಯ. ಇದುವರೆಗೆ ಪತ್ತೆಯಾದ ಅತಿದೊಡ್ಡ ಓರ್ಫಿಶ್ ಮೂವತ್ತಾರು ಅಡಿ ಉದ್ದವಿದ್ದು, 272 ಕಿಲೋ ತೂಕವಿತ್ತು. ಅನೇಕ ಸಾಗರ ಸರ್ಪಗಳ ಕಥೆಗೆ ಇದೇ ಮೀನು ಕಾರಣವಾಗಿರಬೇಕೆಂಬ ಊಹೆಯಿದೆ. ಏಕೆಂದರೆ ಇಪ್ಪತ್ತು ಅಡಿಗಳವರೆಗೆ ಬೆಳೆಯುವ ಇದು ದೂರದಿಂದ ನೋಡಿದರೆ ಹಾವಿನಂತೆಯೇ ಕಾಣುತ್ತದೆ. ಹಡಗುಗಳಲ್ಲಿ ಪ್ರಯಾಣಿಸುವವರು ದೂರದಿಂದ ಈ ಮೀನುಗಳನ್ನು ನೋಡಿಯೇ ಭಯಭೀತರಾಗಿ ರಾಕ್ಷಸ ಸರ್ಪಗಳನ್ನು ಕಲ್ಪಿಸಿಕೊಂಡು ಕಥೆ ಹೆಣೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಹಾಗಾದರೆ ಆಳ ಸಮುದ್ರದಲ್ಲೇಕೆ ಜೀವಿಗಳು ಬೃಹದಾಕಾರ ತಾಳುತ್ತವೆ? ಇದಕ್ಕೂ ಅನೇಕ ಸಾಧ್ಯತೆಗಳು ಕಾಣುತ್ತವೆ. ಮೊದಲನೆಯದಾಗಿ ಕಾಣುವುದು ಆಳ ಸಮುದ್ರದ ಅತಿಯಾದ ಶೈತ್ಯ. ಉಷ್ಣತೆ ಕಡಿಮೆಯಾದಂತೆಲ್ಲ ಜೀವಿಗಳಿಗೆ ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಂಡು ಜೀವವುಳಿಸಿಕೊಳ್ಳುವುದು ದೊಡ್ಡ ಸವಾಲು. ಪ್ರಾಣಿಗಳ ದೇಹಗಾತ್ರ ದೊಡ್ಡದಾದಂತೆಲ್ಲ ಅವುಗಳ ತೂಕಕ್ಕೆ ಹೋಲಿಸಿದರೆ ಅವು ಕಳೆದುಕೊಳ್ಳುವ ಉಷ್ಣತೆ ಅತ್ಯಲ್ಪವಾಗುತ್ತದೆ. ಆದ್ದರಿಂದ ಎಲ್ಲೆಲ್ಲಿ ವಿಪರೀತ ಶೀತವಿದೆಯೋ ಅಲ್ಲೆಲ್ಲ ಪ್ರಾಣಿಗಳು ಅಗಾಧ ಗಾತ್ರಕ್ಕೆ ಬೆಳೆಯುತ್ತವೆ. ಹೀಗಾಗಿಯೇ ಸೂರ್ಯನ ಬೆಳಕೇ ಸೋಕದ ಆಳಸಾಗರದ ಪ್ರಾಣಿಗಳು ಅಗಾಧ ಗಾತ್ರಕ್ಕೆ ಬೆಳೆಯುತ್ತವೆ. ಇದೇ ಕಾರಣಕ್ಕೆ ಸೈಬೀರಿಯನ್ ಹುಲಿಗಳು ಬಂಗಾಳದ ಹುಲಿ, ಚೀನಾ ಹುಲಿ ಅಥವಾ ಮಲಯಾ, ಸುಮಾತ್ರದ ಹುಲಿಗಳಿಗಿಂತ ದೊಡ್ಡ ಗಾತ್ರಕ್ಕೆ ಬೆಳೆಯುವುದು. ಧೃವಪ್ರದೇಶಗಳಲ್ಲಿ ವಾಸಿಸುವ ಸೀಲ್, ವಾಲ್ರಸ್ ಮತ್ತು ಸಮುದ್ರ ಸಿಂಹ (ಸೀ ಲಯನ್) ಗಳು ಸಹ ಬೃಹದ್ಗಾತ್ರದ ಜೀವಿಗಳೇ. ಹಿಮಕರಡಿಗಳು ಸಹ ನಾವು ನಮ್ಮ ಕಾಡುಗಳಲ್ಲಿ ನೋಡುವ ಕರಡಿಗಳ ಎರಡು-ಮೂರು ಪಟ್ಟು ದೊಡ್ಡದಾಗಿರುವುದಕ್ಕೂ ಇದೇ ಕಾರಣ.
ವೂಲೀ ಮ್ಯಾಮತ್ ಎಂಬ ಪ್ರಾಚೀನಕಾಲದ ಮಹಾಗಜಗಳ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಹತ್ತು ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಈ ಆನೆಗಳು ಸಹ ಹೆಚ್ಚಾಗಿ ಶೀತಪ್ರದೇಶಗಳಲ್ಲಿ ಕಾಣಸಿಗುತ್ತಿದ್ದವು. ಉದ್ದನೆಯ ಕೂದಲಿನ ಜೊತೆಗೆ ಭಾರೀ ಶರೀರ ಕೂಡ ಅವುಗಳಿಗೆ ದೇಹದ ಉಷ್ಣತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತಿತ್ತು.
ಬೃಹದ್ಗಾತ್ರದ ಜೀವಿಗಳ ವಿಷಯಕ್ಕೆ ಬಂದರೆ ಇಂದು ಭೂಮಿಯಲ್ಲಿ ಅಂಥ ಜೀವಿಗಳ ಅಸ್ತಿತ್ವ ಕಡಿಮೆಯೆಂದೇ ಹೇಳಬಹುದು. ಒಂದಲ್ಲ ಒಂದು ಕಾರಣದಿಂದ ಈ ಜೀವಿಗಳು ನಿರ್ವಂಶವಾಗಿ ಇಂದು ಅವುಗಳ ಚಿಕ್ಕ ಪ್ರಭೇದಗಳು ಮಾತ್ರ ಉಳಿದುಕೊಂಡಿವೆ. ತಿಮಿಂಗಿಲಗಳನ್ನು ಹೊರತುಪಡಿಸಿ ಬೇರೆಲ್ಲ ಜೀವಿವರ್ಗಗಳಲ್ಲೂ ಅವುಗಳ ದೈತ್ಯ ಪ್ರಭೇದಗಳು ಇಂದು ಅಳಿದುಹೋಗಿವೆ. ಇದಕ್ಕೆ ಮ್ಯಾಮತ್ ಗಳೇ ಅತ್ಯುತ್ತಮ ಉದಾಹರಣೆ. ಜೊತೆಗೆ ಬಲೂಚಿತೇರಿಯಂ ಎಂಬ ದೈತ್ಯ ಖಡ್ಗಮೃಗವನ್ನೂ ಇದರ ಜೊತೆಗೆ ಹೆಸರಿಸಬಹುದು. ಜಿರಾಫೆಯಷ್ಟು ಎತ್ತರವಿದ್ದ, ಇಪ್ಪತ್ತೈದು ಟನ್ ತನಕ ತೂಕವಿದ್ದ ಈ ಮಹಾದೈತ್ಯ ಪ್ರಾಣಿ ಭೂಮಿಯ ಮೇಲೆ ಯಾವುದೇ ಕಾಲಘಟ್ಟದಲ್ಲಿ ಬದುಕಿದ್ದ ಅತಿದೊಡ್ಡ ನೆಲವಾಸಿ ಸಸ್ತನಿಯೆಂದು ಹೆಸರಾಗಿದೆ. ಹಾಗೆಯೇ ಇಂದು ಅಮೆರಿಕ ಮತ್ತು ಯೂರೋಪಿನ ಹುಲ್ಲುಗಾವಲುಗಳಲ್ಲಿ ವಾಸವಿರುವ ಕಾಡೆತ್ತು (ಬೈಸನ್) ಗಳು ಸಹ ಹಿಂದೊಂದು ಕಾಲದಲ್ಲಿದ್ದ ಕಾಡೆತ್ತುಗಳಿಗಿಂತ ಚಿಕ್ಕವೇ. ಇಂದಿನವು ಒಂದು ಟನ್ ತೂಗಿದರೆ ಅಂದಿನವು ಎರಡು ಟನ್ ಮೀರುತ್ತಿದ್ದವು.
ಮಾರ್ಜಾಲಗಳ ಕುಟುಂಬದಲ್ಲಿ ಇಂದು ಬದುಕಿರುವ ಅತಿದೊಡ್ಡ ಬೆಕ್ಕೆಂದರೆ ಸೈಬೀರಿಯಾದ ಹುಲಿ. ಗಂಡು ಹುಲಿಗಳು ಸರಾಸರಿ ಮುನ್ನೂರು ಕಿಲೋ ತೂಗುತ್ತವೆ ಮತ್ತು ಹನ್ನೆರಡು ಅಡಿ ಉದ್ದವಿರುತ್ತವೆ. ಆದರೆ ಹಿಂದೆ ಅಸ್ತಿತ್ವದಲ್ಲಿದ್ದ ಸ್ಮೈಲೋಡಾನ್ (ಸೇಬರ್ ಟೂತ್ಡ್ ಕ್ಯಾಟ್ ಅಥವಾ ಕತ್ತಿಯಂಥ ಹಲ್ಲನ್ನು ಹೊಂದಿದ್ದ ಬೆಕ್ಕು) ಎಂಬ ಬೆಕ್ಕು ಐನೂರು ಕಿಲೋ ತೂಗುತ್ತಿದ್ದವು. ಜೊತೆಗೆ ಅಮೆರಿಕದ ಕೇವ್ ಲಯನ್ (ಗುಹಾಸಿಂಹ) ಗಳು ಸಹ ಹೆಚ್ಚು ಕಡಿಮೆ ಸೈಬೀರಿಯಾದ ಹುಲಿಗಳಷ್ಟೇ ದೊಡ್ಡದಿದ್ದವು.
ಮತ್ಸ್ಯ ಪ್ರಭೇದಗಳಲ್ಲಿ ಇಂದು ಬದುಕಿರುವ ಅತಿದೊಡ್ಡ ಮೀನೆಂದರೆ ವ್ಹೇಲ್ ಶಾರ್ಕ್. ನಲವತ್ತು ಅಡಿ ಉದ್ದ ಮತ್ತು ಇಪ್ಪತ್ತು ಟನ್ ತೂಕವಿರುವ ಈ ಶಾರ್ಕ್ ಗಳು ಬೇಟೆಗಾರರಲ್ಲ. ಸಾಗರದ ನೀರನ್ನು ಸೋಸಿ ಚಿಕ್ಕಪುಟ್ಟ ಜೀವಿಗಳನ್ನು ನುಂಗಿ ಬದುಕುವಂಥದ್ದು. ಆದರೆ ಪ್ರಾಚೀನಕಾಲದಲ್ಲಿ ಬದುಕಿದ್ದ ಮೆಗಲೋಡಾನ್ ಎಂಬ ಭಾರೀ ಗಾತ್ರದ ಶಾರ್ಕ್ ಅರವತ್ತೈದು ಅಡಿಗೂ ಮೀರಿ ಉದ್ದವಿತ್ತು ಹಾಗೂ ಎಪ್ಪತ್ತು ಟನ್ ತೂಕ ಮುಟ್ಟುತ್ತಿತ್ತು. ಅದರ ದವಡೆಯನ್ನು ಅಗಲಿಸಿ ಹಿಡಿದರೆ ಅದರ ನಡುವೆ ಮನುಷ್ಯನೊಬ್ಬ ಆರಾಮವಾಗಿ ನೆಟ್ಟಗೆ ನಿಲ್ಲಬಹುದಿತ್ತು.

ಅಳಿದುಹೋಗಿರುವ ಜೀವಿವರ್ಗಗಳಲ್ಲಿ ದೈತ್ಯಜೀವಿಗಳು ಹಲವಾರಿವೆ. ಉರಗಗಳ ಪೈಕಿ ಅರವತ್ತೈದು ಮಿಲಿಯನ್ ವರ್ಷಗಳ ಹಿಂದೆ ಸಂಪೂರ್ಣವಾಗಿ ಅಳಿದುಹೋದ ಡೈನೋಸಾರ್ ಗಳ ಬಗೆಗೆ ಎಲ್ಲರಿಗೂ ತಿಳಿದದ್ದೇ. ಪಟ್ಟಿ ಮಾಡುತ್ತ ಹೋದರೆ ಇಂಥ ಅನೇಕ ಉದಾಹರಣೆಗಳನ್ನು ಕಾಣಬಹುದು. ಇಂದಿನ ಅನಕೊಂಡಾಗಳಿಗಿಂತಲೂ ದೊಡ್ಡದಿದ್ದ ಟೈಟಾನೋಬೋವಾ, ಹತ್ತು ಟನ್ ತೂಕ, ನಲವತ್ತು ಅಡಿ ಉದ್ದವಿದ್ದ ಸೂಪರ್ ಕ್ರೋಕ್ ಎಂಬ ಮೊಸಳೆ, ಆನೆಯಷ್ಟು ಎತ್ತರವಿದ್ದ ಜೈಂಟ್ ಗ್ರೌಂಡ್ ಸ್ಲಾತ್, ಸಮುದ್ರದಲ್ಲಿ ವಾಸವಾಗಿದ್ದ ಎಂಟಡಿ ಉದ್ದದ ಚೇಳು ಹೀಗೆ ಪಟ್ಟಿ ಬೆಳೆಯುತ್ತದೆ. ಒಂದಾನೊಂದು ಕಾಲದಲ್ಲಿ ಅಗಣಿತವಾಗಿದ್ದ ಈ ದೈತ್ಯ ಜೀವಿಗಳು ಬೇರೆಬೇರೆ ಕಾರಣಗಳಿಂದ ನಾಶವಾಗಿವೆ. ಒಂದೊಂದು ಜೀವಿಯ ವಿನಾಶಕ್ಕೂ ಬೇರೆಬೇರೆ ಕಾರಣಗಳಿವೆ. ಆದರೆ ಕಾರಣಗಳೇನೇ ಆಗಿದ್ದರೂ ಇದು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ. ಅದೇನೆಂದರೆ ಭೂಮಿಯ ಮೇಲೆ ಯಾವ ಜೀವಿಪ್ರಭೇದವೂ ಶಾಶ್ವತವಲ್ಲ. ಒಂದು ನಿರ್ದಿಷ್ಟ ಕಾಲಘಟ್ಟದ ನಂತರ ಜೀವಿಪ್ರಭೇದವೊಂದು ಒಂದೋ ಬದಲಾದ ಪರಿಸರಕ್ಕೆ ತಕ್ಕಂತೆ ತಾನೂ ಬದಲಾಗಬೇಕು ಅಥವಾ ಬದಲಾವಣೆಗೆ ಒಗ್ಗಿಕೊಳ್ಳದೆ ಹೋದರೆ ಅಳಿದು ಹೋಗಬೇಕು. ಈ ಅಳಿಯುವಿಕೆಗೆ ಬೇರೆ ಪ್ರಾಣಿಗಳೂ ಕಾರಣವಾಗಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಅದೇನೇ ಆದರೂ ಪ್ರಕೃತಿಯ ಪ್ರಯೋಗಶಾಲೆಯಲ್ಲಿ ಇಂಥ ಪ್ರಯೋಗಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇರುತ್ತವೆ!

