ಪಕ್ಷಿಲೋಕದ
ಬೆಡಗಿನ ಬಡಗಿಗಳು: ಮರಕುಟುಕ
ನಿಮಗೆ ಬಿಡುವಿನಲ್ಲಿ
ಕಾಡಿನಲ್ಲಿ ಅಡ್ಡಾಡುವ ಹವ್ಯಾಸ ಇದ್ದರೆ ಒಂದು ಅನುಭವ ಆಗಿರಬಹುದು. ಇದ್ದಕ್ಕಿದ್ದಂತೆ ಕಾಡಿನಲ್ಲಿ
ಯಾರೋ ತಮಟೆ ಬಾರಿಸುತ್ತಿರುವಂತೆ ಅಥವಾ ಸುತ್ತಿಗೆಯಿಂದ ಏನನ್ನೋ ಹೊಡೆಯುತ್ತಿರುವಂತೆ ಡಮಡಮಡಮ ಶಬ್ದ
ಕೇಳಿಸಿರಬಹುದು. ನೀವು ಆ ಶಬ್ದದ ಜಾಡನ್ನು ಹಿಡಿದು ಹೋಗಿದ್ದರೆ ನಿಮಗೆ ಬಣ್ಣಬಣ್ಣದ ಹಕ್ಕಿಯೊಂದು ಮರವನ್ನು
ತನ್ನ ಚೂಪಾದ ಉಳಿಯಂಥ ಕೊಕ್ಕಿನಿಂದ ಚಚ್ಚುತ್ತಿರುವ ದೃಶ್ಯ ಕಾಣಿಸಿರುತ್ತದೆ. ಈ ಹಕ್ಕಿಯೇ ಮರಕುಟುಕ
ಅಥವಾ ವುಡ್ ಪೆಕರ್. ಮನುಷ್ಯಮಾತ್ರರು ಊಹಿಸಲೂ ಅಸಾಧ್ಯವಾದ ವೇಗದಲ್ಲಿ ಮರವನ್ನು ಚಚ್ಚುವ ಮರಕುಟುಕ
ತನ್ನ ಈ ವೇಗ ಮತ್ತು ಸಾಮರ್ಥ್ಯದಿಂದಾಗಿಯೇ ಗಮನ ಸೆಳೆಯುತ್ತದೆ. ಅದು ಮರ ಕುಟ್ಟುವ ವೇಗವನ್ನು ಗಮನಿಸಿದರೆ
ಎಂಥವನಿಗೂ ಗಾಬರಿಯಾಗುವುದು ಸಹಜ. ನಮಗೆ ಆಕಸ್ಮಿಕವಾಗಿ ತಲೆಗೆ ಒಂದು ಸಾಧಾರಣ ಏಟು ಬಿದ್ದರೇ ತಲೆ ಸುತ್ತಿದಂತಾಗಿ
ಸುಧಾರಿಸಿಕೊಳ್ಳಲು ಕೆಲವು ಗಂಟೆಗಳೇ ಬೇಕಾಗುತ್ತದೆ. ಅಂಥದ್ದರಲ್ಲಿ ಮರಕುಟುಕಗಳು ಹೇಗೆ ತಮ್ಮ ಜೀವಮಾನಪೂರ್ತಿ
ಮರ ಕುಟ್ಟುತ್ತ ಬದುಕುತ್ತವೆ? ಈ ಪ್ರಶ್ನೆ ಉದ್ಭವವಾಗುತ್ತದೆ.
ಸಾಮಾನ್ಯವಾಗಿ ನಾವೆಲ್ಲ
ಒಂದೆರಡು ಜಾತಿಯ ಮರಕುಟುಕಗಳನ್ನು ಮಾತ್ರ ನೋಡಿರಬಹುದಾದರೂ ಅದೊಂದು ಅತ್ಯಂತ ವಿಸ್ತಾರವಾದ ಕುಟುಂಬ.
ಪಿಸಿಫಾರಂಸ್ ವರ್ಗದ ಪಿಸಿಡೇ ಕುಟುಂಬಕ್ಕೆ ಸೇರಿದ ಮರಕುಟುಕಗಳಲ್ಲಿ ಸುಮಾರು ಇನ್ನೂರು ಪ್ರಭೇದಗಳನ್ನು
ಇದುವರೆಗೆ ಗುರುತಿಸಲಾಗಿದೆ. ಇವುಗಳನ್ನು ನಿಜವಾದ ಮರಕುಟುಕಗಳು, ರೈನೆಕ್ ಗಳು, ಪಿಕ್ಯುಲೆಟ್ ಗಳು
ಮತ್ತು ಸ್ಯಾಪ್ ಸಕ್ಕರ್ ಗಳು ಎಂದು ವರ್ಗೀಕರಿಸಬಹುದು. ಇವೆಲ್ಲವನ್ನೂ ಮರಕುಟುಕನ ಕುಟುಂಬಕ್ಕೆ ಸೇರಿಸಿದ್ದರೂ
ಎಲ್ಲವೂ ಮರ ಕುಟ್ಟುವುದಿಲ್ಲ ಎಂಬುದನ್ನು ನೆನಪಿಡಬೇಕು. ಆದ್ದರಿಂದಲೇ ಅವುಗಳನ್ನು ವರ್ಗೀಕರಣ ಮಾಡಲಾಗಿದೆ.
