ಮರಳಿ ಪ್ರಕೃತಿಯತ್ತ ಪಯಣ

Tuesday 11 October 2016

ಬೋಳುಮರದ ಮೇಲೆ ಸೊಪ್ಪುಕುಟುರನ ಮೂಕಹಾಡು!

ನಮ್ಮ ಮನೆಯೆದುರು ಒಂದು ಗಾಳಿಮರವಿತ್ತು. ಅದರ ಮೇಲೆ ಪ್ರತಿದಿನ ಬೇರೆಬೇರೆ ಹಕ್ಕಿಗಳು ಬಂದು ಕೂರುತ್ತಿದ್ದವು. ಮನೆಯಂಗಳದಲ್ಲಿ ನಿಂತು ಅವುಗಳನ್ನು ನೋಡುವುದೇ ನಮಗೆ ಒಂದು ಮಜವಾಗಿತ್ತು. ಹಳದಿ ಬೆನ್ನಿನ ಮರಕುಟುಕ ಮತ್ತು ಸೊಪ್ಪುಕುಟುರಗಳು ಈ ಮರಕ್ಕೆ ಖಾಯಂ ಗಿರಾಕಿಗಳಾಗಿದ್ದವು. ಇತ್ತೀಚೆಗೆ ಯಾವುದೋ ಕಾರಣಕ್ಕೆ ಆ ಮರ ಸತ್ತುಹೋಯಿತು. ಸತ್ತ ಬೋಳುಮರದ ಮೇಲೆ ಸಹ ಬಂದುಕುಳಿತು ಈ ಸೊಪ್ಪುಕುಟುರ ಮೌನವಾಗಿ ಸುತ್ತಮುತ್ತ ನೋಡುತ್ತ ಕುಳಿತಿತ್ತು. ಮರದ ಸಾವಿಗೆ ಶೋಕ ಆಚರಿಸುತ್ತಿತ್ತೇ? ಸ್ವಲ್ಪ ಹೊತ್ತು ಅದರೊಂದಿಗೆ ಕುಳಿತಿದ್ದ ಇನ್ನೊಂದು ಕುಟುರ ಹಾರಿಹೋದ ಮೇಲೂ ಇದು ಬಹಳ ಹೊತ್ತು ಕುಳಿತೇ ಇತ್ತು. 










Sunday 9 October 2016

ದೇವರು ರುಜು ಮಾಡಿದನು!!

                ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬ ಮಾತೊಂದಿದೆ. ನಮ್ಮ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರಂತೂ ತಮಾಷೆಯಾಗಿ "ರವಿ ಕಾಣದ್ದನ್ನು ಕವಿ ಕಂಡ, ಕವಿಯೂ ಕಾಣದ್ದನ್ನು ಕುಡುಕ ಕಂಡ" ಎನ್ನುತ್ತಾರೆ. ಅದಿರಲಿ, ಆಕಾಶದಲ್ಲಿ ಬೆಳ್ಳಕ್ಕಿಗಳ ಹಿಂಡು ಹಾರುತ್ತ ಹೋಗುತ್ತಿದ್ದರೆ ನಮಗೆ ಏನನ್ನಿಸಬಹುದು? ಬೆಳ್ಳಕ್ಕಿಗಳು ಎಷ್ಟು ಸುಂದರವಾಗಿದೆ ಎನ್ನಿಸಬಹುದು ಅಥವಾ ನೋಡುವವರು ಯಾರಾದರೂ ದೊಡ್ಡ ಪಕ್ಷಿಶಾಸ್ತ್ರಜ್ಞರಾಗಿದ್ದರೆ ಅವರಿಗೆ ಹಕ್ಕಿಗಳ ವೈಜ್ಞಾನಿಕ ನಾಮಧೇಯ, ಅವುಗಳ ಕುಟುಂಬ ಇತ್ಯಾದಿಗಳೆಲ್ಲ ನೆನಪಾಗಬಹುದು. ಆದರೆ ಕವಿಗೆ ಅವುಗಳ ಹಿಂಡು ದೇವರೇ ಮಾಡಿದ ರುಜುವಿನಂತೆ ಭಾಸವಾಗುತ್ತದೆ. ಅಂಥ ಅದ್ಭುತ ಕವಿಯಾದ ಕುವೆಂಪು ಅವರ ಜನ್ಮಸ್ಥಳವಾದ ಕವಿಶೈಲಕ್ಕೆ ಹೋದರೆ, ಅಲ್ಲಿನ ವಸ್ತುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಕುವೆಂಪು ಅವರೇ ಮತ್ತೆ ಜೀವತಳೆದು ನಮ್ಮ ಪಕ್ಕದಲ್ಲಿ ನಿಂತಂತೆ ಭಾಸವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಪ್ರಕೃತಿ ಸಂಪತ್ತು ಹಾಗೂ ಅಂದಿನ ಪ್ರಕೃತಿಯ ಶ್ರೀಮಂತಿಕೆಯನ್ನು ಕಂಡು ಮನಸ್ಸು ಮುದಗೊಳ್ಳುತ್ತದೆ. ಕವಿಶೈಲ ಮತ್ತು ಅಲ್ಲಿನ ಸುತ್ತಮುತ್ತಲಿನ ವಾತಾವರಣದಲ್ಲಿ ತೆಗೆದ ಚಿತ್ರಗಳಿವು. ಮನೆಯೊಳಗಡೆ ಚಿತ್ರ ತೆಗೆಯಲು ನಿಷೇಧವಿದ್ದ ಕಾರಣ ಹೊರಗಿನಿಂದ ಮಾತ್ರ ಚಿತ್ರಗಳನ್ನು ತೆಗೆಯಬೇಕಾಯಿತು.










Saturday 8 October 2016

ನೇತ್ರಾವಳಿ ಅಭಯಾರಣ್ಯದಲ್ಲಿ ಮೂರು ದಿನ





ನೇತ್ರಾವಳಿ ಅಭಯಾರಣ್ಯದಲ್ಲಿ ಮೂರು ದಿನ
ಗೋವಾದ ನೇತ್ರಾವಳಿ ಅಭಯಾರಣ್ಯದಲ್ಲಿ ಹರ್ಪೆಟೋಕ್ಯಾಂಪ್ (ಉರಗಗಳು ಮತ್ತು ಉಭಯವಾಸಿಗಳ ಬಗೆಗಿನ ಮಾಹಿತಿ ಕಾರ್ಯಾಗಾರ) ಇದೆಯೆಂದು ತಿಳಿದ ಕೂಡಲೇ ನನ್ನ ಬೇರೆಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ಅದಕ್ಕೆ ಸಿದ್ಧನಾದೆ. ಮೊದಲಿನಿಂದಲೂ ವನ್ಯಜೀವಿಗಳಿಗೆ ಸಂಬಂಧಿಸಿದ ಯಾವ ಕಾರ್ಯಕ್ರಮವಿದ್ದರೂ ತಪ್ಪದೆ ಭಾಗವಹಿಸುವ ಪರಿಪಾಠವಿದ್ದ ನನಗೆ ಈ ಕಾರ್ಯಾಗಾರವನ್ನು ಏರ್ಪಡಿಸಿದ್ದ ಪರಾಗ್ ರಂಗಣೇಕರ್ ಮೊದಲೇ ಪರಿಚಯವಿದ್ದುದೂ ನನ್ನ ಉತ್ಸಾಹ ಇಮ್ಮಡಿಸಲು ಕಾರಣವಾಯ್ತು. ಉತ್ಸಾಹದಿಂದ ಜೂನ್ ಮೂವತ್ತರಂದೇ ಗೋವಾದತ್ತ ಪ್ರಯಾಣ ಬೆಳೆಸಿದೆವು. ನನ್ನೊಡನೆ ನನ್ನ ಗೆಳೆಯ ಕಾರ್ತಿಕ್ ಕೂಡ ಇದ್ದ. ಜುಲೈ ಒಂದರಂದು ಬೆಳಿಗ್ಗೆ ಹತ್ತು ಗಂಟೆಗೆ ನಾನು ಮತ್ತು ಪರಾಗ್ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಕೈಕುಲುಕುತ್ತ ನಿಂತಿದ್ದೆವು.
          ಮೊದಲ ದಿನ ನೇತ್ರಾವಳಿ ಅಭಯಾರಣ್ಯದೊಳಕ್ಕೆ ಕಾಲಿಡುತ್ತಿದ್ದಂತೆಯೇ ಸುತ್ತೆಲ್ಲ ಕಣ್ಮನ ತಣಿಸುವ ಹಸಿರು ಮನಸ್ಸನ್ನು ಮುದಗೊಳಿಸಿತ್ತು. ಜೊತೆಗೆ ಅಕ್ಕಪಕ್ಕದ ಕಾಡಿನಿಂದ ನವಿಲು, ಹಳದಿ ಹುಬ್ಬಿನ ಪಿಕಳಾರ, ಸೊಪ್ಪುಕುಟುರ ಮುಂತಾದ ಹಕ್ಕಿಗಳ ನಿರಂತರ ಗಾನಾಲಾಪ. ಮಧ್ಯೆ ಮಧ್ಯೆ ಅಲ್ಲಲ್ಲಿ ಕಾಡಿನ ನಡುವಿನಿಂದ ಕಾಣುತ್ತಿದ್ದ ದೂರದ ಬೆಟ್ಟಗಳ ಮನಮೋಹಕ ನೋಟ. ಇದರ ನಡುವೆ ಅಲ್ಲಲ್ಲಿ ನಾವು ಸಾಗುತ್ತಿದ್ದ ದಾರಿಯ ಬದಿಯಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದ ಪುಟ್ಟಪುಟ್ಟ ಜಲಪಾತಗಳು. ಒಂದೆಡೆಯಂತೂ ಪಕ್ಕದ ಧರೆಯಲ್ಲಿ ಇದ್ದ ಕೊರಕಲೊಂದರಿಂದ ಜಲಪಾತವೊಂದು ಉದ್ಭವವಾದಂತೆ ಬೀಳುತ್ತಿದ್ದುದನ್ನು ಬೆಕ್ಕಸಬೆರಗಾಗಿ ನೋಡಿದೆವು. ಆ ಜಲಪಾತಕ್ಕೆ ಮೇಲಿನಿಂದ ಎಲ್ಲೂ ನೀರು ಸರಬರಾಜಾಗುತ್ತಿರಲಿಲ್ಲ. ಗೋಡೆಯ ಮಧ್ಯದಲ್ಲಿದ್ದ ಕೊರಕಲೊಳಗಿನಿಂದ ಉದ್ಭವವಾದಂತೆ ಬೀಳುತ್ತಿದ್ದ ಆ ಜಲಪಾತ ಮುಂದೆ ನಮಗೆ ಎದುರಾಗಲಿರುವ ನೂರಾರು ವಿಸ್ಮಯಗಳಿಗೆಲ್ಲ ಮುನ್ಸೂಚನೆಯಂತಿತ್ತು.
          ಅಭಯಾರಣ್ಯದ ಗೇಟಿನೊಳಗೆ ಕಾಲಿಡುತ್ತಿದ್ದಂತೆ ನಿತ್ಯಹರಿದ್ವರ್ಣದ ಕಾಡೊಂದರೊಳಕ್ಕೆ ಹೊಕ್ಕ ಅನುಭವವಾಯಿತು. ಹೋದ ಕೂಡಲೇ ಪರಾಗ್ ನಮ್ಮನ್ನು ಹೋಂಸ್ಟೇಗೆ ಕರೆದೊಯ್ದರು. ಅದ್ಭುತವಾದ ಊಟದ ನಂತರ ಮಧ್ಯಾಹ್ನ ಹಳ್ಳಿಯಲ್ಲೊಂದು ಸುತ್ತು ಬರುವ ಕಾರ್ಯಕ್ರಮವಿತ್ತು. ಇಡೀ ಹಳ್ಳಿಯೇ ಪ್ರಕೃತಿ ಸೌಂದರ್ಯವನ್ನು ಹಾಸಿಹೊದ್ದಿತ್ತು. ಎಲ್ಲಿ ನೋಡಿದರಲ್ಲಿ ಹಸಿರಿನ ಹೊದಿಕೆ ಹೊದ್ದ ಬೆಟ್ಟಗುಡ್ಡಗಳು ಕಣ್ಮನಸ್ಸನ್ನು ಸೂರೆಗೈಯುತ್ತಿದ್ದವು. ಅಲ್ಲಿ ಒಂದೆಡೆ ಹಿಂದೆ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ಪರಾಗ್ ನಮ್ಮನ್ನೆಲ್ಲ ಕರೆದೊಯ್ದರು. ಅಲ್ಲಿನ ಮಣ್ಣು ಅದಿರಿನ ಮಾಲಿನ್ಯದಿಂದ ಕಲುಷಿತವಾಗಿತ್ತು. ಅಲ್ಲೊಂದೆಡೆ ಹರಿಯುತ್ತಿದ್ದ ಝರಿಯ ನೀರು ಕೂಡ ಸಂಪೂರ್ಣ ರಾಡಿಯಾಗಿತ್ತು. ಅದಕ್ಕೂ ಮ್ಯಾಂಗನೀಸ್ ಅದಿರೇ ಕಾರಣವೆಂದು ಪರಾಗ್ ತಿಳಿಸಿದರು. ಹಾಗೆ ಮುಂದುವರೆಯುತ್ತಿದ್ದಂತೆ ಅಲ್ಲಿದ್ದ ಹಲಸಿನ ಮರವೊಂದರ ಮೇಲೆ ಕುಳಿತಿದ್ದ ಗ್ರೇಟರ್ ಫ್ಲೇಮ್ ಬ್ಯಾಕ್ಡ್ ವುಡ್ ಪೆಕರ್ ಎಂಬ ಮರಕುಟಿಕನ ದರ್ಶನವಾಯಿತು. ಅದನ್ನೆಲ್ಲ ನೋಡುತ್ತ ರಸ್ತೆಯನ್ನು ಬಿಟ್ಟು ಪಕ್ಕದ ಕಾಲುದಾರಿಗೆ ಹೊರಳಿದೆವು.
          ಕಾಲುದಾರಿಯಲ್ಲಿ ನಮಗಿಂತ ಸ್ವಲ್ಪ ಮುಂದಿದ್ದ ಓಂಕಾರ್ ಅಚ್ಚರಿಯಿಂದ ನಮ್ಮನ್ನು ಕೂಗಿದಾಗ ಮುಂದೆ ಹೋಗಿ ನೋಡಿದೆವು. ಅಲ್ಲೊಂದು ಗ್ರೀನ್ ಕೀಲ್ ಬ್ಯಾಕ್ ಎಂಬ ವಿಷರಹಿತವಾದ ಹಾವು ದಾರಿಯ ಮಧ್ಯದಲ್ಲಿತ್ತು. ಅದನ್ನು ಕಂಡು ನಮಗೆಲ್ಲ ಆದ ಸಂತೋಷ ಅಷ್ಟಿಷ್ಟಲ್ಲ. ಏಕೆಂದರೆ ನಮ್ಮ ಕೇರೆಹಾವುಗಳಂತೆಯೇ ಕೊಲುಬ್ರಿಡೇ ಎಂಬ ಕುಟುಂಬಕ್ಕೆ ಸೇರಿದ ಈ ವಿಷರಹಿತವಾದ ಹಾವು ಈಗ ತುಂಬಾ ಅಪರೂಪದ ಪ್ರಾಣಿಯಾಗಿದೆ. ಎಲ್ಲ ಹಾವುಗಳ ಬಗೆಗೆ ಮನುಷ್ಯರಿಗೆ ಇರುವ ಮೂಢನಂಬಿಕೆಗಳೇ ಈ ಹಾವಿಗೂ ಮುಳುವಾಗಿವೆ ಎಂದರೆ ತಪ್ಪಾಗಲಾರದು. ನಮಗೆ ಸಿಕ್ಕಿದ ಹಾವು ಕೂಡ ಜನರು ಓಡಾಡುವ ದಾರಿಯಲ್ಲೇ ಇತ್ತು. ಅದನ್ನು ಅಲ್ಲೇ ಬಿಟ್ಟರೆ ಜನರು ಸಾಯಿಸುವ ಸಂಭವವಿದೆ ಎಂದ ಓಂಕಾರ್ ಅದನ್ನು ಜೋಪಾನವಾಗಿ ಎತ್ತಿತಂದು ಬೇರೊಂದು ಸುರಕ್ಷಿತವಾದ ಸ್ಥಳದಲ್ಲಿ ಬಿಟ್ಟರು.
          ಪ್ರತಿದಿನ ನಾವು ಕಾಡಿಗೆ ಹೊರಡುವಾಗ ನಮ್ಮೊಡನಿದ್ದ ಸಂಗಡಿಗರು ಸಿದ್ಧವಾಗುವುದನ್ನು ನೋಡುವುದೇ ಒಂದು ಸೊಗಸಾಗಿತ್ತು. ಇಂಬಳಗಳ ಕುರಿತು ವಿಪರೀತ ಭಯವಿದ್ದ ಅವರೆಲ್ಲ ಲೀಚ್ ಸಾಕ್ಸ್ ಧರಿಸಿ, ಉದ್ದನೆಯ ಗಂಬೂಟುಗಳನ್ನು ಧರಿಸಿ ಹೊರಡುತ್ತಿದ್ದರು. ನನಗೂ ಲೀಚ್ ಸಾಕ್ಸ್ ಧರಿಸಬೇಕೆಂದು ಒಮ್ಮೆ ಅನ್ನಿಸಿದ್ದರೂ ಅದನ್ನು ಧರಿಸಲು ಸೋಮಾರಿತನವಾಗಿ ಮಾಮೂಲಿ ಸಾಕ್ಸ್ ಮತ್ತು ಶೂ ಧರಿಸಿ ಹೋಗುತ್ತಿದ್ದೆ. ಮೊದಲ ದಿನವೇ ಮೂರು ಇಂಬಳಗಳಿಗೆ ಸಾಕಷ್ಟು ರಕ್ತದಾನ ಮಾಡಬೇಕಾಯಿತು. ಅದಾದ ಬಳಿಕ ಎರಡನೇ ದಿನದಿಂದ ಲೀಚ್ ಸಾಕ್ಸ್ ಗಳನ್ನೇ ಧರಿಸಿ ಓಡಾಡಲು ಆರಂಭಿಸಿದೆ.
          ರಾತ್ರಿಯ ಜೀವಲೋಕ ಹಗಲಿಗಿಂತಲೂ ರೋಮಾಂಚಕಾರಿ ಮತ್ತು ವೈವಿಧ್ಯಮಯವಾಗಿರುತ್ತದೆ. ಮನುಷ್ಯರಾದ ನಮಗೆ ಮಾತ್ರ ರಾತ್ರಿ ಎಂಬುದು ಮಲಗುವ ಸಮಯವಾಗಿರುತ್ತದೆ. ಆದರೆ ಜೀವಜಗತ್ತಿನಲ್ಲಿ ಹಗಲಿನಲ್ಲಿ ಓಡಾಡುವ ಜೀವಿಗಳು ಇರುವಂತೆಯೇ ರಾತ್ರಿಯಲ್ಲಿ ಚಟುವಟಿಕೆಯಿಂದಿರುವ ಜೀವಿಗಳೂ ಸಾಕಷ್ಟಿವೆ. ಹಾಗಾಗಿ ರಾತ್ರಿ ಕೂಡ ಅಭಯಾರಣ್ಯದೊಳಗೆ ಒಂದು ನಡಿಗೆಯ ಮೂಲಕ ಅಲ್ಲಿನ ರಾತ್ರಿಯ ಜೀವಲೋಕದ ವೈವಿಧ್ಯಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಹೊರಟೆವು.
          ನಮ್ಮ ಪಾಲಿಗೆ ಅದೊಂದು ಹೊಸ ಅನುಭವವಾಗಿತ್ತು. ಹಿಂದೆಂದೂ ರಾತ್ರಿ ಕಾಡಿನಲ್ಲಿ ನಡೆಯುತ್ತ ಹೋದ ಅನುಭವ ನಮಗಿರಲಿಲ್ಲ. ನಾನು ಕೇವಲ ಕೆನ್ನೆತ್ ಆ್ಯಂಡರ್ಸನ್, ಜಿಮ್ ಕಾರ್ಬೆಟ್ ಅವರ ಕಥೆಗಳಲ್ಲಿ ಮಾತ್ರ ರಾತ್ರಿ ಕಾಡಿನಲ್ಲಿ ಓಡಾಡುವ ಅನುಭವಗಳನ್ನು ಕೇಳಿದ್ದೆನಷ್ಟೆ. ನಾವೇ ಸ್ವತಃ ಆ ಅನುಭವಗಳಿಗೆ ತೆರೆದುಕೊಳ್ಳುವುದು ನಿಜಕ್ಕೂ ಅತ್ಯದ್ಭುತವಾದ ಅನುಭವ. ಆದರೆ ಆ ಕಾಡು, ಅಷ್ಟೇ ಏಕೆ ಇಂದು ಭಾರತದಲ್ಲಿರುವ ಯಾವ ಕಾಡು ಕೂಡ ಅಂದು ಅವರು ಓಡಾಡಿದ ಕಾಡುಗಳಷ್ಟು ಭಯಂಕರವಾದ ಕಾಡುಗಳಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ ಕಾಡುಗಳಲ್ಲಿ ಒಂದು ಮಟ್ಟಿನ ರೋಚಕತೆ ಎಂಬುದು ಇದ್ದೇ ಇರುತ್ತದೆ. ನಾವು ಹೊರಡುವಾಗಲೇ ಮಳೆ ಸುರಿಯಲಾರಂಭಿಸಿತು. ಸುತ್ತಲಿನ ಕಾಡುಗಳಿಂದ ಕಪ್ಪೆಗಳ ಆಲಾಪ ಕೇಳಿಬರುತ್ತಿತ್ತು. ಒಂದಲ್ಲ, ಎರಡಲ್ಲ, ನೂರಾರು ಕಪ್ಪೆಗಳು! ಅವುಗಳ ಕೂಗಿನಲ್ಲೂ ಅಷ್ಟೇ ವೈವಿಧ್ಯ. ಲೊಟ್ಟೆ ಹೊಡೆದಂತೆ ಕೂಗುವವು ಕೆಲವಾದರೆ ಗಡಿಯಾರದಂತೆ ಟಿಕ್ ಟಿಕ್ ಟಿಕ್ ಸದ್ದು ಮಾಡುವವು ಇನ್ನು ಕೆಲವು. ತುತ್ತೂರಿಯಂತೆ ಕೂಗುವವು ಇನ್ನು ಕೆಲವು ಹೀಗೆ ಅನೇಕ ವಿಧಗಳ ಕಪ್ಪೆಗಳಿದ್ದವು. ಅಷ್ಟರಲ್ಲಿ ಮಳೆ ಜೋರಾಯಿತೆಂದು ಒಂದು ಮನೆಯ ಕೊಟ್ಟಿಗೆಯಲ್ಲಿ ಆಶ್ರಯ ಪಡೆದೆವು. ಅಲ್ಲಿ ಕೊಟ್ಟಿಗೆಯ ಕಂಬವೊಂದರ ಮೇಲೆ ಮಲಬಾರ್ ಗ್ಲೈಡಿಂಗ್ ಫ್ರಾಗ್ ಜೋಡಿಯೊಂದನ್ನು ಕಂಡೆವು. ದೊಡ್ಡಗಾತ್ರದ ಹೆಣ್ಣಿನ ಮೇಲೆ ಚಿಕ್ಕ ಗಂಡು ಸವಾರಿ ಮಾಡುತ್ತಿತ್ತು. ಆದರೆ ಅವು ಎಷ್ಟೊಂದು ಇಕ್ಕಟ್ಟಾದ ಜಾಗದಲ್ಲಿ ಕುಳಿತಿದ್ದವೆಂದರೆ ಅವಕ್ಕೆ ತೊಂದರೆ ಕೊಡದೆ ಫೋಟೋ ತೆಗೆಯುವುದು ಸಾಧ್ಯವೇ ಇಲ್ಲವೆಂಬಂತಿತ್ತು. ಆದ್ದರಿಂದ ಫೋಟೋ ತೆಗೆಯುವ ಪ್ರಯತ್ನ ಮಾಡದೆ ಸುಮ್ಮನೆ ನೋಡುತ್ತ ನಿಂತೆವು. ಕೆಲಸಮಯದ ಬಳಿಕ ಅವು ಅಲ್ಲಿಂದ ಜಾಗ ಖಾಲಿ ಮಾಡಿದವು. ಅಷ್ಟರಲ್ಲಿ ಮಳೆ ಕಡಿಮೆಯಾಗಿದ್ದರಿಂದ ನಾವೂ ಅಲ್ಲಿಂದ ಹೊರಟೆವು.
          ಮೊದಲ ದಿನ ನಮ್ಮ ರಾತ್ರಿಯ ಅಲೆದಾಟದಿಂದ ಹೆಚ್ಚೇನೂ ಲಾಭವಾಗಲಿಲ್ಲ. ಸುರಿಯುತ್ತಿದ್ದ ಜಡಿಮಳೆಯಿಂದ ಕ್ಯಾಮರಾ ಹೊರಕ್ಕೆ ತೆಗೆಯುವುದೂ ಸಾಧ್ಯವಾಗಲಿಲ್ಲ. ಹಾಗಾಗಿ ಮರುದಿನವಾದರೂ ಮಳೆಯ ರಭಸ ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿದ್ದೆವು. ನಮ್ಮ ಅದೃಷ್ಟಕ್ಕೆ ಮಳೆಯ ರಭಸ ಎರಡನೇ ದಿನ ಕಡಿಮೆಯೇ ಇತ್ತು. ಒಮ್ಮೊಮ್ಮೆ ಹಠಾತ್ತಾಗಿ ಮಳೆ ಶುರುವಾಗಿ ಒಂದೆರಡು ನಿಮಿಷಗಳವರೆಗೆ ಸುರಿಯುತ್ತಿತ್ತು. ಅಷ್ಟೇ ಹಠಾತ್ತಾಗಿ ನಿಂತುಬಿಡುತ್ತಿತ್ತು. ನಮ್ಮನ್ನು ಆಶ್ಚರ್ಯಕ್ಕೆ ದೂಡಿದ್ದೇ ಈ ವಿಚಿತ್ರ ಮಳೆ. ಆದರೆ ದುಬಾರಿಯಾದ ನಮ್ಮ ಕ್ಯಾಮೆರಾಗಳನ್ನು ಸರ್ವನಾಶ ಮಾಡಲು ಒಂದೆರಡು ನಿಮಿಷಗಳ ಮಳೆ ಧಾರಾಳವಾಗಿ ಸಾಕಿತ್ತು. ಹಾಗಾಗಿ ನಾವು ಪ್ರತಿ ಸಲ ಕ್ಯಾಮೆರಾ ಹೊರಕ್ಕೆ ತೆಗೆಯುವ ಮೊದಲು ಹತ್ತುಸಲ ಆಲೋಚಿಸುತ್ತಿದ್ದೆವು. ಒಮ್ಮೊಮ್ಮೆ ಕಾಲುದಾರಿಯಲ್ಲಿ ಕಾಲುಜಾರಿದರೆ ನಾವು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಕ್ಯಾಮೆರಾವನ್ನು ಮೇಲೆತ್ತಿ ಹಿಡಿಯುತ್ತಿದ್ದುದು. ಏಕೆಂದರೆ ಬಿದ್ದು ಕೈಕಾಲು ಮುರಿದುಕೊಂಡರೂ ಕ್ಯಾಮೆರಾಕ್ಕೆ ಏನೂ ಆಗಬಾರದೆಂಬುದು ನಮ್ಮ ಕಳಕಳಿಯಾಗಿತ್ತು.
          ಎರಡನೇ ದಿನದ ಪ್ರಯತ್ನಕ್ಕೆ ಮೊದಲ ದಿನಕ್ಕಿಂತ ಹೆಚ್ಚಿನ ಯಶಸ್ಸು ದೊರಕಿತ್ತು. ಸುತ್ತೆಲ್ಲ ಹಸಿರಾದ ದಟ್ಟ ಕಾನನದ ನಡುವಿನಿಂದ ಮಲಬಾರ್ ವಿಸ್ಲಿಂಗ್ ಥ್ರಶ್ ಹಕ್ಕಿಗಳ ಸುಮಧುರ ಗಾಯನ ಕೇಳಿಬರುತ್ತಿತ್ತು. ನಮಗೆ ಅವುಗಳನ್ನು ನೋಡಬೇಕೆಂಬ ಆಸೆಯಿತ್ತು. ಆದರೆ ಆ ದಟ್ಟಡವಿಯ ನಡುವೆ ಅವುಗಳ ಕೂಗು ಕೇಳುತ್ತಿತ್ತೇ ವಿನಃ ಕಾಣುವುದು ದುಸ್ಸಾಧ್ಯವೇ ಆಗಿತ್ತು. ಹೋದಲ್ಲೆಲ್ಲ ನಮಗೆ ಧಾರಾಳವಾಗಿ ಕಣ್ಣಿಗೆ ಬೀಳುತ್ತಿದ್ದ ಹಕ್ಕಿಗಳೆಂದರೆ ಕೆಂಬೂತಗಳು. ತಮ್ಮ ವಿಚಿತ್ರ ಕಂಠದಿಂದ ನಾನಾ ರೀತಿ ಕೇಕೆ ಹಾಕುತ್ತ ಪೊದೆಗಳ ನಡುವೆ ನುಸಿಯುತ್ತ ಕಳ್ಳನಂತೆ ಓಡಾಡುತ್ತಿದ್ದ ಅವುಗಳನ್ನು ಪತ್ತೆಹಚ್ಚುವುದು ಕಷ್ಟವೇನಾಗಿರಲಿಲ್ಲ.
          ಅಂದು ಎರಡು ಮನೆಗಳ ನಡುವಿನ ದಾರಿಯಲ್ಲಿ ಓಡಾಡುತ್ತಿದ್ದಾಗ ಮಲಬಾರ್ ಪಿಟ್ ವೈಪರ್ ಹಾವೊಂದನ್ನು ಪರಾಗ್ ಕಂಡರು. ಅದು ಅಲ್ಲಿದ್ದರೆ ಹಾವು ಮತ್ತು ಮನೆಯ ಜನರಿಗೆಲ್ಲರಿಗೂ ತೊಂದರೆ ಎಂಬುದನ್ನು ತಿಳಿದಿದ್ದ ಆತ ಮನೆಯವರಿಗೆ ಗೊತ್ತಾಗದಂತೆ ಅದನ್ನು ಹಿಡಿದು ದಟ್ಟವಾದ ಕಾಡಿನ ನಡುವೆ ತಂದುಬಿಟ್ಟರು. ಸುಮಾರು ಐದು ನಿಮಿಷಗಳ ಕಾಲ ನಮ್ಮನ್ನೆಲ್ಲ ತಲೆಯೆತ್ತಿ ನೋಡುತ್ತಿದ್ದ ಹಾವು ನಂತರ ಎಲ್ಲೋ ಕಣ್ಮರೆಯಾಯಿತು. ಒಂದು ಸಾಯಬಹುದಾಗಿದ್ದ ಹಾವನ್ನು ರಕ್ಷಿಸಿದ ಧನ್ಯತಾಭಾವದಿಂದ ಮುಂದೆ ಹೋದೆವು.
          ಅದೇ ದಿನ ರಾತ್ರಿ ನಮ್ಮ ಅದೃಷ್ಟಕ್ಕೆ ಚೆನ್ನಾಗಿ ಮಳೆ ಬಿಟ್ಟಿತ್ತು. ಅದರ ಲಾಭ ಪಡೆದು ನಾವು ಕಾಡಿನಲ್ಲಿ ಸುತ್ತಲು ಹೊರಟೆವು. ರಾತ್ರಿ ಚೆನ್ನಾಗಿ ಊಟ ಮಾಡಿ ಹೋಂಸ್ಟೇ ಒಳಗೆ ಬೆಚ್ಚಗೆ ಕುಳಿತಿದ್ದರಿಂದ ಹೊರಕ್ಕೆ ಹೋಗಲು ಮನಸ್ಸಾಗದಿದ್ದರೂ ಚೆನ್ನಾಗಿ ಮಳೆ ಬಿಟ್ಟಿದ್ದರಿಂದ ಡಾಮರು ರಸ್ತೆಯಲ್ಲೇ ನಡೆದುಹೋಗುತ್ತ ಅಕ್ಕಪಕ್ಕದ ಕಾಡಿನಲ್ಲಿ ಏನೇನು ಕಾಣುತ್ತವೆ ಎಂದು ಸರ್ವೇ ಮಾಡುತ್ತ ಹೋಗುವುದೆಂದು ತೀರ್ಮಾನಿಸಿದೆವು. ಹೋಗುವಾಗ ಪರಾಗ್ ತಮ್ಮ ಕೈಯಲ್ಲಿ ಅತಿನೇರಳೆ ಕಿರಣಗಳ ಚಿಕ್ಕ ಟಾರ್ಚ್ ಒಂದನ್ನು ಹಿಡಿದಿದ್ದರು. ಅದನ್ನೇಕೆ ಹಿಡಿದಿದ್ದೆಂದು ಕೇಳಿದೆ. ಅದನ್ನು ಚೇಳುಗಳನ್ನು ನೋಡುವುದಕ್ಕಾಗಿ ಹಿಡಿದಿದ್ದೆಂದು ಹೇಳಿದರು. ಚೇಳುಗಳ ಮೇಲೆ ಆ ಬೆಳಕು ಬಿದ್ದಾಗ ರಾತ್ರಿಯಲ್ಲಿ ಅವು ಹಸಿರು ಬಣ್ಣದಲ್ಲಿ ಹೊಳೆಯುತ್ತವೆ. ರಾತ್ರಿ ಚೇಳುಗಳನ್ನು ಕಂಡುಹಿಡಿಯಲು ಇದೇ ಅತ್ಯುತ್ತಮ ವಿಧಾನವೆಂದು ಹೇಳಿದರು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅವರಿಗೆ ಬದಿಯಲ್ಲಿ ಚೇಳೊಂದು ದರ್ಶನವಾಯಿತು. ಅದನ್ನು ನಮಗೆಲ್ಲ ಕರೆದು ತೋರಿಸಿದರು. ಅದು ನಿಜಕ್ಕೂ ಅವರು ಹೇಳಿದಂತೆಯೇ ಆ ಬೆಳಕಿನಲ್ಲಿ ಹೊಳೆಯುತ್ತಿತ್ತು. ಅದರ ಮೈಮೇಲೆ ಒಂದು ರೀತಿಯ ಪ್ರೋಟೀನ್ ಇದ್ದು, ಅದು ಹೊಳೆಯಲು ಆ ಪ್ರೋಟೀನೇ ಕಾರಣವೆಂದು ಪರಾಗ್ ಹೇಳಿದರು. ನಾವೆಲ್ಲ ಅದನ್ನು ಕಂಡು ಅಚ್ಚರಿಪಡುತ್ತಲೇ ಮುಂದೆ ಹೋದೆವು.
          ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಕಾಡಿನ ಬದಿಯಲ್ಲಿದ್ದ ಮರವೊಂದಕ್ಕೆ ಜೇಡವೊಂದು ಬಲೆ ನೇಯುತ್ತಿರುವುದು ಕಣ್ಣಿಗೆ ಬಿತ್ತು. ಅದು ನಾವು ಹೋಗುವಾಗ ಇನ್ನೂ ತನ್ನ ಕೆಲಸವನ್ನು ಆರಂಭಿಸಿತ್ತಷ್ಟೆ. ಅದರ ಕೆಲಸವನ್ನೇ ವಿಸ್ಮಯದಿಂದ ನೋಡುತ್ತ ನಿಂತೆವು. ಸುಮಾರು ಒಂದಿಂಚು ಗಾತ್ರದ ದೇಹವನ್ನು ಹೊಂದಿದ್ದ ಆ ದೊಡ್ಡ ಜೇಡ ನೋಡಿದೊಡನೆಯೇ ಭಯ ಹುಟ್ಟಿಸುವಂತೆಯೇ ಇತ್ತು. ಆದರೆ ನಮಗೆ ಅದರ ಕಾರ್ಯವೈಖರಿಯನ್ನು ನೋಡಿ ಅಚ್ಚರಿಯಾಗಿತ್ತು. ಹಾಗಾಗಿ ಬೇರೇನೂ ಯೋಚಿಸದೆ ಅದನ್ನೇ ನೋಡುತ್ತ ನಿಂತೆವು. ಜೇಡವೊಂದರ ಬಲೆ ಅದೇ ಗಾತ್ರದ ಉಕ್ಕಿನ ಎಳೆಗಿಂತ ಗಟ್ಟಿಯಾಗಿರುತ್ತದೆ ಎಂದು ಎಲ್ಲೋ ಓದಿದ್ದ ನೆನಪಿತ್ತು. ಅದು ಅನೇಕ ಸಲ ನಮ್ಮ ಅನುಭವಕ್ಕೂ ಬಂದಿತ್ತು. ಏಕೆಂದರೆ ಮನೆಯ ಸುತ್ತಮುತ್ತ ದೊಡ್ಡದೊಡ್ಡ ಜೇಡಗಳು ಬಲೆ ಕಟ್ಟಿದಾಗ ಅದನ್ನು ಕಟ್ಟಿಗೆಯಿಂದ ನಿವಾರಿಸಲು ಪ್ರಯತ್ನಿಸಿದರೆ ಕಟ್ಟಿಗೆಯನ್ನೇ ಹಿಂದೆ ತಳ್ಳುವಷ್ಟು ಶಕ್ತಿಶಾಲಿಯಾಗಿತ್ತು. ಅಷ್ಟರಲ್ಲಿ ನಮ್ಮೊಂದಿಗಿದ್ದ ಓಂಕಾರ್ ದೊಡ್ಡ ಜೇಡವೊಂದರ ಬಲೆಗೆ ಹೂಕುಡುಕ ಹಕ್ಕಿಯೊಂದು ಬಿದ್ದು ಸತ್ತಿದ್ದನ್ನು ತೋರಿಸಿದಾಗ ನಾವು ನಿಜಕ್ಕೂ ಬೆಚ್ಚಿಬಿದ್ದಿದ್ದೆವು.
          ನಮಗೆ ಅಂದು ರಾತ್ರಿಯುದ್ದಕ್ಕೂ ಧಾರಾಳವಾಗಿ ದರ್ಶನ ನೀಡಿದ್ದು ಹಸಿರು ಹಾವುಗಳು. ಅವೇನೂ ನಮಗೆ ಎಂದೂ ಅಪರೂಪದವಾಗಿರಲಿಲ್ಲ. ನಮ್ಮ ಮನೆಯ ಸುತ್ತಮುತ್ತ ಬೇಕಾದಷ್ಟು ಸಲ ಅವುಗಳನ್ನು ನೋಡಿದ್ದೆವು. ಆದರೆ ರಾತ್ರಿಯಲ್ಲಿ ಅವು ನಿದ್ರಿಸುವಾಗ ನೋಡುತ್ತಿದ್ದುದು ಅದೇ ಮೊದಲು. ದಾರಿಯುದ್ದಕ್ಕೂ ಅನೇಕ ಮರಗಳ ಮೇಲೆ ಮರದ ಕೊಂಬೆಗಳ ತುದಿಯಲ್ಲಿ ನಿದ್ರಾವಶವಾಗಿದ್ದ ಅನೇಕ ಹಸಿರುಹಾವುಗಳು ಕಂಡುಬಂದವು. ಜೊತೆಗೆ ಅಲ್ಲೊಂದು ಇಲ್ಲೊಂದು ಓತಿಕೇತಗಳೂ ಕಂಡುಬಂದವು. ಅವುಗಳಂತೂ ಎಷ್ಟು ಅಧ್ವಾನದ ಜಾಗಗಳನ್ನು ಹುಡುಕಿಕೊಂಡಿದ್ದವೆಂದರೆ ಅಲ್ಲಿಗೆ ಸಾಮಾನ್ಯಕ್ಕೆ ಯಾವ ಪ್ರಾಣಿಯೂ ಹೋಗಿ ಅವುಗಳನ್ನು ಹಿಡಿಯುವುದು ಸಾಧ್ಯವೇ ಇರಲಿಲ್ಲ. ಏಕೆಂದರೆ ತೆಳ್ಳಗಿನ ಕಡ್ಡಿಯೊಂದರ ತುದಿಯಲ್ಲಿ ಕುಳಿತು ಅವು ನಿದ್ರಿಸುತ್ತಿದ್ದವು. ಯಾವುದೇ ಪ್ರಾಣಿ ಅವುಗಳನ್ನು ಹಿಡಿಯಲು ಆ ಕೊಂಬೆಯ ತುದಿಗೆ ಹೋದರೆ ಆ ಪ್ರಾಣಿಯ ಭಾರಕ್ಕೆ ಕೊಂಬೆಯೇ ಮುರಿಯಬೇಕು. ಆದ್ದರಿಂದ ಅವುಗಳು ನಿದ್ರಿಸುತ್ತಿರುವಾಗ ಯಾವ ಪ್ರಾಣಿಯೂ ಅವುಗಳನ್ನು ಹಿಡಿಯಲು ಪ್ರಯತ್ನಿಸುವುದಿಲ್ಲ.
          ಮುಂದೆ ಹೋಗುತ್ತಿದ್ದಂತೆ ವಿಪ್ ಸ್ಕಾರ್ಪಿಯನ್ ಎಂಬ ಅತ್ತ ಜೇಡವೂ ಅಲ್ಲದ ಇತ್ತ ಚೇಳೂ ಅಲ್ಲದ ಜೀವಿಯೊಂದರ ದರ್ಶನವಾಯಿತು. ಅದಕ್ಕೆ ಆ ಹೆಸರು ಬರಲು ಕಾರಣ ಅದರ ರಚನೆ ಸ್ಥೂಲವಾಗಿ ಚೇಳನ್ನು ಹೋಲುವುದು. ಅದು ಚಿಕ್ಕಪುಟ್ಟ ಕೀಟಗಳನ್ನು ಹಿಡಿದು ತಿನ್ನುವ ಮಾಂಸಾಹಾರಿ ಜೀವಿ. ನೋಡಲು ಭಯಾನಕವಾಗಿ ಕಾಣುತ್ತದೆ. ಆದರೆ ಅದು ಮನುಷ್ಯರಿಗೆ ಅಷ್ಟೇನೂ ಅಪಾಯಕಾರಿಯಾದ ಜೀವಿಯಲ್ಲ. ನಿಶಾಚರಿಗಳಾದ ಅವುಗಳ ಚಟುವಟಿಕೆಗಳೆಲ್ಲ ರಾತ್ರಿಯವೇಳೆಯೇ ನಡೆಯುತ್ತದೆ.
          ಮತ್ತಷ್ಟು ಮುಂದೆ ಹೋದಾಗ ಧರೆಯ ಬದಿಯಲ್ಲಿ ಒಂದು ಚಿಕ್ಕ ಕುಳಿಯಿದ್ದು, ಅದರ ಬಾಯಿಯನ್ನು ಜೇಡರ ಬಲೆಯಿಂದ ಮುಚ್ಚಲಾಗಿತ್ತು. ಅದನ್ನು ತೋರಿಸಿದ ಓಂಕಾರ್, ಅದು ಭಾರತದ ಟ್ಯಾರಂಟುಲಾ ಜೇಡದ ಕುಳಿ ಎಂದರು. ಟ್ಯಾರಂಟುಲಾವನ್ನು ನಾನು ಎಂದೂ ನೋಡಿರಲಿಲ್ಲ. ಕೇವಲ ಅವುಗಳ ಬಗ್ಗೆ ಓದಿದ್ದೆನಷ್ಟೆ. ಅದನ್ನು ನೋಡುವ ಬಯಕೆ ನನಗೆ ಬಹಳ ಇತ್ತು. ಆದರೆ ನಮ್ಮಿಂದ ಆ ಧರೆ ತುಂಬಾ ದೂರದಲ್ಲಿದ್ದುದರಿಂದ ಅದರೊಳಗೆ ಜೇಡ ಇದೆಯೇ ಇಲ್ಲವೇ ಎಂಬುದೇ ಗೊತ್ತಾಗುವಂತಿರಲಿಲ್ಲ. ಅದನ್ನು ಅಷ್ಟಕ್ಕೇ ಬಿಟ್ಟು ಮನೆಗೆ ಮರಳಿದೆವು.
          ಮರುದಿನ ನಮ್ಮ ಯಾತ್ರೆಯ ಕೊನೆಯ ದಿನವಾಗಿತ್ತು. ಅಂದು ಬೆಳಿಗ್ಗೆ ತಿಂಡಿ ಮುಗಿಸಿ ಮಾಮೂಲಿನಂತೆ ಹೊರಟೆವು. ಆ ದಿನ ಮಳೆಯ ರಭಸ ಹಿಂದಿನೆರಡು ದಿನಗಳಿಗಿಂತ ಬಹಳ ಕಡಿಮೆಯಿದ್ದು, ಸೂರ್ಯನೂ ಹೊರಕ್ಕೆ ತಲೆಹಾಕಿದ್ದ. ಹಾಗಾಗಿ ಆಹ್ಲಾದಕರವಾದ ವಾತಾವರಣವನ್ನು ಆಸ್ವಾದಿಸುತ್ತ ಹೊರಟೆವು. ಸುತ್ತಮುತ್ತಲಿನ ಪರಿಸರವೆಲ್ಲ ಮಳೆ ಬಂದು ನಿಂತಿದ್ದರಿಂದ ಸ್ವರ್ಗಸದೃಶವಾಗಿ ಕಾಣುತ್ತಿತ್ತು. ಮತ್ತೆ ಹಸಿರು ಹಾವುಗಳು ಅಲ್ಲೊಂದು ಇಲ್ಲೊಂದು ಕಂಡವು. ಟ್ಯಾರಂಟುಲಾಗಳ ಅನೇಕ ರಂಧ್ರಗಳು ಕಂಡವು. ಒಂದರಲ್ಲಂತೂ ಜೇಡದ ಕಾಲುಗಳು ದೂರದಿಂದ ಕಾಣುತ್ತಿದ್ದವು. ಆದರೆ ನಾವು ಸ್ವಲ್ಪ ಸಮೀಪಕ್ಕೆ ಹೋಗುತ್ತಿದ್ದಂತೆ ಅಪಾಯದ ಸುಳಿವರಿತ ಜೇಡ ಒಳಕ್ಕೆ ಪಲಾಯನ ಮಾಡಿತು. ಇನ್ನೂ ಸ್ವಲ್ಪ ಮುಂದೆ ಹೋದಾಗ ಮರವೊಂದರ ಬುಡದಲ್ಲಿ ಭಾರೀ ರಂಧ್ರವೊಂದು ಕಂಡಿತು. ಅದರೊಳಗೆ ಖಂಡಿತಾ ಬೃಹದ್ಗಾತ್ರದ ಜೇಡವಿದೆಯೆಂದ ಪರಾಗ್ ಅದರ ಸಮೀಪಕ್ಕೆ ಹೋಗಿ ನೋಡಿದರು. ಅದರ ಎದುರಿಗೆ ಕೋಲೊಂದನ್ನು ಅಲ್ಲಾಡಿಸಿ ಜೇಡ ಹೊರಕ್ಕೆ ಬರುತ್ತದೆಯೇ ಎಂದು ಪರೀಕ್ಷಿಸಿದರು. ಆದರೆ ಅದು ಹೊರಕ್ಕೆ ಬರುವ ಯಾವ ಸಾಧ್ಯತೆಯೂ ಕಾಣಿಸದಿದ್ದರಿಂದ ಮುಂದಿನ ದಾರಿ ಹಿಡಿದೆವು.
          ದಾರಿಯುದ್ದಕ್ಕೂ ನಮಗೆ ರಸ್ತೆಯ ಎಡಗಡೆ ಗುಡ್ಡವಿದ್ದರೆ ಬಲಗಡೆ ಇಳಿಜಾರು ಪ್ರದೇಶವಿತ್ತು. ಮಧ್ಯೆ ಮಧ್ಯೆ ಕಣಿವೆಗಳೂ ಇದ್ದವು. ಕಣಿವೆಗಳಿದ್ದಲ್ಲಿ ದೂರದ ಬೆಟ್ಟಗಳು, ಅವುಗಳ ಹಸಿರು ಎಲ್ಲವೂ ಕಣ್ಮನ ತಣಿಸುತ್ತಿದ್ದವು. ನಾವು ಒಟ್ಟು ಏಳೆಂಟು ಜನರಿದ್ದೆವು. ಆದರೆ ಒಬ್ಬರ ಬಳಿ ಮಾತ್ರ ದುರ್ಬೀನಿತ್ತು. ಹಾಗಾಗಿ ಸುಂದರ ದೃಶ್ಯಗಳೇನಾದರೂ ಕಂಡರೆ ಒಬ್ಬರ ಕೈಯಿಂದ ಒಬ್ಬರ ಕೈಗೆ ದುರ್ಬೀನು ಹಸ್ತಾಂತರಗೊಂಡು ಎಲ್ಲರೂ ಆ ದೃಶ್ಯಗಳನ್ನು ಕಣ್ತುಂಬಿಕೊಂಡರು.
          ಕಾಡಿನಲ್ಲೆಲ್ಲ ಸುತ್ತಾಡಿ ದಣಿದು ಮನೆಗೆ ಮರಳಿದರೆ ಬೆಚ್ಚನೆಯ ಆತಿಥ್ಯ ಕಾದುಕುಳಿತಿತ್ತು. ಅದ್ಭುತವಾದ ಊಟ ನಮ್ಮ ಹಸಿವನ್ನು ತಣಿಸಿತು. ಮೂರು ದಿನಗಳಲ್ಲಿ ಅಲ್ಲಿ ಉಂಡ ಆಹಾರಪದಾರ್ಥಗಳ ಲೆಕ್ಕವೇ ನನಗೆ ತಪ್ಪಿಹೋಗಿದೆ. ಕೆಸುವಿನ ಸೊಪ್ಪಿನ ಪಲ್ಯ, ಚಗಟೆ ಸೊಪ್ಪಿನ ಪಲ್ಯ, ಹಲಸಿನ ಬೀಜದ ಹುಳಿ, ಬೆಂಡೆಕಾಯಿ ಹುಳಿ, ಬದನೆಕಾಯಿ ಎಣ್ಣೆಗಾಯಿ, ಹಲಸಿನ ಹಪ್ಪಳ ಹೀಗೆ ಅಲ್ಲಿ ನಾವು ಸವಿದ ಪದಾರ್ಥಗಳಿಗೆ ಲೆಕ್ಕವೇ ಇಲ್ಲ. ಎಲ್ಲವೂ ಮನೆಯ ಸುತ್ತಮುತ್ತ ಬೆಳೆದ ತರಕಾರಿಗಳೇ ಆಗಿದ್ದವು. ನಮಗೆ ಮನೆಗೆ ಪೇಟೆಯಿಂದ ತರಕಾರಿ ಕೊಂಡುತಂದ ನೆನಪೇ ಇಲ್ಲವೆಂದು ಆ ಮನೆಯವರು ಹೇಳಿದರು. ಮನೆಯವರೆಲ್ಲರ ಆರೋಗ್ಯವನ್ನು, ಉತ್ಸಾಹದ ಜೀವನವನ್ನು ಕಣ್ಣಾರೆ ಕಂಡ ನಮಗೆ ಅದರ ಗುಟ್ಟೇನೆಂದು ಆಗ ಅರ್ಥವಾಯಿತು!
          ನಾವು ಹೊರಡುವ ಸಮಯ ಸನ್ನಿಹಿತವಾದಂತೆ ಎಲ್ಲರ ಮನಸ್ಸೂ ಭಾರವಾಗಿತ್ತು. ಏಕೆಂದರೆ ಅಲ್ಲಿನ ಸುಂದರ ವಾತಾವರಣವನ್ನು ಬಿಟ್ಟು ಹೊರಡಲು ಯಾರಿಗೂ ಮನಸ್ಸೇ ಇರಲಿಲ್ಲ. ಆದರೂ ಹೊರಡಲೇಬೇಕಿತ್ತು. ನಮಗೆ ರಾತ್ರಿ ಒಂಬತ್ತು ಗಂಟೆಗೆ ಮಂಗಳೂರಿನ ರೈಲು ಇದ್ದಿದ್ದು. ಆದರೆ ನಾವು ನಾಲ್ಕೂವರೆಗೇ ಮಡಗಾಂವ್ ರೈಲ್ವೇ ನಿಲ್ದಾಣಕ್ಕೆ ಬಂದೆವು. ಇನ್ನೂ ನಾಲ್ಕೂವರೆ ತಾಸು ಹೇಗೆ ಸಮಯ ಕಳೆಯುವುದೆಂಬ ಯೋಚನೆಯಲ್ಲಿ ನಾವಿದ್ದಾಗಲೇ ನಮ್ಮನ್ನು ಗಾಬರಿಗೊಳಿಸುವಂತೆ ಮಡಗಾಂವ್ ನಿಂದ ಮಂಗಳೂರಿಗೆ ಹೋಗಬೇಕಿದ್ದ ಮಡಗಾಂವ್ ಎಕ್ಸ್ ಪ್ರೆಸ್ ರೈಲು ಹೊರಡುವುದು ಐದು ತಾಸು ತಡವಾಗುತ್ತದೆ ಎಂದು ಘೋಷಿಸಿದರು. ಐದು ತಾಸು ತಡವೆಂದರೆ ರಾತ್ರಿ ಒಂಬತ್ತಕ್ಕೆ ಹೊರಡಬೇಕಿದ್ದ ರೈಲು ಎರಡಕ್ಕೆ ಹೊರಡುತ್ತದೆ ಎಂದಾಯಿತು! ನಮಗೆ ಗಾಬರಿಯಾಯಿತು. ಅಷ್ಟರಲ್ಲಿ ರೈಲ್ವೇ ನಿಲ್ದಾಣದ ವೈಫೈ ಸಂಪರ್ಕದ ನೆರವಿನಿಂದ ಅಂತರ್ಜಾಲದಲ್ಲಿ ಜಾಲಾಡಿದಾಗ ಹನ್ನೊಂದೂವರೆಗೆ ಇನ್ನೊಂದು ರೈಲು ಇರುವುದಾಗಿ ತಿಳಿಯಿತು. ನಮ್ಮ ಅದೃಷ್ಟಕ್ಕೆ ಅದರಲ್ಲಿ ಶಯನದರ್ಜೆಯ ಹದಿಮೂರು ಸೀಟುಗಳು ಲಭ್ಯವಿದ್ದವು. ಗಡಿಬಿಡಿಯಲ್ಲಿ ಎರಡನ್ನು ಬುಕಿಂಗ್ ಮಾಡಿದ್ದಾಯಿತು. ಕಡೆಗೆ ಆ ರೈಲು ಕೂಡ ಒಂದೂಕಾಲು ಗಂಟೆ ತಡವಾಗಿ, ಹನ್ನೊಂದೂವರೆಗೆ ರೈಲ್ವೆನಿಲ್ದಾಣಕ್ಕೆ ಬರಬೇಕಾಗಿದ್ದ ರೈಲು ಹನ್ನೆರಡೂಮುಕ್ಕಾಲಿಗೆ ಬಂದಿತು. ಹೀಗೆ ನಮ್ಮ ಗೋವಾ ಪ್ರವಾಸ ಮುಕ್ತಾಯವಾಯಿತು.
          ಗೋವಾ ಎಂದರೆ ಬರೇ ಬೀಚ್ ಮತ್ತು ರೆಸಾರ್ಟ್ ಎಂಬ ಪದಗಳೇ ಎಲ್ಲರ ಕಿವಿಗೂ ಬೀಳುತ್ತದೆ. ಗೋವಾಕ್ಕೆ ಹೋಗುತ್ತಿದ್ದೇವೆ ಎಂದು ಸ್ನೇಹಿತರ ವಲಯದಲ್ಲಿ ಹೇಳಿದಾಗ ಹುಬ್ಬೇರಿಸಿದವರೇ ಜಾಸ್ತಿ. ಅವರಿಗೆಲ್ಲ ಮತ್ತೆ ಮತ್ತೆ ಸಮಜಾಯಿಷಿ ಕೊಡಬೇಕಾಗಿತ್ತು. ಅಲ್ಲಿಗೆ ಹೋಗಿಬಂದ ಮೇಲೆ ಅಭಯಾರಣ್ಯದೊಳಗೆ ತೆಗೆದ ಫೋಟೋಗಳನ್ನು ನೋಡಿದಮೇಲೆ ಯಾರೂ ನಾನು ಹೋಗಿಬಂದಿದ್ದು ಗೋವಾಕ್ಕೆ ಎಂದು ನಂಬಲೇ ಇಲ್ಲ. ಗೋವಾದ ಬಗ್ಗೆ ಇಷ್ಟೊಂದು ತಪ್ಪುಕಲ್ಪನೆಗಳು ಎಲ್ಲರ ಮನಸ್ಸಿನಲ್ಲಿವೆಯೇ ಎಂದು ನನಗೆ ಆಶ್ಚರ್ಯವಾಯಿತು. ಆದರೆ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದ ನಾವು ಅಂತಿಮವಾಗಿ ಎರಡು ಹಾವುಗಳನ್ನು ರಕ್ಷಿಸಿದ ಸಂತೃಪ್ತಿಯನ್ನು ಹೊತ್ತು ಮನೆಗೆ ಮರಳಿದೆವು. 