ಪಕ್ಷಿಲೋಕದ ಬೆಡಗಿನ ಬಡಗಿಗಳು: ಮರಕುಟುಕ

ಪಕ್ಷಿಲೋಕದ ಬೆಡಗಿನ ಬಡಗಿಗಳು: ಮರಕುಟುಕ
ನಿಮಗೆ ಬಿಡುವಿನಲ್ಲಿ ಕಾಡಿನಲ್ಲಿ ಅಡ್ಡಾಡುವ ಹವ್ಯಾಸ ಇದ್ದರೆ ಒಂದು ಅನುಭವ ಆಗಿರಬಹುದು. ಇದ್ದಕ್ಕಿದ್ದಂತೆ ಕಾಡಿನಲ್ಲಿ ಯಾರೋ ತಮಟೆ ಬಾರಿಸುತ್ತಿರುವಂತೆ ಅಥವಾ ಸುತ್ತಿಗೆಯಿಂದ ಏನನ್ನೋ ಹೊಡೆಯುತ್ತಿರುವಂತೆ ಡಮಡಮಡಮ ಶಬ್ದ ಕೇಳಿಸಿರಬಹುದು. ನೀವು ಆ ಶಬ್ದದ ಜಾಡನ್ನು ಹಿಡಿದು ಹೋಗಿದ್ದರೆ ನಿಮಗೆ ಬಣ್ಣಬಣ್ಣದ ಹಕ್ಕಿಯೊಂದು ಮರವನ್ನು ತನ್ನ ಚೂಪಾದ ಉಳಿಯಂಥ ಕೊಕ್ಕಿನಿಂದ ಚಚ್ಚುತ್ತಿರುವ ದೃಶ್ಯ ಕಾಣಿಸಿರುತ್ತದೆ. ಈ ಹಕ್ಕಿಯೇ ಮರಕುಟುಕ ಅಥವಾ ವುಡ್ ಪೆಕರ್. ಮನುಷ್ಯಮಾತ್ರರು ಊಹಿಸಲೂ ಅಸಾಧ್ಯವಾದ ವೇಗದಲ್ಲಿ ಮರವನ್ನು ಚಚ್ಚುವ ಮರಕುಟುಕ ತನ್ನ ಈ ವೇಗ ಮತ್ತು ಸಾಮರ್ಥ್ಯದಿಂದಾಗಿಯೇ ಗಮನ ಸೆಳೆಯುತ್ತದೆ. ಅದು ಮರ ಕುಟ್ಟುವ ವೇಗವನ್ನು ಗಮನಿಸಿದರೆ ಎಂಥವನಿಗೂ ಗಾಬರಿಯಾಗುವುದು ಸಹಜ. ನಮಗೆ ಆಕಸ್ಮಿಕವಾಗಿ ತಲೆಗೆ ಒಂದು ಸಾಧಾರಣ ಏಟು ಬಿದ್ದರೇ ತಲೆ ಸುತ್ತಿದಂತಾಗಿ ಸುಧಾರಿಸಿಕೊಳ್ಳಲು ಕೆಲವು ಗಂಟೆಗಳೇ ಬೇಕಾಗುತ್ತದೆ. ಅಂಥದ್ದರಲ್ಲಿ ಮರಕುಟುಕಗಳು ಹೇಗೆ ತಮ್ಮ ಜೀವಮಾನಪೂರ್ತಿ ಮರ ಕುಟ್ಟುತ್ತ ಬದುಕುತ್ತವೆ? ಈ ಪ್ರಶ್ನೆ ಉದ್ಭವವಾಗುತ್ತದೆ.
ಸಾಮಾನ್ಯವಾಗಿ ನಾವೆಲ್ಲ ಒಂದೆರಡು ಜಾತಿಯ ಮರಕುಟುಕಗಳನ್ನು ಮಾತ್ರ ನೋಡಿರಬಹುದಾದರೂ ಅದೊಂದು ಅತ್ಯಂತ ವಿಸ್ತಾರವಾದ ಕುಟುಂಬ. ಪಿಸಿಫಾರಂಸ್ ವರ್ಗದ ಪಿಸಿಡೇ ಕುಟುಂಬಕ್ಕೆ ಸೇರಿದ ಮರಕುಟುಕಗಳಲ್ಲಿ ಸುಮಾರು ಇನ್ನೂರು ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಇವುಗಳನ್ನು ನಿಜವಾದ ಮರಕುಟುಕಗಳು, ರೈನೆಕ್ ಗಳು, ಪಿಕ್ಯುಲೆಟ್ ಗಳು ಮತ್ತು ಸ್ಯಾಪ್ ಸಕ್ಕರ್ ಗಳು ಎಂದು ವರ್ಗೀಕರಿಸಬಹುದು. ಇವೆಲ್ಲವನ್ನೂ ಮರಕುಟುಕನ ಕುಟುಂಬಕ್ಕೆ ಸೇರಿಸಿದ್ದರೂ ಎಲ್ಲವೂ ಮರ ಕುಟ್ಟುವುದಿಲ್ಲ ಎಂಬುದನ್ನು ನೆನಪಿಡಬೇಕು. ಆದ್ದರಿಂದಲೇ ಅವುಗಳನ್ನು ವರ್ಗೀಕರಣ ಮಾಡಲಾಗಿದೆ. ಈ ಪೈಕಿ ನಿಜವಾದ ಮರಕುಟುಕಗಳು ಮಾತ್ರ ಮರ ಕುಟ್ಟುತ್ತವೆ. ಅವುಗಳ ಕೊಕ್ಕುಗಳು ಚೂಪಾದ ಉಳಿಯಂತಿದ್ದು ಮರವನ್ನು ವೇಗವಾಗಿ ಡಮಡಮಡಮ ಎಂದು ಕುಟ್ಟುವುದು ಅವುಗಳಿಗೆ ಬಲು ಸುಲಭ. ಜೊತೆಗೆ ಅವುಗಳ ತಲೆಬುರುಡೆ ಕೂಡ ಬಲಿಷ್ಠವಾಗಿದ್ದು ಅಂಥ ನಿರಂತರ ಆಘಾತಗಳನ್ನು ಸಹಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ.
ಮರ ಕುಟ್ಟುವುದರ ಉದ್ದೇಶ ಬೇರೆಬೇರೆಯಾಗಿರುತ್ತದೆ. ಮುಖ್ಯ ಉದ್ದೇಶವೆಂದರೆ ಆಹಾರ ಸಂಪಾದನೆ. ಸತ್ತ ಮರದ ಕಾಂಡದೊಳಗೆ ಅನೇಕ ಕೀಟಗಳು ಮನೆ ಮಾಡಿರುತ್ತವೆ. ಪ್ರೌಢ ಕೀಟಗಳು ಮಾತ್ರವಲ್ಲ, ಕೀಟಗಳ ಲಾರ್ವಾಗಳು ಮತ್ತು ಮರಿಗಳು ಮರದ ತೊಗಟೆಗಳ ಸಂದುಗೊಂದುಗಳಲ್ಲಿ ಅಡಗಿರುತ್ತವೆ. ಈ ಕೀಟಗಳನ್ನು ತಿನ್ನುವ ಸಲುವಾಗಿ ಅವು ಮರ ಕುಟ್ಟುತ್ತವೆ. ಹಾಗೆ ಕುಟ್ಟುವಾಗ ಹೊರಡುವ ಶಬ್ದದಲ್ಲಿನ ವ್ಯತ್ಯಾಸದಿಂದಲೇ ಒಳಗೆ ಏನು ಅಡಗಿದೆ ಎಂದು ಮರಕುಟುಕ ಸುಲಭವಾಗಿ ಪತ್ತೆಹಚ್ಚಬಲ್ಲದು. ಜೊತೆಗೆ ಅದರ ನಾಲಿಗೆ ಸಹ ಉದ್ದವಾಗಿದ್ದು ತುದಿಯಲ್ಲಿ ಮುಳ್ಳುಗಳಂಥ ರಚನೆ ಇರುತ್ತದೆ. ಮರದ ರಂಧ್ರಗಳಲ್ಲಿ ನಾಲಿಗೆ ತೂರಿಸಿ ಕೀಟಗಳನ್ನು ಹಿಡಿಯಲು ಇದು ಸಹಕಾರಿ.
ಎರಡನೇ ಉದ್ದೇಶ ಮೊಟ್ಟೆಯಿಟ್ಟು ಮರಿ ಮಾಡುವುದು. ಸಾಮಾನ್ಯವಾಗಿ ಬೇರೆ ಹಕ್ಕಿಗಳಂತೆ ಮರಕುಟುಕಗಳು ಗೂಡು ಕಟ್ಟುವುದಿಲ್ಲ. ಅದರ ಬದಲು ಒಂದು ಸೂಕ್ತವಾದ ಮರದಲ್ಲಿ ಪೊಟರೆ ಕೊರೆದು ಅದರಲ್ಲಿ ಮೊಟ್ಟೆಯಿಡುತ್ತದೆ. ರೈನೆಕ್ ಗಳು ಸಾಮಾನ್ಯವಾಗಿ ಮರ ಕುಟ್ಟುವುದಿಲ್ಲ. ಅವುಗಳ ಕೊಕ್ಕುಗಳು ಅಷ್ಟೊಂದು ಬಲಿಷ್ಠವಲ್ಲದ ಕಾರಣ ಅವು ಬೇರೆ ಮರಕುಟುಕಗಳು ಕೊರೆದು ಬಿಟ್ಟುಹೋದ ಪೊಟರೆಗಳನ್ನು ಉಪಯೋಗಿಸಿಕೊಳ್ಳುತ್ತವೆ. ರೂಫಸ್ ವುಡ್ ಪೆಕರ್ ಅಥವಾ ಕಂದು ಬಣ್ಣದ ಮರಕುಟುಕವು ಕಟ್ಟಿರುವೆಗಳ ಗೂಡಿನಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಕ್ರಮವನ್ನು ರೂಢಿಸಿಕೊಂಡಿವೆ. ಅಚ್ಚರಿಯೆಂದರೆ ಆ ಇರುವೆಗಳು ಮರಿಗಳಿಗೆ ಏನೂ ಮಾಡದೆ ಶತ್ರುಗಳಿಂದ ಅವುಗಳನ್ನು ರಕ್ಷಿಸುವ ಸೈನಿಕರ ಕಾರ್ಯ ನಿರ್ವಹಿಸುತ್ತವೆ. ಇದೊಂದು ವಿಶಿಷ್ಟವಾದ ಸಹಜೀವನ.
ಮೂರನೆಯ ಉದ್ದೇಶವೆಂದರೆ ಪರಸ್ಪರ ಸಂಭಾಷಣೆ. ಕೂಗುವ ಮೂಲಕ ಪರಸ್ಪರ ಸಂಭಾಷಣೆ ನಡೆಸಬಹುದಾದರೂ ಅದಕ್ಕೆ ಕೆಲವು ಇತಿಮಿತಿಗಳಿರುತ್ತವೆ. ಕೂಗು ಕಾಡಿನಲ್ಲಿ ಹೆಚ್ಚುದೂರ ಕೇಳಿಸುವುದಿಲ್ಲ. ಆದ್ದರಿಂದ ಮರ ಕುಟ್ಟುವ ಮೂಲಕವೂ ಅವು ಪರಸ್ಪರ ಸಂಭಾಷಿಸುತ್ತವೆ. ಬೇರೆಬೇರೆ ಜಾತಿಯ ಮರಕುಟುಗಗಳು ಮರ ಕುಟ್ಟುವ ಲಯವೂ ಬೇರೆಬೇರೆಯಾಗಿರುತ್ತದೆ. ನಮಗೆ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಷ್ಟವಾದರೂ ಅವುಗಳಿಗೆ ಆ ಕೂಗಿನ ಮೂಲಕ ತಮ್ಮ ಜಾತಿಯದ್ದು ಯಾವುದು ಮತ್ತು ಯಾವುದು ತಮ್ಮ ಜಾತಿಯದ್ದಲ್ಲ ಎಂದು ಕರಾರುವಾಕ್ಕಾಗಿ ತಿಳಿಯುತ್ತದೆ. ಕಾಡಿನಲ್ಲಿ ಸಂವಹನ ಮಾಡಲು ಇದೊಂದು ಅತ್ಯಂತ ದಕ್ಷವಾದ ವಿಧಾನ.
ನಾಲ್ಕನೆಯದಾಗಿ ಸ್ಯಾಪ್ ಸಕ್ಕರ್ ಗಳು ಮರ ಕುಟ್ಟುವುದು ಮರದ ಬೊಡ್ಡೆಯಿಂದ ಒಸರುವ ದ್ರವವನ್ನು ಹೀರಲು. ಇವುಗಳ ಬಹುಮುಖ್ಯ ಆಹಾರವೇ ಮರಗಳ ಜೀವರಸ. ಗ್ಲೂಕೋಸ್ ನಿಂದ ಸಮೃದ್ಧವಾದ ಮರಗಳ ರಸವು ಯಾವುದೇ ಜೀವಿಗೆ, ಅದರಲ್ಲೂ ಹಾರಾಟದಂಥ ಅತ್ಯಧಿಕ ಶಕ್ತಿಯನ್ನು ಬೇಡುವ ಕ್ರಿಯೆಯಲ್ಲಿ ತೊಡಗುವ ಜೀವಿಗೆ ಅತ್ಯುಪಯುಕ್ತವಾದ ಆಹಾರ. ಈ ಹಕ್ಕಿಗಳ ಹೆಸರೇ ಇವುಗಳ ಆಹಾರಪದ್ಧತಿಯನ್ನು ಸೂಚಿಸುತ್ತದೆ. ಸ್ಯಾಪ್ ಎಂದರೆ ಸಸ್ಯಗಳ ರಸ, ಸಕ್ಕರ್ ಎಂದರೆ ಕುಡಿಯುವವನು ಎಂದರ್ಥ. ಯೂರೋಪಿಯನ್ ದೇಶಗಳಲ್ಲಿ ಅನೇಕ ಮರಗಳಲ್ಲಿ ಈ ಹಕ್ಕಿಗಳು ಸಾಲಾಗಿ ರಂಧ್ರಗಳನ್ನು ಕೊರೆದಿರುವುದನ್ನು ಕಾಣಬಹುದು. ಈ ರಂಧ್ರಗಳನ್ನು ಇವು ಕಲಾತ್ಮಕವಾಗಿ ಜೇನುಗೂಡುಗಳಂತೆ ಕೊರೆಯುತ್ತವೆ. ಅವುಗಳಲ್ಲಿ ರಸ ತುಂಬಿದಂತೆಲ್ಲ ಅದನ್ನು ಕುಡಿಯುತ್ತವೆ. ಕೆಲವೆಡೆ ಇವುಗಳ ಸಂಖ್ಯೆ ವಿಪರೀತವಾಗಿರುವಲ್ಲಿ ಅನೇಕ ಮರಗಳು ತುದಿಯಿಂದ ಬುಡದವರೆಗೆ ಗಾಯಗೊಂದು ಸಾವನ್ನಪ್ಪಿರುವ ಉದಾಹರಣೆಯೂ ಇದೆ.
ಇಷ್ಟಲ್ಲದೆ ಮರಕುಟುಕಗಳು ರಂಧ್ರಗಳನ್ನು ತಮ್ಮ ಉಗ್ರಾಣಗಳನ್ನಾಗಿಯೂ ಬಳಸುವುದುಂಟು. ಕೆಲವು ಜಾತಿಯ ಮರಕುಟುಕಗಳು ಪೈನ್ ವೃಕ್ಷಗಳ ಬೀಜಗಳನ್ನು ತಿಂದು ಜೀವಿಸುತ್ತವೆ. ಇದು ಅತ್ಯಂತ ಪೌಷ್ಟಿಕವಾದ ಆಹಾರ. ಸಾಕಷ್ಟು ಕೊಬ್ಬಿನಿಂದ ಕೂಡಿರುವುದರಿಂದ ಅತ್ಯಧಿಕ ಶಕ್ತುಯನ್ನು ಒದಗಿಸುತ್ತವೆ. ಆದ್ದರಿಂದಲೇ ಇದು ಪಕ್ಷಿಗಳಿಗೆ ಅಚ್ಚುಮೆಚ್ಚು. ಆದರೆ ಈ ಕಾಯಿಗಳು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯುವುದಿಲ್ಲ. ಆದ್ದರಿಂದ ಮರಕುಟುಕಗಳು ತಾವು ತಿಂದು ಹೆಚ್ಚಾದ ಕಾಯಿಗಳನ್ನು ಮರದಲ್ಲಿ ರಂಧ್ರ ಕೊರೆದು ಸಂಗ್ರಹಿಸಿಡುತ್ತವೆ. ನೆಲದಲ್ಲಿ ಹೂತಿಟ್ಟರೆ ಇಲಿ, ಹೆಗ್ಗಣ ಮುಂತಾದ ದಂಶಕಗಳು ತಿಂದು ಮುಗಿಸುತ್ತವೆ. ಮರದ ಮೇಲೆ ಆ ಸಮಸ್ಯೆ ಇಲ್ಲ. ಆದರೆ ಇದೊಂದು ನಿರಂತರವಾದ ಪ್ರಕ್ರಿಯೆ. ಒಮ್ಮೆ ಕಾಯಿಗಳನ್ನು ತೂತುಗಳಲ್ಲಿ ಶೇಖರಿಸಿಟ್ಟುಹೋದರೆ ಕೆಲಸ ಮುಗಿಯುವುದಿಲ್ಲ. ಅವುಗಳನ್ನು ಪ್ರತಿದಿನ ಪರೀಕ್ಷಿಸುತ್ತಿರಬೇಕಾಗುತ್ತದೆ. ಏಕೆಂದರೆ ಕಾಯಿಗಳು ಒಣಗಿದಂತೆಲ್ಲ ಮುದುರಿ ಚಿಕ್ಕದಾಗುತ್ತವೆ. ಹಾಗಾದಾಗ ತೂತಿನಿಂದ ಸಡಿಲವಾಗಿ ಕೆಳಗೆ ಬಿದ್ದುಹೋಗುವ ಸಂಭವವಿರುತ್ತದೆ. ಅಥವಾ ತೂತು ಚಿಕ್ಕದಾಗಿ ಕಾಯಿ ದೊಡ್ಡದಾದರೆ ಅದು ಒಡೆದು ಹಾಳಾಗುತ್ತದೆ. ಆದ್ದರಿಂದ ಈ ಕೆಲಸವನ್ನು ಅತ್ಯಂತ ನಾಜೂಕಾಗಿ ಮಾಡಬೇಕಾಗುತ್ತದೆ. ಜೊತೆಗೆ ಬೇರೆ ಹಕ್ಕಿಗಳು ಆ ಕಾಯಿಗಳನ್ನು ಕದಿಯದಂತೆಯೂ ಕಾವಲು ಕಾಯಬೇಕಾಗುತ್ತದೆ. ಒಂದೊಂದು ಬೃಹತ್ ಮರದಲ್ಲಿಯೂ ಅಂಥ ಅರವತ್ತು ಸಾವಿರಕ್ಕೂ ಅಧಿಕ ಕಾಯಿಗಳನ್ನು ಕಾಣುವುದು ಅಪರೂಪವೇನಲ್ಲ.
ಮರಕುಟುಕಗಳು ಮರದ ಕಾಂಡದ ಮೇಲೆ ಲಂಬವಾಗಿ ನಿಲ್ಲುವುದನ್ನು ಕಂಡಾಗ ಆಶ್ಚರ್ಯವಾಗಬಹುದು. ಕೇವಲ ಹಾಗೆ ದೃಢವಾಗಿ ನಿಲ್ಲುವುದು ಮಾತ್ರವಲ್ಲ, ಕುಪ್ಪಳಿಸುತ್ತ ಓಡಾಡುವ ಕಲೆ ಕೂಡ ಅವಕ್ಕೆ ಸುಲಲಿತ. ಇದಕ್ಕೆ ಅವುಗಳ ಶರೀರರಚನೆಯಲ್ಲಿ ಆಗಿರುವ ಮಾರ್ಪಾಡುಗಳೇ ಕಾರಣ. ಅವುಗಳ ಕಾಲ್ಬೆರಳುಗಳಲ್ಲಿ ಎರಡು ಮುಂದಕ್ಕೂ ಇನ್ನೆರಡು ಹಿಂದಕ್ಕೂ ಚಾಚಿಕೊಂಡಿವೆ. ಅದರಿಂದ ಕಾಂಡದ ಮೇಲೆ ಬಲವಾದ ಹಿಡಿತ ಪಡೆಯಲು ಸುಲಭ. ಜೊತೆಗೆ ಅವುಗಳ ಬಾಲದ ಗರಿಗಳು ಸಹ ದೃಢವಾಗಿದ್ದು ಮರವೇರುವಾಗ ಮೂರನೆಯ ಕಾಲಿನಂತೆ ನೆರವಾಗುತ್ತವೆ.
ಮರಕುಟುಕಗಳಲ್ಲಿ ಗ್ರೇಟ್ ಬ್ಲ್ಯಾಕ್ ವುಡ್ ಪೆಕರ್ ಎಂಬುದು ಅತ್ಯಂತ ದೊಡ್ಡದು. ಒಂದೂವರೆಯಿಂದ ಎರಡು ಅಡಿಯವರೆಗೆ ಉದ್ದವಿರುವ ಈ ಮರಕುಟುಕಗಳು ಕಪ್ಪುಬಣ್ಣವೇ ಪ್ರಧಾನವಾಗಿರುವ ಏಕೈಕ ಮರಕುಟುಕ. ತಲೆಯ ಮೇಲೆ ಕೆಂಬಣ್ಣದ ಜುಟ್ಟು ಇದರ ಪ್ರಧಾನ ಲಕ್ಷಣ ಎನ್ನಬಹುದು.
ಎಲ್ಲ ಮರಕುಟುಕಗಳು ಸಾಮಾನ್ಯವಾಗಿ ಒಂಟಿಯಾಗಿರಲು ಬಯಸುತ್ತವೆ. ಒಂದೇ ಜಾತಿಯ ಬೇರೆಬೇರೆ ಮರಕುಟುಕಗಳು ಸಾಮಾನ್ಯವಾಗಿ ಒಟ್ಟಾಗಿ ಸೇರುವುದೇ ಇಲ್ಲ. ಸಾಮಾನ್ಯವಾಗಿ ಒಂದರ ವಸಾಹತಿನ ಬಳಿ ಇನ್ನೊಂದು ಬಂದರೆ ಓಡಿಸುತ್ತದೆ. ಈ ರೀತಿಯ ನಡವಳಿಕೆಗೆ ನಿರ್ದಿಷ್ಟ ಕಾರಣವೇನೆಂದು ಗೊತ್ತಿಲ್ಲ. ಸಾಮಾನ್ಯವಾಗಿ ಗಂಡುಗಳಲ್ಲಿ ಈ ರೀತಿಯ ನಡವಳಿಕೆ ಹೆಚ್ಚಾಗಿ ಕಂಡುಬರುತ್ತದೆ.
ಮರಕುಟುಕಗಳನ್ನು ನಾವು ಅಂಟಾರ್ಕ್ಟಿಕಾ ಖಂಡವನ್ನು ಹೊರತುಪಡಿಸಿ ಇನ್ನೆಲ್ಲ ಖಂಡಗಳಲ್ಲಿ ಕಾಣಬಹುದು. ಅವು ಅತ್ಯಂತ ಶುಷ್ಕ ವಾತಾವರಣವಿರುವ ಮರುಭೂಮಿಗಳಲ್ಲಿ ಸಹ ಬದುಕಬಲ್ಲವು. ಅಲ್ಲಿ ಬದುಕುವ ಮರಕುಟುಕಗಳು ಕ್ಯಾಕ್ಟಸ್ ಗಿಡಗಳಲ್ಲೇ ತಮ್ಮ ಗೂಡುಗಳನ್ನು ಅರ್ಥಾತ್ ಪೊಟರೆಗಳನ್ನು ನಿರ್ಮಿಸಿಕೊಳ್ಳಬಲ್ಲವು. ಆದ್ದರಿಂದ ಅವು ಮರುಭೂಮಿಯಲ್ಲೂ ನಿರಾಯಾಸವಾಗಿ ಬದುಕಬಲ್ಲವು. ಜೊತೆಗೆ ಸವನ್ನಾದ ಹುಲ್ಲುಗಾವಲುಗಳಲ್ಲಿ, ಕುರುಚಲು ಕಾಡುಗಳಲ್ಲಿ, ಎಲೆ ಉದುರಿಸುವ ಕಾಡುಗಳಲ್ಲಿ, ನಿತ್ಯಹರಿದ್ವರ್ಣ ಕಾಡುಗಳಲ್ಲಿ ಹೀಗೆ ಮರಕುಟುಕಗಳು ವಾಸಮಾಡದ ಜಾಗವೇ ಇಲ್ಲವೆನ್ನಬಹುದು.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕನ್ನಡನಾಡಿನ ಹಕ್ಕಿಗಳು ಪುಸ್ತಕದಲ್ಲಿ ಮರಕುಟುಕಗಳ ಬಗ್ಗೆ ಪ್ರಧಾನವಾಗಿ ಉಲ್ಲೇಖಿಸಿದ್ದಾರೆ. ಅವರ ಪಾಲಿಗೆ ಮರಕುಟುಕಗಳು ವಿಸ್ಮಯದ ಗಣಿಗಳಾಗಿದ್ದವು. ತಮ್ಮ ಮನೆಯ ಬಳಿಯ ಮರವೊಂದನ್ನು ಹಳದಿ ಬೆನ್ನಿನ ಮರಕುಟುಕವೊಂದು ಕುಟ್ಟುತ್ತ ಗೂಡು ಮಾಡುತ್ತಿದ್ದುದನ್ನೂ ಅದು ದೂರ ಹೋದಾಗ ಇನ್ನೊಂದು ಮರಕುಟುಕ ಅಲ್ಲಿಗೆ ಬಂದು ಅದರ ಗೂಡನ್ನು ಕಸಿಯಲು ಯತ್ನಿಸಿದ್ದನ್ನೂ ಅದೇ ಸಂದರ್ಭದಲ್ಲಿ ಮರಳಿಬಂದ ಮೊದಲ ಮರಕುಟುಕ ಇದರ ಮೇಲೇರಿ ಹೋಗಿದ್ದನ್ನೂ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಕನ್ನಡ ನಾಡಿನಲ್ಲಿ ಕಾಣಸಿಗುವ ಮರಕುಟುಕಗಳ ಪ್ರಧಾನ ಜಾತಿಗಳನ್ನು ಸಹ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಮರಕುಟುಕಗಳ ಕುಟುಂಬಕ್ಕೇ ಸೇರಿದ, ಯೂರೋಪಿನಲ್ಲಿ ಪ್ರಧಾನವಾಗಿ ಕಾಣಸಿಗುವ ಸ್ಯಾಪ್ ಸಕ್ಕರ್ ಗಳ ಬಗೆಗೆ ಎಲ್ಲರೂ ಸಾಕಷ್ಟು ಭಯ ಹೊಂದಿದ್ದಾರೆ. ಏಕೆಂದರೆ ಅವು ಮರಗಳಿಗೆ ಪಿಡುಗಾಗಿ ಪರಿಗಣಿಸಲ್ಪಟ್ಟಿವೆ. ಏಕೆಂದರೆ ನಿಜವಾದ ಮರಕುಟುಕಗಳು ಸತ್ತ ಮರಗಳಲ್ಲಿ ಪೊಟರೆ ಕೊರೆದರೆ ಇವು ಜೀವಂತ ಮರಗಳ ಕಾಂಡಗಳನ್ನೇ ಕೊರೆದು ರಸ ಹೀರುತ್ತವೆ. ಕೆಲವು ಕಾಲದ ನಂತರ ಸಹಜವಾಗಿಯೇ ಆ ರಂಧ್ರಗಳು ಬತ್ತಿಹೋದ ನಂತರ ಹೊಸ ರಂಧ್ರಗಳನ್ನು ಕೊರೆದು ಮತ್ತೆ ಮತ್ತೆ ತಮ್ಮ ರಸಹೀರುವ ಕೆಲಸ ಮುಂದುವರೆಸುತ್ತವೆ. ಇವುಗಳ ವಿಪರೀತ ಹಾವಳಿಯಿಂದ ಅಮೆರಿಕದಲ್ಲಿ ಶೇಕಡಾ ಐವತ್ತಕ್ಕಿಂತ ಹೆಚ್ಚಿನ ಮರಗಳು ಮೈತುಂಬ ಗಾಯಗೊಂಡಿರುವುದು ಕಂಡುಬಂದಿವೆ. ಕೆಲವು ಚಿಕ್ಕ ಮರಗಳು ಮತ್ತು ಅಷ್ಟೊಂದು ಬಲಿಷ್ಠವಲ್ಲದ ಮರಗಳು ಈ ರಂಧ್ರಗಳಿಂದಾಗಿಯೇ ಸಾವನ್ನಪ್ಪುತ್ತವೆ. ಬೇರೆ ಬೇರೆ ಮರಗಳ ರಸವನ್ನು ಇದು ಬೇರೆಬೇರೆ ಪ್ರಮಾಣದಲ್ಲಿ ಹೀರುತ್ತದೆ. ಇದಕ್ಕೆ ಮರದ ಸ್ವಾಭಾವಿಕ ಗುಣಲಕ್ಷಣಗಳು ಮತ್ತು ರಸದ ಗುಣಗಳಲ್ಲಿನ ವ್ಯತ್ಯಾಸವೂ ಕಾರಣ. ಇವು ಬರ್ಚ್ ಜಾತಿಯ ಮರಗಳ ರಸವನ್ನು ಹೆಚ್ಚಾಗಿ ಇಷ್ಟಪಡುವುದು ಕಂಡುಬಂದಿದೆ.
ಯೂರೇಷಿಯನ್ ರೈನೆಕ್ ಎಂಬುದು ಇನ್ನೊಂದು ಚಿಕ್ಕ ಪರಕುಟುಕ. ಕಂದುಬಣ್ಣದ ಈ ಹಕ್ಕಿಯ ಮೈಮೇಲೆಲ್ಲ ಕಪ್ಪು ಚುಕ್ಕೆಗಳಿವೆ. ಈ ಹಕ್ಕಿ ನೋಡಲು ಇತರೆ ಮರಕುಟುಕಗಳಿಗಿಂತ ಚಿಕ್ಕದಾಗಿದ್ದು ಮೇಲ್ನೋಟಕ್ಕೂ ಮರಕುಟುಕಗಳನ್ನು ಹೋಲುವಂತೆ ಕಾಣುವುದಿಲ್ಲ. ಆದರೆ ಇದರ ಕೊಕ್ಕಿನ ರಚನೆ ಮತ್ತು ಇತರ ದೇಹಲಕ್ಷಣಗಳು ಇದು ಮರಕುಟುಕನ ಕುಟುಂಬಕ್ಕೇ ಸೇರಿದವೆಂದು ಖಚಿತಪಡಿಸುತ್ತವೆ. ಆದರೆ ಇವುಗಳ ಕೊಕ್ಕುಗಳು ಸ್ವಲ್ಪ ಚಿಕ್ಕವು. ಇವುಗಳ ಬಹುಮುಖ್ಯ ಆಹಾರವೆಂದರೆ ಇರುವೆ, ಕೀಟಗಳ ಲಾರ್ವಾಗಳು ಮತ್ತಿತರ ಚಿಕ್ಕಪುಟ್ಟ ಜೀವಿಗಳು. ಆದರೆ ಈ ಹಕ್ಕಿ ಪ್ರಸಿದ್ಧವಾಗಿರುವುದಕ್ಕೆ ಬೇರೆಯೇ ಕಾರಣವಿದೆ. ಅದೇನೆಂದರೆ ಯೂರೋಪಿನ ಮರಕುಟುಕಗಳಲ್ಲೆಲ್ಲ ಸುದೀರ್ಘ ವಲಸೆ ಹೋಗುವ ಹಕ್ಕಿ ಇದೊಂದೇ. ಚಳಿಗಾಲದ ಸಮಯದಲ್ಲಿ ಈ ಹಕ್ಕಿ ಯೂರೋಪಿನಿಂದ ಆಫ್ರಿಕಕ್ಕೆ ವಲಸೆ ಹೋಗುತ್ತದೆ. ನಮ್ಮ ಅಂಗೈ ಮುಷ್ಟಿಯಷ್ಟಿರುವ ಈ ಪುಟ್ಟ ಹಕ್ಕಿಯ ಮ್ಯಾರಥಾನ್ ಪಯಣ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು. ಅದು ಅಷ್ಟು ದೂರಕ್ಕೆ ಹೇಗೆ ದಾರಿ ಕಂಡುಕೊಳ್ಳುತ್ತದೆ ಎಂಬುದಂತೂ ನಮಗೆ ಇನ್ನೂ ಅರ್ಥವಾಗದ ಸಂಗತಿಯಾಗಿದೆ.
ಪಿಕ್ಯುಲೆಟ್ ಎಂಬ ಇನ್ನೊಂದು ರೀತಿಯ ಮರಕುಟುಕಗಳಿವೆ. ಹತ್ತು ಸೆಂಟಿಮೀಟರ್ ಗಿಂತ ಕಡಿಮೆ ಉದ್ದವಿರುವ ಇವು ಮರಕುಟುಕಗಳ ಕುಟುಂಬದಲ್ಲೇ ಅತ್ಯಂತ ಚಿಕ್ಕವು. ಇವು ಸಹ ನಿಜವಾದ ಮರಕುಟುಕಗಳಿಗಿಂತ ನೋಡಲು ಭಿನ್ನವಾಗಿರುತ್ತವೆ. ಇವುಗಳಲ್ಲೇ ಅತ್ಯಂತ ಸಾಮಾನ್ಯವಾದುದೆಂದರೆ ಸ್ಪೆಕಲ್ಡ್ ಪಿಕ್ಯುಲೆಟ್. ಮೈತುಂಬ ಚುಕ್ಕೆಗಳಿರುವುದರಿಂದ ಅವಕ್ಕೆ ಈ ಹೆಸರು ಬಂದಿದೆ. ಸಾಮಾನ್ಯ ಮರಕುಟುಕಗಳಂತೆಯೇ ಪೊಟರೆಗಳಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಇವು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಪ್ರಧಾನವಾಗಿ ಕಂಡುಬರುತ್ತವೆ. ಇರುವೆ ಮತ್ತು ಗೆದ್ದಲುಗಳು ಇವುಗಳ ಪ್ರಮುಖ ಆಹಾರ. ಮರದ ಪೊಟರೆಗಳಿಂದ ಇರುವೆ, ಗೆದ್ದಲುಗಳ ಪ್ಯೂಪಾಗಳನ್ನು ಹಿಡಿದು ತಿನ್ನುವುದೂ ಇದೆ.
ಬಾರ್ಬೆಟ್ ಗಳು, ಟೌಕಾನ್ ಗಳು ಮತ್ತು ಹನಿಗೈಡ್ ಹಕ್ಕಿಗಳು ಮರಕುಟುಕಗಳ ಅತ್ಯಂತ ಹತ್ತಿರದ ಸಂಬಂಧಿಗಳು. ಇವುಗಳು ಮರಕುಟುಕಗಳಂತೆ ಮರ ಕುಟ್ಟುವ ಅಭ್ಯಾಸ ಹೊಂದಿಲ್ಲವಾದರೂ ದೇಹರಚನೆ ಮತ್ತು ಸ್ವಭಾವಗಳ ಮೂಲಕ ಮರಕುಟುಕಗಳ ಹತ್ತಿರದ ಸಂಬಂಧಿಗಳೆಂದು ಸಾಬೀತುಪಡಿಸಿವೆ. ಈ ಎಲ್ಲ ಹಕ್ಕಿಗಳ ಕೊಕ್ಕಿನ ರಚನೆಯನ್ನು ಅಭ್ಯಾಸ ಮಾಡಿದರೆ ಇವು ಹತ್ತಿರದ ಸಂಬಂಧಿಗಳೆಂದು ಅರಿವಾಗುತ್ತದೆ.
ಬಾರ್ಬೆಟ್ ಹಕ್ಕಿಗಳನ್ನು ನಾವು ಸೊಪ್ಪುಕುಟುರಗಳೆಂದು ಕರೆಯುತ್ತೇವೆ. ಮಲೆನಾಡಿನ ಕಾಡುಗಳಲ್ಲಂತೂ ಈ ಹಕ್ಕಿಗಳು ಅವಿಭಾಜ್ಯ ಅಂಗಗಳೇ ಆಗಿವೆ. ಅವುಗಳ ಹೆಸರು ಗೊತ್ತಿಲ್ಲದಿದ್ದರೂ, ಅವುಗಳನ್ನು ನೋಡಿರದಿದ್ದರೂ ಪ್ರತಿಯೊಬ್ಬ ಮಲೆನಾಡಿಗನೂ ಅವುಗಳ ಕೂಗನ್ನು ಕೇಳಿಯೇ ಇರುತ್ತಾನೆ. ಕುಟರ್ ಕುಟುರ್ ಕುಟುರ್ ಎಂದು ಕೂಗುವ ಇವು ಒಂದು ಹಕ್ಕಿ ಕೂಗು ನಿಲ್ಲಿಸಿದ ಕೂಡಲೇ ಇನ್ನೊಂದು ಕೂಗಲು ಆರಂಭಿಸುತ್ತದೆ. ಹೀಗೆ ಸರಣಿ ರಾಗಾಲಾಪನೆ ಶುರುವಾಗುತ್ತದೆ.
ಮುಂದಿನ ಸಲ ನೀವು ಕಾಡಿಗೆ ಹೋದಾಗ ಸುತ್ತಿಗೆಯಿಂದ ಮರ ಕುಟ್ಟಿದಂಥ ಶಬ್ದವಾದರೆ ಆ ಶಬ್ದದ ಜಾಡು ಹಿಡಿಯಲು ಪ್ರಯತ್ನಿಸಿ. ಒಮ್ಮೊಮ್ಮೆ ಕಾಡಿನ ನೀರವ ಮೌನವನ್ನು ಹಠಾತ್ತನೆ ಭೇದಿಸಿದಂತೆ ಇವು ಮರ ಕುಟ್ಟಲು ಶುರು ಮಾಡಿದರೆ ಒಮ್ಮೆ ಗಾಬರಿಯಾಗಬಹುದು. ಆದರೆ ಅದರ ಜಾಡು ಹಿಡಿದು ಹೋದರೆ ನಿಮಗೆ ಖಂಡಿತ ನಿರಾಸೆಯಾಗುವುದಿಲ್ಲ. ಪ್ರಕೃತಿಯ ಅದ್ಭುತವೊಂದನ್ನು ಕಾಣುವ ಭಾಗ್ಯ ನಿಮ್ಮದಾಗುತ್ತದೆ. ಆದರೆ ಮರಕುಟುಕ ಮರ ಕುಟ್ಟುವ ವೇಗವನ್ನು ನೋಡಿಯೇ ನಿಮಗೆ ತಲೆ ಸುತ್ತಿದಂತಾಗಬಹುದು!

ಹಾಗಾದರೆ ಇಂದು ಮರಕುಟುಕಗಳ ಸ್ತಿತಿಗತಿ ಹೇಗಿದೆಯೆಂದು ನೋಡಹೊರಟರೆ ನಮಗೆ ನಿರಾಶೆಯಾಗುತ್ತದೆ. ಇಂದು ಆವಾಸಸ್ಥಾನದ ನಾಶ ಇವುಗಳಿಗೆ ಬಲುದೊಡ್ಡ ಹೊಡೆತವಾಗಿದೆ. ಭಾರೀ ವೃಕ್ಷಗಳೇ ಇಂದು ಅಪರೂಪವಾಗುತ್ತಿರುವುದರಿಂದ ಇವುಗಳಿಗೆ ಮೊಟ್ಟೆಯಿಟ್ಟು ಮರಿ ಮಾಡುವುದೇ ಕಷ್ಟವಾಗುತ್ತಿದೆ. ಆದರೆ ಕೆಲವೇ ಕೆಲವು ರಕ್ಷಿತಾರಣ್ಯಗಳಲ್ಲಿ, ಪಕ್ಷಿಧಾಮಗಳಲ್ಲಿ ಸರ್ಕಾರದ ರಕ್ಷಣೆಯಲ್ಲಿ ಇವು ಸಂತಾನ ವರ್ಧಿಸಿಕೊಳ್ಳುತ್ತಿವೆ. ನಮ್ಮ ನಿಮ್ಮ ನಡುವೆ ತನ್ನಪಾಡಿಗೆ ತಾನು ಬಡಗಿ ಕೆಲಸ ಮಾಡುತ್ತ ಕಾಲ ಕಳೆಯುವ ಈ ನಿರುಪದ್ರವಿ ಹಕ್ಕಿ ಇನ್ನೂ ಚಿರಕಾಲ ಭೂಮಿಯ ಮೇಲೆ ಬದುಕಿರಲಿ ಎಂದು ಆಶಿಸೋಣ ಅಲ್ಲವೇ?