ಈ ಪೈಕಿ ನಿಜವಾದ ಮರಕುಟುಕಗಳು ಮಾತ್ರ ಮರ ಕುಟ್ಟುತ್ತವೆ. ಅವುಗಳ ಕೊಕ್ಕುಗಳು ಚೂಪಾದ ಉಳಿಯಂತಿದ್ದು
ಮರವನ್ನು ವೇಗವಾಗಿ ಡಮಡಮಡಮ ಎಂದು ಕುಟ್ಟುವುದು ಅವುಗಳಿಗೆ ಬಲು ಸುಲಭ. ಜೊತೆಗೆ ಅವುಗಳ ತಲೆಬುರುಡೆ
ಕೂಡ ಬಲಿಷ್ಠವಾಗಿದ್ದು ಅಂಥ ನಿರಂತರ ಆಘಾತಗಳನ್ನು ಸಹಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ.
ಮರ ಕುಟ್ಟುವುದರ ಉದ್ದೇಶ
ಬೇರೆಬೇರೆಯಾಗಿರುತ್ತದೆ. ಮುಖ್ಯ ಉದ್ದೇಶವೆಂದರೆ ಆಹಾರ ಸಂಪಾದನೆ. ಸತ್ತ ಮರದ ಕಾಂಡದೊಳಗೆ ಅನೇಕ ಕೀಟಗಳು
ಮನೆ ಮಾಡಿರುತ್ತವೆ. ಪ್ರೌಢ ಕೀಟಗಳು ಮಾತ್ರವಲ್ಲ, ಕೀಟಗಳ ಲಾರ್ವಾಗಳು ಮತ್ತು ಮರಿಗಳು ಮರದ ತೊಗಟೆಗಳ
ಸಂದುಗೊಂದುಗಳಲ್ಲಿ ಅಡಗಿರುತ್ತವೆ. ಈ ಕೀಟಗಳನ್ನು ತಿನ್ನುವ ಸಲುವಾಗಿ ಅವು ಮರ ಕುಟ್ಟುತ್ತವೆ. ಹಾಗೆ
ಕುಟ್ಟುವಾಗ ಹೊರಡುವ ಶಬ್ದದಲ್ಲಿನ ವ್ಯತ್ಯಾಸದಿಂದಲೇ ಒಳಗೆ ಏನು ಅಡಗಿದೆ ಎಂದು ಮರಕುಟುಕ ಸುಲಭವಾಗಿ
ಪತ್ತೆಹಚ್ಚಬಲ್ಲದು. ಜೊತೆಗೆ ಅದರ ನಾಲಿಗೆ ಸಹ ಉದ್ದವಾಗಿದ್ದು ತುದಿಯಲ್ಲಿ ಮುಳ್ಳುಗಳಂಥ ರಚನೆ ಇರುತ್ತದೆ.
ಮರದ ರಂಧ್ರಗಳಲ್ಲಿ ನಾಲಿಗೆ ತೂರಿಸಿ ಕೀಟಗಳನ್ನು ಹಿಡಿಯಲು ಇದು ಸಹಕಾರಿ.
ಎರಡನೇ ಉದ್ದೇಶ ಮೊಟ್ಟೆಯಿಟ್ಟು
ಮರಿ ಮಾಡುವುದು. ಸಾಮಾನ್ಯವಾಗಿ ಬೇರೆ ಹಕ್ಕಿಗಳಂತೆ ಮರಕುಟುಕಗಳು ಗೂಡು ಕಟ್ಟುವುದಿಲ್ಲ. ಅದರ ಬದಲು
ಒಂದು ಸೂಕ್ತವಾದ ಮರದಲ್ಲಿ ಪೊಟರೆ ಕೊರೆದು ಅದರಲ್ಲಿ ಮೊಟ್ಟೆಯಿಡುತ್ತದೆ. ರೈನೆಕ್ ಗಳು ಸಾಮಾನ್ಯವಾಗಿ
ಮರ ಕುಟ್ಟುವುದಿಲ್ಲ. ಅವುಗಳ ಕೊಕ್ಕುಗಳು ಅಷ್ಟೊಂದು ಬಲಿಷ್ಠವಲ್ಲದ ಕಾರಣ ಅವು ಬೇರೆ ಮರಕುಟುಕಗಳು
ಕೊರೆದು ಬಿಟ್ಟುಹೋದ ಪೊಟರೆಗಳನ್ನು ಉಪಯೋಗಿಸಿಕೊಳ್ಳುತ್ತವೆ. ರೂಫಸ್ ವುಡ್ ಪೆಕರ್ ಅಥವಾ ಕಂದು ಬಣ್ಣದ
ಮರಕುಟುಕವು ಕಟ್ಟಿರುವೆಗಳ ಗೂಡಿನಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಕ್ರಮವನ್ನು ರೂಢಿಸಿಕೊಂಡಿವೆ. ಅಚ್ಚರಿಯೆಂದರೆ
ಆ ಇರುವೆಗಳು ಮರಿಗಳಿಗೆ ಏನೂ ಮಾಡದೆ ಶತ್ರುಗಳಿಂದ ಅವುಗಳನ್ನು ರಕ್ಷಿಸುವ ಸೈನಿಕರ ಕಾರ್ಯ ನಿರ್ವಹಿಸುತ್ತವೆ.
ಇದೊಂದು ವಿಶಿಷ್ಟವಾದ ಸಹಜೀವನ.