Friday 7 October 2016

ಭೋಜನನಿರತ ಸೊಪ್ಪುಕುಟುರನ ಭಾವಭಂಗಿಗಳು

ಮಲೆನಾಡಿನಲ್ಲಿ ಸೊಪ್ಪುಕುಟುರ ಎಂದು ಕರೆಯುವ ಬಾರ್ಬೆಟ್ ಹಕ್ಕಿಗಳು ನಮ್ಮ ಮನೆಯ ಸುತ್ತಮುತ್ತ ಅಸಂಖ್ಯಾತವಾಗಿವೆ. ಆದರೆ ಅವು ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಾಗಿ ಕಿವಿಗೆ ಕೇಳುತ್ತಿರುತ್ತವೆ ಎಂದರೆ ಅತಿಶಯೋಕ್ತಿಯಾಗಲಾದು! ಇದಕ್ಕೆ ಕಾರಣ ಆ ಹಕ್ಕಿಗಳ ಮೈಬಣ್ಣ. ಹಸಿರುಬಣ್ಣದ ಅವು ಮರಗಳ ನಡುವೆ ಕುಳಿತರೆ ಕಾಣುವುದಾದರೂ ಹೇಗೆ? ನಮ್ಮ ಕಾಡುಗಳಲ್ಲಿ ಸದಾಕಾಲ ಕುಟುರ್, ಕುಟುರ್, ಕುಟುರ್ ಎಂದು ಆಲಾಪ ಮಾಡುತ್ತಲೇ ಇರುವ ಈ ಹಕ್ಕಿಗಳು ಮಲೆನಾಡಿನ ಅವಿಭಾಜ್ಯ ಅಂಗಗಳೆಂದರೆ ತಪ್ಪಾಗಲಾರದು. ಇವುಗಳ ಕೂಗನ್ನು ಕೇಳುತ್ತಿದ್ದರೆ ಇಡೀ ಮಲೆನಾಡಿನ ಪ್ರಕೃತಿ, ಪರಿಸರವೆಲ್ಲ ಕಣ್ಣಮುಂದೆಯೇ ಬಂದಂತಾಗುತ್ತದೆ ಎಂಬ ಕುವೆಂಪು ಅವರ ಮಾತಿನಲ್ಲಿ ಎಳ್ಳಷ್ಟೂ ಅತಿಶಯೋಕ್ತಿಯಿಲ್ಲವೆಂದು ಯಾರಿಗಾದರೂ ಅರ್ಥವಾಗುತ್ತದೆ. ನಮ್ಮ ಮನೆಯ ಪಕ್ಕದಲ್ಲಿದ್ದ ಸೀಬೆಮರದ ಮೇಲೆ ಕುಳಿತು ಹಣ್ಣು ತಿನ್ನುತ್ತಿದ್ದಾಗ ಕಣ್ಣಿಗೆ ಬಿದ್ದ ಸೊಪ್ಪುಕುಟುರದ ವಿವಿಧ ಭಾವಭಂಗಿಗಳಿವು. 