ಡಾಲ್ಫಿನ್: ಮುದ್ದುಮುಖದ ಸಾಗರವಾಸಿ ಸಸ್ತನಿ

ಡಾಲ್ಫಿನ್: ಮುದ್ದುಮುಖದ ಸಾಗರವಾಸಿ ಸಸ್ತನಿ
“ಡಾಲ್ಫಿನ್”
ಈ ಹೆಸರನ್ನು ಕೇಳಿದರೇ ಪ್ರಾಣಿಪ್ರಿಯರಿಗೆ ಮೈಯೆಲ್ಲ ಏನೋ ಪುಳಕ. ಮುದ್ದುಮುಖದ, ಸದಾ ಚಟುವಟಿಕೆಯಿಂದ ಜಿಗಿದಾಡುವ ಈ ಸಾಗರಜೀವಿಗಳು ಮನುಷ್ಯರೊಂದಿಗೆ ಆತ್ಮೀಯ ಸಂಬಂಧ ಹೊಂದಿ ಎಲ್ಲರ ಪ್ರೀತಿಗೆ ಪಾತ್ರವಾಗಿವೆ. ಅನೇಕ ಅಕ್ವೇರಿಯಂಗಳಲ್ಲಿ ಇವುಗಳನ್ನು ಮೋಜಿಗಾಗಿ ಸಾಕಿ ಅವುಗಳಿಂದ ನಾನಾ ರೀತಿಯ ಚಮತ್ಕಾರಗಳನ್ನು ಮಾಡಿಸುತ್ತಾರೆ. ಡಾಲ್ಫಿನ್ ಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳೆಂದು ಹೆಸರಾಗಿವೆ. ಮನುಷ್ಯರಂತೆಯೇ ಡಾಲ್ಫಿನ್ ಗಳಲ್ಲಿ ಸಹ ಒಂದರ ನಡುವೆ ಮತ್ತೊಂದು ಆತ್ಮೀಯ ಸಂಬಂಧ ಹೊಂದಿರುತ್ತವೆ. ಬೇಟೆಯಾಡುವಾಗ ಅನೇಕ ಡಾಲ್ಫಿನ್ ಗಳು ಸೇರಿ ಸಮಾಲೋಚನೆ ನಡೆಸಿ ಬೇಟೆಯಾಡುವುದು ಕಂಡುಬಂದಿದೆ. ಆದ್ದರಿಂದ ಅವುಗಳನ್ನು ಮನುಷ್ಯ ಮತ್ತು ಇತರ ವಾನರರನ್ನು ಹೊರತುಪಡಿಸಿದರೆ ಅತ್ಯಂತ ಬುದ್ಧಿವಂತ ಸಸ್ತನಿಗಳೆಂದು ಕರೆಯಲಡ್ಡಿಯಿಲ್ಲ.
ಡಾಲ್ಫಿನ್ ಗಳನ್ನು ಸ್ಥೂಲವಾಗಿ ಸಾಗರವಾಸಿ ಡಾಲ್ಫಿನ್ ಗಳು ಮತ್ತು ನದಿವಾಸಿ ಡಾಲ್ಫಿನ್ ಗಳು ಎಂದು ವಿಂಗಡಿಸಬಹುದು. ಸಾಗರವಾಸಿ ಡಾಲ್ಫಿನ್ ಗಳದ್ದೇ ಅತ್ಯಂತ ಹೆಚ್ಚಿನ ವೈವಿಧ್ಯ. ಸುಮಾರು ಮೂವತ್ತೆಂಟು ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಆದರೆ ನದಿವಾಸಿಗಳಲ್ಲಿ ಇರುವುದು ನಾಲ್ಕೇ ಪ್ರಭೇದಗಳು. ಸಾಗರವಾಸಿ ಡಾಲ್ಫಿನ್ ಗಳು ಸಾಮಾನ್ಯವಾಗಿ ನೂರಾರು ಗುಂಪುಗುಂಪಾಗಿ ಸಂಚರಿಸುತ್ತಿರುತ್ತವೆ. ಗುಂಪಿನಲ್ಲಿರುವುದರಿಂದ ಬೇಟೆಯಾಡುವುದಕ್ಕೆ ಮತ್ತು ಶತ್ರುಗಳಿಂದ ಪಾರಾಗುವುದಕ್ಕೆ ಎರಡಕ್ಕೂ ಸುಲಭ. ಆದ್ದರಿಂದ ಅವು ಸದಾಕಾಲ ಹತ್ತಾರು, ಕೆಲವೊಮ್ಮೆ ನೂರಾರು ಮತ್ತು ಒಮ್ಮೊಮ್ಮೆ ಸಾವಿರಾರು ಡಾಲ್ಫಿನ್ ಗಳು ಸಹ ಗುಂಪಾಗಿ ಸಂಚರಿಸುವುದಿದೆ.
ಸಾಮಾನ್ಯವಾಗಿ ಎಲ್ಲರೂ ನೋಡಿರುವುದು ಒಂದೇ ಜಾತಿಯ ಡಾಲ್ಫಿನ್ ಗಳನ್ನು. ಅಕ್ವೇರಿಯಂಗಳಲ್ಲಿ ಸಾಕುವುದು ಕೇವಲ ಬಾಟಲ್ ನೋಸ್ಡ್ ಡಾಲ್ಫಿನ್ ಗಳನ್ನು. ಏಕೆಂದರೆ ಅವು ಡಾಲ್ಫಿನ್ ಗಳಲ್ಲೆಲ್ಲ ಅತ್ಯಂತ ಕುಶಾಗ್ರಮತಿಯವು ಮತ್ತು ಅತ್ಯಂತ ಚಟುವಟಿಕೆಯಿಂದ ಇರುವಂಥವು. ಆದ್ದರಿಂದ ಅವುಗಳ ಒಡನಾಟವನ್ನು ಎಲ್ಲರೂ ಇಷ್ಟಪಡುತ್ತಾರೆ. ಸ್ನೇಹಪರವಾದ ಮುಗ್ಧಜೀವಿಗಳಾದ ಅವುಗಳ ಈ ಸ್ವಭಾವವನ್ನು ಒಮ್ಮೊಮ್ಮೆ ಕೆಲವರು ದುರುಪಯೋಗಪಡಿಸಿಕೊಳ್ಳುವುದು ಮಾತ್ರ ವಿಪರ್ಯಾಸ. ಒಮ್ಮೆ ಒಂದು ಅಕ್ವೇರಿಯಂನಲ್ಲಿ ಒಂದು ಡಾಲ್ಫಿನ್ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸಿ ಕೊಂದುಹಾಕಿತು. ಅದಕ್ಕೆ ನರಹಂತಕನೆಂದು ಹಣೆಪಟ್ಟಿ ಕಟ್ಟಿ ಅದನ್ನು ಕೊಂದುಹಾಕಿದರು. ಆದರೆ ಆಮೇಲೆ ಗೊತ್ತಾಗಿದ್ದೇನೆಂದರೆ ಅದರ ಮೂಗಿನ ಹೊಳ್ಳೆಗಳೊಳಕ್ಕೆ ಐಸ್ ಕ್ರೀಂ ಕಡ್ಡಿಗಳನ್ನೆಲ್ಲ ಚುಚ್ಚಿ ಏನೇನೋ ಚಿತ್ರಹಿಂಸೆ ನೀಡಿದ್ದರು. ಆದ್ದರಿಂದಲೇ ಅದು ತಾಳ್ಮೆ ಕಳೆದುಕೊಂಡು ದಾಳಿ ನಡೆಸಿತ್ತು.
ಡಾಲ್ಫಿನ್ ಗಳು ಸಿಟೇಶನ್ಸ್ ವರ್ಗಕ್ಕೆ ಸೇರಿದ ಜೀವಿಗಳು. ಈ ವರ್ಗದಲ್ಲಿ ಹಲ್ಲಿನ ತಿಮಿಂಗಿಲಗಳು ಮತ್ತು ಬಲೀನ್ ತಿಮಿಂಗಿಲಗಳು ಎಂಬ ಎರಡು ಬೇರೆಬೇರೆ ಉಪವರ್ಗಗಳಿವೆ. ಬಲೀನ್ ತಿಮಿಂಗಿಲಗಳ ಗುಂಪಿನಲ್ಲೇ ಜಗತ್ತಿನಲ್ಲಿ ಯಾವುದೇ ಕಾಲಘಟ್ಟದಲ್ಲಿ ಬದುಕಿದ್ದ ಅತಿದೊಡ್ಡ ಪ್ರಾಣಿಯಾದ ನೀಲಿ ತಿಮಿಂಗಿಲ ಬರುತ್ತದೆ. ಹಲ್ಲಿನ ತಿಮಿಂಗಿಲಗಳ ಉಪವರ್ಗದ ಅತಿದೊಡ್ಡ ಕುಟುಂಬವಾದ “ಡೆಲ್ಫಿನಿಡೇ” ಕುಟುಂಬದಲ್ಲಿ ಎಲ್ಲ ಡಾಲ್ಫಿನ್ ಗಳೂ ಬರುತ್ತವೆ. ಹೆಚ್ಚಿನೆಲ್ಲ ಡಾಲ್ಫಿನ್ ಗಳದ್ದೂ ಹೆಚ್ಚುಕಡಿಮೆ ಒಂದೇ ರೂಪ. ಸ್ಥೂಲವಾಗಿ ಮೀನನ್ನು ಹೋಲುವ ದೇಹ, ಉದ್ದನೆಯ ಮೂತಿ, ಸಾಮಾನ್ಯವಾಗಿ ನೀಲಿ ಅಥವಾ ಬೂದುಬಣ್ಣ ಇದೇ ಡಾಲ್ಫಿನ್ ಗಳ ಸಾಮಾನ್ಯ ವಿವರಣೆ.
ಡಾಲ್ಫಿನ್ ಗಳ ಜೊತೆಗೆ ಅವುಗಳ ಸಮೀಪದ ಸಂಬಂಧಿಗಳಾದ ಪಾರ್ಪಾಯ್ಸ್ ಗಳೂ ಸಹ ಪ್ರಮುಖ ಸಾಗರವಾಸಿ ಸಸ್ತನಿಗಳಾಗಿವೆ. ಸಾಗರವಾಸಿ ಸಸ್ತನಿಗಳಲ್ಲೇ ಅವು ಅತಿ ಚಿಕ್ಕವು. ಅವು ಗಾತ್ರದಲ್ಲಿ ಡಾಲ್ಫಿನ್ ಗಳಿಗಿಂತ ಚಿಕ್ಕವು ಮತ್ತು ಅವುಗಳ ವೈವಿಧ್ಯವೂ ಕಡಿಮೆಯೇ. ಕೇವಲ ಆರು ಪ್ರಭೇದದ ಪಾರ್ಪಾಯ್ಸ್ ಗಳು ಮಾತ್ರ ಅಸ್ತಿತ್ವದಲ್ಲಿವೆ. ಅವುಗಳ ಮೂತಿ ಸಹ ಡಾಲ್ಫಿನ್ ಮೂತಿಯಂತೆ ಉದ್ದಕ್ಕಿರದೆ ಸಾಮಾನ್ಯವಾಗಿರುತ್ತದೆ. ಈ ವ್ಯತ್ಯಾಸಗಳಿಂದ ಪಾರ್ಪಾಯ್ಸ್ ಗಳನ್ನು ಸುಲಭವಾಗಿ ಗುರುತಿಸಬಹುದು.
ಡಾಲ್ಫಿನ್ ಗಳ ಕುಟುಂಬದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಭಯಾನಕ ಬೇಟೆಗಾರ ಪ್ರಾಣಿಗಳೆಂದರೆ “ಕಿಲ್ಲರ್ ವ್ಹೇಲ್” ಅಥವಾ ಓರ್ಕಾಗಳು. ಕೊಲೆಗಡುಕ ತಿಮಿಂಗಿಲ ಎಂದೇ ಹೆಸರಾಗಿರುವ ಈ ಬೃಹತ್ ಡಾಲ್ಫಿನ್ ಗಳು ಮೂವತ್ತು ಅಡಿ ಉದ್ದ ಬೆಳೆಯುತ್ತವೆ ಮತ್ತು ಹತ್ತು ಟನ್ ತನಕ ತೂಗುತ್ತವೆ. ಸಣ್ಣಪುಟ್ಟ ಡಾಲ್ಫಿನ್ ಗಳಿಂದ ಹಿಡಿದು ಬೃಹತ್ ನೀಲಿ ತಿಮಿಂಗಿಲದ ತನಕ ಇವು ಸಿಕ್ಕಿದ್ದನ್ನೆಲ್ಲ ಬೇಟೆಯಾಡುತ್ತವೆ. ಸೀಲ್ ಗಳು ಮತ್ತು ಸೀ ಲಯನ್ ಗಳು ಇವುಗಳ ಅತಿಮುಖ್ಯ ಆಹಾರ. ಗುಂಪುಗುಂಪಾಗಿ ಚಲಿಸುವ ಇವುಗಳ ಬಗೆಗೆ ತಿಳಿದಿರುವ ಸೀಲ್ ಮತ್ತು ಸೀ ಲಯನ್ ಗಳು ಸಾಮಾನ್ಯವಾಗಿ ಸಮುದ್ರದ ಅಂಚಿನಿಂದ ಸಾಕಷ್ಟು ದೂರದಲ್ಲೇ ಇರುತ್ತವೆ. ಆದರೆ ಎಷ್ಟೇ ದೂರದಲ್ಲಿದ್ದರೂ ಆಹಾರಕ್ಕಾಗಿ ಕೊನೆಗೊಮ್ಮೆ ಸಮುದ್ರಕ್ಕೆ ಅವು ಮರಳಲೇಬೇಕು. ಅದೇ ಕ್ಷಣಕ್ಕಾಗಿ ಕಾದುಕುಳಿತಿರುವ ಓರ್ಕಾಗಳು ಎಲ್ಲ ಕಡೆಗಳಿಂದ ಅವುಗಳ ಮೇಲೆ ದಾಳಿ ನಡೆಸಿ ಕೊಂದುಹಾಕುತ್ತವೆ. ಒಮ್ಮೊಮ್ಮೆ ದಡಕ್ಕೆ ತೀರಾ ಸಮೀಪ ಬಂದು ಓರ್ಕಾಗಳು ದಾಳಿ ನಡೆಸುತ್ತವೆ. ಬೇರೆ ಯಾವುದೇ ತಿಮಿಂಗಿಲ ಅಷ್ಟೊಂದು ಧೈರ್ಯವಾಗಿ ಮತ್ತು ರಾಜಾರೋಷವಾಗಿ ದಂಡೆಯ ಸಮೀಪಕ್ಕೆ ಬಂದು ದಾಳಿ ನಡೆಸುವುದಿಲ್ಲ. ಜೊತೆಗೆ ಬೂದು ತಿಮಿಂಗಿಲ, ಚೌದಲೆ ತಿಮಿಂಗಿಲ, ಮಿಂಕ್ ತಿಮಿಂಗಿಲ, ಹೀಗೆ ಎಲ್ಲ ಜಾತಿಯ ತಿಮಿಂಗಿಲಗಳೂ ಓರ್ಕಾಗಳ ಆಕ್ರಮಣಕ್ಕೆ ತುತ್ತಾಗುತ್ತವೆ. ಪ್ರೌಢ ತಿಮಿಂಗಿಲಗಳ ಮೇಲೆ ಅವು ಸಾಮಾನ್ಯವಾಗಿ ದಾಳಿ ಮಾಡುವುದಿಲ್ಲ. ಆದರೆ ಒಮ್ಮೊಮ್ಮೆ ಸಮುದ್ರದಲ್ಲಿ ಕೆಲವು ತಾಯಿ ತಿಮಿಂಗಿಲಗಳು ತಮ್ಮ ಈಗಷ್ಟೇ ಹುಟ್ಟಿದ ಮರಿಯ ಜೊತೆ ಸಹಸ್ರಾರು ಮೈಲುಗಳ ಪ್ರಯಾಣ ಕೈಗೊಳ್ಳುತ್ತವೆ. ಅದು ಓರ್ಕಾಗಳಿಗೆ ಸುವರ್ಣಾವಕಾಶವನ್ನೊದಗಿಸುತ್ತದೆ. ತಾಯಿ ಎಷ್ಟೇ ಎಚ್ಚರಿಕೆ ವಹಿಸಿದರೂ ಗುಂಪಾಗಿ ಬಂದು ದಾಳಿಯಿಡುವ ಓರ್ಕಾಗಳ ಎದುರು ಅದು ಅಸಹಾಯಕವಾಗಿ ತನ್ನ ಮರಿಯ ಸಾವನ್ನು ಕಣ್ಣಾರೆ ನೋಡುವಂತಾಗುತ್ತದೆ.
ಡಾಲ್ಫಿನ್ ಗಳ ಕುಟುಂಬದಲ್ಲೇ ದೊಡ್ಡದಾದ ಆರು ಪ್ರಭೇದಗಳಿಗೆ ತಿಮಿಂಗಿಲ ಎಂಬ ನಾಮಧೇಯವನ್ನು ಸೇರಿಸಿ ಹೇಳುತ್ತಾರೆ. ಅವುಗಳಲ್ಲಿ ಓರ್ಕಾ ಕೂಡ ಒಂದು. ಉಳಿದಂತೆ ಫಾಲ್ಸ್ ಕಿಲ್ಲರ್ ವ್ಹೇಲ್, ಪಿಗ್ಮಿ ಕಿಲ್ಲರ್ ವ್ಹೇಲ್, ಮೆಲನ್ ಹೆಡೆಡ್ ವ್ಹೇಲ್, ಲಾಂಗ್ ಫಿನ್ಡ್ ಪೈಲಟ್ ವ್ಹೇಲ್ ಮತ್ತು ಶಾರ್ಟ್ ಫಿನ್ಡ್ ಪೈಲಟ್ ವ್ಹೇಲ್ ಇತರೆ ಐದು ಪ್ರಭೇದಗಳು. ಈ ಡಾಲ್ಫಿನ್ ಗಳೆಲ್ಲ ಬೇರೆ ಪ್ರಭೇದದ ಡಾಲ್ಫಿನ್ ಗಳಿಗಿಂತ ದೊಡ್ಡದಾಗಿರುವ ಕಾರಣ ತಿಮಿಂಗಿಲ ಎಂದು ಕರೆಯುತ್ತಾರೆ. ವಾಸ್ತವವಾಗಿ ಎಲ್ಲ ಡಾಲ್ಫಿನ್ ಮತ್ತು ತಿಮಿಂಗಿಲಗಳೂ ಒಂದೇ ವರ್ಗಕ್ಕೆ ಸೇರಿದ ಸಸ್ತನಿಗಳು. ಈ ಪೈಕಿ ಓರ್ಕಾ ಒಂದನ್ನು ಹೊರತುಪಡಿಸಿದರೆ ಇನ್ನೆಲ್ಲ ಸಾಮಾನ್ಯವಾಗಿ ಮೀನುಗಳನ್ನೇ ತಿಂದು ಬದುಕುವಂಥವು.
ಡಾಲ್ಫಿನ್ ಗಳ ಬುದ್ಧಿವಂತಿಕೆಯನ್ನು ಅಭ್ಯಸಿಸಲು ವಿಜ್ಞಾನಿಗಳು ಅನೇಕ ಪ್ರಯತ್ನಗಳನ್ನು ಕೈಗೊಂಡರು. ಮೊದಲು ಭೂಮಿಯ ಮೇಲೆ ಮನುಷ್ಯ, ವಾನರಗಳು ಮತ್ತು ಆನೆಗಳಿಗೆ ಮಾತ್ರ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬಗಳನ್ನು ಗುರುತಿಸುವ ಸಾಮರ್ಥ್ಯವಿದೆಯೆಂದು ಭಾವಿಸಲಾಗಿತ್ತು. ಆದರೆ ನಂತರ ಅಂಥ ಸಾಮರ್ಥ್ಯ ಡಾಲ್ಫಿನ್ ಗಳಿಗೂ ಇದೆಯೆಂದು ತಿಳಿದುಬಂತು. ಅವುಗಳಲ್ಲೂ ಮರಿಗಳಲ್ಲಿ ಕಲಿಯುವ ಉತ್ಸಾಹ, ಕುತೂಹಲ ಹೆಚ್ಚಾಗಿರುವುದನ್ನು ವಿಜ್ಞಾನಿಗಳು ಗಮನಿಸಿದರು. ನೀರಿನಲ್ಲಿ ಗುಳ್ಳೆಗಳನ್ನು ಮೂಡಿಸುವುದು, ನೀರಿನಲ್ಲಿ ಗಾಳಿಗುಳ್ಳೆಗಳ ವೃತ್ತಗಳನ್ನು ಏರ್ಪಡಿಸಿದರೆ ಕುತೂಹಲದಿಂದ ಅವುಗಳನ್ನು ಒಡೆಯುವುದು, ಸುತ್ತಮುತ್ತ ನೆರೆದ ಮನುಷ್ಯರ ಬಳಿಗೆ ಕುತೂಹಲದಿಂದ ಧಾವಿಸುವುದು ಹೀಗೆ ಎಲ್ಲ ರೀತಿಯಿಂದಲೂ ಅವು ಅದ್ವಿತೀಯ ನಡವಳಿಕೆಯನ್ನು ತೋರುತ್ತಿರುತ್ತವೆ. ಆದ್ದರಿಂದಲೇ ಅಕ್ವೇರಿಯಂಗಳಲ್ಲಿ ಸಾಮಾನ್ಯವಾಗಿ ಡಾಲ್ಫಿನ್ ಗಳನ್ನು ಸಾಕಿಯೇ ಇರುತ್ತಾರೆ.
ಡಾಲ್ಫಿನ್ ಗಳು ಮಾನವಸ್ನೇಹಿ ನಡವಳಿಕೆಯಿಂದಲೂ ಹೆಸರಾಗಿವೆ. ಅನೇಕ ಸಂದರ್ಭಗಳಲ್ಲಿ ಡಾಲ್ಫಿನ್ ಗಳು ಶಾರ್ಕ್ ಗಳ ದಾಳಿಗೆ ತುತ್ತಾಗಿದ್ದ ಮನುಷ್ಯರನ್ನು ರಕ್ಷಿಸಿದ್ದ ಉದಾಹರಣೆಗಳಿವೆ. ಹತ್ತಾರು ಡಾಲ್ಫಿನ್ ಗಳು ಮನುಷ್ಯನನ್ನು ಸುತ್ತುವರೆದು ಶಾರ್ಕ್ ಗಳಿಗೆ ಅವನನ್ನು ಮುಟ್ಟಲು ಸಾಧ್ಯವಾಗದಂತೆ ಗೋಡೆ ನಿರ್ಮಿಸಿ ರಕ್ಷಿಸಿದ ಉದಾಹರಣೆಗಳಿವೆ. ಇನ್ನೂ ಅನೇಕ ಸಂದರ್ಭಗಳಲ್ಲಿ ಈಜುಬಾರದೆ ಮುಳುಗುತ್ತಿದ್ದವರನ್ನು ಸಹ ಅವು ಮೇಲೆತ್ತಿ ತಂದು ರಕ್ಷಿಸಿದ ಉದಾಹರಣೆಗಳಿವೆ. ಇವನ್ನೆಲ್ಲ ಗಮನಿಸಿದಾಗ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸಿ ಕೊಂದುಹಾಕಿದ ಡಾಲ್ಫಿನ್ ಕೂಡ ಸ್ವಭಾವತಃ ನರಹಂತಕನಲ್ಲ ಮತ್ತು ಅದು ಸಂಯಮ ಕಳೆದುಕೊಂಡು ದಾಳಿ ನಡೆಸಲು ಮನುಷ್ಯನೇ ನೇರ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವೂ ಉಳಿಯುವುದಿಲ್ಲ.
ಡಾಲ್ಫಿನ್ ಗಳು ಬೇಟೆಯಾಡುವುದನ್ನು ಕೂಡ ನೋಡುವುದೇ ಒಂದು ಸೊಗಸು. ಅನೇಕ ಡಾಲ್ಫಿನ್ ಗಳು ಒಟ್ಟಾಗಿ ಸಾಮಾನ್ಯವಾಗಿ ಹೆರ್ರಿಂಗ್ ಮತ್ತು ಸಾರ್ಡೀನ್ ಮೀನುಗಳನ್ನು ಬೇಟೆಯಾಡುತ್ತವೆ. ಈ ಮೀನುಗಳು ಒಮ್ಮೊಮ್ಮೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಒಂದೆಡೆ ನೆರೆದಿರುತ್ತವೆ. ಆಗ ಒಟ್ಟಾಗಿ ಅವುಗಳನ್ನು ಸುತ್ತುವರೆದು ಒಂದೆಡೆ ಕೂಡಿಹಾಕಿ ನಂತರ ಸುತ್ತಲಿಂದ ದಾಳಿನಡೆಸಿ ಹಿಡಿಯುತ್ತವೆ. ಮೀನುಗಳ ಈ ರಾಶಿಯಲ್ಲಿ ಯಾವುದೇ ಒಂದು ಮೀನನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿ ಹಿಡಿಯುವುದು ಅಸಾಧ್ಯ, ಏಕೆಂದರೆ ಸದಾ ಕ್ಷಿಪ್ರಗತಿಯಲ್ಲಿ ಚಲಿಸುತ್ತಿರುವ ಇವುಗಳನ್ನು ಹಿಡಿಯುವುದು ಬಹಳ ಕಷ್ಟ. ಒಂಟೊಂಟಿಯಾಗಿದ್ದರೆ ಇವುಗಳನ್ನು ಹಿಡಿಯುವುದು ಡಾಲ್ಫಿನ್ ಗಳಿಗೆ ಅಸಾಧ್ಯವೇ ಸರಿ.
ಸಾಮಾನ್ಯವಾಗಿ ಅವು ಬೆಚ್ಚಗಿನ ವಾತಾವರಣವಿರುವ ಸಾಗರಗಳಲ್ಲಿಯೇ ವಾಸಿಸುತ್ತವೆ. ಅತ್ಯಂತ ಶೀತಲವಾದ ಸಾಗರಗಳಲ್ಲಿ ಅವುಗಳ ಅಸ್ತಿತ್ವ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕೆಲವು ಜಾತಿಯ ಡಾಲ್ಫಿನ್ ಗಳು ಶಿತಲ ಸಾಗರಗಳಿಂದ ಬೆಚ್ಚಗಿನ ಸಾಗರಗಳಿಗೆ ವಲಸೆ ಹೋಗುತ್ತವೆ. ಆದರೆ ಓರ್ಕಾಗಳು ಮಾತ್ರ ಶೀತಲವಾದ ಆರ್ಕ್ ಟಿಕ್ ಮತ್ತು ಅಂಟಾರ್ಕ್ಟಿಕ್ ಸಾಗರಗಳಲ್ಲೂ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಅವುಗಳ ಮುಖ್ಯ ಆಹಾರವಾದ ಸೀಲ್ ಮತ್ತು ಸೀಲಯನ್ ಗಳು ಇರುವುದೇ ಈ ಚಳಿ ಕೊರೆಯುವ ಪ್ರದೇಶಗಳಲ್ಲಿ.
ನದಿವಾಸಿ ಡಾಲ್ಫಿನ್ ಗಳಲ್ಲಿ ಇರುವುದು ಕೇವಲ ನಾಲ್ಕೇ ನಾಲ್ಕು ಪ್ರಭೇದಗಳು. ಈ ನಾಲ್ಕು ಪ್ರಭೇದಗಳೂ ಸಾಗರವಾಸಿ ಡಾಲ್ಫಿನ್ ಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವುದಲ್ಲದೆ ತಮ್ಮತಮ್ಮಲ್ಲೇ ವ್ಯತ್ಯಾಸವನ್ನು ಹೊಂದಿವೆ. ಆದ್ದರಿಂದ ಅವೆಲ್ಲವನ್ನೂ ಪ್ರತ್ಯೇಕವಾಗಿ ಬೇರೆಬೇರೆ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗಂಗಾ ನದಿಯ ಡಾಲ್ಫಿನ್, ಅಮೆಜಾನ್ ನದಿಯ ಡಾಲ್ಫಿನ್, ಚೈನೀಸ್ ರಿವರ್ ಡಾಲ್ಫಿನ್ ಮತ್ತು ಲಾಪ್ಲೇಟಾ ಡಾಲ್ಫಿನ್ ಇವೇ ಈ ನಾಲ್ಕು ಡಾಲ್ಫಿನ್ ಪ್ರಭೇದಗಳು. ಈ ಪೈಕಿ ಚೈನೀಸ್ ರಿವರ್ ಡಾಲ್ಫಿನ್ ಸಂಪೂರ್ಣವಾಗಿ ನಾಮಾವಶೇಷವಾಗಿದೆ ಎಂದೇ ನಂಬಲಾಗಿದೆ. ಏಕೆಂದರೆ 2006ರ ನಂತರ ಇದನ್ನು ಕಂಡವರಿಲ್ಲ. ಆಧುನಿಕ ಮಾನವನ ಐಷಾರಾಮಕ್ಕೆ ಬಲಿಯಾದ ಜೀವಿಗಳ ಸಾಲಿಗೆ ಇದೂ ಸೇರಿದೆ. ಇದಕ್ಕೆ ಬೈಜಿ ಎಂಬ ಹೆಸರೂ ಇದೆ. ಅಮೆಜಾನ್ ನದಿಯ ಡಾಲ್ಫಿನ್ ಗೆ ಬೋಟೋ ಎಂಬ ಹೆಸರಿದೆ. ಇದು ನದಿವಾಸಿ ಡಾಲ್ಫಿನ್ ಗಳಲ್ಲೇ ಅತಿದೊಡ್ಡ ಡಾಲ್ಫಿನ್ ಎಂದೇ ಹೆಸರಾಗಿದೆ. ಸುಮಾರು ಎಂಟು ಅಡಿ ಉದ್ದವಿರುವ ಇವು ಇನ್ನೂರು ಕಿಲೋಗ್ರಾಂ ತೂಗುತ್ತವೆ. ಗುಲಾಬಿ ಬಣ್ಣದ ಇವು ನದಿವಾಸಿ ಡಾಲ್ಫಿನ್ ಗಳ ಪೈಕಿ ಅತ್ಯಂತ ವೈವಿಧ್ಯಮಯವಾದ ಆಹಾರವನ್ನು ಸೇವಿಸುತ್ತವೆ. ಇವುಗಳ ಆಹಾರವು ಐವತ್ತಕ್ಕೂ ಹೆಚ್ಚು ಬೇರೆಬೇರೆ ಜಾತಿಯ ಮೀನುಗಳನ್ನು ಒಳಗೊಂಡಿದೆ. ಐದು ಸೆಂಟಿಮೀಟರ್ ನಿಂದ ಹಿಡಿದು ಎಂಬತ್ತು ಸೆಂಟಿಮೀಟರ್ ತನಕ ಬೇರೆಬೇರೆ ಗಾತ್ರದ ಮೀನುಗಳನ್ನು ಹಿಡಿದು ತಿನ್ನುತ್ತವೆ. ಬಹುಮುಖ್ಯವಾಗಿ ಸಿಕ್ಲಿಡ್ ಮತ್ತು ಪಿರಾನ್ಹಾಗಳನ್ನು ತಿನ್ನುತ್ತವೆ.
ನದಿವಾಸಿ ಡಾಲ್ಫಿನ್ ಗಳಿಗೂ ಸಾಗರವಾಸಿ ಡಾಲ್ಫಿನ್ ಗಳಿಗೂ ಅನೇಕ ವ್ಯತ್ಯಾಸಗಳಿವೆ. ಬಹುಮುಖ್ಯ ವ್ಯತ್ಯಾಸವೆಂದರೆ ಅವುಗಳ ದೃಷ್ಟಿ. ನದಿಗಳಲ್ಲಿ ಸಾಮಾನ್ಯವಾಗಿ ನೀರು ತಿಳಿಯಾಗಿರುವುದಿಲ್ಲ. ಗಂಗಾ, ಅಮೆಜಾನ್ ಗಳಂಥ ಬೃಹತ್ ನದಿಗಳಲ್ಲಿ ಕೆಸರುಮಿಶ್ರಿತ ನೀರೇ ಸಾಮಾನ್ಯ. ಇಡೀ ನದಿಯೆಲ್ಲ ರಾಡಿಯಾದಂತೆ ಇರುವುದೂ ಇದೆ. ಹಾಗಾಗಿ ಕಣ್ಣುಗಳ ಉಪಯೋಗ ಅಲ್ಲಿ ಏನೂ ಇಲ್ಲ. ಆದ್ದರಿಂದಲೇ ನದಿವಾಸಿ ಡಾಲ್ಫಿನ್ ಗಳೆಲ್ಲ ಬಹುಪಾಲು ಕುರುಡಾಗಿರುತ್ತವೆ. ಅವು ಸೋನಾರ್ ತಂತ್ರಜ್ಞಾನದಿಂದಲೇ ತಮ್ಮ ದಾರಿ ಕಂಡುಕೊಳ್ಳುತ್ತವೆ. ಜೊತೆಗೆ ತಮ್ಮ ಬೇಟೆಯನ್ನು ಕಂಡುಹಿಡಿಯುವುದೂ ಸಹ ಹೀಗೆಯೇ. ತಮ್ಮ ಬಾಯಿಯಿಂದಲೇ ಅವು ಹೊರಬಿಟ್ಟ ಸಂಜ್ಞೆಗಳು ಎದುರಿನ ವಸ್ತುವಿಗೆ ಬಡಿದು ಪ್ರತಿಫಲಿಸಿದಾಗ ಅದನ್ನು ಗ್ರಹಿಸಿ ಅವು ವಸ್ತುವಿನ ಗಾತ್ರ, ದೂರ ಎಲ್ಲವನ್ನೂ ಕರಾರುವಾಕ್ಕಾಗಿ ಗ್ರಹಿಸಿ ಹಿಡಿಯುತ್ತವೆ. ಸಾಗರವಾಸಿ ಡಾಲ್ಫಿನ್ ಗಳೂ ಇದನ್ನು ಬಳಸುತ್ತವೆಯಾದರೂ ಅವುಗಳ ದೃಷ್ಟಿ ಚೆನ್ನಾಗಿಯೇ ಇರುತ್ತದೆ.
ಸಾಗರವಾಸಿ ಡಾಲ್ಫಿನ್ ಗಳಲ್ಲಿ ಮೊದಲೇ ತಿಳಿಸಿದಂತೆ ವೈವಿಧ್ಯಗಳೂ ಜಾಸ್ತಿ, ಜೊತೆಗೆ ಅವುಗಳ ನಡವಳಿಕೆಗಳಲ್ಲೂ ಅನೇಕ ವಿಧದ ವ್ಯತ್ಯಾಸಗಳನ್ನು ಕಾಣಬಹುದು. ಎಲ್ಲ ಡಾಲ್ಫಿನ್ ಗಳ ಪೈಕಿ ಸ್ಪಿನ್ನರ್ ಡಾಲ್ಫಿನ್ ಎಂಬ ಒಂದು ವಿಧ ತುಂಬಾ ವಿಶೇಷವಾದದ್ದು, ಏಕೆಂದರೆ ಅದು  ನೀರಿನಿಂದ ಮೇಲಕ್ಕೆ ಹಾರಿ ಗಾಳಿಯಲ್ಲಿ ಗಿರಿಗಿರಿ ತಿರುಗುತ್ತ ಮತ್ತೆ ನೀರಿಗೆ ಧುಮುಕುತ್ತದೆ. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಇದರ ಚಿನ್ನಾಟವನ್ನು ನೋಡಲು ತುಂಬಾ ಚೆನ್ನಾಗಿರುತ್ತದೆ. ಜೊತೆಗೆ ಬೆನ್ನಿನ ಮೇಲೆ ಈಜುರೆಕ್ಕೆಗಳು (ಡಾರ್ಸಲ್ ಫಿನ್) ಇಲ್ಲದ ಇನ್ನೆರಡು ಜಾತಿಯ ಡಾಲ್ಫಿನ್ ಗಳಿವೆ. ಇವುಗಳನ್ನು ಉತ್ತರದ ರೈಟ್ ತಿಮಿಂಗಿಲ ಡಾಲ್ಫಿನ್ ಮತ್ತು ದಕ್ಷಿಣದ ರೈಟ್ ತಿಮಿಂಗಿಲ ಡಾಲ್ಫಿನ್ ಎಂದು ಕರೆಯುತ್ತಾರೆ. ರೈಟ್ ತಿಮಿಂಗಿಲಗಳಿಗೂ ಡಾರ್ಸಲ್ ಫಿನ್ ಇರುವುದಿಲ್ಲ, ಆದ್ದರಿಂದ ಈ ಡಾಲ್ಫಿನ್ ಗಳನ್ನು ಅವುಗಳ ಹೆಸರಿನ ಆಧಾರದ ಮೇಲೆ ಹೆಸರಿಸಲಾಗಿದೆ.
ಡಾಲ್ಫಿನ್ ಗಳು ಮನುಷ್ಯನ ಸ್ನೇಹಿತರಾಗಿಯೂ ಪ್ರಸಿದ್ಧವಾಗಿವೆ. ಸಂಕಷ್ಟದ ಸಮಯದಲ್ಲಿ ಮನುಷ್ಯರನ್ನು ರಕ್ಷಿಸುವುದೂ ಅಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಮನುಷ್ಯರ ಚಿಕಿತ್ಸೆಯಲ್ಲಿ ಡಾಲ್ಫಿನ್ ಥೆರಪಿ ತುಂಬಾ ಹೆಸರುವಾಸಿಯಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಡಾಲ್ಫಿನ್ ಗಳ ಜೊತೆಗಿನ ಒಡನಾಟ ಅವರ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂಬುದು ಕೆಲವು ವಿಜ್ಞಾನಿಗಳ ಸಂಶೋಧನೆಯ ಸಾರಾಂಶ. ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳ ಜೊತೆಗಿನ ಒಡನಾಟವೂ ಇದೇ ಫಲಿತಾಂಶವನ್ನು ನೀಡುತ್ತದೆ. ಆದರೆ ಇದರ ಬಗ್ಗೆ ವಿಜ್ಞಾನಿಗಳಲ್ಲಿ ಸಹಮತವಿಲ್ಲ. ಅನೇಕ ವಿಜ್ಞಾನಿಗಳು ಡಾಲ್ಫಿನ್ ಗಳ ಜೊತೆಗಿನ ಒಡನಾಟದಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎನ್ನುತ್ತಾರೆ. ಅದೇನೇ ಆಗಿದ್ದರೂ ಡಾಲ್ಫಿನ್ ಮನುಷ್ಯನ ಆತ್ಮೀಯ ಸ್ನೇಹಿತನಾಗಿರಬಲ್ಲದು ಎಂಬುದು ಮಾತ್ರ ಸತ್ಯ.
ಸಾಗರದಲ್ಲಿ ಚಿನ್ನಾಟವಾಡುವುದು ಡಾಲ್ಫಿನ್ ಗಳಿಗೆ ಬಹಳ ಪ್ರಿಯವಾದದ್ದು. ಬಹುತೇಕ ಎಲ್ಲ ಜಾತಿಯ ಡಾಲ್ಫಿನ್ ಗಳೂ ನೀರಿನ ಮೇಲೆ ನೆಗೆದು ಮತ್ತೆ ಮರಳಿ ನೀರಿಗೆ ಧುಮುಕುವ ಆಟವನ್ನು ಆಡುತ್ತವೆ. ಅವು ತಿಮಿಂಗಿಲಗಳಂತೆ ಸಸ್ತನಿಗಳಾದ್ದರಿಂದ ಉಸಿರೆಳೆದುಕೊಳ್ಳಲು ನೀರಿನಿಂದ ಮೇಲಕ್ಕೆ ಬರಲೇಬೇಕು. ಹಾಗೆ ಉಸಿರೆಳೆದುಕೊಳ್ಳುವಾಗ ನೀರಿನಿಂದ ಮೇಲಕ್ಕೆ ಚಿಮ್ಮಿ ಹಾರುತ್ತವೆ. ಹಾರುವಾಗಲೂ ಒಂದೊಂದು ಡಾಲ್ಫಿನ್ ಒಂದೊಂದು ರೀತಿ ಹಾರುತ್ತದೆ. ಕೆಲವು ಡಾಲ್ಫಿನ್ ಗಳು ಗುಂಪಾಗಿ ಚಿನ್ನಾಟವಾಡುವುದಂತೂ ನೋಡಲು ಕಣ್ಣಿಗೆ ಹಬ್ಬವೇ ಸರಿ.
ಡಾಲ್ಫಿನ್ ಗಳ ಮತ್ತೊಂದು ವಿಶೇಷವೆಂದರೆ ಅವು ನಿದ್ರಿಸುವಾಗ ಮೆದುಳಿನ ಅರ್ಧಭಾಗ ಮಾತ್ರ ನಿದ್ರಿಸುತ್ತಿರುತ್ತದೆ ಹಾಗೂ ಇನ್ನರ್ಧ ಭಾಗ ಎಚ್ಚರವಾಗಿಯೇ ಇರುತ್ತದೆ. ಆದ್ದರಿಂದ ಉಸಿರಾಡಲು ಮತ್ತು ಶತ್ರುಗಳಿಂದ ಪಾರಾಗಲು ಅವು ಸದಾ ಸನ್ನದ್ಧವಾಗಿಯೇ ಇರುತ್ತವೆ. ಈ ವಿಶಿಷ್ಠ ನಿದ್ರಾಕ್ರಮ ಯಾವುದೇ ನೆಲವಾಸಿ ಸಸ್ತನಿಗೂ ಸಿದ್ಧಿಸಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಅವುಗಳ ವಿಶೇಷತೆ ನಮಗೆ ಅರ್ಥವಾಗುತ್ತದೆ. ಆದರೆ ಅಕ್ವೇರಿಯಂಗಳಲ್ಲಿರುವ ಡಾಲ್ಫಿನ್ ಗಳ ಮೆದುಳಿನ ಎರಡೂ ಭಾಗಗಳು ಏಕಕಾಲಕ್ಕೆ ನಿದ್ರಿಸಿ ಅವು ಸಂಪೂರ್ಣ ನಿದ್ರೆಗೆ ಶರಣಾಗುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಬಹುಶಃ ಶತ್ರುಗಳಿಂದ ಅಲ್ಲಿ ಸಂಪೂರ್ಣ ರಕ್ಷಣೆಯಿದೆ ಎಂಬ ಸುರಕ್ಷತಾಭಾವ ಅವುಗಳ ಸಂಪೂರ್ಣನಿದ್ರೆಗೆ ಕಾರಣವಿರಬಹುದು.
ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿದ ಡಾಲ್ಫಿನ್ ಗಳ ಪ್ರಸ್ತುತ ಸ್ಥಿತಿಗತಿ ಹೇಗಿದೆಯೆಂದು ನೋಡಲು ಹೋದರೆ ನಮಗೆ ನಿರಾಸೆ ಕಾಡುತ್ತದೆ. ಏಕೆಂದರೆ ಎಲ್ಲ ಜಾತಿಯ ಡಾಲ್ಫಿನ್ ಗಳೂ ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯರಿಂದಲೇ ಶೋಷಣೆಗೊಳಗಾಗಿ ಅಪಾಯದಂಚಿನಲ್ಲಿವೆ. ವಿಕೃತ ಜಿಹ್ವಾಚಾಪಲ್ಯದ ಕೆಲವರು ಈ ಮುಗ್ಧಜೀವಿಗಳನ್ನು ಮಾಂಸಕ್ಕಾಗಿ ಕೊಲ್ಲುತ್ತಿದ್ದಾರೆ. ಇನ್ನುಳಿದಂತೆ ಕೆಲವರು ಮೋಜಿಗಾಗಿ ಬೇಟೆಯಾಡುತ್ತಾರೆ, ಇನ್ನು ಕೆಲವರು ಮೀನುಗಾರಿಕೆಗೆಂದು ಉಪಯೋಗಿಸುವ ಆಧುನಿಕ ಉಪಕರಣಗಳು ಇವುಗಳಿಗೆ ಮುಳುವಾಗುತ್ತಿದೆ. ಮೀನುಗಾರಿಕೆಯ ಉಪಕರಣಗಳಿಗೆ ಸಿಕ್ಕು ಪ್ರತಿವರ್ಷ ಲಕ್ಷಾಂತರ ಡಾಲ್ಫಿನ್ ಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಜೊತೆಗೆ ಮನುಷ್ಯರು ಸಮುದ್ರಕ್ಕೆ ಎಸೆಯುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳು, ದೊಡ್ಡ ದೊಡ್ಡ ತೈಲಸಾಗಾಣಿಕಾ ಹಡಗುಗಳಿಂದ ಒಮ್ಮೊಮ್ಮೆ ಸೋರುವ ಭಾರೀ ಪ್ರಮಾಣದ ತೈಲ ಇವೆಲ್ಲವೂ ಡಾಲ್ಫಿನ್ ಗಳಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಜೊತೆಗೆ ಕೆಲವು ಜಾತಿಯ ಡಾಲ್ಫಿನ್ ಗಳನ್ನು ಒಂದು ಜಾತಿಯ ಶಿಲೀಂಧ್ರದ ಸೋಂಕು ಕೂಡ ಕಾಡುವುದು ಕಂಡುಬಂದಿದೆ. ಇನ್ನು ನಮ್ಮ ಗಂಗಾನದಿಯಂತೂ ಯಾವರೀತಿ ಕಲುಷಿತಗೊಂಡಿದೆಯೆಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನದಿವಾಸಿ ಡಾಲ್ಫಿನ್ ಗಳು ಈ ಮಾಲಿನ್ಯದಿಂದಾಗಿಯೇ ಅಪಾಯವನ್ನೆದುರಿಸುತ್ತಿವೆ. ಚೈನೀಸ್ ರಿವರ್ ಡಾಲ್ಫಿನ್ ನಮ್ಮ ಕಣ್ಣೆದುರಿಗೇ ಈಗಾಗಲೇ ನಾಮಾವಶೇಷವಾಗಿ ಹೋಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನೂರಾರು ಪೈಲಟ್ ತಿಮಿಂಗಿಲಗಳು ದಡಕ್ಕೆ ಬಂದು ಸತ್ತುಬಿದ್ದಿದ್ದನ್ನು ಸಹ ಕಣ್ಣಾರೆ ಕಂಡಿದ್ದೇವೆ. ಉಳಿದಿರುವ ಡಾಲ್ಫಿನ್ ಗಳಿಗೂ ಇದೇ ಗತಿ ಬಾರದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು. ನಮ್ಮ ಜಿಹ್ವಾಚಾಪಲ್ಯವನ್ನು ನಿಯಂತ್ರಿಸುವುದು, ಮೀನುಗಾರಿಕೆಯಲ್ಲಿ ಬಳಸುವ ಪ್ರಳಯಾಂತಕ ಯಂತ್ರಗಳ ಬಳಕೆಯಲ್ಲಿ ಒಂದಿಷ್ಟು ವಿವೇಚನೆಯನ್ನು ತೋರುವುದು ಮತ್ತು ನದಿ, ಸಾಗರಗಳಿಗೆ ಯಾವುದೇ ಮಾಲಿನ್ಯಕಾರಕಗಳನ್ನು ಎಸೆಯದಿರುವುದು ಈ ಮೂರು ಸರಳವಾದ ಕೆಲಸಗಳ ಮೂಲಕ ನಾವು ಇಂದು ಸಾಯುತ್ತಿರುವ ಶೇಕಡಾ ತೊಂಬತ್ತರಷ್ಟು ಡಾಲ್ಫಿನ್ ಗಳನ್ನು ಉಳಿಸಬಹುದು. ಆ ಇಚ್ಛಾಶಕ್ತಿ, ಸಹೃದಯತೆ ನಮ್ಮಲ್ಲಿದೆಯೇ?