ಮೂರನೆಯ ಉದ್ದೇಶವೆಂದರೆ
ಪರಸ್ಪರ ಸಂಭಾಷಣೆ. ಕೂಗುವ ಮೂಲಕ ಪರಸ್ಪರ ಸಂಭಾಷಣೆ ನಡೆಸಬಹುದಾದರೂ ಅದಕ್ಕೆ ಕೆಲವು ಇತಿಮಿತಿಗಳಿರುತ್ತವೆ.
ಕೂಗು ಕಾಡಿನಲ್ಲಿ ಹೆಚ್ಚುದೂರ ಕೇಳಿಸುವುದಿಲ್ಲ. ಆದ್ದರಿಂದ ಮರ ಕುಟ್ಟುವ ಮೂಲಕವೂ ಅವು ಪರಸ್ಪರ ಸಂಭಾಷಿಸುತ್ತವೆ.
ಬೇರೆಬೇರೆ ಜಾತಿಯ ಮರಕುಟುಗಗಳು ಮರ ಕುಟ್ಟುವ ಲಯವೂ ಬೇರೆಬೇರೆಯಾಗಿರುತ್ತದೆ. ನಮಗೆ ಅವುಗಳ ನಡುವಿನ
ವ್ಯತ್ಯಾಸವನ್ನು ಗುರುತಿಸಲು ಕಷ್ಟವಾದರೂ ಅವುಗಳಿಗೆ ಆ ಕೂಗಿನ ಮೂಲಕ ತಮ್ಮ ಜಾತಿಯದ್ದು ಯಾವುದು ಮತ್ತು
ಯಾವುದು ತಮ್ಮ ಜಾತಿಯದ್ದಲ್ಲ ಎಂದು ಕರಾರುವಾಕ್ಕಾಗಿ ತಿಳಿಯುತ್ತದೆ. ಕಾಡಿನಲ್ಲಿ ಸಂವಹನ ಮಾಡಲು ಇದೊಂದು
ಅತ್ಯಂತ ದಕ್ಷವಾದ ವಿಧಾನ.
ನಾಲ್ಕನೆಯದಾಗಿ ಸ್ಯಾಪ್
ಸಕ್ಕರ್ ಗಳು ಮರ ಕುಟ್ಟುವುದು ಮರದ ಬೊಡ್ಡೆಯಿಂದ ಒಸರುವ ದ್ರವವನ್ನು ಹೀರಲು. ಇವುಗಳ ಬಹುಮುಖ್ಯ ಆಹಾರವೇ
ಮರಗಳ ಜೀವರಸ. ಗ್ಲೂಕೋಸ್ ನಿಂದ ಸಮೃದ್ಧವಾದ ಮರಗಳ ರಸವು ಯಾವುದೇ ಜೀವಿಗೆ, ಅದರಲ್ಲೂ ಹಾರಾಟದಂಥ ಅತ್ಯಧಿಕ
ಶಕ್ತಿಯನ್ನು ಬೇಡುವ ಕ್ರಿಯೆಯಲ್ಲಿ ತೊಡಗುವ ಜೀವಿಗೆ ಅತ್ಯುಪಯುಕ್ತವಾದ ಆಹಾರ. ಈ ಹಕ್ಕಿಗಳ ಹೆಸರೇ
ಇವುಗಳ ಆಹಾರಪದ್ಧತಿಯನ್ನು ಸೂಚಿಸುತ್ತದೆ. ಸ್ಯಾಪ್ ಎಂದರೆ ಸಸ್ಯಗಳ ರಸ, ಸಕ್ಕರ್ ಎಂದರೆ ಕುಡಿಯುವವನು
ಎಂದರ್ಥ. ಯೂರೋಪಿಯನ್ ದೇಶಗಳಲ್ಲಿ ಅನೇಕ ಮರಗಳಲ್ಲಿ ಈ ಹಕ್ಕಿಗಳು ಸಾಲಾಗಿ ರಂಧ್ರಗಳನ್ನು ಕೊರೆದಿರುವುದನ್ನು
ಕಾಣಬಹುದು. ಈ ರಂಧ್ರಗಳನ್ನು ಇವು ಕಲಾತ್ಮಕವಾಗಿ ಜೇನುಗೂಡುಗಳಂತೆ ಕೊರೆಯುತ್ತವೆ. ಅವುಗಳಲ್ಲಿ ರಸ
ತುಂಬಿದಂತೆಲ್ಲ ಅದನ್ನು ಕುಡಿಯುತ್ತವೆ. ಕೆಲವೆಡೆ ಇವುಗಳ ಸಂಖ್ಯೆ ವಿಪರೀತವಾಗಿರುವಲ್ಲಿ ಅನೇಕ ಮರಗಳು
ತುದಿಯಿಂದ ಬುಡದವರೆಗೆ ಗಾಯಗೊಂದು ಸಾವನ್ನಪ್ಪಿರುವ ಉದಾಹರಣೆಯೂ ಇದೆ.