ಬರ್ಡ್ಸ್ ಆಫ್ ಪ್ಯಾರಡೈಸ್: ಸ್ವರ್ಗದಿಂದ ಧರೆಗಿಳಿದು ಬಂದ ಅನುಪಮ ಸೌಂದರ್ಯದ ಹಕ್ಕಿಗಳು

ಬರ್ಡ್ಸ್ ಆಫ್ ಪ್ಯಾರಡೈಸ್: ಸ್ವರ್ಗದಿಂದ ಧರೆಗಿಳಿದು ಬಂದ ಅನುಪಮ ಸೌಂದರ್ಯದ ಹಕ್ಕಿಗಳು
ಸ್ವರ್ಗ ಎಂಬುದು ಎಂಥ ಮನುಷ್ಯನಿಗಾದರೂ ಮೋಡಿ ಮಾಡುವ ಪದ. ಇದುವರೆಗೂ ಸ್ವರ್ಗವನ್ನು ಕಂಡವರಾರೂ ಇಲ್ಲವಾದರೂ ಮನುಷ್ಯರು ಅವರವರ ಕಲ್ಪನೆಗೆ ತಕ್ಕಂತೆ ಸ್ವರ್ಗವನ್ನು ಊಹಿಸಿಕೊಂಡಿರುತ್ತಾರೆ. ಹೆಚ್ಚಿನ ಮನುಷ್ಯರ ಕಲ್ಪನೆಯಲ್ಲಿ ಸ್ವರ್ಗವೆಂದರೆ ದೇವಾನುದೇವತೆಗಳ, ಅಪ್ಸರ ಸ್ತ್ರೀಯರಿಂದ ಕೂಡಿದ ಕಿನ್ನರ ಲೋಕ. ಹಾಗಾದರೆ ಅಂಥದೊಂದು ಕಿನ್ನರ ಲೋಕದಿಂದ ಜೀವಿಗಳು ಧರೆಗಿಳಿದು ಬಂದರೆ ಹೇಗಿರುತ್ತದೆ? ಅಂಥ ಜೀವಿಗಳನ್ನು ಕಾಣಬೇಕೆಂದರೆ ನೀವು ಪಪುವಾ ನ್ಯೂಗಿನಿ ದ್ವೀಪಕ್ಕೆ ಹೋಗಬೇಕು.
ಪಪುವಾ ನ್ಯೂಗಿನಿ ಒಂದು ಚಿಕ್ಕ, ಆದರೆ ಅಷ್ಟೇ ಸುಂದರವಾದ ದ್ವೀಪ. ಸದಾ ಮಳೆ ಸುರಿಯುತ್ತಿರುವ ಮಳೆಕಾಡುಗಳಿಂದ ಆವೃತವಾದ ಈ ದ್ವೀಪಗಳು ಅಪರೂಪದ ಪ್ರಾಣಿಪಕ್ಷಿಗಳಿಗೆ ಪ್ರಶಸ್ತವಾದ ದ್ವೀಪ. ಮನುಷ್ಯರು ಕಂಡುಕೇಳರಿಯದಂಥ ಎಷ್ಟೋ ಅಪರೂಪದ ಪ್ರಾಣಿಪಕ್ಷಿಗಳಿಗೆ ಆವಾಸಸ್ಥಾನವಾದ ಈ ದ್ವೀಪಗಳು ಜಗತ್ತಿನ ಭೂಪಟದಲ್ಲಿ ಸುಪ್ರಸಿದ್ಧವಾಗಲು ಕಾರಣ ಸ್ವರ್ಗದ ಹಕ್ಕಿಗಳು (ಬರ್ಡ್ಸ್ ಆಫ್ ಪ್ಯಾರಡೈಸ್). ಪ್ಯಾರಡೈಸಿಡೇ ಕುಟುಂಬಕ್ಕೆ ಸೇರಿದ ನಲವತ್ತು ಜಾತಿಯ ಹಕ್ಕಿಗಳಿಗೆ ಅವುಗಳ ಅನುಪಮ ಸೌಂದರ್ಯವನ್ನು ಕಂಡು ಮನಸೋತು ಮನುಷ್ಯರು ನೀಡಿದ ಹೆಸರಿದು. ಅವುಗಳನ್ನು ನೋಡಿದ ಯಾರಿಗಾದರೂ ಆ ಹೆಸರು ಸ್ವಲ್ಪವೂ ಉತ್ಪ್ರೇಕ್ಷೆಯದಲ್ಲ ಎನ್ನಿಸುತ್ತದೆ. ಪಕ್ಷಿಲೋಕವೇ ಸೌಂದರ್ಯದ ನೆಲೆವೀಡೇ ಆದರೂ ಅದರಲ್ಲೂ ಸ್ವರ್ಗದ ಹಕ್ಕಿಗಳು ಬೇರೆಲ್ಲ ಹಕ್ಕಿಗಳಿಗಿಂತ ಒಂದು ಹೆಜ್ಜೆ ಮುಂದಿವೆ ಎಂದರೆ ತಪ್ಪಾಗಲಾರದು.
ಇಂಡೋನೇಷಿಯಾದ ಕೆಲವು ದ್ವೀಪಗಳಲ್ಲೂ ಸಹ ಈ ಹಕ್ಕಿಗಳಿವೆ. ಆದರೆ ಸ್ವರ್ಗದ ಹಕ್ಕಿಗಳೆಂದರೆ ಮೊದಲು ನೆನಪಾಗುವುದೇ ಪಪುವಾ ನ್ಯೂಗಿನಿ ದ್ವೀಪ. ನಿಮಗೆ ಆಶ್ಚರ್ಯವಾಗಬಹುದು, ಈ ಸ್ವರ್ಗದ ಹಕ್ಕಿಗಳ ಕುಟುಂಬ ನಮ್ಮ ತೀರಾ ಸಾಮಾನ್ಯವಾದ ಮತ್ತು ಅಷ್ಟೇನೂ ಆಕರ್ಷಕವಲ್ಲದ ಕಾಗೆಗಳ ಕಾರ್ವಿಡೇ ಕುಟುಂಬಕ್ಕೆ ಹತ್ತಿರದ ಸಂಬಂಧ ಹೊಂದಿದೆ. ಅವುಗಳ ಗರಿಗಳಲ್ಲಿ ಕೇವಲ ಬಣ್ಣಗಳಿಲ್ಲ, ಸೂರ್ಯನ ಬೆಳಕನ್ನು ಪ್ರತಿಫಲಿಸುವಂಥ ವರ್ಣಸಂಯೋಜನೆ ಅವುಗಳದ್ದು. ಹಾಗಾಗಿ ಅವು ಬಿಸಿಲಿಗೆ ಬಂದರೆ ಮೈಯೆಲ್ಲ ಕನ್ನಡಿಯಂತೆ ಫಳಫಳನೆ ಹೊಳೆಯುತ್ತದೆ. ಈ ವರ್ಣವೈವಿಧ್ಯ, ಸೌಂದರ್ಯವೆಲ್ಲ ಕೇವಲ ಗಂಡುಗಳಿಗೆ ಮೀಸಲು. ಹೆಣ್ಣುಹಕ್ಕಿಗಳನ್ನು ಆಕರ್ಷಿಸಲೆಂದೇ ಅವುಗಳಿಗೆ ಈ ಸೌಂದರ್ಯ. ಹೆಣ್ಣುಗಳು ಮಾತ್ರ ತೀರಾ ಸಾಧಾರಣ ಮೈಬಣ್ಣ ಹೊಂದಿರುತ್ತವೆ. ಗಂಡುಗಳು ಕಣ್ಣುಕುಕ್ಕುವ ಬಣ್ಣಗಳ ಜೊತೆಗೆ ಕೊಕ್ಕು, ಬೆನ್ನು, ಬಾಲ ಹೀಗೆ ದೇಹದ ಬೇರೆ ಬೇರೆ ಭಾಗಗಳಿಂದ ಹೊರಹೊಮ್ಮಿದ ಉದ್ದನೆಯ ಬಾಲದಂಥ ಗರಿಗಳನ್ನು ಹೊಂದಿರುತ್ತವೆ. ಇದರಿಂದಾಗಿಯೇ ಈ ಹಕ್ಕಿಗಳು ನಮ್ಮ ಲೋಕಕ್ಕೆ ಸೇರಿದವೇ ಅಲ್ಲ ಎಂಬ ಭಾವನೆ ಉಂಟುಮಾಡುತ್ತವೆ.
ಸ್ವರ್ಗದ ಹಕ್ಕಿಗಳಲ್ಲೆಲ್ಲ ಅತ್ಯಂತ ದೊಡ್ಡದು ಕರ್ಲ್ ಕ್ರೆಸ್ಟೆಡ್ ಮ್ಯಾನುಕೋಡ್. ಇದಕ್ಕೆ ಕನ್ನಡದಲ್ಲಿ ಯಾವ ಹೆಸರೂ ಇಲ್ಲ. ಒಂದೂವರೆ ಅಡಿ ಉದ್ದ ಹಾಗೂ ನಾಲ್ಕುನೂರೈವತ್ತು ಗ್ರಾಂ ತನಕ ತೂಗುವ ಈ ಹಕ್ಕಿ ಹೊಳೆಯುವ ಕಪ್ಪು, ನೇರಳೆ ಹಾಗೂ ಹಸಿರು ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಗಂಡು ಮತ್ತು ಹೆಣ್ಣಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ನೋಡಲು ಹೆಣ್ಣು ಸ್ವಲ್ಪ ಚಿಕ್ಕದಿರುತ್ತದೆ ಎಂಬುದನ್ನು ಬಿಟ್ಟರೆ ಎರಡೂ ಹೆಚ್ಚುಕಡಿಮೆ ಒಂದೇ ರೀತಿ ಕಾಣುತ್ತವೆ. ಸ್ವರ್ಗದ ಹಕ್ಕಿಗಳಲ್ಲಿ ಈ ಹಕ್ಕಿಗಳು ತೀರಾ ಸಾಧಾರಣ ಬಣ್ಣದವು ಎನ್ನಿಸುವುದು ನಿಜವಾದರೂ ಅದರ ಕೊರತೆಯನ್ನು ಅವು ತಮ್ಮ ಧ್ವನಿಯಲ್ಲಿ ತುಂಬಿಕೊಂಡಿವೆ. ಆಕರ್ಷಕವಾದ ಕೂಗಿನ ಮೂಲಕ ಗಂಡು ಹೆಣ್ಣನ್ನು ಕರೆಯುತ್ತದೆ. ಜೊತೆಗೆ ಬಣ್ಣಗಳು ಸಹ ಬೇರೆ ಸ್ವರ್ಗದ ಹಕ್ಕಿಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಎನ್ನಿಸಬಹುದಾದರೂ ಇತರೆ ಹಕ್ಕಿಗಳಿಗೆ ಹೋಲಿಸಿದರೆ ಇವು ಅಪ್ರತಿಮ ವರ್ಣಮಯ ಹಕ್ಕಿಗಳೇ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಬಾಗಿದ ಕತ್ತಿಯಂಥ ಕೊಕ್ಕುಳ್ಳ ಬ್ಲ್ಯಾಕ್ ಸಿಕಲ್ ಬಿಲ್ ಎಂಬ ಹಕ್ಕಿ ತನ್ನ ಕೊಕ್ಕಿನಿಂದಾಗಿಯೇ ಪ್ರಸಿದ್ಧವಾದ ಸ್ವರ್ಗದ ಹಕ್ಕಿ. ಗಂಡು ಹಕ್ಕಿ ಕಣ್ಣುಕುಕ್ಕುವಂಧ ಕಪ್ಪು-ಹಸಿರು ವರ್ಣಗಳ ಉಡುಗೆಯನ್ನು ಹೊಂದಿರುತ್ತದೆ. ಇದರ ಬಾಲವೂ ಉದ್ದನೆಯ ಗರಿಗಳಿಂದ ಕೂಡಿದ್ದು ಪ್ರಣಯ ನೃತ್ಯ ಮಾಡುವಾಗ ಈ ಗರಿಗಳನ್ನು ಪ್ರದರ್ಶಿಸಿ ನೃತ್ಯ ಮಾಡುತ್ತದೆ. ಯಾವ ಗಂಡು ಅತ್ಯಾಕರ್ಷಕ ನೃತ್ಯ ಮಾಡುತ್ತದೋ ಅದಕ್ಕೆ ಹೆಣ್ಣು ಮರುಳಾಗುತ್ತದೆ.
ಸ್ವರ್ಗದ ಹಕ್ಕಿಗಳಲ್ಲೆಲ್ಲ ಅತ್ಯಂತ ವರ್ಣರಂಜಿತವಾದ ಹಕ್ಕಿಯೆಂದರೆ ಕಿಂಗ್ ಆಫ್ ಸ್ಯಾಕ್ಸೋನಿ ಬರ್ಡ್ ಆಫ್ ಪ್ಯಾರಡೈಸ್. ಇದರ ತಲೆಯಿಂದ ಇದರ ಹೆಸರಿನಷ್ಟೇ ಉದ್ದವಾದ ಎರಡು ಉದ್ದನೆಯ ಬಾಲಗಳು ಇವೆ. ಕಪ್ಪು ಮತ್ತು ಹಳದಿ ಬಣ್ಣದ ಗರಿಗಳಿಂದ ಅಲಂಕೃತವಾದ ಗಂಡಿಗೆ ಹೋಲಿಸಿದರೆ ಹೆಣ್ಣಿನದು ತೀರಾ ಸಾಧಾರಣ ಬಣ್ಣ. ಜೊತೆಗೆ ಅದಕ್ಕೆ ಉದ್ದನೆಯ ಬಾಲದ ಅಲಂಕಾರವೂ ಇರುವುದಿಲ್ಲ. ಈ ಹಕ್ಕಿಯನ್ನು 1894ರ ಡಿಸೆಂಬರ್ ನಲ್ಲಿ ಅಡಾಲ್ಫ್ ಬರ್ನಾರ್ಡ್ ಮೇಯರ್ ಎಂಬಾತ ಗುರುತಿಸಿ ಹೆಸರಿಸಿದ. “ಕಿಂಗ್ ಆಫ್ ಸ್ಯಾಕ್ಸೋನಿ” ಎಂಬ ಹೆಸರು ಬರಲು ಕಾರಣ ಆಲ್ಬರ್ಟ್ ಎಂಬ ಸ್ಯಾಕ್ಸೋನಿಯ ರಾಜ. ಇನ್ನೊಂದು ಸ್ವರ್ಗದ ಹಕ್ಕಿಗೆ ಆತನ ಪತ್ನಿಯ ಹೆಸರನ್ನೇ ಇಡಲಾಗಿದೆ. ಕ್ವೀನ್ ಕ್ಯಾರೋಲಾಸ್ ಪ್ಯಾರೋಟಿಯಾ ಎಂಬ ಹೆಸರಿನ ಈ ಹಕ್ಕಿ ಕೂಡ ಅಷ್ಟೇ ಸುಂದರವಾದ ಹಕ್ಕಿ. ಇದರ ತಲೆಯಿಂದ ಸುಂದರವಾದ ಜುಟ್ಟಿನಂಥ ರಚನೆ ಇದೆ.
ಪ್ಯಾರಡೈಸ್ ಕ್ರೋ ಎಂಬ ಇನ್ನೊಂದು ಜಾತಿಯ ಹಕ್ಕಿ ಇದೆ. ಅದು ನೋಡಲು ಕಾಗೆಯಂತಿರುವುದರಿಂದ ಈ ಹೆಸರು ಬಂದಿದೆ. ಆದರೆ ದಾಳಿಂಬೆ ಬೀಜದಂತೆ ಮಿನುಗುವ ಕೆಂಪು ಕಣ್ಣುಗಳು ಮತ್ತು ಮೈಮೇಲೆ ಬಿಸಿಲು ಬಿದ್ದಕೂಡಲೇ ಕನ್ನಡಿಯಂತೆ ಹೊಳೆಯುವ ಗರಿಗಳಿಂದಾಗಿ ಇದನ್ನು ಕಾಗೆಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಮೈತುಂಬ ಇರುವುದೊಂದೇ ಕಪ್ಪು ಬಣ್ಣವಾದರೂ ಸ್ವರ್ಗದ ಕಾಗೆ ನಮ್ಮ ಸಾಮಾನ್ಯ ಕಾಗೆಗಳನ್ನು ಸೌಂದರ್ಯದ ದೃಷ್ಟಿಯಲ್ಲಿ ಮೀರಿಸುತ್ತದೆ. ಏಕೆಂದರೆ ಯಾವ ಕಾಗೆಯ ಗರಿಗಳೂ ಸಹ ಬಿಸಿಲಿನಲ್ಲಿ ಹೊಳೆಯುವುದಿಲ್ಲ.
2009ರಲ್ಲಿ ಇತ್ತೀಚೆಗಿನ ಸುಧಾರಿತ ಜೀವವಿಜ್ಞಾನದ ಸಂಶೋಧನೆಗಳಿಂದ ಈ ಹಕ್ಕಿಗಳ ವಿಕಾಸದ ಕುರಿತು ಅನೇಕ ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಈ ಹಕ್ಕಿಗಳ ಕುಟುಂಬ ಇಪ್ಪತ್ನಾಲ್ಕು ದಶಲಕ್ಷ ವರ್ಷಗಳ ಹಿಂದೆ ವಿಕಾಸವಾಯಿತೆಂದು ಸಂಶೋಧನೆಗಳು ತಿಳಿಸುತ್ತವೆ. ಇಂದು ಅವುಗಳಿಗೆ ಮಾನವರಿಂದ ತೊಂದರೆ ಆರಂಭವಾಗಿದ್ದರೂ ಕೆಲವು ನೂರು ವರ್ಷಗಳ ಹಿಂದಿನವರೆಗೂ ಯಾವುದೇ ಶತ್ರುಗಳ ಉಪಟಳವೂ ಇಲ್ಲದ ದ್ವೀಪಗಳಲ್ಲಿ ಅವು ನಿರಾಳವಾಗಿ ಬದುಕಿದ್ದವು. ಆದ್ದರಿಂದಲೇ ಅವು ವಿಸ್ತಾರವಾದ ಕುಟುಂಬದಲ್ಲಿ ಹಲವು ಪ್ರಭೇದಗಳಾಗಿ ಕವಲೊಡೆದು ವಿಕಾಸಗೊಂಡವು.
ಈ ಹಕ್ಕಿಗಳ ಪ್ರಧಾನವಾದ ಆಹಾರ ಹಣ್ಣುಗಳು. ಜೊತೆಗೆ ಆಗಾಗ ಚಿಕ್ಕಪುಟ್ಟ ಕೀಟ, ಜೇಡಗಳನ್ನು ಸಹ ತಿನ್ನುವುದೂ ಇದೆ. ಆದರೆ ಅವುಗಳ ಕೊಕ್ಕುಗಳನ್ನು ಅಭ್ಯಸಿಸಿದಾಗ ಅವು ಮುಖ್ಯವಾಗಿ ಫಲಾಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಕಾಸ ಹೊಂದಿರುವುದು ಗೊತ್ತಾಗುತ್ತದೆ. ಮಳೆಕಾಡುಗಳಲ್ಲಿ ಧಾರಾಳವಾಗಿ ಹಣ್ಣಿನ ಮರಗಳಿರುವುದರಿಂದ ಈ ಹಕ್ಕಿಗಳಿಗೆ ಆಹಾರವನ್ನು ಪಡೆಯುವುದು ಸಮಸ್ಯೆಯೇ ಅಲ್ಲ. ಆದರೆ ಹಾರಾಟವೆಂಬುದು ಅತಿ ಹೆಚ್ಚಿನ ಶಕ್ತಿಯನ್ನು ಬೇಡುವ ಕ್ರಿಯೆಯಾದ್ದರಿಂದ ಹಕ್ಕಿಗಳಿಗೆ ತಮ್ಮದೇ ಗಾತ್ರದ ಸಸ್ತನಿಗಳಿಗಿಂತ ಹೆಚ್ಚಿನ ಆಹಾರ ಬೇಕಾಗುತ್ತದೆ. ಜೊತೆಗೆ ಸ್ವರ್ಗದ ಹಕ್ಕಿಗಳು ತಮ್ಮ ಸಂಗಾತಿಗಳನ್ನು ಒಲಿಸಿಕೊಳ್ಳಲು ಪ್ರಣಯನೃತ್ಯ ಮಾಡುವುದರಿಂದ ಅವುಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿದೆ. ಆದ್ದರಿಂದಲೇ ಹೆಚ್ಚು ಆಹಾರವನ್ನೂ ಸಹ ಸೇವಿಸುತ್ತವೆ.
ಪಾಪುವಾ ನ್ಯೂಗಿನಿ ದೇಶದ ಸಂಸ್ಕೃತಿಯಲ್ಲಿ ಈ ಹಕ್ಕಿ ಮಹತ್ವದ ಸ್ಥಾನ ಪಡೆದಿದೆ. ದೇಶದ ರಾಷ್ಟ್ರಧ್ವಜದಲ್ಲೂ ಈ ಹಕ್ಕಿಯ ಚಿತ್ರವಿರುವುದು ಅದಕ್ಕೆ ನೀಡಿರುವ ಮಹತ್ವವನ್ನು ತೋರಿಸುತ್ತದೆ. ಆದರೆ ಈ ಹಕ್ಕಿಗಳ ಇಂದಿನ ಸ್ಥಿತಿಗತಿ ಮಾತ್ರ ಕಣ್ಣೀರು ತರಿಸುವಂತಿರುವುದು ದುರದೃಷ್ಟಕರ. ಇದರ ಅಪ್ರತಿಮ ಸೌಂದರ್ಯವೇ ಇದಕ್ಕೆ ಮುಳುವಾಗಿದೆ. ಜನರಿಗೆ ಇದರ ಸುಂದರ ಗರಿಗಳನ್ನು ತಮ್ಮ ಟೋಪಿಗೆ ಸಿಕ್ಕಿಸಿಕೊಂಡು ತಿರುಗುವ ಖಯಾಲಿ. ಮತ್ತೆ ಕೆಲವರಿಗೆ ಈ ಸುಂದರ ಪಕ್ಷಿಗಳನ್ನು ಹಿಡಿದು ಪಂಜರದಲ್ಲಿ ಕೂಡಿಹಾಕಿ ಅಂದಚಂದ ನೋಡುವ ವಿಕೃತ ಆನಂದ. ಆದ್ದರಿಂದ ಇವುಗಳನ್ನು ಅಪಾರ ಸಂಖ್ಯೆಯಲ್ಲಿ ಬೇಟೆಯಾಡಲು ಆರಂಭಿಸಿದರು. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳಲ್ಲಿ ಈ ಹಕ್ಕಿಗಳು ಬೇಟೆಯ ಹಾವಳಿಗೆ ಸಿಲುಕಿ ತೀವ್ರವಾಗಿ ನಲುಗಿದವು. ಜೊತೆಗೆ ಅವುಗಳ ಆವಾಸಸ್ಥಾನವಾದ ಕಾಡುಗಳ ಮೇಲೂ ಮನುಷ್ಯನ ವಕ್ರದೃಷ್ಟಿ ಬಿತ್ತು. ನಗರಗಳ ನಿರ್ಮಾಣಕ್ಕಾಗಿ ಭಾರೀ ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ ನೆಲಸಮ ಮಾಡುವ ಕೆಲಸ ಇಪ್ಪತ್ತನೇ ಶತಮಾನದ ಮಧ್ಯಭಾಗದ ನಂತರ ತೀವ್ರಗತಿಯಲ್ಲಿ ಸಾಗಿತು. ಆದ್ದರಿಂದ ಈ ಸುಂದರ ಪಕ್ಷಿಗಳು ಅವಸಾನದಂಚಿಗೆ ಸರಿದವು. ಅಪಾಯದ ಮುನ್ಸೂಚನೆಯನ್ನು ಮನಗಂಡ ಸರ್ಕಾರ ಇವುಗಳ ಬೇಟೆಯ ಮೇಲೆ ನಿಷೇಧ ಹೇರಿತು. ಆದ್ದರಿಂದ ಇವು ಇಂದು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿದ್ದರೂ ಕಾನೂನಿನ ರಕ್ಷಣೆಯಿಂದ ಕೊಂಚ ನಿರಾಳವಾಗಿ ಉಸಿರಾಡುತ್ತಿವೆ.
ಕೆಲವು ಜಾತಿಯ ಸ್ವರ್ಗದ ಹಕ್ಕಿಗಳು ಪ್ರಣಯಕಾಲದಲ್ಲಿ ಲೆಕ್ ರೀತಿಯ ಪ್ರಣಯನೃತ್ಯ ಮಾಡುತ್ತವೆ. ಲೆಕ್ ರೀತಿಯ ನೃತ್ಯವೆಂದರೆ ಹೆಣ್ಣುಗಳಿರುವ ಜಾಗದಲ್ಲಿ ಅನೇಕ ಗಂಡುಗಳು ಒಟ್ಟಾಗಿ ಬಂದು ತಮ್ಮ ಪ್ರದರ್ಶನವನ್ನು ನೀಡುವುದು. ಹೆಣ್ಣುಗಳು ಅದರಲ್ಲಿ ತಮಗೆ ಇಷ್ಟವಾದ ಒಂದು ಗಂಡನ್ನು ಆರಿಸಿಕೊಳ್ಳುತ್ತವೆ. ಈ ಪ್ರದರ್ಶನವು ಕೇವಲ ನೃತ್ಯವಾಗಿರಬಹುದು ಅಥವಾ ನೃತ್ಯ ಮತ್ತು ಗಾಯನಗಳೆರಡನ್ನೂ ಒಳಗೊಂಡಿರಬಹುದು. ಇದು ಜಾತಿಯಿಂದ ಜಾತಿಗೆ ಬದಲಾಗುತ್ತದೆ. ಈ ಪ್ರದರ್ಶನಕ್ಕೆ ಲೆಕ್ಕಿಂಗ್ ಎಂದೇ ಕರೆಯುತ್ತಾರೆ. ಪ್ರಣಯದ ಬಳಿಕ ಮರವೊಂದರ ಕವಲಿನಲ್ಲಿ ಮೃದುವಾದ ವಸ್ತುಗಳಿಂದ (ಉದಾ: ಮರದ ಎಲೆಗಳು, ಬಳ್ಳಿಗಳು ಇತ್ಯಾದಿ) ಗೂಡು ಕಟ್ಟುತ್ತವೆ. 2-3 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳು ಎರಡರಿಂದ ಮೂರು ವಾರಗಳ ಅವಧಿಯಲ್ಲಿ ಒಡೆದು ಮರಿಗಳು ಹೊರಬರುತ್ತವೆ.
ಅನೇಕ ಜಾತಿಯ ಸ್ವರ್ಗದ ಹಕ್ಕಿಗಳ ಮಧ್ಯೆ ಮಿಲನ ನಡೆದು ಹೈಬ್ರಿಡ್ ಜಾತಿಗಳು ಸಹ ಸೃಷ್ಟಿಯಾಗಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಈ ಬಗ್ಗೆ ಇನ್ನೂ ವಿಸ್ತೃತ ಅಧ್ಯಯನ ಸಾಗಬೇಕಿದೆ. ಹೈಬ್ರಿಡ್ ಜಾತಿಗಳು ಯಾವ್ಯಾವ ಜಾತಿಗಳ ಸಂಕರದಿಂದ ಸೃಷ್ಟಿಯಾಗಿವೆ ಎಂಬ ಬಗೆಗೆ ಅಧ್ಯಯನ ಸಾಗುತ್ತಿದೆ. ಕೆಲವು ಹೈಬ್ರಿಡ್ ಜಾತಿಗಳನ್ನು ಬೇರೆಯೇ ಆದ ಹೊಸ ಜಾತಿಗಳೆಂದು ಪರಿಗಣಿಸಲಾಗಿದೆ. ಜೀವಲೋಕದಲ್ಲಿ ಪ್ರಭೇದಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅತ್ಯಂತ ಸೂಕ್ಷ್ಮವಾದ ಮತ್ತು ಕಷ್ಟದ ಕೆಲಸ. ಕೆಲವನ್ನಂತೂ ಬೇರೆ ಬೇರೆ ಪ್ರಭೇದಗಳೋ ಅಥವಾ ಒಂದೇ ಪ್ರಭೇದದ ಉಪಪ್ರಭೇದಗಳೋ ಎಂದು ವರ್ಗೀಕರಿಸುವುದು ಕಷ್ಟದ ಕೆಲಸ.
ಸ್ವರ್ಗದ ಹಕ್ಕಿಗಳಲ್ಲೇ ಅತಿ ಹೆಚ್ಚಾಗಿ ಬೇಟೆಗಾರರ ಅವಕೃಪೆಗೆ ತುತ್ತಾಗಿ ಅಳಿವಿನಂಚಿಗೆ ತಲುಪಿದ ಹಕ್ಕಿಗಳೆಂದರೆ ಗ್ರೇಟರ್ ಬರ್ಡ್ ಆಫ್ ಪ್ಯಾರಡೈಸ್. ಇದಕ್ಕೆ ಕಾರಣ ಅವುಗಳ ಸುಂದರ ಗರಿಗಳು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಕೆಂಗಂದು ಬಣ್ಣದ ಈ ಹಕ್ಕಿಯ ಬಾಲದ ಗರಿಗಳದ್ದು ಉಜ್ವಲ ಹಳದಿ ಬಣ್ಣ. ಈ ಗರಿಗಳಿಗಾಗಿಯೇ ಅವುಗಳನ್ನು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಹತ್ಯೆ ಮಾಡಲಾಗುತ್ತಿತ್ತು. ಆದ್ದರಿಂದ ಅವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿತ್ತು. ಆದರೆ ಇತ್ತೀಚೆಗೆ ಸಂರಕ್ಷಣಾ ಕ್ರಮಗಳಿಂದ ಈ ಹಕ್ಕಿ ಚೇತರಿಸಿಕೊಳ್ಳುತ್ತಿದೆ.
ಈ ಹಕ್ಕಿಯ ಲ್ಯಾಟಿನ್ ನಾಮಧೇಯ “ಪ್ಯಾರಡೈಸಿಯಾ ಎಪೋಡಾ” ಎಂದಿದೆ. ಎಪೋಡಾ ಎಂದರೆ ಕಾಲಿಲ್ಲದ್ದು ಎಂದು ಅರ್ಥ. ಹಾಗೆಂದ ಮಾತ್ರಕ್ಕೆ ಇದಕ್ಕೆ ಕಾಲಿಲ್ಲವೆಂದು ಭಾವಿಸಬೇಡಿ. ಈ ಹೆಸರನ್ನು ಕೊಟ್ಟವನು ಕ್ಯಾರೋಲಸ್ ಲಿನೇಯಸ್. ಏಕೆಂದರೆ ಮೊದಲ ಬಾರಿಗೆ ಇದರ ಚರ್ಮವನ್ನು ತಂದಾಗ ಅದಕ್ಕೆ ಕಾಲಿರಲಿಲ್ಲವಂತೆ. ಆದ್ದರಿಂದ ಇವುಗಳಿಗೆ ಕಾಲುಗಳೇ ಇರುವುದಿಲ್ಲ, ರೆಕ್ಕೆಗಳ ಸಹಾಯದಿಂದ ಇವು ಸಾಯುವವರೆಗೆ ಆಕಾಶದಲ್ಲಿ ತೇಲುತ್ತಲೇ ಇರುತ್ತವೆ ಎಂಬ ಪ್ರತೀತಿ ಹುಟ್ಟಿಕೊಂಡಿತು. ಆ ಪ್ರತೀತಿಯಿಂದಾಗಿಯೇ ಈ ಹೆಸರು ಬಂದಿತು. ಮುಂದೆ ಇದಕ್ಕೆ ಕಾಲುಗಳಿವೆ ಎಂದು ಗೊತ್ತಾದರೂ ಹೆಸರು ಮಾತ್ರ ಹಾಗೆಯೇ ಉಳಿಯಿತು.
ಸರ್ ವಿಲಿಯಂ ಇಂಗ್ರಾಮ್ ಎಂಬಾತ ಈ ಹಕ್ಕಿಗಳು ಬೇಟೆಯಿಂದಾಗಿ ವಿನಾಶದಂಚಿಗೆ ತಲುಪುತ್ತಿರುವುದನ್ನು ಕಂಡು ಆತಂಕಗೊಂಡು 1909ರಿಂದ 1912ರ ನಡುವೆ ಕೆಲವು ಹಕ್ಕಿಗಳನ್ನು ಹಿಡಿದು ಕೆರೆಬಿಯನ್ ದ್ವೀಪಗಳಲ್ಲೊಂದಾದ ಲಿಟ್ಲ್ ಟೊಬ್ಯಾಗೋದಲ್ಲಿ ಬಿಟ್ಟ. ಮನುಷ್ಯರ ಹಾವಳಿ ಅಲ್ಲಿ ಅಷ್ಟಾಗಿ ಇರದ ಕಾರಣ ಈ ಹಕ್ಕಿಗಳು ಅಲ್ಲಿ ಕ್ಷೇಮವಾಗಿರಬಹುದೆಂದು ಅವನ ತರ್ಕವಾಗಿತ್ತು. 1966ರ ತನಕ ಇವು ಅಲ್ಲಿ ಬದುಕಿದ್ದ ನಿದರ್ಶನಗಳಿವೆ. ಆದರೆ ಆ ನಂತರ ಇದುವರೆಗೆ ಆ ದ್ವೀಪದಲ್ಲಿ ಈ ಜಾತಿಯ ಒಂದೇ ಒಂದು ಹಕ್ಕಿಯೂ ಕಾಣಸಿಕ್ಕಿಲ್ಲ. ಆದ್ದರಿಂದ ಈ ದ್ವೀಪದಲ್ಲಿ ಅವು ನಾಮಾವಶೇಷಗೊಂಡಿವೆ ಎಂದೇ ನಂಬಲಾಗಿದೆ. ಎಷ್ಟೋ ಕೋಟಿ ವರ್ಷಗಳಿಂದ ಒಂದು ನಿರ್ದಿಷ್ಟ ಸ್ಥಳದಲ್ಲಿ ಬದುಕಿ ಅಲ್ಲಿನ ಪರಿಸರಕ್ಕೆ ಜೀವಿಗಳು ಹೇಗೆ ಒಗ್ಗಿಹೋಗಿರುತ್ತವೆ ಎಂದರೆ ಬೇರೊಂದು ಪ್ರದೇಶದಲ್ಲಿ ಹೊಂದಿಕೊಂಡು ಬದುಕುವುದು ಅವಕ್ಕೆ ಸಾಧ್ಯವಾಗುವುದೇ ಇಲ್ಲ. ಮಾರಿಷಸ್ ದ್ವೀಪದ ಡೋಡೋಗಳನ್ನೂ ಸಹ ಇದೇ ರೀತಿ ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಸಲು ಸಾಕಷ್ಟು ಪ್ರಯತ್ನಿಸಲಾಯಿತಾದರೂ ಅದು ಯಶಸ್ಸು ಕಾಣಲಿಲ್ಲ. ಆದ್ದರಿಂದ ಇಂಗ್ರಾಮ್ ನ ಉದ್ದೇಶ ಒಳ್ಳೆಯದೇ ಆಗಿದ್ದರೂ ಅದು ಸಫಲವಾಗಲಿಲ್ಲ.
ದಕ್ಷಿಣದ ಆಕಾಶದಲ್ಲಿ ಏಪಸ್ ಎಂಬ ನಕ್ಷತ್ರಪುಂಜವೊಂದಿದೆ. ಈ ನಕ್ಷತ್ರಪುಂಜವು ಈ ಹಕ್ಕಿಯನ್ನು ಪ್ರತಿನಿಧಿಸುತ್ತದೆ. ಇಂಡೋನೇಷ್ಯಾದ ಸೈನ್ಯದಲ್ಲಿ ಒಂದು ವಿಭಾಗಕ್ಕೆ “ಸೆಂಡರ್ ವಾಸಿ” (Cenderwasih) ಎಂಬ ಹೆಸರೇ ಇದೆ. ಈ ಪದದ ಅರ್ಥ ಬೇರೇನೂ ಅಲ್ಲ, ಈ ಹಕ್ಕಿಗೆ ಸ್ಥಳೀಯ ಭಾಷೆಯಲ್ಲಿ ಇರುವ ಹೆಸರು. ಜೊತೆಗೆ ಈ ಮೊದಲೇ ತಿಳಿಸಿದಂತೆ ಪಾಪುವಾ ನ್ಯೂಗಿನಿಯ ಧ್ವಜದಲ್ಲಿ ಈ ಪಕ್ಷಿಯನ್ನು ಚಿತ್ರಿಸಲಾಗಿದೆ. ಈ ಎಲ್ಲ ಅಂಶಗಳು ಈ ಹಕ್ಕಿಯನ್ನು ಈ ದೇಶಗಳಲ್ಲಿ ಎಷ್ಟೊಂದು ಗೌರವಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದರೆ ಈ ಹಕ್ಕಿಯ ಸಂಕಷ್ಟವೇನೂ ಇದರಿಂದ ಪರಿಹಾರವಾಗಲಿಲ್ಲ ಎಂಬುದೂ ಅಷ್ಟೇ ಕಠೋರವಾದ ಸತ್ಯ.
ಆದರೆ ಪ್ರತಿಯೊಂದು ಕಾರ್ಮೋಡಕ್ಕೂ ಒಂದು ಬೆಳ್ಳಿಯಂಚು ಇರುತ್ತದೆ ಎಂಬ ಮಾತಿನಂತೆ ಇಷ್ಟೆಲ್ಲ ನಿರಾಶೆಗಳ ನಡುವೆಯೂ ಭರವಸೆಯ ಕಿರಣಗಳು ಕಾಣಿಸಿಕೊಂಡಿವೆ. ಕಠಿಣವಾದ ಕಾನೂನುಗಳಿಂದ ನ್ಯೂಗಿನಿ ಸರ್ಕಾರ ಇವುಗಳ ಸಂರಕ್ಷಣೆಯಲ್ಲಿ ಸಾಕಷ್ಟು ಯಶಸ್ಸನ್ನೂ ಪಡೆದಿದೆ. ಒಂದೊಮ್ಮೆ ಅಪಾಯಕಾರಿಯಾಗಿ ಇಳಿಮುಖವಾಗಿದ್ದ ಇವುಗಳ ಸಂಖ್ಯೆ ಇಂದು ನಿಧಾನವಾಗಿಯಾದರೂ ಏರುತ್ತಿದೆ. ಇನ್ನೂ ಅವುಗಳನ್ನು ಅಳಿವಿನಂಚಿನಲ್ಲಿರುವ ಜೀವಿಗಳು ಎಂದೇ ವರ್ಗೀಕರಿಸಲಾಗಿದ್ದರೂ ಸಾಕಷ್ಟು ಚೇತರಿಸಿಕೊಂಡಿರುವುದಂತೂ ನಿಜ. ಸರ್ಕಾರಗಳ ಸತತ ಪ್ರಯತ್ನದ ಫಲವಾಗಿ ನಮ್ಮ ಮುಂದಿನ ತಲೆಮಾರಿಗೆ ಈ ವಿಸ್ಮಯದ ಹಕ್ಕಿಗಳನ್ನು ಉಳಿಸಿಕೊಳ್ಳಬಲ್ಲೆವೆಂಬ ಆಶಾಭಾವನೆ ಎಲ್ಲರಲ್ಲಿ ಮೂಡಿದೆ. ಸ್ವರ್ಗದ ಹಕ್ಕಿಗಳು ಭೂಮಿಯ ಮೇಲೆ ಇನ್ನೂ ಬಹುಕಾಲ ಬದುಕಲಿ ಎಂಬುದೇ ಪರಿಸರ ಪ್ರೇಮಿಗಳೆಲ್ಲರ ಆಶಯ.