Thursday 29 September 2016

ಕೀಟಲೋಕದ ಯುದ್ಧವಿಮಾನ: ಡ್ರಾಗನ್ ಫ್ಲೈ

ಕೀಟಲೋಕದ ಯುದ್ಧವಿಮಾನ: ಡ್ರಾಗನ್ ಫ್ಲೈ
ನಾವು ಚಿಕ್ಕವರಿದ್ದಾಗ ಒಂದು ಆಟ ಆಡುತ್ತಿದ್ದೆವು. ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು ಅದರ ಉದ್ದವಾದ ಬಾಲಕ್ಕೆ ಒಂದು ದಾರ ಕಟ್ಟಿ ಅದನ್ನು ಆಡಿಸುವುದು. ಆ ವಯಸ್ಸಿನಲ್ಲಿ ನಮ್ಮ ಆ ದುಷ್ಕೃತ್ಯದಿಂದ ಆ ಪುಟ್ಟ ಜೀವಿಗೆ ಹಿಂಸೆಯಾಗುತ್ತಿತ್ತೆಂದು ನಮಗೆ ಅರಿವಾಗುತ್ತಿರಲಿಲ್ಲ. ಇದೀಗ ಅದನ್ನು ನೆನೆದರೆ ಪಶ್ಚಾತ್ತಾಪವಾಗುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ಏರೋಪ್ಲೇನ್ ಚಿಟ್ಟೆಗಳ ಬಗೆಗೆ ಕುತೂಹಲ ಆರಂಭವಾಗಿದ್ದು ಈ ಮೂಲಕವೇ ಎನ್ನುವುದು ಮಾತ್ರ ನಿಜ. ಕೀಟಜಗತ್ತಿನಲ್ಲಿ ಗಾಳಿಯಲ್ಲಿ ದೊಂಬರಾಟ ಆಡುವುದರಲ್ಲಿ ಏರೋಪ್ಲೇನ್ ಚಿಟ್ಟೆಗಳನ್ನು ಮೀರಿಸುವ ಕೀಟ ಬೇರೊಂದಿಲ್ಲ. ಬಲಿಷ್ಠವಾದ ರೆಕ್ಕೆಗಳ ನೆರವಿನಿಂದ ಇವು ಗಾಳಿಯಲ್ಲಿ ಹಾರುವುದು, ಹಾರುತ್ತಲೇ ಚಿಕ್ಕಪುಟ್ಟ ಕೀಟಗಳನ್ನು ಹಿಡಿದು ತಿನ್ನುವುದು, ಒಮ್ಮೊಮ್ಮೆ ಗಾಳಿಯಲ್ಲೇ ನಿಶ್ಚಲವಾಗಿ ನಿಲ್ಲುವುದು, ಚಕ್ಕನೆ ಸಾಗುತ್ತಿರುವ ದಿಕ್ಕು ಬದಲಿಸಿ ಹಾರುವುದು ಈ ಎಲ್ಲ ದೊಂಬರಾಟಗಳಲ್ಲಿ ಈ ಕೀಟಗಳು ಅದ್ವಿತೀಯ. ಅಲ್ಲದೆ ಅವು ನಮಗೆ ಇದುವರೆಗೆ ಸಿಕ್ಕಿರುವ ಪಳೆಯುಳಿಕೆಗಳ ಪ್ರಕಾರ ಭೂಮಿಯ ಮೇಲೆ ಮೊಟ್ಟಮೊದಲು ಹಾರಾಟವನ್ನು ಕಲಿತ ಜೀವಿಗಳು ಏರೋಪ್ಲೇನ್ ಚಿಟ್ಟೆಗಳೇ. ಅಷ್ಟೇ ಅಲ್ಲ, ಭೂಮಿಯ ಮೇಲೆ ಬದುಕಿದ್ದ ಅತಿ ದೊಡ್ಡ ಹಾರುವ ಕೀಟವೂ ಒಂದು ಜಾತಿಯ ಏರೋಪ್ಲೇನ್ ಚಿಟ್ಟೆಯೇ. ಹಾಗಾಗಿ ಕೀಟ ಜಗತ್ತಿನಲ್ಲಿ ಇವುಗಳಿಗೆ ವಿಶೇಷ ಸ್ಥಾನಮಾನವಿದೆ.
ಪ್ರಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಏರೋಪ್ಲೇನ್ ಚಿಟ್ಟೆಗಳ ಬಗೆಗೆ ಒಂದು ಪದ್ಯವನ್ನು ಬರೆದಿದ್ದಾರೆ. ಈ ಪದ್ಯದಲ್ಲಿ ಏರೋಪ್ಲೇನ್ ಚಿಟ್ಟೆಗಳೇ ಧರೆಯ ಮೇಲೆ ಹಾರಾಟವನ್ನು ಕಲಿತ ಮೊದಲ ಜೀವಿಗಳು ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.
“ಚತುರ್ ಮೀನ್ಸ್ ಕ್ಲೆವರ್
ಆಲ್ಸೋ ಎ ಡ್ರಾಗನ್ ಫ್ಲೈ
ಸ್ಟ್ರಾಂಗ್ ಬೈ ವಿಂಗ್ಸ್ ಅಂಡ್ ಗಾಡ್ ಡ್ಯಾಮ್ ಸ್ಲೈ
ಬಾರ್ನ್ ಆಫ್ ವಾಟರ್, ಇಟ್ ಟೇಕ್ಸ್ ಟು ಸ್ಕೈ
ಫೋರ್ ಮೋಸ್ಟ್ ಆಫ್ ಅನಿಮಲ್ಸ್
ದಟ್ ಲರ್ನ್ಟ್ ಟು ಫ್ಲೈ”
ಎಂಬ ಈ ಪದ್ಯದ ಅರ್ಥ “ಚತುರ ಎಂದರೆ ಜಾಣ, ಜೊತೆಗೆ ಡ್ರಾಗನ್ ಫ್ಲೈ ಎಂಬ ಅರ್ಥವೂ ಇದೆ. ಬಲಿಷ್ಠವಾದ ರೆಕ್ಕೆಗಳನ್ನು ಹೊಂದಿದ ಇದು ಮಹಾನ್ ತಂತ್ರಶಾಲಿ, ನೀರಿನಲ್ಲೇ ಹುಟ್ಟಿ ಆಕಾಶಕ್ಕೆ ನೆಗೆಯುತ್ತದೆ, ಜೊತೆಗೆ ಇದು ಹಾರಾಟವನ್ನು ಕಲಿತ ಮೊದಲ ಪ್ರಾಣಿ” ಎಂದು.
ಏರೋಪ್ಲೇನ್ ಚಿಟ್ಟೆ ಎಂದು ನಾವು ಸಾಮಾನ್ಯವಾಗಿ ಕರೆಯುವ ಈ ಕೀಟಗಳು “ಓಡೋನೇಟಾ” ಎಂಬ ವರ್ಗಕ್ಕೆ ಸೇರಿವೆ. ಇವುಗಳಲ್ಲಿ ಡ್ರಾಗನ್ ಫ್ಲೈ ಮತ್ತು ಡ್ಯಾಮ್ಸೆಲ್ ಫ್ಲೈ ಎಂಬ ಎರಡು ವಿಧಗಳಿವೆ. ನಾವು ಈಗ ಇವುಗಳನ್ನು ಸಂಕ್ಷಿಪ್ತವಾಗಿ ಡ್ರಾಗನ್ ಮತ್ತು ಡ್ಯಾಮ್ಸೆಲ್ ಗಳೆಂದು ಕರೆಯೋಣ. ಇವುಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತದೆ. ಡ್ರಾಗನ್ ಗಳು ಡ್ಯಾಮ್ಸೆಲ್ ಗಳಿಗಿಂತ ಸಾಧಾರಣವಾಗಿ ದೊಡ್ಡದಾಗಿದ್ದು ಬಲಿಷ್ಠವಾಗಿರುತ್ತವೆ. ಅವುಗಳ ರೆಕ್ಕೆಗಳು ಸಹ ಡ್ಯಾಮ್ಸೆಲ್ ಗಳ ರೆಕ್ಕೆಗಳಿಗಿಂತ ಬಲವಾಗಿರುತ್ತವೆ. ಜೊತೆಗೆ ಡ್ರಾಗನ್ ಗಳು ಕುಳಿತಾಗ ರೆಕ್ಕೆಗಳನ್ನು ಅಗಲಿಸಿ ಹಿಡಿದಿರುತ್ತವೆ. ಆದರೆ ಡ್ಯಾಮ್ಸೆಲ್ ಗಳು ರೆಕ್ಕೆಗಳನ್ನು ದೇಹಕ್ಕೆ ಸಮಾನಾಂತರವಾಗಿ ಜೋಡಿಸಿ ಹಿಡಿದಿರುತ್ತವೆ. ಡ್ರಾಗನ್ ಗಳ ಹಿಂದಿನ ರೆಕ್ಕೆಗಳು ಬುಡದಲ್ಲಿ ಮುಂದಿನ ರೆಕ್ಕೆಗಳಿಗಿಂತ ಹೆಚ್ಚು ಅಗಲವಾಗಿರುತ್ತವೆ, ಆದರೆ ಡ್ಯಾಮ್ಸೆಲ್ ಗಳ ಎಲ್ಲ ರೆಕ್ಕೆಗಳು ಒಂದೇ ತೆರನಾಗಿರುತ್ತವೆ. ಡ್ರಾಗನ್ ಗಳ ಕಣ್ಣುಗಳು ಒಂದಕ್ಕೊಂದು ತಾಗಿರುತ್ತವೆ, ಆದರೆ ಡ್ಯಾಮ್ಸೆಲ್ ಗಳ ಕಣ್ಣುಗಳು ಸ್ಪಷ್ಟವಾಗಿ ಒಂದರಿಂದ ಇನ್ನೊಂದು ಪ್ರತ್ಯೇಕಿಸಲ್ಪಟ್ಟಿರುತ್ತವೆ. ಹಾರಾಟದಲ್ಲಿ ಸಹ ಡ್ರಾಗನ್ ಗಳು ಅದ್ವಿತೀಯ ಹಾರಾಟಗಾರರಾದರೆ ಡ್ಯಾಮ್ಸೆಲ್ ಗಳು ಅಷ್ಟೊಂದು ಪರಿಣತ ಹಾರಾಟಗಾರರಲ್ಲ. ತಮ್ಮ ದುರ್ಬಲವಾದ ರೆಕ್ಕೆಗಳ ನೆರವಿನಿಂದ ತಡವರಿಸುತ್ತ ಹಾರಾಡುವ ಇವು ಡ್ರಾಗನ್ ಗಳಂತೆ ಗಾಳಿಯಲ್ಲಿ ಲಾಗ ಹಾಕಲಾರವು. ಸ್ವಲ್ಪ ಅನುಭವವಿರುವ ವ್ಯಕ್ತಿಯು ಕೂಡ ಇವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಲ್ಲ.
ಭೂಮಿಯ ಜೀವಜಗತ್ತಿನ ಇತಿಹಾಸದಲ್ಲಿ ಮೊದಲು ಹಾರತೊಡಗಿದ್ದು ಕೀಟಗಳು. ಪಕ್ಷಿ ಮತ್ತು ಬಾವಲಿಯಂಥ ಸಸ್ತನಿಗಳ ಉಗಮವಾಗುವುದಕ್ಕೆ ಅನೇಕ ಕೋಟಿ ವರ್ಷಗಳ ಮೊದಲೇ ಕೀಟಗಳು ಹಾರಾಟ ಆರಂಭಿಸಿದವು. ಅದರಲ್ಲೂ ಮೊದಲಿಗರೆಂದರೆ ಡ್ರಾಗನ್ ಫ್ಲೈಗಳು. ಸುಮಾರು ಮೂವತ್ತೆರಡು ಕೋಟಿ ವರ್ಷಗಳ ಹಿಂದಿನ ಕೆಲವು ಪಳೆಯುಳಿಕೆಗಳು ನಮಗೆ ಇಂದು ಲಭ್ಯವಾಗಿವೆ. ಕಾರ್ಬಾನಿಫೆರಸ್ ಯುಗಕ್ಕೆ ಸೇರಿದ ಈ ಪಳೆಯುಳಿಕೆಗಳಲ್ಲಿ ಎರಡೂವರೆ ಅಡಿ ಅಗಲದ ರೆಕ್ಕೆಗಳನ್ನು ಹೊಂದಿದ್ದ ಬೃಹದಾಕಾರದ ಡ್ರಾಗನ್ ಫ್ಲೈ ಒಂದರ ಪಳೆಯುಳಿಕೆ ಪತ್ತೆಯಾಗಿದೆ. ಇದುವರೆಗೆ ನಾವು ಕಂಡುಹಿಡಿದಿರುವ ಹಾರುವ ಕೀಟಗಳಲ್ಲೆಲ್ಲ ಇದರದ್ದೇ ದೈತ್ಯಗಾತ್ರ. ಇಂದು ಒಂದೆರಡು ಇಂಚು ಮೀರದ ಡ್ರಾಗನ್ ಗಳೇ ಕೀಟಜಗತ್ತಿನಲ್ಲಿ ಭಯಾನಕ ಬೇಟೆಗಾರರಾಗಿರಬೇಕಾದರೆ ಅಂದಿನ ಆ ಡ್ರಾಗನ್ ಗಳು ಅಂದು ಅಸ್ತಿತ್ವದಲ್ಲಿದ್ದ ಕೀಟಗಳಿಗೆ ಅದೆಂಥ ಭಯಾನಕ ಬೇಟೆಗಾರರಾಗಿದ್ದಿರಬಹುದೆಂದು ನಾವು ಊಹಿಸಬಹುದಾಗಿದೆ.
ಕೀಟಸಾಮ್ರಾಜ್ಯದಲ್ಲಿ ರೂಪಪರಿವರ್ತನೆ (ಮೆಟಾಮಾರ್ಫಾಸಿಸ್) ಎಂಬುದು ಬಹಳ ಸಾಮಾನ್ಯ ಪ್ರಕ್ರಿಯೆ, ಬೆರಳೆಣಿಕೆಯಷ್ಟು ತೀರಾ ಪ್ರಾಚೀನ ಪ್ರಭೇದಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕೀಟಗಳಲ್ಲಿ ಸಂಪೂರ್ಣ ರೂಪಪರಿವರ್ತನೆ ಅಥವಾ ಅರೆ ರೂಪಪರಿವರ್ತನೆಯನ್ನು ಕಾಣಬಹುದು. ಸಂಪೂರ್ಣ ರೂಪಪರಿವರ್ತನೆ ಎಂದರೆ ಅದರಲ್ಲಿ ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಪ್ರೌಢಕೀಟ ಎಂಬ ನಾಲ್ಕು ಹಂತಗಳನ್ನು ಕಾಣಬಹುದು. ಆದರೆ ಕೆಲವು ಕೀಟಗಳಲ್ಲಿ ಪ್ಯೂಪಾ ಸ್ಥಿತಿ ಇರುವುದಿಲ್ಲ. ಅದನ್ನು ಅರೆ ರೂಪಪರಿವರ್ತನೆ ಎನ್ನುತ್ತಾರೆ. ನೊಣ, ಸೊಳ್ಳೆ ಮತ್ತು ಚಿಟ್ಟೆಗಳಲ್ಲಿ ಸಂಪೂರ್ಣ ರೂಪಪರಿವರ್ತನೆಯನ್ನು ಕಾಣಬಹುದು. ಆದರೆ ಡ್ರಾಗನ್ ಮತ್ತು ಡ್ಯಾಮ್ಸೆಲ್ ಫ್ಲೈಗಳದ್ದು ಅರೆರೂಪಪರಿವರ್ತನೆ. ಅವು ಪ್ಯೂಪಾ ಸ್ಥಿತಿಗೆ ಹೋಗುವುದೇ ಇಲ್ಲ. ಪ್ರೌಢ ಹೆಣ್ಣು ನೀರಿನಲ್ಲಿ ಯಾವುದಾದರೂ ಜಲಸಸ್ಯದ ಕಾಂಡದಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರಬರುವ ಲಾರ್ವಾಗಳನ್ನು ನಯಾಡ್ಸ್ ಎನ್ನುತ್ತಾರೆ. ಅವು ಸಹ ಪ್ರೌಢ ಕೀಟಗಳಂತೆಯೇ ಬೇಟೆಗಾರರು. ಅವು ಸೊಳ್ಳೆಗಳ ಲಾರ್ವಾಗಳು ಮತ್ತು ಚಿಕ್ಕಚಿಕ್ಕ ಮೀನುಗಳನ್ನು ಹಿಡಿದು ತಿನ್ನುತ್ತವೆ. ಆದ್ದರಿಂದ ಅವು ನಮಗೆ ಮಿತ್ರರೆಂದೇ ಹೇಳಬಹುದು. ಪ್ರೌಢ ಕೀಟಗಳು ಸಾಮಾನ್ಯವಾಗಿ ತಮಗಿಂತ ಚಿಕ್ಕಗಾತ್ರದ ಕೀಟಗಳನ್ನೆಲ್ಲ ಹಿಡಿದು ತಿನ್ನುತ್ತವೆ. ಮಳೆಗಾಲದಲ್ಲಿ ಕೆಲವೊಮ್ಮೆ ಗೆದ್ದಲುಹುಳಗಳು ನೆಲದಿಂದ ಗುಂಪುಗುಂಪಾಗಿ ಹೊರಬರುವುದನ್ನು ನೋಡಬಹುದು. ಆ ಸಂದರ್ಭದಲ್ಲಿ ಅವುಗಳನ್ನು ಹಿಡಿಯಲು ಕಾಗೆ, ಮೈನಾ ಇತ್ಯಾದಿ ಹಕ್ಕಿಗಳು ಗುಂಪುಗುಂಪಾಗಿ ಅವು ಹೊರಬರುವ ತೂತಿನ ಬಳಿಯೇ ಕುಳಿತು ಕಾಯುತ್ತಿರುವುದನ್ನು ಕಾಣಬಹುದು. ಆದರೆ ಡ್ರಾಗನ್ ಫ್ಲೈಗಳು ಆ ರೀತಿ ಕಾಯುವುದಿಲ್ಲ. ಅವು ಗಾಳಿಯಲ್ಲೇ ಹಾರುತ್ತ ಬರುವ ಗೆದ್ದಲುಗಳನ್ನು ಹಿಡಿದು ತಿನ್ನುತ್ತವೆ. ಜೊತೆಗೆ ಕೆಲವು ದೊಡ್ಡ ಜಾತಿಯ ಡ್ರಾಗನ್ ಫ್ಲೈಗಳು ಚಿಕ್ಕ ಜಾತಿಯ ಡ್ರಾಗನ್ ಫ್ಲೈಗಳನ್ನೇ ಹಿಡಿದು ತಿನ್ನುವುದು ಸಹ ಅಪರೂಪವಲ್ಲ.
ತಮ್ಮ ಪ್ರದೇಶವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ಗಂಡುಕೀಟಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಬಲಿಷ್ಠ ಗಂಡುಗಳು ತಮ್ಮ ಪ್ರದೇಶದ ಬಳಿ ಬರುವ ಇತರೆ ಗಂಡುಗಳನ್ನು ಓಡಿಸುತ್ತವೆ. ಏಕೆಂದರೆ ಕೆಲವು ಸ್ಥಳಗಳಲ್ಲಿ ಕುಳಿತರೆ ತಮಗೆ ಆಹಾರವಾಗುವ ಕೀಟಗಳನ್ನು ಹೆಚ್ಚು ವಿವರವಾಗಿ ಗಮನಿಸಲು ಸಾಧ್ಯ. ಜೊತೆಗೆ ತಾವು ಕೂಡಿದ ಹೆಣ್ಣನ್ನು ಬೇರೆ ಗಂಡುಗಳು ಕೂಡಬಾರದೆಂದು ಎಲ್ಲ ಗಂಡುಗಳೂ ಬಯಸುತ್ತವೆ. ಹಾಗಾಗಿ ಹೆಣ್ಣು ಮೊಟ್ಟೆ ಇಡುವಾಗ ಗಂಡು ಸಮೀಪದಲ್ಲೇ ಕುಳಿತು ಕಾವಲು ಕಾಯುತ್ತಿರುವುದನ್ನು ಕಾಣಬಹುದು.
ಪ್ರಪಂಚದಾದ್ಯಂತ ಇಂದು ಸುಮಾರು ಮೂರು ಸಾವಿರ ಜಾತಿಯ ಡ್ರಾಗನ್ ಮತ್ತು ಡ್ಯಾಮ್ಸೆಲ್ ಫ್ಲೈಗಳನ್ನು ಗುರುತಿಸಲಾಗಿದೆ. ಈ ಜಾತಿಗಳು ಹನ್ನೊಂದು ಕುಟುಂಬಗಳ ಮುನ್ನೂರ ನಲವತ್ತೆಂಟು ಜೀನಸ್ ಗಳಲ್ಲಿ ಹಂಚಿಹೋಗಿವೆ. ಅಂಟಾರ್ಕ್ಟಿಕಾ ಒಂದನ್ನು ಹೊರತುಪಡಿಸಿ ಬೇರೆಲ್ಲ ಖಂಡಗಳಲ್ಲಿ ಈ ಜೀವಿಗಳು ಅಸ್ತಿತ್ವದಲ್ಲಿವೆ. ಆದರೆ ಸಮುದ್ರಮಟ್ಟಕ್ಕಿಂತ ಹೆಚ್ಚು ಎತ್ತರ ಹೋದಂತೆಲ್ಲ ಅವುಗಳ ಅಸ್ತಿತ್ವ ವಿರಳವಾಗುತ್ತ ಹೋಗುತ್ತದೆ. ತೀರಾ ಶೀತಪ್ರದೇಶಗಳಲ್ಲಿ ಅವು ಕಂಡುಬರುವುದಿಲ್ಲ. ಜೊತೆಗೆ ಡ್ರಾಗನ್ ಗಳು ಡ್ಯಾಮ್ಸೆಲ್ ಗಳಿಗಿಂತ ಹೆಚ್ಚು ವಿಸ್ತಾರವಾಗಿ ಹರಡಿವೆ ಮತ್ತು ಹೆಚ್ಚಿನ ಕಡೆಗಳಲ್ಲಿ ಕಂಡುಬರುತ್ತವೆ.
ಇವುಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಪುಸ್ತಕಗಳೆಂದರೆ ಫ್ರೇಸರ್ ಅವರು ಬರೆದಿರುವ “ಫೌನಾ ಆಫ್ ಬ್ರಿಟಿಷ್ ಇಂಡಿಯಾ” ಸರಣಿಯ ಎರಡು ಆವೃತ್ತಿಗಳು ಹಾಗೂ ಡಾ. ಕೆ.ಎ. ಸುಬ್ರಮಣ್ಯನ್ ಅವರು ಬರೆದಿರುವ “ಡ್ರಾಗನ್ ಫ್ಲೈಸ್ ಆಫ್ ಇಂಡಿಯಾ”. ಈ ಪುಸ್ತಕವಂತೂ ಹವ್ಯಾಸಿಗಳಿಗೆ ಅತ್ಯುಪಯುಕ್ತವಾದ ಕೈಪಿಡಿ. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಾಣುವ ಏರೋಪ್ಲೇನ್ ಚಿಟ್ಟೆಗಳನ್ನು ಗುರುತಿಸಲು ಈ ಪುಸ್ತಕ ಬಹಳ ಉಪಯುಕ್ತ. ಪ್ರತಿಯೊಂದು ಪ್ರಭೇದವನ್ನು ಗುರುತಿಸಲು ಇರುವ ಮುಖ್ಯವಾದ ಲಕ್ಷಣಗಳನ್ನು ಇದರಲ್ಲಿ ಸ್ಪಷ್ಟವಾಗಿ ಕೊಟ್ಟಿದ್ದಾರೆ. ಹೀಗಾಗಿ ಇದೊಂದು ಅತ್ಯಂತ ಉಪಯುಕ್ತವಾದ ಪುಸ್ತಕ ಎಂಬುದರಲ್ಲಿ ಅನುಮಾನವೇ ಇಲ್ಲ. ಪಕ್ಷಿಗಳ ಬಗೆಗೆ ಸಲೀಂ ಅಲಿಯವರ ಪುಸ್ತಕ ಹೇಗೋ ಡ್ರಾಗನ್ ಫ್ಲೈಗಳ ಬಗೆಗೆ ಸುಬ್ರಮಣ್ಯನ್ ಪುಸ್ತಕ ಹಾಗೆ.
ಸಾಮಾನ್ಯವಾಗಿ ಕೀಟಗಳ ವಿಷಯಕ್ಕೆ ಬಂದರೆ ಸೌಂದರ್ಯಾರಾಧಕರು ಬಹುಮುಖ್ಯವಾಗಿ ಗಮನಿಸುವುದು ಚಿಟ್ಟೆ ಮತ್ತು ಪತಂಗಗಳತ್ತ ಮಾತ್ರ. ಆದರೆ ಏರೋಪ್ಲೇನ್ ಚಿಟ್ಟೆಗಳಲ್ಲಿ ಸಹ ವರ್ಣರಂಜಿತವಾದ ಪ್ರಭೇದಗಳು ಬಹಳಷ್ಟಿವೆ. ಒಂದೇ ವ್ಯತ್ಯಾಸವೆಂದರೆ ಅವುಗಳ ರೆಕ್ಕೆಗಳು ಚಿಟ್ಟೆ, ಪತಂಗಗಳ ರೆಕ್ಕೆಗಳಂತೆ ಅಪಾರದರ್ಶಕವಲ್ಲ. ಹೆಚ್ಚಿನವು ಪಾರದರ್ಶಕ ಮತ್ತು ಇನ್ನೂ ಕೆಲವು ಅರೆಪಾರದರ್ಶಕ ರೆಕ್ಕೆಗಳನ್ನು ಹೊಂದಿವೆ. ಕೆಲವು ಪ್ರಭೇದಗಳಂತೂ ಬಣ್ಣಬಣ್ಣದ ರೆಕ್ಕೆಗಳನ್ನು ಹೊಂದಿವೆ. ಮತ್ತೆ ಕೆಲವು ಜಾತಿಗಳ ರೆಕ್ಕೆಗಳು ಪಾರದರ್ಶಕವಾಗಿದ್ದರೂ ಉದ್ದನೆಯ ಬಾಲ ವರ್ಣರಂಜಿತವಾಗಿದೆ. ಮುಂಜಾನೆಯ ವೇಳೆ ಕೆಲವು ಏರೋಪ್ಲೇನ್ ಚಿಟ್ಟೆಗಳು ನೀರಿನ ಮೂಲಗಳ ಬಳಿ ಗಾಳಿಯಲ್ಲಿ ದೊಂಬರಾಟ ನಡೆಸುತ್ತಿದ್ದರೆ ಅವುಗಳ ವರ್ಣರಂಜಿತವಾದ ದೇಹ ಸೂರ್ಯನ ಎಳೆಬಿಸಿಲಿನಲ್ಲಿ ಮಿರಮಿರನೆ ಮಿಂಚುತ್ತದೆ. ಆಗ ಅವುಗಳನ್ನು ನೋಡಲು ಎರಡು ಕಣ್ಣುಗಳು ಸಾಲವು.
ವರ್ಣರಂಜಿತ ಏರೋಪ್ಲೇನ್ ಚಿಟ್ಟೆಗಳಲ್ಲಿ “ಕ್ರಿಮ್ಸನ್ ಟೇಲ್ಡ್ ಮಾರ್ಷ್ ಹಾಕ್” ಎಂಬುದು ಅತ್ಯಂತ ಪ್ರಮುಖವಾದ ಜಾತಿ. ಇದರಲ್ಲಿ ಗಂಡಿನ ಬಾಲ ಕೆಂಬಣ್ಣದಿಂದ ಹೊಳೆಯುತ್ತದೆ. ಪಶ್ಚಿಮ ಭಾರತ, ಜಪಾನ್ ಮತ್ತು ಜಾವಾಗಳಲ್ಲಿ ಯಥೇಚ್ಛವಾಗಿ ಕಂಡುಬರುವ ಈ ಜಾತಿ ನೀರಿನ ಮೂಲಗಳ ಬಳಿ ಹಾರಾಡುತ್ತ ಚಿಕ್ಕಪುಟ್ಟ ಕೀಟಗಳಿಗಾಗಿ ಹೊಂಚುಹಾಕುತ್ತಿರುತ್ತದೆ. ಇದರ ಒಂದು ವಿಶೇಷವೆಂದರೆ ಕೆಂಬಣ್ಣದ ಬಾಲ ಗಂಡಿಗೆ ಮಾತ್ರ ಸೀಮಿತ. ಹೆಣ್ಣುಕೀಟವು ತೀರಾ ಸಾಧಾರಣ ಬೂದುಬಣ್ಣ ಹೊಂದಿದ್ದು ಗಂಡಿನಂತೆ ಎದ್ದುಕಾಣುವುದಿಲ್ಲ. ಇದೇ ರೀತಿಯ ಬಣ್ಣ ವ್ಯತ್ಯಾಸವನ್ನು ನಾವು ಅನೇಕ ಜಾತಿಯ ಪಕ್ಷಿಗಳಲ್ಲಿ ಪ್ರಧಾನವಾಗಿ ಗುರುತಿಸಬಹುದು.
ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುವ ಇನ್ನೊಂದು ಡ್ರಾಗನ್ ಫ್ಲೈ ಎಂದರೆ ಪೈಡ್ ಪ್ಯಾಡಿ ಸ್ಕಿಮ್ಮರ್. ಇದರ ರೆಕ್ಕೆ ಅರ್ಧದವರೆಗೆ ಕಪ್ಪುಬಣ್ಣ. ಆಮೇಲೆ ಒಂದು ಬಿಳಿಪಟ್ಟೆ, ನಂತರ ಪಾರದರ್ಶಕ ವಿನ್ಯಾಸ. ಒಟ್ಟಾರೆ ನೋಡಲು ಇದೊಂದು ಸುಂದರವಾದ ಕೀಟ ಎನ್ನಲು ಯಾವುದೇ ಅಡ್ಡಿ ಇಲ್ಲ. ಆದರೆ ಯಥಾಪ್ರಕಾರ ಹೆಣ್ಣುಕೀಟಕ್ಕೆ ಈ ಅಲಂಕಾರಿಕ ಬಣ್ಣ ಇಲ್ಲ. ಅದು ತೀರಾ ಸಾಧಾರಣ ಬಣ್ಣ ಹೊಂದಿರುತ್ತದೆ. ಭಾರತ, ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ ಮತ್ತು ಚೀನಾ ದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುವ ಜಾತಿ ಇದು.
ಏರೋಪ್ಲೇನ್ ಚಿಟ್ಟೆಗಳು ಎಷ್ಟೇ ಭಯಂಕರ ಬೇಟೆಗಾರರಾಗಿದ್ದರೂ ಸಹ ಪ್ರಕೃತಿಯಲ್ಲಿ ಅವುಗಳಿಗೂ ಸಹ ಬೇಕಾದಷ್ಟು ಶತ್ರುಗಳಿವೆ. ಹೆಣ್ಣು ಕೀಟವೊಂದರ ಜೀವನದ ಅತ್ಯಂತ ಕಷ್ಟದ ಕಾಲವೆಂದರೆ ನೀರಿನಲ್ಲಿ ಮೊಟ್ಟೆಯಿಡುವ ಕಾಲ. ನೀರಿನಲ್ಲಿ ಮೊಟ್ಟೆ ಇಡಲು ಕೆಲವು ಜಾತಿಯ ಏರೋಪ್ಲೇನ್ ಚಿಟ್ಟೆಗಳ ಹೆಣ್ಣುಗಳು ನೀರಿನಲ್ಲಿ ಮುಳುಗಿ ಅಲ್ಲಿನ ಜಲಸಸ್ಯಗಳ ಕಾಂಡವನ್ನು ಕೊರೆದು ಅದರೊಳಗೆ ಮೊಟ್ಟೆಯಿಡುತ್ತವೆ. ಹುಟ್ಟಿದ ಲಾರ್ವಾಗಳು ನೇರವಾಗಿ ನೀರಿಗೆ ಹೋಗಲಿ ಎಂಬ ಉದ್ದೇಶ ಇವುಗಳದ್ದು. ಆದರೆ ಈ ತ್ಯಾಗವೇ ಅವುಗಳ ಪಾಲಿಗೆ ಮರಣ ಶಾಸನವಾಗಿ ಬದಲಾಗುವ ಸಾಧ್ಯತೆಯೂ ಇಲ್ಲದಿಲ್ಲ. ಕೆಲವು ಕೀಟಗಳು ನೀರಿನೊಳಗೇ ಮೀನು, ಕಪ್ಪೆ ಮತ್ತಿತರ ಜೀವಿಗಳಿಗೆ ಆಹಾರವಾಗುತ್ತವೆ. ಮತ್ತೆ ಕೆಲವಕ್ಕೆ ನೀರಿನಲ್ಲಿ ಒಮ್ಮೆ ಮುಳುಗಿದ ನಂತರ ನೀರಿನ ಮೇಲ್ಮೈಯನ್ನು ಭೇದಿಸಿಕೊಂಡು ಹೊರಬರಲು ಕೆಲವಕ್ಕೆ ಸಾಧ್ಯವಾಗುವುದಿಲ್ಲ. ಅವು ನೀರಿನಲ್ಲೇ ಮುಳುಗಿ ಸಾಯುತ್ತವೆ. ಮತ್ತೆ ಕೆಲವು ಮೇಲಕ್ಕೆ ಬಂದರೂ ಜೇಡ, ಹಲ್ಲಿ, ಹಕ್ಕಿ ಇತ್ಯಾದಿಗಳಿಗೆ ಊಟವಾಗುತ್ತವೆ. ಈ ಎಲ್ಲ ಶತ್ರುಗಳಿಂದ ತಪ್ಪಿಸಿಕೊಂಡರೂ ವಂಶಾಭಿವೃದ್ಧಿ ಮಾಡಿದ ಮೇಲೆ ಈ ಕೀಟಗಳು ಹೆಚ್ಚುಕಾಲ ಬದುಕುವುದಿಲ್ಲ. ಏಕೆಂದರೆ ಅವುಗಳ ಆಯುಷ್ಯವೇ ಅಷ್ಟು. ಸಂತಾನಾಭಿವೃದ್ಧಿಯೊಂದೇ ಅವುಗಳ ಅಂತಿಮ ಗುರಿ.
ಏರೋಪ್ಲೇನ್ ಚಿಟ್ಟೆಗಳು ಸಹ ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ. ಆದರೆ ಅವುಗಳನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ದುರದೃಷ್ಟಕರ. ಹೇರಳ ಬಗೆಯ ಉಪದ್ರವಕಾರಿ ಕೀಟಗಳನ್ನು ನಿಯಂತ್ರಿಸುವ ಜೊತೆಗೆ ಅನೇಕ ಬಗೆಯ ಜೀವಿಗಳಿಗೆ ಆಹಾರವೂ ಆಗಿರುವ ಈ ಪುರಾತನ ಕೀಟಗಳು ಇತ್ತೀಚೆಗೆ ಗಂಭೀರವಾದ ಅಪಾಯವನ್ನು ಎದುರಿದುತ್ತಿವೆ. ಅದಕ್ಕೆ ಮನುಷ್ಯರೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆವಾಸಸ್ಥಾನಗಳ ನಾಶ ಮತ್ತು ಕೀಟನಾಶಕಗಳ ಮಿತಿಮೀರಿದ ಬಳಕೆ ಇದಕ್ಕೆ ಬಹುಮುಖ್ಯ ಕಾರಣ. ಸಾಮಾನ್ಯವಾಗಿ ಜೌಗುಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವರ ಅತಿಕ್ರಮಣದಿಂದ ಜೌಗು ಪ್ರದೇಶಗಳೇ ಅಪರೂಪವಾಗುತ್ತಿವೆ. ಜೊತೆಗೆ ಜಿರಲೆ, ಸೊಳ್ಳೆಯಂಥ ಉಪದ್ರವಕಾರಿ ಕೀಟಗಳಿಗೆ ಹೋಲಿಸಿದರೆ ಯಾವುದೇ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಏರೋಪ್ಲೇನ್ ಚಿಟ್ಟೆಗಳಿಗೆ ಕಡಿಮೆಯಿದೆ. ಜಿರಲೆಯಂತೆ ಮನುಷ್ಯರ ವಾಸಸ್ಥಾನಗಳಲ್ಲೇ ಸಂದುಗೊಂದುಗಳಲ್ಲಿ ಸೇರಿಕೊಂಡು ಅವು ಬದುಕಲಾರವು. ಜೊತೆಗೆ ಸೊಳ್ಳೆಗಳಂತೆ ಪ್ರಾಣಿಗಳ ರಕ್ತ ಅಥವಾ ಸಸ್ಯಗಳ ರಸ ಹೀರಿಯೂ ಬದುಕಲಾರವು. ಸೊಳ್ಳೆಗಳಂತೆ ಮನುಷ್ಯವಾಸದ ಸಮೀಪದಲ್ಲೇ ತೆಂಗಿನ ಚಿಪ್ಪು, ಹೂಕುಂಡಗಳಲ್ಲಿ ನಿಂತ ನೀರಿನಲ್ಲಿಯೂ ಮೊಟ್ಟೆಯಿಡಲಾರವು. ಆದ್ದರಿಂದ ಆವಾಸಸ್ಥಾನದ ನಾಶಕ್ಕೆ ಈ ಜೀವಿಗಳು ಬಹಳ ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತವೆ. ಮೇಲಾಗಿ ಇವುಗಳ ಮಹತ್ವವೇನೆಂಬುದು ಸಹ ಇನ್ನೂ ಮನುಷ್ಯರಿಗೆ ಸಂಪೂರ್ಣವಾಗಿ ಅರಿವಾದಂತಿಲ್ಲ. ಹಾಗಾಗಿ ಅವುಗಳ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಪರಿಸರ ಕಾಳಜಿ ಹೊಂದಿರುವ ಕೆಲವು ನಿಸರ್ಗಾಸಕ್ತರು ಜನರಲ್ಲಿ ಈ ಪುಟ್ಟ ಕೀಟಗಳ ಬಗೆಗೆ ಅರಿವು ಮೂಡಿಸಲು, ಅವುಗಳ ಮಹತ್ವದ ಬಗೆಗೆ ಮನದಟ್ಟು ಮಾಡಿಸಲು “ಡ್ರಾಗನ್ ಫ್ಲೈ ಇಂಡಿಯಾ ಮೀಟ್” ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದಾರೆ. 2015ರಲ್ಲಿ ಸೆಪ್ಟೆಂಬರ್ 11ರಿಂದ 14ರವರೆಗೆ ಕೇರಳದ ತಟ್ಟೆಕ್ಕಾಡ್ ಪಕ್ಷಿಧಾಮದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದರಿಂದಾಗಿ ತಡವಾಗಿಯಾದರೂ ಜನರಲ್ಲಿ ಇವುಗಳ ಬಗ್ಗೆ ಅರಿವು ಮೂಡಲಾರಂಭಿಸಿದೆ.