ಇಷ್ಟಲ್ಲದೆ ಮರಕುಟುಕಗಳು
ರಂಧ್ರಗಳನ್ನು ತಮ್ಮ ಉಗ್ರಾಣಗಳನ್ನಾಗಿಯೂ ಬಳಸುವುದುಂಟು. ಕೆಲವು ಜಾತಿಯ ಮರಕುಟುಕಗಳು ಪೈನ್ ವೃಕ್ಷಗಳ
ಬೀಜಗಳನ್ನು ತಿಂದು ಜೀವಿಸುತ್ತವೆ. ಇದು ಅತ್ಯಂತ ಪೌಷ್ಟಿಕವಾದ ಆಹಾರ. ಸಾಕಷ್ಟು ಕೊಬ್ಬಿನಿಂದ ಕೂಡಿರುವುದರಿಂದ
ಅತ್ಯಧಿಕ ಶಕ್ತುಯನ್ನು ಒದಗಿಸುತ್ತವೆ. ಆದ್ದರಿಂದಲೇ ಇದು ಪಕ್ಷಿಗಳಿಗೆ ಅಚ್ಚುಮೆಚ್ಚು. ಆದರೆ ಈ ಕಾಯಿಗಳು
ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯುವುದಿಲ್ಲ. ಆದ್ದರಿಂದ ಮರಕುಟುಕಗಳು ತಾವು ತಿಂದು ಹೆಚ್ಚಾದ ಕಾಯಿಗಳನ್ನು
ಮರದಲ್ಲಿ ರಂಧ್ರ ಕೊರೆದು ಸಂಗ್ರಹಿಸಿಡುತ್ತವೆ. ನೆಲದಲ್ಲಿ ಹೂತಿಟ್ಟರೆ ಇಲಿ, ಹೆಗ್ಗಣ ಮುಂತಾದ ದಂಶಕಗಳು
ತಿಂದು ಮುಗಿಸುತ್ತವೆ. ಮರದ ಮೇಲೆ ಆ ಸಮಸ್ಯೆ ಇಲ್ಲ. ಆದರೆ ಇದೊಂದು ನಿರಂತರವಾದ ಪ್ರಕ್ರಿಯೆ. ಒಮ್ಮೆ
ಕಾಯಿಗಳನ್ನು ತೂತುಗಳಲ್ಲಿ ಶೇಖರಿಸಿಟ್ಟುಹೋದರೆ ಕೆಲಸ ಮುಗಿಯುವುದಿಲ್ಲ. ಅವುಗಳನ್ನು ಪ್ರತಿದಿನ ಪರೀಕ್ಷಿಸುತ್ತಿರಬೇಕಾಗುತ್ತದೆ.
ಏಕೆಂದರೆ ಕಾಯಿಗಳು ಒಣಗಿದಂತೆಲ್ಲ ಮುದುರಿ ಚಿಕ್ಕದಾಗುತ್ತವೆ. ಹಾಗಾದಾಗ ತೂತಿನಿಂದ ಸಡಿಲವಾಗಿ ಕೆಳಗೆ
ಬಿದ್ದುಹೋಗುವ ಸಂಭವವಿರುತ್ತದೆ. ಅಥವಾ ತೂತು ಚಿಕ್ಕದಾಗಿ ಕಾಯಿ ದೊಡ್ಡದಾದರೆ ಅದು ಒಡೆದು ಹಾಳಾಗುತ್ತದೆ.
ಆದ್ದರಿಂದ ಈ ಕೆಲಸವನ್ನು ಅತ್ಯಂತ ನಾಜೂಕಾಗಿ ಮಾಡಬೇಕಾಗುತ್ತದೆ. ಜೊತೆಗೆ ಬೇರೆ ಹಕ್ಕಿಗಳು ಆ ಕಾಯಿಗಳನ್ನು
ಕದಿಯದಂತೆಯೂ ಕಾವಲು ಕಾಯಬೇಕಾಗುತ್ತದೆ. ಒಂದೊಂದು ಬೃಹತ್ ಮರದಲ್ಲಿಯೂ ಅಂಥ ಅರವತ್ತು ಸಾವಿರಕ್ಕೂ ಅಧಿಕ
ಕಾಯಿಗಳನ್ನು ಕಾಣುವುದು ಅಪರೂಪವೇನಲ್ಲ.
ಮರಕುಟುಕಗಳು ಮರದ
ಕಾಂಡದ ಮೇಲೆ ಲಂಬವಾಗಿ ನಿಲ್ಲುವುದನ್ನು ಕಂಡಾಗ ಆಶ್ಚರ್ಯವಾಗಬಹುದು. ಕೇವಲ ಹಾಗೆ ದೃಢವಾಗಿ ನಿಲ್ಲುವುದು
ಮಾತ್ರವಲ್ಲ, ಕುಪ್ಪಳಿಸುತ್ತ ಓಡಾಡುವ ಕಲೆ ಕೂಡ ಅವಕ್ಕೆ ಸುಲಲಿತ. ಇದಕ್ಕೆ ಅವುಗಳ ಶರೀರರಚನೆಯಲ್ಲಿ
ಆಗಿರುವ ಮಾರ್ಪಾಡುಗಳೇ ಕಾರಣ. ಅವುಗಳ ಕಾಲ್ಬೆರಳುಗಳಲ್ಲಿ ಎರಡು ಮುಂದಕ್ಕೂ ಇನ್ನೆರಡು ಹಿಂದಕ್ಕೂ ಚಾಚಿಕೊಂಡಿವೆ.
ಅದರಿಂದ ಕಾಂಡದ ಮೇಲೆ ಬಲವಾದ ಹಿಡಿತ ಪಡೆಯಲು ಸುಲಭ. ಜೊತೆಗೆ ಅವುಗಳ ಬಾಲದ ಗರಿಗಳು ಸಹ ದೃಢವಾಗಿದ್ದು
ಮರವೇರುವಾಗ ಮೂರನೆಯ ಕಾಲಿನಂತೆ ನೆರವಾಗುತ್ತವೆ.