Thursday 6 October 2016

ಸೂರಕ್ಕಿಗಳ ಬೆಡಗಿನ ಲೋಕದಲ್ಲೊಂದು ಸುತ್ತು

ಸೂರಕ್ಕಿಗಳ ಬೆಡಗಿನ ಲೋಕದಲ್ಲೊಂದು ಸುತ್ತು
ಸೂರಕ್ಕಿಗಳು ಅಥವಾ ಹೂಕುಡುಕಗಳನ್ನು ನೀವು ಎಂದಾದರೂ ನೋಡಿದ್ದರೆ ನಿಮಗೆ ಅವುಗಳಲ್ಲಿ ಎರಡು ಅಂಶಗಳು ಬಹಳ ಗಮನ ಸೆಳೆಯುತ್ತವೆ. ಒಂದು ಅವುಗಳ ಅಸಾಧಾರಣ ಚುರುಕುತನ, ಇನ್ನೊಂದು ಗಾತ್ರದಲ್ಲಿ ಪುಟ್ಟದಾಗಿದ್ದರೂ ಕಣ್ಣು ಕೋರೈಸುವಂಥ ಅವುಗಳ ವರ್ಣವೈವಿಧ್ಯ. ಗುಬ್ಬಚ್ಚಿಗಳ ಅರ್ಧದಷ್ಟೇ ದೊಡ್ಡದಿರುವ ಈ ಹಕ್ಕಿಗಳು ಕೂತಲ್ಲಿ ಒಂದು ಕ್ಷಣ ಕೂರುವುದಿಲ್ಲ. ನಮ್ಮ ಮನೆಯ ಎದುರಿಗಂತೂ ರತ್ನಗಂಧಿ, ದಾಸವಾಳ, ಮಲ್ಲಿಗೆ, ಹೀಗೆ ಒಂದಲ್ಲ ಒಂದು ಜಾತಿಯ ಹೂವು ಸದಾ ಇದ್ದೇ ಇರುವುದರಿಂದ ಸೂರಕ್ಕಿಗಳನ್ನು ನಮ್ಮ ಮನೆಯ ಎದುರಿಗೆ ಪ್ರತಿನಿತ್ಯ ನೋಡಬಹುದು. ಚಿಕ್ ಚಿಕ್ ಚಿಂವ್ ಚಿಂವ್ ಎಂದು ಉಲ್ಲಾಸದಿಂದ ಹಾಡುತ್ತ ಹೂವಿನಿಂದ ಹೂವಿಗೆ ಹಾರುತ್ತ ಅವು ಮಕರಂದ ಹೀರುವ ಪರಿಯನ್ನು ನೋಡುವುದೇ ಒಂದು ಸೊಗಸು. ಸೂರಕ್ಕಿಗಳಲ್ಲಿ ಸಹ ಅನೇಕ ಪ್ರಭೇದಗಳಿವೆ. ಅವುಗಳನ್ನು ಹಾರುವ ರತ್ನಗಳೆಂದೇ ಕರೆಯುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲವೆಂದು ನಿಮಗೆ ಅವುಗಳನ್ನು ನೋಡಿದ ಕೂಡಲೇ ಅನಿಸುತ್ತದೆ. ಅಷ್ಟೊಂದು ಅದ್ಭುತವಾದ ವರ್ಣವೈವಿಧ್ಯ ಅವುಗಳದ್ದು. ನೆರಳಿನಲ್ಲಿದ್ದಾಗ ಸಾಧಾರಣವಾಗಿಯೇ ಕಾಣುವ ಇವುಗಳ ಬಣ್ಣಗಳು ಸೂರ್ಯನ ಬಿಸಿಲು ಬಿದ್ದಕೂಡಲೇ ವಜ್ರಗಳಂತೆಯೇ ಹೊಳೆಯುತ್ತವೆ. ಏಕೆಂದರೆ ಇವುಗಳ ವರ್ಣವು ಸಸ್ತನಿ ಪ್ರಾಣಿಗಳಂಥ ಸಾಧಾರಣ ಬಣ್ಣವಲ್ಲ. ಸಸ್ತನಿ ಪ್ರಾಣಿಗಳ ಮೈಬಣ್ಣವಾದರೋ ಬದಲಾಗುವುದಿಲ್ಲ ಮತ್ತು ಅದು ಎಷ್ಟೇ ಉಜ್ವಲ ವರ್ಣವಾದರೂ ಪಕ್ಷಿಗಳಂತೆ ಕಣ್ಣುಕುಕ್ಕುವ ವರ್ಣಗಳಲ್ಲ. ಆದರೆ ಸೂರಕ್ಕಿಗಳ ಗರಿಗಳು ಬೆಳಕನ್ನು ಪೃಥಕ್ಕರಿಸುತ್ತ ಸೂರ್ಯನ ಬಿಸಿಲು ಒಂದೊಂದು ಕೋನದಲ್ಲಿ ಬಿದ್ದಾಗಲೂ ಒಂದೊಂದು ವರ್ಣದಿಂದ ಹೊಳೆಯುತ್ತವೆ. ಇಂಥದೇ ಗರಿಗಳು ಬೇರೆ ಕೆಲವು ಹಕ್ಕಿಗಳಲ್ಲೂ ಇದೆ. ಆದರೆ ನಾವು ದಿನನಿತ್ಯ ನೋಡುವ ಸಾಮಾನ್ಯ ಹಕ್ಕಿಗಳ ಪೈಕಿ ಇಂಥ ವರ್ಣವೈವಿಧ್ಯದಲ್ಲಿ ಸೂರಕ್ಕಿಗಳೇ ಅಗ್ರಗಣ್ಯರು.
ಅವುಗಳ ಕೊಕ್ಕನ್ನು ನೋಡಿದೊಡನೆಯೇ ತಿಳಿಯುತ್ತದೆ ಅದು ಕೇವಲ ಮಕರಂದ ಹೀರಲೆಂದೇ ವಿಶೇಷವಾಗಿ ಮಾರ್ಪಾಡಾಗಿರುವ ಕೊಕ್ಕುಗಳೆಂದು. ದುರ್ಬಲವಾಗಿ ಕಾಣುವ ಆ ಕೊಕ್ಕುಗಳಿಂದ ಯಾವುದೇ ಘನವಾದ ಬೀಜ, ಹಣ್ಣು ಅಥವಾ ಕಾಯಿ ಇತ್ಯಾದಿಗಳನ್ನಾಗಲೀ ದೊಡ್ಡದೊಡ್ಡ ಹುಳುಗಳನ್ನಾಗಲೀ ಹಿಡಿದು ತಿನ್ನಲು ಸಾಧ್ಯವೇ ಇಲ್ಲ. ಕತ್ತಿಯಂತೆ ಬಾಗಿದ, ಆದರೆ ಅಷ್ಟೇ ದೃಢವಾದ ಈ ಕೊಕ್ಕುಗಳು ಹೂವಿನ ಮಕರಂದವನ್ನು ಹೀರುವ ಕಾರ್ಯಕ್ಕೆಂದೇ ವಿಶೇಷವಾಗಿ ರಚಿತವಾಗಿವೆ. ಮಕರಂದವೇ ಈ ಕುಟುಂಬದ ಎಲ್ಲ ಹಕ್ಕಿಗಳ ಪ್ರಧಾನ ಆಹಾರ. ಅದಕ್ಕೇ ಇವುಗಳನ್ನು ನೆಕ್ಟರಿನಿಡೇ ಎಂಬ ಕುಟುಂಬದಲ್ಲೇ ವರ್ಗೀಕರಿಸಿದ್ದಾರೆ. ಸಾಮಾನ್ಯವಾಗಿ ಇವು ಮಕರಂದ ಹೀರುವಾಗಲೂ ಕೂರದೆ ಹೂವುಗಳ ಎದುರು ಶರವೇಗದಲ್ಲಿ ರೆಕ್ಕೆ ಬಡಿಯುತ್ತ ಹಾರುತ್ತಲೇ ಮಕರಂದ ಹೀರುವ ಕಲೆಯನ್ನೂ ಕರಗತ ಮಾಡಿಕೊಂಡಿವೆ. ಆದರೆ ಅವೇನೂ ಝೇಂಕಾರದ ಹಕ್ಕಿಗಳಂತೆ ತೀರಾ ದುರ್ಬಲವಾದ ಕಾಲುಗಳನ್ನು ಹೊಂದಿದ ಹಕ್ಕಿಗಳೇನೂ ಅಲ್ಲ. ಅಗತ್ಯಬಿದ್ದರೆ ಮರದ ಕೊಂಬೆಗಳ ಮೇಲೆ ಆರಾಮವಾಗಿಯೇ ಕೂರಬಲ್ಲದು.
ಸಾಮಾನ್ಯವಾಗಿ ಪಕ್ಷಿಜಗತ್ತಿನಲ್ಲಿ ಗಂಡುಹಕ್ಕಿಗಳಿಗೇ ಉಜ್ವಲ ವರ್ಣದ ಗರಿಪುಕ್ಕಗಳೆಲ್ಲ ಮೀಸಲು. ಹೆಣ್ಣುಗಳು ತೀರಾ ಸೀದಾಸಾದಾ ಉಡುಗೆಯಲ್ಲಿರುತ್ತವೆ. ಅದ್ಭುತ ಸೌಂದರ್ಯಕ್ಕೆ ಹೆಸರಾದ ಪಕ್ಷಿಗಳಲ್ಲೆಲ್ಲ ಇದೇ ಕ್ರಮವನ್ನು ಕಾಣಬಹುದು. ಸೂರಕ್ಕಿಗಳೂ ಇದಕ್ಕೆ ಹೊರತಲ್ಲ. ಅವುಗಳ ಬಗೆಗೆ ಗೊತ್ತಿಲ್ಲದ ಯಾರಾದರೂ ಗಂಡು ಮತ್ತು ಹೆಣ್ಣುಗಳನ್ನು ಒಟ್ಟಾಗಿ ನೋಡಿದರೆ ಎರಡೂ ಬೇರೆಯೇ ಜಾತಿಗೆ ಸೇರಿದ ಹಕ್ಕಿಗಳೆಂದು ಭಾವಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಈ ಕುಟುಂಬದ ಎಲ್ಲ ಸದಸ್ಯರಲ್ಲೂ ಗಂಡು ಮತ್ತು ಹೆಣ್ಣುಗಳ ನಡುವೆ ಇದೇ ರೀತಿಯ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು. ಗಂಡುಗಳೆಲ್ಲ ಕಣ್ಣುಕುಕ್ಕುವಂಥ ಕೆಂಪು, ಹಸಿರು, ನೇರಳೆ, ಕಪ್ಪು, ನೀಲಿ ಇತ್ಯಾದಿ ಮಿರಮಿರನೆ ಮಿಂಚುವ ಬಣ್ಣಗಳನ್ನು ಪಡೆದಿದ್ದರೆ ಹೆಣ್ಣು ಸಾಧಾರಣವಾಗಿ ಬೂದು ಅಥವಾ ಹಳದಿ ಬಣ್ಣ ಹೊಂದಿರುತ್ತವೆ.
ನಾನು ಈ ಹಕ್ಕಿಗಳನ್ನು ಮೊದಲಿನಿಂದಲೂ ಗಮನಿಸುತ್ತ ಬಂದಿದ್ದೆನಾದರೂ ಅವುಗಳನ್ನು ಹೆಚ್ಚು ಆಸಕ್ತಿವಹಿಸಿ ನೋಡಲಾರಂಬಿಸಿದ್ದು 2003ರ ಜೂನ್-ಜುಲೈನಲ್ಲಿ ಎನ್ನಬಹುದು. ಏಕೆಂದರೆ ಆ ಸಂದರ್ಭದಲ್ಲೇ ಅವು ನಮ್ಮ ಮನೆಯ ಎದುರು ಬೆಳೆದಿದ್ದ ಹುಣಸೆ ಮರದಲ್ಲಿ ಗೂಡು ಕಟ್ಟಲು ನಿರ್ಧರಿಸಿದವು. ಜೂನ್ ಜುಲೈ ಎಂದರೆ ನಮ್ಮಲ್ಲಿ ಮಳೆಗಾಲದ ಆರಂಭವೆಂದೇ ಅರ್ಥ. ಅದೊಂದು ದಿನ ಮಾಮೂಲಿನಂತೆ ಮನೆಯ ಎದುರು ಕುಳಿತಿದ್ದ ನನಗೆ ಹುಣಸೆ ಮರದ ಬಳಿ ಎರಡು ಸೂರಕ್ಕಿಗಳ ಚಟುವಟಿಕೆ ನೋಡಿ ಆಶ್ಚರ್ಯವಾಯಿತು. ಏಕೆಂದರೆ ಹೂವುಗಳೇ ಇಲ್ಲದ ಆ ಮರದಲ್ಲಿ ಇವಕ್ಕೇನು ಕೆಲಸ ಎಂದು ನೋಡಿದರೆ ಅವು ಆಗಲೇ ಗೂಡು ಕಟ್ಟುವ ತಯಾರಿಯಲ್ಲಿದ್ದವು. ನಾನು ನೋಡುವಾಗ ಅದೇನೂ ಗೂಡೆಂದು ಹೇಳುವಂತಿರಲಿಲ್ಲ. ಸಡಿಲವಾಗಿ ಕೆಲವು ಕಸಗಳನ್ನು ತಂದು ಗಿಡದ ಕೊಂಬೆಗೆ ಅಂಟಿಸಿದಂತಿತ್ತು. ಆದರೆ ಎರಡು ಮೂರು ದಿನಗಳಲ್ಲೇ ಅವು ಅಲ್ಲಿ ಗೂಡು ಕಟ್ಟುತ್ತಿವೆಯೆಂದು ನನಗೆ ಖಚಿತವಾಯಿತು. ನಮಗೆ ಎಲ್ಲಿಲ್ಲದ ಸಂಭ್ರಮ. ಪುಟ್ಟ ಹಕ್ಕಿಯೊಂದರ ಬಾಣಂತನ ಮಾಡಿ ಕಳುಹಿಸುವ ಉತ್ಸಾಹದಲ್ಲಿ ದಿನವೂ ಮರವನ್ನೇ ನೋಡುತ್ತಿದ್ದೆವು. ಆದರೆ ನಮ್ಮ ಎಣಿಕೆ ಒಂದಾಗಿದ್ದರೆ ಆಗಿದ್ದೇ ಮತ್ತೊಂದು. ಮಳೆ ದಿನದಿನಕ್ಕೆ ಹೆಚ್ಚುತ್ತಲೇ ಹೋಯಿತು. ಹಕ್ಕಿಗಳಿಗೆ ಏನನ್ನಿಸಿತೋ ಗೊತ್ತಿಲ್ಲ, ಅವು ಗೂಡು ಕಟ್ಟುವ ಕಾರ್ಯವನ್ನು ಮುಂದುವರೆಸಲೇ ಇಲ್ಲ. ನಮಗೆ ಬೇಸರವಾದರೂ ಅವು ಬೇರೆಲ್ಲೋ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಮಾಡಿಕೊಂಡು ಹೋಗಿರುತ್ತವೆ ಎಂದುಕೊಂಡು ನಮಗೆ ನಾವೇ ಸಮಾಧಾನ ಹೇಳಿಕೊಂಡೆವು.
ಮರುವರ್ಷವೂ ಈ ಜೋಡಿಹಕ್ಕಿಗಳ ಆಗಮನವಾಯಿತು. ಈ ಬಾರಿ ಅವು ಮಳೆಗಾಲ ಮುಗಿದಮೇಲೆ ಆಗಮಿಸಿದವು. ಕಳೆದ ಬಾರಿಯ ನೆನಪು ಇದ್ದ ನಮಗೆ ಈ ಸಲವಾದರೂ ಅವು ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡಿಯೇ ಹೋಗಲಿ ಎಂದು ಆಸೆ. ಮನೆಯ ಜಗುಲಿಯ ಮೇಲೆ ಕುಳಿತರೆ ನಮ್ಮ ಕಣ್ಣಿಗೇ ಕಾಣುವಂತಿದ್ದ ಹುಣಸೆ ಮರವನ್ನೇ ಅವು ಗೂಡು ಕಟ್ಟಲು ಆರಿಸಿಕೊಂಡಿದ್ದವು. ಬಹುಶಃ ಮನುಷ್ಯರ ಸಮೀಪದಲ್ಲೇ ಇದ್ದರೆ ಬೇರೆ ಜೀವಿಗಳ ಕಾಟ ಇರುವುದಿಲ್ಲ ಎಂಬ ಕಾರಣಕ್ಕಿರಬಹುದು. ನಮ್ಮ ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ನಾವು ಪ್ರತಿನಿತ್ಯ ಮನೆಯಂಗಳದಲ್ಲೇ ಕ್ರಿಕೆಟ್, ವಾಲಿಬಾಲ್ ಇತ್ಯಾದಿ ಆಟಗಳನ್ನು ಆಡುತ್ತಿದ್ದೆವು. ಅವು ಗೂಡು ಕಟ್ಟತೊಡಗಿಂತೆಯೇ ಎಲ್ಲ ಆಟಗಳಿಗೂ ಕೆಲದಿನಗಳಮಟ್ಟಿಗೆ ವಿದಾಯ ಹೇಳಿದೆವು. ಏಕೆಂದರೆ ನಾವು ಆಡುವಾಗ ಎಷ್ಟೇ ಎಚ್ಚರವಹಿಸಿದ್ದರೂ ಕೆಲವು ಚೆಂಡುಗಳು ಮರಕ್ಕೆ ತಾಗಿಯೇ ತಾಗುತ್ತಿದ್ದವು. ಆದ್ದರಿಂದ ಗೂಡಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಾವು ಅಲ್ಲಿ ಆಟ ಆಡುವುದನ್ನೇ ನಿಲ್ಲಿಸಿದೆವು. ಪ್ರತಿದಿನವೂ ಗೂಡನ್ನು ನೋಡುವುದೇ ನಮಗೊಂದು ಸೊಗಸು. ದಿನೇದಿನೇ ದೊಡ್ಡದಾಗುತ್ತ ಮೊದಲಿಗೆ ಕೇವಲ ಕಸದಂತೆ ಕಾಣುತ್ತಿದ್ದ ಅದು ಗೂಡಿನ ರೂಪ ತಳೆಯುತ್ತಿದ್ದಂತೆ ನಮ್ಮ ಮನಸ್ಸಿನಲ್ಲೂ ನೂರಾರು ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ಹಾರಾಡತೊಡಗಿದ್ದವು. ಅವು ಮೊಟ್ಟೆಯಿಟ್ಟು ಮರಿ ಹೊರಬರುವ ಸುಸಂದರ್ಭಕ್ಕಾಗಿ ನಾವು ಕಾಯುತ್ತಿದ್ದೆವು.
ಹೀಗಿರುವಾಗ ಒಂದು ದಿನ ದುರ್ಘಟನೆಯೊಂದು ಸಂಭವಿಸಿತು. ನಾನು ಮನೆಯ ಒಳಗಿನಿಂದ ಜಗುಲಿಗೆ ಬರುತ್ತಿರಬೇಕಾದರೆ ಕಾಗೆಯೊಂದು ಹಾರಿಬಂದು ಸೂರಕ್ಕಿ ಗೂಡುಕಟ್ಟುತ್ತಿದ್ದ ಕೊಂಬೆಯ ಮೇಲೆಯೇ ಕುಳಿತಿತು. ಆ ಕೊಂಬೆ ತುಂಬ ದುರ್ಬಲವಾದ ತೆಳುವಾದ ಕೊಂಬೆಯಾಗಿತ್ತು. ಸಾಮಾನ್ಯವಾಗಿ ಸೂರಕ್ಕಿಗಳು ಅಂಥ ದುರ್ಬಲವಾದ ಕೊಂಬೆಯ ಮೇಲೆಯೇ ಗೂಡು ಕಟ್ಟುತ್ತವೆ. ಶತ್ರುಗಳು ಗೂಡನ್ನು ಸಮೀಪಿಸಲು ಹೆದರಲಿ ಎಂಬ ಉದ್ದೇಶದಿಂದ ಅವು ಹಾಗೆ ಮಾಡಿರುತ್ತವೆ. ಆದರೆ ಇಲ್ಲಿ ಅದೇ ಅದಕ್ಕೆ ಮುಳುವಾಯಿತು. ಕಾಗೆ ಕುಳಿತ ಹೊಡೆತಕ್ಕೆ ಟೊಂಗೆಯೇ ಮುರಿದುಹೋಯಿತು. ಇದೆಲ್ಲ ಕ್ಷಣಾರ್ಧದಲ್ಲಿ ನಮ್ಮ ಕಣ್ಣೆದುರೇ ನಡೆದುಹೋಯಿತು. ನನಗೆ ಆಘಾತದಿಂದ ಏನು ಮಾಡಬೇಕೆಂದೇ ಹೊಳೆಯಲಿಲ್ಲ. ಜೋರಾಗಿ ಕೂಗಿ ಕಾಗೆಯನ್ನು ಓಡಿಸಿದ್ದಾಯಿತು. ಆದರೆ ಕಾಗೆ ಅಲ್ಲಿಗೆ ಬಂದು ಕುಳಿತಿದ್ದು ಆಕಸ್ಮಿಕವೇ ಅಥವಾ ಗೂಡನ್ನು ಕಂಡು ಅದನ್ನು ಶೋಧಿಸಲೆಂದೇ ಬಂದುಕುಳಿತಿತೇ? ಈ ಪ್ರಶ್ನೆಗೆ ನಮಗೆ ಉತ್ತರ ಸಿಗಲಿಲ್ಲ. ಆದರೆ ಒಂದು ವಿಷಯವಂತೂ ಸ್ಪಷ್ಟವಾಯಿತು. ಆ ಗೂಡು ಅಲ್ಲಿ ನಾವಂದುಕೊಂಡಷ್ಟು ಸುರಕ್ಷಿತವಲ್ಲ ಎಂದು. ನಾವು ಅಂದೇ ನಿರ್ಧರಿಸಿಬಿಟ್ಟೆವು, ಆ ಹಕ್ಕಿಗಳು ಮರಿಮಾಡಿಕೊಂಡು ಹೋಗುವತನಕ ಒಬ್ಬರಲ್ಲ ಒಬ್ಬರು ಗೂಡಿನ ಬಳಿಯಲ್ಲಿ ಕಾವಲಿರಬೇಕೆಂದು.
ಗೂಡಿನ ಬಳಿ ಹೋಗಿ ಅದಕ್ಕೆ ತೊಂದರೆಯಾಗದಂತೆ ವೀಕ್ಷಿಸಿದೆವು. ಅದೃಷ್ಟವಶಾತ್ ಗೂಡಿದ್ದ ಕೊಂಬೆ ಮುರಿದು ನೇತಾಡುತ್ತಿತ್ತೇ ವಿನಃ ಗೂಡಿಗೆ ಯಾವ ತೊಂದರೆಯೂ ಆಗಿರಲಿಲ್ಲ. ಆದರೆ ಮುರಿದು ಒಂದೇ ದಾರದಂಥ ತೊಗಟೆಯ ಸಹಾಯದಿಂದ ನೇತಾಡುತ್ತಿದ್ದ ಆ ಕೊಂಬೆ ಎಷ್ಟುದಿನ ತಾನೇ ಆ ಗೂಡಿನ ಭಾರವನ್ನು ತಾಳಿಕೊಂಡಿರಬಲ್ಲದು ಎಂಬ ಪ್ರಶ್ನೆಗೆ ನಮ್ಮ ಬಳಿಯಲ್ಲಿ ಉತ್ತರವಿರಲಿಲ್ಲ. ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ನೋಡುತ್ತಿದ್ದೆವು.
ಎರಡು ಮೂರು ದಿನಗಳು ಕಳೆದವು. ಮರಳಿಬಂದು ಗೂಡಿನ ಸರ್ವೇಕ್ಷಣೆ ನಡೆಸಿದ ಹಕ್ಕಿಗಳಿಗೆ ಏನೋ ಸರಿಯಿಲ್ಲವೆಂದು ಗೊತ್ತಾಯಿತು. ಆದರೆ ಏನಾಗಿದೆಯೆಂದು ಅವಕ್ಕೂ ಸಂಪೂರ್ಣವಾಗಿ ಗೊತ್ತಾಗಲಿಲ್ಲವೆಂದು ತೋರುತ್ತದೆ. ನಾನು ಮುರಿದ ಕೊಂಬೆಯನ್ನು ನೋಡಿ ಅವು ಆ ಜಾಗವನ್ನು ತೊರೆದೇಹೋಗುತ್ತವೆ ಎಂದು ಭಾವಿಸಿದ್ದೆ. ಆದರೆ ಹಾಗಾಗಲಿಲ್ಲ. ಗೂಡಿನ ಸುತ್ತ ಒಂದು ಸುತ್ತು ಬಂದು ಹಕ್ಕಿಗಳೆರಡೂ ಹಾರಿಹೋದವು. ಸ್ವಲ್ಪ ಹೊತ್ತಿನ ನಂತರ ಮರಳಿಬಂದು ಅದೇ ಗೂಡನ್ನು ಮತ್ತೆ ಕಟ್ಟಲು ಆರಂಭಿಸಿದವು. ಮತ್ತೆರಡು ದಿನಗಳು ಕಳೆಯುವಷ್ಟರಲ್ಲಿ ಸುಂದರವಾದ ಗೂಡೊಂದು ನಿರ್ಮಾಣವಾಯಿತು. ಅಂತೂ ಹಕ್ಕಿಗಳು ನಮ್ಮ ಮೇಲೆ ಎಷ್ಟು ಭರವಸೆ ಇಟ್ಟಿದ್ದವು ಎಂದು ಅದರಿಂದ ಸಾಬೀತಾಯಿತು. ತಮಗೆ ಮತ್ತು ತಮ್ಮ ಗೂಡಿಗೆ ಏನೇ ಸಮಸ್ಯೆ ಬಂದರೂ ಈ ಮನುಷ್ಯರು ಕಾಪಾಡುತ್ತಾರೆ ಎಂಬ ದೃಢವಾದ ನಂಬಿಕೆ ಅವಕ್ಕೆ ಇದ್ದಂತೆ ತೋರಿತು. ನಾವೂ ಕೂಡ ಅವುಗಳ ನಂಬಿಕೆಗೆ ಚ್ಯುತಿ ಉಂಟುಮಾಡಬಾರದೆಂದು ನಿರ್ಧರಿಸಿದೆವು. ಆ ದಿನದಿಂದಲೇ ಒಬ್ಬರಲ್ಲ ಒಬ್ಬರು ಆ ಗೂಡಿನ ಬಳಿ ಕಾವಲು ಕುಳಿತು ಕಾಗೆ ಅಥವಾ ಬೇರಾವುದೇ ಶತ್ರುವೂ ಅದನ್ನು ಮುಟ್ಟದಂತೆ ಕಾಯಬೇಕೆಂದು ನಿರ್ಧರಿಸಿದೆವು.
ಆದರೆ ನಮ್ಮ ಈ ನಿರ್ಧಾರವೆಲ್ಲ ಟೊಳ್ಳು ಎಂಬುದು ನಮಗೆ ಮರುದಿನವೇ ಗೊತ್ತಾಯಿತು. ಅಂದು ನಮ್ಮ ಪರಿಚಯದವರೊಬ್ಬರ ಮನೆಯಲ್ಲಿ ಒಂದು ಸಮಾರಂಭವಿತ್ತು. ಅಲ್ಲಿಗೆ ನಾನು, ನನ್ನ ತಮ್ಮ ಮತ್ತು ತಂದೆ ಮೂವರೂ ಊಟಕ್ಕೆ ಹೋಗಿದ್ದೆವು. ನಾವು ಹೋಗಿದ್ದು ಮಧ್ಯಾಹ್ನ ಸುಮಾರು ಒಂದು ಗಂಟೆಯ ಆಸುಪಾಸಿಗೆ. ಮೂರು ಗಂಟೆಯ ಹೊತ್ತಿಗೆ ಮನೆಗೆ ಮರಳಿದೆವು. ಆದರೆ ಮನೆಯ ಗೇಟು ತೆರೆದು ಅಂಗಳದೊಳಕ್ಕೆ ಬರುತ್ತಿದ್ದಂತೆಯೇ ನಮಗೆ ಆಘಾತ ಕಾದಿತ್ತು. ಹುಣಸೆ ಮರದ ಬುಡದಲ್ಲಿ ಗೂಡು ಛಿದ್ರವಿಚ್ಛಿದ್ರವಾಗಿ ಬಿದ್ದಿತ್ತು. ಗೂಡಿನೊಳಗಿದ್ದ ಮೃದುವಾದ ಹತ್ತಿಯಂಥ ಪದಾರ್ಥಗಳೆಲ್ಲ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನನಗೆ ಅದನ್ನು ನೋಡಿ ಎಷ್ಟು ಸಂಕಟವಾಯಿತೆಂದರೆ ಅದನ್ನು ಹೇಳಿ ಪ್ರಯೋಜನವಿಲ್ಲ. ನನ್ನ ತಮ್ಮನೂ ನಾನೂ ಇಬ್ಬರೂ ಒಟ್ಟಿಗೆ ಸಮಾರಂಭಕ್ಕೆ ಹೋಗಿದ್ದಕ್ಕಾಗಿ ನಮ್ಮನ್ನು ನಾವೇ ಎಷ್ಟು ಶಪಿಸಿಕೊಂಡೆವೋ ನಮಗೇ ಗೊತ್ತಿಲ್ಲ. ಅಂತೂ ಇಂತೂ ಆಗಬಾರದ್ದು ಆಗಿಹೋಗಿತ್ತು. ಅಂದೇ ಸಂಜೆ ಹಕ್ಕಿಗಳ ಆಗಮನವಾಯಿತು. ತಮ್ಮ ಕನಸಿನರಮನೆಗೆ ಒದಗಿದ ಗತಿ ಕಂಡು ಅವು ಅದೆಷ್ಟು ನೊಂದುಕೊಂಡವೋ ಏನೋ? ಎರಡೂ ಹಕ್ಕಿಗಳು ಅದೇ ಮರದ ಒಂದು ಕೊಂಬೆಯ ಮೇಲೆ ಮೌನವಾಗಿ ಬಹಳ ಹೊತ್ತು ಕುಳಿತಿದ್ದವು. ನಮಗೆ ಅದನ್ನು ನೋಡಿ ಅತೀವ ಬೇಸರವಾದರೂ ನಾವು ಏನೂ ಮಾಡುವಂತಿರಲಿಲ್ಲ. “ನಿಮ್ಮ ಮೇಲೆ ಭರವಸೆಯಿಟ್ಟು ನಾವಿಲ್ಲಿ ಗೂಡು ಕಟ್ಟಲು ತೊಡಗಿದೆವು. ಆದರೆ ನೀವು ನಿಮ್ಮ ಮೇಲೆ ನಾವಿಟ್ಟ ನಂಬಿಕೆ ಹುಸಿಗೊಳಿಸಿದಿರಿ. ನೀವು ಮಾಡಿದ್ದು ಸರಿಯೇ? ಯಾವ ಪಾಪಕ್ಕೆ ನಮಗೀ ಶಿಕ್ಷೆ?” ಎಂದು ಅವು ಕೇಳಿದಂತಾಯಿತು. ಉತ್ತರಿಸಲಾಗದೆ ನಾವು ತಲೆತಗ್ಗಿಸಿ ಕುಳಿತೆವು.
ಸೂರಕ್ಕಿಗಳು ಪರಿಸರ ವ್ಯವಸ್ಥೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. ಪರಾಗಸ್ಪರ್ಶದಲ್ಲಿ ಇವುಗಳ ಮಹತ್ವವೂ ಬಹಳವಿದೆ. ಸಾಮಾನ್ಯವಾಗಿ ಪರಾಗಸ್ಪರ್ಶ ಕ್ರಿಯೆಯ ಹೊಣೆಗಾರಿಕೆಯನ್ನು ಕೀಟಗಳೇ ವಹಿಸಿಕೊಳ್ಳುತ್ತವೆ. ಆದರೆ ಈ ಪುಟ್ಟ ಹಕ್ಕಿಗಳು ಮಾತ್ರ ಮಕರಂದವೇ ಇವುಗಳ ಆಹಾರವಾದ್ದರಿಂದ ಅದಕ್ಕೆ ಪ್ರತಿಯಾಗಿ ಪರಾಗಸ್ಪರ್ಶ ಕ್ರಿಯೆಯನ್ನೂ ನಿರ್ವಹಿಸುವ ಮೂಲಕ ಸಸ್ಯಗಳಿಗೆ ಉಪಕಾರಿಯಾಗಿವೆ. ನೀವು ಯಾವತ್ತಾದರೂ ಹೂವಿನಿಂದ ಹೂವಿಗೆ ಹಾರುವಾಗ ಸೂರಕ್ಕಿಗಳನ್ನು ಗಮನಿಸಿದ್ದರೆ ಅವುಗಳ ತಲೆಯ ಮೇಲೆಲ್ಲ ಹೂವಿನ ಪರಾಗಗಳು ಅಂಟಿಕೊಂಡು ಅವುಗಳ ಮೂಲಬಣ್ಣ ಯಾವುದೆಂದು ಗೊತ್ತಾಗದೆ ಗಲಿಬಿಲಿಯಾಗುವ ಪ್ರಸಂಗಗಳನ್ನು ಒಮ್ಮೊಮ್ಮೆಯಾದರೂ ಎದುರಿಸಿರಬಹುದು. ಹಾಗೆ ಹಣೆಗೆಲ್ಲ ಮೆತ್ತಿದ ಪರಾಗಗಳು ಅದೇ ಹಕ್ಕಿ ಬೇರೊಂದು ಹೂವಿನಿಂದ ಪರಾಗ ಹೀರಲು ಹೋದಾಗ ಅದಕ್ಕೆ ಪರಾಗಸ್ಪರ್ಶ ಮಾಡುತ್ತದೆ.
ಒಂದು ಕಾಲದಲ್ಲಿ ನಮ್ಮ ಮನೆಯೆದುರು ಸಾಕಷ್ಟು ದಾಸವಾಳ ಹೂವಿನ ಗಿಡಗಳಿದ್ದವು. ಅವು ಎಷ್ಟೊಂದು ಅಗಣಿತವಾಗಿದ್ದವೆಂದರೆ ದೊಡ್ಡದೊಡ್ಡ ಪೊದೆಗಳಂತೆ ಎಲ್ಲೆಡೆ ಹಬ್ಬಿದ್ದವು. ಆ ಪುದೆಗಳ ಒಳಗೆ ಹಾವು, ಚೇಳುಗಳೂ ಸೇರಿದಂತೆ ನೂರಾರು ರೀತಿಯ ಜೀವಿಗಳಿದ್ದವು. ಜೊತೆಗೆ ಪ್ರತಿದಿನವೂ ಅವು ಹೂವುಗಳಿಂದ ನಳನಳಿಸುತ್ತಿರುತ್ತಿದ್ದವು ಮತ್ತು ಮುಂಜಾನೆ ತಪ್ಪದೆ ನೂರಾರು ಸೂರಕ್ಕಿಗಳು ಆ ದಾಸವಾಳಗಳ ಮಕರಂದ ಹೀರಲು ಬರುತ್ತಿದ್ದವು. ಹಾಗೆ ಬರುತ್ತಿದ್ದ ಅವುಗಳ ಚಿಲಿಪಿಲಿ ನಿನಾದದಿಂದ ಮನೆಯೆದುರು ಪ್ರತಿದಿನ ಬೆಳಿಗ್ಗೆ ಒಂದು ಕಿನ್ನರಲೋಕವೇ ಸೃಷ್ಟಿಯಾಗುತ್ತಿತ್ತು. ನನಗೆ ಅವುಗಳಲ್ಲಿ ಎಷ್ಟು ಪ್ರಭೇದಗಳಿವೆ ಮತ್ತು ನಮ್ಮ ಮನೆಗೆ ಬಂದ ಪ್ರಭೇದ ಯಾವುದು ಎಂಬುದೆಲ್ಲ ನನಗೆ ಅಷ್ಟಾಗಿ ಗೊತ್ತಿಲ್ಲ. ಏಕೆಂದರೆ ಕ್ಷಣಕಾಲವೂ ನಿಂತಲ್ಲಿ ನಿಲ್ಲದ ಈ ಚುರುಕಾದ ಹಕ್ಕಿಗಳ ಪ್ರಭೇದಗಳನ್ನು ಗುರುತಿಸುವುದು ನನಗೆ ಎವರೆಸ್ಟ್ ಶಿಖರ ಏರಿದಷ್ಟೇ ಕಷ್ಟದ ಕೆಲಸವೆಂದು ಸದಾ ಅನ್ನಿಸುತ್ತಿತ್ತು. ಕೊನೆಗೊಂದು ದಿನ ಡಾಕ್ಟರ್ ಸಲೀಂ ಅಲಿಯವರ ಪುಸ್ತಕ ಹಿಡಿದುಕೊಂಡು ನಮ್ಮ ಮನೆಗೆ ಬರುತ್ತಿದ್ದ ಹಕ್ಕಿಯ ಸೂರಕ್ಕಿಗಳೆಂದರೆ ಪರ್ಪಲ್ ಸನ್ ಬರ್ಡ್ ಮತ್ತು ಲಿಟ್ಲ್ ಸನ್ ಬರ್ಡ್ ಎಂದು ಕಂಡುಹಿಡಿದೆ. ಇವೆರಡು ನಾನು ಕಂಡುಹಿಡಿದ ಪ್ರಭೇದಗಳಷ್ಟೆ. ನನಗೆ ಗೊತ್ತಿಲ್ಲದ ಆದರೆ ಅನೇಕ ಸಲ ನೋಡಿರುವ ಇನ್ನೂ ಕೆಲವು ಪ್ರಭೇದಗಳಿವೆ.
ಹೂಕುಡುಕಗಳ ಬಗ್ಗೆ ಹೇಳುವಾಗ ಹೂಕುಟುಕಗಳೆಂದು ಕರೆಯಲ್ಪಡುವ ಫ್ಲವರ್ ಪೆಕ್ಕರ್ ಗಳ ಬಗೆಗೂ ಹೇಳದಿದ್ದರೆ ಲೇಖನ ಅಪೂರ್ಣವಾಗುತ್ತದೆ. ಮೊದಲು ಇವುಗಳನ್ನೂ ಸಹ ಹೂಕುಡುಕಗಳ ಕುಟುಂಬದಲ್ಲೇ ಸೇರಿಸಿದ್ದರು. ಈಗ ಇವುಗಳನ್ನು ಬೇರೆ ಕುಟುಂಬದಲ್ಲಿ ವಿಂಗಡಿಸಿದ್ದಾರೆ. ಹದಿನಾಲ್ಕು ಪ್ರಭೇದಗಳನ್ನು ಇವುಗಳಲ್ಲಿ ಗುರುತಿಸಲಾಗಿದೆ. ಇವುಗಳ ಕೊಕ್ಕುಗಳು ತುಂಬ ಚಿಕ್ಕವು ಮತ್ತು ದಪ್ಪವಾಗಿವೆ. ಇದಕ್ಕೆ ಕಾರಣ ಇವು ಹಣ್ಣುಗಳನ್ನು ತಿನ್ನುವುದು. ಅಪರೂಪಕ್ಕೆ ಇವು ಮಕರಂದವನ್ನು ಹೀರುವುದು ಮತ್ತು ಕೆಲವು ಚಿಕ್ಕಪುಟ್ಟ ಕೀಟಗಳನ್ನು ತಿನ್ನುವುದೂ ಇದೆ.
ದಕ್ಷಿಣ ಅಮೆರಿಕಾ ಖಂಡದ ಹಮ್ಮಿಂಗ್ ಬರ್ಡ್ ಹಕ್ಕಿಗಳು (ಝೇಂಕಾರದ ಹಕ್ಕಿ) ಕೂಡ ಮಕರಂದ ಹೀರುವ ಹಕ್ಕಿಗಳು. ನಮ್ಮ ಹೂಕುಡುಕಗಳಿಗೂ ಇವಕ್ಕೂ ಸಾಮ್ಯತೆಯಿದೆಯಾದರೂ ಇವು ಬೇರೆ ವರ್ಗಕ್ಕೆ ಸೇರಿದ ಹಕ್ಕಿಗಳು. ಜಗತ್ತಿನ ಅತ್ಯಂತ ಚಿಕ್ಕ ಹಕ್ಕಿಯಾದ ಬೀ ಹಮ್ಮಿಂಗ್ ಬರ್ಡ್ ಹಕ್ಕಿ ಇದೇ ವರ್ಗದಲ್ಲಿದೆ. ಎಪೋಡಿಫಾರಂಸ್ ವರ್ಗದ ಎಪೋಡಿಡೇ ಕುಟುಂಬಕ್ಕೆ ಸೇರಿದ ಈ ಹಕ್ಕಿಗಳು ಕೂರುವುದೇ ಅತ್ಯಪರೂಪ. ಸದಾ ಹಾರಾಡುತ್ತಲೇ ಇರುತ್ತವೆ. ಇವುಗಳ ಕಾಲುಗಳು ಸಹ ಬಹಳ ದುರ್ಬಲವಾಗಿದ್ದು ದೀರ್ಘಕಾಲ ನಿಲ್ಲಲು ಇವಕ್ಕೆ ಸಾಧ್ಯವಿಲ್ಲ. ಎಪೋಡಿಫಾರಂಸ್ ಎಂಬ ಪದದ ಅರ್ಥವೇ ಕಾಲುಗಳಿಲ್ಲದ ವರ್ಗ ಎಂದು. ಕೆಲವು ಪ್ರಭೇದದ ಹಕ್ಕಿಗಳು ಕೆಲವೊಂದು ಹೂವುಗಳ ಮಕರಂದವನ್ನು ಮಾತ್ರ ಹೀರುವುದರಿಂದ ಇವುಗಳ ಕೊಕ್ಕುಗಳು ಆಯಾ ಹೂವಿಗೆ ತಕ್ಕಂತೆ ಮಾರ್ಪಾಡಾಗಿವೆ.
ಹೂಕುಡುಕಗಳಾಗಲೀ ಝೇಂಕಾರದ ಹಕ್ಕಿಗಳಾಗಲೀ ಸದಾ ಚುರುಕಾಗಿ ಅತ್ತಿಂದಿತ್ತ ಹಾರಾಡುತ್ತಿರುವುದರಿಂದ ಇವಕ್ಕೆ ಆಹಾರದ ಅಗತ್ಯ ಬೇರೆ ಹಕ್ಕಿಗಳಿಗಿಂತ ಹೆಚ್ಚು. ನಿರಂತರವಾಗಿ ಎಲೆಗಳನ್ನು ಹುಡುಕಿಕೊಂಡು ಮಧುಪಾನ ಮಾಡುತ್ತಲೇ ಇರಬೇಕು. ಇವುಗಳ ಹೃದಯ ಬಡಿತ ಮತ್ತು ಇತರ ಚಯಾಪಚಯ ಕ್ರಿಯೆಗಳೆಲ್ಲ ಅತ್ಯಂತ ವೇಗವಾಗಿ ಸಾಗುತ್ತಿರುತ್ತವೆ. ಆದ್ದರಿಂದಲೇ ಇವುಗಳ ಆಯಸ್ಸು ಕಡಿಮೆ. ನಾಲ್ಕೈದು ವರ್ಷಗಳಷ್ಟೇ ಇವು ಬದುಕುವುದು. ಕೆಲವೊಂದು ಪ್ರಭೇದಗಳು 10-12 ವರ್ಷಗಳವರೆಗೆ ಬದುಕುತ್ತವೆ ಎಂದೂ ತಿಳಿದುಬಂದಿದೆ.
ಇಂದು ನಮ್ಮ ಮನೆಯೆದುರು ಆ ದಾಸವಾಳದ ಪೊದೆಗಳೂ ಇಲ್ಲ, ಆ ಹುಣಸೆಮರವೂ ಇಲ್ಲ. ಹುಣಸೆಮರ ಮನೆಯ ಸಮೀಪವಿದ್ದರೆ ಮನೆಗೇ ಅಪಾಯವೆಂದು ಅದನ್ನು ಕಡಿಸಿಬಿಟ್ಟರು. ಅದಕ್ಕೆ ನನ್ನ ವಿರೋಧ ಎಷ್ಟೇ ಇದ್ದರೂ ಅದರಿಂದೇನೂ ಪ್ರಯೋಜನವಾಗಲಿಲ್ಲ. ಮರ ಧರೆಗುರುಳುವುದನ್ನು ನಿಸ್ಸಹಾಯಕನಾಗಿ ನೋಡಬೇಕಾಯಿತು. ನನ್ನ ಅಸಹಾಯಕತೆಗೆ ನನಗೇ ಆಗ ಬೇಸರವಾಯಿತು. ಜೊತೆಗೆ ಹಾವುಗಳಿಗೆ ಆಶ್ರಯತಾಣವಾಗಿದೆಯೆಂದು ದಾಸವಾಳದ ಪೊದೆಗಳನ್ನೂ ಕಡಿಸಿಬಿಟ್ಟರು. ಇಂದು ಮನೆಯೆದುರಿನ ಎರಡು-ಮೂರು ರತ್ನಗಂಧಿ ಗಿಡಗಳು ಮಾತ್ರ ಹಾಗೆಯೇ ಇವೆ. ಇಂದಿಗೂ ಸೂರಕ್ಕಿಗಳನ್ನು ಆಕರ್ಷಿಸುತ್ತಿರುವ ಗಿಡಗಳೆಂದರೆ ಇವು ಮಾತ್ರ. ಸದಾಕಾಲವೂ ಹೂಬಿಡುತ್ತಿರುವ ಗಿಡಗಳಾದ್ದರಿಂದ ಇವುಗಳ ಸುತ್ತ ಯಾವಾಗಲೂ ಹಕ್ಕಿ, ಚಿಟ್ಟೆ ಇತ್ಯಾದಿ ಮಕರಂದಪಾನಿಗಳ ದಂಡೇ ನೆರೆದಿರುತ್ತದೆ. ಮನೆಯೆದುರು ಇರುವ ಮೂರು ಕೆಂಪು ರತ್ನಗಂಧಿ ಹೂಗಿಡಗಳಲ್ಲದೆ ಮನೆಯ ಹಿಂದೆ ಒಂದು ಹಳದಿ ಬಣ್ಣದ ರತ್ನಗಂಧಿ ಹೂಗಿಡವೂ ಇದೆ. ಒಟ್ಟಾರೆ ಈ ಗಿಡಗಳಿಂದಾಗಿಯೇ ಇಂದಿಗೂ ಸೂರಕ್ಕಿಗಳು ನಮ್ಮ ಮನೆಯ ನಂಟನ್ನು ತೊರೆದಿಲ್ಲ. ಆದ್ದರಿಂದ ಅವುಗಳನ್ನು ಯಾವುದೇ ಕಾರಣಕ್ಕೂ ಕಡಿಯಬಾರದೆಂದು ನಿರ್ಧರಿಸಿದ್ದೇನೆ.