ಡ್ರಾಗನ್ ಫ್ಲೈಗಳು ಅತ್ಯಂತ ಪ್ರಾಚೀನ ಕೀಟಗಳಾದ್ದರಿಂದ ಅವುಗಳು ವೈಜ್ಞಾನಿಕವಾಗಿಯೂ ಬಹಳ ಪ್ರಾಮುಖ್ಯತೆ ಪಡೆದಿವೆ. ಜೊತೆಗೆ ಅವುಗಳಲ್ಲಿ ಮೂರುಸಾವಿರ ಪ್ರಭೇದಗಳಿರುವುದರಿಂದ “ಅಬ್ಬಾ, ಇಷ್ಟೊಂದು ವೈವಿಧ್ಯವೇ?” ಎಂದು ನಮಗೆ ಅಚ್ಚರಿಯಾಗಬಹುದಾದರೂ ಬೇರೆ ವರ್ಗದ ಕೀಟಗಳಿಗೆ ಹೋಲಿಸಿದರೆ ಅವುಗಳ ವೈವಿಧ್ಯ ಬಹಳ ಕಡಿಮೆ. ಏಕೆಂದರೆ ಚಿಪ್ಪಿನ ರೆಕ್ಕೆಗಳುಳ್ಳ “ಕೋಲಿಯಾಪ್ಟೆರ” (ಓಡುಹುಳ)ಗಳ ವರ್ಗದಲ್ಲಿ ನಾಲ್ಕು ಲಕ್ಷ, “ಡಿಪ್ಟೆರಾ” (ನೊಣ, ಸೊಳ್ಳೆ ಇತ್ಯಾದಿಗಳ ವರ್ಗ)ದಲ್ಲಿ ಎರಡು ಲಕ್ಷ ನಲವತ್ತು ಸಾವಿರ, “ಲೆಪಿಡಾಪ್ಟೆರಾ” (ಪಾತರಗಿತ್ತಿ ಮತ್ತು ಪತಂಗಗಳ ವರ್ಗ)ದಲ್ಲಿ ಒಂದು ಲಕ್ಷದ ಎಪ್ಪತ್ತೈದು ಸಾವಿರ, “ಹೈಮೆನೋಪ್ಟೆರಾ” (ಜೇನ್ನೊಣ, ಕಣಜ ಮತ್ತು ಇರುವೆಗಳ ವರ್ಗ)ದಲ್ಲಿ ಒಂದು ಲಕ್ಷದ ಐವತ್ತು ಸಾವಿರ, “ಹೆಮಿಪ್ಟೆರಾ” (ಸಿಕಾಡಾ ಮತ್ತು ಏಫಿಡ್ ಗಳ ವರ್ಗ)ದಲ್ಲಿ ಎಂಬತ್ತು ಸಾವಿರ ಜಾತಿಗಳಿವೆ. ಇವಕ್ಕೆ ಹೋಲಿಸಿದರೆ ಓಡೋನೇಟಾ ವರ್ಗ ಎಷ್ಟೊಂದು ಬಡವಾದದ್ದು ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಅವು ಬೇರೆ ವರ್ಗಗಳಿಗಿಂತ ಮನುಷ್ಯರ ಆಕ್ರಮಣದಿಂದ ಹೆಚ್ಚು ಅಪಾಯಕ್ಕೀಡಾಗುವುದು ಸಹಜವಾಗಿಯೇ ಇದೆ. ಆದರೆ ಅವುಗಳ ಮಹತ್ವವನ್ನು ಅರಿತ ನಾವು ಅವುಗಳನ್ನು ಉಳಿಸಲು ಪ್ರಯತ್ನಿಸಲೇಬೇಕಾಗಿದೆ. ಇಲ್ಲವಾದರೆ ಪ್ರಕೃತಿ ನಮ್ಮನ್ನು ಎಂದೆಂದಿಗೂ ಕ್ಷಮಿಸುವುದಿಲ್ಲ!
Fulvous Forest Skimmer (Neurothemis fulvia)

Golden Dartlet (Ischnura aurora)

Green Marsh hawk (Orthetrum sabina)

Parakeet Darner (Gynacantha bayadera)

Pied Paddy Skimmer (Neurothemis tullia)

Wandering Glider (Pantala flavescens)

White Dartlet (Agriocnemis pieris)

Coorg Bambootail (Prodasineura verticalis)

Brown Backed Red Marshhawk (Orthetrum chrysis)

Crimson Tailed Marshhawk (Orthetrum pruinosum)

ಛದ್ಮವೇಷ: ಜೀವಿಗಳ ಆತ್ಮರಕ್ಷಣೆಯ ಅನನ್ಯ ತಂತ್ರ!