ಮರಕುಟುಕಗಳಲ್ಲಿ ಗ್ರೇಟ್
ಬ್ಲ್ಯಾಕ್ ವುಡ್ ಪೆಕರ್ ಎಂಬುದು ಅತ್ಯಂತ ದೊಡ್ಡದು. ಒಂದೂವರೆಯಿಂದ ಎರಡು ಅಡಿಯವರೆಗೆ ಉದ್ದವಿರುವ
ಈ ಮರಕುಟುಕಗಳು ಕಪ್ಪುಬಣ್ಣವೇ ಪ್ರಧಾನವಾಗಿರುವ ಏಕೈಕ ಮರಕುಟುಕ. ತಲೆಯ ಮೇಲೆ ಕೆಂಬಣ್ಣದ ಜುಟ್ಟು ಇದರ
ಪ್ರಧಾನ ಲಕ್ಷಣ ಎನ್ನಬಹುದು.
ಎಲ್ಲ ಮರಕುಟುಕಗಳು
ಸಾಮಾನ್ಯವಾಗಿ ಒಂಟಿಯಾಗಿರಲು ಬಯಸುತ್ತವೆ. ಒಂದೇ ಜಾತಿಯ ಬೇರೆಬೇರೆ ಮರಕುಟುಕಗಳು ಸಾಮಾನ್ಯವಾಗಿ ಒಟ್ಟಾಗಿ
ಸೇರುವುದೇ ಇಲ್ಲ. ಸಾಮಾನ್ಯವಾಗಿ ಒಂದರ ವಸಾಹತಿನ ಬಳಿ ಇನ್ನೊಂದು ಬಂದರೆ ಓಡಿಸುತ್ತದೆ. ಈ ರೀತಿಯ ನಡವಳಿಕೆಗೆ
ನಿರ್ದಿಷ್ಟ ಕಾರಣವೇನೆಂದು ಗೊತ್ತಿಲ್ಲ. ಸಾಮಾನ್ಯವಾಗಿ ಗಂಡುಗಳಲ್ಲಿ ಈ ರೀತಿಯ ನಡವಳಿಕೆ ಹೆಚ್ಚಾಗಿ
ಕಂಡುಬರುತ್ತದೆ.
ಮರಕುಟುಕಗಳನ್ನು ನಾವು
ಅಂಟಾರ್ಕ್ಟಿಕಾ ಖಂಡವನ್ನು ಹೊರತುಪಡಿಸಿ ಇನ್ನೆಲ್ಲ ಖಂಡಗಳಲ್ಲಿ ಕಾಣಬಹುದು. ಅವು ಅತ್ಯಂತ ಶುಷ್ಕ ವಾತಾವರಣವಿರುವ
ಮರುಭೂಮಿಗಳಲ್ಲಿ ಸಹ ಬದುಕಬಲ್ಲವು. ಅಲ್ಲಿ ಬದುಕುವ ಮರಕುಟುಕಗಳು ಕ್ಯಾಕ್ಟಸ್ ಗಿಡಗಳಲ್ಲೇ ತಮ್ಮ ಗೂಡುಗಳನ್ನು
ಅರ್ಥಾತ್ ಪೊಟರೆಗಳನ್ನು ನಿರ್ಮಿಸಿಕೊಳ್ಳಬಲ್ಲವು. ಆದ್ದರಿಂದ ಅವು ಮರುಭೂಮಿಯಲ್ಲೂ ನಿರಾಯಾಸವಾಗಿ ಬದುಕಬಲ್ಲವು.
ಜೊತೆಗೆ ಸವನ್ನಾದ ಹುಲ್ಲುಗಾವಲುಗಳಲ್ಲಿ, ಕುರುಚಲು ಕಾಡುಗಳಲ್ಲಿ, ಎಲೆ ಉದುರಿಸುವ ಕಾಡುಗಳಲ್ಲಿ, ನಿತ್ಯಹರಿದ್ವರ್ಣ
ಕಾಡುಗಳಲ್ಲಿ ಹೀಗೆ ಮರಕುಟುಕಗಳು ವಾಸಮಾಡದ ಜಾಗವೇ ಇಲ್ಲವೆನ್ನಬಹುದು.
ಪೂರ್ಣಚಂದ್ರ ತೇಜಸ್ವಿಯವರು
ತಮ್ಮ ಕನ್ನಡನಾಡಿನ ಹಕ್ಕಿಗಳು ಪುಸ್ತಕದಲ್ಲಿ ಮರಕುಟುಕಗಳ ಬಗ್ಗೆ ಪ್ರಧಾನವಾಗಿ ಉಲ್ಲೇಖಿಸಿದ್ದಾರೆ.