ಮಂಗಟ್ಟೆ ಹಕ್ಕಿಗಳ ಮೋಹಕ ಲೋಕ

ಮಂಗಟ್ಟೆ ಹಕ್ಕಿಗಳ ಮೋಹಕ ಲೋಕ
ನಮ್ಮ ಮನೆಯ ಹಿಂದೆ ಸ್ವಲ್ಪ ಕಾಡಿನಂಥ ಪ್ರದೇಶವಿದೆ. ಕಾಡಿನಂಥ ಎಂದು ಯಾಕೆ ಹೇಳಿದೆನೆಂದರೆ ನಾವೆಲ್ಲ ಅದನ್ನು ಕಾಡೆಂದೇ ಕರೆಯುತ್ತಿದ್ದೆವು. ಅದನ್ನು ಕಾಡೆನ್ನುವುದು ನಿಜವಾದ ಕಾಡುಗಳಿಗೆ ಮಾಡಿದ ಅವಮಾನವೇ ಸರಿ, ಏಕೆಂದರೆ ಅಲ್ಲಿ ಇದ್ದುದು ಹತ್ತಾರು ಮರಗಳಷ್ಟೆ. ಮನೆಯ ಹಿಂದಿನ ಖಾಲಿ ಜಾಗದಲ್ಲಿ ತನ್ನಿಂದ ತಾನೇ ಬೆಳೆದಿದ್ದ ಮರಗಳವು. ಜೊತೆಗೆ ನೆಲದ ಮೇಲೆ ಕೂಡ ದಟ್ಟವಾಗಿ ಪೊದೆಗಳು ಬೆಳೆದಿದ್ದವು. ಅಲ್ಲೆಲ್ಲ ಸದಾಕಾಲ ಮರದಿಂದ ಉದುರಿದ ತರಗೆಲೆಗಳ ಕಾರಣ ನೆಲವೆಲ್ಲ ತಂಪಾಗಿ ಮೃದುವಾಗಿ ನೂರಾರು ಹುಳಹುಪ್ಪಟೆಗಳ ಆವಾಸಸ್ಥಾನವಾಗಿತ್ತು. ನಮ್ಮಂಥ ಪ್ರಕೃತಿಯ ನಿರಂತರ ವಿದ್ಯಾರ್ಥಿಗಳಿಗೆ ಅಲ್ಲಿ ಕಲಿಯಲು ಲೆಕ್ಕವಿಲ್ಲದಷ್ಟು ವಿಷಯಗಳಿದ್ದವು. ಆದ್ದರಿಂದ ಪ್ರತಿದಿನ ನಾನು ಸಂಜೆ ಅಥವಾ ಬೆಳಿಗ್ಗೆ ಹೀಗೆ ಯಾವಾಗ ಬಿಡುವಿದ್ದರೂ ಅಲ್ಲಿ ಹೋಗಿ ಮರಗಳ ನೆರಳಿನಲ್ಲಿ ಪ್ರಶಾಂತವಾಗಿ ಕುಳಿತು ಕಾಲ ಕಳೆದು ಬರುತ್ತಿದ್ದೆ. ಮನಸ್ಸಿಗೆ ಬೇಸರವಾದಾಗಲೆಲ್ಲ ಅಲ್ಲಿ ಸ್ವಲ್ಪ ಹೊತ್ತು ಕುಳಿತರೆ ನನ್ನ ಮನಸ್ಸಿಗೆ ಅದೇನೋ ಅನಿರ್ವಚನೀಯ ಶಾಂತಿ, ಸಮಾಧಾನ ಸಿಗುತ್ತಿತ್ತು. ಹಾಗಾಗಿ ಊಟ, ತಿಂಡಿ ತಪ್ಪಿಸಿದರೂ ಅಲ್ಲಿ ಕೂರುವುದನ್ನು ಮಾತ್ರ ನಾನು ಎಂದೂ ತಪ್ಪಿಸುತ್ತಿರಲಿಲ್ಲ. ಅದೊಂದು ದಿನ ಕೂಡ ಯಾವುದೋ ವಿಷಯಕ್ಕೆ ಮನಸ್ಸು ಸರಿಯಿರಲಿಲ್ಲ. ಆದ್ದರಿಂದ ಮಾಮೂಲಿನಂತೆ ಸುಮ್ಮನೆ ಮನೆಯ ಹಿಂದೆ ಹೋಗಿ ಮರದ ಬುಡದಲ್ಲಿ ಕುಳಿತು ವಿಷಣ್ಣನಾಗಿ ಏನೋ ಯೋಚಿಸುತ್ತಿದ್ದೆ. ಅಷ್ಟರಲ್ಲಿ ನನಗೆ ಒಂದು ಅಪರಿಚಿತವಾದ ಕ್ವಾಕ್ ಕ್ವಾಕ್ ಎಂಬ ಧ್ವನಿ ಕೇಳಿಬಂದಿತು. ಅಂಥ ಧ್ವನಿಯನ್ನು ನಾನು ಅದುವರೆಗೂ ಕೇಳಿರಲಿಲ್ಲ. ಮೊದಲಿಗೆ ಅದೊಂದು ಕಾಗೆಯಿರಬೇಕೆಂದು ಉಪೇಕ್ಷಿಸಿದೆ. ಆದರೆ ಮತ್ತೊಮ್ಮೆ ಅದು ಪುನರಾವರ್ತನೆಯಾದಾಗ ಅದು ಕಾಗೆಯಲ್ಲವೆಂದು ನನಗೆ ಬಹುತೇಕ ಖಚಿತವಾಯಿತು. ಏನೆಂದು ಕುತೂಹಲದಿಂದ ಧ್ವನಿ ಬಂದ ಕಡೆಗೆ ತೆರಳಿದೆ. ಕಾಡಿನ ಮಧ್ಯಭಾಗದಲ್ಲಿ ಬೆಳೆದಿದ್ದ ಬಸರಿ ಮರವೊಂದರ ಮೇಲಿನಿಂದ ಧ್ವನಿ ಬರುತ್ತಿತ್ತು. ಮರದ ಬುಡದಲ್ಲಿ ನಿಂತು ಮರದ ಮೇಲೆ ದೃಷ್ಟಿ ಹಾಯಿಸಿದೆ. ಆ ಮರದ ಮೇಲ್ಭಾಗ ಎಲೆಗಳಿಂದ ಮುಚ್ಚಿಹೋಗಿತ್ತು. ಯಾವುದನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ. ಒಂದೆಡೆ ಎಲೆಗಳು ಅಲುಗಾಡುತ್ತಿದ್ದವು. ಅದೇ ದಿಕ್ಕಿನಲ್ಲಿ ದಿಟ್ಟಿಸಿ ನೋಡಿದಾಗ ನನಗಾದ ಸಂತೋಷ, ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಯಾವ ಹಕ್ಕಿಯನ್ನು ಅತ್ಯಪರೂಪದ ಹಕ್ಕಿಯೆಂದು ಭಾವಿಸಿದ್ದೆನೋ, ಯಾವ ಹಕ್ಕಿ ನಮ್ಮ ಪರಿಸರದಲ್ಲಿ, ನಮ್ಮ ಊರಿನಲ್ಲಿ ಇರುವುದು ಸಾಧ್ಯವೇ ಇಲ್ಲವೆಂದು ಭಾವಿಸಿದ್ದೆನೋ ಅದೇ ಮಂಗಟ್ಟೆ ಹಕ್ಕಿಯೊಂದು ಮರದ ಮೇಲೆ ಕುಳಿತಿತ್ತು!
ಮಂಗಟ್ಟೆ ಹಕ್ಕಿಯ ಕುಟುಂಬದಲ್ಲಿ ಅನೇಕ ಪ್ರಭೇದಗಳಿವೆ. ಆದರೆ ಈ ಕುಟುಂಬದ ಹಕ್ಕಿಗಳೆಲ್ಲದರ ಮುಖ್ಯ ಲಕ್ಷಣವೆಂದರೆ ಅವುಗಳ ಭಾರೀ ಗಾತ್ರದ ಕೊಕ್ಕು. ಕೆಲವು ಪ್ರಭೇದಗಳಿಗಂತೂ ಕೊಕ್ಕಿನ ಮೇಲೆ ಬೃಹತ್ತಾದ ಇನ್ನೊಂದು ಕೊಕ್ಕಿನಂತೆ ಕಾಣುವ ರಚನೆಯಿದೆ. ಆದ್ದರಿಂದ ಕೆಲವರು ಇದಕ್ಕೆ ಕೊಕ್ಕಿನ ಮೇಲೆ ಕೊಕ್ಕು ಇದೆ ಎನ್ನುತ್ತಾರೆ. ಆದರೆ ಇದಕ್ಕೆ ಇರುವುದು ಒಂದೇ ಕೊಕ್ಕು. ಅದರ ಮೇಲೆ ಇರುವ ರಚನೆ ಅದು ಕೂಗುವಾಗ ಧ್ವನಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದಲೇ ಅದನ್ನು ಆಂಗ್ಲಭಾಷೆಯಲ್ಲಿ ಹಾರ್ನ್ ಬಿಲ್ ಎನ್ನುತ್ತಾರೆ. ನಮ್ಮ ಮನೆಯ ಸುತ್ತಮುತ್ತ ನಾವು ನೋಡಿದ್ದು ಗ್ರೇ ಹಾರ್ನ್ ಬಿಲ್ ಎಂದು ಕರೆಯಲಾಗುವ ಸಾಮಾನ್ಯ ಬೂದುಬಣ್ಣದ ಹಾರ್ನ್ ಬಿಲ್. ಆದರೆ ಅವುಗಳಲ್ಲಿ ಹದ್ದಿನಷ್ಟು ದೊಡ್ಡದಾದ ಕಪ್ಪುಬಿಳುಪಿನ ದಿ ಗ್ರೇಟ್ ಇಂಡಿಯನ್ ಪೈಡ್ ಹಾರ್ನ್ ಬಿಲ್ ಎಂಬ ಹಕ್ಕಿಯಿದೆ. ಕರ್ನಾಟಕದ ಅಣಶಿ-ದಾಂಡೇಲಿ ಹುಲಿ ಸಂರಕ್ಷಿತಾರಣ್ಯವನ್ನು ಈಗ ಈ ಹಾರ್ನ್ ಬಿಲ್ ಗಳ ರಕ್ಷಿತಾರಣ್ಯವೆಂದೂ ಗುರುತಿಸಲಾಗಿದೆ.
ಮರದ ಮೇಲೆ ಕುಳಿತಿದ್ದ ಅದು ಅಲ್ಲೇ ಕೊಂಬೆಯಿಂದ ಕೊಂಬೆಗೆ ಹಾರಾಡುತ್ತಿತ್ತು. ನಾನು ತಲೆಯೆತ್ತಿ ಕತ್ತು ನೋಯುವಂತೆ ಅದನ್ನು ದಿಟ್ಟಿಸುತ್ತಲೇ ಇದ್ದೆ. ಈ ಹಕ್ಕಿಗಳಿಗೆ ಲೀಲಾಜಾಲವಾಗಿ ಹಾರಾಡಲು ಬರುವುದಿಲ್ಲ. ಅದಕ್ಕೆ ಕಾರಣವೇನೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಭಾರೀ ಗಾತ್ರದ ಕೊಕ್ಕೇ ಅವಕ್ಕೆ ಹೊರೆಯಾಗಿರಲೂಬಹುದು ಅಥವಾ ಬೇರಾವುದೋ ಕಾರಣವಿರಲೂಬಹುದು. ಆದರೆ ಅವು ಸದಾಕಾಲ ಹಾರಾಡುವಾಗ ಕುಡಿದು ತೂರಾಡುವವರಂತೆ ಯದ್ವಾತದ್ವಾ ಹಾರಾಡುತ್ತ ಸಮೀಪದ ಮರಗಳ ನಡುವೆಯಷ್ಟೇ ಹಾರಾಡುತ್ತವೆ. ಅನಿವಾರ್ಯವಾಗಿ ಸ್ವಲ್ಪ ದೂರಕ್ಕೆ ಹಾರಿಹೋಗಬೇಕಾದ ಸಂದರ್ಭ ಬಂದರೆ ಅವುಗಳ ಹಾರಾಟ ತುಂಬಾ ಅಸ್ತವ್ಯಸ್ತವಾಗಿರುತ್ತದೆ. ಅಂದು ಸಹ ನಾನು ನೋಡುತ್ತಿರುವಂತೆಯೇ ದೂರದಿಂದ ಇನ್ನೊಂದು ಮಂಗಟ್ಟೆಹಕ್ಕಿ ಇದನ್ನು ಕೂಗಿ ಕರೆಯಿತು. ಈ ಹಕ್ಕಿಯೂ ಅದಕ್ಕೆ ಪ್ರತ್ಯುತ್ತರಿಸಿತು. ನೋಡನೋಡುತ್ತಿದ್ದಂತೆಯೇ ಇಡೀ ನಭೋಮಂಡಲವೇ ಅವುಗಳ ಕೂಗಾಟದಿಂದ ತುಂಬಿಹೋದಂತೆ ಭಾಸವಾಯಿತು. ಈ ಹಕ್ಕಿಯೂ ಅದರ ಕೂಗನ್ನೇ ಅನುಸರಿಸಿ ಹಾರಿಹೋಯಿತು. ಅದು ನನ್ನ ಕಣ್ಣೆದುರು ಇದ್ದುದು ಕೆಲವೇ ಕ್ಷಣಗಳಾದರೂ ನನ್ನ ಮನಸ್ಸಿನ ಬೇಸರವನ್ನೆಲ್ಲ ಒಂದೇ ಏಟಿಗೆ ಹೊಡೆದೋಡಿಸಿತು.
ಮಂಗಟ್ಟೆ ಹಕ್ಕಿಗಳ ಬಗೆಗೆ ನಾನು ಮೊದಲು ಓದಿದ್ದು ಪೂರ್ಣಚಂದ್ರ ತೇಜಸ್ವಿ ಅವರ ಮಿಂಚುಳ್ಳಿ ಪುಸ್ತಕದಲ್ಲಿ. ಅದರಲ್ಲಿ ತೇಜಸ್ವಿ ಅವರು ಮಂಗಟ್ಟೆಯನ್ನು ನಗುವ ಹಕ್ಕಿ ಎಂದಿದ್ದಾರೆ. ಯಾರಾದರೂ ಹೊಸಬರು ತೋಟಕ್ಕೆ ಬಂದರೆ ಇವುಗಳ ಕೂಗನ್ನು ಕೇಳಿ ಗಾಬರಿಯಾಗುತ್ತಾರೆ ಎಂದಿದ್ದಾರೆ. ಏಕೆಂದರೆ ಅವು ಇಡೀ ದಿನ ತೋಟದ ತುಂಬಾ ಬಿದ್ದುಬಿದ್ದು ನಗುತ್ತಾ ಗಲಭೆ ಮಾಡುತ್ತಿರುತ್ತವೆ ಎಂದು ವಿವರಿಸಿದ್ದಾರೆ. ಈ ಹಕ್ಕಿಯ ಕೂಗನ್ನು ಕೇಳಿದ ಮೇಲೆ ನನಗೆ ಅವರ ವಿವರಣೆ ನೆನಪಾಯಿತು. ನಿಜಕ್ಕೂ ಇವು ಬಿದ್ದುಬಿದ್ದು ನಗುವಂತೆಯೇ ಕೂಗುತ್ತವೆ.
ಅಂದು ನನ್ನ ತಮ್ಮ ಕಾಲೇಜಿನಿಂದ ಮನೆಗೆ ಬಂದಕೂಡಲೇ ಅವನಿಗೆ ವಿಷಯ ತಿಳಿಸಿದೆ. ಅವನಿಗೂ ಕೂಡ ಆಶ್ಚರ್ಯವಾಯಿತು. ಏಕೆಂದರೆ ಅಂಥದೊಂದು ಅಪರೂಪದ ಹಕ್ಕಿ ನಮ್ಮಲ್ಲಿದೆಯೆಂದು ನಂಬಲೇ ಆತ ತಯಾರಿರಲಿಲ್ಲ. ಮೊದಲಿಗೆ ಅವನು ನನ್ನ ಮಾತನ್ನು ನಂಬಲೇ ಇಲ್ಲ. ಆದರೆ ನಂಬಿಸಲು ನನ್ನಲ್ಲಿ ಸಾಕ್ಷ್ಯಗಳೇನೂ ಇರಲಿಲ್ಲ. ನಮ್ಮ ಬಳಿ ಆಗ ಕ್ಯಾಮೆರಾ ಕೂಡ ಇರಲಿಲ್ಲ. ಅವನಿಗೂ ಮಂಗಟ್ಟೆಯನ್ನು ತೋರಿಸೋಣವೆಂದು ಅವನನ್ನೂ ಕಾಡಿಗೆ ಕರೆದೊಯ್ದೆ. ಆದರೆ ಆ ಹಕ್ಕಿ ಎಲ್ಲೂ ಕಾಣಿಸಲಿಲ್ಲ, ಕಡೇಪಕ್ಷ ಅದರ ಧ್ವನಿಯನ್ನೂ ಕೇಳಲಾಗಲಿಲ್ಲ. ಇಡೀ ದಿನ ಕಾಡೆಲ್ಲ ಹುಡುಕಿ ಸೋತು ಸುಸ್ತಾಗಿ ಮನೆಗೆ ಮರಳಿದೆವು. ನಾನು ಅಷ್ಟೆಲ್ಲ ಶ್ರಮವಹಿಸಿ ಹುಡುಕಿದ್ದರಿಂದ ಆ ಹಕ್ಕಿ ಬಂದಿದ್ದು ಹೌದೆಂದು ನನ್ನ ತಮ್ಮನಿಗೆ ನಂಬಿಕೆ ಬಂತಾದರೂ ಅವನಿಗೆ ಅದನ್ನು ಅವತ್ತೇ ತೋರಿಸಬೇಕೆಂಬ ನನ್ನ ಆಸೆ ಈಡೇರಲೇ ಇಲ್ಲ.
ಇದಾಗಿ ಕೆಲವು ದಿನಗಳು ಕಳೆದವು. ಮಂಗಟ್ಟೆಯನ್ನು ನೋಡಲೆಂದು ದಿನಾ ಮನೆಯ ಹಿಂದಿನ ಕಾಡಿಗೆ ಎಡತಾಕುತ್ತಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಕೆಲವೊಮ್ಮೆ ರಜಾದಿನಗಳಲ್ಲಿ ಬೇರೆಲ್ಲ ಕೆಲಸ ಬಿಟ್ಟು ಇಡೀದಿನ ಕಾಡು ಸುತ್ತಿದ್ದೂ ಇದೆ. ಆದರೆ ಹಕ್ಕಿಗಳೆಲ್ಲ ಎಂದೂ ನಾವು ಹುಡುಕಿದಾಗ ಸಿಗುವುದಿಲ್ಲ. ನಮಗೆ ಅವುಗಳನ್ನು ನೋಡುವ ಭರವಸೆಯೇ ಇಲ್ಲದೆ ಸುಮ್ಮನೆ ಒಂದೆಡೆ ಹೋಗುತ್ತಿದ್ದರೆ ಆಗ ಧುತ್ತನೆ ಕಣ್ಣೆದುರು ಪ್ರತ್ಯಕ್ಷವಾಗಿ ನಮ್ಮನ್ನು ದಂಗುಬಡಿಸುತ್ತವೆ. ಮತ್ತೊಂದು ದಿನ ಸುಮ್ಮನೆ ಮನೆಯ ಹಿಂದೆ ಕುಳಿತು ಓದುತ್ತಿದ್ದಾಗ ಮತ್ತದೇ ನಗುವ ಧ್ವನಿ ಕೇಳಿಬಂದಿತು. ಕೂಡಲೇ ಓದುತ್ತಿದ್ದ ಪುಸ್ತಕವನ್ನೂ ಅಲ್ಲೇ ಎಸೆದು ಧ್ವನಿ ಬಂದತ್ತ ಓಡಿದೆ. ನನ್ನ ಆಶ್ಚರ್ಯಕ್ಕೆ ಪಾರವಿರಲಿಲ್ಲ. ಏಕೆಂದರೆ ಈ ಬಾರಿ ಎರಡು ಮಂಗಟ್ಟೆಗಳು ಮರದ ಮೇಲೆ ಕುಳಿತಿದ್ದವು, ಅಷ್ಟೇ ಅಲ್ಲ, ಅದರಲ್ಲೊಂದು ತನ್ನ ಕೊಕ್ಕಿನಲ್ಲಿ ಓತೆಕೇತವೊಂದನ್ನು ಹಿಡಿದುಕೊಂಡಿತ್ತು. ಮಂಗಟ್ಟೆ ಆಹಾರ ಸೇವಿಸುವುದನ್ನು ನೋಡಬಹುದೆಂಬ ಉತ್ಸಾಹದಲ್ಲಿ ಅಲ್ಲೇ ಕುಳಿತು ನೋಡತೊಡಗಿದೆ. ಕೆಲವು ಕ್ಷಣಗಳ ಕಾಲ ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಅತ್ತಿತ್ತ ಆಡಿಸಿದ ಮಂಗಟ್ಟೆ ನಂತರ ಅದನ್ನು ಸಂಪೂರ್ಣವಾಗಿ ನುಂಗಿಹಾಕಿತು. ಹೀಗೆ ಒಂದು ಓತಿಕೇತವನ್ನು ಅದು ಮುಗಿಸಿತು. ಸ್ವಲ್ಪದೂರದಲ್ಲೇ ಇನ್ನೊಂದು ಮಂಗಟ್ಟೆಯೂ ಕುಳಿತಿತ್ತು. ಬಹುಶಃ ಅದು ಹೆಣ್ಣಿರಬೇಕೆಂದು ನಾನು ತರ್ಕಿಸಿದೆ. ಅಂದು ಸಹ ನನ್ನ ತಮ್ಮ ಕಾಲೇಜಿಗೆ ಹೋಗಿದ್ದ. ಆದರೆ ಅವನು ಮರಳಿಬರುವತನಕ ಆ ಹಕ್ಕಿಗಳು ಅದೃಷ್ಟವಶಾತ್ ಅಲ್ಲೇ ಕುಳಿತಿದ್ದವು. ಆದ್ದರಿಂದ ಅವನೂ ನಾನು ಮೊದಲು ಹೇಳಿದ್ದು ಸುಳ್ಳಲ್ಲವೆಂದು ನಂಬುವಂತಾಯಿತು.
ಅನಂತರ ನಮಗೆ ಮಂಗಟ್ಟೆಗಳು ತೀರಾ ಅಪರೂಪವೇನೂ ಆಗಲಿಲ್ಲ. ಆವಾಗಾವಾಗ ಕಾಣುತ್ತಲೇ ಇದ್ದವು. ಸಾಮಾನ್ಯವಾಗಿ ಹಣ್ಣುಬಿಡುವ ಮರಗಳಿಗೆ ಮುತ್ತಿಗೆ ಹಾಕುವ ಇವು ನಮ್ಮ ಮನೆಯ ಬಳಿ ಹಣ್ಣು ಬಿಡುವ ಗಿಡಗಳಾವುವೂ ಇಲ್ಲದಿದ್ದರೂ ಆಗೀಗ ಬರುತ್ತಲೇ ಇದ್ದವು. ಒಂದು ದಿನ ಅವುಗಳನ್ನು ನೋಡದಿದ್ದರೆ, ಅವುಗಳ ಧ್ವನಿ ಕೇಳದಿದ್ದರೆ ನನಗೆ ಏನೋ ಕಳೆದುಕೊಂಡಂಥ ಅನಿಸಿಕೆ, ಮನಸ್ಸಿಗೆ ಬೇಸರ ಉಂಟಾಗುತ್ತಿತ್ತು. ಹೀಗಿರುವಾಗ ನನಗೆ ಓದುವ ಪ್ರಯುಕ್ತ ಭದ್ರಾ ಅಭಯಾರಣ್ಯದ ಸಮೀಪ ಇರುವ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾಯಿತು. ಅಲ್ಲಿ ವಿಶ್ವವಿದ್ಯಾನಿಲಯದ ಆವರಣದ ತುಂಬೆಲ್ಲ ನೂರಾರು ಹಣ್ಣಿನ ಮರಗಳಿದ್ದವು. ಸಹಜವಾಗಿಯೇ ಅಲ್ಲಿ ಯಥೇಚ್ಛವಾಗಿ ಪ್ರಾಣಿಪಕ್ಷಿಗಳು ಸಹ ವಾಸವಿದ್ದವು. ಒಂದು ದಿನ ನಾನು ಮಧ್ಯಾಹ್ನ ತರಗತಿಗಳನ್ನು ಮುಗಿಸಿ ಕೋಣೆಗೆ ಮರಳುತ್ತಿದ್ದಾಗ ಮರವೊಂದರ ಬುಡದಲ್ಲಿ ಹೆಜ್ಜೆ ಹಾಕುತ್ತಿರಬೇಕಾದರೆ ಒಂದು ರೀತಿಯ ವಿಚಿತ್ರವಾದ ಕೀರಲು ಸ್ವರ ಕೇಳಿಸಿತು. ನನಗೆ ಆಶ್ಚರ್ಯವಾಯಿತು, ಏಕೆಂದರೆ ನಾನು ಅದುವರೆಗೂ ಆ ರೀತಿಯ ಧ್ವನಿಯನ್ನು ಕೇಳಿಯೇ ಇರಲಿಲ್ಲ. ತಲೆಯೆತ್ತಿ ಮರದತ್ತ ದೃಷ್ಟಿ ನೆಟ್ಟರೆ ನನಗೆ ಕಂಡಿದ್ದು ಒಂದು ಜಾತಿಯ ಮಂಗಟ್ಟೆ ಹಕ್ಕಿ. ಅದು ಯಾವ ಪ್ರಭೇದಕ್ಕೆ ಸೇರಿದ್ದೆಂದು ನನಗೆ ಗೊತ್ತಾಗಲಿಲ್ಲ. ಆದರೆ ನನ್ನ ಮನೆಯ ಬಳಿ ಬಿದ್ದುಬಿದ್ದು ನಗುವ ಕ್ವಾಕ್ ಕ್ವಾಕ್ ಧ್ವನಿಯಿಂದಲೇ ಚಿರಪರಿಚಿತವಾಗಿದ್ದ ಮಂಗಟ್ಟೆಗಳ ಈ ಹೊಸ ಅವತಾರವನ್ನು ಕಂಡು ನಾನು ಅಚ್ಚರಿಗೊಂಡೆ. ಪ್ರಭೇದಗಳು ಬೇರೆಬೇರೆ ಇದ್ದರೂ ಕೂಡ ಒಂದೇ ಕುಟುಂಬಕ್ಕೆ ಸೇರಿದ ಎರಡು ಪ್ರಭೇದಗಳ ನಡುವೆ ಧ್ವನಿಯಲ್ಲಿ ಇಷ್ಟೊಂದು ವ್ಯತ್ಯಾಸವಿರಲು ಸಾಧ್ಯವೇ ಎಂಬ ಕುತೂಹಲ ನನಗೆ. ಮೊದಲಿಗೆ ಕೂಗಿದ್ದು ಮಂಗಟ್ಟೆಯಾಗಿರಲಿಕ್ಕಿಲ್ಲ, ಬೇರಾವುದೋ ಹಕ್ಕಿಯಿರಬೇಕು, ಮಂಗಟ್ಟೆ ಅಲ್ಲಿ ಇರುವುದು ಕೇವಲ ಕಾಕತಾಳೀಯವಿರಬಹುದೆಂದು ಮೊದಲು ಭಾವಿಸಿದೆ. ಆದರೆ ಕೆಲವು ಕ್ಷಣಗಳ ಬಳಿಕ ಮತ್ತೆ ಅದೇ ಹಕ್ಕಿ ಕೀರಲು ಧ್ವನಿಯಲ್ಲಿ ಕೂಗಿದಾಗ ಇದೇ ಮಂಗಟ್ಟೆಯೆಂದು ನನಗೆ ಖಚಿತವಾಯಿತು. ಪ್ರಕೃತಿ ತನ್ನೊಡಲಲ್ಲಿ ಏನೆಲ್ಲ ವಿಸ್ಮಯಗಳನ್ನು ಹುದುಗಿಸಿಕೊಂಡಿದೆ ಎಂದು ಅಚ್ಚರಿಪಡುತ್ತ ನನ್ನ ಕೋಣೆಯತ್ತ ನಡೆದೆ.
ಅದಾದ ಮೇಲೆ ಎರಡು ವರ್ಷಗಳ ನಂತರ ನಾನು ಒಮ್ಮೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ನೂರಾರು ವಿಧವಿಧದ ಪ್ರಾಣಿಪಕ್ಷಿಗಳು ನೋಡಲು ಸಿಕ್ಕವು. ನನ್ನ ಗಮನ ಅಲ್ಲಿ ಒಂದೆಡೆ ಇದ್ದ ಗ್ರೇಟ್ ಇಂಡಿಯನ್ ಪೈಡ್ ಹಾರ್ನ್ ಬಿಲ್ ನತ್ತ ಹೋಯಿತು. ಇದೊಂದು ಭಾರೀ ಗಾತ್ರದ ಹಕ್ಕಿ. ಹೆಚ್ಚುಕಡಿಮೆ ದೊಡ್ಡ ರಣಹದ್ದಿನ ಗಾತ್ರಕ್ಕಿರುವ ಈ ಹಕ್ಕಿ ಕಪ್ಪುಬಿಳುಪು ಪ್ರಧಾನವಾದ ಹಕ್ಕಿಯಾದರೂ ಇದರ ಮೈಮೇಲೆ ಅಲ್ಲಲ್ಲಿ ಹಳದಿಬಣ್ಣದ ಮಚ್ಚೆಗಳನ್ನು ಸಹ ಕಾಣಬಹುದು. ಈ ಮಚ್ಚೆಗಳು ವಾಸ್ತವವಾಗಿ ಈ ಹಕ್ಕಿಯೇ ತನ್ನ ದೇಹದ ಹಿಂಭಾಗದಲ್ಲಿರುವ ಗ್ರಂಥಿಯೊಂದರಿಂದ ತೆಗೆದ ಎಣ್ಣೆಯನ್ನು ಸವರಿಕೊಳ್ಳುವ ಮೂಲಕ ಮಾಡಿಕೊಂಡಿದ್ದಾಗಿದೆ. ತನ್ನ ದೇಹದ ಅಲಂಕಾರಕ್ಕಾಗಿ ಹಕ್ಕಿಗಳು ಎಷ್ಟು ಶ್ರಮವಹಿಸುತ್ತವೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಇಂದು ನಮ್ಮ ಮನೆಯ ಹಿಂದಿನ ಕಾಡುಗಳ ಬಹುಭಾಗ ನಾಶವಾಗಿದೆ. ಅಲ್ಲಿ ಏನೇನೋ ಸುಧಾರಣೆಗಳನ್ನು ಮಾಡುವ ಉದ್ದೇಶದಿಂದ ಕೆಲವರು ಮರಗಳನ್ನು ಕಡಿದರು. ಯಾವ ಉದ್ದೇಶ ಸಾಧನೆಯಾಯಿತೋ ಗೊತ್ತಿಲ್ಲ. ಆದರೆ ಅನೇಕ ಹಣ್ಣಿನ ಮರಗಳ ನಾಶದಿಂದಾಗಿ ಮಂಗಟ್ಟೆಗಳಿಗೆ ತೊಂದರೆಯಾಗಿದ್ದಂತೂ ನಿಜ. ಈಗಲೂ ನಮ್ಮಲ್ಲಿ ಆಗೀಗ ಮಂಗಟ್ಟೆಗಳು ಕಾಣಸಿಗುತ್ತವೆಯಾದರೂ ಮೊದಲಿನಷ್ಟು ಸಂಖ್ಯೆಯಲ್ಲಿ ಅವು ಇಲ್ಲ.
ಮಂಗಟ್ಟೆಗಳು ಅಪರೂಪವಾಗಲು ಕಾರಣಗಳೇನೆಂದು ಹುಡುಕುತ್ತ ಹೋದರೆ ನಮಗೆ ಸಿಗುವುದು ಸರ್ವೇಸಾಧಾರಣವಾಗಿ ಎಲ್ಲ ಹಕ್ಕಿಗಳ ವಿನಾಶಕ್ಕೆ ಕಾರಣವಾಗುವ ಸರ್ವೇಸಾಧಾರಣ ಕಾರಣಗಳೇ. ಮೊದಲನೆಯ ಬಹುಮುಖ್ಯ ಕಾರಣವೆಂದರೆ ಅರಣ್ಯನಾಶ. ಈ ಹಕ್ಕಿಗಳು ತಮ್ಮ ಆಹಾರಕ್ಕಾಗಿ ಹಣ್ಣುಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಹಾಗಾಗಿ ಹಣ್ಣಿನ ಮರಗಳ ನಾಶವೆಂದರೆ ಮಂಗಟ್ಟೆಗಳ ನಾಶವೂ ಅದರಲ್ಲಿ ಸೇರಿದೆ ಎಂದೇ ಅರ್ಥ. ನಾವಿಂದು ಹಣ್ಣಿರುವ ಮರಗಳನ್ನು ಕೇವಲ ನಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿದ್ದೇವೆಯೇ ಹೊರತು ಕಾಡಿನಲ್ಲಿರುವ ಹಣ್ಣಿನ ಮರಗಳನ್ನು ನಾವಿಂದು ನೋಡುವ ದೃಷ್ಟಿಯೇ ಬೇರೆಯಾಗಿದೆ. ಮಂಗಟ್ಟೆಗಳನ್ನು ಸಂರಕ್ಷಿಸಿ ಇಂದು ಯಾರಿಗೂ ಆಗಬೇಕಾಗಿದ್ದು ಏನೂ ಇಲ್ಲ. ಆದ್ದರಿಂದ ಮರಮುಟ್ಟಿಗಾಗಿ ಬೇಕಾಬಿಟ್ಟಿ ದೊಡ್ಡದೊಡ್ಡ ಮರಗಳನ್ನು ಕಡಿಯುವುದು ಅಭ್ಯಾಸವಾಗಿದೆ.
ಮಂಗಟ್ಟೆಗಳು ಮೊಟ್ಟೆಯಿಟ್ಟು ಮರಿಮಾಡುವುದು ಮರಗಳ ಪೊಟರೆಯೊಳಗೆ. ಹೆಣ್ಣುಹಕ್ಕಿ ಪೊಟರೆಯೊಳಗೆ ಹೊಕ್ಕನಂತರ ಪೊಟರೆಯ ಬಾಯಿಯಿಂದ ಕೊಕ್ಕನ್ನು ಮಾತ್ರ ಹೊರಹಾಕುವಷ್ಟು ಜಾಗ ಬಿಟ್ಟು ಉಳಿದೆಲ್ಲ ಜಾಗವನ್ನು ತನ್ನದೇ ಹಿಕ್ಕೆ ಮತ್ತಿತರ ವಸ್ತುಗಳ ಮಿಶ್ರಣದಿಂದ ಮುಚ್ಚುತ್ತದೆ. ಆ ಸಂದರ್ಭದಲ್ಲಿ ಪೊಟರೆಯೊಳಗೇ ಗೃಹಬಂಧನಕ್ಕೊಳಗಾಗುವ ಹೆಣ್ಣು ಮತ್ತದರ ಮರಿಗಳಿಗೆ ಗಂಡೇ ಆಹಾರವನ್ನು ಹೊರಗಿನಿಂದ ತಂದುಕೊಡಬೇಕು. ಆ ಸಂದರ್ಭದಲ್ಲಿ ಹೆಣ್ಣಿನ ಗರಿ, ಪುಕ್ಕಗಳೆಲ್ಲ ಉದುರಿಹೋಗಿ ಅದು ಹಾರಲಾರದ ಸ್ಥಿತಿಯಲ್ಲಿರುತ್ತವೆ. ಮರಿಗಳು ಬೆಳೆದು ದೊಡ್ಡದಾಗುತ್ತಿದ್ದಂತೆ ಅದಕ್ಕೆ ಮತ್ತೆ ಗರಿಗಳು ಬೆಳೆದು ಅದು ಹಾರಲು ಸಜ್ಜಾಗುತ್ತದೆ ಮತ್ತು ಗೂಡನ್ನು ಒಡೆದುಕೊಂಡು ಹೆಣ್ಣು ಹೊರಕ್ಕೆ ಬರುತ್ತದೆ. ಹಾಗೆ ಹೆಣ್ಣು ಒಳಗಿದ್ದಾಗಲೇ ಗಂಡು ಹೊರಗಡೆ ಏನಾದರೂ ಆಗಿ ಸತ್ತರೆ ಇಡೀ ಕುಟುಂಬ ಉಪವಾಸಬಿದ್ದು ಸತ್ತಂತೆಯೇ ಸರಿ.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮಿಂಚುಳ್ಳಿ ಪುಸ್ತಕದಲ್ಲಿ ಈ ಹಕ್ಕಿಗಳನ್ನು ಪ್ರಸ್ತಾವಿಸಿದ್ದಾರೆ. ಒಮ್ಮೆ ಅವರ ಮನೆಗೆಲಸದವನು ಪುಕ್ಕಗಳೆಲ್ಲ ಉದುರಿ ಬೋಳಾಗಿದ್ದ ಈ ಪಕ್ಷಿಯೊಂದನ್ನು ಅವರಿಗೆ ತಂದುಕೊಟ್ಟನಂತೆ. ಮೊದಲಿಗೆ ಅವರಿಗೆ ಅದೇನೆಂದು ತಿಳಿಯಲಿಲ್ಲವಂತೆ. ಕಡೆಗೆ ಮಂಗಟ್ಟೆಗಳ ಜೀವನಕ್ರಮವನ್ನು ನೋಡಿದಾಗ ಅದು ಮಂಗಟ್ಟೆಯೇ ಎಂದು ಅವರಿಗೆ ಖಚಿತವಾಯಿತಂತೆ. ರೆಕ್ಕೆಪುಕ್ಕಗಳೆಲ್ಲ ಉದುರಿ ಬೋಳಾಗಿ ನೆಲದ ಮೇಲೆ ನಡೆದಾಡುತ್ತಿದ್ದ ಈ ಹಕ್ಕಿಯನ್ನು ಅವರ ನಾಯಿ ಕಿವಿ ನೋಡಿ ಸುಲಭವಾಗಿ ಹಿಡಿದು ಕೊಂದುಹಾಕಿತಂತೆ. ತಮ್ಮ ಕರ್ವಾಲೋ ಕಾದಂಬರಿಯಲ್ಲಿ ಕೂಡ ಅವರು ಇದನ್ನು ಪ್ರಸ್ತಾವಿಸಿದ್ದಾರೆ. ಕಾಡಿನಲ್ಲಿ ಮಂಗಟ್ಟೆಯೊಂದನ್ನು ಹೊಡೆಯಲು ಕರಿಯಪ್ಪ ಗುಂಡು ಹಾರಿಸಿದ್ದನ್ನೂ ಅದೃಷ್ಟವಶಾತ್ ಅದು ಗುರಿ ತಪ್ಪಿದ್ದನ್ನೂ ಕರ್ವಾಲೋ ಅವನಿಗ ಬೈದಿದ್ದನ್ನೂ ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ.
ಎಲ್ಲ ಮಂಗಟ್ಟೆಗಳ ಪ್ರಧಾನ ಲಕ್ಷಣ ಅವುಗಳ ಬೃಹದ್ಗಾತ್ರದ ಕೊಕ್ಕು. ಎರಡು ಪ್ರಭೇದದ ಗ್ರೌಂಡ್ ಹಾರ್ನ್ ಬಿಲ್ ಗಳು ಆಫ್ರಿಕಾದಲ್ಲಿವೆ. ಈ ಪಕ್ಷಿಗಳು ಬೇರೆ ಮಂಗಟ್ಟೆಗಳಂತಲ್ಲದೆ ನೆಲವನ್ನೇ ಆಶ್ರಯಿಸಿದ ಪಕ್ಷಿಗಳು. ಹಾಗೆಂದು ಇವು ಸಂಪೂರ್ಣವಾಗಿ ಹಾರಾಟದ ಶಕ್ತಿಯನ್ನು ಕಳೆದುಕೊಂಡಿಲ್ಲ. ಭಾರೀ ಗಾತ್ರದಿಂದಾಗಿ ಇವು ಲೀಲಾಜಾಲವಾಗಿ ಹಾರಾಡಲಾರವು. ಆದರೆ ಅಗತ್ಯಬಿದ್ದಾಗ ಸ್ವಲ್ಪ ದೂರ ಹಾರಬಲ್ಲವು. ನೆಲದ ಮೇಲೆಯೇ ಬೇಟೆಯಾಡುವ ಇವು ಕಪ್ಪೆ, ಹಲ್ಲಿ, ಮೃದ್ವಂಗಿಗಳು, ಸಣ್ಣಪುಟ್ಟ ಆಮೆ ಮತ್ತಿತರ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಚಿಕ್ಕಗಾತ್ರದ ಸಸ್ತನಿಗಳನ್ನೂ ಸಹ ಹಿಡಿಯುವ ಇವು ಒಮ್ಮೊಮ್ಮೆ ಮೊಲದ ಗಾತ್ರದ ಸಸ್ತನಿಗಳನ್ನೂ ಹಿಡಿಯುತ್ತವೆ.
ಈ ಹಕ್ಕಿಗಳ ಮೈಯೆಲ್ಲ ಕಪ್ಪುಬಣ್ಣವಿದ್ದು, ಕೊಕ್ಕು ಮತ್ತು ಕತ್ತಿನ ಕೆಳಗಿನ ಚರ್ಮ ಮಾತ್ರ ಕಡುಗೆಂಪು ಬಣ್ಣದಿಂದ ಕಣ್ಣುಕುಕ್ಕುತ್ತದೆ. ಹೆಣ್ಣುಗಳಲ್ಲಿ ಇದು ನೀಲಿ ಬಣ್ಣದಲ್ಲಿರುತ್ತದೆ. ಗಂಡಿಗೆ ಇದು ಹೆಣ್ಣನ್ನು ಆಕರ್ಷಿಸುವ ಉದ್ದೇಶದಿಂದಲೇ ಇದೆ. ಈ ಹಕ್ಕಿಗಳು ದೀರ್ಘಾಯುಷ್ಯಕ್ಕೂ ಹೆಸರಾಗಿವೆ. ಸುಮಾರು ಎಪ್ಪತ್ತು ವರ್ಷಗಳವರೆಗೆ ಬದುಕುತ್ತವೆ. ಸಾಮಾನ್ಯವಾಗಿ ಒಂದರಿಂದ ಮೂರು ಮೊಟ್ಟೆಗಳನ್ನಿಡುತ್ತದೆ. ಆದರೆ ಇವುಗಳಲ್ಲಿ ಮೊದಲು ಹೊರಬರುವ ಮರಿ ನಂತರದ ಮರಿಗಳನ್ನು ಕೊಲ್ಲುತ್ತದೆ. ಹಾಗಾಗಿ ಸಾಮಾನ್ಯವಾಗಿ ಕೊನೆಗೆ ಉಳಿಯುವುದು ಒಂದೇ ಮರಿ.