ಛದ್ಮವೇಷ: ಜೀವಿಗಳ ಆತ್ಮರಕ್ಷಣೆಯ ಅನನ್ಯ ತಂತ್ರ!
ಕೃಷ್ಣ ಜನ್ಮಾಷ್ಟಮಿಯ ದಿನ ಪೋಷಕರು ತಮ್ಮ ಮುದ್ದುಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂತೋಷ ಪಡುತ್ತಾರೆ. ಹಾಗೆಯೇ “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬಂತೆ ಜನರು ಹೊಟ್ಟೆಪಾಡಿಗಾಗಿ ನಾನಾ ವೇಷಗಳನ್ನು ಹಾಕುತ್ತಾರೆ. ಆದರೆ ಪೃಕೃತಿಯಲ್ಲಿ ಹೊಟ್ಟೆಪಾಡಿಗಾಗಿ ಅಥವಾ ಬದುಕುವುದಕ್ಕಾಗಿ ಅನೇಕ ಪ್ರಾಣಿಗಳು ಎಷ್ಟೋ ಕೋಟ್ಯಾಂತರ ವರ್ಷಗಳಿಂದ ಈ ಛದ್ಮವೇಷದ ಕಲೆಯನ್ನು ಕರಗತ ಮಾಡಿಕೊಂಡಿವೆ. ಅದರಲ್ಲೂ ಕೀಟಗಳದ್ದಂತೂ ಛದ್ಮವೇಷ ಧಾರಣೆಯಲ್ಲಿ ಎತ್ತಿದ ಕೈ. ಹಾಗಾದರೆ ಧರೆಯಲ್ಲಿ ಯಾವ್ಯಾವ ಪ್ರಾಣಿಗಳೆಲ್ಲ ಛದ್ಮವೇಷ ಧರಿಸಿವೆ? ಅವುಗಳ ಉದ್ದೇಶವೇನು? ಈ ಬಗ್ಗೆ ಒಂದಿಷ್ಟು ಗಮನಹರಿಸೋಣ.
ಕೀಟಸಾಮ್ರಾಜ್ಯದಲ್ಲಿ “ಫಾಸ್ಮಿಡಾ” ಎಂಬ ಒಂದು ವರ್ಗವಿದೆ. ಈ ವರ್ಗವಂತೂ  ಛದ್ಮವೇಷಕ್ಕೇ ಸುಪ್ರಸಿದ್ಧವಾಗಿದೆ. ಕಡ್ಡಿಕೀಟ ಮತ್ತು ಎಲೆಕೀಟಗಳು ಈ ಗುಂಪಿಗೆ ಸೇರುತ್ತವೆ. ತಾವು ಕುಳಿತ ಸ್ಥಳದಿಂದ ಇವು ಚಲಿಸದೇ ಇದ್ದರೆ ಯಾರೂ ಪತ್ತೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕಡ್ಡಿಕೀಟಗಳ ಇಡೀ ದೇಹ ಮತ್ತು ಕೈಕಾಲುಗಳೆಲ್ಲಾ ತದ್ವತ್ತಾಗಿ ಕಡ್ಡಿಯನ್ನೇ ಹೋಲುತ್ತವೆ. ಎಲೆಕೀಟವೂ ಅಷ್ಟೆ, ಎಲೆಯನ್ನೇ ಹೋಲುವ ದೇಹವನ್ನು ಪಡೆದಿವೆ. ಅವುಗಳ ರೆಕ್ಕೆಗಳು ಸಹ ತಾವು ವಾಸಿಸುವ ಗಿಡದ ಎಲೆಯನ್ನೇ ಹೋಲುತ್ತವೆ. ಎಲೆಗಳ ನಡುವೆ ಗೆರೆಗಳಿರುವಂತೆ ಇವುಗಳ ರೆಕ್ಕೆಗಳ ನಡುವೆ ಕೂಡ ಗೆರೆಗಳಿರುತ್ತವೆ. ಜೊತೆಗೆ ಮರದ ಎಲೆಗಳು ಒಣಗಿದಾಗ ಇವುಗಳ ರೆಕ್ಕೆಗಳೂ ಕೂಡ ಒಣಗಿದ ಎಲೆಗಳ ಬಣ್ಣವನ್ನೇ ತಳೆಯುತ್ತವೆ! ಕೀಟಗಳ ಬಹುಮುಖ್ಯ ಶತ್ರುಗಳಾದ ಪಕ್ಷಿಗಳಿಂದ ಬಹುಸುಲಭವಾಗಿ ಪಾರಾಗಲು ಇದು ಅತ್ಯುತ್ತಮ ಉಪಾಯ. ಜೊತೆಗೆ ಅವುಗಳ ಕಾಲುಗಳಿಗೆ ಸಹ ಎಲೆಯ ಚೂರುಗಳು ಅಂಟಿಕೊಂಡಂತೆ ಕಾಣುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಅವು ಸಾಮಾನ್ಯ ಕಣ್ಣಿಗೆ ಕೀಟಗಳೇ ಅಲ್ಲ, ಎಲೆಗಳು! ತಮ್ಮ ಈ ಛದ್ಮವೇಷದಿಂದಾಗಿಯೇ ವೈರಿಗಳ ಕಣ್ಣಿಗೆ ಸುಲಭವಾಗಿ ಬೀಳದೆ ಲಕ್ಷಾಂತರ ವರ್ಷಗಳಿಂದ ನೆಮ್ಮದಿಯ ಬದುಕು ಸಾಗಿಸುತ್ತಿವೆ. ಕೆಲ್ಲಿಮಾ ಎಂಬ ಒಂದು ಜಾತಿಯ ಚಿಟ್ಟೆ ಇದೆ. ಅದೂ ಸಹ ಒಣಗಿದ ಎಲೆಗಳನ್ನು ಹೋಲುತ್ತದೆ. ಹಾಗಾಗಿ ಅದು ನೆಲದ ಮೇಲೆ ಸತ್ತಂತೆ ಬಿದ್ದಿದ್ದರೆ ಯಾರೂ ಅದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ.
ಈ ತಂತ್ರ ಕೇವಲ ಕೀಟಗಳಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳು ಸಹ ಈ ತಂತ್ರವನ್ನು ಕೈಗೂಡಿಸಿಕೊಂಡಿವೆ. ಅದರಲ್ಲಿ “ಫ್ರಾಗ್ ಮೌತ್” ಎಂಬ ಹಕ್ಕಿ ಬಹಳ ಪ್ರಸಿದ್ಧವಾಗಿದೆ. ಈ ಹಕ್ಕಿ ಕುರುಡುಗಪ್ಪಟ ಹಕ್ಕಿಗಳ ಹತ್ತಿರದ ಸಂಬಂಧಿ. ಒಣಗಿದ ಮರದಲ್ಲಿ ಇದು ಕುಳಿತರೆ ಇದನ್ನು ಪತ್ತೆ ಹಚ್ಚುವುದು ಸಾಧ್ಯವೇ ಇಲ್ಲ ಅಷ್ಟೊಂದು ಅದ್ಭುತವಾಗಿ ತಾವು ಕುಳಿತ ಮರದಲ್ಲೇ ಲೀನವಾಗಿಬಿಡುತ್ತವೆ. ನಿಶಾಚರಿಗಳಾದ ಈ ಹಕ್ಕಿಗಳು ಹಗಲುಹೊತ್ತಿನಲ್ಲಿ ಒಂದು ಕೊಂಬೆಯನ್ನು ಆರಿಸಿಕೊಂಡು ಅಲ್ಲಿ ಅಲ್ಲಾಡದೆ ಕುಳಿತುಬಿಡುತ್ತವೆ. ಅದರ ಗರಿಗಳ ಬಣ್ಣ ಮತ್ತು ರಚನೆ ತರಗೆಲೆಗಳನ್ನೇ ಹೋಲುವಂತಿರುತ್ತದೆ. ಹೀಗಾಗಿ ಅಲ್ಲೊಂದು ಹಕ್ಕಿ ಕುಳಿತಿದೆ ಎಂದು ಪತ್ತೆಹಚ್ಚುವುದು ತುಂಬಾ ಕಷ್ಟ. ಹೀಗೆ ಹಗಲಿಡೀ ಅವು ನಿಶ್ಚಿಂತೆಯಿಂದ ನಿದ್ರಿಸುತ್ತವೆ.
ಇದೇ ತಂತ್ರವನ್ನು ಅಳವಡಿಸಿಕೊಂಡಿರುವ ಇನ್ನೂ ಅನೇಕ ಹಕ್ಕಿಗಳಿವೆ. ಸಾಮಾನ್ಯವಾಗಿ ನಿಶಾಚರಿ ಹಕ್ಕಿಗಳೇ ಈ ತಂತ್ರವನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತವೆ. ಹಗಲುಹೊತ್ತಿನಲ್ಲಿ ಶತ್ರುಗಳ ಕಣ್ಣಿಗೆ ಬೀಳದಿರಲು ಅವು ಈ ತಂತ್ರ ಅನುಸರಿಸುತ್ತವೆ. ಸಾಮಾನ್ಯವಾಗಿ ಅವು ಒಣಗಿದ ತರಗೆಲೆಗಳನ್ನು ಅಥವಾ ಮರದ ಬೊಡ್ಡೆಗಳನ್ನು ಹೋಲುತ್ತವೆ. ಅಲ್ಲೊಂದು ಹಕ್ಕಿಯಿದೆಯೆಂದು ಪತ್ತೆ ಮಾಡುವುದು ಸಾಧ್ಯವೇ ಇಲ್ಲ ಎಂಬಂಥ ರೀತಿಯಲ್ಲಿ ಕುಳಿತಿರುತ್ತವೆ. ಅಮೆರಿಕದಲ್ಲಿ ಬಿಟರ್ನ್ ಎಂಬ ಒಂದು ಪಕ್ಷಿ ಇದೆ. ಅದು ಈ ರೀತಿಯ ಛದ್ಮವೇಷಕ್ಕೆ ಹೆಸರುವಾಸಿ. ಅದು ಸಾಮಾನ್ಯವಾಗಿ ವಾಸಿಸುವುದು ಹುಲ್ಲುಗಾವಲುಗಳಲ್ಲಿ. ಬೇಸಿಗೆಯಲ್ಲಿ ಹುಲ್ಲುಗಾವಲು ಒಣಗಿ ನಿಂತಾಗ ಈ ಹಕ್ಕಿ ಒಣಗಿದ ಹುಲ್ಲುಕಡ್ಡಿಗಳ ನಡುವೆ ತಾನೂ ಹುಲ್ಲಾಗಿ ನಿಂತುಬಿಡುತ್ತದೆ. ಯಾವುದೇ ಬೇಟೆಗಾರನಿಗೆ ಇಲ್ಲೊಂದು ಪಕ್ಷಿಯಿದೆ ಎಂಬ ಸಣ್ಣ ಅನುಮಾನ ಕೂಡ ಬರುವುದಿಲ್ಲ.
ಪಕ್ಷಿಗಳ ಹೋರಾಟ ಆತ್ಮರಕ್ಷಣೆಗಷ್ಟೇ ಮೀಸಲಾಗಿಲ್ಲ. ತಮ್ಮ ಮೊಟ್ಟೆ, ಮರಿಗಳನ್ನು ಶತ್ರುಗಳಿಂದ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾದ ಕೆಲಸ. ಅನೇಕ ಹಕ್ಕಿಗಳು ತಮ್ಮ ಗೂಡುಗಳನ್ನು ತಾವು ವಾಸಿಸುವ ಮರದ ಮೇಲೆ ಗುರುತಿಸಲು ಸಾಧ್ಯವೇ ಆಗದ ರೀತಿಯಲ್ಲಿ ಕಟ್ಟುತ್ತವೆ. ಇನ್ನೂ ಕೆಲವು ಹಕ್ಕಿಗಳು ಮರದಲ್ಲಿ ಗೂಡು ಕಟ್ಟುವ ಉಸಾಬರಿಯೇ ಬೇಡವೆಂದು ನೆಲದ ಮೇಲೆಯೇ ಮೊಟ್ಟೆಯಿಡುತ್ತವೆ. ಅವುಗಳಲ್ಲಿ ಟಿಟ್ಟಿಭ ಹಕ್ಕಿಗಳ ಸಮೀಪದ ಸಂಬಂಧಿಗಳಾದ ಪ್ಲೋವರ್ ಗಳು ಅತ್ಯಂತ ಪ್ರಮುಖವಾದವು.  ಅವುಗಳ ಮೊಟ್ಟೆಗಳ ಮೇಲಿನ ಚಿತ್ತಾರವೂ ನೆಲದ ಮೇಲೆ ಬಿದ್ದಿರುವ ಕಲ್ಲುಗಳನ್ನೇ ತದ್ವತ್ತಾಗಿ ಹೋಲುತ್ತದೆ. ಹಾಗಾಗಿ ಅಲ್ಲಿ ಮೊಟ್ಟೆಗಳಿವೆಯೆಂದು ಯಾರೂ ಪತ್ತೆ ಮಾಡಲು ಸಾಧ್ಯವೇ ಇಲ್ಲ.  ಜೊತೆಗೆ ಯಾರಾದರೂ ಹತ್ತಿರ ಬಂದರೆ ಆ ಹಕ್ಕಿ ದೊಡ್ಡ ನಾಟಕ ಆಡುತ್ತದೆ. ಶತ್ರುವಿನ ಗಮನವನ್ನು ಮೊಟ್ಟೆಗಳಿಂದ ದೂರ ಸೆಳೆಯುವುದಕ್ಕಾಗಿ ತನ್ನ ರೆಕ್ಕೆ ಮುರಿದಿರುವಂತೆ ನಾಟಕವಾಡುತ್ತ ಒದ್ದಾಡುತ್ತದೆ. ಸರಿಯಾಗಿ ಹಾರಲು ಬಾರದ ಈ ಹಕ್ಕಿಯನ್ನು ಸುಲಭವಾಗಿ ತಿನ್ನಬಹುದೆಂದು ಶತ್ರು ಅದನ್ನು ಬೆನ್ನಟ್ಟುತ್ತದೆ. ತನ್ನ ಮೊಟ್ಟೆಯಿಂದ ಶತ್ರುವನ್ನು ಸಾಕಷ್ಟು ದೂರ ಕೊಂಡೊಯ್ದ ಬಳಿಕ ಪ್ಲೋವರ್ ತನ್ನ ನಾಟಕವನ್ನು ನಿಲ್ಲಿಸಿ ನೇರವಾಗಿ ತನ್ನ ಮೊಟ್ಟೆಗಳತ್ತ ಹಾರಿಬರುತ್ತದೆ.
ಹಾರುವ ಓತಿಯನ್ನು ನೋಡಿರದಿದ್ದರೂ ಅದರ ಹೆಸರನ್ನಂತೂ ಹೆಚ್ಚಿನವರು ಕೇಳಿರುತ್ತಾರೆ. ಸಾಮಾನ್ಯವಾಗಿ ದಟ್ಟವಾದ ಮಳೆಕಾಡುಗಳಲ್ಲಿ ಕಾಣಸಿಗುವ ಇವು ಸಹ ತಮ್ಮ ರಕ್ಷಣೆಗಾಗಿ ಛದ್ಮವೇಷವನ್ನೇ ಮೆಚ್ಚಿಕೊಂಡಿವೆ. ಅವುಗಳ ಮೈಬಣ್ಣ ಹೇಗಿದೆಯೆಂದರೆ ಮರದ ತೊಗಟೆಯನ್ನೇ ತದ್ವತ್ತಾಗಿ ಹೋಲುತ್ತದೆ. ಹಾಗಾಗಿ ಅದು ಚಲಿಸದ ಹೊರತು ಅದನ್ನು ಪತ್ತೆ ಮಾಡುವುದು ಸಾಧ್ಯವೇ ಇಲ್ಲ.
ಛದ್ಮವೇಷಿ ಜೀವಿಗಳ ಬಗೆಗೆ ಹೇಳುವಾಗ ಗೋಸುಂಬೆಗಳ ಬಗೆಗೆ ಹೇಳದಿದ್ದರೆ ಲೇಖನವೇ ಅಪರಿಪೂರ್ಣವಾಗುತ್ತದೆ. ಗೋಸುಂಬೆಯ ಹೆಸರನ್ನು ಬಹುಶಃ ಕೇಳದವರೇ ಇಲ್ಲ. ಆದರೆ ತನ್ನ ಬಣ್ಣ ಬದಲಾಯಿಸುವ ಗುಣದಿಂದಾಗಿಯೇ ಈ ನಿರುಪದ್ರವಿ ಜೀವಿ ಕುಖ್ಯಾತಿಗೆ ಈಡಾಗಿದ್ದು ಮಾತ್ರ ದುರದೃಷ್ಟಕರ. ತನ್ನ ಹೊಟ್ಟೆಪಾಡಿಗಾಗಿ ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳಲು ಬಣ್ಣ ಬದಲಾಯಿಸುವ ಈ ನಿರುಪದ್ರವಿ ಜೀವಿಯನ್ನು ಸ್ವಾರ್ಥಕ್ಕಾಗಿ ನಿಮಿಷಕ್ಕೊಂದು ರೀತಿ ವರ್ತಿಸುವ ಮನುಷ್ಯರಿಗೆ ಹೋಲಿಸಲಾಗುತ್ತಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ಪಾಪದ ಗೋಸುಂಬೆ ತನ್ನ ಪಾಡಿಗೆ ತಾನು ಬೇಲಿಯ ಮೇಲೆ, ಮರಗಳ ಮೇಲೆ ಹುಳುಗಳನ್ನು ಹಿಡಿದು ತಿನ್ನುತ್ತ ಬದುಕುತ್ತಿದೆ!
ಇದು ತಮ್ಮ ಆತ್ಮರಕ್ಷಣೆಗೆಂದು ಪ್ರಕೃತಿಯಲ್ಲಿ ಲೀನವಾಗುವ ಜೀವಿಗಳ ಕಥೆಯಾದರೆ ಅನೇಕ ಬೇಟೆಗಾರ ಪ್ರಾಣಿಗಳೂ ಸಹ ಇದೇ ತಂತ್ರವನ್ನು ಅನುಸರಿಸುತ್ತವೆ. ನಾವು ಬೇಟೆಗಾರ ಪ್ರಾಣಿಗಳ ಜೀವನ ಬಲಿಪ್ರಾಣಿಗಳಿಗಿಂತ ಸುಲಭ ಎಂದುಕೊಂಡಿರುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಅವೂ ಕೂಡ ತಮ್ಮ ಬೇಟೆಯನ್ನು ಪಡೆಯಲು ಸಾಕಷ್ಟು ಬೆವರು ಹರಿಸಬೇಕಾಗುತ್ತದೆ ಮತ್ತು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಛದ್ಮವೇಷಧಾರಿ ಪ್ರಾಣಿಗಳನ್ನು ಹಿಡಿಯುವುದು ಬಹಳ ಕಷ್ಟ. ಅದಕ್ಕಾಗಿಯೇ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗಾದೆಯಂತೆ ಅನೇಕ ಪ್ರಾಣಿಗಳು ಇದೇ ತಂತ್ರ ಬಳಸಿ ಬೇಟೆಯಾಡುತ್ತವೆ. ಎಷ್ಟೇ ಬಲಿಷ್ಟ ಪ್ರಾಣಿಯಾದರೂ ಕೂಡ ತನ್ನ ಆಗಮನದ ಸುಳಿವನ್ನು ಕೊಡದೇ ಬಲಿಯ ಸಮೀಪ ಸಾಗಿದರೆ ಮಾತ್ರ ಕೆಲಸ ಸುಲಭವಾಗುತ್ತದೆ. ಇಲ್ಲವಾದರೆ ಮಿಕ ಪರಾರಿಯಾಗುತ್ತದೆ. ಬೇಟೆಗಾರನಿಗೆ ಉಪವಾಸವೇ ಗತಿ!
ಕೀಟ ಸಾಮ್ರಾಜ್ಯದಲ್ಲಿ ಸೂರ್ಯನ ಕುದುರೆ (ಪ್ರೇಯಿಂಗ್ ಮ್ಯಾಂಟಿಸ್) ಗಳದ್ದು ಒಂದು ಪ್ರಮುಖ ವರ್ಗ. ಪ್ರಾರ್ಥನೆ ಮಾಡುವಾಗ ನಾವು ಕೈಜೋಡಿಸಿ ನಿಲ್ಲುವಂತೆ ಅವು ನಿಲ್ಲುತ್ತವೆ. ಆದ್ದರಿಂದ ಅವುಗಳಿಗೆ ಈ ಹೆಸರು ಬಂದಿದೆ. ಆ ಎರಡು ಕೈಗಳು ನಿಜಕ್ಕೂ ಪ್ರಾರ್ಥನೆ ಮಾಡುವ ಉದ್ದೇಶದಿಂದ ಜೋಡಿಸಿದ್ದಲ್ಲ. ಬೇಟೆಯಾಡುವ ಉದ್ದೇಶದಿಂದ ಜೋಡಿಸಿ ಹಿಡಿದಿದ್ದು! ತನ್ನ ಸಮೀಪ ಬರುವ ಚಿಕ್ಕಪುಟ್ಟ ಕೀಟಗಳನ್ನು ಗಬಕ್ಕನೆ ಹಿಡಿದು ತಿನ್ನುತ್ತವೆ. ಈ ವರ್ಗದಲ್ಲೇ ಕೆಲವು ಜಾತಿಗಳು ಛದ್ಮವೇಷಧಾರಿಗಳಾಗಿವೆ. ಆರ್ಕಿಡ್ ಕುಸುಮಗಳ ನಡುವೆ ಅವುಗಳನ್ನೇ ಹೋಲುವ ಸೂರ್ಯಕುದುರೆಗಳು ಕುಳಿತು ಹೊಂಚುಹಾಕುತ್ತಿರುತ್ತವೆ. ಯಾವುದಾದರೂ ಬಡಪಾಯಿ ಪಾತರಗಿತ್ತಿ ಗೊತ್ತಿಲ್ಲದೆ ಹತ್ತಿರ ಬಂದರೆ ಅದರ ಕಥೆ ಅಲ್ಲಿಗೆ ಮುಗಿದಂತೆ!
ಕೀಟಗಳ ಪ್ರಮುಖ ಬೇಟೆಗಾರರೆಂದರೆ ಜೇಡಗಳು. ಅವುಗಳಲ್ಲಿ ಕೂಡ ಛದ್ಮವೇಷಧಾರಿಗಳು ಬೇಕಾದಷ್ಟಿವೆ. ಏಡಿ ಜೇಡ ಎಂಬ ಪುಟ್ಟ ಜೇಡವೊಂದು ಹೂವಿನ ಪಕಳೆಗಳನ್ನೇ ಹೋಲುವ ದೇಹವನ್ನು ಪಡೆದಿದೆ. ಹೂವಿನ ನಡುವೆ ಕುಳಿತು ಅವೂ ಸಹ ಪಾತರಗಿತ್ತಿಗಳನ್ನು ಹಿಡಿಯುತ್ತವೆ. ಇರುವೆಗಳನ್ನು ಹೋಲುವ ಇನ್ನೊಂದು ಜಾತಿಯ ಜಾತಿಯ ಜೇಡವಿದೆ. “ಆ್ಯಂಟ್ ಮಿಮಿಕಿಂಗ್ ಸ್ಪೈಡರ್” ಎಂದು ಕರೆಯಲ್ಪಡುವ ಈ ಜೇಡ ನೋಡಲು ಇರುವೆಯನ್ನು ಎಷ್ಟರಮಟ್ಟಿಗೆ ಹೋಲುತ್ತದೆಯೆಂದರೆ ಅದು ಇರುವೆ ಸಾಲಿನಲ್ಲಿ ಮತ್ತೊಂದು ಇರುವೆಯಂತೆಯೇ ಸಾಗುತ್ತಿರುತ್ತದೆ. ಸಮಯ ಸಾಧಿಸಿ ಇರುವೆಯೊಂದನ್ನು ಕುಟುಕಿ ತನ್ನ ನೂಲಿನಲ್ಲಿ ತೇಲುತ್ತ ಹೊತ್ತೊಯ್ಯುತ್ತದೆ. ತಮ್ಮೊಳಗೇ ಶತ್ರುವೊಬ್ಬ ಬಂದು ಸೇರಿಕೊಂಡಿದ್ದಾನೆಂದು ಇರುವೆಗಳಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಂಟು ಕಾಲುಗಳನ್ನು ಹೊಂದಿರುವ ಜೇಡ ತನ್ನ ಮುಂದಿನ ಕಾಲುಗಳನ್ನು ಇರುವೆಯ ಆ್ಯಂಟೆನಾದಂತೆ ಎತ್ತಿಹಿಡಿದರೆ ಇರುವೆಗಳು ಹಾಗಿರಲಿ, ಮನುಷ್ಯರು ಕೂಡ ಅದನ್ನು ಜೇಡವೆಂದು ಗುರುತಿಸಲಾರರು!
ಇನ್ನು ದೊಡ್ಡ ಪ್ರಾಣಿಗಳ ವಿಷಯಕ್ಕೆ ಬಂದರೆ ನಮಗೆ ಮೊದಲು ನೆನಪಾಗುವ ಬೇಟೆಗಾರರೆಂದರೆ ಹುಲಿ, ಸಿಂಹ ಮತ್ತು ಚಿರತೆ ಇತ್ಯಾದಿ ದೊಡ್ಡ ಬೆಕ್ಕುಗಳು. ಹುಲಿ, ಚಿರತೆಗಳ ಮೈಮೇಲಿನ ಚಿತ್ತಾರ ಕೂಡ ಅವಕ್ಕೆ ಬೇಟೆಯಾಡಲು ಅನುಕೂಲ ಮಾಡಿಕೊಡುವ ಸಲುವಾಗಿಯೇ ಇದೆ. ನೀವು ಕಾಡಿನಲ್ಲಿ ಹುಲಿ, ಚಿರತೆಗಳು ಬೇಟೆಗಾಗಿ ಹೊಂಚುಹಾಕುವುದನ್ನು ಎಂದಾದರೂ ನೋಡಿದ್ದರೆ ನಿಮಗಿದು ಚೆನ್ನಾಗಿ ಅರ್ಥವಾಗುತ್ತದೆ. ಅವುಗಳದು ನಾಯಿ, ತೋಳಗಳಂತೆ ಬೇಟೆಯನ್ನು ಅನೇಕ ಮೈಲುಗಳವರೆಗೆ ಓಡಿಸಿ ಹಿಡಿಯುವ ಪರಿಪಾಠವಲ್ಲ. ಅವು ಬೇಟೆಯನ್ನು ಹೊಂಚುಹಾಕಿ ಹಿಡಿಯುತ್ತವೆ. ಹಾಗಾಗಿ ಬೇಟೆಯ ಬಳಿ ತಲುಪಲು ತಮ್ಮ ಪರಿಸರದಲ್ಲಿ ಲೀನವಾಗುವ ಕಲೆ ತುಂಬಾ ಅವಶ್ಯಕ. ಹುಲಿಯ ಪಟ್ಟೆಗಳಾಗಲೀ ಅಥವಾ ಚಿರತೆಯ ಮಚ್ಚೆಗಳಾಗಲೀ ಸುಮ್ಮನೆ ಸೌಂದರ್ಯದ ದೃಷ್ಟಿಯಿಂದ ಇರುವಂಥದ್ದಲ್ಲ. ಗಿಡಗಂಟೆಗಳ ನಡುವೆ ಅವು ನುಸುಳುತ್ತ ಚಲಿಸುವಾಗ ಮಿಕಗಳಿಗೆ ಅವುಗಳ ಸುಳಿವು ಸಿಗದಿರಲಿ ಎಂಬುದೇ ಇದರ ಉದ್ದೇಶ. ಅದರಲ್ಲೂ ಆಫ್ರಿಕದ ಹುಲ್ಲುಬಯಲಿನ ನಡುವೆ ಚಿರತೆಗಳು ಬೇಟೆಯಾಡುವುದನ್ನು ನೋಡುವಾಗ ಅವುಗಳ ಚಿತ್ತಾರ ಎಷ್ಟೊಂದು ಅಮೂಲ್ಯವೆಂದು ಗೊತ್ತಾಗುತ್ತದೆ.
ಫ್ರಿಟ್ಜ್ ಮುಲ್ಲರ್ ಮತ್ತು ಹೆನ್ರಿ ವಾಲ್ಟರ್ ಬೇಟ್ಸ್ ಎಂಬುವವರಿಬ್ಬರು ಎರಡು ಸಿದ್ಧಾಂತಗಳನ್ನು ಮಂಡಿಸಿದರು. ಛದ್ಮವೇಷಧಾರಿಗಳ ಬಗೆಗೆ ಅವರು ಮಂಡಿಸಿದ ಸಿದ್ಧಾಂತಗಳು ಮುಲ್ಲೇರಿಯನ್ ಮಿಮಿಕ್ರಿ ಮತ್ತು ಬೇಟ್ಸಿಯನ್ ಮಿಮಿಕ್ರಿ ಎಂದೇ ಪ್ರಸಿದ್ಧವಾಗಿದೆ. ಕೆಲವು ಕೀಟಗಳು ತಮ್ಮ ದೇಹದಲ್ಲಿ ಆತ್ಮರಕ್ಷಣೆಗಾಗಿ ವಿಷವನ್ನು ಹೊಂದಿರುತ್ತವೆ. ಆದರೆ ವಿಷವನ್ನು ಆತ್ಮರಕ್ಷಣೆಗಾಗಿ ಬಳಸುವಾಗ ಒಂದು ಸಮಸ್ಯೆ ಇದೆ. ಅದೇನೆಂದರೆ ಶತ್ರುವಿಗೆ ಆ ಕೀಟವನ್ನು ತಿಂದಾದ ಮೇಲೆ ವಿಷ ಎಂದು ಗೊತ್ತಾದರೆ ಅದರಿಂದ ಕೀಟಕ್ಕೇನೂ ಪ್ರಯೋಜನವಿಲ್ಲ. ಅದರ ಜೀವ ಹೋಗಿರುತ್ತದೆ. ಅದಕ್ಕೇ ಕೀಟಗಳು ಕಣ್ಣುಕುಕ್ಕುವಂಥ ಬಣ್ಣಗಳ ಮೂಲಕ “ನಾನು ವಿಷಕಾರಿ, ನನ್ನನ್ನು ಮುಟ್ಟಬೇಡಿ” ಎಂಬ ಸಂದೇಶವನ್ನು ಜಗತ್ತಿಗೇ ಸಾರಿಹೇಳುತ್ತವೆ. ಪಕ್ಷಿಗಳು ಆ ಕಣ್ಣುಕುಕ್ಕುವ ಬಣ್ಣಗಳನ್ನು ನೋಡಿಯೇ ಇವು ತಿನ್ನಲಾಗದ ಕೀಟಗಳೆಂದು ಅರ್ಥಮಾಡಿಕೊಳ್ಳುತ್ತವೆ. ಮುಲ್ಲರ್ ನೋಡಲು ಒಂದೇ ರೀತಿ ಕಾಣುವ ಬೇರೆ ಬೇರೆ ವಿಷಕಾರಿ ಕೀಟಗಳನ್ನು ಅಧ್ಯಯನ ಮಾಡಿ ಒಂದು ಸಂಗತಿಯನ್ನು ಕಂಡುಹಿಡಿದ. 1878ರಲ್ಲಿ ಆತ ಈ ವಿಷಯವನ್ನು ಪ್ರತಿಪಾದಿಸಿದ. ಇದರ ಸಾರಾಂಶವೆಂದರೆ ಎರಡು ಬೇರೆ ಬೇರೆ ಜಾತಿಯ ಕೀಟಗಳು, ಅವು ಹತ್ತಿರದ ಸಂಬಂಧಿಗಳಾಗಿರದಿದ್ದರೂ ಕೂಡ ಒಂದನ್ನೊಂದು ಹೋಲುತ್ತವೆ. ಇದು ಸಹ ಶತ್ರುಗಳಿಂದ ಪಾರಾಗುವ ಒಂದು ತಂತ್ರ. ಆ ಕೀಟಗಳನ್ನು ನೋಡಿದ ತಕ್ಷಣ ಶತ್ರುವಿಗೆ ಇದು ಅಪಾಯಕಾರಿಯೆಂದು ಗೊತ್ತಾಗಿ ಅದರ ತಂಟೆಗೇ ಹೋಗುವುದಿಲ್ಲ. ಕೀಟಸಾಮ್ರಾಜ್ಯದಲ್ಲಿ ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕಾಣಬಹುದು. ಹೆಲಿಕೋನಿಯಸ್ ಎಂಬ ಜೀನಸ್ ಗೆ ಸೇರಿದ ಚಿಟ್ಟೆಗಳಲ್ಲಿ ಇದನ್ನು ಪ್ರಧಾನವಾಗಿ ಗಮನಿಸಬಹುದು.
ಇದಕ್ಕೆ ತದ್ವಿರುದ್ಧವಾಗಿ ಬೇಟ್ಸಿಯನ್ ಮಿಮಿಕ್ರಿಯಲ್ಲಿ ವಿಷಕಾರಿಯಲ್ಲದ ನಿರಪಾಯಕಾರಿಗಳು ಭಯಂಕರ ವಿಷಕಾರಿಗಳನ್ನು ನಕಲಿ ಮಾಡುವ ಮೂಲಕ ಜೀವ ಉಳಿಸಿಕೊಳ್ಳುತ್ತವೆ. ಮತ್ತೆ ನಾವು ಇಂಥ ಮಹಾನ್ ಛದ್ಮವೇಷ ಕಲಾವಿದರನ್ನು ಬಹುಸಂಖ್ಯೆಯಲ್ಲಿ ನೋಡಬಹುದಾಗಿರುವುದು ಕೀಟ ಸಾಮ್ರಾಜ್ಯದಲ್ಲೇ. ಆದರೆ ಒಮ್ಮೊಮ್ಮೆ ನಾವು ಮುಲ್ಲೇರಿಯನ್ ಮಿಮಿಕ್ರಿಯ ಸಂದರ್ಭಗಳನ್ನು ಬೇಟ್ಸಿಯನ್ ಮಿಮಿಕ್ರಿ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆಗಳಿವೆ. ಉದಾಹರಣೆಗೆ ಮೊನಾರ್ಕ್ ಎಂಬ ಸುಪ್ರಸಿದ್ಧ ಚಿಟ್ಟೆಯ ಹೆಸರನ್ನು ಸಾಮಾನ್ಯವಾಗಿ ನೀವು ಕೇಳಿರಬಹುದು. ತನ್ನ ವಲಸೆ ಹೋಗುವ ಗುಣದಿಂದಾಗಿಯೇ ಸುಪ್ರಸಿದ್ಧವಾದ ಸುಂದರ ಪಾತರಗಿತ್ತಿ ಇದು. ಈ ಚಿಟ್ಟೆ ವಿಷಕಾರಿಯಾದ್ದರಿಂದ ಇದಕ್ಕೆ ಶತ್ರುಗಳ ಕಾಟ ಬಹಳ ಕಡಿಮೆ. ಆದ್ದರಿಂದ ವೈಸ್ ರಾಯ್ ಚಿಟ್ಟೆ ಇದನ್ನು ಅನುಕರಿಸುತ್ತದೆ. ಮೊದಲು ಈ ಅನುಕರಣೆಯನ್ನು ಬೇಟ್ಸಿಯನ್ ಮಿಮಿಕ್ರಿ ಎಂದು ತಿಳಿಯಲಾಗಿತ್ತು. ಈಗ ಅದನ್ನು ಮುಲ್ಲೇರಿಯನ್ ಮಿಮಿಕ್ರಿ ಎಂದು ಗುರುತಿಸಲಾಗಿದೆ. ಏಕೆಂದರೆ ವಿಷರಹಿತವೆಂದು ನಂಬಲಾಗಿದ್ದ ವೈಸ್ ರಾಯ್ ಚಿಟ್ಟೆಗಳು ಮೊನಾರ್ಕ್ ಗಳಿಗಿಂತಲೂ ವಿಷಕಾರಿಯೆಂದು ಈಗ ತಿಳಿದುಬಂದಿದೆ.
ಕಣಜಗಳು ಬೇಟ್ಸಿಯನ್ ಮಿಮಿಕ್ರಿಗೆ ಉತ್ತಮ ಉದಾಹರಣೆಗಳು. ಸಾಮಾನ್ಯವಾಗಿ ಕುಟುಕುವ ವಿಷಕಾರಿ ಕಣಜಗಳ ತಂಟೆಗೆ ಯಾರೂ ಹೋಗುವುದಿಲ್ಲ. ಕೆಲವೇ ಕೆಲವು ಪರಿಣತ ಹಕ್ಕಿಗಳನ್ನು ಹೊರತುಪಡಿಸಿ ಹೆಚ್ಚಿನ ಶತ್ರುಗಳು ಇಂಥ ಕೀಟಗಳಿಂದ ದೂರವೇ ಉಳಿಯುತ್ತವೆ. ಜೊತೆಗೆ ಇವು ಕಣ್ಣುಕುಕ್ಕುವಂಥ ಬಣ್ಣಗಳ ಮೂಲಕ ತಾವು ವಿಷಕಾರಿಗಳೆಂದು ಶತ್ರುಗಳಿಗೆ ಎಚ್ಚರಿಕೆ ಕೊಡುತ್ತವೆ. ಆದ್ದರಿಂದ ನಿರಪಾಯಕಾರಿಗಳಾದ ಕೆಲ ಕಣಜಗಳು ಇಂಥ ಕಣಜಗಳನ್ನು ಅನುಕರಿಸಿ ತಮ್ಮ ರಕ್ಷಣೆ ಮಾಡಿಕೊಳ್ಳುತ್ತವೆ, ಇರುವೆಗಳು ಸಹ ಇದೇ ತಂತ್ರ ಅನುಸರಿಸುವುದನ್ನು ಕಾಣಬಹುದು.
ಮೆಕ್ಸಿಕೋದಲ್ಲಿ ಭಯಾನಕ ವಿಷಕಾರಿಯಾದ ಕೋರಾಲ್ ಸ್ನೇಕ್ ಎಂಬ ಒಂದು ಹಾವಿದೆ. ಅದೇ ದೇಶದಲ್ಲಿ ವಿಷರಹಿತವಾದ ಮಿಲ್ಕ್ ಸ್ನೇಕ್ ಎಂಬ ಹಾವು ಕೋರಾಲ್ ಸ್ನೇಕ್ ಮೈಮೇಲಿನ ಚಿತ್ತಾರವನ್ನು ಅನುಕರಿಸುವ ಮೂಲಕ ತಾನು ಕೂಡ ವಿಷಕಾರಿಯೆಂದು ಶತ್ರುಗಳನ್ನು ಎಚ್ಚರಿಸುತ್ತದೆ. ಸೂಕ್ಷ್ಮವಾಗಿ ನೋಡದ ಹೊರತು ಮಾನವರಿಗೆ ಕೂಡ ಈ ವ್ಯತ್ಯಾಸ ಗೊತ್ತಾಗುವುದಿಲ್ಲ. ಅದೇ ರೀತಿ ಹಾಕ್ ಕಕ್ಕೂ ಎಂದು ಕರೆಯಲಾಗುವ ಒಂದು ಜಾತಿಯ ಹಕ್ಕಿ (ಈ ಹಕ್ಕಿ ಕಕ್ಕೂ ಜಾತಿಯ ಪರಪುಟ್ಟ ಹಕ್ಕಿಯಾಗಿದೆ) ಸ್ಪ್ಯಾರೋ ಹಾಕ್ ಎಂಬ ಬೇಟೆಗಾರ ಹಕ್ಕಿಯನ್ನು ಹೋಲುತ್ತದೆ. ಹೀಗಾಗಿ ಇದು ಸಣ್ಣ ಹಕ್ಕಿಗಳ ಗೂಡಿನ ಬಳಿ ಸುಳಿದಾಡಿದರೆ ಅದನ್ನು ಕಂಡು ಬೇಟೆಗಾರನೆಂದು ಭಾವಿಸಿ ಆ ಹಕ್ಕಿಗಳು ಗಾಬರಿಗೊಂಡು ದೂರ ಹೋಗುತ್ತವೆ. ಆಗ ಈ ಹಕ್ಕಿ ನಿರಾಯಾಸವಾಗಿ ಅವುಗಳ ಗೂಡಿನಲ್ಲಿ ಮೊಟ್ಟೆಯಿಟ್ಟು ತನ್ನ ಕೆಲಸ ಪೂರೈಸಿಕೊಳ್ಳುತ್ತದೆ.
ಯಾವುದೇ ಜೀವಿಯ ದೇಹದಲ್ಲಿ ಬಹುಮುಖ್ಯ ಅಂಗವೆಂದರೆ ತಲೆ. ಅದು ಬೇಟೆಗಾರರಿಗೂ ಗೊತ್ತು. ಹಾಗಾಗಿ ಬೇಟೆಗಾರರು ಮೊದಲು ದಾಳಿ ಮಾಡುವುದು ತಲೆಗೇ. ಹಾಗಾದರೆ ಈ ದಾಳಿಯಿಂದ ಪಾರಾಗುವುದು ಹೇಗೆ? ದೇಹದ ಹಿಂಭಾಗದಲ್ಲಿ ತಲೆಯೊಂದು ಇರುವಂತೆ ತೋರಿಸಿದರೆ ಶತ್ರು ಮೊದಲು ಅಲ್ಲಿಗೇ ದಾಳಿ ಮಾಡುತ್ತದೆ. ಆಗ ಆ ಜೀವಿ ತಲೆಗೆ ಮಾರಣಾಂತಿಕ ಏಟು ಬೀಳುವುದನ್ನು ತಪ್ಪಿಸಿಕೊಂಡು ಬಚಾವಾಗುತ್ತದೆ. ಬಟರ್ ಫ್ಲೈ ಫಿಶ್ ಎಂಬ ಒಂದು ಮೀನು ತನ್ನ ಹಿಂಭಾಗದಲ್ಲಿ ದೊಡ್ಡ ಕಪ್ಪು ಮಚ್ಚೆಯೊಂದನ್ನು ಹೊಂದಿದ್ದು ಅದು ನೋಡಲು ಕಣ್ಣಿನಂತೆ ಕಾಣುತ್ತದೆ. ಅದರಿಂದಾಗಿ ಶತ್ರುವಿಗೆ ಅದರ ನಿಜವಾದ ತಲೆ ಯಾವುದೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತದೆ. ಈ ಕಪ್ಪು ಮಚ್ಚೆ ನಿಜವಾದ ಕಣ್ಣಿಗಿಂತ ದೊಡ್ಡದಿರುವುದರಿಂದ ಅದನ್ನೇ ತಲೆಯೆಂದು ಭಾವಿಸಿ ಶತ್ರು ಮೋಸಹೋಗುತ್ತದೆ. ಮೀನು ಈ ಗೊಂದಲದಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಇದೇ ತಂತ್ರವನ್ನು ಕೆಲವಾರು ಚಿಟ್ಟೆಗಳೂ ಅನುಕರಿಸುತ್ತವೆ. ಹಿಂಭಾಗದಲ್ಲಿ ನಕಲಿ ಕಣ್ಣು, ಆಂಟೆನಾಗಳಿಂದ ಕೂಡಿದ ಮತ್ತು ನಿಜವಾದ ತಲೆಗಿಂತ ಪ್ರಧಾನವಾಗಿ ಕಾಣುವಂಥ ಸುಳ್ಳು ತಲೆಯೊಂದನ್ನು ಹೊಂದಿರುತ್ತವೆ. ಅದನ್ನು ಕಂಡ ಪಕ್ಷಿಗಳು ನಿಜವಾದ ತಲೆಯ ಬದಲು ಹಿಂಭಾಗಕ್ಕೆ ದಾಳಿ ಮಾಡುತ್ತವೆ. ಆಗ ಚಿಟ್ಟೆಗಳು ತಲೆಗೆ ಏನೂ ಅಪಾಯವಾಗದೆ ಸುಲಭದಲ್ಲಿ ಪಾರಾಗುತ್ತವೆ.
ಔಲ್ ಬಟರ್ ಫ್ಲೈ ಎಂಬ ಚಿಟ್ಟೆಯೊಂದಿದೆ. ಅದರ ರೆಕ್ಕೆಯ ಮೇಲೆ ಗೂಬೆಯ ಕಣ್ಣುಗಳನ್ನು ಹೋಲುವ ದೊಡ್ಡ ಮಚ್ಚೆಗಳಿವೆ. ಯಾವುದಾದರೂ ಹಕ್ಕಿ ತನ್ನ ಮೇಲೆ ದಾಳಿ ಮಾಡಲು ಬಂದರೆ ಈ ಚಿಟ್ಟೆ ತನ್ನ ರೆಕ್ಕೆಗಳನ್ನು ಬಿಡಿಸಿ ಪ್ರದರ್ಶಿಸುತ್ತದೆ. ಸುಂದರವಾದ ಚಿಟ್ಟೆ ಹಠಾತ್ತನೆ ಭಯಾನಕ ಗೂಬೆಯಾಗಿ ಬದಲಾಗಿದ್ದನ್ನು ನೋಡಿ ಬೆಚ್ಚಿಬೀಳುವ ಆ ಪಕ್ಷಿ ಪಲಾಯನ ಮಾಡುತ್ತದೆ.
ನೀರಿನಲ್ಲಿ ವಾಸಿಸುವ ಅನೇಕ ಮೀನು ಮತ್ತಿತರ ಜಲಚರಗಳು ಇನ್ನೊಂದು ಸುಲಭ ಉಪಾಯವನ್ನು ಕಂಡುಕೊಂಡಿವೆ. ಅವು ಪಾರದರ್ಶಕವಾದ ಗಾಜಿನಂಥ ದೇಹ ಹೊಂದುವ ಮೂಲಕ ಅದೃಶ್ಯವಾಗಲು ಪ್ರಯತ್ನಿಸುತ್ತವೆ. ಸಂಪೂರ್ಣ ಪಾರದರ್ಶಕತೆಯನ್ನು ಸಾಧಿಸುವುದು ಅಸಾಧ್ಯ. ಆದರೆ ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಕೆಲಮಟ್ಟಿಗೆ ಪಾರದರ್ಶಕತೆಯನ್ನು ಸಾಧಿಸುವುದು ಸಾಧ್ಯ. ಜೊತೆಗೆ ಸಾಗರದಾಳದಲ್ಲಿ ಬೆಳಕಿನ ಲಭ್ಯತೆಯೂ ತುಂಬ ಕಡಿಮೆಯಿರುವುದರಿಂದ ಅಲ್ಲಿ ಸ್ವಲ್ಪಮಟ್ಟಿಗೆ ಪಾರದರ್ಶಕವಾಗಿದ್ದರೂ ಅದರಿಂದ ಭಾರೀ ಲಾಭವೇ ಆಗುತ್ತದೆ. ಮೀನುಗಳು ಮಾತ್ರವಲ್ಲ ಕೆಲವು ಬಗೆಯ ಸ್ಕ್ವಿಡ್ ಗಳು ಹಾಗೂ ಅಂಬಲಿಮೀನುಗಳು ಸಹ ಈ ಪಾರದರ್ಶಕತೆಯ ಲಾಭ ಪಡೆದುಕೊಳ್ಳುತ್ತವೆ.

ಹೀಗೆ ಆತ್ಮರಕ್ಷಣೆಗಾಗಿ ಜೀವಿಗಳು ಅನುಸರಿಸುವ ತಂತ್ರಗಳು ಅಸಂಖ್ಯ. ಆ ಅಸಂಖ್ಯ ತಂತ್ರಗಳಲ್ಲಿ ಛದ್ಮವೇಷವೂ ಒಂದು. ಪರಿಸರದಲ್ಲಿ ಕಂಡೂಕಾಣದಂತಿರುವ ಕೀಟಗಳು, ಭಯಾನಕ ವಿಷಕಾರಿಗಳನ್ನು ಹೋಲುವ ನಿರುಪದ್ರವಿಗಳು, ತಾನೇ ಬೇಟೆಗಾರನೆಂದು ಭ್ರಮೆ ಮೂಡಿಸುವ ಬಲಿಪ್ರಾಣಿಗಳು, ಹೀಗೆ ಛದ್ಮವೇಷಧಾರಿಗಳಲ್ಲಿ ನಾನಾ ಬಗೆ. ಆದರೆ ಅದೆಲ್ಲದರ ಉದ್ದೇಶ ಒಂದೋ ಆತ್ಮರಕ್ಷಣೆ, ಅಥವಾ ಆಹಾರ ಸಂಪಾದನೆ. ಒಟ್ಟಿನಲ್ಲಿ ಪ್ರಕೃತಿಯ ವಿಸ್ಮಯಗಳ ಖಜಾನೆ ಎಂದೆಂದಿಗೂ ಬರಿದಾಗುವುದಿಲ್ಲ!