ಅವರ ಪಾಲಿಗೆ ಮರಕುಟುಕಗಳು ವಿಸ್ಮಯದ ಗಣಿಗಳಾಗಿದ್ದವು. ತಮ್ಮ ಮನೆಯ ಬಳಿಯ ಮರವೊಂದನ್ನು ಹಳದಿ ಬೆನ್ನಿನ
ಮರಕುಟುಕವೊಂದು ಕುಟ್ಟುತ್ತ ಗೂಡು ಮಾಡುತ್ತಿದ್ದುದನ್ನೂ ಅದು ದೂರ ಹೋದಾಗ ಇನ್ನೊಂದು ಮರಕುಟುಕ ಅಲ್ಲಿಗೆ
ಬಂದು ಅದರ ಗೂಡನ್ನು ಕಸಿಯಲು ಯತ್ನಿಸಿದ್ದನ್ನೂ ಅದೇ ಸಂದರ್ಭದಲ್ಲಿ ಮರಳಿಬಂದ ಮೊದಲ ಮರಕುಟುಕ ಇದರ
ಮೇಲೇರಿ ಹೋಗಿದ್ದನ್ನೂ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಕನ್ನಡ ನಾಡಿನಲ್ಲಿ ಕಾಣಸಿಗುವ ಮರಕುಟುಕಗಳ
ಪ್ರಧಾನ ಜಾತಿಗಳನ್ನು ಸಹ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಮರಕುಟುಕಗಳ ಕುಟುಂಬಕ್ಕೇ
ಸೇರಿದ, ಯೂರೋಪಿನಲ್ಲಿ ಪ್ರಧಾನವಾಗಿ ಕಾಣಸಿಗುವ ಸ್ಯಾಪ್ ಸಕ್ಕರ್ ಗಳ ಬಗೆಗೆ ಎಲ್ಲರೂ ಸಾಕಷ್ಟು ಭಯ
ಹೊಂದಿದ್ದಾರೆ. ಏಕೆಂದರೆ ಅವು ಮರಗಳಿಗೆ ಪಿಡುಗಾಗಿ ಪರಿಗಣಿಸಲ್ಪಟ್ಟಿವೆ. ಏಕೆಂದರೆ ನಿಜವಾದ ಮರಕುಟುಕಗಳು
ಸತ್ತ ಮರಗಳಲ್ಲಿ ಪೊಟರೆ ಕೊರೆದರೆ ಇವು ಜೀವಂತ ಮರಗಳ ಕಾಂಡಗಳನ್ನೇ ಕೊರೆದು ರಸ ಹೀರುತ್ತವೆ. ಕೆಲವು
ಕಾಲದ ನಂತರ ಸಹಜವಾಗಿಯೇ ಆ ರಂಧ್ರಗಳು ಬತ್ತಿಹೋದ ನಂತರ ಹೊಸ ರಂಧ್ರಗಳನ್ನು ಕೊರೆದು ಮತ್ತೆ ಮತ್ತೆ
ತಮ್ಮ ರಸಹೀರುವ ಕೆಲಸ ಮುಂದುವರೆಸುತ್ತವೆ. ಇವುಗಳ ವಿಪರೀತ ಹಾವಳಿಯಿಂದ ಅಮೆರಿಕದಲ್ಲಿ ಶೇಕಡಾ ಐವತ್ತಕ್ಕಿಂತ
ಹೆಚ್ಚಿನ ಮರಗಳು ಮೈತುಂಬ ಗಾಯಗೊಂಡಿರುವುದು ಕಂಡುಬಂದಿವೆ. ಕೆಲವು ಚಿಕ್ಕ ಮರಗಳು ಮತ್ತು ಅಷ್ಟೊಂದು
ಬಲಿಷ್ಠವಲ್ಲದ ಮರಗಳು ಈ ರಂಧ್ರಗಳಿಂದಾಗಿಯೇ ಸಾವನ್ನಪ್ಪುತ್ತವೆ. ಬೇರೆ ಬೇರೆ ಮರಗಳ ರಸವನ್ನು ಇದು
ಬೇರೆಬೇರೆ ಪ್ರಮಾಣದಲ್ಲಿ ಹೀರುತ್ತದೆ. ಇದಕ್ಕೆ ಮರದ ಸ್ವಾಭಾವಿಕ ಗುಣಲಕ್ಷಣಗಳು ಮತ್ತು ರಸದ ಗುಣಗಳಲ್ಲಿನ
ವ್ಯತ್ಯಾಸವೂ ಕಾರಣ. ಇವು ಬರ್ಚ್ ಜಾತಿಯ ಮರಗಳ ರಸವನ್ನು ಹೆಚ್ಚಾಗಿ ಇಷ್ಟಪಡುವುದು ಕಂಡುಬಂದಿದೆ.