ಕೆಲಸಕ್ಕಾಗಿ ನಾನು ಮೂಡಿಗೆರೆಗೆ ಬಂದಮೇಲೆ ಈ ಹಕ್ಕಿಗಳನ್ನು ಮತ್ತೆ ನೋಡುವಂತಾಗಿದೆ. ನಮ್ಮ ಮನೆ ಇಲ್ಲಿ ಸಂಪೂರ್ಣ ಹಳ್ಳಿಯೂ ಅಲ್ಲದ, ಹಾಗೆಂದು ದೊಡ್ಡ ಪೇಟೆಯೂ ಅಲ್ಲದ ಕಡೆ ಇದೆ. ಆದ್ದರಿಂದ ಇಲ್ಲಿ ಹಕ್ಕಿಗಳನ್ನು ದಿನನಿತ್ಯ ನೋಡುವ ಅವಕಾಶ ಧಾರಾಳವಾಗಿಯೇ ಲಭಿಸುತ್ತದೆ. ಮನೆಯ ಮಹಡಿಯ ಮೇಲೇರಿ ಸುತ್ತ ಒಮ್ಮೆ ದೃಷ್ಟಿ ಹಾಯಿಸಿದರೆ ಸುತ್ತ ಗದ್ದೆ, ತೋಟ, ಕಾಡು ಇತ್ಯಾದಿ ವನಸಂಪತ್ತಿನ ದರ್ಶನವಾಗುತ್ತದೆ. ಮಂಗಟ್ಟೆಗಳನ್ನು ಸಹ ಇಲ್ಲಿ ಧಾರಾಳವಾಗಿ ಕಾಣಬಹುದಾದರೂ ಹತ್ತಿರದ ನೋಟ ಲಭ್ಯವಾಗುವುದು ಸ್ವಲ್ಪ ಕಷ್ಟವೇ. ಅದರ ಕೂಗು ಕೇಳಿದೊಡನೆಯೇ ಮಹಡಿಯೇರಿ ದಿಟ್ಟಿಸಿದರೆ ದೂರದಲ್ಲೆಲ್ಲೋ ಮರವೊಂದರ ಮೇಲೆ ಕುಳಿತು ಕತ್ತು ಉದ್ದ ಮಾಡಿ ನೋಡುತ್ತಿರುವ ಮಂಗಟ್ಟೆ ಕಣ್ಣಿಗೆ ಬೀಳುತ್ತದೆ. ಕುಸಿಯುತ್ತಿರುವ ಪರಿಸರ ವ್ಯವಸ್ಥೆಯ ನಡುವೆಯೂ ಮಂಗಟ್ಟೆಗಳ ಸಂಖ್ಯೆ ತೀರಾ ಕುಸಿದಿಲ್ಲ ಎಂಬ ಆಶಾಭಾವನೆಯನ್ನು ಮೂಡಿಸುತ್ತವೆ!

Tuesday 4 October 2016

ಕಳ್ಳಿಪೀರನ ಪ್ರಪಂಚದಲ್ಲಿ....

               ಕಳ್ಳಿಪೀರ, ಜೇನ್ನೊಣಬಾಕ, ಗಣಿಗಾರಲು ಹಕ್ಕಿ ಎಂಬ ನಾನಾ ಹೆಸರುಗಳಿಂದ ಕರೆಯಲ್ಪಡುವ ಬೀ ಈಟರ್ ಹಕ್ಕಿಗಳು ಮೂಡಿಗೆರೆಯ ನಮ್ಮ ಮನೆಯ ಸುತ್ತಮುತ್ತ ಧಾರಾಳವಾಗಿವೆ. ಮನೆಯ ಬಾಲ್ಕನಿಯ ಮೇಲೆ ನಿಂತು ನೋಡಿದರೆ ಸಾಕು, ಹತ್ತಾರು ಹಕ್ಕಿಗಳು ಜಮಾಯಿಸಿ ಮನೆಯ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳ ಮೇಲೆ ಕುಳಿತು ಸುತ್ತೆಲ್ಲ ಕಣ್ಣು ಹಾಯಿಸುತ್ತಿರುತ್ತವೆ. ಎಲ್ಲಾದರೂ ಒಂದು ಜೋನುಹುಳವೋ ಅಥವಾ ಬೇರಾವುದೇ ಕೀಟವೋ ಕಂಡುಬಂದರೆ ಹಾರಿಹೋಗಿ ಅವುಗಳನ್ನು ಹಿಡಿದುತಂದು ತಂತಿಗೇ ಚಚ್ಚಿಚಚ್ಚಿ ಕೊಂದು ನುಂಗುತ್ತವೆ. ಗಾಳಿಯಲ್ಲೇ ಕೀಟಗಳನ್ನು ಹಿಡಿಯುವ ಕೌಶಲ್ಯದಲ್ಲಂತೂ ಅವಕ್ಕೆ ಸರಿಸಾಟಿಯಾದ ಹಕ್ಕಿಗಳು ಬೇರೆ ಇಲ್ಲವೆಂದರೆ ತಪ್ಪಾಗಲಾರದು. ಈ ಹಕ್ಕಿಗಳ ಕೆಲವು ಅಪರೂಪದ ಚಿತ್ರಗಳಿವು. 





Monday 3 October 2016

ಇತಿಹಾಸದ ಪುಟಗಳಲ್ಲಿ ಸೇರಿಹೋದ ರಣಥಂಬೋರ್ ನ ರಾಣಿ ಮಚಲಿ

ಇತಿಹಾಸದ ಪುಟಗಳಲ್ಲಿ ಸೇರಿಹೋದ ರಣಥಂಬೋರ್ ನ ರಾಣಿ ಮಚಲಿ
    ಆಗಸ್ಟ್ 18, 2016. ಭಾರತದ ವನ್ಯಜೀವಿ ಪ್ರೇಮಿಗಳಿಗೆಲ್ಲ ಅತ್ಯಂತ ದುಃಖದ ದಿನವಾಗಿ ಮಾರ್ಪಟ್ಟಿತು. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮುಳುಗೆದ್ದು, ಒಲಿಂಪಿಕ್ಸ್ ನಲ್ಲಿ ಪದಕವಿಲ್ಲವೆಂಬ ಬೇಸರವನ್ನು ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಹೊಡೆದೋಡಿಸಿದ ಮರುದಿನವೇ ಇಡೀ ಭಾರತವೇ ಕಣ್ಣೀರಿಡುವ ಸುದ್ದಿ ರಾಜಸ್ತಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಿಂದ ಬಂದಿತು. ಮಚಲಿ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದ್ದ ಇಪ್ಪತ್ತು ವರ್ಷ ವಯಸ್ಸಿನ ಹೆಣ್ಣುಹುಲಿ ಕೊನೆಯುಸಿರೆಳೆಯುವುದರೊಂದಿಗೆ ನಮ್ಮ ವನ್ಯಜೀವಿ ಲೋಕದಲ್ಲಿ ವರ್ಣರಂಜಿತವಾದ ಅಧ್ಯಾಯವೊಂದು ಕೊನೆಗೊಂಡಂತಾಯಿತು.
          ನಮ್ಮ ಕಾಡುಗಳಲ್ಲಿ ಪ್ರತಿದಿನವೂ ನೂರಾರು ಪ್ರಾಣಿಗಳು ಸಾಯುತ್ತಲೇ ಇರುತ್ತವೆ. ಹಾಗಾದರೆ ಮಚಲಿಯ ಸಾವಿಗೆ ಏಕಿಷ್ಟು ಮಹತ್ವ, ಅದಕ್ಕಾಗಿ ದೇಶವೇ ಏಕೆ ಕಣ್ಣೀರಿಡಬೇಕೆಂಬ ಪ್ರಶ್ನೆ ಕೆಲವರನ್ನು ಕಾಡಿರಬಹುದು. ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಂರಕ್ಷಣೆಯ ವಿಷಯಕ್ಕೆ ಬಂದರೆ ಹುಲಿಯ ಮಹತ್ವ ಬೇರಾವುದೇ ಪ್ರಾಣಿಗಿಂತ ಹೆಚ್ಚಿದೆ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸತ್ಯ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಹುಲಿಗಣತಿ ನಡೆಸುವುದೂ ಇದೇ ಕಾರಣಕ್ಕೆ. ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು ಅರ್ಧಲಕ್ಷದವರೆಗೆ ಇದ್ದ ನಮ್ಮ ದೇಶದ ಹುಲಿಗಳ ಸಂಖ್ಯೆ ಈಗ ಒಂದೆರಡು ಸಾವಿರಕ್ಕಿಳಿದಿದೆ. ಈ ಪರಿಸ್ಥಿತಿಯೇನಾದರೂ ಹೀಗೇ ಮುಂದುವರೆದರೆ ನಾವು ಇನ್ನೆಷ್ಟು ಕಾಲ ಹುಲಿಗಳನ್ನು ನೋಡಬಲ್ಲೆವೆಂದು ಖಚಿತವಾಗಿ ಹೇಳುವಂತಿಲ್ಲ. ಆದ್ದರಿಂದಲೇ ಪ್ರತಿಯೊಂದು ಹುಲಿಯ ಸಾವೂ ಅಷ್ಟೊಂದು ಮಹತ್ವ ಪಡೆದುಕೊಳ್ಳುತ್ತದೆ.
          ಮಚಲಿ ಎಂದರೆ ಮೀನು ಎಂದರ್ಥ. ಮಚಲಿಗೆ ಆ ಹೆಸರೇಕೆ ಬಂತೆಂದು ಹುಡುಕುತ್ತ ಹೋದರೆ ಅದರ ಮೂಲ ಅವಳ ತಾಯಿಯತ್ತ ಹೊರಳುತ್ತದೆ. ಅವಳ ತಾಯಿಯ ಮುಖದ ಮೇಲೆ ಮೀನಿನಂಥ ಗುರುತು ಇತ್ತು. ಅದರಿಂದಾಗಿ ಆಕೆಗೆ ಮಚಲಿ ಎಂಬ ಹೆಸರು ಬಂತು. ಆ ಹೆಸರೇ ಮಗಳಿಗೂ ಬಳುವಳಿಯಾಗಿ ಬಂದಿತು. ತಾಯಿಯಿಂದ ಆ ಹೆಸರನ್ನು ಪಡೆಯುವ ಮೊದಲು ಮಚಲಿ ಜಲಾರಾ ಎಂಬ ನಾಮಧೇಯ ಹೊಂದಿದ್ದಳು. ಅದು ಆಕೆ ವಾಸವಾಗಿದ್ದ ರಣಥಂಬೋರ್ ರಾಷ್ಟ್ರೀಯ ಉದ್ಯಾನದ ಒಂದು ಭಾಗದ ಹೆಸರು.
          ಮಚಲಿಗೆ ಈ ನಿಜನಾಮಧೆಯವಲ್ಲದೆ ಬೇರೆಬೇರೆ ಹೆಸರುಗಳೂ ಇದ್ದವು. ಆಕೆಯನ್ನು ಕೆರೆಗಳ ರಾಣಿ (ಲೇಡಿ ಆಫ್ ದ ಲೇಕ್ಸ್), ರಣಥಂಬೋರ್ ರಾಣಿ (ಕ್ವೀನ್ ಆಫ್ ರಣಥಂಬೋರ್), ಹುಲಿಗಳ ರಾಣಿಮಾತೆ (ದ ಮದರ್ ಕ್ವೀನ್ ಆಫ್ ಟೈಗರ್ಸ್) ಹಾಗೂ ಮೊಸಳೆ ಹಂತಕಿ (ಕ್ರೊಕೊಡೈಲ್ ಕಿಲ್ಲರ್) ಎಂಬ ಹೆಸರುಗಳಿದ್ದವು. ಕೊನೆಯ ಹೆಸರು ಯಾಕೆ ಬಂತೆಂದು ಯಾರು ಬೇಕಾದರೂ ಊಹಿಸಬಹುದು. ಹದಿನಾಲ್ಕು ಅಡಿ ಉದ್ದದ ಮಗ್ಗರ್ ಮೊಸಳೆಯೊಂದನ್ನು ಕೊಲ್ಲುವಾಗ ಮಚಲಿ ತೋರಿದ ಅಸಾಧಾರಣ ಧೈರ್ಯ ಮತ್ತು ಯುಕ್ತಿಗಳೇ ಆಕೆಗೆ ಆ ಹೆಸರು ಬರಲು ಕಾರಣವಾಯಿತು. ಆ ಹೋರಾಟ ವನ್ಯಜೀವಿಗಳ ಲೋಕದಲ್ಲೇ ಒಂದು ರೋಚಕ ಅಧ್ಯಾಯವಾಗಿದೆ. ಏಕೆಂದರೆ ಹುಲಿ ಮತ್ತು ಮೊಸಳೆಗಳ ನಡುವಿನ ಕಾದಾಟವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು ಅದೇ ಮೊದಲ ಸಲವಾಗಿತ್ತು. ಆ ದೃಶ್ಯ ಜಗತ್ತಿನಾದ್ಯಂತ ವನ್ಯಜೀವಿ ಪ್ರೇಮಿಗಳಿಗೆ ಹುಚ್ಚುಹಿಡಿಸಿತ್ತು. ಸಾಮಾನ್ಯವಾಗಿ ನೆಲವಾಸಿ ಪ್ರಾಣಿಗಳಿಗೆ ಮೊಸಳೆಗಳನ್ನು ಕೊಲ್ಲುವುದು ಸುಲಭದ ಮಾತಲ್ಲ. ಆಫ್ರಿಕಾದ ಚಿರತೆಗಳು ಹಾಗೂ ದಕ್ಷಿಣ ಅಮೆರಿಕಾದ ಜಾಗ್ವಾರ್ ಗಳು ಇದರಲ್ಲಿ ಎತ್ತಿದ ಕೈ. ಕ್ರೂಗರ್ ರಾಷ್ಟ್ರೀಯ ಉದ್ಯಾನದಲ್ಲೊಮ್ಮೆ ಚಿರತೆಯೊಂದು ಮೊಸಳೆಯನ್ನು ಹೊಳೆಯಿಂದ ಹೊರಕ್ಕೆಳೆದು ಕೊಂದಿದ್ದು ದೊಡ್ಡ ಸುದ್ದಿಯಾಗಿತ್ತು. ಮಚಲಿ ಕೂಡ ಅಂಥದ್ದೇ ಧೈರ್ಯದಿಂದ ಹೆಸರುವಾಸಿಯಾದಳು.
          ಮಚಲಿ ತನ್ನ ಜೀವಿತಾವಧಿಯಲ್ಲಿ ಏಳು ಹೆಣ್ಣು ಮತ್ತು ನಾಲ್ಕು ಗಂಡುಹುಲಿಗಳಿಗೆ ತಾಯಿಯಾದಳು. ರಣಥಂಬೋರ್ ಉದ್ಯಾನದ ಶೇಕಡಾ ಅರವತ್ತರಷ್ಟು ಹುಲಿಗಳು ಮಚಲಿಯ ಸಂತಾನದಿಂದಲೇ ಬಂದವು ಎಂಬುದು ಒಂದು ಅಂದಾಜು. ತನ್ನ ಮರಿಗಳನ್ನು ಶತ್ರುಗಳಾದ ಬೇರೆ ಗಂಡುಹುಲಿಗಳು ಅಥವಾ ಬೇರಾವುದೇ ಶತ್ರುಗಳಿಂದ ರಕ್ಷಿಸಿಕೊಳ್ಳುವಲ್ಲಿ ಸಹ ಮಚಲಿ ಅಸಾಧಾರಣ ಧೈರ್ಯ, ಶೌರ್ಯಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಎಲ್ಲ ಪ್ರಾಣಿಗಳೂ ತಂತಮ್ಮ ಮರಿಗಳನ್ನು ರಕ್ಷಿಸಲು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ಹಾಗಿರುವಾಗ ಮಚಲಿಯದ್ದೇನು ವಿಶೇಷ ಎನ್ನಿಸಬಹುದು. ಆದರೆ ಮಚಲಿ ತನ್ನ ಮರಿಗಳನ್ನು ರಕ್ಷಿಸಿದ್ದು ಸಾಧಾರಣ ಎದುರಾಳಿಗಳ ವಿರುದ್ಧವಲ್ಲ, ಕಾಡಿನಲ್ಲಿ ಹುಲಿಯೊಂದು ಹೆದರಬೇಕಾದ ಏಕೈಕ ಎದುರಾಳಿಯೆಂದರೆ ಇನ್ನೊಂದು ಹುಲಿ ಎಂಬ ಮಾತಿದೆ. ಮಚಲಿ ಅನೇಕ ಗಂಡುಹುಲಿಗಳ ವಿರುದ್ಧ ತನ್ನ ಮರಿಗಳ ರಕ್ಷಣೆಗಾಗಿ ಹೋರಾಡಿದ್ದಾಳೆ. ತನಗಿಂತ ದೊಡ್ಡ ಅನೇಕ ಹುಲಿಗಳನ್ನು ಹೆಸರಿಸಿ ಓಡಿಸಿದ ಖ್ಯಾತಿ ಅವಳದ್ದು. ಜೊತೆಗೆ ಆಕೆ ರಣಥಂಬೋರಿನ ಕೋಟೆ ಮತ್ತು ಕೆರೆಗಳ ಸನಿಹದಲ್ಲೇ ತನ್ನ ಕ್ಷೇತ್ರವನ್ನು ಸ್ಥಾಪಿಸಿಕೊಂಡಿದ್ದರಿಂದ ಅಲ್ಲಿ ಮೊಸಳೆಗಳೊಂದಿಗೆ ಮುಖಾಮುಖಿ ಸಾಮಾನ್ಯವಾಗಿತ್ತು.
          ಚೀನಾದಲ್ಲೊಂದು ಗಾದೆಯಿದೆ. ಒಂದೇ ಪ್ರದೇಶದಲ್ಲಿ ಎರಡು ಹುಲಿಗಳನ್ನು ಕಾಣಲಾಗದು ಎಂಬರ್ಥದ ಗಾದೆ ಅದು. ಹುಲಿಗಳು ಎಂದೂ ಗುಂಪಾಗಿ ಬದುಕುವುದಿಲ್ಲ ಅಥವಾ ಯಾವುದೇ ಒಂದು ಹುಲಿ ತನ್ನ ಕಾರ್ಯಕ್ಷೇತ್ರದಲ್ಲಿ ಬೇರೊಂದು ಹುಲಿ ಬರುವುದನ್ನು ಸಹಿಸುವುದಿಲ್ಲ. ಒಂದೊಂದು ಹುಲಿ ತನ್ನದೇ ಆದ ನಿರ್ದಿಷ್ಟ ಕಾರ್ಯಕ್ಷೇತ್ರವನ್ನು ಸ್ಥಾಪಿಸಿಕೊಂಡಿರುತ್ತದೆ. ಆ ಪ್ರದೇಶಕ್ಕೆ ಬೇರೆ ಹುಲಿಗಳಿಗೆ ಪ್ರವೇಶವಿಲ್ಲ. ಒಂದೊಮ್ಮೆ ಬೇರೆ ಹುಲಿ ಬಂದರೆ ಕಾದಾಟ ನಿಶ್ಚಿತ. ಇಂಥ ಕಾದಾಟದಲ್ಲೇ ಎಷ್ಟೋ ಸಂದರ್ಭದಲ್ಲಿ ಹುಲಿಗಳು ಸಾವನ್ನಪ್ಪುವುದೂ ಇದೆ. ಒಂದೊಂದು ಹುಲಿಯೂ ಹತ್ತಾರು ಚದರ ಕಿಲೋಮೀಟರ್ ವಿಸ್ತಾರದ ಕಾರ್ಯಕ್ಷೇತ್ರವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ತಾಯಿ ಒಂದು ವಯಸ್ಸಿಗೆ ಬಂದಮೇಲೆ ಮರಿಗಳನ್ನು ಹೊರಹಾಕುತ್ತದೆ. ಆಗ ಆ ಮರಿ ತನಗಾಗಿ ಹೊಸ ಕ್ಷೇತ್ರವೊಂದನ್ನು ಸ್ಥಾಪಿಸಿಕೊಳ್ಳಬೇಕು. ಎಷ್ಟೋ ವೇಳೆ ತಾಯಿಯಿಂದ ಮರಿಗಳು ಕ್ಷೇತ್ರವನ್ನು ಕಿತ್ತುಕೊಳ್ಳುವುದೂ ಇದೆ. ಮಚಲಿ ಕೂಡ ಹೀಗೆಯೇ ಅವಳ ತಾಯಿಯಿಂದ ಕ್ಷೇತ್ರವನ್ನು ಕಿತ್ತುಕೊಂಡಳು. ಆ ಬಳಿಕ ಸುಮಾರು ಒಂದೂವರೆ ದಶಕಗಳ ಕಾಲ ತನ್ನ ಕ್ಷೇತ್ರದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದಳು.
          ಮಚಲಿ ತನ್ನ ಜೀವಿತಾವಧಿಯುದ್ದಕ್ಕೂ ಪ್ರವಾಸಿಗರ ಬಹುಮುಖ್ಯ ಆಕರ್ಷಣೆಯಾಗಿದ್ದಳು. ಪ್ರವಾಸೋದ್ಯಮದಿಂದಲೇ ಅಂದಾಜು ಅರವತ್ತೈದು ಕೋಟಿ ರೂಪಾಯಿಗಳ ಆದಾಯ ತಂದುಕೊಟ್ಟವಳೀಕೆ. ಜೊತೆಗೆ ನಮ್ಮ ದೇಶದಲ್ಲಿ ಅತಿಹೆಚ್ಚು ಫೋಟೋಗಳನ್ನು ತೆಗೆಸಿಕೊಂಡ ಹುಲಿ ಎಂಬ ಹೆಗ್ಗಳಿಕೆಯೂ ಆಕೆಗಿದೆ. ಬಾಂಧವಗಡದ ಸೀತಾ ಎಂಬ ಹುಲಿಯೊಂದಿಗೆ ಈಕೆ ಈ ವಿಷಯದಲ್ಲಿ ಸ್ಪರ್ಧೆಗಿಳಿದಿದ್ದಳು. ಅನಿಮಲ್ ಪ್ಲಾನೆಟ್ ಚಾನೆಲ್ಲಿನಲ್ಲೂ ಆಕೆಯನ್ನು ಒಮ್ಮೆ ತೋರಿಸಲಾಗಿತ್ತು. ಪ್ರವಾಸೊದ್ಯಮದಿಂದ ಅತ್ಯಧಿಕ ಆದಾಯ ತಂದುಕೊಟ್ಟ ಕಾರಣಕ್ಕೆ ಆಕೆಗೆ ಅನೇಕ ಪುರಸ್ಕಾರಗಳೂ ಲಭ್ಯವಾಗಿದ್ದವು. ಆದರೆ ಆಕೆ ಮಾತ್ರ ಅದ್ಯಾವುದರ ಪರಿವೆಯೇ ಇಲ್ಲದೆ ಇಡೀ ರಣಥಂಬೋರಿನ ಉದ್ದಗಲಕ್ಕೂ ರಾಣಿಯಂತೆ ಮೆರೆದಳು.
          ತನ್ನ ಕ್ಷೇತ್ರದಲ್ಲಿ ಮಚಲಿ ಮೆರೆಯುವಾಗ ಅನೇಕ ಬಾರಿ ಗಂಡುಹುಲಿಗಳಿಂದ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಅದನ್ನೆಲ್ಲ ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿದ್ದು ಆಕೆಯ ಹೆಚ್ಚುಗಾರಿಕೆ. 1997ರಲ್ಲಿ ಮೊದಲಬಾರಿಗೆ ಮಚಲಿಯನ್ನು ಗಮನಿಸಲಾಯಿತು. ಆಕೆ ಬ್ಯಾಂಬೂ ರಾಮ್ ಎಂಬ ಹೆಬ್ಬುಲಿಯೊಂದಿಗೆ ಸೇರಿ ಮೂರು ಮರಿಗಳಿಗೆ ಜನ್ಮವಿತ್ತಳು. ಸುಂದರಿ ಎಂಬ ಹೆಸರಿನ ಹೆಣ್ಣು ಮತ್ತು ಬ್ರೋಕನ್ ಟೈಲ್ ಹಾಗೂ ಸ್ಲ್ಯಾಂಟ್ ಇಯರ್ ಎಂಬ ಹೆಸರಿನ ಎರಡು ಗಂಡುಮರಿಗಳು ಮಚಲಿಯ ಚೊಚ್ಚಲ ಹೆರಿಗೆಯಲ್ಲಿ ಜನಿಸಿದವು. ಬ್ಯಾಂಬೂ ರಾಮ್ ದುರದೃಷ್ಟವಶಾತ್ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದಾಗ ಮೂರು ಮರಿಗಳನ್ನು ಬೆಳೆಸುವ ಜವಾಬ್ದಾರಿ ಮಚಲಿಯ ಮೇಲೆ ಬಿತ್ತು. ಆಕೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದಳು ಕೂಡ. ಮುಂದೆ 2001ರ ಡಿಸೆಂಬರ್ ನಲ್ಲಿ ಈ ಮೂರು ಮರಿಗಳು ತಾಯಿಯಿಂದ ಬೇರೆಯಾಗಿ ತಮ್ಮದೇ ಕ್ಷೇತ್ರಗಳನ್ನು ಸ್ಥಾಪಿಸಿಕೊಂಡವು.
          ಮುಂದೆ ಆಕೆ ನಿಕ್ ಇಯರ್ ಮತ್ತು ಇನ್ನೊಂದು ಗಂಡಿನೊಡನೆ ಜೊತೆಗೂಡಿ ಅನೇಕ ಮರಿಗಳಿಗೆ ಜನ್ಮವಿತ್ತಳು ಮಚಲಿ. ಆದರೆ ವಯಸ್ಸಾದಂತೆಲ್ಲ ಅವಳ ಹಲ್ಲುಗಳು ಉದುರತೊಡಗಿದವು. 2005ರಲ್ಲಾಗಲೇ ಆಕೆ ಇನ್ನೂ ಒಂಬತ್ತರ ವಯಸ್ಸಿನಲ್ಲಿದ್ದಾಗಲೇ ಒಂದು ಕೋರೆಹಲ್ಲು ಉದುರಿತ್ತು. ಮುಂದೆ ಕೆಲವೇ ವರ್ಷಗಳಲ್ಲಿ ಮೊಸಳೆಗಳೊಂದಿಗಿನ ಕಾದಾಟದ ಫಲವಾಗಿ ಇನ್ನುಳಿದ ಹಲ್ಲುಗಳನ್ನೂ ಕಳೆದುಕೊಂಡ ಮಚಲಿ ಕಳೆದ ಕೆಲವು ತಿಂಗಳುಗಳಿಂದ ಬಹುತೇಕ ಎಲ್ಲ ಹಲ್ಲುಗಳನ್ನೂ ಕಳೆದುಕೊಂಡಿತ್ತು. ಜೊತೆಗೆ ಒಂದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿತ್ತು. ಹಲ್ಲು ಮತ್ತು ಕಣ್ಣುಗಳಿಲ್ಲದ ಹುಲಿ ಕಾಡಿನಲ್ಲಿ ಬದುಕಿದ್ದೂ ಸತ್ತಂತೆ. ತನ್ನ ಸಹಜ ಆಹಾರವನ್ನು ಬೇಟೆಯಾಡುವುದು ಸಹ ಆಕೆಗೆ ಕಷ್ಟಕರವಾಗಿತ್ತು. ಕಾಡಿನಲ್ಲಿ ಹುಲಿಗಳು ಹೀಗೆ ವಯಸ್ಸಾಗಿ ಸಾಯುವುದು ಸಾಮಾನ್ಯವೇ ಆದರೂ ಹುಲಿಗಳ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಯೊಂದು ಹುಲಿಯೂ ಒಂದು ದಿನ ಹೆಚ್ಚು ಬದುಕಿದರೆ ಅದೇ ನಮ್ಮ ಕಾಡಿಗೆ ದೊಡ್ಡ ಬೋನಸ್ ಇದ್ದಂತೆ. ಆದ್ದರಿಂದ ಮಚಲಿಯ ಸಾವನ್ನು ಆದಷ್ಟೂ ಮುಂದೂಡಲು ಉದ್ಯಾನದ ಮೇಲ್ವಿಚಾರಕರು ಶತಪ್ರಯತ್ನ ಮಾಡುತ್ತಲೇ ಇದ್ದರು. ಹಾಗಾಗಿ ಮಚಲಿಗೆ ಅವರು ಆಹಾರಕ್ಕೇನೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಸಂಪೂರ್ಣ ನಿಶ್ಶಕ್ತಿಯಿಂದ ಬಳಲುತ್ತಿದ್ದ ಮಚಲಿ ಆಹಾರ ಸೇವನೆಯನ್ನು ಸಂಪುರ್ಣವಾಗಿ ನಿಲ್ಲಿಸಿದ್ದಳು. ಅಂತಿಮವಾಗಿ ಆಗಸ್ಟ್ 18ರಂದು ಜವರಾಯ ಅವಳನ್ನು ಕರೆದೊಯ್ದ. ಇಡೀ ದೇಶದ ವನ್ಯಪ್ರಾಣಿಗಳ ಕಣ್ಮಣಿಯಾಗಿದ್ದ ಮಚಲಿ ಇತಿಹಾಸದ ಪುಟಗಳಲ್ಲಿ ಸೇರಿಹೋದಳು.
          ಸಾಯುವಾಗ ಮಚಲಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಾಗಿತ್ತು. ಅದೂ ಕೂಡ ಒಂದು ಸಾಧನೆಯೇ. ಏಕೆಂದರೆ ಕಾಡಿನ ಸ್ವಾಭಾವಿಕ ಪರಿಸರದಲ್ಲಿ ಹುಲಿಯೊಂದು ಹತ್ತರಿಂದ ಹದಿನೈದು ವರ್ಷ ಬದುಕಬಲ್ಲದು ಅಷ್ಟೆ. ಹದಿನೈದಾಗುತ್ತಿದ್ದಂತೆ ಅದರ ಶಕ್ತಿಗುಂದುತ್ತಾ ಬರುತ್ತದೆ. ಹಲ್ಲುಗಳು ಉದುರಿ ಬೇಟೆಯಾಡಲು ಅಸಮರ್ಥವಾಗುತ್ತದೆ. ಜೊತೆಗೆ ಕ್ಷೇತ್ರಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ. ಹೊಸ ತಲೆಮಾರಿನ ಹುಲಿಗಳು ಹಳೇ ಹುಲಿಗಳನ್ನು ಸೋಲಿಸಿ ಅವುಗಳ ಕ್ಷೇತ್ರವನ್ನು ಕಿತ್ತುಕೊಳ್ಳುವುದು ಸರ್ವೇಸಾಮಾನ್ಯ. ಹಾಗಾಗಿ ಎಂಥ ಭಾರೀ ಹೆಬ್ಬುಲಿಯಾದರೂ ತನ್ನ ಪರಿಸರದಲ್ಲಿ ಗರಿಷ್ಠವೆಂದರೆ ಐದಾರು ವರ್ಷ ರಾಜನಾಗಿ ಮೆರೆಯಬಹುದಷ್ಟೇ. ಕಾಡಿನ ಸ್ವಾಭಾವಿಕ ಪರಿಸರದಲ್ಲಿ ಹುಲಿಯೊಂದು ಹದಿನೈದು ವರ್ಷ ಬದುಕಿತೆಂದರೆ ಅದೊಂದು ಭಾರೀ ಸಾಧನೆಯೇ ಸರಿ. ಹಾಗಿರುವಾಗ ಮಚಲಿ ಇಪ್ಪತ್ತು ವರ್ಷ ಬದುಕಿತೆಂದರೆ ಅದು ಮನುಷ್ಯನೊಬ್ಬ ನೂರಿಪ್ಪತ್ತು ವರ್ಷ ಬದುಕಿದ ದಾಖಲೆಗೆ ಸಮ ಎನ್ನಬಹುದು.