ಡೇವಿಡ್ ಅಟೆನ್ ಬರೋ: “ಲೈಫ್” ಗೆ ಜೀವ ತುಂಬಿದ ವನ್ಯಲೋಕದ ಗಾರುಡಿಗ

ಡೇವಿಡ್ ಅಟೆನ್ ಬರೋ: “ಲೈಫ್” ಗೆ ಜೀವ ತುಂಬಿದ ವನ್ಯಲೋಕದ ಗಾರುಡಿಗ
ನಿಮಗೆ ಬಿಬಿಸಿ ಚಾನೆಲ್ ನೋಡುವ ಅಭ್ಯಾಸವಿದ್ದರೆ ಒಂದು ದೃಶ್ಯವನ್ನು ಗಮನಿಸಿರಬಹುದು. ವಿಶಾಲವಾಗಿ ಸಾವಿರಾರು ಮೈಲು ದೂರದವರೆಗೆ ಹಬ್ಬಿರುವ ಆಫ್ರಿಕದ ಸವನ್ನಾ ಹುಲ್ಲುಗಾವಲಿನಲ್ಲಿ ಲಕ್ಷಾಂತರ ಝೀಬ್ರಾ, ವಿಲ್ಡೆಬೀಸ್ಟ್, ಇಂಪಾಲಾ, ಜಿರಾಫ್, ಆನೆ ಇತ್ಯಾದಿ ಸಸ್ಯಾಹಾರಿಗಳು ಮೇಯುತ್ತಿರುತ್ತವೆ. ಜೊತೆಗೆ ಸಿಂಹ, ಚಿರತೆ, ಚೀತಾ, ಕತ್ತೆಕಿರುಬ ಇತ್ಯಾದಿ ಮಾಂಸಾಹಾರಿಗಳು ಬೇಟೆಗಾಗಿ ಹೊಂಚುಹಾಕುತ್ತ ಇರುತ್ತವೆ. ಅವುಗಳ ನಡುವಿನಿಂದ ಓರ್ವ ವಯಸ್ಸಾದ, ಆದರೆ ಜೀವನೋತ್ಸಾಹದಿಂದ ಪುಟಿಯುತ್ತಿರುವ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ. ತನ್ನ ಮೋಡಿ ಮಾಡುವ ಇಂಗ್ಲಿಷ್ ನಲ್ಲಿ ಆತ ಅಲ್ಲಿ ಪ್ರತಿದಿನ ನಡೆಯುವ ಜೀವಲೋಕದ ಸಾವಿರಾರು ವಿಸ್ಮಯಕರ ವಿದ್ಯಮಾನಗಳನ್ನು ವಿವರಿಸುತ್ತಿದ್ದರೆ ಕೇಳುವವರು ಮಂತ್ರಮುಗ್ಧರಾಗಿ ನೋಡುತ್ತ ನಿಲ್ಲುವಂತಾಗುತ್ತದೆ. ಆ ವ್ಯಕ್ತಿಯ ಹೆಸರೇ ಡೇವಿಡ್ ಅಟೆನ್ ಬರೋ.
ಈ ಎರಡು ಪದಗಳ ಹೆಸರೇ ಯಾವುದೇ ನಿಸರ್ಗಪ್ರೇಮಿಯ ಮನದಲ್ಲಿ ರೋಮಾಂಚನ ಉಂಟುಮಾಡಲು ಸಾಕು. ಸಿನಿಮಾ ಪ್ರಿಯರಿಗೆ ರಿಚರ್ಡ್ ಅಟೆನ್ ಬರೋ ಹೇಗೆ ಚಿರಪರಿಚಿತರೋ ಹಾಗೆ ನಿಸರ್ಗಪ್ರೇಮಿಗಳಿಗೆ ಡೇವಿಡ್ ಅಟೆನ್ ಬರೋ ಚಿರಪರಿಚಿತ. ಚಿಕ್ಕ ಇರುವೆಯಿಂದ ಹಿಡಿದು ದೈತ್ಯ ನೀಲಿ ತಿಮಿಂಗಿಲಗಳವರೆಗೆ ಡೇವಿಡ್ ಯಾವ ಪ್ರಾಣಿಯನ್ನೂ ಬಿಟ್ಟಿಲ್ಲ. ಸಸ್ತನಿ, ಸರೀಸೃಪ, ಉಭಯವಾಸಿ, ಪಕ್ಷಿ, ಮತ್ಸ್ಯ. ಕೀಟ, ಮೃದ್ವಂಗಿ, ಕಂಟಕಚರ್ಮಿ ಹೀಗೆ ಎಲ್ಲಾ ವಿಧದ ಜೀವಿಗಳನ್ನೂ ತನ್ನ ಸಾಕ್ಷ್ಯಚಿತ್ರಗಳಲ್ಲಿ ತಂದಿದ್ದಾರೆ. ನಮ್ಮಲ್ಲಿ “ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ವಿಷಯವಿಲ್ಲ” ಎಂಬ ಮಾತಿದೆ. ಅದಕ್ಕೆ “ಅಟೆನ್ ಬರೋ ಸಾಕ್ಷ್ಯಚಿತ್ರ ಮಾಡದ ಪ್ರಾಣಿಗಳಿಲ್ಲ” ಎಂದೂ ಸೇರಿಸಬಹುದು ಎಂದರೆ ಅತಿಶಯೋಕ್ತಿಯಲ್ಲ! ಜೊತೆಗೆ ಸುಡುವ ಮರುಭೂಮಿಗಳಿಂದ ಹಿಡಿದು ಹಿಮ ಕೊರೆಯುವ ಅಂಟಾರ್ಕ್ಟಿಕಾ, ಅತೀವ ಒತ್ತಡದ ಆಳವಾದ ಮಹಾಸಾಗರಗಳಿಂದ ಹಿಡಿದು ಅತೀ ವಿರಳ ಒತ್ತಡದ ಅತ್ಯುನ್ನತ ಪರ್ವತಗಳವರೆಗೆ, ಕಗ್ಗತ್ತಲ ಗುಹಾಂತರಾಳಗಳಿಂದ ಹಿಡಿದು ನದಿ ಸರೋವರಗಳವರೆಗೆ, ಹುಲ್ಲುಗಾವಲುಗಳಿಂದ ಹಿಡಿದು ಜ್ವಾಲಾಮುಖಿಗಳ ಬಾಯಿಯ ತನಕ ಅಟೆನ್ ಬರೋ ಕಾಲಿಡದ ಜಾಗಗಳೇ ಇಲ್ಲ. ಅಟೆನ್ ಬರೋ ಸಾಕ್ಷ್ಯಚಿತ್ರವೆಂದರೆ ಅದೊಂದು ಸುಂದರ ದೃಶ್ಯಕಾವ್ಯ. ಓದುಗರ ಮನಸ್ಸನ್ನು ಆಳವಾಗಿ ತಟ್ಟುವಂತೆ ವರ್ಣಿಸುವ ಕಲೆ ಅಟೆನ್ ಬರೋ ಅವರಿಗೆ ಕರಗತ. ಒಂದು ಜೀವಿಯ ಜೀವನದ ವಿವಿಧ ಹಂತಗಳಲ್ಲಿ ಜರುಗುವ ಘಟನಾವಳಿಗಳನ್ನು ಅವು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆಯೇನೋ ಎಂಬ ಭ್ರಮೆ ಮೂಡಿಸುವಂತೆ ವರ್ಣಿಸುತ್ತಾರೆ. ಹಿಮಕರಡಿಯೊಂದು ಸೀಲ್ ಗಳನ್ನು ಬೇಟೆಯಾಡಲು ವಿಫಲವಾಗಿ ಆಹಾರವಿಲ್ಲದೆ ಹಸಿವಿನಿಂದ ದುರ್ಬಲವಾಗಿ ಸಾವನ್ನು ಎದುರು ನೋಡುತ್ತ ಬಿದ್ದಿರುವಾಗ “ಅನೇಬಲ್ ಟು ಫೀಡ್, ದಿಸ್ ಪೋಲಾರ್ ಬೇರ್ ವಿಲ್ ನಾಟ್ ಸರ್ವೈವ್” (ಆಹಾರ ತಿನ್ನಲಾಗದ ಈ ಹಿಮಕರಡಿ ಬದುಕುವುದಿಲ್ಲ”) ಎಂದು ಆತ ವರ್ಣಿಸುತ್ತಿರುವಾಗ ನೋಡುಗರಿಗೆ ಅರಿವಿಲ್ಲದಂತೆಯೇ ಕಣ್ತುಂಬಿ ಬರುತ್ತದೆ. ಹಾಗೆಯೇ ಆಫ್ರಿಕದ ಹುಲ್ಲುಬಯಲಿನಲ್ಲಿ ಚಿರತೆಯ ಮರಿಯೊಂದು ಕಿರುಬಗಳ ದಾಳಿಗೆ ತುತ್ತಾಗಿ ಸೊಂಟ ಮುರಿದುಕೊಂಡು ಬಿದ್ದಿರುವಾಗ ತಾಯಿ ಚಿರತೆ ಹತ್ತಿರ ಬಂದು ಅಸಹಾಯಕತೆಯಿಂದ ನೋಡುವುದನ್ನು ಆತ ವರ್ಣಿಸುವಾಗಲೂ ಅದೇ ರೀತಿ ಹೃದಯ ಭಾರವಾಗುತ್ತದೆ. ಆಫ್ರಿಕದ ಮರುಭೂಮಿಯಲ್ಲಿ ಆನೆಮರಿಯೊಂದು ನೀರು, ಆಹಾರವಿಲ್ಲದೆ ದುರ್ಬಲವಾಗಿ ಕುಸಿದು ಬಿದ್ದಿದ್ದಾಗ ತಾಯಿ ಅದನ್ನು ಎತ್ತಲು ಯತ್ನಿಸುವ ದೃಶ್ಯವೂ ಮನಮಿಡಿಯುತ್ತದೆ. ಆ ವರ್ಣನೆಯನ್ನು ಅಟೆನ್ ಬರೋ ಮಾತುಗಳಲ್ಲೇ ಕೇಳಬೇಕು. ಪ್ರಕೃತಿಯ ವರ್ಣನೆಯಲ್ಲಿ ಆತನನ್ನು ಮೀರಿಸುವ ಮತ್ತೊಬ್ಬ ಇಲ್ಲ.
ಅಟೆನ್ ಬರೋ ಅವರ “ಲೈಫ್” ಸರಣಿಯ ಎಲ್ಲ ಸಾಕ್ಷ್ಯಚಿತ್ರಗಳನ್ನು ನೋಡಿದರೆ ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿಲ್ಲದ ನೂರಾರು ಪ್ರಾಣಿಗಳು ಅದರಲ್ಲಿವೆ ಎಂದರೆ ತಪ್ಪಾಗಲಾರದು. ನೆಲದ ಮೇಲೆ ಪ್ರತಿನಿತ್ಯ ಕಾಣುವ ಅನೇಕ ಪ್ರಾಣಿಗಳ ಬಗೆಗೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇನ್ನು ಅಟೆನ್ ಬರೋ ಸಾಗರದಾಳದಿಂದ ಹುಡುಕಿ ತೆಗೆದಿರುವ ಸಾವಿರಾರು ವೈವಿಧ್ಯಮಯ ಜೀವಿಗಳನ್ನು ಗಮನಿಸಿದರೆ ಅಂಥ ಜೀವಿಗಳ ಬಗೆಗೆ ಗೊತ್ತಿರುವವರ ಸಂಖ್ಯೆ ವಿರಳಾತಿವಿರಳ ಎಂಬುದರಲ್ಲಿ ಅನುಮಾನವೇ ಉಳಿಯುವುದಿಲ್ಲ. ಬಿಚ್ಚಿಟ್ಟ ಛತ್ರಿಗಳಂತಿರುವ ಅಂಬಲಿಮೀನುಗಳು, ತನ್ನ ಮೊಟ್ಟೆಗಳ ಸಂರಕ್ಷಣೆಗಾಗಿ ತನ್ನ ಜೀವವನ್ನೇ ತ್ಯಾಗ ಮಾಡುವ ಅಷ್ಟಪದಿ ತಾಯಿ, ಒಂದೇ ತುತ್ತಿನಲ್ಲಿ ಕೆಜಿಗಟ್ಟಲೆ ಮೀನುಗಳನ್ನು ನುಂಗುವ ತಿಮಿಂಗಿಲಗಳು ಇತ್ಯಾದಿ ಜೀವಿಗಳನ್ನೊಳಗೊಂಡ ರಮ್ಯಲೋಕವೊಂದನ್ನು ನಮ್ಮ ಕಣ್ಣೆದುರು ತೆರೆದಿಡುತ್ತಾರೆ ಅಟೆನ್ ಬರೋ.
1926ರ ಮೇ 8ರಂದು ಜನಿಸಿದ ಡೇವಿಡ್ ಅಟೆನ್ ಬರೋ ಅವರಿಗೆ ಚಿಕ್ಕಂದಿನಿಂದಲೇ ವನ್ಯಜೀವಿಗಳ ಬಗೆಗೆ ಅಪಾರ ಆಸಕ್ತಿ ಇತ್ತು. ಪ್ರಾಚೀನ ಜೀವಿಗಳ ಪಳೆಯುಳಿಕೆಗಳ ಸಂಗ್ರಹದಲ್ಲಿ ಅವರಿಗೆ ಅಪಾರ ಆಸಕ್ತಿಯಿತ್ತು. ಅದೇ ಆಸಕ್ತಿ ಬೆಳೆದು ಹೆಮ್ಮರವಾಯಿತು. ಲೀಸೆಸ್ಟರ್ ನ ಯೂನಿವರ್ಸಿಟಿ ಕಾಲೇಜಿನಲ್ಲಿ ಡೇವಿಡ್ ನ ಅಪ್ಪ ಫ್ರೆಡರಿಕ್ ಪ್ರಿನ್ಸಿಪಾಲರಾಗಿದ್ದರು. ಅಲ್ಲೇ ಡೇವಿಡ್ ಬೆಳೆದ. ಅಲ್ಲಿಂದಲೇ ಆತನ ಆಸಕ್ತಿಗೂ ಹೊಸ ಆಯಾಮ ಸಿಕ್ಕಿತು. 1936ರಲ್ಲಿ ಡೇವಿಡ್ ಇನ್ನೂ ಹತ್ತು ವರ್ಷದವನಾಗಿದ್ದಾಗಲೇ ಅವನ ಜೀವನದ ದಿಕ್ಕನ್ನೇ ಬದಲಾಯಿಸಿದ ಘಟನೆ ಸಂಭವಿಸಿತು. “ಗ್ರೇ ಔಲ್” ಎಂದೇ ಹೆಸರಾಗಿದ್ದ ಆರ್ಚಿಬಾಲ್ಡ್ ಬೆಲನಿಯ ಉಪನ್ಯಾಸವನ್ನು ಡೇವಿಡ್ ಮತ್ತು ರಿಚರ್ಡ್ ಕೇಳಿದರು. ಅಮೆರಿಕದಲ್ಲಿ ನದಿಗಳಿಗೆ ಅಣೆಕಟ್ಟು ಕಟ್ಟುವ ಬೀವರ್ ಎಂಬ ಒಂದು ಜಾತಿಯ ಪ್ರಾಣಿಯ ಸಂರಕ್ಷಣೆಯ ಬಗೆಗೆ ಆತ ಉಪನ್ಯಾಸ ನೀಡಿದ್ದ. ಅದರ ಪ್ರಭಾವ ಡೇವಿಡ್ ನ ಮೇಲೆ ಗಾಢವಾಗಿ ಆಯಿತು. ಅಂದಿನಿಂದಲೇ ಆತನ ಜೀವನ ಹೊಸ ದಿಕ್ಕಿನತ್ತ ತೆರೆದುಕೊಂಡಿತೆನ್ನಬಹುದು.
1950ರಲ್ಲಿ ಜೇನ್ ಎಲಿಜಬೆತ್ ಳನ್ನು ವಿವಾಹವಾದ ಅಟೆನ್ ಬರೋಗೆ ಇಬ್ಬರು ಮಕ್ಕಳು. ರಾಬರ್ಟ್ ಮತ್ತು ಸೂಸಾನ್. ಮೂರು ತಿಂಗಳ ತರಬೇತಿಯ ನಂತರ 1952ರಲ್ಲಿ ಡೇವಿಡ್ ಬಿಬಿಸಿಯಲ್ಲಿ ಪೂರ್ಣಾವಧಿಗೆ ಸೇರಿದ. ನಂತರದ್ದು ಇತಿಹಾಸ. ಕಳೆದ ಅರವತ್ಮೂರು ವರ್ಷಗಳಿಂದ ನಾವು ವಾಸಿಸುತ್ತಿರುವ ಈ ಭೂಮಿ ಮತ್ತು ಅದರ ಮೇಲೆ ಬದುಕುತ್ತಿರುವ ಲಕ್ಷಾಂತರ ಜೀವಿ ಪ್ರಭೇದಗಳ ಬಗೆಗೆ ವಿವರಿಸುತ್ತ ಭೂಮಿಯ ಅಂಗುಲ ಅಂಗುಲವನ್ನೂ ಸುತ್ತಿದ. ಇಂದು ಪ್ರಕೃತಿ ಪ್ರೇಮಿಗಳಿಗೆ ಡೇವಿಡ್ ಅಟೆನ್ ಬರೋ ಎಂದರೆ ಆರಾಧ್ಯದೈವ! ಆ ಹೆಸರು ಕೇಳಿದರೇ ಮೈಯೆಲ್ಲ ಪುಳಕ!! ಅನಿಮಲ್ ಪ್ಲಾನೆಟ್, ನ್ಯಾಶನಲ್ ಜಿಯಾಗ್ರಫಿಕ್ ಚಾನೆಲ್ ಗಳಿಗಿಂತಲೂ ಅಟೆನ್ ಬರೋನ ಬಿಬಿಸಿ ಚಾನೆಲ್ ಪ್ರಸಿದ್ಧವಾಗಿದೆ.
ಅಟೆನ್ ಬರೋ “ದ ಪ್ಯಾಟರ್ನ್ ಆಫ್ ಅನಿಮಲ್ಸ್” ಎಂಬ ಸರಣಿಯನ್ನು ನಿರೂಪಿಸುವುದರೊಂದಿಗೆ ಪ್ರಾಣಿ ಪ್ರಪಂಚಕ್ಕೆ ಮೊದಲು ಕಾಲಿಡುತ್ತಾನೆ. ಇನ್ನೊಬ್ಬ ನಿಸರ್ಗಪ್ರೇಮಿ ಜೂಲಿಯನ್ ಹಕ್ಸ್ ಲೀ ಎಂಬಾತನ ಜೊತೆ ಸೇರಿ ತಯಾರಿಸಿದ ಲಂಡನ್ನಿನ ಮೃಗಾಲಯದ ಪ್ರಾಣಿಗಳ ಬಗೆಗೆ ರೂಪಿಸಲಾದ ಈ ಸಾಕ್ಷ್ಯಚಿತ್ರದಲ್ಲಿ ಪ್ರಾಣಿಗಳ ಛದ್ಮವೇಷ ಮತ್ತು ಪ್ರಣಯದ ಸಂಗತಿಗಳನ್ನು ಸೊಗಸಾಗಿ ನಿರೂಪಿಸಲಾಗಿತ್ತು. ಈ ಸರಣಿ ಚಿತ್ರಗಳು ಅಟೆನ್ ಬರೋಗೆ ದೊಡ್ಡಮಟ್ಟದ ಖ್ಯಾತಿಯನ್ನು ತಂದುಕೊಟ್ಟವು. ಅಲ್ಲಿ ಆ ಮೃಗಾಲಯದ ಕ್ಯೂರೇಟರ್ ಆಗಿದ್ದ ಜಾಕ್ ಲೆಸ್ಟರ್ ನನ್ನು ಭೇಟಿಯಾದ ಅಟೆನ್ ಬರೋ ಅವನೊಂದಿಗೆ ಸೇರಿ “ಝೂ ಕ್ವೆಸ್ಟ್” ಎಂಬ ಹೊಸ ಕಾರ್ಯಕ್ರಮವನ್ನು ನಿರೂಪಿಸಿದರು. ಅಟೆನ್ ಬರೋನ ಖ್ಯಾತಿ ಉತ್ತುಂಗಕ್ಕೇರಿತು.
60ರ ದಶಕದ ಅವಧಿಗೆ ಅಟೆನ್ ಬರೋ ಬಿಬಿಸಿಯ ಪೂರ್ಣಾವಧಿ ಹುದ್ದೆಗೆ ರಾಜೀನಾಮೆ ನೀಡಿದ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ಆತ ರಾಜೀನಾಮೆ ಸಲ್ಲಿಸಿದ್ದ. ಆದರೆ ಅವನ ಬೆಲೆ ಎಷ್ಟೆಂದು ತಿಳಿದಿದ್ದ ಬಿಬಿಸಿ ಯಾವುದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರಗಳನ್ನು ತಯಾರಿಸುವ ಅವಕಾಶವನ್ನು ಅವನಿಗೆ ನೀಡಿತು. 1969ರಲ್ಲಿ ಟಾಂಜಾನಿಯಾದಲ್ಲಿ ಆನೆಗಳ ಬಗೆಗೆ ಸಾಕ್ಷ್ಯಚಿತ್ರ ತಯಾರಿಸಿದ. ಅದಾದ ನಂತರ ಆತ ಹಿಂತಿರುಗಿ ನೋಡಿದ್ದೇ ಇಲ್ಲ.
ಡೇವಿಡ್ ಅಟೆನ್ ಬರೋ ಅವರ ಸಾಕ್ಷ್ಯಚಿತ್ರಗಳನ್ನು ನೋಡುವಾಗ ಅವಕ್ಕೆ ನೂರಾರು ಆಯಾಮಗಳಿವೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಅವುಗಳನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡುವವರಿಗೂ ಧಾರಾಳ ಮನರಂಜನೆ ಸಿಗುತ್ತದೆ. ಜೊತೆಗೆ ಜ್ಞಾನ ಸಂಪಾದನೆಯ ದೃಷ್ಟಿಯಿಂದ ನೋಡುವವರಿಗೂ ನಿರಾಶೆಯಾಗುವುದಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಮಾನವೀಯ ನೆಲೆಗಟ್ಟಿನಿಂದಲೂ ಈ ಸಾಕ್ಷ್ಯಚಿತ್ರಗಳು ತುಂಬಾ ಪ್ರಮುಖವಾಗಿವೆ. ಅವರ ಜೀವನೋತ್ಸಾಹ ಎಂಥವರನ್ನೂ ಅಚ್ಚರಿಗೊಳಿಸದಿರದು. ಪ್ರಕೃತಿಯ ವಿಸ್ಮಯಗಳ ಕುರಿತು ವಿವರಿಸುವುದರೊಂದಿಗೇ ನಾವು ಪ್ರಕೃತಿಯನ್ನು ಹೇಗೆ ಶೋಷಿಸುತ್ತಿದ್ದೇವೆಂದು ವಿವರಿಸುತ್ತ ಮುಂದೊಂದು ದಿನ ನಮಗೆ ಎದುರಾಗಲಿರುವ ಭೀಕರ ದಿನಗಳ ಬಗೆಗೆ ಎಚ್ಚರಿಕೆಯನ್ನೂ ನೀಡುತ್ತಾರೆ ಅಟೆನ್ ಬರೋ. ಯಾವುದನ್ನೂ ಪೂರ್ವಾಗ್ರಹ ಪೀಡಿತ ದೃಷ್ಟಿಯಿಂದ ನೋಡದೆ ಇದ್ದದ್ದನ್ನು ಇದ್ದಂತೆ ಹೇಳುವುದು ಅವರ ಪದ್ಧತಿ.
ಅವರಿಗೆ ವಿಶ್ವವಿಖ್ಯಾತಿಯನ್ನು ತಂದುಕೊಟ್ಟ ಸರಣಿ ಎಂದರೆ “ಲೈಫ್” ಸರಣಿ. ಬಹುಶಃ ಈ ಸರಣಿಯಲ್ಲಿ ಭೂಮಿಯ ಮೇಲೆ ಇಂದು ವಾಸವಾಗಿರುವ ಎಲ್ಲ ವರ್ಗಗಳ ಜೀವಿಗಳ ಬಗೆಗೂ ಪ್ರಸ್ತಾಪಿಸಿದ್ದಾರೆ. ಸಸ್ತನಿಗಳು, ಉರಗ ಮತ್ತು ಉಭಯವಾಸಿಗಳು, ಪಕ್ಷಿಗಳು, ಮತ್ಸ್ಯಗಳು, ಕೀಟಗಳು ಹೀಗೆ ಪ್ರತಿ ಜೀವಿವರ್ಗದ ಬಗ್ಗೆ ಪ್ರತ್ಯೇಕವಾಗಿ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕೆಸರು ಜಿಗಣಿ (ಮಡ್ ಸ್ಕಿಪ್ಪರ್) ಎಂದು ಕರೆಯಲ್ಪಡುವ ಒಂದು ಜಾತಿಯ ಮೀನಿನ ಬಗೆಗೆ ವಿವರಿಸುತ್ತ ಅಟೆನ್ ಬರೋ ತನ್ನ ಸಂತತಿಯನ್ನು ಕಾಪಾಡುವುದಕ್ಕಾಗಿ ಈ ಪುಟ್ಟ ಮೀನು ಮಾಡುವ ಹರಸಾಹಸವನ್ನು ವಿವರಿಸುವಾಗ ಎಂಥವರಿಗೂ ಆ ಮೀನಿನ ಬಗೆಗೆ ಗೌರವ ಉಂಟಾಗದಿರದು. ಕೆಸರಿನಿಂದ ಕೂಡಿದ ಜೌಗು ಪ್ರದೇಶದಲ್ಲಿ ಕುಳಿಗಳನ್ನು ತೋಡಿ ಅದರೊಳಗೆ ಮೊಟ್ಟೆ ಇಡುವ ಈ ಮೀನು ತನ್ನ ಮೊಟ್ಟೆಗಳಿಗೋಸ್ಕರ ಪ್ರತಿದಿನ ನೂರಾರು ಬಾರಿ ಆಮ್ಲಜನಕಭರಿತ ನೀರನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ಬಂದು ತನ್ನ ಮೊಟ್ಟೆಗಳ ಮೇಲೆ ಎರಚುವ ಮೂಲಕ ಅವುಗಳ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ. ಹಾಗೆಯೇ ಅಮೆಜಾನಿನ ಮಳೆಕಾಡುಗಳಲ್ಲಿ ವಾಸಿಸುವ ಚಿಕ್ಕ ಕಪ್ಪೆಯೊಂದು ಮಹಾವೃಕ್ಷಗಳ ಮೇಲೆ ಬ್ರೋಮಿಲಿಯಾಡ್ (ನಮ್ಮ ಅನಾನಸ್ ಗಿಡವನ್ನು ಹೋಲುವ ಗಿಡ) ಗಿಡದ ಎಲೆಗಳ ನಡುವೆ ಸಂಗ್ರಹವಾಗಿರುವ ನೀರಿನಲ್ಲಿ ಮೊಟ್ಟೆಯಿಡುತ್ತದೆ. ಆದರೆ ಅದರ ಕೆಲಸ ಅಷ್ಟಕ್ಕೇ ಮುಗಿಯುವುದಿಲ್ಲ. ಅನೇಕ ಮರಗಳಲ್ಲಿ ಒಂದೊಂದು ಮೊಟ್ಟೆ ಇಡುವ ಆ ಕಪ್ಪೆ ಮತ್ತೆ ಪ್ರತಿ ಮರಕ್ಕೂ ಮ್ಯಾರಥಾನ್ ಪಯಣ ಆರಂಬಿಸುತ್ತದೆ. ಪ್ರತಿ ಮರಿಗೂ ಆಹಾರ ಒದಗಿಸುವ ಸಲುವಾಗಿ ತನ್ನದೇ ಫಲಿತವಾಗದ ಮೊಟ್ಟೆಯೊಂದನ್ನು ಆ ನೀರಿನಲ್ಲಿ ಉದುರಿಸುತ್ತದೆ. ತನ್ನ ಮರಿಯ ಮೇಲಿನ ಕಾಳಜಿಯಿಂದ ಆ ಪುಟ್ಟ ಕಪ್ಪೆ ಪಡುವ ಹರಸಾಹಸವನ್ನು ಕಂಡಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಏನಾದರೂ ಕೆಟ್ಟ ಕೆಲಸ ಮಾಡಿದವರನ್ನು “ಮಣ್ಣು ತಿನ್ನುವ ಕೆಲಸ ಮಾಡಿದೆಯಲ್ಲೋ” ಎಂದು ಬೈಯುವುದಿದೆ. ಆದರೆ ಮಣ್ಣು ತಿನ್ನುವುದು ಎಷ್ಟೋ ಜೀವಿಗಳಿಗೆ ಅತ್ಯಂತ ಅಗತ್ಯ ಎಂದರೆ ನಂಬುತ್ತೀರಾ? ಸೇವಿಸುವ ಆಹಾರದಲ್ಲಿರುವ ಕೆಲವು ವಿಷಕಾರಿ ಅಂಶಗಳ ಪ್ರಭಾವವನ್ನು ನಿಷ್ಕ್ರಿಯಗೊಳಿಸಲು ಹಾಗೂ ಕೆಲವು ಅತ್ಯಗತ್ಯ ಖನಿಜ ಹಾಗೂ ಲವಣಗಳನ್ನು ಪಡೆದುಕೊಳ್ಳಲು ಮಣ್ಣು ತಿನ್ನುವ ಅಭ್ಯಾಸ ಕೆಲವು ಪ್ರಾಣಿಗಳಿಗಿದೆ. ಆಫ್ರಿಕದಲ್ಲಿ ಕೆಲವು ಗುಹೆಗಳು ಪ್ರಾಣಿಗಳ ಖಾಯಂ ಮಣ್ಣು ತಿನ್ನುವ ಸ್ಥಳಗಳಾಗಿವೆ. ಚಿಕ್ಕ ಇಂಪಾಲಾಗಳಿಂದ ಹಿಡಿದು ಆನೆಗಳವರೆಗೆ ಬೇರೆ ಬೇರೆ ಪ್ರಾಣಿಗಳು ಅಲ್ಲಿ ಬಂದು ಮಣ್ಣು ತಿನ್ನುತ್ತವೆ. ಮೊದಲಿಗೆ ಆ ಗುಹೆಯ ಒಳಗೋಡೆಗಳ ಮೇಲೆ ಇರುವ ಗುರುತುಗಳನ್ನು ನೋಡಿ ಅದು ಆದಿಮಾನವರಿಂದ ಆಗಿದ್ದಿರಬೇಕೆಂದು ಭಾವಿಸಿದ್ದರಂತೆ. ಆದರೆ ಆ ಮೇಲೆ ತಿಳಿಯಿತು ಅದು ಆನೆಗಳು ತಮ್ಮ ದಂತಗಳಿಂದ ಗೋಡೆಯ ಮಣ್ಣನ್ನು ಕೆರೆದು ಕೆರೆದು ಮಾಡಿದ ಗುರುತುಗಳು ಎಂದು.
ಹವಾಯಿ ದ್ವೀಪಗಳಲ್ಲಿ ಒಂದು ಜಾತಿಯ ಪುಟಾಣಿ ಮೀನಿದೆ. ಗೋಬಿ ಎಂದು ಕರೆಯಲ್ಪಡುವ ಈ ಮೀನು ನಮ್ಮ ಹೆಬ್ಬೆರಳಿಗಿಂತ ಚಿಕ್ಕದು. ಈ ಮೀನು ಸಾಗರದ ನೀರಿನಲ್ಲಿ ಬದುಕುತ್ತದೆ. ಆದರೆ ಅಲ್ಲಿನ ವಿಪ್ಲವಗಳಿಂದ ಬೇಸತ್ತು ಮೊಟ್ಟೆಯಿಡಲು ಸಿಹಿನೀರನ್ನು ಹುಡುಕಿಕೊಂಡು ಹೊರಡುತ್ತವೆ. ಅದು ಬಹುಶಃ ಗೋಬಿಗಳ ಜೀವನದ ಅತಿ ಕಠಿಣವಾದ ಪಯಣ. ಭೋರ್ಗರೆಯುತ್ತ ಹರಿಯುವ ನದಿ ಕೆಲವೆಡೆ ಜಲಪಾತವಾಗಿ ರಭಸದಿಂದ ಧುಮ್ಮಿಕ್ಕುತ್ತದೆ. ಆ ಜಲಪಾತದ ವಿರುದ್ದ ಈಜುತ್ತ ಮೇಲೆ ಹತ್ತುವ ಸವಾಲು ಅವುಗಳ ಎದುರಿಗೆ ಇರುತ್ತದೆ. ಅರ್ಧಕ್ಕೂ ಹೆಚ್ಚು ಗೋಬಿಗಳು ನೀರಿನ ಹೊಡೆತ ತಾಳಲಾಗದೆ ಕೆಳಕ್ಕೆ ಬಿದ್ದು ಸಾಯುತ್ತವೆ. ಆದರೆ ಆ ಅಡೆತಡೆಗಳನ್ನೂ ನಿವಾರಿಸಿ ಮೇಲೆ ಹತ್ತುವ ಮೀನುಗಳಿಗೆ ಪ್ರಶಾಂತವಾದ ನೀರು ಸಿಗುತ್ತದೆ. ಅಲ್ಲಿ ಅವು ಮೊಟ್ಟೆಯಿಡುತ್ತವೆ. ಮೊಟ್ಟೆ ಒಡೆದು ಹೊರಬಂದ ಮೀನುಗಳು ಸಮುದ್ರ ಸೇರುತ್ತವೆ. ಮತ್ತೆ ಅವು ಪ್ರೌಢಾವಸ್ಥೆಗೆ ಬಂದ ಮೇಲೆ ಮೊಟ್ಟೆಯಿಡಲು ಮರಳಿ ನದಿಯತ್ತ ಪಯಣ ಬೆಳೆಸುತ್ತವೆ. ಈ ಆವರ್ತನ ಹೀಗೆಯೇ ಸಾಗುತ್ತದೆ. ಈ ಕಥೆಯನ್ನು ನಾನು ಹೇಳಿದರೆ ನಿಮಗೇನೂ ಅನ್ನಿಸದೆ ಇರಬಹುದು. ಆದರೆ ಆ ವರ್ಣನೆಯನ್ನು ಅಟೆನ್ ಬರೋ ಮಾತುಗಳಲ್ಲಿ ಕೇಳಿದರೆ ಅದು ಹೃದಯ ತಟ್ಟದಿರದು. ಇದನ್ನೆಲ್ಲ ತಿಳಿಯಬೇಕೆಂದರೆ ಅವರ “ಫಿಶ್” ಎಂಬ ಸಾಕ್ಷ್ಯಚಿತ್ರ ನೋಡಿ.
ನೀಲಿ ತಿಮಿಂಗಿಲದ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಅದರ ದೈತ್ಯಗಾತ್ರದ ಬಗೆಗೂ ನೂರಾರು ದಂತಕಥೆಗಳು ಎಲ್ಲೆಡೆ ಹಬ್ಬಿವೆ. ಆದರೆ ನೀಲಿ ತಿಮಿಂಗಿಲ ನಿಜಕ್ಕೂ ಎಷ್ಟು ದೊಡ್ಡದಿದೆ? ದೈತ್ಯ ಗಾತ್ರವೊಂದೇ ಅದರ ವೈಶಿಷ್ಟ್ಯವೇ? ನೀರಿನಲ್ಲಿ ಶಾಶ್ವತವಾಗಿ ವಾಸಿಸುವ ಸಸ್ತನಿಗಳು ಅಲ್ಲಿನ ಸವಾಲುಗಳನ್ನು ಹೇಗೆ ಎದುರಿಸುತ್ತವೆ? ನೀರಿನಲ್ಲಿ ವಾಸಿಸಿದರೂ ಉಸಿರಾಡಲು ಗಾಳಿಯನ್ನೇ ಅವಲಂಬಿಸಿರುವ ಸಸ್ತನಿಗಳು ಅದನ್ನು ಹೇಗೆ ನಿಭಾಯಿಸುತ್ತವೆ? ಅದಕ್ಕಾಗಿ ಅವುಗಳ ದೇಹದಲ್ಲಿ ಆಗಿರುವ ಮಾರ್ಪಾಡುಗಳೇನು? ನೀರಿನಲ್ಲಿ ವಂಶಾಭಿವೃದ್ಧಿ ಮಾಡುವಾಗ ಎದುರಾಗುವ ಸವಾಲುಗಳೇನು? ಅದನ್ನು ಅವು ಹೇಗೆ ನಿಭಾಯಿಸುತ್ತವೆ? ನೀರಿನಾಳದಲ್ಲಿ ಪರಸ್ಪರ ಸಂಭಾಷಣೆ ನಡೆಸುವುದು ಹೇಗೆ? ಡಾಲ್ಫಿನ್ ಗಳು ಬೇಟೆಯಾಡುವಾಗ ಹೇಗೆ ಸೋನಾರ್ ತಂತ್ರಜ್ಞಾನವನ್ನು ಬಳಸುತ್ತವೆ? ಅವುಗಳ ಬುದ್ಧಿಮತ್ತೆ ಏನು? ತಿಮಿಂಗಿಲಗಳು ಭೂವಾಸಿ ಪ್ರಾಣಿಗಳಿಗಿಂತ ಬೃಹದ್ಗಾತ್ರದಲ್ಲಿ ಬೆಳೆಯಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅಟೆನ್ ಬರೋ ಅವರ “ರಿಟರ್ನ್ ಟು ದ ವಾಟರ್” ಸಾಕ್ಷ್ಯಚಿತ್ರ ನೋಡಿ.
ಮಾಂಸಾಹಾರಿ ಪಕ್ಷಿಗಳು ತಮ್ಮ ಬಲಿಯನ್ನು ಹೇಗೆ ಗುರುತಿಸುತ್ತವೆ? ನೂರಾರು ಅಡಿ ಎತ್ತರದಲ್ಲಿ ಹಾರುತ್ತಿರುವ ಹದ್ದು, ಗಿಡುಗಗಳು ತಮ್ಮ ಬಲಿಯನ್ನು ಗುರುತಿಸುವುದು ಹೇಗೆ? ನೆಲದ ಮೇಲೆ ಓಡಾಡುತ್ತಿರುವ ಚಿಕ್ಕ ಇಲಿಯನ್ನೂ ಕೂಡ ಅಷ್ಟು ಎತ್ತರದಿಂದ ಕರಾರುವಾಕ್ಕಾಗಿ ಗುರುತಿಸಲು ಅವಕ್ಕೆ ಹೇಗೆ ಸಾಧ್ಯವಾಗುತ್ತದೆ? ಹದ್ದುಗಳ ದೃಷ್ಟಿಗೂ ಗೂಬೆಗಳ ದೃಷ್ಟಿಗೂ ಇರುವ ವ್ಯತ್ಯಾಸವೇನು? ಇತ್ತೀಚೆಗೆ ಮಾಂಸಾಹಾರ ರೂಢಿಸಿಕೊಂಡ ಪಕ್ಷಿಗಳಿಗೂ ತುಂಬಾ ಹಿಂದಿನಿಂದ ಮಾಂಸಾಹಾರವನ್ನು ರೂಢಿಸಿಕೊಂಡ ಪಕ್ಷಿಗಳಿಗೂ ಇರುವ ವ್ಯತ್ಯಾಸವೇನು? ಮಂಗಗಳನ್ನೂ ಸಹ ಬೇಟೆಯಾಡುವ ಆಫ್ರಿಕದ ಬಲಿಷ್ಟ ಗರುಡ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅಟೆನ್ ಬರೋ ಅವರ “ಮೀಟ್ ಈಟರ್ಸ್” ನೋಡಿ.
ಪ್ರಾಣಿಗಳ ಚಟುವಟಿಕೆಯಿಂದ ಕೂಡಿದ ಜೀವನಕ್ಕೆ ಹೋಲಿಸಿದರೆ ತಟಸ್ಥ ಮತ್ತು ವಿಶ್ರಾಂತ ಎನಿಸುವ ಸಸ್ಯಗಳ ಜೀವನ ಕೂಡ ಎಷ್ಟೊಂದು ಚಟುವಟಿಕೆಯಿಂದ ಕೂಡಿದೆ ಮತ್ತು ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ಯಗಳೂ ಕೂಡ ಅನೇಕ ತಂತ್ರಗಳನ್ನು ಹೂಡುತ್ತವೆ ಎಂಬುದು ಎಷ್ಟು ಜನರಿಗೆ ಗೊತ್ತು? ಸಸ್ಯಗಳ ದಟ್ಟಣೆ ಯಾಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿದೆ? ಹುಲ್ಲುಗಾವಲು, ನಿತ್ಯಹರಿದ್ವರ್ಣ ಕಾಡುಗಳು ಮತ್ತು ಎಲೆ ಉದುರಿಸುವ ಕಾಡುಗಳಿಗಿರುವ ವ್ಯತ್ಯಾಸಗಳೇನು ಮತ್ತು ಆ ಕಾಡುಗಳಿಗಷ್ಟೇ ಸೀಮಿತವಾಗಿರುವ ವಿಶಿಷ್ಟ ಜೀವಿಪ್ರಭೇದಗಳು ಯಾವುವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅವರ “ಪ್ರೈವೇಟ್ ಲೈಫ್ ಆಫ್ ಪ್ಲಾಂಟ್ಸ್” ಓದಿ.
ಭೂಮಿಯ ಮೇಲ್ಮೈಯ ಶೇಕಡಾ 71ರಷ್ಟನ್ನು ಸಮುದ್ರಗಳು ಆವರಿಸಿಕೊಂಡಿವೆ. ಆದ್ದರಿಂದ ಸಹಜವಾಗಿಯೇ ನೆಲದ ಮೇಲೆ ವಾಸಿಸುವುದಕ್ಕಿಂತ ಹೆಚ್ಚಿನ ಜೀವಿಪ್ರಭೇದಗಳು ಕಡಲನ್ನೇ ಆಶ್ರಯಿಸಿ ಬದುಕುತ್ತಿರಬೇಕು. ನೆಲದ ಮೇಲೆ ವಾಸಿಸುವ ಯಾವುದೇ ರೀತಿಯ ಜೀವಿಪ್ರಭೇದವನ್ನೇ ತೆಗೆದುಕೊಂಡರೂ ಅದರ ಕೆಲವಾದರೂ ಪ್ರತಿನಿಧಿಗಳು ಸಾಗರದಲ್ಲೂ ವಾಸಿಸುವುದನ್ನು ನಾವು ಕಾಣಬಹುದು. ಕಡಲ ನೀರೇಕೆ ಜೀವಿಗಳಿಗೆ ಅಷ್ಟೊಂದು ಪ್ರಶಸ್ತ? ಸಾಗರದಲ್ಲಿ ಎಷ್ಟು ಆಳದವರೆಗೆ ಜೀವಿಗಳಿರುತ್ತವೆ? ತೀವ್ರವಾದ ಒತ್ತಡದಿಂದ ಕೂಡಿದ, ಸೂರ್ಯನ ಬೆಳಕೇ ಇಲ್ಲದ, ಮೈಕೊರೆಯುವ ಚಳಿಯ ಸಾಗರದಾಳದಲ್ಲಿ ಪ್ರಾಣಿಗಳು ಹೇಗೆ ಬದುಕುತ್ತವೆ? ಈ ಎಲ್ಲ ವಿಷಯಗಳನ್ನು ತಿಳಿಯಬೇಕಿದ್ದರೆ ಅಟೆನ್ ಬರೋ ಅವರ “ಬ್ಲೂ ಪ್ಲಾನೆಟ್” ಸರಣಿಯನ್ನು ನೋಡಿ.
ಭೂಮಿಯ ಮೇಲೆ ಶೀತರಕ್ತ ಪ್ರಾಣಿಗಳದ್ದೇ ಒಂದು ವಿಶೇಷ ವಿಧ. (ಶೀತರಕ್ತ ಎಂಬುದು ಅವುಗಳ ಸಮರ್ಪಕವಾದ ವ್ಯಾಖ್ಯೆ ಅಲ್ಲ, ಇರಲಿ). ಅವುಗಳನ್ನು ಶೀತರಕ್ತ ಪ್ರಾಣಿಗಳೆಂದು ಕರೆಯಲು ಅವುಗಳ ರಕ್ತ ತಣ್ಣಗಿರುತ್ತದೆ ಎಂಬುದು ಕಾರಣವಲ್ಲ. ತಣ್ಣನೆಯ ರಕ್ತ ಇಟ್ಟುಕೊಂಡು ಯಾವ ಪ್ರಾಣಿಯೂ ಬದುಕಲು ಸಾಧ್ಯವೂ ಇಲ್ಲ. ಆದರೆ ನಮ್ಮಂತೆ ಶರೀರದ ಚಟುವಟಿಕೆಗಳಿಗೆ ಅಗತ್ಯವಾದ ಶಾಖವನ್ನು ಆಹಾರದಿಂದ ಉತ್ಪಾದಿಸುವ ಶಕ್ತಿ ಅವುಗಳಿಗೆ ಇಲ್ಲ. ಅವು ನೇರವಾಗಿ ಸೂರ್ಯನಿಂದಲೇ ತಮಗೆ ಬೇಕಾದ ಶಾಖವನ್ನು ಪಡೆಯುತ್ತವೆ. ಮೊಸಳೆ, ಇಗುವಾನ ಇತ್ಯಾದಿ ಜೀವಿಗಳು ಬಿಸಿಲು ಕಾಯಿಸುವುದಕ್ಕೆ ಇದೇ ಕಾರಣ. ಆದ್ದರಿಂದಲೇ ಈ ಪ್ರಾಣಿಗಳಿಗೆ ಹವಾಮಾನದ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ. ಉರಗಗಳು, ಉಭಯವಾಸಿಗಳು ಮತ್ತು ಮತ್ಸ್ಯಗಳು ಭೂಮಿಯ ಮೇಲಿರುವ ಮೂರು ಪ್ರಮುಖ ಶೀತರಕ್ತ ಪ್ರಾಣಿಗಳ ಗುಂಪುಗಳು. ಇವುಗಳಲ್ಲಿ ಆಗಿರುವ ದೈಹಿಕ ಮಾರ್ಪಾಡುಗಳೇನು? ಶೀತರಕ್ತ ಪ್ರಾಣಿಗಳು ಯಾಕೆ ಬಿಸಿರಕ್ತದ ಪ್ರಾಣಿಗಳಿಗೆ ಹೋಲಿಸಿದರೆ ಕಡಿಮೆ ಚಟುವಟಿಕೆಯಿಂದ ಕೂಡಿರುತ್ತವೆ? ಯಾಕೆ ಕಡಿಮೆ ಆಹಾರ ಸೇವಿಸುತ್ತವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಅವರ “ಲೈಫ್ ಇನ್ ಕೋಲ್ಡ್ ಬ್ಲಡ್” ನೋಡಿ.
ಭೂಮಿಯ ಮೇಲೆ ಮನುಷ್ಯ ಅವತರಿಸುವುದಕ್ಕಿಂತ ಮೊದಲು ಯಾವ ರೀತಿಯ ಜೀವಿಗಳು ಬದುಕಿದ್ದವು? ಲಕ್ಷಾಂತರ ವರ್ಷಗಳಿಂದ ವಿಕಾಸವಾಗುತ್ತ ಬಂದಿರುವ ಜೀವಿ ಪ್ರಭೇದಗಳು ಹೇಗೆ ತಮ್ಮ ಪರಿಸರಕ್ಕೆ ಹೊಂದಿಕೊಳ್ಳುವಂತೆ ಬದಲಾಗುತ್ತಿವೆ? ಅರವತ್ತೈದು ದಶಲಕ್ಷ ವರ್ಷಗಳ ಹಿಂದೆ ನಿರ್ನಾಮವಾದ ದೈತ್ಯೋರಗಗಳು ಶೀತರಕ್ತ ಪ್ರಾಣಿಗಳೇ ಆಗಿದ್ದವೇ ಅಥವಾ ಬಿಸಿರಕ್ತದ ಪ್ರಾಣಿಗಳಾಗಿದ್ದಿರಬಹುದಾದ ಸಾಧ್ಯತೆಗಳಿವೆಯೇ? ಅವು ವರ್ಣರಹಿತವಾಗಿದ್ದವೇ ಅಥವಾ ವರ್ಣರಂಜಿತವಾಗಿದ್ದವೇ? ಯಾಕೆ ಅವು ಆ ರೀತಿ ಭಾರೀ ಗಾತ್ರಕ್ಕೆ ಬೆಳೆದವು? ಆ ಭಾರೀ ಗಾತ್ರದ ಅನುಕೂಲ-ಅನಾನುಕೂಲಗಳೇನು? ಹೂಗಿಡಗಳ ಅಸ್ತಿತ್ವವೇ ಇರದ ಆ ಕಾಲದಲ್ಲಿ ಜೀರ್ಣಿಸಿಕೊಳ್ಳಲು ಅತ್ಯಂತ ಕಷ್ಟಕರವಾದ ಫರ್ನ್ ಗಿಡಗಳನ್ನು ಹೇಗೆ ಅವು ಜೀರ್ಣಿಸಿಕೊಳ್ಳುತ್ತಿದ್ದವು? ಇದನ್ನೆಲ್ಲ ತಿಳಿದುಕೊಳ್ಳಲು ಅವರ “ವ್ಯಾನಿಷ್ಡ್ ಲೈಫ್” ನೋಡಿದರೆ ಸಾಕು.
ಕಶೇರುಕ ಮತ್ತು ಅಕಶೇರುಕ ಎಂಬ ಸ್ಥೂಲವಾದ ವರ್ಗೀಕರಣವನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರುತ್ತಾರೆ. ಕೀಟಗಳು, ಜೇಡಗಳು, ಮೃದ್ವಂಗಿಗಳು, ಅಂಬಲಿಮೀನುಗಳು (ಇವುಗಳ ಹೆಸರಿನಲ್ಲಿ ಮೀನು ಇದ್ದರೂ ಇವು ಮೀನುಗಳಲ್ಲ), ಕಂಟಕಚರ್ಮಿಗಳು ಇತ್ಯಾದಿಗಳು ಬೆನ್ನೆಲುಬಿಲ್ಲದ ಜೀವಿಗಳು. ಇವೇ ಅಕಶೇರುಕಗಳು. ಈ ಜೀವಿಗಳಿಗೆ ನಮ್ಮಂತೆ ದೇಹದೊಳಗಿನಿಂದ ಬೆನ್ನೆಲುಬಿನ ಆಸರೆ ಇರುವುದಿಲ್ಲ. ಹಾಗಾಗಿ ಈ ಜೀವಿಗಳ ಗಾತ್ರಕ್ಕೆ ಒಂದು ಮಿತಿಯಿದೆ. ಅವು ಒಂದೋ ನೀರಿನ ಆಸರೆ ಇರುವ ಸಾಗರಗಳಲ್ಲಿರಬೇಕು, ಅಥವಾ ನೆಲದ ಮೇಲಿದ್ದರೆ ವಾಮನರೂಪಿಗಳಾಗಿರಬೇಕು. ಕ್ರಮೇಣ ಅಕಶೇರುಕಗಳಿಂದ ಕಶೇರುಕಗಳು ಅಭಿವೃದ್ಧಿ ಹೊಂದಿದ್ದು ಹೇಗೆ? ಈ ನಿಟ್ಟಿನಲ್ಲಿ ಮೊದಲ ಹಂತ ಯಾವುದು? ಬೆನ್ನೆಲುಬಿರುವ ಪ್ರಾಣಿಗಳಿಗೆ ಬೆನ್ನೆಲುಬಿಲ್ಲದ ಪ್ರಾಣಿಗಳಿಗಿಲ್ಲದ ಯಾವ ಪ್ರಯೋಜನಗಳು ಇವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಅವರ “ರೈಸ್ ಆಫ್ ಅನಿಮಲ್ಸ್” ನಲ್ಲಿ ಕಂಡುಕೊಳ್ಳಬಹುದು.
ಗುಹೆಯೊಂದರ ಒಳಗೆ ಎಂಥೆಂಥ ಜೀವಿಗಳೆಲ್ಲ ವಾಸಿಸಬಹುದು? ನಮಗೆಲ್ಲ ಪಂಚತಂತ್ರದ ಕಥೆಗಳಲ್ಲಿ ಬರುವಂತೆ ಹುಲಿ, ಚಿರತೆ ಇತ್ಯಾದಿ ಪ್ರಾಣಿಗಳು ಗುಹೆಗಳಲ್ಲಿ ವಾಸಿಸುತ್ತವೆ ಎಂದು ಗೊತ್ತು. ಆದರೆ ಗುಹೆಗಳೆಂದರೆ ನಾವು ತಿಳಿದಿರುವಂತೆ ಬರೇ ಕತ್ತಲ ಲೋಕಗಳಲ್ಲ. ಗುಹೆಗಳ ಒಳಗೆ ಕೂಡ ವೈವಿಧ್ಯಮಯವಾದ ಜೀವಲೋಕ ಇದೆ. ಬಾವಲಿಗಳು, ಕೆಲವು ಜಾತಿಯ ಹಕ್ಕಿಗಳು, ಜೇಡಗಳು, ಜಿರಲೆಗಳು, ಸಲಮ್ಯಾಂಡರ್ ಗಳು ಹೀಗೆ ಗುಹೆಯ ಒಳಗೆ ಕೂಡ ಅನೇಕ ಜೀವಿಪ್ರಭೇದಗಳು ನೆಮ್ಮದಿಯ ಬಾಳ್ವೆ ನಡೆಸಿವೆ. ಇದೆಲ್ಲ ತಿಳಿಯಬೇಕಾದರೆ ಅಟೆನ್ ಬರೋ ಅವರ “ಕೇವ್ಸ್” ನೋಡಬೇಕು.
ಕೀಟಗಳೆಂದರೆ ಅತ್ಯಂತ ಕ್ಷುದ್ರ ಜೀವಿಗಳೆಂದೇ ನಮ್ಮ ಭಾವನೆ. ಕೀಟಗಳ ಬಗೆಗೆ ಯಾರೂ ಸಾಮಾನ್ಯವಾಗಿ ಅಷ್ಟು ಗಮನ ಹರಿಸುವುದಿಲ್ಲ. ಎಲ್ಲ ಕೀಟಗಳೂ ಮನುಷ್ಯರಿಗೆ ಹಾನಿಕಾರಕ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಆದರೆ ಜೇನುಹುಳ, ಚಿಟ್ಟೆ, ರೇಷ್ಮೆಹುಳ ಇತ್ಯಾದಿ ಕೀಟಗಳು ನಮಗೆ ಉಪಕಾರಿಗಳೂ ಆಗಿವೆ. ಈ ವಿಷಯವನ್ನು ತಿಳಿದಿರುವವರಿಗೆ ಕೂಡ ಕೀಟಗಳ ಜೀವನಶೈಲಿಯ ಬಗೆಗೆ ಹೆಚ್ಚು ತಿಳಿದಿರಲಾರದು. ನಾವು ನಿಸ್ಸಹಾಯಕ ಎಂದು ತಿಳಿದಿರುವ ಎಷ್ಟೋ ಚಿಕ್ಕ ಕೀಟಗಳು ಸಹ ತಮ್ಮ ಮೇಲೆ ದಾಳಿ ಮಾಡಲು ಬಂದ ತಮಗಿಂತ ಎಷ್ಟೋ ಪಟ್ಟು ದೊಡ್ಡ ಪ್ರಾಣಿಗಳನ್ನು ಸಹ ರಾಸಾಯನಿಕ ಅಸ್ತ್ರಗಳನ್ನು ಬಳಸಿ ಹಿಮ್ಮೆಟ್ಟಿಸಬಲ್ಲವು. ಹಾಗೆಯೇ ನೋಡಿದರೆ ಕೆಲವು ನೂರು ಅಡಿಗಳಷ್ಟು ಸಹ ಹಾರಲಾರದಷ್ಟು ದುರ್ಬಲವಾಗಿ ಕಾಣಿಸುವ, ಕಾಗದದಷ್ಟು ತೆಳುವಾದ ರೆಕ್ಕೆಗಳನ್ನು ಹೊಂದಿರುವ ಚಿಟ್ಟೆಗಳು ಅಗತ್ಯಬಿದ್ದರೆ ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಬಲ್ಲವು ಎಂದರೆ ನಂಬುತ್ತೀರಾ? ಉತ್ತರ ಅಮೆರಿಕಾದ ಮೊನಾರ್ಕ್ ಹೆಸರಿನ ಈ ಚಿಟ್ಟೆಯ ಜೀವನಚರಿತ್ರೆಯನ್ನು ತಿಳಿಯಬೇಕಾದರೆ ಅವರ “ಇನ್ ಸೆಕ್ಟ್ಸ್” ಸಾಕ್ಷ್ಯಚಿತ್ರ ನೋಡಿ.
ಅವರ “ನ್ಯೂ ವರ್ಲ್ಡ್ಸ್” ನೋಡುತ್ತಿದ್ದರೆ ಮಾನವರಾಗಿ ಹುಟ್ಟಿದ್ದಕ್ಕೇ ನಾಚಿಕೆಯೆನಿಸುತ್ತದೆ. ಸುಮಾರು ನಾಲ್ಕು ಬಿಲಿಯನ್ ವರ್ಷಗಳಿಂದ ಅನೇಕಾನೇಕ ಪ್ರಯೋಗಗಳ ಮೂಲಕ ಪ್ರಕೃತಿ ಲಕ್ಷಾಂತರ ಜೀವಿಗಳನ್ನು ಸೃಷ್ಟಿಸಿ, ಅದರಲ್ಲಿ ಕೆಲವು ನಾಶಹೊಂದಿ, ಇನ್ನು ಕೆಲವು ಅನೇಕ ಮಾರ್ಪಾಡುಗಳನ್ನು ಹೊಂದಿ ಒಂದು ಸಮತೋಲನವನ್ನು ಸಾಧಿಸಿದೆ. ಆದರೆ ಆ ಸಮತೋಲನವನ್ನು ನಾವು ಕಳೆದ ಒಂದೆರಡು ಶತಮಾನಗಳಲ್ಲೇ ಅಲ್ಲೋಲಕಲ್ಲೋಲ ಮಾಡಿದ್ದೇವೆ. ಅಟೆನ್ ಬರೋ ಒಂದೊಂದು ಮಾತಿನ ಮೂಲಕವೂ ಮನುಕುಲದ ಈ ಹೀನಕೃತ್ಯಗಳ ಬಗೆಗೆ ವಿವರಿಸುತ್ತಿದ್ದರೆ ವೀಕ್ಷಕರಿಗೆ ಅಪರಾಧಿ ಪ್ರಜ್ಞೆಯಿಂದ ತಲೆ ತಗ್ಗಿಸುವಂತಾಗುತ್ತದೆ. ವಾಯುಮಡಲಕ್ಕೆ ನಾವು ವಿಷಯುಕ್ತ ಅನಿಲಗಳನ್ನು ಉಗುಳುತ್ತಿರುವ ಪರಿಣಾಮವಾಗಿ ಎಲ್ಲೆಡೆ ಆಮ್ಲಮಳೆ ಉಂಟಾಗಿ ಕೆರೆ, ನದಿ, ಸರೋವರಗಳ ನೀರು ಸಹ ಆಮ್ಲೀಯವಾಗಿ ಅಲ್ಲಿ ಯಾವುದೇ ರೀತಿಯ ಜೀವಿಗಳು ಬೆಳೆಯದಂತಾಗುತ್ತವೆ. ನಾರ್ವೆ ದೇಶವೊಂದರಲ್ಲೇ ಅಂತ 1800 ಮೃತ ಸರೋವರಗಳಿವೆ. “ದೆ ಸ್ಟ್ಯಾಂಡ್ ಆ್ಯಸ್ ಶೇಮ್ ಫುಲ್ ಮಾನ್ಯುಮೆಂಟ್ಸ್ ಟು ಅವರ್ ಕೇರ್ ಲೆಸ್ ನೆಸ್ ಅಂಡ್ ಲ್ಯಾಕ್ ಆಫ್ ಕನ್ಸರ್ನ್” (ಅವು ನಮ್ಮ ಬೇಜವಾಬ್ದಾರಿತನ ಮತ್ತು ಕಾಳಜಿಯ ಕೊರತೆಗೆ ನಾಚಿಕೆಗೇಡಿನ ಸ್ಮಾರಕಗಳಾಗಿ ನಿಂತಿವೆ) ಎನ್ನುವ ಆತನ ಮಾತುಗಳನ್ನು ಕೇಳುವಾಗಂತೂ ನಾವೂ ಈ ಪಾಪಕೃತ್ಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ಭಾಗಿಯಾಗಿದ್ದೇವಲ್ಲ ಎನಿಸಿ ಪಶ್ಚಾತ್ತಾಪವುಂಟಾಗದೇ ಇರದು. ನ್ಯೂಯಾರ್ಕ್ ನಗರವೊಂದರಲ್ಲೇ ಪ್ರತಿದಿನ ಸುಮಾರು 22,000 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದನ್ನು ನಿರ್ಜನ ದ್ವೀಪವೊಂದರಲ್ಲಿ ಸುರಿಯಲಾಗುತ್ತಿದೆ. “ನಾವು ಈ ಭೂಮಿ ನಮ್ಮ ವಿಷಗಳನ್ನೆಲ್ಲ ನುಂಗುವಷ್ಟು ವಿಶಾಲವಾಗಿದೆ ಎಂಬ ಕುರುಡು ನಂಬಿಕೆಯಲ್ಲಿದ್ದೇವೆ” ಎನ್ನುವ ಆತನ ಮಾತುಗಳು ಎಷ್ಟು ಸತ್ಯ ಅಲ್ಲವೇ? ಯಾವುದೇ ಅಪಾಯಕಾರಿ ತ್ಯಾಜ್ಯವಾದರೂ ಅದು ನಮ್ಮ ಕಣ್ಣಿಗೆ ಕಾಣದೆ ಇದ್ದರೆ ಸಾಕು, ಅದು ಬೇರೆ ಪ್ರಾಣಿಗಳಿಗೆ ಉಂಟುಮಾಡುವ ತೊಂದರೆಗಳ ಬಗೆಗೆ ನಾವು ತಲೆಕೆಡಿಸಿಕೊಳ್ಳುವುದೇ ಇಲ್ಲ. ದ್ವೀಪಗಳು ನಿರ್ಜನವಾದ ಮಾತ್ರಕ್ಕೆ ಅವು ಜೀವಿರಹಿತವಾಗಿವೆ ಎಂದೇನೂ ಅಲ್ಲ. ಅಲ್ಲಿನ ಪರಿಸರಕ್ಕೇ ಹೊಂದಿಕೊಂಡು ಲಕ್ಷಾಂತರ ವರ್ಷಗಳಿಂದ ಬದುಕುತ್ತಿರುವ ಅನೇಕ ಪ್ರಾಣಿ ಹಾಗೂ ಸಸ್ಯಸಂಕುಲಗಳಿವೆ. ಅವುಗಳ ಮೇಲೆಲ್ಲ ಈ ವಿಷಗಳಿಂದ ಏನೆಲ್ಲ ಪರಿಣಾಮವಾಗಬಹುದೆಂದು ನಾವು ಯಾವತ್ತಾದರೂ ಆಲೋಚಿಸಿದ್ದೇವೆಯೇ? ಖಂಡಿತ ಇಲ್ಲ.