ಯೂರೇಷಿಯನ್ ರೈನೆಕ್
ಎಂಬುದು ಇನ್ನೊಂದು ಚಿಕ್ಕ ಪರಕುಟುಕ. ಕಂದುಬಣ್ಣದ ಈ ಹಕ್ಕಿಯ ಮೈಮೇಲೆಲ್ಲ ಕಪ್ಪು ಚುಕ್ಕೆಗಳಿವೆ. ಈ
ಹಕ್ಕಿ ನೋಡಲು ಇತರೆ ಮರಕುಟುಕಗಳಿಗಿಂತ ಚಿಕ್ಕದಾಗಿದ್ದು ಮೇಲ್ನೋಟಕ್ಕೂ ಮರಕುಟುಕಗಳನ್ನು ಹೋಲುವಂತೆ
ಕಾಣುವುದಿಲ್ಲ. ಆದರೆ ಇದರ ಕೊಕ್ಕಿನ ರಚನೆ ಮತ್ತು ಇತರ ದೇಹಲಕ್ಷಣಗಳು ಇದು ಮರಕುಟುಕನ ಕುಟುಂಬಕ್ಕೇ
ಸೇರಿದವೆಂದು ಖಚಿತಪಡಿಸುತ್ತವೆ. ಆದರೆ ಇವುಗಳ ಕೊಕ್ಕುಗಳು ಸ್ವಲ್ಪ ಚಿಕ್ಕವು. ಇವುಗಳ ಬಹುಮುಖ್ಯ ಆಹಾರವೆಂದರೆ
ಇರುವೆ, ಕೀಟಗಳ ಲಾರ್ವಾಗಳು ಮತ್ತಿತರ ಚಿಕ್ಕಪುಟ್ಟ ಜೀವಿಗಳು. ಆದರೆ ಈ ಹಕ್ಕಿ ಪ್ರಸಿದ್ಧವಾಗಿರುವುದಕ್ಕೆ
ಬೇರೆಯೇ ಕಾರಣವಿದೆ. ಅದೇನೆಂದರೆ ಯೂರೋಪಿನ ಮರಕುಟುಕಗಳಲ್ಲೆಲ್ಲ ಸುದೀರ್ಘ ವಲಸೆ ಹೋಗುವ ಹಕ್ಕಿ ಇದೊಂದೇ.
ಚಳಿಗಾಲದ ಸಮಯದಲ್ಲಿ ಈ ಹಕ್ಕಿ ಯೂರೋಪಿನಿಂದ ಆಫ್ರಿಕಕ್ಕೆ ವಲಸೆ ಹೋಗುತ್ತದೆ. ನಮ್ಮ ಅಂಗೈ ಮುಷ್ಟಿಯಷ್ಟಿರುವ
ಈ ಪುಟ್ಟ ಹಕ್ಕಿಯ ಮ್ಯಾರಥಾನ್ ಪಯಣ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು. ಅದು ಅಷ್ಟು ದೂರಕ್ಕೆ ಹೇಗೆ
ದಾರಿ ಕಂಡುಕೊಳ್ಳುತ್ತದೆ ಎಂಬುದಂತೂ ನಮಗೆ ಇನ್ನೂ ಅರ್ಥವಾಗದ ಸಂಗತಿಯಾಗಿದೆ.
ಪಿಕ್ಯುಲೆಟ್ ಎಂಬ
ಇನ್ನೊಂದು ರೀತಿಯ ಮರಕುಟುಕಗಳಿವೆ. ಹತ್ತು ಸೆಂಟಿಮೀಟರ್ ಗಿಂತ ಕಡಿಮೆ ಉದ್ದವಿರುವ ಇವು ಮರಕುಟುಕಗಳ
ಕುಟುಂಬದಲ್ಲೇ ಅತ್ಯಂತ ಚಿಕ್ಕವು. ಇವು ಸಹ ನಿಜವಾದ ಮರಕುಟುಕಗಳಿಗಿಂತ ನೋಡಲು ಭಿನ್ನವಾಗಿರುತ್ತವೆ.
ಇವುಗಳಲ್ಲೇ ಅತ್ಯಂತ ಸಾಮಾನ್ಯವಾದುದೆಂದರೆ ಸ್ಪೆಕಲ್ಡ್ ಪಿಕ್ಯುಲೆಟ್. ಮೈತುಂಬ ಚುಕ್ಕೆಗಳಿರುವುದರಿಂದ
ಅವಕ್ಕೆ ಈ ಹೆಸರು ಬಂದಿದೆ. ಸಾಮಾನ್ಯ ಮರಕುಟುಕಗಳಂತೆಯೇ ಪೊಟರೆಗಳಲ್ಲಿ ಮೊಟ್ಟೆಯಿಟ್ಟು ಮರಿಮಾಡುವ
ಇವು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಪ್ರಧಾನವಾಗಿ ಕಂಡುಬರುತ್ತವೆ. ಇರುವೆ ಮತ್ತು ಗೆದ್ದಲುಗಳು
ಇವುಗಳ ಪ್ರಮುಖ ಆಹಾರ. ಮರದ ಪೊಟರೆಗಳಿಂದ ಇರುವೆ, ಗೆದ್ದಲುಗಳ ಪ್ಯೂಪಾಗಳನ್ನು ಹಿಡಿದು ತಿನ್ನುವುದೂ
ಇದೆ.
ಬಾರ್ಬೆಟ್ ಗಳು, ಟೌಕಾನ್
ಗಳು ಮತ್ತು ಹನಿಗೈಡ್ ಹಕ್ಕಿಗಳು ಮರಕುಟುಕಗಳ ಅತ್ಯಂತ ಹತ್ತಿರದ ಸಂಬಂಧಿಗಳು. ಇವುಗಳು ಮರಕುಟುಕಗಳಂತೆ
ಮರ ಕುಟ್ಟುವ ಅಭ್ಯಾಸ ಹೊಂದಿಲ್ಲವಾದರೂ ದೇಹರಚನೆ ಮತ್ತು ಸ್ವಭಾವಗಳ ಮೂಲಕ ಮರಕುಟುಕಗಳ ಹತ್ತಿರದ ಸಂಬಂಧಿಗಳೆಂದು
ಸಾಬೀತುಪಡಿಸಿವೆ. ಈ ಎಲ್ಲ ಹಕ್ಕಿಗಳ ಕೊಕ್ಕಿನ ರಚನೆಯನ್ನು ಅಭ್ಯಾಸ ಮಾಡಿದರೆ ಇವು ಹತ್ತಿರದ ಸಂಬಂಧಿಗಳೆಂದು
ಅರಿವಾಗುತ್ತದೆ.