          ಮಚಲಿ ಸತ್ತರೂ ಜನರ ಮನಸ್ಸಿನಲ್ಲಿ ಇನ್ನೂ ಅಜರಾಮರವಾಗಿ ಉಳಿದಿದ್ದಾಳೆ. ಆಕೆ ಸತ್ತಾಗ ಸಕಲ ಸರ್ಕಾರಿ ಗೌರವಗಳೊಂದಿಗೆ ಅವಳ ಅಂತ್ಯಸಂಸ್ಕಾರ ನಡೆಸಲಾಯಿತು. ಯಾವುದೇ ಪ್ರಸಿದ್ಧ ವ್ಯಕ್ತಿ ಸತ್ತಾಗ ಮರುಗುವುದಕ್ಕಿಂತ ಹೆಚ್ಚಾಗಿ ಜನ ಮಚಲಿಗಾಗಿ ಮರುಗಿದ್ದು ಆಕೆಯ ಹೆಚ್ಚುಗಾರಿಕೆಯೆನ್ನಬಹುದು. ಇನ್ನು ರಣಥಂಬೋರಿಗೆ ಭೇಟಿ ನೀಡುವವರಿಗೆ ಮಚಲಿಯ ದರ್ಶನ ಆಗುವುದಿಲ್ಲ. ಆದರೆ ಅದನ್ನು ಹಿಂದೆ ಭೇಟಿಮಾಡಿದವರು ಮುಂದೆ ಕೂಡ ಅಲ್ಲಿಗೆ ಹೋದಾಗಲೆಲ್ಲ ಮಚಲಿಯ ಘರ್ಜನೆ ಮಾರ್ದನಿಸಿದಂತೆ ಭಾಸವಾದರೆ ಅಚ್ಚರಿಯಲ್ಲ. ಮಚಲಿ, ನಾವೆಲ್ಲ ನಿನ್ನನ್ನು ಪ್ರೀತಿಸುತ್ತೇವೆ. ನಮ್ಮೆಲ್ಲರ ಮನಸೂರೆಗೊಳ್ಳಲು, ರಣಥಂಬೋರ್ ಗೆ ಮತ್ತೆ ರಾಜ(ಣಿ)ಕಳೆ ತಂದುಕೊಡಲು ಮತ್ತೊಮ್ಮೆ ಹುಟ್ಟಿ ಬಾ! 

ವೃಷ್ಟಿವನಗಳ ನಾಶ: ಧರೆಯ ಶ್ವಾಸಕೋಶಕ್ಕೇ ಕ್ಯಾನ್ಸರ್!