ಒಟ್ಟಿನಲ್ಲಿ ಡೇವಿಡ್ ಅಟೆನ್ ಬರೋ ಎಂದರೆ ಪ್ರಕೃತಿಪ್ರಿಯರಿಗೆ ಮೊಗೆದಷ್ಟೂ ಮುಗಿಯದ ಅಕ್ಷಯಪಾತ್ರೆಗಳ ಖಜಾನೆ. ಅವರ ಎಲ್ಲ ಸಾಕ್ಷ್ಯಚಿತ್ರಗಳನ್ನು ಒಮ್ಮೆ ನೋಡಿದರೆ ಬಹುಶಃ ನೀವು ಈ ಭೂಮಿಯ ಬಗೆಗೆ ಮತ್ತು ಇಲ್ಲಿ ವಾಸವಾಗಿರುವ ಅಸಂಖ್ಯ ಜೀವಿಪ್ರಭೇದಗಳ ಬಗೆಗೆ ತಿಳಿಯುವುದಕ್ಕೆ ಏನೂ ಉಳಿಯುವುದಿಲ್ಲ ಎಂದರೆ ತುಸು ಅತಿಶಯೋಕ್ತಿ ಎನ್ನಿಸಬಹುದಾದರೂ ಅವರ ಎಲ್ಲ ಸಾಕ್ಷ್ಯಚಿತ್ರಗಳನ್ನು ನೋಡಿದರೆ ಈ ಮಾತು ಸತ್ಯಕ್ಕೆ ತೀರಾ ದೂರವಾದದ್ದೇನೂ ಅಲ್ಲವೆಂದು ಅರಿವಾಗುತ್ತದೆ. ನಿಮ್ಮ ಮಕ್ಕಳಿಗೆ ಜೀವಲೋಕದ ಬಗೆಗೆ ಬೆರಗು ಮೂಡಿಸಬೇಕೇ? ಅವರಲ್ಲಿ ಜೀವಿಗಳ ಬಗೆಗಿನ ಅರಿವನ್ನು ಹೆಚ್ಚಿಸಬೇಕೆ? ಹಾಗಾದರೆ ಅವರಿಗೆ ಓದಲು ಯಾವುದೇ ವಿಶ್ವಕೋಶಗಳನ್ನು ತಂದುಕೊಡುವ ಅವಶ್ಯಕತೆಯಿಲ್ಲ. ಬದಲಾಗಿ ಅಟೆನ್ ಬರೋ ಅವರ ಸಾಕ್ಷ್ಯಚಿತ್ರಗಳನ್ನು ತೋರಿಸಿದರೆ ಸಾಕು!!