ಬಾರ್ಬೆಟ್ ಹಕ್ಕಿಗಳನ್ನು
ನಾವು ಸೊಪ್ಪುಕುಟುರಗಳೆಂದು ಕರೆಯುತ್ತೇವೆ. ಮಲೆನಾಡಿನ ಕಾಡುಗಳಲ್ಲಂತೂ ಈ ಹಕ್ಕಿಗಳು ಅವಿಭಾಜ್ಯ ಅಂಗಗಳೇ
ಆಗಿವೆ. ಅವುಗಳ ಹೆಸರು ಗೊತ್ತಿಲ್ಲದಿದ್ದರೂ, ಅವುಗಳನ್ನು ನೋಡಿರದಿದ್ದರೂ ಪ್ರತಿಯೊಬ್ಬ ಮಲೆನಾಡಿಗನೂ
ಅವುಗಳ ಕೂಗನ್ನು ಕೇಳಿಯೇ ಇರುತ್ತಾನೆ. ಕುಟರ್ ಕುಟುರ್ ಕುಟುರ್ ಎಂದು ಕೂಗುವ ಇವು ಒಂದು ಹಕ್ಕಿ ಕೂಗು
ನಿಲ್ಲಿಸಿದ ಕೂಡಲೇ ಇನ್ನೊಂದು ಕೂಗಲು ಆರಂಭಿಸುತ್ತದೆ. ಹೀಗೆ ಸರಣಿ ರಾಗಾಲಾಪನೆ ಶುರುವಾಗುತ್ತದೆ.
ಮುಂದಿನ ಸಲ ನೀವು
ಕಾಡಿಗೆ ಹೋದಾಗ ಸುತ್ತಿಗೆಯಿಂದ ಮರ ಕುಟ್ಟಿದಂಥ ಶಬ್ದವಾದರೆ ಆ ಶಬ್ದದ ಜಾಡು ಹಿಡಿಯಲು ಪ್ರಯತ್ನಿಸಿ.
ಒಮ್ಮೊಮ್ಮೆ ಕಾಡಿನ ನೀರವ ಮೌನವನ್ನು ಹಠಾತ್ತನೆ ಭೇದಿಸಿದಂತೆ ಇವು ಮರ ಕುಟ್ಟಲು ಶುರು ಮಾಡಿದರೆ ಒಮ್ಮೆ
ಗಾಬರಿಯಾಗಬಹುದು. ಆದರೆ ಅದರ ಜಾಡು ಹಿಡಿದು ಹೋದರೆ ನಿಮಗೆ ಖಂಡಿತ ನಿರಾಸೆಯಾಗುವುದಿಲ್ಲ. ಪ್ರಕೃತಿಯ
ಅದ್ಭುತವೊಂದನ್ನು ಕಾಣುವ ಭಾಗ್ಯ ನಿಮ್ಮದಾಗುತ್ತದೆ. ಆದರೆ ಮರಕುಟುಕ ಮರ ಕುಟ್ಟುವ ವೇಗವನ್ನು ನೋಡಿಯೇ
ನಿಮಗೆ ತಲೆ ಸುತ್ತಿದಂತಾಗಬಹುದು!
ಹಾಗಾದರೆ ಇಂದು ಮರಕುಟುಕಗಳ
ಸ್ತಿತಿಗತಿ ಹೇಗಿದೆಯೆಂದು ನೋಡಹೊರಟರೆ ನಮಗೆ ನಿರಾಶೆಯಾಗುತ್ತದೆ. ಇಂದು ಆವಾಸಸ್ಥಾನದ ನಾಶ ಇವುಗಳಿಗೆ
ಬಲುದೊಡ್ಡ ಹೊಡೆತವಾಗಿದೆ. ಭಾರೀ ವೃಕ್ಷಗಳೇ ಇಂದು ಅಪರೂಪವಾಗುತ್ತಿರುವುದರಿಂದ ಇವುಗಳಿಗೆ ಮೊಟ್ಟೆಯಿಟ್ಟು
ಮರಿ ಮಾಡುವುದೇ ಕಷ್ಟವಾಗುತ್ತಿದೆ. ಆದರೆ ಕೆಲವೇ ಕೆಲವು ರಕ್ಷಿತಾರಣ್ಯಗಳಲ್ಲಿ, ಪಕ್ಷಿಧಾಮಗಳಲ್ಲಿ
ಸರ್ಕಾರದ ರಕ್ಷಣೆಯಲ್ಲಿ ಇವು ಸಂತಾನ ವರ್ಧಿಸಿಕೊಳ್ಳುತ್ತಿವೆ. ನಮ್ಮ ನಿಮ್ಮ ನಡುವೆ ತನ್ನಪಾಡಿಗೆ ತಾನು
ಬಡಗಿ ಕೆಲಸ ಮಾಡುತ್ತ ಕಾಲ ಕಳೆಯುವ ಈ ನಿರುಪದ್ರವಿ ಹಕ್ಕಿ ಇನ್ನೂ ಚಿರಕಾಲ ಭೂಮಿಯ ಮೇಲೆ ಬದುಕಿರಲಿ
ಎಂದು ಆಶಿಸೋಣ ಅಲ್ಲವೇ?
No comments:
Post a Comment