ವೃಷ್ಟಿವನಗಳ ನಾಶ: ಧರೆಯ ಶ್ವಾಸಕೋಶಕ್ಕೇ ಕ್ಯಾನ್ಸರ್!
ವೃಷ್ಟಿವನ ಅಥವಾ ಮಳೆಕಾಡು. ನಮ್ಮ ಭೂಮಿಯ ಮೇಲೆ ಅತ್ಯಂತ ಕಡಿಮೆ ಪ್ರದೇಶವನ್ನು ಆಕ್ರಮಿಸಿಕೊಂಡಿರುವ, ಆದರೆ ಅಷ್ಟೇ ಅಧಿಕ ಮಹತ್ವವನ್ನು ಹೊಂದಿರುವ ಭೌಗೋಳಿಕ ಪ್ರದೇಶಗಳು ಈ ವೃಷ್ಟಿವನಗಳು. ಇಡೀ ಧರೆಯ ಮೇಲ್ಮೈ ವಿಸ್ತೀರ್ಣದ ಶೇಕಡಾ ಆರಕ್ಕಿಂತ ಕಡಿಮೆ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಈ ಮಳೆಕಾಡುಗಳು ಶೇಕಡಾ ನಲವತ್ತಕ್ಕಿಂತ ಹೆಚ್ಚು ಜೀವಿಪ್ರಭೇದಗಳಿಗೆ ಆಶ್ರಯತಾಣಗಳಾಗಿವೆ ಎಂದರೆ ಅವುಗಳ ಮಹತ್ವ ಎಂಥವರಿಗೂ ಅರಿವಾಗುತ್ತದೆ. ಜೊತೆಗೆ ಇಂಗಾಲದ ಡೈ ಆಕ್ಸೈಡನ್ನು ದ್ಯುತಿ ಸಂಶ್ಲೇಷಣೆಯ ಮೂಲಕ ಆಮ್ಲಜನಕವಾಗಿ ಪರಿವರ್ತಿಸುವ ಕ್ರಿಯೆಯಲ್ಲಿ ಈ ಕಾಡುಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದಲೇ ಇವುಗಳನ್ನು ಧರೆಯ ಶ್ವಾಸಕೋಶಗಳು ಎಂದು ಕರೆಯುತ್ತಾರೆ. ವೃಷ್ಟಿವನಗಳು ನಾಶವಾದರೆ ಇಡೀ ಧರೆಯ ಪರಿಸರ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿ ಕುಸಿದುಬೀಳುತ್ತದೆ.
ವೃಷ್ಟಿವನಗಳೆಂದರೆ ವರ್ಷದಲ್ಲಿ ಸರಾಸರಿ ನೂರು ಇಂಚುಗಳಿಗಿಂತಲೂ ಅಧಿಕ ಮಳೆ ಬೀಳುವ ಪ್ರದೇಶಗಳು. ಭೂಮಿಯ ಮೇಲೆ ಎರಡು ರೀತಿಯ ಮಳೆಕಾಡುಗಳಿವೆ. ಒಂದು ಉಷ್ಣವಲಯದ ಮಳೆಕಾಡುಗಳು, ಇನ್ನೊಂದು ಸಮಶೀತೋಷ್ಣವಲಯದ ಮಳೆಕಾಡುಗಳು. ಉಷ್ಣವಲಯದ ಮಳೆಕಾಡುಗಳು ಹೆಸರಿಗೆ ತಕ್ಕಂತೆ ಅಧಿಕ ಉಷ್ಣತೆಯ ಪ್ರದೇಶಗಳು. ಈ ಕಾಡುಗಳು ಸಮಭಾಜಕ ವೃತ್ತದ ಆಸುಪಾಸಿನಲ್ಲೇ ಕಂಡುಬರುತ್ತವೆ. ಸಮಶೀತೋಷ್ಣ ವಲಯದ ಕಾಡುಗಳು ವರ್ಷದ ಉದ್ದಕ್ಕೂ ಹೆಚ್ಚುಕಡಿಮೆ ಒಂದೇ ರೀತಿಯ ಉಷ್ಣಾಂಶ ಹೊಂದಿದ್ದು ಉಷ್ಣವಲಯದ ಕಾಡುಗಳಿಗಿಂತ ಕಡಿಮೆ ಉಷ್ಣಾಂಶ ಹೊಂದಿರುತ್ತವೆ. ಆದರೆ ಜೀವವೈವಿಧ್ಯದ ವಿಷಯಕ್ಕೆ ಬಂದರೆ ಯಾವ ಮಳೆಕಾಡುಗಳೂ ಕಡಿಮೆಯಿಲ್ಲ. ವಿಜ್ಞಾನ ಇದುವರೆಗೂ ಕಂಡುಕೇಳರಿಯದಂಥ ಹೊಸಹೊಸ ಜೀವಿಪ್ರಭೇದಗಳು ಪ್ರತಿದಿನ ಪತ್ತೆಯಾಗುತ್ತಲೇ ಇರುತ್ತವೆ. ಭಾರತದ ಪಶ್ಚಿಮ ಘಟ್ಟಗಳಲ್ಲೇ ಪ್ರತಿವರ್ಷ ಹೊಸಹೊಸ ಪ್ರಭೇದದ ಕಪ್ಪೆಗಳು ಬೆಳಕಿಗೆ ಬರುತ್ತಿವೆ. ಬಹುಶಃ ಮಳೆಕಾಡಿನಲ್ಲಿರುವ ಎಲ್ಲ ಜೀವಿಪ್ರಭೇದಗಳನ್ನೂ ಗುರುತಿಸಿ ಹೆಸರಿಸುವ ಕೆಲಸ ಮನುಷ್ಯರಿಂದ ಯಾವತ್ತೂ ಸಂಪೂರ್ಣವಾಗಿ ಮಾಡಲು ಸಾಧ್ಯವೇ ಇಲ್ಲವೆಂದರೆ ಅತಿಶಯೋಕ್ತಿಯಾಗುವುದಿಲ್ಲ, ಏಕೆಂದರೆ ಈ ಕಾಡುಗಳ ಜೀವವೈವಿಧ್ಯವೇ ಅಂಥದ್ದು.
ಉಷ್ಣವಲಯದ ಮಳೆಕಾಡುಗಳಲ್ಲಿ ಮೊದಲು ನೆನಪಿಗೆ ಬರುವುದೇ ಅಮೆಜೋನಿಯಾ ವೃಷ್ಟಿವನ. ದಕ್ಷಿಣ ಅಮೆರಿಕದಲ್ಲಿ ಜಗತ್ತಿನ ಅತಿದೊಡ್ಡ ನದಿ ಅಮೆಜಾನ್ ಹರಿಯುತ್ತದೆ. ಸುಮಾರು ನಾಲ್ಕುಸಾವಿರ ಮೈಲಿ ಉದ್ದದ ಮತ್ತು ಜಗತ್ತಿನಲ್ಲೇ ಅತಿಹೆಚ್ಚು ನೀರನ್ನು ಸಾಗರಕ್ಕೆ ಸೇರಿಸುವ ನದಿಯೆಂದೇ ಹೆಸರಾಗಿರುವ ಅಮೆಜಾನ್ ನದಿ ತನ್ನ ಹರಿವಿನ ಎರಡೂ ಬದಿಗಳಲ್ಲಿ ಜಗತ್ತಿನ ಅತಿದೊಡ್ಡ ಮತ್ತು ಅತಿ ಶ್ರೀಮಂತವಾದ ಅಮೆಜೋನಿಯಾ ವೃಷ್ಟಿವನವನ್ನು ಪೋಷಿಸುತ್ತಿದೆ. ಇಲ್ಲಿ ಕಾಣಸಿಗುವ ಜೀವಿಪ್ರಭೇದಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಪ್ರಭೇದಗಳು ಜಗತ್ತಿನ ಬೇರೆಲ್ಲೂ ಕಂಡುಬರುವುದಿಲ್ಲ. ಆದ್ದರಿಂದ ಇವುಗಳ ಸಂರಕ್ಷಣೆಗೆ ಅತೀವ ಮಹತ್ವವಿದೆ. ಸಸ್ತನಿಗಳು, ಹಕ್ಕಿಗಳು, ಉರಗಗಳು, ಉಭಯವಾಸಿಗಳು, ಮತ್ಸ್ಯಗಳು, ಮೃದ್ವಂಗಿಗಳು, ಸಂಧಿಪದಿಗಳು, ಹೀಗೆ ಇಲ್ಲಿ ಇಲ್ಲ ಎನ್ನುವಂಥ ಜೀವಿವರ್ಗವೇ ಇಲ್ಲ. ಕೊಂಚ ಮೈಗೆ ತಾಗಿದರೂ ಪಾರ್ಶ್ವವಾಯು ಉಂಟಾಗಿ ಕೆಲವೇ ಕ್ಷಣಗಳಲ್ಲಿ ಸಾವನ್ನುಂಟುಮಾಡುವಂಥ ಘನಘೋರ ವಿಷ ಹೊಂದಿದ ಕಪ್ಪೆಗಳು, ನಾಲ್ಕಾರು ಮೈಲು ದೂರಕ್ಕೆ ಕೇಳಿಸುವಂತೆ ಬೊಬ್ಬಿರಿಯುವ ಹೌಲರ್ ಮಂಗಗಳು, ಉದ್ದುದ್ದ ಕೈಕಾಲುಗಳ ಜೇಡಕೋತಿಗಳು, ಇಲಿಯಷ್ಟೇ ಚಿಕ್ಕ ಗಾತ್ರದ ಪಿಗ್ಮಿ ಮಾರ್ಮೋಸೆಟ್ ಮಂಗಗಳು, ಅಂಗೈಯಗಲದ ಭಯಾನಕ ಟ್ಯಾರಂಟುಲಾ ಜೇಡಗಳು, ಭಾರೀ ಗಾತ್ರದ ಕೇಮ್ಯಾನ್ ಎಂಬ ಮೊಸಳೆಗಳು, ಆ ಮೊಸಳೆಗಳನ್ನೇ ಹಿಡಿದು ನುಂಗುವ ಬೃಹತ್ ಅನಕೊಂಡಾಗಳು, ದಕ್ಷಿಣ ಅಮೆರಿಕದ ಅತಿದೊಡ್ಡ ಬೆಕ್ಕು ಜಾಗ್ವಾರ್ ಇವೆಲ್ಲ ಈ ಕಾಡಿನಲ್ಲಿರುವ ಅಪರೂಪದ ಜೀವಿಗಳಿಗೆ ಕೆಲವು ಉದಾಹರಣೆಗಳಷ್ಟೆ.
ಏಷ್ಯಾ ಖಂಡದಲ್ಲೂ ವೃಷ್ಟಿವನಗಳು ಹೇರಳವಾಗಿವೆ. ಇಂಡೋನೇಷ್ಯಾ, ಮಲೇಷ್ಯಾ, ಪಾಪುವಾ ನ್ಯೂಗಿನಿ, ಶ್ರೀಲಂಕಾ, ಫಿಲಿಪ್ಪೀನ್ಸ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಆಗಸಕ್ಕೆ ಛತ್ರಿ ಹಿಡಿದಂತೆ ಬೃಹತ್ ಮಳೆಕಾಡುಗಳಿವೆ. ಪಾಪುವಾ ನ್ಯೂಗಿನಿಯ ಸ್ವರ್ಗದ ಹಕ್ಕಿಗಳಂತೂ ತಮ್ಮ ಸ್ವರ್ಗಸದೃಶ ಸೌಂದರ್ಯದಿಂದ ಇಡೀ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ. ಆ ಸೌಂದರ್ಯದಿಂದಾಗಿಯೇ ಮನುಷ್ಯರ ಆಕ್ರಮಣಕ್ಕೆ ತುತ್ತಾಗಿ ಅಳಿವಿನ ಹಾದಿಯನ್ನೂ ಹಿಡಿದಿವೆ! ಕಗ್ಗತ್ತಲೆಯ ಖಂಡ ಆಫ್ರಿಕಾದಲ್ಲಿ ಸಹ ಕಾಂಗೋ ಮತ್ತು ಕ್ಯಾಮರೂನ್ ದೇಶಗಳಲ್ಲಿ ಭಾರೀ ಮಳೆಕಾಡುಗಳಿವೆ.
ಎಲ್ಲ ಮಳೆಕಾಡುಗಳ ಪ್ರಧಾನ ಲಕ್ಷಣವೆಂದರೆ ನೆಲಕ್ಕೆ ಸೂರ್ಯರಶ್ಮಿಯೇ ಸೋಕದಂಥ ಬೃಹತ್ ಮರಗಳ ಛತ್ರಿ. ಅಲ್ಲಿನ ಆಗಸದಲ್ಲಿ ಮರಗಳ ಛಾವಣಿ ಎಷ್ಟು ದಟ್ಟವಾಗಿರುತ್ತದೆ ಎಂದರೆ ಮನೆಗೆ ಮಾಡು ಇರುವಂತೆಯೇ ಎಲೆಗಳ ಛತ್ರಿ ಇರುತ್ತದೆ. ಹಾಗಾಗಿ ಅಲ್ಲಿ ನಡುಮಧ್ಯಾಹ್ನದಲ್ಲೂ ಸಂಜೆಗತ್ತಲು ಕವಿದಿರುತ್ತದೆ. ಎಂಥ ಬಿರುಸಾದ ಮಳೆಯಲ್ಲೂ ಅಲ್ಲಿ ನೀರು ನೇರವಾಗಿ ನೆಲದ ಮೇಲೆ ಬೀಳುವುದಿಲ್ಲ. ಏಕೆಂದರೆ ಮರದ ಮೇಲೆ ಬಿದ್ದ ನೀರು ತೊಟ್ಟಿಕ್ಕಿಕೊಂಡು ನೆಲದ ಮೇಲೆ ಬೀಳಬೇಕು. ಜೊತೆಗೆ ಅಲ್ಲಿ ಮರಗಳ ಛಾವಣಿ ವಿವಿಧ ಹಂತಗಳಲ್ಲಿರುತ್ತದೆ. ಎಲ್ಲ ಮರಗಳ ಉದ್ದೇಶವೂ ಸಾಧ್ಯವಾದಷ್ಟು ಹೆಚ್ಚು ಸೂರ್ಯರಶ್ಮಿಗೆ ತೆರೆದುಕೊಳ್ಳುವುದು. ಆದ್ದರಿಂದ ಎಲ್ಲ ಮರಗಳೂ ಎತ್ತರೆತ್ತರ ಬೆಳೆಯುವುದಕ್ಕೇ ಪೈಪೋಟಿ ನಡೆಸುತ್ತವೆ. ವೃಷ್ಟಿವನಗಳ ವೈವಿಧ್ಯ ಎಷ್ಟಿರುತ್ತದೆ ಎಂದರೆ ಪ್ರತಿ ಎಕರೆಗೆ ನೂರೈವತ್ತರಿಂದ ಇನ್ನೂರು ಬೇರೆಬೇರೆ ಜಾತಿಯ ಮರಗಳಿರುತ್ತವೆ! ಅಲ್ಲಿನ ಮರಗಳ ಸರಾಸರಿ ಎತ್ತರವೂ ನೂರೈವತ್ತರಿಂದ ಇನ್ನೂರು ಅಡಿ! ಮರಗಳ ನೆತ್ತಿಯಲ್ಲಿ ಒಂದು ರೀತಿಯ ಜೀವಿಗಳು ವಾಸಿಸಿದರೆ ಸ್ವಲ್ಪ ಕೆಳಗೆ ಇನ್ನೊಂದು ರೀತಿಯ ಜೀವಿಗಳು. ಮರದ ಕಾಂಡದಲ್ಲಂತೂ ನೂರಾರು ಜಾತಿಯ ಕೀಟಗಳು ಮತ್ತು ಪೊಟರೆಗಳ ಒಳಗೆ ಮರಕುಟುಕದಂಥ ಹಕ್ಕಿಗಳು. ನೆಲಮಟ್ಟದಲ್ಲಿ ಸಹ ಜೀವಜಂತುಗಳು ಕಿಕ್ಕಿರಿದಿರುತ್ತವೆ. ಒಟ್ಟಿನಲ್ಲಿ ಮಳೆಕಾಡುಗಳೆಂದರೆ ಅದೊಂದು ಕಿನ್ನರಲೋಕವೇ ಸರಿ.
ಇನ್ನು ಸಮಶೀತೋಷ್ಣವಲಯದ ಮಳೆಕಾಡುಗಳ ವಿಷಯಕ್ಕೆ ಬಂದರೆ ಅವು ವಿಸ್ತೀರ್ಣದಲ್ಲಿ ಉಷ್ಣವಲಯದ ಮಳೆಕಾಡುಗಳಿಗಿಂತ ಕಡಿಮೆ ಇವೆ. ಅವು ಭೂಮಿಯ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿವೆ. ಉತ್ತರ ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾ ಖಂಡಗಳ ಕೆಲವೇ ಪ್ರದೇಶಗಳಲ್ಲಿ ಮಾತ್ರ ಈ ಮಳೆಕಾಡುಗಳು ಕಾಣಸಿಗುತ್ತವೆ. ಬ್ರಿಟಿಷ್ ದ್ವೀಪಗಳು, ಅಮೆರಿಕಾದ ಕೆಲವು ಭಾಗಗಳು, ಚಿಲಿ ಮತ್ತು ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್ ಮತ್ತು ಕೊರಿಯಾ ಇವೇ ಈ ಪ್ರದೇಶಗಳು.
ಮಳೆಕಾಡುಗಳಲ್ಲಿ ಜೀವಿಗಳ ವಾಸಕ್ಕೆ ಯೋಗ್ಯವಲ್ಲದ ಸ್ಥಳಗಳೇ ಇಲ್ಲ ಎಂದರೆ ತಪ್ಪಾಗಲಾರದು. ಮರಗಳ ಮೇಲ್ಭಾಗದಲ್ಲಿ ವಿಧವಿಧದ ಪಕ್ಷಿಗಳು, ಮಂಗಗಳು, ವಾನರಗಳು ಮತ್ತು ಇತರ ಪ್ರೈಮೇಟುಗಳು ವಾಸಿಸುತ್ತವೆ. ಮರಗಳ ಕಾಂಡಗಳಲ್ಲಂತೂ ಮೇಲಿನಿಂದ ಕೆಳಗಿನವರೆಗೆ ನೂರಾರು ರೀತಿಯ ಕೀಟಗಳು ಮತ್ತು ಪೊಟರೆಗಳೊಳಗೆ ಗಿಳಿ, ಮರಕುಟುಕ ಮತ್ತಿತರ ಹಕ್ಕಿಗಳು ವಾಸಿಸುತ್ತವೆ. ನೆಲದ ಮೇಲೆ ಸಹ ಹುಲ್ಲು, ಪೊದೆಗಿಡಗಳು ದಟ್ಟವಾಗಿ ಬೆಳೆದಿರುವುದರಿಂದ ಅಲ್ಲಿ ಸಹ ಅಸಂಖ್ಯ ಜೀವಿಗಳು ವಾಸಿಸುತ್ತವೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ವಾಸಿಸುವ ಅರ್ಧದಷ್ಟು ಪ್ರಭೇದಗಳು ಬೇರೆ ಎಲ್ಲೂ ಕಾಣಸಿಗುವುದಿಲ್ಲ. ಅಂಥ ಕೆಲವು ಜೀವಿಗಳ ಬಗೆಗೆ ತಿಳಿದುಕೊಳ್ಳೋಣ.
ನಾವೆಲ್ಲ ನಮ್ಮ ಮನೆಯ ಸುತ್ತಮುತ್ತ ಹಸಿರು, ನೀಲಿ ಬಣ್ಣದ ಗಿಳಿಗಳನ್ನು ಮಾತ್ರ ನೋಡಿದ್ದೇವೆ. ಅದರಲ್ಲೇ ಕೆಂಪು ಕೊಕ್ಕಿನ ಮತ್ತು ಕೆಂಪು ತಲೆಯ ಕೆಲವು ಪ್ರಭೇದಗಳನ್ನು ನೋಡಿರಬಹುದಾದರೂ ನಾವು ನೋಡಿರುವುದೆಲ್ಲ ಪ್ರಧಾನವಾಗಿ ಹಸಿರುಬಣ್ಣ ಇರುವ ಗಿಳಿಗಳನ್ನೇ. ಆದರೆ ಅಮೆಜೋನಿಯಾ ವೃಷ್ಟಿವನದ ಮಕಾಗಳನ್ನು ನೋಡಿದರೆ ಎಂಥವರೂ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುತ್ತಾರೆ. ಈ ಪ್ರಭೇದದ ಗಿಳಿಗಳಲ್ಲಿ ಈ ಪ್ರಪಂಚದಲ್ಲಿರುವ ಎಲ್ಲ ಬಣ್ಣಗಳೂ ಇವೆ! ನೀವೊಮ್ಮೆ ಮಕಾಗಳ ಚಿತ್ರಗಳನ್ನು ನೋಡಿದರೆ ಇದು ಅತಿಶಯೋಕ್ತಿಯಲ್ಲ ಎಂದು ಸ್ಪಷ್ಟವಾಗುತ್ತದೆ. ಹೈಸಿಂತ್ ಮಕಾ ಎಂಬ ಗಿಳಿ ಸುಮಾರು ಮೂರು-ನಾಲ್ಕು ಅಡಿ ಉದ್ದವಿರುತ್ತದೆ. ಮೈಯೆಲ್ಲ ಕಡುನೀಲಿ ಬಣ್ಣದ ಈ ಗಿಳಿ ಗಿಳಿಗಳ ವರ್ಗದಲ್ಲೇ ಅತಿದೊಡ್ಡ ಪ್ರಭೇದವೆಂದು ಹೆಸರಾಗಿದೆ. ಜೊತೆಗೆ ಹಳದಿ-ನೀಲಿ ಮಕಾ, ಕೆಂಪು ಬಾಲದ ಹಳದಿ-ನೀಲಿ ಮಕಾ, ಸ್ಕಾರ್ಲೆಟ್ ಮಕಾ, ದೈತ್ಯ ಹಸಿರು ಮಕಾ, ಮಿಲಿಟರಿ ಮಕಾ, ನೀಲಿ ತಲೆಯ ಮಕಾ, ನೀಲಿ ಕತ್ತಿನ ಮಕಾ, ಚಿನ್ನದ ಕಾಲರ್ ಇರುವ ಮಕಾ ಹೀಗೆ ಬೇರೆಬೇರೆ ಬಣ್ಣಗಳ ಕಣ್ಣು ಕೋರೈಸುವ ಉಡುಗೆಗಳ ವಿವಿಧ ಪ್ರಭೇದದ ಮಕಾಗಳು ಅಸ್ತಿತ್ವದಲ್ಲಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಗಿಳಿಗಳ ವರ್ಗದಲ್ಲೇ ಮಕಾಗಳು ಅತ್ಯಧಿಕ ವರ್ಣವೈವಿಧ್ಯ ಹೊಂದಿರುವ ಹಕ್ಕಿಗಳು ಎಂದರೆ ತಪ್ಪಾಗಲಾರದು. ಮಕಾಗಳು ವಾಸಿಸುವುದು ಭಾರೀ ಹೆಮ್ಮರಗಳ ಪೊಟರೆಗಳೊಳಗೆ. ಆದ್ದರಿಂದ ಸತ್ತ ಮರಗಳು ಸಹ ಅವುಗಳ ಪಾಲಿಗೆ ಅತ್ಯಮೂಲ್ಯ ಆಸ್ತಿಯಾಗಬಲ್ಲವು. ಜೊತೆಗೆ ಅವು ಸಂಪೂರ್ಣ ಫಲಾಹಾರಿ ಪಕ್ಷಿಗಳು. ಆದ್ದರಿಂದ ಸದಾ ಹಣ್ಣುತುಂಬಿದ ಮರಗಳು ಅವುಗಳಿಗೆ ಅತ್ಯವಶ್ಯಕ. ಮಳೆಕಾಡುಗಳಲ್ಲಿ ವರ್ಷದ ಹನ್ನೆರಡು ತಿಂಗಳೂ ಒಂದಲ್ಲ ಒಂದು ಜಾತಿಯ ಮರಗಳು ಹಣ್ಣು ಕೊಡುತ್ತಲೇ ಇರುವುದರಿಂದ ಅವುಗಳಿಗೆ ಆಹಾರ ಸಮಸ್ಯೆ ಎದುರಾಗುವುದಿಲ್ಲ.
ಹೊಸ ಪ್ರಪಂಚದ ಮಂಗಗಳು ಅಮೆಜೋನಿಯಾ ವೃಷ್ಟಿವನದ ಬಹುಮುಖ್ಯ ಸಸ್ತನಿಗಳು. ಇವು ಅನೇಕ ರೀತಿಯಲ್ಲಿ ಹಳೆ ಪ್ರಪಂಚದ ಮಂಗಗಳಿಗಿಂತ ವಿಭಿನ್ನವಾಗಿವೆ. ಬಹುಮುಖ್ಯ ವ್ಯತ್ಯಾಸವೆಂದರೆ ಈ ಮಂಗಗಳ ಬಾಲಕ್ಕೆ ಹಿಡಿಪು ಇರುತ್ತದೆ. ಅಂದರೆ ಅವು ತಮ್ಮ ಬಾಲದಿಂದ ಮರಗಳ ಕೊಂಬೆಗಳನ್ನು ಸುತ್ತಿಹಿಡಿಯಬಲ್ಲವು. ಆದರೆ ಹಳೆ ಪ್ರಪಂಚದ (ಅಂದರೆ ಏಷ್ಯಾ, ಆಫ್ರಿಕಾ ಮತ್ತು ಯೂರೋಪಿನ ಮಂಗಗಳು) ಯಾವ ಮಂಗಗಳಿಗೂ ಈ ಸಾಮರ್ಥ್ಯ ಇಲ್ಲ. ಜೊತೆಗೆ ಹೊಸ ಪ್ರಪಂಚದ ಮಂಗಗಳ ಮೂಗು ಚಪ್ಪಟೆಯಾಗಿರುತ್ತದೆ. ಹೌಲರ್ ಮಂಗ, ಸ್ಪೈಡರ್ ಮಂಗ, ಅಳಿಲು ಮಂಗ, ಕಪುಚಿನ್ ಮಂಗ, ಮಾರ್ಮೋಸೆಟ್ ಮಂಗ, ಉವಕಾರೀ ಇತ್ಯಾದಿಗಳು ಹೊಸ ಪ್ರಪಂಚದ ಮಂಗಗಳ ಪ್ರಭೇದಗಳು.
ಹೌಲರ್ ಮಂಗಗಳಿಗೆ ಆ ಹೆಸರು ಬಂದಿದ್ದು ಅವುಗಳ ಕರ್ಣಕಠೋರವಾದ ಕಿರುಚಾಟದಿಂದ. ನಾಲ್ಕಾರು ಕಿಲೋಮೀಟರ್ ದೂರಕ್ಕೆ ಕೇಳಿಸುವಂತೆ ಅವು ಕೂಗುತ್ತವೆ. ಸಾಮಾನ್ಯವಾಗಿ ಬೆಳಗಿನ ಜಾವ ಸೂರ್ಯೋದಯವಾಗುತ್ತಿದ್ದಂತೆ ಇಡೀ ಕಾಡನ್ನೇ ಎಚ್ಚರಿಸುವಂತೆ ಇವು ಕೂಗಲು ಪ್ರಾರಂಭಿಸುತ್ತವೆ. ಈ ಕೂಗು ಒಂದರೊಡನೆ ಒಂದು ಸಂಪರ್ಕ ಏರ್ಪಡಿಸಿಕೊಳ್ಳುವ ಮಾಧ್ಯಮವೂ ಹೌದು. ಸಾಮಾನ್ಯವಾಗಿ ಈ ಮಂಗಗಳು ಬೇರೆ ಮಂಗಗಳಿಗೆ ಹೋಲಿಸಿದರೆ ಕಡಿಮೆ ಚಟುವಟಿಕೆಯಿಂದಿರುತ್ತವೆ. ಇದಕ್ಕೆ ಇವುಗಳ ಆಹಾರಕ್ರಮವೇ ಕಾರಣ. ಇವುಗಳ ಪ್ರಧಾನ ಆಹಾರ ಎಲೆಗಳು. ಎಲೆಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಅವುಗಳಲ್ಲಿರುವ ಸೆಲ್ಯುಲೋಸ್ ಅನ್ನು ಜೀರ್ಣಿಸಿಕೊಳ್ಳಲು ಬ್ಯಾಕ್ಟೀರಿಯಾಗಳ ನೆರವು ಪಡೆಯಬೇಕಾಗುತ್ತದೆ. ಜೊತೆಗೆ ಈ ಎಲೆಗಳಲ್ಲಿ ಟ್ಯಾನಿನ್, ಸ್ಟ್ರಿಕ್ನಿನ್ ನಂಥ ವಿಷಕಾರಕಗಳು ಸಹ ಇರುತ್ತವೆ. ಆದ್ದರಿಂದ ಯಾವುದೇ ಒಂದು ಜಾತಿಯ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದೆ ಬೇರೆಬೇರೆ ಎಲೆಗಳನ್ನು ಸೇವಿಸುವ ಮೂಲಕ ಯಾವುದೇ ಒಂದು ರೀತಿಯ ವಿಷ ಓವರ್ ಡೋಸ್ ಆಗದಂತೆ ಈ ಮಂಗಗಳು ಎಚ್ಚರಿಕೆ ವಹಿಸುತ್ತವೆ. ಆದರೆ ಈ ಎಲೆಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವು ದೈಹಿಕವಾಗಿ ಚಲನಶೀಲತೆ ಇಲ್ಲದೆ ಸೋಮಾರಿಗಳಂತೆ ಕಾಣುತ್ತವೆ.
ಜೇಡಕೋತಿಗಳಿಗೆ ಆ ಹೆಸರು ಬರಲು ಕಾರಣ ಅವುಗಳ ಅಸಾಧಾರಣ ಉದ್ದದ ಕೈಕಾಲುಗಳು. ಸಾಮಾನ್ಯವಾಗಿ ಬೇರೆಲ್ಲ ಮಂಗಗಳಿಗಿಂತ ಉದ್ದವಾದ ಕೈಕಾಲುಗಳನ್ನು ಈ ಮಂಗಗಳು ಹೊಂದಿವೆ. ಇವುಗಳ ಲಾಭವೆಂದರೆ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುವುದು ಇವಕ್ಕೆ ಬಹಳ ಸುಲಭವಾಗುತ್ತದೆ. ಒಮದು ಮರದ ಕೊಂಬೆಯನ್ನು ಹಿಡಿದು ಒಮ್ಮೆ ಜೀಕಿದರೆ ಸಾಕಷ್ಟು ದೂರದಲ್ಲಿರುವ ಇನ್ನೊಂದು ಮರದ ಕೊಂಬೆಯನ್ನೂ ಸಹ ಹಿಡಿಯಬಹುದು.
ಮಾರ್ಮೋಸೆಟ್ ಕೋತಿಗಳು ಸಹ ಹೊಸ ಪ್ರಪಂಚದ ಮುಖ್ಯವಾದ ಮಂಗಪ್ರಭೇದಗಳು. ಇವುಗಳಲ್ಲಿ ಪಿಗ್ಮಿ ಮಾರ್ಮೋಸೆಟ್ ಎಂಬ ಕೋತಿಯಿದೆ. ಒಬ್ಬ ಪ್ರೌಢ ಮನುಷ್ಯನ ಹೆಬ್ಬೆರಳ ಮೇಲೆ ಆರಾಮವಾಗಿ ಕೂರಬಲ್ಲಷ್ಟು ಚಿಕ್ಕ ಮಂಗಗಳಿವು. ಜಗತ್ತಿನಲ್ಲೇ ಅತಿಚಿಕ್ಕ ಮಂಗಪ್ರಭೇದಗಳು ಇವೇ. ಜೊತೆಗೆ ಬೋಳು ತಲೆಯಿಂದಲೇ ಪ್ರಸಿದ್ಧವಾದ ಉವಕಾರೀ ಮಂಗ, ಭಾರೀ ಮೀಸೆಯಿಂದ ಪ್ರಸಿದ್ಧವಾಗಿ ಚಕ್ರವರ್ತಿ ಟ್ಯಾಮರಿನ್ ನ ಹೆಸರನ್ನು ಪಡೆದ ಎಂಪರರ್ ಟ್ಯಾಮರಿನ್ ಮಂಗ, ಸಿಂಹದಂತೆ ಮುಖವನ್ನು ಹೊಂದಿದ ಗೋಲ್ಡನ್ ಲಯನ್ ಟ್ಯಾಮರಿನ್ ಇತ್ಯಾದಿ ಮಂಗಗಳ ಪ್ರಭೇದದಿಂದ ಈ ವೃಷ್ಟಿವನಗಳು ಪ್ರಸಿದ್ಧವಾಗಿವೆ.
ವೃಷ್ಟಿವನಗಳ ಖಾಯಂ ನಿವಾಸಿ ಮತ್ತು ಇಲ್ಲಿನ ಉನ್ನತ ಬೇಟೆಗಾರ ಪ್ರಾಣಿಯಾದ ಜಾಗ್ವಾರ್ ಹೊಸ ಪ್ರಪಂಚದ ಅತಿದೊಡ್ಡ ಬೆಕ್ಕೆಂದೇ ಹೆಸರಾಗಿದೆ. ಹುಲಿ ಮತ್ತು ಸಿಂಹಗಳ ನಂತರ ಜಗತ್ತಿನ ಮೂರನೇ ಅತಿದೊಡ್ಡ ಬೆಕ್ಕಾದ ಜಾಗ್ವಾರ್ ನಲ್ಲಿ ಗಂಡುಗಳು ಸರಾಸರಿ ನೂರು ಕಿಲೋ ತೂಗುತ್ತವೆ. ಭಾರೀ ಗಾತ್ರದ ಗಂಡುಗಳು 150 ಕಿಲೋ ಮೀರುವುದೂ ಇದೆ. ಬೆಕ್ಕುಗಳಲ್ಲೆಲ್ಲ ಜಾಗ್ವಾರ್ ಗಳು ಅತ್ಯಂತ ಗಿಡ್ಡವಾದ ಕಾಲು ಮತ್ತು ಬಾಲವನ್ನು ಹೊಂದಿವೆ. ಆದರೆ ಇವುಗಳ ದೈಹಿಕ ಸಾಮರ್ಥ್ಯದ ಬಗ್ಗೆ ಎರಡು ಮಾತೇ ಇಲ್ಲ. ಏಕೆಂದರೆ ಇವುಗಳ ದವಡೆ ಎಷ್ಟು ಬಲಿಷ್ಠವಾಗಿರುತ್ತದೆ ಎಂದರೆ ಇವು ಬಲಿಪ್ರಾಣಿಯ ತಲೆಬುರುಡೆಯನ್ನೇ ಕಚ್ಚಿ ಸೀಳಬಲ್ಲವು. ಇಂಥ ಸಾಮರ್ಥ್ಯ ಬೇರಾವುದೇ ಬೆಕ್ಕಿಗೆ ಇಲ್ಲ. ಆದ್ದರಿಂದಲೇ ಜಾಗ್ವಾರ್ ಗಳು ಟಾಪಿರ್, ಕ್ಯಾಪಿಬಾರಾ, ಕೇಮ್ಯಾನ್ ನಂಥ ಭಾರೀ ಪ್ರಾಣಿಗಳನ್ನು ಸಹ ಸುಲಲಿತವಾಗಿ ಬೇಟೆಯಾಡಬಲ್ಲವು. ಮೇಲ್ನೋಟಕ್ಕೆ ನಮ್ಮ ಚಿರತೆಗಳಂತೆಯೇ ಕಾಣುವ ಜಾಗ್ವಾರ್ ಗಳು ಚಿರತೆಗಳಿಗಿಂತಲೂ ದಷ್ಟಪುಷ್ಟವಾಗಿರುತ್ತವೆ.
ಟಾಪಿರ್ ಗಳು ಘೇಂಡಾಮೃಗಗಳ ಸಮೀಪದ ಸಂಬಂಧಿಗಳು. ಇಂದು ಭೂಮಿಯ ಮೇಲೆ ಐದು ಪ್ರಭೇದದ ಟಾಪಿರ್ ಗಳು ಅಸ್ತಿತ್ವದಲ್ಲಿವೆ. ಈ ಎಲ್ಲ ಐದು ಪ್ರಭೇದಗಳೂ ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ. ಕುಗ್ಗುತ್ತಿರುವ ವೃಷ್ಟಿವನಗಳ ವಿಸ್ತೀರ್ಣ, ಕಳ್ಳಬೇಟೆ ಮುಂತಾದ ಕಾರಣಗಳಿಂದ ಟಾಪಿರ್ ಗಳು ಸಂಕಷ್ಟದಲ್ಲಿವೆ. ಬ್ರೆಜಿಲ್ ದೇಶದಲ್ಲಿರುವ ಬ್ರೆಜಿಲಿಯನ್ ಟಾಪಿರ್ ಗಳೇ ಜಾಗ್ವಾರ್ ಗಳ ಪ್ರಮುಖ ಆಹಾರ. ಹಾಗಾಗಿ ಇವುಗಳ ವಂಶನಾಶವು ಜಾಗ್ವಾರ್ ಗಳ ಮೇಲೂ ಪರಿಣಾಮ ಬೀರುವುದು ಖಂಡಿತ. ಆಹಾರ ಸರಪಳಿಯಲ್ಲಿ ಹೇಗೆ ಒಂದನ್ನೊಂದು ಅವಲಂಬಿತವಾಗಿರುತ್ತವೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಅದೇ ರೀತಿ ಮಲೇಷ್ಯಾದ ಮಳೆಕಾಡುಗಳಲ್ಲೂ ಮಲಯನ್ ಟಾಪಿರ್ ಗಳು ಪ್ರಸಿದ್ಧವಾಗಿವೆ.
ಆಫ್ರಿಕಾ ಖಂಡದಲ್ಲಿ ಕಾಂಗೋ ನದಿ ಅತ್ಯಂತ ಪ್ರಸಿದ್ಧವಾದ ನದಿ. ಕಾಂಗೋ ನದಿ ಕೂಡ ಭಾರೀ ಮಳೆಕಾಡುಗಳನ್ನು ತನ್ನೊಡಲಲ್ಲಿ ಪೋಷಿಸುತ್ತಿದೆ. ಈ ನದಿಯ ಸುತ್ತೆಲ್ಲ ಹರಡಿರುವ ಈ ಕಾಡುಗಳು ವಿಸ್ತೀರ್ಣದಲ್ಲಿ ಅಮೆಜೋನಿಯಾಗೆ ಸಾಟಿಯಾಗದಿದ್ದರೂ ಜೀವವೈವಿಧ್ಯದಲ್ಲಿ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಈ ಕಾಡುಗಳ ಬಹುಮುಖ್ಯ ಜೀವೆಗಳೆಂದರೆ ಗೋಸುಂಬೆಗಳು. ಭೂಮಿಯ ಮೇಲೆ ಇದುವರೆಗೆ ಸುಮಾರು ನೂರಾಅರವತ್ತು ಪ್ರಭೇದದ ಗೋಸುಂಬೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕಾಂಗೋ ಮಳೆಕಾಡುಗಳಲ್ಲಿ ಮತ್ತು ಮಡಗಾಸ್ಕರ್ ದ್ವೀಪಗಳಲ್ಲೇ ಅನೇಕ ಗೋಸುಂಬೆಗಳನ್ನು ಪತ್ತೆ ಹಚ್ಚಲಾಗಿದೆ. ಅವುಗಳ ಪೈಕಿ ಕೇವಲ ಒಂದೇ ಇಂಚು ಉದ್ದವಿರುವ ಒಂದು ಗ್ರೌಂಡ್ ಕೆಮೀಲಿಯನ್ ಜಗತ್ತಿನ ಅತಿಚಿಕ್ಕ ಕೆಮೀಲಿಯನ್ ಎಂದು ಹೆಸರಾಗಿದೆ.
ಪಾಪುವಾ ನ್ಯೂಗಿನಿ ದ್ವೀಪಗಳು ಸಹ ಮಳೆಕಾಡುಗಳಿಗೆ ಪ್ರಸಿದ್ಧವಾಗಿವೆ. ಈ ಕಾಡುಗಳಂತೂ ಮೊದಲೇ ಹೇಳಿದಂತೆ ಸ್ವರ್ಗದ ಹಕ್ಕಿಗಳಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಈ ಕುಟುಂಬಕ್ಕೆ ಸೇರಿದ ಸುಮಾರು ನಲವತ್ತು ಪ್ರಭೇದಗಳಿವೆ. ಕಣ್ಣು ಕೋರೈಸುವ ವರ್ಣವೈವಿಧ್ಯದ ಗರಿಗಳಿಂದಾಗಿಯೇ ಸುಪ್ರಸಿದ್ಧವಾದ ಈ ನತದೃಷ್ಟ ಹಕ್ಕಿಗಳು ತಮ್ಮ ಸ್ವರ್ಗೀಯ ಸೌಂದರ್ಯದಿಂದಾಗಿಯೇ ವಿನಾಶದತ್ತ ಸಾಗುತ್ತಿವೆ. ಅದಕ್ಕೆ ಕಾರಣ ಮನುಷ್ಯರ ವಿಕೃತ ಆಸೆ-ದುರಾಸೆಗಳು. ಈ ಹಕ್ಕಿಗಳ ಗರಿಗಳನ್ನು ಕಿರೀಟದಂತೆ ಸಿಕ್ಕಿಸಿಕೊಳ್ಳುವ, ಮನೆಯ ಶೋಕೇಸಿನಲ್ಲಿ ಅಲಂಕಾರಕ್ಕಾಗಿ ಇಟ್ಟುಕೊಳ್ಳುವ ಖಯಾಲಿ ಕೆಲವು ಶ್ರೀಮಂತರಿಗೆ. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತವಾಗಿದ್ದ ಈ ಹಕ್ಕಿಗಳು ಇದೀಗ ಸರ್ಕಾರದ ರಕ್ಷಣೆಯಲ್ಲಿ ಕೊಂಚ ಉಸಿರಾಡುತ್ತಿವೆ.
ಮಳೆಕಾಡುಗಳಲ್ಲಿ ಅಕಶೇರುಕಗಳ ವೈವಿಧ್ಯ ಕೂಡ ಹೇರಳವಾಗಿದೆ. ಕೀಟಗಳು, ಜೇಡಗಳು, ಶತಪದಿಗಳು, ಸಹಸ್ರಪದಿಗಳು, ಏಡಿಗಳು ಹೀಗೆ ಅಕಶೇರುಕಗಳಲ್ಲಿ ಸಹ ಸಾವಿರಾರು ವೈವಿಧ್ಯಮಯ ಜೀವಿಗಳಿವೆ. ಅಕಶೇರುಕಗಳ ವೈವಿಧ್ಯ ಕಶೇರುಕಗಳ ವೈವಿಧ್ಯಕ್ಕೆ ಹೋಲಿಸಿದರೆ ತುಂಬಾ ಜಾಸ್ತಿ. ಇಡೀ ಭೂಮಿಯ ಮೇಲೆ ಶೇಕಡಾ ತೊಂಬತ್ತಾರರಷ್ಟು ಜೀವಿಪ್ರಭೇದಗಳು ಅಕಶೇರುಕಗಳೇ ಆಗಿವೆ. ಅದೇ ರೀತಿಯ ವೈವಿಧ್ಯವನ್ನು ಮಳೆಕಾಡುಗಳಲ್ಲಿ ಸಹ ಕಾಣಬಹುದು. ಹೇರಳ ಪ್ರಭೇದದ ಚಿಟ್ಟೆಗಳು, ದುಂಬಿಗಳು, ನೊಣಗಳು, ಜೇನುಹುಳಗಳು, ಇರುವೆಗಳು, ಜೇಡಗಳು ಇತ್ಯಾದಿಗಳನ್ನು ಹೆಜ್ಜೆಹೆಜ್ಜೆಗೂ ಕಾಣಬಹುದು. ಮಳೆಕಾಡುಗಳ ಅತಿ ಭಯಾನಕ ಕೀಟಗಳೆಂದರೆ ಡ್ರೈವರ್ ಇರುವೆಗಳು ಮತ್ತು ಸೈನಿಕ ಇರುವೆಗಳು. ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದ ಅನೇಕ ಮಳೆಕಾಡುಗಳಲ್ಲಿ ಈ ಇರುವೆಗಳನ್ನು ಕಾಣಬಹುದು. ಒಂದು ಶಾಶ್ವತವಾದ ಕಾಲೋನಿಯನ್ನು ಎಂದೂ ನಿರ್ಮಿಸದ ಈ ಭಯಾನಕ ಇರುವೆಗಳು ಸೈನ್ಯದಂತೆಯೇ ಮುನ್ನುಗ್ಗುತ್ತ ಕಂಡಕಂಡವನ್ನೆಲ್ಲ ಹಿಡಿದು ಕೊಂದು ತಿನ್ನುತ್ತ ಸಾಗುತ್ತವೆ. ಚೇಳು, ಜೇಡಗಳಂಥ ಸಾಮಾನ್ಯ ಕೀಟಗಳ ಬೇಟೆಗಾರರು ಕೂಡ ಈ ಇರುವೆಗಳ ಮುಂದೆ ಸೋತು ಕೈಚೆಲ್ಲುತ್ತವೆ.
ವೃಷ್ಟಿವನಗಳ ವಿಶಿಷ್ಟ ಜೀವಿಗಳ ಬಳಿ ಡಾರ್ವಿನ್ ದುಂಬಿ ಅಥವಾ ಚಿಲಿಯನ್ ಸ್ಟ್ಯಾಗ್ ಬೀಟಲ್ ಎಂಬ ಒಂದು ಜಾತಿಯ ದುಂಬಿ ಪ್ರಸಿದ್ಧವಾಗಿದೆ. ಪ್ರಖ್ಯಾತ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಈ ದುಂಬಿಗಳನ್ನು ಸಂಗ್ರಹಿಸಿ ಅವುಗಳ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ. ಆದ್ದರಿಂದಲೇ ಅವುಗಳಿಗೆ ಡಾರ್ವಿನ್ ದುಂಬಿಗಳು ಎಂದು ಹೆಸರು ಬಂದಿತು. ಆದರೆ ಇವು ಪ್ರಸಿದ್ಧವಾಗಿದ್ದು ಇವುಗಳ ಉದ್ದವಾದ ಕೊಂಬಿನಿಂದ. ನೋಡಿದೊಡನೆಯೇ ಭಯ ಹುಟ್ಟಿಸುವಂತಿರುವ ಈ ಭಾರೀ ಕೊಂಬುಗಳು ಅಷ್ಟೇನೂ ಭಯಾನಕವಲ್ಲ. ಏಕೆಂದರೆ ಇವು ಕಚ್ಚಿದರೂ ಹೆಚ್ಚು ನೋವೇನೂ ಆಗುವುದಿಲ್ಲ ಎಂದು ಡಾರ್ವಿನ್ ಹೇಳುತ್ತಾನೆ. ಈ ಬೃಹತ್ ಕೊಂಬುಗಳು ಗಂಡುಗಳಿಗೆ ಮಾತ್ರ ಇರುವಂಥದ್ದು. ಹೆಣ್ಣಿಗಾಗಿ ಇನ್ನೊಂದು ಗಂಡಿನ ಜೊತೆ ಕಾದಾಡಲು ಇವು ಉಪಯೋಗವಾಗುತ್ತವೆ. ಕಾದಾಡುವುದೆಂದರೆ ಪ್ರತಿಸ್ಪರ್ಧಿ ಗಂಡನ್ನು ತನ್ನ ಕೊಂಬುಗಳಿಂದ ಎತ್ತಿ ಮರದಿಂದ ಕೆಳಕ್ಕೆ ಎಸೆಯುವುದು ಅಷ್ಟೆ. ಸಾಮಾನ್ಯವಾಗಿ ಇವು ಇರುವುದು ಭಾರೀ ಮರಗಳ ಕಾಂಡದ ಮೇಲೆ. ನೂರಾರು ಅಡಿ ಎತ್ತರದ ವೃಕ್ಷಗಳಲ್ಲೇ ಇವುಗಳ ವಾಸ. ಆದರೆ ಅಷ್ಟು ಎತ್ತರದ ಮರದಿಂದ ಕೆಳಕ್ಕೆ ಬಿದ್ದರೂ ಇವಕ್ಕೆ ಏನೂ ಆಗುವುದಿಲ್ಲ. ರಬ್ಬರ್ ಚೆಂಡಿನಂತೆ ಪುಟನೆಗೆದು ಮತ್ತೆ ಇನ್ನೊಂದು ಮರ ಹತ್ತಲು ಸಜ್ಜಾಗುತ್ತವೆ.
ಮಳೆಕಾಡುಗಳು ಇಷ್ಟೊಂದು ಫಲವತ್ತಾಗಿರಲು ಅನೇಕ ಕಾರಣಗಳಿವೆ. ಮೊಟ್ಟಮೊದಲ ಕಾರಣವೆಂದರೆ ಅಲ್ಲಿ ವರ್ಷಪೂರ್ತಿ ಸುರಿಯುವ ಧಾರಾಕಾರ ಮಳೆ ಮತ್ತು ಅಧಿಕ ಉಷ್ಣಾಂಶ. ಈ ಕಾರಣಗಳಿಂದಾಗಿ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಜೊತೆಗೆ ಅಲ್ಲಿನ ಮಣ್ಣು ಸಹ ಫಲವತ್ತಾದ ಮಣ್ಣು. ಆದರೆ ಅದರ ಫಲವತ್ತತೆಯೆಲ್ಲ ಮೇಲ್ಪದರಕ್ಕೇ ಸೀಮಿತವಾಗಿರುತ್ತದೆ. ಸತ್ತ ಮತ್ತು ಕೊಳೆಯುತ್ತಿರುವ ಪ್ರಾಣಿ ಹಾಗೂ ಸಸ್ಯಗಳಿಂದ ಮೇಲ್ಮಣ್ಣು ಫಲವತ್ತಾಗಿರುತ್ತದೆ. ಆದ್ದರಿಂದ ಮರಗಳೆಲ್ಲ ತಮ್ಮ ಬೇರುಗಳನ್ನು ಮೇಲ್ಮಟ್ಟದಲ್ಲೇ ಹರಡಿರುತ್ತವೆ. ಕೆಲವು ಇತ್ತೀಚೆಗೆ ಜನ್ಮತಾಳಿದ ದ್ವೀಪಗಳಲ್ಲಿ ಹೆಚ್ಚಿನ ಜ್ವಾಲಾಮುಖಿ ಚಟುವಟಿಕೆಗಳಿದ್ದರೆ ಅಲ್ಲಿನ ಮಣ್ಣಿನ ಫಲವತ್ತತೆಯೂ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಜ್ವಾಲಾಮುಖಿಗಳು ಹೇರಳ ಖನಿಜಲವಣಗಳನ್ನು ಭೂಮಿಯ ಒಡಲಿನಿಂದ ಹೊರತೆಗೆದು ಭೂಮಿಯ ಮೇಲೆ ಸುರಿಯುತ್ತವೆ. ಆದ್ದರಿಂದ ಅಲ್ಲಿ ಫಲವತ್ತತೆ ಜಾಸ್ತಿ ಇರುತ್ತದೆ.
ಇಷ್ಟೆಲ್ಲ ಮಹತ್ವವನ್ನು ಹೊಂದಿದ್ದರೂ ಇಂದು ವೃಷ್ಟಿವನಗಳ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿಯೇ ಇದೆ. ಇಪ್ಪತ್ತನೇ ಶತಮಾನದಲ್ಲಿ ಕಾಡುಗಳ ನಾಶ ಭರದಿಂದ ಸಾಗಿತು. ಹೆದ್ದಾರಿಗಳ ನಿರ್ಮಾಣ, ನಗರಗಳ ನಿರ್ಮಾಣ, ಮರಮುಟ್ಟುಗಳು, ಸೌದೆ ಇತ್ಯಾದಿ ಕಾರಣಗಳಿಗಾಗಿ ವೃಷ್ಟಿವನಗಳಲ್ಲಿ ಸಾವಿರಾರು ವರ್ಷಗಳಿಂದ ಬೆಳೆದುನಿಂತಿರುವ ಮಹಾವೃಕ್ಷಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದುರುಳಿಸಲಾಗುತ್ತಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಸಾವಿರ ವರ್ಷಗಳಿಂದ ಬೆಳೆದು ನಿಂತ ಮಹಾವೃಕ್ಷಗಳನ್ನು ಮನುಷ್ಯರ ರಾಕ್ಷಸಾಕಾರದ ಆಧುನಿಕ ಉಪಕರಣಗಳು ಕೆಲವೇ ನಿಮಿಷಗಳಲ್ಲಿ ಬೀಳಿಸುತ್ತವೆ. ವೃಷ್ಟಿವನಗಳ ನಾಶವೆಂದರೆ ಅವುಗಳಲ್ಲಿ ವಾಸವಿರುವ ಜೀವಿಗಳ ನಾಶವೂ ಸೇರಿದೆ ಎಂದೇ ಅರ್ಥ.
ಭಾರತದಲ್ಲಿ ಕೂಡ ಸಮಶೀತೋಷ್ಣವಲಯದ ಮಳೆಕಾಡುಗಳಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪಶ್ಚಿಮ ಘಟ್ಟಗಳು ಮತ್ತು ಅಸ್ಸಾಂ, ಮೇಘಾಲಯಗಳಲ್ಲಿ ಮಳೆಕಾಡುಗಳಿವೆ. ಆದರೆ ಭಾರತದಲ್ಲಿ ಜನಸಂಖ್ಯೆಯ ಒತ್ತಡ ಆಫ್ರಿಕಾ ಮತ್ತು ಅಮೆರಿಕಾಗಳಿಗಿಂತ ವಿಪರೀತ ಹೆಚ್ಚು. ಜೊತೆಗೇ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿರುವುದೂ ಈ ಕಾಡುಗಳ ವಿನಾಶಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಗಿಯಾದ ಕಾನೂನುಗಳ ಮೂಲಕ ಇವುಗಳನ್ನು ಸಂರಕ್ಷಿಸುವ ಪ್ರಯತ್ನ ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಇಲ್ಲಿ ಸಹ ಇದೇ ಕಾಡುಗಳಿಗೆ ಸೀಮಿತವಾದ ಕೆಲವು ಅಪರೂಪದ ಪ್ರಾಣಿಗಳಿವೆ. ಅವುಗಳ ಸಂರಕ್ಷಣೆ ದೃಷ್ಟಿಯಿಂದ ಈ ಕಾಡುಗಳು ಬಹಳ ಮಹತ್ವ ಹೊಂದಿವೆ. ಇವುಗಳಲ್ಲಿ ಅತಿ ಮುಖ್ಯವಾದವೆಂದರೆ ಹೂಲಾಕ್ ಗಿಬ್ಬನ್ ಮತ್ತು ಮೋಡ ಚಿರತೆ. ಚಿರತೆಗಳಿಗಿಂತ ಗಾತ್ರದಲ್ಲಿ ಚಿಕ್ಕದಾದ ಮತ್ತು ಮೈಯೆಲ್ಲ ದೊಡ್ಡದೊಡ್ಡ ಮಚ್ಚೆಗಳ ಚಿತ್ತಾರ ಹೊಂದಿರುವ ಈ ದೊಡ್ಡ ಬೆಕ್ಕುಗಳ ಇನ್ನೊಂದು ಪ್ರಭೇದ ಸುಮಾತ್ರದ ಮಳೆಕಾಡುಗಳಲ್ಲಿ ವಾಸಿಸುತ್ತಿದೆ. ಹೂಲಾಕ್ ಗಿಬ್ಬನ್ ಎಂಬುದು ಒಂದು ಜಾತಿಯ ವಾನರ ಪ್ರಭೇದ. ವಾನರರಲ್ಲೆಲ್ಲ ಗಿಬ್ಬನ್ ಗಳದ್ದೇ ಅತಿಚಿಕ್ಕ ಗಾತ್ರ. ಆದರೆ ಅವು ಉದ್ದವಾದ ಕೈಕಾಲುಗಳ ನೆರವಿನಿಂದ ಮರದಿಂದ ಮರಕ್ಕೆ ಲೀಲಾಜಾಲವಾಗಿ ಹಾರುತ್ತ ಸರ್ಕಸ್ ಮಾಡುತ್ತವೆ.
ವಾನರರಲ್ಲಿ ದೊಡ್ಡ ಗಾತ್ರದ ಗೋರಿಲ್ಲ, ಒರಾಂಗೊಟಾನ್ ಮತ್ತು ಚಿಂಪಾಂಜಿಗಳೂ ಸಹ ಮಳೆಕಾಡುಗಳಲ್ಲೇ ವಾಸಿಸುವ ಪ್ರಭೇದಗಳು. ಗೋರಿಲ್ಲಾಗಳಲ್ಲಿ ಮೌಂಟನ್ ಗೋರಿಲ್ಲಾಗಳು ಪರ್ವತ ಪ್ರದೇಶಗಳಲ್ಲಿ ವಾಸಿಸಿದರೆ ಲೋಲ್ಯಾಂಡ್ ಗೋರಿಲ್ಲಾಗಳು ವೃಷ್ಟಿವನಗಳಲ್ಲಿ ವಾಸಿಸುತ್ತವೆ. ಚಿಂಪಾಂಜಿಗಳು ಮತ್ತು ಅವುಗಳ ಹತ್ತಿರದ ಸಂಬಂಧಿಗಳಾದ ಬೋನೋಬೋಗಳು ಸಹ ಕಾಂಗೋ ವೃಷ್ಟಿವನಗಳಲ್ಲಿ ವಾಸಿಸುತ್ತವೆ. ಒರಾಂಗೊಟಾನ್ ಗಳು ಏಷ್ಯಾದ ಮಳೆಕಾಡುಗಳಲ್ಲಿ ವಾಸಿಸುತ್ತವೆ.

ವೃಷ್ಟಿವನಗಳಲ್ಲಿ ಅಳಿವಿನಂಚಿಗೆ ಸರಿದಿರುವ ಇನ್ನೊಂದು ಪ್ರಸಿದ್ಧ ಪ್ರದೇಶವೆಂದರೆ ಯಾಸೂನಿ. ಈಕ್ವೆಡಾರ್ ದೇಶದ ಈ ಪ್ರದೇಶ ಸುಮಾರು ಒಂಬತ್ತುಸಾವಿರದ ಎಂಟುನೂರು ಚದರ ಕಿಲೋಮೀಟರ್ ವಿಸ್ತಾರದ ಪ್ರದೇಶ. ಇಲ್ಲಿ ನೂರಾರು ಪ್ರಭೇದದ ಹಕ್ಕಿಗಳು, ಪ್ರಾಣಿಗಳು, ಕೀಟಗಳು, ಉಭಯವಾಸಿಗಳು ಕಿಕ್ಕಿರಿದಿವೆ. ಅಮೆಜೋನಿಯಾ ವೃಷ್ಟಿವನಗಳ ಒಂದು ಭಾಗವೇ ಆಗಿರುವ ಯಾಸೂನಿಯ ದುರದೃಷ್ಟವೆಂದರೆ ಇಲ್ಲಿ ಈಗ ತೈಲದ ನಿಕ್ಷೇಪಗಳು ಪತ್ತೆಯಾಗಿವೆ. ಹತ್ತಿರ ಹತ್ತಿರ ಐವತ್ತುಸಾವಿರ ಕೋಟಿ ರೂಪಾಯಿಗಳ ಭಾರೀ ಮೊತ್ತದ ಈ ತೈಲ ದಾಸ್ತಾನು ಸಹಜವಾಗಿಯೇ ಯಾವುದೇ ರಾಷ್ಟ್ರದ ಆಸೆಯನ್ನಾದರೂ ಕೆರಳಿಸುತ್ತದೆ. ಈಕ್ವೆಡಾರ್ ಮೊದಲೇ ಬಡರಾಷ್ಟ್ರವಾದ್ದರಿಂದ ಈ ಸಂಪತ್ತು ಅದಕ್ಕೆ ಭಾರಿಯಾಗಿಯೇ ಕಂಡಿತು. 2007ರಲ್ಲಿ ಈಕ್ವೆಡಾರ್ ನ ಅಧ್ಯಕ್ಷ ರಾಫೆಲ್ ಕೊರಿಯಾ ಅವರು ಒಂದು ಘೋಷಣೆಯನ್ನು ಹೊರಡಿಸಿದರು. ಅದೇನೆಂದರೆ ಇಡೀ ತೈಲದಾಸ್ತಾನಿನ ಬೆಲೆಯ ಅರ್ಧದಷ್ಟನ್ನು ಶ್ರೀಮಂತ ರಾಷ್ಟ್ರಗಳು ದೇಣಿಗೆಯಾಗಿ ಕೊಟ್ಟರೆ ಆ ತೈಲದ ತಂಟೆಗೆ ಹೋಗುವುದಿಲ್ಲವೆಂದು ಅದರ ಸಾರಾಂಶ. ಆದರೆ ಐದು ವರ್ಷಗಳು ಕಳೆದರೂ ಅದಕ್ಕಾಗಿ ಸಂಗ್ರಹವಾದ ಹಣದ ಮೊತ್ತ ತೀರಾ ಕಡಿಮೆ. ಇದೀಗ ಸರ್ಕಾರ ಅಲ್ಲಿನ ತೈಲವನ್ನು ಹೊರತೆಗೆಯಲು ನಿರ್ಧರಿಸಿದೆ. ಇದರ ಪರಿಣಾಮವೇನೆಂದು ಬೇರೆ ಹೇಳಬೇಕಿಲ್ಲ. ಈ ಧರೆಯ ಸ್ವರ್ಗ ನರಕವಾಗಿ ಬದಲಾಗುವ ದಿನಗಳು ದೂರವಿಲ್ಲ. ಇಂದು ಯಾಸೂನಿಗೊದಗಿದ ದುರ್ಗತಿಯೇ ಮುಂದೊಂದು ದಿನ ಬೇರೆಲ್ಲ ವೃಷ್ಟಿವನಗಳಿಗೂ ಉಂಟಾಗುತ್ತದೆ. ಇಂಥ ದುರಂತವನ್ನು ತಪ್ಪಿಸಲು ನಾವು ನಮ್ಮ ಕೈಲಾದ ಪ್ರಯತ್ನ ಮಾಡಬೇಕಾಗಿದೆ. ಏಕೆಂದರೆ ಪ್ರಕೃತಿ ತನ್ನ ಮೇಲಿನ ದೌರ್ಜನ್ಯ, ಅತ್ಯಾಚಾರಗಳನ್ನೆಲ್ಲ ಎಲ್ಲಿಯವರೆಗೆ ಮೌನವಾಗಿ ಸಹಿಸಿಕೊಳ್ಳುತ್ತದೆಯೋ ಅಲ್ಲಿಯವರೆಗಷ್ಟೇ ನಮಗೆ ಉಳಿಗಾಲ. ನಂತರ ಅಳಿಯುತ್ತಿರುವ ಇತರ ಪ್ರಾಣಿಗಳ ದಾರಿಯನ್ನೇ ನಾವೂ ಹಿಡಿಯಬೇಕಾಗುತ್ತದೆ!